ಮುಂಬೈಗೆ ‘ಡ್ರೋನ್’ ಡೇಂಜರ್
ಮುಂಬೈಗೆ ರಿಮೋಟ್ ಕಂಟ್ರೋಲ್ ಡ್ರೋನ್ ಮತ್ತು ರಿಮೋಟ್ ಕಂಟ್ರೋಲ್ ಪ್ಯಾರಾಗ್ಲೈಡಿಂಗ್ ಡೇಂಜರ್ ಆಗಿರುವ ಸಂಕೇತವನ್ನು ಈ ಸಮಯ ಮುಂಬೈ ಪೊಲೀಸರು ನೀಡಿದ್ದಾರೆ. ಮಹಾರಾಷ್ಟ್ರ ದಿನದ ಸಂದರ್ಭದಲ್ಲಿ ಹಾಗೂ ಉತ್ಸವ-ಹಬ್ಬಗಳ ಕಾರ್ಯಕ್ರಮಗಳಲ್ಲಿ ಇದು ಅಪಾಯ ತರುವ ಸಾಧ್ಯತೆಗಳಿರುವುದರಿಂದ ಡ್ರೋನ್ ಬಳಸುವವರು ಅನುಮತಿ ಪಡೆಯಬೇಕಾಗಿದೆ.
ಡ್ರೋನ್ ನೆಪದಲ್ಲಿ ಅಸಾಮಾಜಿಕ ಶಕ್ತಿಗಳು ಯಾವುದೇ ಅಪ್ರಿಯ ಘಟನೆಗಳನ್ನು ಸೃಷ್ಟಿಸುವ ಸಾಧ್ಯತೆಗಳಿವೆ ಎಂದು ಪೊಲೀಸರು ಭಯ ವ್ಯಕ್ತಪಡಿಸಿದ್ದಾರೆ. ಶಹರದಲ್ಲಿ ರಿಮೋಟ್ ಕಂಟ್ರೋಲ್ ಡ್ರೋನ್, ರಿಮೋಟ್ ಕಂಟ್ರೋಲ್ ಪ್ಯಾರಾಗ್ಲೈಡಿಂಗ್, ಮೈಕ್ರೋಲೈಟ್ ಏರಿಯಲ್ ಮಿಸೈಲ್... ಇಂತಹ ವಸ್ತುಗಳ ಬಳಕೆಗೆ ಪೊಲೀಸರು ನಿಷೇಧ ಹೇರಿದ್ದಾರೆ. ಹೀಗಾಗಿ ಮೇ 4ರ ತನಕ ಯಾರೆಲ್ಲ ಡ್ರೋನ್ ಉಪಯೋಗಿಸುತ್ತಾರೋ ಅವರೆಲ್ಲ ಅನುಮತಿ ಪಡೆಯಬೇಕಾಗಿದೆ. ಒಂದು ವೇಳೆ ಅನುಮತಿ ನೀಡಿದರೂ ಪೊಲೀಸರು ಕಟ್ಟುನಿಟ್ಟಿನ ನಿಗಾ ಇರಿಸಲಿದ್ದಾರೆ.
ವಾಂಖೆಡೆಗೆ ಬೇಕಾದ 18 ಲಕ್ಷ ಲೀಟರ್ ನೀರು ಎಲ್ಲಿಂದ ಬರುತ್ತದೆ?
ಎಪ್ರಿಲ್ 30 ರ ಬಳಿಕ ಮಹಾರಾಷ್ಟ್ರದಲ್ಲಿ ಐಪಿಎಲ್‌ನ ಎಲ್ಲಾ ಪಂದ್ಯ ಹೊರಗಡೆ ಕೊಂಡೊಯ್ಯುವಂತೆ ಬಾಂಬೆ ಹೈಕೋರ್ಟ್ ಬಿಸಿಸಿಐಗೆ ಆದೇಶಿಸಿದೆ. ಇದರಿಂದ 13 ಪಂದ್ಯ ಗಳಿಗೆ ಪರಿಣಾಮ ಬೀರಿದೆ, ಒಂದು ಪಂದ್ಯದಿಂದ ಸುಮಾರು 13 ಕೋಟಿ ರೂ. ನಷ್ಟವಾಗುತ್ತದೆಯಂತೆ. ಈ ನಡುವೆ ವಾಂಖೆಡೆ ಸ್ಟೇಡಿಯಂನಲ್ಲಿ ಅಗತ್ಯಕ್ಕಿಂತ ಅಧಿಕ ದೊರೆಯುವ ಹೆಚ್ಚುವರಿ ನೀರಿನ ತನಿಖೆ ನಡೆಸಿ ಅದರ ಒಂದು ವರದಿ ಕೋರ್ಟ್‌ಗೆ ನೀಡಲು ಮಹಾರಾಷ್ಟ್ರ ರಾಜ್ಯ ಸರಕಾರಕ್ಕೆ ಮುಂಬೈ ಹೈಕೋರ್ಟ್ ಆದೇಶಿಸಿತ್ತು. ಬರಗಾಲದಿಂದ ತತ್ತರಿಸುತ್ತಿರುವ ಮಹಾರಾಷ್ಟ್ರದ ಅನೇಕ ಜಿಲ್ಲೆಗಳನ್ನು ಗಮನಿಸಿ ಐಪಿಎಲ್ ಮ್ಯಾಚನ್ನು ಹೊರಗಡೆ ಒಯ್ಯಲು ಜನಹಿತ ಅರ್ಜಿಯನ್ನು ದಾಖಲಿಸಲಾಗಿದ್ದು ಹೈಕೋರ್ಟ್ ವಿಚಾರಣೆಯ ಸಮಯ ಈ ಮಾತು ಹೇಳಿತ್ತು.
ಸರಕಾರದ ವತಿಯಿಂದ ಪ್ರತೀ ತಿಂಗಳು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ 22 ಲಕ್ಷ ಲೀಟರ್ ನೀರು ನೀಡಲಾಗುತ್ತದೆ. ಇದಲ್ಲದೆ ಮನಪಾ ವತಿಯಿಂದಲೂ ನೀರು ಪೂರೈಕೆಯಾಗುತ್ತದೆ. ಎಂ.ಸಿ.ಎ. ಹಿಂದಿನ ವಿಚಾರಣೆಯಲ್ಲಿ ಪ್ರತೀ ತಿಂಗಳು ತನಗೆ 40 ಲಕ್ಷ ಲೀಟರ್ ನೀರಿನ ಅಗತ್ಯವಿದೆ ಎಂದಿತ್ತು. ಇಲ್ಲಿ ಸರಕಾರ 22 ಲಕ್ಷ ಲೀಟರ್ ನೀರು ಒದಗಿಸಿದರೆ ವಾಂಖೆಡೆಗೆ ಬೇಕಾದ ಹೆಚ್ಚುವರಿ 18 ಲಕ್ಷ ಲೀಟರ್ ನೀರನ್ನು ಹೇಗೆ ಪಡೆಯುವುದು? ಇದರ ತನಿಖೆ ನಡೆಸಿ ಕೋರ್ಟ್‌ಗೆ ರಾಜ್ಯ ಸರಕಾರ ಹೇಳಬೇಕಿದೆ. ಇನ್ನು ವಾಂಖೆಡೆಗೆ ಟ್ಯಾಂಕರ್‌ನಿಂದ ನೀರು ಪೂರೈಕೆಯಾಗುವುದಿದ್ದರೆ ಅದು ಎಲ್ಲಿಂದ ಬರುತ್ತಿದೆ? ಯಾವ ಕಂಪೆನಿ ಪೂರೈಸುತ್ತಿದೆ? ಮುಂಬೈಯಲ್ಲಿ ಎಷ್ಟು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಯಾಗುತ್ತಿದೆ? ರಾಜ್ಯ ಸರಕಾರದ ಪರವಾಗಿ ಮಾತನಾಡುವ ಕಾರ್ಯವಾಹಕ ಮಹಾಧಿವಕ್ತ ರೋಹಿತ್ ದೇವ್ ಹೇಳುತ್ತಾರೆ -1993 ರ ಆಯಕ್ಟ್ ಪ್ರಕಾರ ನೀರಿನ ಕೊರತೆ ಕಂಡರೆ ಪ್ರೈವೇಟ್ ಬೋರ್‌ವೆಲ್ ಮತ್ತು ಟ್ಯಾಂಕರ್‌ಗಳಿಂದ ಪಡೆಯಬಹುದಾಗಿದೆಯಂತೆ.
ಶೀಘ್ರವೇ ಅಸ್ತಿತ್ವಕ್ಕೆ ಬರಲಿದೆ ಪನ್ವೇಲ್ ಮಹಾನಗರ ಪಾಲಿಕೆ
ಮುಂಬೈ ಪರಿಸರಕ್ಕೆ ತಾಗಿಕೊಂಡ ಪನ್ವೇಲ್ ನಗರ ಪರಿಷತ್‌ಗೂ ಇದೀಗ ಮಹಾನಗರ ಪಾಲಿಕೆಯ ದರ್ಜೆ ನೀಡುವುದಕ್ಕೆ ಆಡಳಿತ ಸ್ತರದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಪನ್ವೇಲ್ ನಗರ ಪರಿಷತ್‌ನ ಅಧಿಕೃತ ಮೂಲಗಳ ಅನುಸಾರ ಎಲ್ಲವೂ ಸರಿಯಾಗಿ ನಡೆದ ದ್ದಾದರೆ ಮಹಾರಾಷ್ಟ್ರ ದಿವಸವಾದ ಮೇ ಒಂದರಂದು ಪನ್ವೇಲ್ ಮಹಾನಗರ ಪಾಲಿಕೆ ವಿಧಿವತ್ತಾಗಿ ಅಸ್ತಿತ್ವಕ್ಕೆ ಬರಬಹುದಾಗಿದೆ. ಡಿ. ಶ್ರೇಣಿಯ ಅನ್ವಯ ರಚನೆಯಾಗಲಿರುವ ಈ ಮಹಾನಗರ ಪಾಲಿಕೆಯ ಜನಸಂಖ್ಯೆ ಸುಮಾರು ಎಂಟು ಲಕ್ಷ.
ಪನ್ವೇಲ್ ಮಹಾನಗರ ಪಾಲಿಕೆ ರಚನೆಗೆ ಸಮಿತಿ ರಚಿಸಿದ್ದು ಅದರ ಅಂತಿಮ ಬೈಠಕ್ ಎಪ್ರಿಲ್ 11 ರಂದು ನಡೆದಿದೆ. ಈ ಸಮಿತಿಯ ವರದಿಯ ನಂತರ ಹೊಸ ಮಹಾ ನಗರ ಪಾಲಿಕೆಯ ಕೆಲಸ ಕಾರ್ಯ ಮೇ 1 ರಿಂದ ಆರಂಭವಾಗಲಿದೆ. ಪ್ರಸ್ತಾವಿತ ಮಹಾನಗರ ಪಾಲಿಕೆಯಲ್ಲಿ ತಾಲೂಕಿನ 173 ಊರುಗಳಲ್ಲಿ 66 ಮತ್ತು ಸಿಡ್ಕೋದ ಎಂಟು ನೋಡ್ಸ್ ಶಾಮೀಲುಗೊಳ್ಳಲಿದೆ. ಇದರ ಸ್ವರೂಪ ರಚನೆಗೆ ಕೊಂಕಣ ವಿಭಾಗದ ಆಯುಕ್ತ ತಾನಾಜಿ ಸತ್ರೆಯ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿತ್ತು. ಈಗಾಗಲೇ ನಾಲ್ಕೈದು ಬೈಠಕ್‌ಗಳೂ ನಡೆದಿವೆ.
ವಕ್ಫ್ ಜಮೀನು ಹಗರಣದ ತನಿಖೆ; ಜೆರುಸಲೇಂ ಯಾತ್ರೆಗೂ ಸಬ್ಸಿಡಿ
ಮಹಾರಾಷ್ಟ್ರದಲ್ಲಿ ವಕ್ಫ್ ಬೋರ್ಡ್‌ನ ಜಮೀನು ಹಗರಣದ ತನಿಖೆಯ ಘೋಷಣೆ ವಿಧಾನ ಸಭೆಯಲ್ಲಿ ಈಗಾಗಲೇ ಮಾಡಲಾಗಿದೆ. ಅಲ್ಪ ಸಂಖ್ಯಾಕ ವಿಕಾಸ ರಾಜ್ಯಮಂತ್ರಿ ದಿಲೀಪ್ ಕಾಂಬ್ಲೆ ಈ ಘೋಷಣೆ ಮಾಡಿದ್ದಾರೆ. ಅಗತ್ಯ ಬಿದ್ದರೆ ವಕ್ಫ್ ಜಮೀನು ಹಗರಣದ ತನಿಖೆ ಸಿಬಿಐಗೂ ಸರಕಾರ ನೀಡುವ ಸಾಧ್ಯತೆಗಳು ಇವೆ ಎಂದಿದ್ದಾರೆ. ವಕ್ಫ್ ಜಮೀನು ವಿಷಯದಲ್ಲಿ ಶೇಖ್ ಸಮಿತಿಯ ವರದಿ ಸರಕಾರಕ್ಕೆ ಸಿಕ್ಕಿದೆ. ಇದರಲ್ಲಿ ವಕ್ಫ್‌ನ ಜಮೀನು ಕಬಳಿಸಿದವರ ಹೆಸರುಗಳಿವೆಯಂತೆ. ಹಲವು ನೇತಾರರ ಹೆಸರುಗಳೂ ಇವೆ ಎಂದಿದ್ದಾರೆ ರಾಜ್ಯದ ಅಲ್ಪಸಂಖ್ಯಾಕ ಪ್ರಕರಣಗಳ ಮಂತ್ರಿ ಏಕನಾಥ ಖಡ್ಸೆ. ಈಗ ರಾಜ್ಯ ಸರಕಾರವು ರಾಜ್ಯದಲ್ಲಿ ವಕ್ಫ್‌ನ ಜಮೀನನ್ನು ಮಾರಾಟ -ಖರೀದಿಗೆ ನಿಷೇಧ ಹೇರಿವೆ. ಕಲೆಕ್ಟರ್‌ಗಳಿಗೆ ವಕ್ಫ್‌ನ ಜಮೀನನ್ನು ಶುರುವಿನಿಂದ ಸಮೀಕ್ಷೆ ಮಾಡಲು ಆದೇಶವನ್ನು ಜಿಲ್ಲಾ ಕಲೆಕ್ಟರ್‌ಗಳಿಗೆ ನೀಡಲಾಗಿದೆ. ಎ.ಎಮ್.ಐ.ಎಂ.ನ ಶಾಸಕ ಇಮ್ತಿಯಾಝ್ ಜಲೀಲ್ ಅವರು ಈ ಚರ್ಚೆಯಲ್ಲಿ ಮಾತನಾಡುತ್ತಾ ಸರಕಾರವು ಹಜ್ ಸಬ್ಸಿಡಿ ನೀಡುವುದನ್ನು ಬಂದ್ ಮಾಡಿ ಅದರ ಬದಲು ಅಲ್ಪಸಂಖ್ಯಾಕ ಸಮುದಾಯಕ್ಕೆ ಶೈಕ್ಷಣಿಕ ಮತ್ತು ಆರ್ಥಿಕ ವಿಕಾಸಕ್ಕೆ ಧ್ಯಾನ ನೀಡುವಂತೆ ಸಲಹೆ ನೀಡಿದ್ದಾರೆ. ಧಾರ್ಮಿಕ ಆಧಾರದಲ್ಲಿ ಹಣ ಖರ್ಚು ಮಾಡುವುದು ಮತ್ತು ಸ್ಮಾರಕ ನಿರ್ಮಿಸುವುದು ಸರಕಾರದ ಕೆಲಸವಲ್ಲ ಎಂದಿದ್ದಾರೆ. ಇಲ್ಲಿ ಇನ್ನೊಂದು ವಿಶೇಷ ದೃಶ್ಯ ಕೂಡಾ ನಡೆಯಿತು. ಬಿಜೆಪಿ ಶಾಸಕ ಆಶೀಷ್ ಶೇಲಾರ್‌ರು ಬಡ ಕ್ರೈಸ್ತರಿಗೆ ಜೆರುಸಲೇಂ ಯಾತ್ರೆಗಾಗಿ ಸಬ್ಸಿಡಿಯನ್ನು ಸರಕಾರ ನೀಡಬೇಕೆಂದು ಆಗ್ರಹಿಸಿದರು.ಈ ಬಗ್ಗೆ ಸರಕಾರ ಒಪ್ಪಿತು.
ಇಲೆಕ್ಟ್ರಿಕ್ ಬಸ್ಸುಗಳಿಗಾಗಿ ನಿಧಿ ಮಂಜೂರು
ಮುಂಬೈ ರಸ್ತೆಗಳಲ್ಲಿ ಶೀಘ್ರವೇ ಇಲೆಕ್ಟ್ರಿಕ್ ಬಸ್ಸುಗಳು ಓಡಾಡಲಿವೆ. ಇದಕ್ಕಾಗಿ ಮಹಾನಗರ ಪಾಲಿಕೆ 10 ಕೋಟಿ ರೂಪಾಯಿಯ ನಿಧಿ ಮಂಜೂರು ಮಾಡಿದೆ. ಜೊತೆಗೆ ಮನಪಾ ಐದು ಬಸ್ಸುಗಳನ್ನು ಕೇಂದ್ರದಲ್ಲಿ ಇಲೆಕ್ಟ್ರಿಕ್ ಕನ್ವರ್ಷನ್‌ಗಾಗಿ ಕಳುಹಿಸಿದೆ. ಈ ಬಸ್ಸುಗಳ ಕನ್ವರ್ಷನ್ ಭಾರತ ಸರಕಾರ ಉಚಿತವಾಗಿ ಮಾಡಲಿದೆ.
ಬೆಸ್ಟ್ ಕಳೆದ ವಾರ ಶಹರದಲ್ಲಿ ಇಲೆಕ್ಟ್ರಿಕ್ ಬಸ್ಸು ಓಡಾಡಲಿದೆ ಎಂದು ಘೋಷಿಸಿತು. ಇದು ಮುಂಬೈಯಲ್ಲಿ ಬೆಸ್ಟ್ ಆಡಳಿತದ ಪ್ರಥಮ ಹೆಜ್ಜೆ. ಸುಮಾರು 25 ರಿಂದ 30 ಬಸ್ಸುಗಳು ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಓಡಾಡಲಿವೆ. ಬೆಸ್ಟ್ ಮಹಾಪ್ರಬಂಧಕ ಜಗದೀಶ್ ಪಾಟೀಲ್ ಅನುಸಾರ ಸಿಎನ್‌ಜಿ ಮತ್ತು ಡೀಸೆಲ್‌ನಿಂದ ಓಡಾಡುತ್ತಿರುವ ಕೆಲವು ಬಸ್ಸುಗಳನ್ನೂ ಇಲೆಕ್ಟ್ರಿಕ್ ಬಸ್ಸುಗಳಾಗಿ ರೂಪಾಂತರಿಸುವ ಯೋಜನೆ ಕೂಡಾ ಇದೆ ಎಂದಿದ್ದಾರೆ.
ಧಾರ್ಮಿಕ ಸ್ಥಳಗಳ ಸರ್ವೇ
ಮುಂಬೈ ಪಕ್ಕದ ಥಾಣೆ ಜಿಲ್ಲೆಯಲ್ಲಿರುವ ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಸಿದ ಸರ್ವೇಯಲ್ಲಿ 63 ಧಾರ್ಮಿಕ ಸ್ಥಳಗಳಿರುವ ಮಾಹಿತಿ ದೊರೆತಿತ್ತು. ಇವುಗಳಲ್ಲಿ 42 ಧಾರ್ಮಿಕ ಸ್ಥಳಗಳನ್ನು ಸ್ಥಳಾಂತರಿಸಲಾಗುವುದು ಮತ್ತು 19 ಇದ್ದ ಜಾಗದಲ್ಲೇ ಇರುವುದು. ಎರಡು ಧಾರ್ಮಿಕ ಸ್ಥಳಗಳನ್ನು ಕೆಡವಿಹಾಕಲಾಗುವುದು.
ನ್ಯಾಯಾಲಯದ ಆದೇಶಾನುಸಾರ ಕೆ.ಡಿ.ಎಂ.ಸಿ. ತನ್ನ ಕ್ಷೇತ್ರದ ಧಾರ್ಮಿಕ ಸ್ಥಳಗಳ ಸವೇ ನಡೆಸಿತ್ತು. ಇದನ್ನು ಅ, ಬ, ಮತ್ತು ಕ ಎಂದು ವರ್ಗೀಕರಣ ಮಾಡಿದೆ.
ನಕಲು ಮಾಡಲು ಬಿಡದ್ದಕ್ಕೆ ಪ್ರಾಂಶುಪಾಲರ ಮೇಲೆ ಹಲ್ಲೆ
ಮುಂಬೈ ಮಹಾನಗರದ ಪಕ್ಕದ ಭಿವಂಡಿ ಶಹರದಲ್ಲಿ ಓರ್ವ ಪ್ರಾಂಶುಪಾಲರನ್ನು ಶಾಲೆಗೆ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ತರುಣರಿಬ್ಬರು ತಡೆದು ನಿಲ್ಲಿಸಿ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಮೂಲಗಳಿಂದ ತಿಳಿದು ಬಂದಂತೆ ಮಾರ್ಚ್ 1ರಿಂದ ಮಾರ್ಚ್ 22ರ ತನಕ ಬೋರ್ಡ್ ಪರೀಕ್ಷೆ ನಡೆದಿತ್ತು. ಆವಾಗ ಸತ್ಯನಾರಾಯಣ ಹಿಂದಿ ಹೈಸ್ಕೂಲ್ ಕೂಡಾ ಪರೀಕ್ಷಾ ಸೆಂಟರ್ ಆಗಿತ್ತು. ಶಾಲಾ ಪ್ರಾಂಶುಪಾಲ ಉಪಾಧ್ಯಾಯ ಅವರು ನಕಲು ನಡೆಯದಂತೆ ತೀವ್ರ ನಿಗಾ ಇರಿಸಿದ್ದರು. ಆದರೆ ಇದು ಕೆಲವು ವಿದ್ಯಾರ್ಥಿಗಳಿಗೆ ಸರಿ ಬರಲಿಲ್ಲ. ಇವರಲ್ಲಿ ಯಾರೋ ಪ್ರಾಂಶುಪಾಲರಿಗೆ ಧಳಿಸಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿದೆ. ಗಾಯಾಳು ಪ್ರಾಂಶುಪಾಲರಾದ ಕೈಲಾಶ್‌ನಾಥ್ ಉಪಾಧ್ಯಾಯ ಶುಶ್ರೂಷೆಗಾಗಿ ಭಿವಂಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಂಬೈಯಿಂದ ಬಂಗಾಳಿ ಚಿನ್ನದ ಕೆಲಸಗಾರರ ಪಲಾಯನ
ಜ್ಯುವೆಲ್ಲರಿಗಳ ಮುಷ್ಕರ ಸಮಾಪ್ತಿಯಾಗಿದೆ. ಆದರೆ ಕೆಲಸಗಾರರ ಕೊರತೆ ಮುಂಬೈಯನ್ನು ಕಾಡುತ್ತಿದೆ. ಮುಂಬೈಯಲ್ಲಿ ಒಂದು ಲಕ್ಷ ಹತ್ತು ಸಾವಿರದಷ್ಟಿರುವ ಚಿನ್ನದ ಆಭರಣ ತಯಾರಿಸುವ ಕೆಲಸಗಾರರಲ್ಲಿ 90 ರಿಂದ 95 ಪ್ರತಿಶತದಷ್ಟು ಇರುವವರು ಪಶ್ಚಿಮ ಬಂಗಾಳದಿಂದ ಬಂದವರು. ರಾತ್ರಿ ಕಾಲದಲ್ಲಿ ಚರ್ಚ್‌ಗೇಟ್‌ನಿಂದ ವಿರಾರ್ ಲೋಕಲ್ ರೈಲು ಹತ್ತಿದರೆ ಹೆಚ್ಚಿನವರು ಬಂಗಾಳಿ ಭಾಷೆ ಮಾತನಾಡುತ್ತಿರುವುದನ್ನು ಸಹ ಪ್ರಯಾಣಿಕರು ಕಾಣಬಹುದು. ಆದರೆ ಈ ದಿನಗಳಲ್ಲಿ ಚಿನ್ನದ ಆಭರಣ ವ್ಯಾಪಾರಿಗಳು ಮುಷ್ಕರ ಹೂಡಿದ್ದ ಕಾರಣ (ಎಕ್ಸೈಜ್ ಡ್ಯೂಟಿಯನ್ನು ವಿರೋಧಿಸಿ) ಕಳೆದ ಸುಮಾರು ಒಂದೂ ಕಾಲು ತಿಂಗಳಿನಿಂದ ಇವರೆಲ್ಲ ನಿರುದ್ಯೋಗಿಗಳಾಗಿದ್ದರು. ಇವರಲ್ಲಿ ಅನೇಕರು ಮುಂಬೈ ತ್ಯಜಿಸಿದ್ದಾರೆ. ಸುಶಾಂತ್ ಎಂಬ ಬಂಗಾಲಿ ಆಭರಣ ಕೆಲಸಗಾರನು ಎಪ್ರಿಲ್ ಮೊದಲ ವಾರದಲ್ಲಿ ಭೂಲೇಶ್ವರ ರೋಡ್‌ನ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಣ ಜ್ಯುವೆಲ್ಲರ್ಸ್ ಮುಷ್ಕರದಿಂದ ಕಾಣಿಸಿದ ನಿರುದ್ಯೋಗ. ಮುಂಬೈಯಲ್ಲಿ ಇದು ಎರಡನೆ ಘಟನೆ. ಇದಕ್ಕಿಂತ ಮೊದಲು ಮಾರ್ಚ್ 10 ರಂದು ನವಿಮುಂಬೈಯಲ್ಲಿ ಅಮಿತ್ ದತ್ ಎನ್ನುವ ಆಭರಣ ಕೆಲಸಗಾರ ಆತ್ಮಹತ್ಯೆ ಮಾಡಿಕೊಂಡಿದ್ದನು. ಬಂಗಾಳಿ ಸ್ವರ್ಣ ಶಿಲ್ಪಿ ಕಲ್ಯಾಣ್ ಸಂಘದ ಕಾರ್ಯದರ್ಶಿ ಕಾಳಿದಾಸ ಸಿನ್ಹಾರಾಯ್ ಹೇಳುತ್ತಾರೆ. ಕೆಲಸಗಾರರ ಸ್ಥಿತಿ ಇನ್ನೂ ಕೆಟ್ಟದಾಗುತ್ತಿದೆ. ಮುಷ್ಕರದ ಹಿಡಿತ ಕೈಯಿಂದ ಜಾರಿದೆ. ಒಂದು ವೇಳೆ ಆಭರಣ ವ್ಯಾಪಾರಿಗಳ ಮುಷ್ಕರ ಸಮಾಪ್ತಿಯಾಗಿದ್ದರೂ ಊರಿಗೆ ಹೋಗಿರುವ ಕೆಲಸಗಾರರು ಮರಳಿ ಬಾರದಿದ್ದರೆ.. ಏನು ಮಾಡುವುದಕ್ಕೆ ಸಾಧ್ಯ? ಎಂದು. ಮುಂಬೈ ಮಹಾನಗರದಲ್ಲಿ ಬಂಗಾಳಿ ಸಮುದಾಯದಲ್ಲಿ ಒಂದು ದೊಡ್ಡ ಸಂಖ್ಯೆ ಆಭರಣ ಉದ್ಯೋಗದ ಕೆಲಸಗಾರರಾಗಿದ್ದಾರೆ. ಡೈಯಿಂಗ್, ಸೆಟ್ಟಿಂಗ್, ಫಿನಿಶಿಂಗ್, ಹೆಲ್ಪರ್.... ಇಂತಹ ಕೆಲಸಗಳಲ್ಲಿ ಇವರೆಲ್ಲ 13ಗಂಟೆಗಳ ಕಾಲ ದುಡಿಯುತ್ತಾರೆ. ಆದರೆ ಕಳೆದ ಒಂದೂಕಾಲು ತಿಂಗಳಲ್ಲಿ ಕೆಲಸ ಇಲ್ಲದೆ ಊಟಕ್ಕೆ ಪರದಾಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಹೋಗುವ ರೈಲುಗಳು ತುಂಬಿ ತುಳುಕುತ್ತಿರುವ ದೃಶ್ಯವಿತ್ತು.
ಪಶ್ಚಿಮ ರೈಲ್ವೆಯಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿಯುತ್ತಿದೆ!
ಮುಂಬೈ ಮಹಾನಗರದ ಪಶ್ಚಿಮ ರೈಲ್ವೆಯಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿಯುತ್ತಿದೆಯೇ? ಹಾಗೆಂದು ಪಶ್ಚಿಮ ರೈಲ್ವೆಯ ಅಂಕಿ ಅಂಶವೊಂದು ಹೇಳುತ್ತಿದೆ.
ಮುಂಬೈಯ ಜೀವನಾಡಿ ಲೋಕಲ್ ರೈಲುಗಳು. ಎಷ್ಟೇ ರೈಲುಗಳ ಸಂಖ್ಯೆ ಹೆಚ್ಚಿಸಿ ದರೂ ಅದು ಕಿಕ್ಕಿರಿದು ತುಂಬಿರುತ್ತದೆ ಪೀಕ್ ಅವರ್ಸ್ ನಲ್ಲಿ. ಆದರೆ ಪಶ್ಚಿಮ ರೈಲ್ವೆಯ ಅಂಕಿ ಅಂಶವೊಂದರಲ್ಲಿ ಪ್ರತೀ ದಿನ ಒಂದು ಲಕ್ಷ ಹನ್ನೊಂದು ಸಾವಿರ ಪ್ರಯಾಣಿಕರು ಕಡಿಮೆಯಾಗಿದ್ದಾರಂತೆ. ಅಂದರೆ ಕಳೆದ ಒಂದು ವರ್ಷದಲ್ಲಿ ಸುಮಾರು ನಾಲ್ಕು ಕೋಟಿ ಪ್ರಯಾಣಿಕರು ರೈಲು ಓಡಾಟ ನಿಲ್ಲಿಸಿದ್ದಾರೆ! ಹೀಗಾಗಿ ರೈಲ್ವೆಯ ಸಂಪಾದನೆಯೂ ಇಳಿಕೆಯಾಗಿದೆಯಂತೆ. ಇದಕ್ಕೆ ಕಾರಣ ನೀಡಿದ ಪಶ್ಚಿಮ ರೈಲ್ವೆಯು ಈ ದಿನ ಹೆಚ್ಚಿನ ಪ್ರಯಾಣಿಕರು ವಾರ್ಷಿಕ ಸೀಜನ್ ಟಿಕೆಟ್ ಖರೀದಿಸಿರುವುದರಿಂದ ಈ ದೃಶ್ಯ ಕಾಣುವಂತಾಗಿದೆ ಎಂದು. ಕಳೆದ ಒಂದು ವರ್ಷದಲ್ಲಿ ಚರ್ಚ್‌ಗೇಟ್ ಸ್ಟೇಷನ್‌ನಲ್ಲಿ ಸೀಜನ್ ಟಿಕೆಟ್‌ನ ಮಾರಾಟದಲ್ಲಿ 21.09 ಪ್ರತಿಶತ ಕಡಿಮೆಯಾಗಿದೆ. ಅತ್ತ ಪ್ರಯಾಣಿಕರ ಸಂಖ್ಯೆಯೂ 17.33 ಪ್ರತಿಶತ ಇಳಿಕೆಯಾಗಿದೆ. ಮುಂಬೈಯಲ್ಲಿ 2014 -2015 ರಲ್ಲಿ ಪ್ರತೀ ದಿನ ಸರಾಸರಿ 24,87,592 ಸೀಜನ್ ಟಿಕೇಟ್ ಮಾರಾಟವಾಗುತ್ತಿತ್ತು. 2015-16 ರಲ್ಲಿ ಇದು 23,24,496 ಕ್ಕೆ ಇಳಿಯಿತು. ಆದರೆ ಸೀಜನ್ ಟಿಕೇಟ್‌ಗಳ ಎದುರು ಕಾರ್ಡ್ ಟಿಕೇಟ್‌ಗಳ ಮಾರಾಟ 5.71 ಪ್ರತಿಶತ ವೃದ್ಧಿಯಾಗಿದೆಯಂತೆ.