varthabharthi


ಒರೆಗಲ್ಲು

ಜನಪದರ ನಂಬುಗೆ ಮತ್ತು ಪೂಜೆ

ವಾರ್ತಾ ಭಾರತಿ : 21 Apr, 2016


ದ.ಕ. ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ವೇಳೆ ಭಾರೀ ಗಾತ್ರದ ಧ್ವಜವನ್ನು ನೇತು ಹಾಕಲಾಗುತ್ತಿತ್ತು. ಮಹಾಲಿಂಗೇಶ್ವರನನ್ನು ಅರ್ಥಪೂರ್ಣವಾಗಿ ಪ್ರತಿನಿಧಿಸುತ್ತಿದ್ದ ಈ ಧ್ವಜ ಬಹುಶಃ ಜನಪದ ಮೂಲದಿಂದ ಎತ್ತಿಕೊಂಡಿರುವಂತಿತ್ತು. ಇಲ್ಲಿ ಧ್ವಜದ ಕಲ್ಪನೆಯಲ್ಲಿ ಕೆಲಸ ಮಾಡಿರುವ ವೈಸೋದಿಕ ದೃಷ್ಟಿ ನಮ್ಮನ್ನು ಹಾಗೆ ಚಿಂತಿಸುವಂತೆ ಒತ್ತಾಯಿಸುತ್ತದೆ. ಇಷ್ಟೇ ಅಲ್ಲ, ಈ ದೇವಾಲಯವೇ ವೈದಿಕೇತರ ಹಿನ್ನೆಲೆಯದ್ದೆನ್ನಲು ಈ ಧ್ವಜದ ಸ್ವರೂಪ ಮತ್ತು ಆಶಯ ಒಂದು ಸಾಕ್ಷಿಯಾಗಬಲ್ಲುದು. ಪಾಡ್ದನಗಳಲ್ಲಿ ಪುತ್ತೂರಿನ ಆಸುಪಾಸಿನ ಸ್ಥಳಗಳ ಉಲ್ಲೇಖ ಮತ್ತೆ ಮತ್ತೆ ಕಾಣಿಸಿದ್ದು, ಈ ಪರಿಸರ ಮೂಲತಃ ಬ್ರಾಹ್ಮಣರ ನಿವಾಸ ಸ್ಥಳವಾಗಿದ್ದಂತೆ ಕಾಣುವುದಿಲ್ಲ. (ಪುತ್ತೂರು ಎಂಬ ಸ್ಥಳನಾಮವೇ ಸಾಪೇಕ್ಷವಾಗಿ ಅರ್ವಾಚೀನವಾಗಿ ವಾಸ್ತವ್ಯಗೊಂಡ- ಪುದಿ, ಪುತ್=ಹೊಸತು -ಸ್ಥಳವನ್ನು ಸೂಚಿಸುತ್ತದೆ. ಉಡುಪಿಯಲ್ಲಿ ಶಂಭು ಕಲ್ಲಿನಷ್ಟೇ ಸರಿಸುಮಾರಾಗಿ ಪ್ರಾಚೀನವಾಗಿರುವ ಅನಂತೇಶ್ವರ ದೇವಾಲಯವನ್ನು ಅನಂತಾಸನನ್ನಾಗಿ ಮಾಡುವ ಪ್ರಕ್ರಿಯೆಯಲ್ಲಿ ಇಲ್ಲಿದ್ದ ಸುಂದರ ನಂದಿಯ ವಿಗ್ರಹವೇ ಸ್ಥಳಾಂತರಗೊಂಡಿರುವುದನ್ನು ನೆನಪಿಸಿಕೊಳ್ಳಬಹುದು.)

  ‘ಭಯವೇ ಜ್ಞಾನದ ಮೂಲ’ ಎಂಬ ಮಾತಿದೆ. ಪ್ರಕೃತಿಯ ವೈಚಿತ್ರ, ನಿಗೂಢತೆ, ಅನೂಹ್ಯತೆಗಳ ವಿರುದ್ಧ ಜೀವಿಗಳು ತಂತಮ್ಮ ಪ್ರಾಣ ರಕ್ಷಿಸಿಕೊಳ್ಳಲೇಬೇಕಾಗಿತ್ತು; ಆಗ ಪ್ರಕೃತಿಯ ಕುರಿತು ಭಯ, ಬೆರಗು, ಪೂಜಾಭಾವ ಹುಟ್ಟಿಕೊಳ್ಳುತ್ತದೆ. ಇದರಿಂದ ಜ್ಞಾನದ ಆರಂಭವಾಗುವುದರೊಂದಿಗೆ ಅಜ್ಞಾನವೂ ಆರಂಭವಾಗಬಹುದು. ಕಾಡು ಪ್ರಾಣಿಗಳ ಭಯ , ಗುಡುಗು, ಸಿಡಿಲು, ಜ್ವಾಲಾಮುಖಿ, ಚಂಡಮಾರುತ, ಪ್ರವಾಹಗಳಿಗೆ ಹೆದರಿದ ಮನುಷ್ಯ, ತನ್ನ ಭಯಕ್ಕೆ ಪರಿಹಾರ ಕಂಡುಕೊಂಡದ್ದು ದೇವರಲ್ಲಿ. ಈ ಎಲ್ಲ ವಿದ್ಯಮಾನಗಳಿಗೆ ಕಾರಣವಾದ ಒಂದು ‘ಶಕ್ತಿ’ಯನ್ನು ಕಲ್ಪಿಸಿಕೊಂಡು, ಅದಕ್ಕೆ ತಗ್ಗಿ ಬಗ್ಗಿ ನಡೆದರೆ ತನಗೇನೂ ಭಯವಿಲ್ಲವೆಂಬ ಮನುಷ್ಯನ ಭಾವನೆಯಾದರೂ ಆತನ ಸಾಮಾಜಿಕ ಬದುಕಿನ ಅನುಭವದಿಂದ, ಆಳು-ಯಜಮಾನ ಸಂಬಂಧದ ಹಿನ್ನೆಲೆಯಲ್ಲಿ ರೂಪುಗೊಂಡುದು. ಪ್ರಾಚೀನಕಾಲದಲ್ಲಿ ವಿಶ್ವದ ಎಲ್ಲೆಡೆ ನದಿ, ಮರ, ಬೆಟ್ಟ, ಬಂಡೆಗಳನ್ನು ಪೂಜಿಸುವ ಪ್ರವೃತಿಯಿತ್ತು. ಭಾರತದಲ್ಲಿ ಪ್ರಕೃತಿ ಪೂಜೆ ಇನ್ನೂ ಉಳಿದು ಬಂದಿದೆ. ಭಾರತದಲ್ಲಿ ಗಂಗಾನದಿಯಂತೆ ಪ್ರಾಚೀನ ಈಜಿಪ್ಟಿನಲ್ಲಿ ನೈಲ್‌ನದಿಯೂ ಜನತೆಯಿಂದ ಪೂಜೆಗೊಳ್ಳುತ್ತಿತ್ತು. ಪ್ರಾಚೀನ ಗ್ರೀಕ್ ಧರ್ಮ, ಗ್ರೀಕ್ ದೇವತೆಗಳು ಹಿಂದೂ ಧರ್ಮ ದೇವತೆಗಳನ್ನು ಹೋಲುತ್ತದೆ.

 ಪೂಜಾ ವಿಧಿಗಳು, ಯಜ್ಞಾ ಯಾಗಗಳು, ನೃತ್ಯ ಸಂಗೀತ ಮುಂತಾದವು ಪ್ರಾಕೃತಿಕ ಘಟನೆಗಳಿಂದ ಅವುಗಳ ಅನುಕರಣೆಯಿಂದ ಹುಟ್ಟಿಕೊಂಡಿವೆ. ಹಾಗೇ ನೋಡಿದರೆ ಎಲ್ಲ ಕಲೆಗಳ ಮೂಲ ಅನುಕರಣೆಯೇ ಆಗಿದೆ. ಮಳೆ ಬೇಕೆಂದು ಆವಾಹನೆ ಮಾಡುವುದಿದ್ದರೆ ಮಳೆಯ ವೇಳೆ ಪ್ರಕೃತಿಯಲ್ಲಿ ಕಾಣಿಸಿಕೊಳ್ಳುವ ಕ್ರಿಯಾಸರಣಿಯನ್ನು ಅನುಕರಣೆ ಮಾಡುವ ವಿಧಿಗಳೇ ಇವೆ. ಮಳೆ, ಬಿರುಗಾಳಿಗಳನ್ನು ಅನುಕರಣೆ ಮಾಡುವ ನೃತ್ಯ, ಕಾಗೆಗಳ ಮೆರವಣಿಗೆ, ಕತ್ತೆಗಳ ಮೆರವಣಿಗೆ, ಹೊಲಗದೆಗಳಲ್ಲಿ ಸಂಭೋಗ, ಬೆತ್ತಲೆ ನೃತ್ಯ, ಬರಿಕೊಡಗಳ ಮೆರವಣಿಗೆ- ಹೀಗೇ ಎಷ್ಟೋ ಆಚರಣೆಗಳಿಂದ ಮಳೆಯನ್ನು ಬರಿಸಲಾಗುತ್ತದೆಂಬ ಜನಪದ ನಂಬುಗೆಗಳು ವಿಶ್ವಾದ್ಯಂತ ಇವೆ. ಇನ್ನು ಮಳೆಗಾಗಿ ಮಾಡುವ ಯಾಗ, ವೈದಿಕ ವಿಧಿಗಳಲ್ಲಿ ಕೂಡ, ಮಳೆನೀರು ಧಾರೆಯಾಗಿ ಸುರಿಯುವ ಕ್ರಿಯೆಯ ಅನುಕರಣೆ, ಮಳೆ ದೇವತೆಯ ಸ್ತುತಿ ಇದ್ದೇ ಇರುತ್ತವೆ. ಸಹಸ್ರ ನಾರಿಕೇಳಾಭಿಷೇಕವಾದರೂ ಮಳೆಯ ಸುರಿತದ ಅನುಕರಣೆಯೇ ನಿಜ.

ಸ್ವಾರಸ್ಯದ ಅಂಶವೆಂದರೆ ದೇವತೆಗಳು ಸ್ತುತಿಗೆ ಹಿಗ್ಗುತ್ತಾರೆ ಎಂಬ ನಂಬಿಕೆ. ಈ ನಂಬಿಕೆಗೆ ಆಧಾರ ಭೂಮಿಯಲ್ಲಿ ಮನುಷ್ಯರೆಲ್ಲಾ ಹೊಗಳಿಕೆಗೆ ಉಬ್ಬುತ್ತಾರೆ; ಹೊಗಳಿದವರನ್ನು ರಕ್ಷ್ಷಿಸುತ್ತಾರೆ ಎಂಬುದೇ ಆಗಿದೆ. ಜಾನಪದದಲ್ಲಿ ಮಾತ್ರ ಹೊಗಳಿಕೆಗಿಂತ ಒತ್ತಾಯ, ಪೂಜೆಗಿಂತ ಬೈಗುಳ ಹೆಚ್ಚು ಕೆಲಸ ಮಾಡುವಂತೆ ಕಾಣುತ್ತದೆ. ಇದಕ್ಕೆ ಹಿನ್ನ್ನೆಲೆ ಕೂಡ ಜನಪದರ ಅನುಭವದಿಂದಲೇ ನಿಷ್ಠನ್ನವಾದುದು. ಅವರು ದುಡಿಯುವ ಜನ; ಅಸಮಾನತೆಯ ಸಮಾಜದಲ್ಲಿ ಹೊಗಳಿಕೆ- ತೆಗಳಿಕೆ ಸಾಮಾನ್ಯವಾದರೂ, ಜನಪದರು ಈ ಬಗ್ಗೆ ನಿಸ್ಪಹರು. ಅವರು ತಮ್ಮ ತಮ್ಮೆಳಗೆ ಹೊಂದಿರುವ ಸಲುಗೆ, ಆತ್ಮೀಯತೆ, ಸಮಾನತೆಯ ಸ್ಥೂಲ ಆದರ್ಶಗಳ ಹಿನ್ನೆಲೆಯಲ್ಲಿ ದೇವರುಗಳನ್ನು ಎದುರುಗೊಳ್ಳುವವರು. ಯಮರಾಜನಾದರೂ ಸರಿಯೆ, ಅವರು ಅತಿಥಿ ಸತ್ಕಾರ ಮಾಡುವುದು ಒಬ್ಬ ಓರಗೆಯವನಂತೆ:

ಎಂದೂ ಬಾರದ ಜವರಾಯ ಇಂದೇಕೆ ಬಂದೀಯ ಕೊಳ್ಳಯ್ಯನೀರ/ಕುಡಿನೀರ

ತಮ್ಮ ಬಯಕೆಗಳನ್ನು-ನ್ಯಾಯವಾದ, ಸಮಾಜಬಾಹಿರವಲ್ಲದ ಇಷ್ಟಾರ್ಥಗಳನ್ನು ಈಡೇರಿಸದ ದೇವತೆಗಳಿಗೆ ಮೆಣಸಿನ ಹೊಗೆ ಹಾಕುವ, ಹಿಡಿಸೂಡಿಯಿಂದ ಹೊಡೆಯುವ, ಉಗುಳುವ, ಬಯ್ಯುವ ಸಂಪ್ರದಾಯ ಜನಸಾಮಾನ್ಯರಲ್ಲಿದೆ. ಆದರೆ, ಜನಪದರ ಈ ನಂಬುಗೆಗಳು ಎಲ್ಲ ಸಂದರ್ಭದಲ್ಲಿ ಪ್ರಗತಿಪರವೆನ್ನುವಂತಿಲ್ಲ. ಏಕೆಂದರೆ, ಕೆಲವು ಆಚರಣೆಗಳನ್ನು ಈ ವ್ಯವಸ್ಥೆ ಬೇಕೆಂದೇ ಉಳಿಯಗೊಟ್ಟಿದೆ; ಮತ್ತು ಈ ಆಚರಣೆಗಳು ಶೋಷಿತ ಜನಾಂಗದ ಪ್ರತಿಭಟನಾ ಧ್ವನಿಗೆ ಒಂದು ‘ಸುರಕ್ಷಿತ ದ್ವಾರ’ ಕೂಡ. ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಈ ಸಮಾಜ ವ್ಯವಸ್ಥೆ ಅವರ ಪ್ರತಿಭಟನೆಯ ತತ್ವವನ್ನು ನಿರ್ವೀಯಗೊಳಿಸಿದೆ. ಉದಾ: ದ.ಕ. ಜಿಲ್ಲೆಯಲ್ಲಿ ಶೋಷಿತರು ವರ್ಷಕೊಮ್ಮೆ ಮೇಲ್ಜಾತಿಯವರ ಮುಖಕ್ಕೆ ಉಗುಳುವ ಸಂಪ್ರದಾಯವಿತ್ತು. ಇದಕ್ಕೆ ‘ಉಗುಳುವ ಹಬ್ಬ’ ಎಂದು ಹೆಸರು. ಶೋಷಿತರು ತಮ್ಮ ಸುಪ್ತವಾದ ಪ್ರತಿಭಟನೆಯನ್ನು ವರ್ಷದಲ್ಲೊಂದು ದಿನ ಮೇಲ್ಜಾತಿಯವರ ಮೇಲೆ ಉಗುಳಿ ಹೊರ ಹಾಕುತ್ತಿದ್ದರು; ಮೇಲ್ಜಾತಿಯವರಾದರೂ ಉಗುಳಿಸಿಕೊಂಡು ಸ್ನಾನಮಾಡಿ ಮತ್ತೆ ವರ್ಷವಿಡೀ ಈ ಶೋಷಿತರ ಮೇಲೆ ದಬ್ಬಾಳಿಕೆಯೆಸುಗುತ್ತಿದ್ದರು. (ಕೊಡಗಿನ ತಿತಿಮತಿಯಲ್ಲಿ ಚಾಲ್ತಿಯಲ್ಲಿರುವ ‘ಕುಂಡೆಹಬ್ಬ’ದ ಆಶಯವೂ ಇದೇ ಬಗೆಯದ್ದೆನ್ನಬಹುದು).

 ಪ್ರಾಚೀನ ದೇವಾಲಯಗಳೆಲ್ಲ ಬೆಟ್ಟಗಳ ಮೇಲೆ ನಿರ್ಮಿತವಾಗಿರುವುದು ಸ್ವಾರಸ್ಯಕರ. ಭೂವೈಕುಂಠವೆಂದು ಹೆಸರಾದ ತಿರುಪತಿ ದೊಡ್ಡ ಬೆಟ್ಟವೊಂದರ ಮೇಲೆ ತಲೆಯೆತ್ತಿದೆ. ಹಿಮಾಲಯ ಪರ್ವತದಲ್ಲಿ ಶಿವಪಾರ್ವತಿ ವಾಸಿಸುತ್ತಿದ್ದಾರೆಂದು ಆಸ್ತಿಕರು ನಂಬುತ್ತಾರೆ. ಪ್ರಾಚೀನ ಗ್ರೀಕರು ಉನ್ನತವಾದ ಒಲಿಂಪಸ್ ಪರ್ವತದ ಮೇಲೆ ಸ್ಯೂಸ್ ಅಪೋಲೋ ಮತ್ತಿತ್ತರ ಮುಖ್ಯದೇವತೆಗಳು ವಾಸಿಸುತ್ತಾರೆಂದು ನಂಬಿದ್ದರು. ಎಂತಹ ಅಮೂರ್ತ ಕಲ್ಪನೆಯೊಳಗೂ ಮೂರ್ತ ನಿಷ್ಠ ಅನುಭವಗಳು ಕೆಲಸ ಮಾಡಿರುತ್ತವೆ ಎನ್ನುವುದಕ್ಕೆ ಇದೊಂದು ಉತ್ತಮ ದೃಷ್ಟಾಂತ. ಏಕೆಂದರೆ, ಎತ್ತರವಾದ ಮತ್ತು ಊರಿನ ಹೊರಗಿರುವ ದೇವಾಲಯವನ್ನು ಸಂದರ್ಶಿಸಿ ದೇವರ ಪೂಜೆ ಮಾಡಬೇಕಾದರೂ ಶ್ರಮ ಪಡಬೇಕು. ಭಕ್ತಿ, ಪೂಜೆ, ಮೋಕ್ಷ ಎಂಬುದು ಅಗ್ಗದ ಮಾಲಲ್ಲ; ಅದಕ್ಕೆ ದೈಹಿಕ, ಮಾನಸಿಕ ಶ್ರಮ ಅಗತ್ಯ. ಸನ್ಯಾಸಿಗಳನ್ನು ‘ಶ್ರಮಣಕ’ರೆಂದು ಕರೆಯುವಲ್ಲಿ ಬೌದ್ಧಿಕ ಶ್ರಮದ ಸೂಚನೆಯಿದೆ. ಹಳೆಗನ್ನಡದಲ್ಲಿ ಇದೇ ಸನ್ಯಾಸಿಗಳನ್ನು ‘ಕಿತ್ತಡಿ‘ ( ನಡೆದು ನಡೆದು ಪಾದ ಸವೆದು ಹೋದಂಥವರು) ಎಂದು ಕರೆಯುತ್ತಿದ್ದುದುಂಟು. ಎಷ್ಟೋ ಗಿರಿದೇವತೆಗಳನ್ನು ಸಂದರ್ಶಿಸುವ ಭಕ್ತರು ಸುತ್ತು ಬಳಸಾದ ರಸ್ತೆಯಲ್ಲಿ ವಾಹನಗಳ ಮೂಲಕ ಬರುವುದಕ್ಕಿಂತ, ನೇರವಾಗಿ ಕಡಿಸಿದ ಮೆಟ್ಟಿಲುಗಳನ್ನು ಹತ್ತಿ ದೇವರನ್ನು ಸಂದರ್ಶಿಸುತ್ತಾರೆ, ಹಾಗೆ ಹತ್ತುವಾಗ ಮೊಣಕಾಲಿಗೆ ಕೈಯನ್ನು ಆಧಾರವಾಗಿರಿಸಿಕೊಂಡು ನಿಲ್ಲಬಾರದೆಂದೂ, ಹಾಗೆ ಮಾಡಿದರೆ ದೇವಾಲಯ ಸಂದರ್ಶನದ ಪುಣ್ಯ ಪ್ರಾಪ್ತವಾಗುವುದಿಲ್ಲ ಎಂದೂ ನಂಬಲಾಗುತ್ತದೆ. ‘ಆತ್ಮ ಸಾಧನೆ ದುರ್ಬಲರಿಗೆ ಅಸಾಧ್ಯ’ ಎಂಬ ಮಾತಿದೆ; ‘ಭಕ್ತಿಯೆಂಬುದ ಮಾಡಬಾರದು; ಹೋಗುತ್ತ ಕೊಯ್ವುದು ಬರುತ್ತ ಕೊಯ್ವುದು’ ಎಂದು ಶರಣರು ಸ್ವಾನುಭವದಿಂದ ಇದನ್ನು ಹೇಳಿಕೊಂಡಿದ್ದಾರೆ. ಆದರೆ, ಇಲ್ಲಿ ಒಂದು ಮಾತನ್ನು ಹೇಳಬೇಕಾಗಿದೆ, ಭಕ್ತಿಯೆಂದರೆ ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ತಿಳಿಯುತ್ತಾರೆ. ಗಟ್ಟಿಯಾಗಿ ದೇವರಿಗೆ ಜೈಕಾರ ಹಾಕಿದರೆ, ಹೆಚ್ಚೆಚ್ಚು ಪ್ರದಕ್ಷಿಣೆ ಬಂದರೆ, ಹೆಚ್ಚೆಚ್ಚು ಕಾಣಿಕೆ ಹಾಕಿದರೆ, ಹೆಚ್ಚೆಚ್ಚು ಕಾಲ ಮಂತ್ರಪಠನೆ ಮಾಡಿದರೆ ದೇವರು ಬೇಗನೆ ಒಲಿಯುತ್ತಾನೆ ಎಂಬ ನಂಬುಗೆ ಇವರದು. ಕೆಟ್ಟ ಚಲಚ್ಚಿತ್ರಗಳಲ್ಲಿ ತೋರಿಸುವಂತೆ ದೇಹವನ್ನು ವಿಪರೀತ ಕುಲುಕಾಡಿ, ಆತ್ಮಹಿಂಸೆಯನ್ನನ್ನುಭವಿಸಿ, ದೇವರನ್ನು ಭರ್ತ್ಯನೆ ಮಾಡಿ ಒಲಿಸುವಂಥ ಸಂಪ್ರದಾಯ ಕೂಡ ಇದೆ. ಆತ್ಮಹಿಂಸೆ, ದೇಹತ್ಯಾಗ, ಉಪವಾಸ, ಅಂಗಾಂಗಗಳ ಬಲಿ, ಪಶುಬಲಿ, ಶಿಶುಬಲಿ, ಆತ್ಮಬಲಿ, ಕೆಂಡ ಸೇವೆ, ಮುಡಿಕೊಡುವುದು ಇತ್ಯಾದಿ ಇತ್ಯಾದಿ ನೂರಾರು ಸಂಪ್ರದಾಯಗಳು ಉಳಿದುಬಂದಿವೆ. ಊಳಿಗಮಾನ್ಯ ವ್ಯವಸ್ಥೆಯ ದೌರ್ಜನ್ಯ, ಕಡುದಾರಿದ್ರ, ಅಜ್ಞಾನಗಳ ಸಮಾಜದಲ್ಲಿ ಇವೆಲ್ಲ ಮಾಮೂಲಾಗಿದ್ದಿರಬಹುದು. ಈ ತರದ ಭಕ್ತಿಯ ಪ್ರದರ್ಶನವೇ ವೀರತ್ವವೆಂಬ, ಪೌರುಷವೆಂಬ ಭಾವನೆ ಕೂಡ ನಮ್ಮಲ್ಲಿದೆ. ‘ರಾಘವೇಂದ್ರ ಕರುಣೆ’ ಎಂಬ ಕನ್ನಡ ಚಿತ್ರದಲ್ಲಿ ಒಂದು ಹೆಣ್ಣು ಪಾತ್ರ ‘ಗಗನವು ಉರುಳಲಿ ಭೂಮಿಯುಬಿರಿಯಲಿ ಬಿಡೆನು ನಿನ್ನ ಪಾದ’ ಎಂದು ಅರಚುವ ತಾರಕಧ್ವನಿಯನ್ನು ನೆನಪಿಸಿಕೊಳ್ಳಿ. ‘ರಂಗಪೂಜೆ’ ಎಂಬ ಒಂದು ಆಚರಣೆಯಲ್ಲಿ ರಾತ್ರಿಹಗಲು ತಾಳ ಬಡಿದು ಭಜನೆ ಮಾಡುತ್ತಾರೆ; ಇನ್ನು ಭಜನಾ ಸಪ್ತಾಹಗಳಲ್ಲಿ ಗ್ಯಾಸ್‌ಲೈಟಿಗೆ ಸುತ್ತುಬಂದು ರಾತ್ರಿಯಿಡೀ ನಿದ್ದೆ ದೂರಮಾಡಿಕೊಳ್ಳುತ್ತಾರೆ; ಬೇರೆಯವರ ನಿದ್ದೆ ಕೆಡಿಸುತ್ತಾರೆ. ಯಾವ ಧರ್ಮವೂ ಇಂಥ ಯಾಂತ್ರಿಕ ಆಚರಣೆಗಳಿಂದ ಹೊರತಾಗಿಲ್ಲ. ಬೌದ್ಧ ಧರ್ಮದ ಅನುಯಾಯಿಗಳು ಬೌದ್ಧ ಮಂದಿರಗಳಲ್ಲಿ ಪ್ರದಕ್ಷಿಣಾ ಫಥದಲ್ಲಿ ಸಾಲಾಗಿಟ್ಟ ಧಾರ್ಮಿಕ ಮಂತ್ರಗಳ ಸ್ತೋತ್ರಚಕ್ರಗಳನ್ನು ತಿರುಗಿಸುವ ಮೂಲಕ ಇಡಿಯ ಧರ್ಮಗ್ರಂಥವನ್ನು ತಿರುವಿಹಾಕಿದ ಪುಣ್ಯ ಸಂಪಾದನೆಯ ಭ್ರಮೆಗೆ ಒಳಗಾಗಿರುತ್ತಾರೆ. ಈಗಲೂ ವಿದ್ಯಾವಂತರು ಅವಿದ್ಯಾವಂತರೆಂಬ ಭೇದವಿಲ್ಲದೆ ಮಕ್ಕಳಾಗಲು ಬಾಬಾಗಳ ಬಳಿ, ಜೋಯಿಸರ ಬಳಿ, ದೇವಾಲಯಗಳಿಗೆ ಎಡತಾಕುವವರಿದ್ದಾರೆ; ಶಾಂತಿ ಹೋಮಾದಿಗಳು, ತಾಯಿತ ದಾರಗಳಿಗೆ ಮಹತ್ವ ಒದಗಿದ್ದೂ ಹೀಗೆಯೇ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)