ಗುರ್‌ಗಾಂವ್ ಗುರುಗ್ರಾಮ ಆದದ್ದು ಏಕೆ?
ಅಂಬೇಡ್ಕರ್ 125ನೆ ಜಯಂತಿ ಸಂದರ್ಭದಲ್ಲಿ
ಗುರ್‌ಗಾಂವ್ ಹೆಸರನ್ನು ಗುರುಗ್ರಾಮ ಎಂದು ಬದಲಿಸುವ ಬದಲು ಸಾಕಷ್ಟು ಚರ್ಚೆಗಳು ನಡೆದಿವೆ. ಆ ಬಳಿಕ ಅಂಬೇಡ್ಕರ್ ಅವರ 125ನೆ ಜಯಂತಿ ಸಮಾರಂಭದಲ್ಲೇ ಅದನ್ನು ಘೋಷಿಸಿರುವುದು ಕಾಕತಾಳೀಯವೇನಲ್ಲ.
ಮಹಾಭಾರತ ಪುರಾಣ ಕಥೆಯನ್ನು ಒಮ್ಮೆ ಮೆಲುಕು ಹಾಕೋಣ. ಪಾಂಡವರು ಹಾಗೂ ಕೌರವರಿಗೆ ಬಿಲ್ವಿದ್ಯೆ ಹೇಳಿಕೊಟ್ಟ ಗುರು ದ್ರೋಣಾಚಾರ್ಯ, ಮಹತ್ವದ ಘಟ್ಟದಲ್ಲಿ ಕೌರವರ ಬೆಂಬಲಕ್ಕೆ ನಿಂತರು.
ಪಾಂಡವರು ಹಾಗೂ ಕೌರವರ ನಡುವಿನ ಯುದ್ಧ ಹಾಗೂ ಪೈಪೋಟಿಯನ್ನು ಸಾಮಾನ್ಯವಾಗಿ ಧರ್ಮ ಮತ್ತು ಅಧರ್ಮದ ನಡುವಿನ ಸಮರ ಎಂದೇ ಬಣ್ಣಿಸಲಾಗುತ್ತದೆ. ಆದರೆ ಭೂಮಿಯ ಒಡೆತನ ಹಾಗೂ ರಾಜಕೀಯ ಶಕ್ತಿಯನ್ನು ಆಧಾರವಾಗಿಟ್ಟುಕೊಂಡು ನೋಡಿದರೆ ಇದನ್ನು ಬಹುಸಂಖ್ಯಾತರು (ಕೌರವರು) ಹಾಗೂ ಅಲ್ಪಸಂಖ್ಯಾತರ (ಪಾಂಡವರು) ನಡುವಿನ ಸಂಘರ್ಷ ಎಂದು ಅರ್ಥ ಮಾಡಿಕೊಳ್ಳಲೂ ಅವಕಾಶವಿದೆ.
ಐತಿಹಾಸಿಕವಾಗಿ ಬ್ರಾಹ್ಮಣ ಗುರುಗಳು ಸಾಮಾನ್ಯವಾಗಿ ಅಲ್ಪಸಂಖ್ಯಾತರ ಪರವಾಗಿಯೇ ನಿಂತ ನಿದರ್ಶನಗಳು ಹೆಚ್ಚು. ಆದರೆ ಇದರಲ್ಲಿ ಬ್ರಾಹ್ಮಣರು ಮತ್ತು ಕ್ಷತ್ರಿಯರಷ್ಟೇ ಸೇರುತ್ತಾರೆ. ಪ್ರಾಚೀನ ಯುಗದಲ್ಲಿ ವೈಶ್ಯರನ್ನು ಕೂಡಾ ಈ ಗುಂಪಿಗೆ ಸೇರಿಸಿಕೊಂಡಿರಲಿಲ್ಲ. ಬಹುಸಂಖ್ಯಾತರಾದ ಶೂದ್ರರು ಮತ್ತು ವೈಶ್ಯರಿಂದ ಬ್ರಾಹ್ಮಣರು ಹೇಗೆ ದೂರ ಉಳಿದಿದ್ದರು ಎನ್ನುವುದು ಕ್ರಿಸ್ತಪೂರ್ವ ಆರನೆ ಶತಮಾನದ ಬೌದ್ಧ ಸಾಹಿತ್ಯದಿಂದ ತಿಳಿದುಬರುತ್ತದೆ. ಭಾರತದಲ್ಲಿ ಆ ಅವಯಲ್ಲಿ ಬುಡಕಟ್ಟು ಜನಾಂಗದ ಜನಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿತ್ತು. ಅದು ಇನ್ನೂ ಜಾತಿ ವ್ಯವಸ್ಥೆಯ ಕಕ್ಷೆಗೆ ಬಂದಿರಲಿಲ್ಲ. ಬ್ರಾಹ್ಮಣರು ಹಾಗೂ ಕ್ಷತ್ರಿಯರು ಬುಡಕಟ್ಟು ಜನಾಂಗದವರಿಗೆ ವಿರುದ್ಧವಾಗಿದ್ದರು. ಇವರನ್ನೇ ರಾಷ್ಟ್ರೀಯ ಸ್ವಯಂಸೇವಕ ಸಂಘ ವನವಾಸಿಗಳು ಎಂದು ಗುರುತಿಸುವುದು.
ಬ್ರಾಹ್ಮಣ ಗುರುಗಳು ತಮ್ಮ ಮೂಗಿನ ನೇರಕ್ಕೆ ಧರ್ಮ ಹಾಗೂ ಅಧರ್ಮ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದರು. ಮೇಲ್ವರ್ಗದವರು ಧರ್ಮಕ್ಕೆ ಉದಾಹರಣೆಯಾದರೆ ಕೆಳವರ್ಗದವರು ಅಧರ್ಮಕ್ಕೆ ಪರ್ಯಾಯ ಎಂಬ ಅರ್ಥದಲ್ಲಿ ಬಿಂಬಿಸಿದರು. ಅಲ್ಪಸಂಖ್ಯಾತರಾದ ಬ್ರಾಹ್ಮಣರು ಹಾಗೂ ಕ್ಷತ್ರಿಯರು ಅನುಸರಿಸುವ ಎಲ್ಲವೂ ಧರ್ಮ ಎನಿಸಿಕೊಂಡರೆ, ಬಹುಸಂಖ್ಯಾತ ಜನರು ಆಚರಿಸುವ ಎಲ್ಲವೂ ಅಧರ್ಮ ಎನ್ನುವ ವರ್ಣಭೇದ ಸಿದ್ಧಾಂತ ಇದಾಗಿತ್ತು.
ಏಕಲವ್ಯ ಮತ್ತು ಕರ್ಣ
ದ್ರೋಣಾಚಾರ್ಯರ ಜಾತಿವಾದಿ ಧೋರಣೆಯ ಸ್ವರೂಪಕ್ಕೆ ಏಕಲವ್ಯ ಹಾಗೂ ಕರ್ಣನ ಕಥೆ ಉತ್ತಮ ಉದಾಹರಣೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಏಕಲವ್ಯದಿಂದ ದ್ರೋಣರು ಗುರುದಕ್ಷಿಣೆಯಾಗಿ ಹೆಬ್ಬರಳನ್ನು ಬಯಸಿದರು. ಇದರಿಂದ ಏಕಲವ್ಯನ ಬಿಲ್ವಿದ್ಯೆಯ ಶ್ರೇಷ್ಠತೆ ಏನು ಎನ್ನುವುದು ಅರ್ಥವಾಗುತ್ತದೆ. ಕ್ಷತ್ರಿಯನಲ್ಲ ಎಂಬ ಕಾರಣಕ್ಕೆ ದ್ರೋಣರು ಕರ್ಣನಿಗೆ ಬಿಲ್ವಿದ್ಯೆ ಹೇಳಿಕೊಡಲು ನಿರಾಕರಿಸಿರುವುದನ್ನು ಕೂಡಾ ಮರೆಯುವಂತಿಲ್ಲ. ಕರ್ಣನನ್ನು ಸೂತಪುತ್ರ ಎಂದು ಅವಮಾನಿಸಿ, ಸಾರಥಿಗಳು ಯುದ್ಧ ಕಲೆಯನ್ನು ಕಲಿಯಲು ಅರ್ಹರಲ್ಲ ಎಂಬ ನಿರ್ಧಾರಕ್ಕೆ ಬಂದರು.
ಪ್ರಸ್ತುತ ಪರಿಸ್ಥಿತಿಯಲ್ಲಿ, ದ್ರೋಣಾಚಾರ್ಯರು, ಬಹುಜನ ವರ್ಗವಾದ ದಲಿತರು ಹಾಗೂ ಇತರ ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿರೋಯಾಗಿದ್ದರು ಎಂದು ಸುಲಭವಾಗಿ ನಿರ್ಣಯಕ್ಕೆ ಬರಬಹುದು.
ಇಂದಿನ ಸಾಮಾಜಿಕ ಸಂಬಂಧಗಳ ಹಿನ್ನೆಲೆಯಲ್ಲಿ ದ್ರೋಣಾಚಾರ್ಯರ ಸಾಂಸ್ಕೃತಿಕ ಸಿದ್ಧಾಂತಗಳನ್ನು ಅವಲೋಕಿಸಿದಾಗ, ನರೇಂದ್ರ ಮೋದಿಯವರಿಗೆ ಈ ದೇಶದ ಪ್ರಧಾನಿಯಾಗುವ ಅರ್ಹತೆ ಇಲ್ಲ. ಏಕೆಂದರೆ ಅವರು ಇತರ ಹಿಂದುಳಿದ ವರ್ಗಕ್ಕೆ ಸೇರಿದವರು. ರಾಷ್ಟ್ರೀಯ ಸ್ವಯಂಸೇವಕರ ಸಂಘದ ಆಂತರಿಕ ಸಿದ್ಧಾಂತ, ದ್ರೋಣಾಚಾರ್ಯ ಸಿದ್ಧಾಂತ. ಆದರೆ ಎಲ್ಲ ಏಕಲವ್ಯ ಹಾಗೂ ಕರ್ಣರನ್ನೂ ಒಳಗೊಂಡ ಸಿದ್ಧಾಂತ ಎಂದು ತೋರಿಸಿಕೊಳ್ಳುತ್ತದೆ.
ಆದ್ದರಿಂದ ಮೋದಿ ಪ್ರಧಾನಿಯಾಗಿರುವುದು ಬಿ.ಆರ್.ಅಂಬೇಡ್ಕರ್ ಹಾಗೂ ಅವರು ದೇಶಕ್ಕೆ ನೀಡಿದ ಸಂವಿಧಾನದ ಕಾರಣದಿಂದ ಎಂದು ಮೋದಿ ಹೇಳಿಕೊಳ್ಳುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಇದರ ಜತೆಗೆ ದೇಶದಲ್ಲಿದ್ದಾಗ ಅಂಬೇಡ್ಕರ್ ಹೆಸರನ್ನು ಉಲ್ಲೇಖಿಸುವಂತೆ ಮೋದಿ ಕನಿಷ್ಠ ತಮ್ಮ ವಿದೇಶಿ ಯಾತ್ರೆಗಳ ಸಂದರ್ಭದಲ್ಲಿ ಪದೇ ಪದೇ ಗೌತಮ ಬುದ್ಧನ ಹೆಸರನ್ನೂ ಉಲ್ಲೇಖಿಸುತ್ತಾರೆ. ಇದರಂತೆಯೇ ಭಾರತೀಯ ಜನತಾ ಪಕ್ಷ ಅಥವಾ ಆರೆಸ್ಸೆಸ್‌ನ ಬ್ರಾಹ್ಮಣ ಹಾಗೂ ಕ್ಷತ್ರಿಯ ನಾಯಕರು ಕೂಡ ಅಂಬೇಡ್ಕರ್ ಅವರ ಹೆಸರನ್ನು ಮೋದಿಯವರಂತೆ ಪದೇ ಪದೇ ಉಲ್ಲೇಖಿಸುತ್ತಿರುವುದು ಸುಳ್ಳಲ್ಲ.
ಇದನ್ನೇ ಈ ಹೆಸರು ಬದಲಾವಣೆ ಕೂಡಾ ವಿವರಿಸುತ್ತದೆ. ಇಲ್ಲಿ ಜಾತಿ ಸಂಸ್ಕೃತಿ ಎರಡೂ ವಿಧದಲ್ಲಿ ಕೆಲಸ ಮಾಡುತ್ತದೆ. ಮೋದಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳ ಜನರನ್ನು ತಲುಪಿದರೆ, ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು, ಬಿಜೆಪಿ- ಆರೆಸ್ಸೆಸ್‌ನ ಕ್ಷೇತ್ರವಾದ ಮೇಲ್ವರ್ಗದ ಜನರನ್ನು ತಲುಪುತ್ತಾರೆ. ಇದು ಹಳೆಯ ಹಾಗೂ ಸಂಪ್ರದಾಯವಾದಿ ನಿಷ್ಠೆಯ ಮಂದಿಯ ಮನವೊಲಿಸುವ ಯತ್ನವಾಗಿದ್ದು, ಮೂಲ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಬಿಂಬಿಸುವ ಪ್ರಯತ್ನ. ಆದರೆ ಒಳಹೊಕ್ಕು ನೋಡಿದಾಗ, ಗುರ್‌ಗಾಂವ್ ಪಟ್ಟಣಕ್ಕೆ ಗುರುಗ್ರಾಮ ಎಂದು ಮರುನಾಮಕರಣ ಮಾಡುವ ಮತ್ತು ದ್ರೋಣಾಚಾರ್ಯರ ಹೆಸರನ್ನು ಮುನ್ನೆಲೆಗೆ ತರುವ ಖಟ್ಟರ್ ಅವರ ಮೂಲ ಉದ್ದೇಶ ಹಾಗೂ ಮಹಾರಾಷ್ಟ್ರದ ಬ್ರಾಹ್ಮಣ ಮುಖ್ಯಮಂತ್ರಿ ದೇವೇಂದ್ರ ಡ್ನವೀಸ್ ಅವರು ವಂದೇ ಮಾತರಂ ವಿವಾದ ಎಬ್ಬಿಸಿರುವುದರ ಹಿಂದಿನ ಎರಡೂ ಉದ್ದೇಶಗಳು ಒಂದೇ ಆಗಿವೆ. ಭಾರತ್ ಮಾತಾ ಕಿ ಜೈ ಎಂದು ಹೇಳುವಲ್ಲಿ ಇನ್ನೂ ವಿವಾದಗಳು ಇವೆ ಎಂದು ಡ್ನವೀಸ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಭಾರತ್ ಮಾತಾ ಕಿ ಜೈ ಎಂದು ಹೇಳುವುದನ್ನು ವಿರೋಸುವವರಿಗೆ ಈ ನಾಡಿನಲ್ಲಿ ಉಳಿಯುವ ಯಾವ ಹಕ್ಕು ಕೂಡಾ ಇಲ್ಲ. ಇಲ್ಲಿ ವಾಸಿಸುವ ಪ್ರತಿಯೊಬ್ಬರೂ ಭಾರತ್ ಮಾತಾ ಕಿ ಜೈ ಎಂದು ಹೇಳಲೇಬೇಕು
ಇವು ಖಂಡಿತವಾಗಿಯೂ ಆಕಸ್ಮಿಕ ಘೋಷಣೆಗಳಲ್ಲ. ಇದರ ಮೂಲಕ್ಕೆ ಇಳಿದು ನೋಡಿದರೆ, ಬಿಜೆಪಿ ಅಂಬೇಡ್ಕರ್ ಅವರಂಥ ದಲಿತ ಐಕಾನ್‌ಗಳನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನವನ್ನು ಒಂದೆಡೆ ಮಾಡುತ್ತಾ ಹೊಸ ಮತಬ್ಯಾಂಕ್ ಬೇಟೆಗೆ ಮುಂದಾಗಿದ್ದರೆ, ಸಾಂಪ್ರದಾಯಿಕವಾಗಿ ತಮ್ಮನ್ನು ಬೆಂಬಲಿಸುತ್ತಾ ಬಂದ ಮೇಲ್ವರ್ಗದವರನ್ನು ಕೂಡಾ ಓಲೈಸಿಕೊಂಡು ಹೋಗುವ ಕಸರತ್ತು ಎನ್ನುವುದು ಸ್ಪಷ್ಟ.
ಜಾತೀಯವಾದಿ ಹೃದಯ
ಬಲಪಂಥೀಯ, ಎಡಪಂಥೀಯ ಹಾಗೂ ಉದಾರವಾದಿ ಚಿಂತನೆ ಹೀಗೆ ಎಲ್ಲ ಸಿದ್ಧಾಂತಗಳ ಬ್ರಾಹ್ಮಣರು ಹಾಗೂ ಇತರ ಮೇಲ್ವರ್ಗದ ಬುದ್ಧಿವಂತರು ಈ ಸಾಂಸ್ಕೃತಿಕ ಕಾರ್ಯಸೂಚಿಯ ತಂತ್ರಗಾರಿಕೆಯನ್ನು ಅರ್ಥ ಮಾಡಿಕೊಳ್ಳಬಲ್ಲರು. ಇವರೆಲ್ಲರೂ ಮಹಿಶಾಸುರ ಅಥವಾ ದ್ರೋಣಾಚಾರ್ಯರ ಬಗ್ಗೆ ಒಂದೇ ಅಭಿಪ್ರಾಯವನ್ನು ಹೊಂದಿದ್ದಾರೆ. ಇದು ಇತ್ತೀಚಿನ ಬೆಳವಣಿಗೆಯೇನೂ ಅಲ್ಲ. ಕಾಂಗ್ರೆಸ್ ಸರಕಾರದ ಅವಯಲ್ಲಿ ಕೂಡಾ ಈ ಚಿತ್ರಣ ಭಿನ್ನವಾಗಿ ಇರಲಿಲ್ಲ. ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ದ್ರೋಣಾಚಾರ್ಯರ ಹೆಸರು ಇಡಲಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.
ಇಲ್ಲಿ ಇರುವ ಪ್ರಮುಖ ಸಮಸ್ಯೆ ಎಂದರೆ, ಬ್ರಾಹ್ಮಣರ ಪುರಾಣ ಸಿದ್ಧಾಂತಗಳನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡು ಅದರ ವಿರುದ್ಧ ತಮ್ಮದೇ ಆದ ಸಾಂಸ್ಕೃತಿಕ ಸಂಕೇತದಿಂದ ಅದರ ವಿರುದ್ಧ ಹೋರಾಟ ಮಾಡುವ ಯಾವ ಶೂದ್ರ ಬುದ್ಧಿಜೀವಿಗಳೂ ಇಲ್ಲದಿರುವುದು. ಉದಾಹರಣೆಗೆ ಹರ್ಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಪಡೆದ ಸುಶಿಕ್ಷಿತ ಬುದ್ಧಿಜೀವಿಗಳನ್ನು ರೂಪಿಸುವುದು ಸಾಧ್ಯವಾಗಿಲ್ಲ. ಗುಜರಾತ್‌ನ ಪಟೇಲರು ಹಾಗೂ ರಾಜಸ್ಥಾನದ ಗುಜ್ಜರ್ ಸಮುದಾಯದವರದ್ದೂ ಇದೇ ಕಥೆ.
ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಕಾರಣದಿಂದ ಭಾರತೀಯ ಬ್ರಾಹ್ಮಣ ಪುರಾಣಗಳನ್ನು ದಲಿತ ದೃಷ್ಟಿಕೋನದಿಂದ ಮರು ಅಧ್ಯಯನ ಮಾಡುವ ಕೆಲವು ಪ್ರಯತ್ನಗಳು ನಡೆದಿವೆ. ಆದರೆ ಶೂದ್ರ ದೃಷ್ಟಿಕೋನದಿಂದ ಯಾವುದೇ ಗಂಭೀರ ಮರು ಅಧ್ಯಯನದ ಪ್ರಯತ್ನಗಳು ಆಗಿಲ್ಲ. ದೇಶದಲ್ಲಿ ಪ್ರಬಲವಾದ ಶೂದ್ರ ಬುದ್ಧಿಜೀವಿ ವರ್ಗಗಳು ರೂಪುಗೊಳ್ಳುವವರೆಗೂ, ದೇಶದ ಉತ್ಪಾದಕ ಜನರ ಇತಿಹಾಸ ಹಾಗೂ ವರ್ಣನೆಗಳು ಬೆಳಕಿಗೆ ಬರುವ ಸಾಧ್ಯತೆ ಕಡಿಮೆ.
ಅದುವರೆಗೂ ಆರೆಸ್ಸೆಸ್‌ನ ಗುರಿ ಸ್ಪಷ್ಟ. ಆರೆಸ್ಸೆಸ್ ಪ್ರಚಾರಕ ಮುಖ್ಯಮಂತ್ರಿಗಳನ್ನು ಕರೆದು, ಹೊಸ ಮತ ಬೇಟೆ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಹೊಗಳಿಕೆ ಮಾಡಿದ ಪರಿಣಾಮವನ್ನೆಲ್ಲ ಮಂದಗೊಳಿಸುವ ಹಾಗೂ ಸಮತೋಲನ ಸ್ಥಾಪಿಸುವ ನಿಟ್ಟಿನಲ್ಲಿ ಅವರನ್ನು ಬಳಸಿಕೊಳ್ಳುವ ಕಲೆ ಆರೆಸ್ಸೆಸ್‌ಗೆ ಚೆನ್ನಾಗಿ ತಿಳಿದಿದೆ. ಗುರ್‌ಗಾಂವ್ ಪಟ್ಟಣವನ್ನು ಗುರುಗ್ರಾಮ ಎಂದು ಮರುನಾಮಕರಣ ಮಾಡಲು ಅಂಬೇಡ್ಕರ್ ಜಯಂತಿ ಸಮಾರಂಭದ ಅವಯನ್ನೇ ಆಯ್ಕೆ ಮಾಡಿಕೊಂಡಿರುವುದೇ ಈ ಕಾರಣಕ್ಕಾಗಿ.
ಆರೆಸ್ಸೆಸ್‌ನ ಅಂತರಂಗ ಅಥವಾ ಆತ್ಮ ದ್ರೋಣಾಚಾರ್ಯರೇ ವಿನಃ ಏಕಲವ್ಯ ಅಥವಾ ಕರ್ಣನಲ್ಲ. ಇಂಥ ಚಿಂತನೆಯವರಿಂದ ನಿಯಂತ್ರಿಸಲ್ಪಡುವ ಸರಕಾರದಿಂದ ಯಾವುದೇ ವಾಸ್ತವವಾದ ಪ್ರಗತಿಯನ್ನು ದೇಶದಲ್ಲಿ ಕಾಣಲು ಖಂಡಿತವಾಗಿಯೂ ಸಾಧ್ಯವಿಲ್ಲ. ಸಬ್ ಕಾ ಸಾಥ್,.ಸಬ್ ಕಾ ವಿಕಾಸ್ ಎನ್ನುವುದು ಅವರ ಆತ್ಮಕ್ಕಷ್ಟೇ ನಿಜ. ಇದು ಅವರ ಜಾತೀಯವಾದಿ ಪ್ರತಿಮೆಗಷ್ಟೇ ನಿಷ್ಠೆ ತೋರುವಂಥದ್ದು.