ನಿಲ್ ಬಟ್ಟೆ ಸನ್ನಾಟ: ತಾಯಿಯ ತಲ್ಲಣದ ಹೃದಯಸ್ಪರ್ಶಿ ಕತೆ
‘ನಿಲ್ ಬಟ್ಟೆ ಸನ್ನಾಟ’ ನಿಜಕ್ಕೂ ಒಂದು ಅಪರೂಪದ ಚಿತ್ರ. ಅದ್ದೂರಿತನದಿಂದ ದೂರವಿರುವ ಈ ಚಿತ್ರವನ್ನು ವೀಕ್ಷಿಸಿದಾಗ ನಿಮ್ಮ ಕಣ್ಣುಗಳು ತೇವಗೊಳ್ಳುವ ಜೊತೆಗೆನೇ ಮುಖದಲ್ಲಿ ಮಂದಹಾಸವೂ ಮೂಡುವಂತಹ ವಿಭಿನ್ನ ಫೀಲಿಂಗ್ ನೀಡುತ್ತದೆ. ಬಾಲಿವುಡ್‌ನಲ್ಲಿ ಮಸಾಲೆ ಚಿತ್ರಗಳ ಅಬ್ಬರ ಜೋರಾಗಿರುವ ಇಂದಿನ ದಿನಗಳಲ್ಲಿ ಅಶ್ವಿನಿ ಐಯ್ಯರ್ ತಿವಾರಿ ಅವರ ಚೊಚ್ಚಲ ನಿರ್ದೇಶನದ, ‘ನಿಲ್ ಬಟ್ಟೆ ಸನ್ನಾಟ’ ಬಿರುಬಿಸಿಲಿನ ನಡುವೆ ಬೀಸಿದ ತಂಗಾಳಿಯಂತಿದೆ.
ನಿಲ್ ಎಂದರೆ ಶೂನ್ಯ, ಬತ್ತೆ ಎಂದರೆ ವಿಭಾಗಿಸು ಹಾಗೂ ಸನ್ನಾಟ ಎಂದರೆ ನಿಶ್ಯಬ್ದ ಅಥವಾ ಶೂನ್ಯ ಎಂದೂ ಆಗುತ್ತದೆ. ಶೂನ್ಯವನ್ನು ವಿಭಜಿಸಿದಲ್ಲಿ ಶೂನ್ಯವೇ ದೊರೆಯುವುದು ಎಂಬುದೇ ಇದರ ಅರ್ಥ. ಚಿತ್ರದ ನಾಯಕಿ ಚಂದಾ (ಸ್ವರ ಭಾಸ್ಕರ್) ಓರ್ವ ಅನಕ್ಷರಸ್ಥ ಮನೆಗೆಲಸದ ಮಹಿಳೆ. ತನ್ನ 15ರ ಹರೆಯದ ಬಾಲಕಿ ಅಪೇಕ್ಷಾ (ರಿಯಾ ಶುಕ್ಲಾ)ಳ ಭವಿಷ್ಯದ ಬಗ್ಗೆ ಆಕೆ ಅಗಾಧವಾದ ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ. ಆದರೆ ಕಲಿಕೆಯ ಬಗ್ಗೆ ತನ್ನ ಮಗಳ ನಿರಾಸಕ್ತಿಯನ್ನು ಕಂಡು ಆಕೆ ಹತಾಶೆಗೊಂಡಿರುತ್ತಾಳೆ. ‘‘ಡ್ರೈವರ್‌ನ ಮಗ ಡ್ರೈವರ್ ಆಗಲಷ್ಟೇ ಸಾಧ್ಯ. ಹಾಗೆಯೇ ಮನೆಗೆಲಸದವಳ ಮಗಳು ಮನೆಗೆಲಸದವಳಾಗುವ ಕನಸನ್ನಷ್ಟೇ ಕಾಣಬೇಕು’ ಎನ್ನುವ ಅಪೇಕ್ಷಾ, ಕಲಿಕೆಯಲ್ಲಿ ತೀರಾ ಹಿಂದುಳಿದಿರುತ್ತಾಳೆ.
ಶಾಲೆಗೆ ಆಗಾಗ್ಗೆ ಚಕ್ಕರ್ ಹೊಡೆಯುವ ಅಪೇಕ್ಷಾಳಿಗೆ ಗಣಿತವಂತೂ ಕಬ್ಬಿಣದ ಕಡಲೆಯಾಗಿರುತ್ತದೆ. ಸಿಡಿದೇಳುವ ಸ್ವಭಾವದ ಈ ಹದಿಹರೆಯದ ಬಾಲಕಿ, ಕಲಿಯಲು ತನಗಿರುವ ಸೋಮಾರಿತನವನ್ನು ಬಡತನದ ಹಿಂದೆ ಮರೆಮಾಚಲು ಪ್ರಯತ್ನಿಸುತ್ತಾಳೆ. ತನ್ನಂತೆ ತನ್ನ ಮಗಳ ಬದುಕೂ ಹಾಳಾಗಬಾರದು ಎಂಬ ಭಾವನೆಯಿಂದ ಚಂದಾ ದಿನದಲ್ಲಿ ನಾಲ್ಕು ಕಡೆ ಕೂಲಿನಾಲಿ ಮಾಡಿಕೊಂಡಿರುತ್ತಾಳೆ. ಆದಾಗ್ಯೂ ಅಪೇಕ್ಷಾ ಅದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ, ಮೊಂಡು ಸ್ವಭಾವವನ್ನು ಮುಂದುವರಿಸುತ್ತಾಳೆ.
ಚಂದಾ ತನ್ನ ಪುತ್ರಿಯ ಬಗ್ಗೆ ಕಟ್ಟಿಕೊಂಡಿದ್ದ ಆಶಾಗೋಪುರ ಕುಸಿದುಬೀಳುವ ಈ ಸನ್ನಿವೇಶದಲ್ಲಿ ಆಕೆ ತನ್ನ ಒಡತಿ (ರತ್ನಾ ಪಾಠಕ್ ಶಾ)ಯಲ್ಲಿ ಭರವಸೆಯ ಬೆಳಕನ್ನು ಕಾಣುತ್ತಾಳೆ. ತಾಯಿಯೊಬ್ಬಳ ತಲ್ಲಣಗಳನ್ನು ಚೆನ್ನಾಗಿ ಅರಿತುಕೊಂಡ ಆಕೆ, ಚಂದಾಳ ಕನಸನ್ನು ನನಸುಗೊಳಿಸಲು ಉಪಾಯವೊಂದನ್ನು ರೂಪಿಸುತ್ತಾಳೆ.
ತನ್ನ ಒಡತಿಯ ಪ್ರೇರಣೆ ಹಾಗೂ ಪ್ರೋತ್ಸಾಹದಿಂದಾಗಿ ಚಂದಾಳಲ್ಲಿ ಹೋರಾಟದ ಕೆಚ್ಚು ಮೂಡುತ್ತದೆ. ಆಕೆ ಮರಳಿ ಶಾಲೆಗೆ ಹೋಗುವ ಧೈರ್ಯ ಮಾಡುತ್ತಾಳೆ. ನೀಲಿ ಹಾಗೂ ಬಿಳಿ ಸಮವಸ್ತ್ರ ಧರಿಸಿ, ಆಕೆ ತನ್ನ ಮಗಳು ಕಲಿಯುವ ಸರಕಾರಿ ಶಾಲೆಗೆ ಸೇರ್ಪಡೆಗೊಳ್ಳುತ್ತಾಳೆ. ಮಗಳ ತರಗತಿಯಲ್ಲಿಯೇ ಪ್ರವೇಶ ಪಡೆದುಕೊಳ್ಳುತ್ತಾಳೆ. ಅಪೇಕ್ಷಾಳ ಗೆಳತಿಯರ ಒಲುಮೆಯನ್ನು ಗೆಲ್ಲುವ ಚಂದಾ, ಅಧ್ಯಾಪಕರಿಗೂ ನೆಚ್ಚಿನವಳಾಗುತ್ತಾಳೆ. ತನ್ನದೇ ತರಗತಿಯಲ್ಲಿ ತನ್ನೊಂದಿಗೆ ತಾಯಿ ಕಲಿಯುವುದು ಅಪೇಕ್ಷಾಗೆ ನುಂಗಲಾರದ ತುತ್ತಾಗುತ್ತದೆ. ಶಾಲೆಯನ್ನು ತ್ಯಜಿಸುವಂತೆ ಆಕೆ ತಾಯಿಯನ್ನು ಬ್ಲಾಕ್‌ಮೇಲ್ ಮಾಡುತ್ತಾಳೆ,ಪುಸಲಾಯಿಸುತ್ತಾಳೆ. ಅದ್ಯಾವುದಕ್ಕೂ ಚಂದಾ ಬಗ್ಗುವುದಿಲ್ಲ. ಆಕೆ ತನ್ನ ಮಗಳಿಗೆ ಒಂದೇ ಒಂದು ಸವಾಲೊಡ್ಡುತ್ತಾಳೆ. ಗಣಿತದಲ್ಲಿ ನನ್ನನ್ನು ಸೋಲಿಸು, ಆಗ ಮಾತ್ರವೇ ನಾನು ಶಾಲೆ ಬಿಡುತ್ತೇನೆ ಎಂಬ ಶರತ್ತನ್ನು ಆಕೆ ಒಡ್ಡುತ್ತಾಳೆ. ಹೀಗೆ ತಾಯಿ ಮಗಳ ನಡುವೆ ಸ್ಪರ್ಧೆ ಆರಂಭವಾಗುತ್ತದೆ. ಗಣಿತದ ಬಗ್ಗೆ ವಿದ್ಯಾರ್ಥಿಗಳಿಗಿರುವ ಭೀತಿಯನ್ನು ಈ ಚಿತ್ರದಲ್ಲಿ ಅತ್ಯಂತ ಮನರಂಜನಾತ್ಮಕವಾಗಿ ತೋರಿಸಲಾಗಿದೆ. ರೇಖಾಗಣಿತ ತ್ರಿಕೋನಮಿತಿಯನ್ನು ಅರಿತುಕೊಳ್ಳಲು ತಾಯಿ, ಮಗಳ ಜೋಡಿ ಪೇಚಾಡಿಕೊಳ್ಳುವುದನ್ನು ಕಂಡಾಗ ನಗು ಉಕ್ಕಿ ಬರುತ್ತದೆ. ಇವರಿಬ್ಬರೂ ಗಣಿತದ ಸೂತ್ರಗಳನ್ನು ಕಲಿಯುವುದನ್ನು ನೋಡುವುದೇ ಪ್ರೇಕ್ಷಕರ ಕಣ್ಣಿಗೆ ಹಬ್ಬ.
ಆಗ್ರಾ ನಗರದ ಹಿನ್ನೆಲೆಯಲ್ಲಿ ನಡೆಯುವ ಚಿತ್ರದಲ್ಲಿ ಕೆಲವೊಂದು ಸ್ವಾರಸ್ಯಕರ ಹೃದಯಸ್ಪರ್ಶಿ ಸನ್ನಿವೇಶಗಳೂ ಇವೆ. ಅಪೇಕ್ಷಾ ಕಲಿಯುವ ಶಾಲೆಯ ಮುಖ್ಯೋಪಾಧ್ಯಾಯರನ್ನು ಚಂದಾ ಭೇಟಿಯಾಗುವುದು. ತನ್ನ ಮಗಳ ತರಗತಿಯಲ್ಲಿಯೇ ಚಂದಾ ಕೂಡಾ ಕಲಿಯಲು ಬಯಸುತ್ತಿದ್ದಾಳೆಂಬುದನ್ನು ತಿಳಿದು ಮುಖ್ಯೋಪಾಧ್ಯಾಯರು ಅಶ್ಚರ್ಯಚಕಿತರಾಗುವುದು ಇವೆಲ್ಲವೂ ಅತ್ಯಂತ ರಸವತ್ತಾಗಿ ಮೂಡಿಬಂದಿದೆ.
ಇದು ಕೇವಲ ತಾಯಿಮಗಳ ಕುರಿತಾದ ಭಾವನಾತ್ಮಕ ಕಥೆ ಮಾತ್ರವಲ್ಲ. ಶಿಕ್ಷಣದ ಮಹತ್ವವನ್ನು ಸಮಾಜಕ್ಕೆ ಸಾರುವ ಒಂದು ಪ್ರಯತ್ನ ಕೂಡಾ ಇಲ್ಲಿದೆ. ಪೋಷಕರ ಇತಿಮಿತಿಗಳು, ಅವರ ಮಗುವಿನ ಭವಿಷ್ಯಕ್ಕೆ ಅಡ್ಡಿಯಾಗದು ಎಂಬುದನ್ನು ತಿಳಿಸಲು ಈ ಚಿತ್ರ ಯತ್ನಿಸಿದೆ.
ಮಗುವಿನ ಭವಿಷ್ಯದ ಬಗ್ಗೆ ಅಗಾಧ ಕಳಕಳಿಯಿರುವ ತಾಯಿಯ ಪಾತ್ರವನ್ನು ಸ್ವರಭಾಸ್ಕರ್ ಅತ್ಯಂತ ಸರಳವಾಗಿ ಹಾಗೂ ಅಷ್ಟೇ ಶಕ್ತಿಯುತವಾಗಿ ನಿಭಾಯಿಸಿದ್ದಾರೆ. ‘ತನು ವೆಡ್ಸ್ ಮನು’ ಸೀರಿಸ್‌ನ ಚಿತ್ರಗಳಲ್ಲಿ ಮಾಡರ್ನ್ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದ ಆಕೆ, ಈ ಚಿತ್ರದಲ್ಲಿ ವಿಭಿನ್ನ ಪಾತ್ರವನ್ನು ನಿರ್ವಹಿಸಿ ಸೈ ಅನಿಸಿಕೊಂಡಿದ್ದಾರೆ. ಪುತ್ರಿಯಾಗಿ ರಿಯಾ ಶುಕ್ಲಾ ಅಭಿನಯವೂ ಸೊಗಸಾಗಿದೆ. ಮುಖ್ಯೋಪಾಧ್ಯಾಯ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ನೆನಪಿನಲ್ಲಿ ಉಳಿಯುತ್ತಾರೆ. ಹಾಗೆಯೇ ಚಂದಾಳ ಒಡತಿ, ಮಾನವೀಯತೆಯುಳ್ಳ ವೈದ್ಯೆಯಾಗಿ ರತ್ನಾ ಪಾಠಕ್ ಶಾ ತನ್ನ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ.
ಚಿತ್ರದ ಸಂಕಲನ ತೀರಾ ಹರಿತವಾಗಿದ್ದು, ಕೆಲವು ದೃಶ್ಯಗಳನ್ನು ಮೊಟಕುಗೊಳಿಸಿರುವುದು ಕಂಡುಬರುತ್ತದೆ. ಚಂದಾ ಪ್ರತಿದಿನವೂ ಪುತ್ರಿ ಅಪೇಕ್ಷಾಳನ್ನು ಎಬ್ಬಿಸಲು ಹರಸಾಹಸ ನಡೆಸುವುದು, ತನ್ನ ಮಗಳಿಗೆ ಉತ್ತಮ ಭವಿಷ್ಯವನ್ನು ಕಲ್ಪಿಸಲು ಚಂದಾ ಬೆವರಿಳಿಸಿ ದುಡಿಯುವುದು, ತನ್ನ ತಾಯಿಯ ನಿರ್ಧಾರ ಸರಿಯೆಂಬುದು ಕ್ರಮೇಣ ಅಪೇಕ್ಷಾಗೆ ಅರಿವಾಗುವುದು ಈ ಎಲ್ಲಾ ಸನ್ನಿವೇಶಗಳೂ ಅತ್ಯಂತ ಮಾರ್ಮಿಕವಾಗಿ ಮೂಡಿಬಂದಿವೆ.
ಮೊದಲಾರ್ಧದಲ್ಲಿ ಅತ್ಯಂತ ಚುರುಕಾಗಿ ಸಾಗುವ ಚಿತ್ರವು ದ್ವಿತೀಯಾರ್ಧದಲ್ಲಿ ತನ್ನ ವೇಗವನ್ನು ತುಸು ಕಳೆದುಕೊಂಡಿದೆ. ಆದಾಗ್ಯೂ ಚಿತ್ರದ ಚಾರ್ಮ್ ಕಡಿಮೆಯಾಗದಂತೆ ಮಾಡುವಲ್ಲಿ ನಿರ್ದೇಶಕಿ ಅಶ್ವಿನಿ ಸಫಲರಾಗಿದ್ದಾರೆ. ಒಂದು ಹಂತದಲ್ಲಿ ಚಿತ್ರವು ಡಾಕ್ಯುಮೆಂಟರಿಯಂತೆ ಬೋಧನೆಗೆ ಶುರುಹಚ್ಚಿಕೊಳ್ಳುವುದರಿಂದ ತುಸು ಕಿರಿಕಿರಿಯೆನಿಸುತ್ತದೆ. ಆದರೆ ಅಂತಿಮವಾಗಿ ನಿಲ್ ಬಟ್ಟೆ ಸನ್ನಾಟ ತನ್ನ ಮುಗ್ಧತೆ ಹಾಗೂ ಸರಳತೆಯಿಂದಾಗಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲವಾಗಿದೆ.