ಟ್ಯಾಂಕರ್ಗಳಿಗೂ ನೀರಿನ ಅಭಾವ: ಆತಂಕದಲ್ಲಿ ಮಂಗಳೂರು ನಗರ
ಮಂಗಳೂರು, ಎ.23: ಬಿಸಿಲಿನ ಝಳಕ್ಕೆ ತತ್ತರಿಸುತ್ತಿರುವ ದ.ಕ.ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಇದೀಗ ಎರಡು ದಿನಕ್ಕೊಮ್ಮೆ ತುಂಬೆಯಿಂದ ಮಂಗಳೂರು ಮಹಾನಗರಕ್ಕೆ ನೀರು ಸರಬರಾಜು ನಡೆಯುತ್ತಿದ್ದರೂ ಅದು ಕೂಡ ಸರಿಯಾಗಿ ಬರುತ್ತಿಲ್ಲ ಎಂಬ ಆರೋಪವಿದೆ. ಮುಂದಿನ ದಿನಗಳಲ್ಲಿ ನೀರಿನ ಟ್ಯಾಂಕರ್ಗಳಿಗೂ ನೀರು ಸಿಗದೆ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಮಂಗಳೂರು ಮಹಾನಗರದಲ್ಲಿ ನೀರು ಸರಬರಾಜಿಗೆ ಸಮಸ್ಯೆಯಾದರೆ ಹೆಚ್ಚಿ ನವರು ಟ್ಯಾಂಕರ್ನ ಮೊರೆ ಹೋಗುತ್ತಾರೆ. ಮನಪಾದ ನೀರಿನ ಟ್ಯಾಂಕರ್ನಿಂದ ವಿಳಂಬವಾಗಬಹುದು ಎಂಬ ನಿಟ್ಟಿನಲ್ಲಿ ಖಾಸಗಿ ನೀರಿನ ಟ್ಯಾಂಕರ್ಗಳನ್ನು ನೆಚ್ಚಿಕೊಂಡವರೆ ಅಧಿಕ. ಆದರೆ ಇದೀಗ ಖಾಸಗಿ ಟ್ಯಾಂಕರ್ಗಳಲ್ಲಿಯೂ ಸರಬರಾಜು ಮಾಡುವಷ್ಟು ನೀರು ಸಿಗುತ್ತಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿದೆ.
ಮಂಗಳೂರಿನಲ್ಲಿ ಮಹಾನಗರಪಾಲಿಕೆಯ 2 ಟ್ಯಾಂಕರ್ಗಳು ಕಾರ್ಯಾಚರಿಸುತ್ತಿದ್ದರೆ ಸುಮಾರು 50ರಷ್ಟು ಖಾಸಗಿ ಟ್ಯಾಂಕರ್ಗಳು ಕಾರ್ಯಾಚರಿಸುತ್ತಿವೆ. ಖಾಸಗಿಯವರಿಗೆ ಟ್ಯಾಂಕರ್ಗಳ ಮೂಲಕ ನಗರದ ಜನರ ನೀರಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮನಪಾ ವ್ಯಾಪ್ತಿಯಲ್ಲಿ ಹಲವು ಟ್ಯಾಂಕರ್ಗಳು ಖಾಸಗಿ ವ್ಯಕ್ತಿಗಳ ಕೈಯಲ್ಲಿವೆ. ಅವರಿಗೆ ಫೋನಾಯಿಸಿದರೆ ನೀರು ಸರಬರಾಜಾಗುತ್ತದೆ. ನಗರದ ಕೆಲವು ಪ್ರದೇಶಗಳಲ್ಲಿ ನೀರು ಹೇರಳವಾಗಿ ಸಿಗುವ ಬಾವಿಗಳಿಂದ ನೀರು ಪಡೆದುಕೊಂಡು ಸರಬರಾಜು ನಡೆಯುತ್ತಿದೆ. ಆದರೆ ಈ ಬಾವಿಗಳಲ್ಲಿ ದಿನದ 24 ಗಂಟೆಯೂ ನೀರು ತೆಗೆಯುತ್ತಿರುವುದರಿಂದ ನೀರಿನ ಪ್ರಮಾಣ ತಗ್ಗುತ್ತಿದ್ದು, ಜನರ ಬೇಡಿಕೆಯಂತೆ ನೀರು ಸರಬರಾಜು ಮಾಡಲು ಆಗದ ಪರಿಸ್ಥಿತಿ ಸೃಷ್ಟಿಯಾಗಿದೆ.
ಎಪ್ರಿಲ್-ಮೇ ತಿಂಗಳಲ್ಲಿ ನೀರು ಸರಬರಾಜು ಮಾಡುವ ಖಾಸಗಿ ಟ್ಯಾಂಕರ್ಗಳು, ಉಳಿದ ಸಮಯಗಳಲ್ಲಿ ಮೀನುಗಾರಿಕೆಗೆ ತೆರಳುವ ಬೋಟ್ಗಳಿಗೆ ಮತ್ತು ಐಸ್ಪ್ಲಾಂಟ್ಗಳಿಗೆ ನೀರನ್ನು ಸರಬರಾಜು ಮಾಡುತ್ತಿರುತ್ತವೆ. ಎಪ್ರಿಲ್ ಮೇ ತಿಂಗಳಲ್ಲಿ ಇವುಗಳು ಮನೆ, ಕಟ್ಟಡಗಳಿಗೆ ನೀರನ್ನು ಸರಬರಾಜು ಮಾಡುವ ಕಾರ್ಯದಲ್ಲಿ ನಿರತವಾಗುತ್ತವೆ.
24 ಗಂಟೆಯೂ ನಿರಂತರ ಪಂಪ್ಗಳ ಮೂಲಕ ನೀರು ತೆಗೆಯುತ್ತಿರುವುದರಿಂದ ಕದ್ರಿ ಕಂಬಳದಲ್ಲಿ ಖಾಸಗಿ ಒಡೆತನದಲ್ಲಿರುವ ಬಾವಿ ಬತ್ತಿ ಹೋಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಟ್ಯಾಂಕರ್ಗಳಿಗೆ ತುಂಬಿಸಲು ನೀರು ಸಿಗುವುದು ಕಷ್ಟ. ಇನ್ನು ಎಪ್ರಿಲ್ ಮೇ ತಿಂಗಳಲ್ಲಿ ಮದುವೆ, ಇನ್ನಿತರ ಸಮಾರಂಭಗಳು ಜಾಸ್ತಿಯಾಗಿರುವುದರಿಂದ ಸಭಾಂಗಣಕ್ಕೆ ನೀರಿನ ಬೇಡಿಕೆ ಅಧಿಕವಾಗಿರುತ್ತದೆ. ಈ ಬೇಡಿಕೆಯನ್ನು ಪೂರೈಸಲು ಕಷ್ಟವಾಗುತ್ತಿದೆ ಎಂದು ಖಾಸಗಿ ಟ್ಯಾಂಕರ್ ಮಾಲಕರು ಅಳಲು ಹೇಳುತ್ತಾರೆ.
ಮಂಗಳೂರಿನ ಕಾರ್ಸ್ಟ್ರೀಟ್, ಕದ್ರಿ, ಕೊಡಿಯಾಲ್ಬೈಲ್, ಕೊಡಿಯಾಲ್ಗುತ್ತು, ಬಾರೆಬೈಲ್, ಎಕ್ಕೂರು, ಕಣ್ಣೂರು ಪ್ರದೇಶಗಳಲ್ಲಿ ನೀರಿನ ಒರತೆಯಿದ್ದರೂ ಇಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಿಲ್ಲದೆ ಕುಡಿಯುವ ನೀರನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರು ಮಾಡಿದ ಆಗ್ರಹಕ್ಕೆ ಬೆಲೆ ನೀಡದ ಪರಿಣಾಮ ಅದನ್ನು ಉಪಯೋಗಿಸಲು ಸಾಧ್ಯವಿಲ್ಲದಂತಾಗಿದೆ.
900 ರೂ.ವರೆಗೆ ಪಾವತಿಸಿ ನೀರು ಪಡೆದುಕೊಳ್ಳಬೇಕು
ಖಾಸಗಿ ಟ್ಯಾಂಕರ್ಗಳು ನೀರು ಸರಬರಾಜು ಮಾಡಿದಾಗ ಅದಕ್ಕೆ ಬೇಕಾದ ಹಣವನ್ನು ಬೇಡಿಕೆಯಿಟ್ಟವರು ಪಾವತಿಸಬೇಕು. 6,000 ಲೀ. ಸಾಮರ್ಥ್ಯದ ಟ್ಯಾಂಕರ್ನಲ್ಲಿ ಸರಬರಾಜು ಮಾಡುವ ನೀರಿಗೆ 800ರಿಂದ 900 ರೂ.ವರೆಗೆ ದರವಿದೆ. ಅದೇ ರೀತಿ 3 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್ನಲ್ಲಿ ಸರಬರಾಜು ಮಾಡುವ ನೀರಿಗೆ 600 ರೂ.ವರೆಗೆ ದರವಿದೆ.
ಮನಪಾದಲ್ಲಿ ಇರುವುದು ಕೇವಲ 2 ಟ್ಯಾಂಕರ್
ಮಂಗಳೂರು ಮಹಾನಗರಪಾಲಿಕೆಯಲ್ಲಿ ನೀರು ಸರಬರಾಜು ಮಾಡಲು ಇರುವುದು 2 ಟ್ಯಾಂಕರ್ಗಳು ಮಾತ್ರ. ಅವುಗಳು ಕೂಡ ಇರುವುದು ಗುತ್ತಿಗೆ ಆಧಾರದಲ್ಲಿ. ಇವುಗಳಿಗೆ ದಿನಕ್ಕೆ 900 ರೂ. ಮನಪಾ ಪಾವತಿಸುತ್ತದೆ.ಜನರಿಗೆ ಉಚಿತವಾಗಿ ನೀರು ಸರಬರಾಜಾಗುತ್ತದೆ. ಇವುಗಳ ಮೂಲಕ ಇದೀಗ ನೀರು ಸರಬರಾಜು ನಡೆಯುತ್ತಿದೆಯಾದರೂ ನೀರಿನಿಂದ ತತ್ತರಿಸಿರುವ ಮಂಗಳೂರಿಗೆ ಕೇವಲ 2 ಟ್ಯಾಂಕರ್ಗಳಿಂದ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ.
ಮನಪಾದಲ್ಲಿ ಗುತ್ತಿಗೆ ಆಧಾರದಲ್ಲಿ 2 ನೀರಿನ ಟ್ಯಾಂಕರ್ಗಳಿವೆ. ಇನ್ನೆರಡು ಟ್ಯಾಂಕರ್ಗಳನ್ನು ಬಳಸುವಂತಾಗಲು ಅನುಮೋದನೆ ಯನ್ನು ನನ್ನ ಅವಧಿಯಲ್ಲಿ ನೀಡಿದ್ದೇನೆ. ಆದರೆ ಅದು ಕಾರ್ಯಗತವಾ ಗಲಿಲ್ಲ. ಈ ಬಗ್ಗೆ ಪಾಲಿಕೆ ಆಡಳಿತ ಶೀಘ್ರ ಗಮನಹರಿಸಬೇಕಾಗಿದೆ.
-ಅಶೋಕ್ ಡಿ.ಕೆ., ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು.