ಖರ್ಗೆಯವರೂ ಚಿಕ್ಕಂದಿನಲ್ಲಿ ಚಹಾ ಮಾರಿದ್ದರೆ ಯಾರು ಕುಡಿಯುತ್ತಿದ್ದರು?
ಮೊನ್ನೆ ಅಂಬೇಡ್ಕರ್ ಜಯಂತಿಯಂದು ಮಲ್ಲಿಕಾರ್ಜುನ ಖರ್ಗೆಯವರು ಒಂದು ಸಾರಸ್ಯಕರ ಸಂಗತಿ ಹೇಳಿದರು. ಮೋದಿಯವರು ಮಾತು ಮಾತಿಗೆ ನಾನು ಚಿಕ್ಕಂದಿನಲ್ಲಿ ಚಹಾ ಮಾರುತ್ತಿದ್ದೆ ಎಂದು ಹೇಳುವುದನ್ನು ಕೇಳಿ ಬೇಸತ್ತು ಖರ್ಗೆಯವರು ನಾನು ಚಿಕ್ಕಂದಿನಲ್ಲಿ ಚಹಾ ಮಾರಲು ಹೋಗಿದ್ದರೆ ದಲಿತನಾದ ನನ್ನ ಕೈಯಿಂದ ಚಹಾ ಯಾರೂ ಕುಡಿಯುತ್ತಿರಲಿಲ್ಲ ಎಂದು ಹೇಳಿದರಂತೆ. ಖರ್ಗೆಯವರ ಈ ಮಾತು ಕೇವಲ ರಾಜಕೀಯ ವರಸೆಯಲ್ಲ.ಅವರು ಹೇಳಿದ್ದು ನೂರಕ್ಕೆ ನೂರು ನಿಜ. ಅದೂ ಮೋದಿಯ ಗುಜರಾತಿನಲ್ಲಿ ಮೇಲ್ಜಾತಿಯವರು ಪ್ರತಿಯೊಂದಕ್ಕೂ ಜಾತಿ ನೋಡುತ್ತಾರೆ. ಮನೆ ಬಾಡಿಗೆ ಕೊಡುವಾಗಲೂ ಮೊದಲು ಮಾಂಸಾಹಾರಿಯೋ ಸಸ್ಯಾಹಾರಿಯೋ ಎಂದು ಕೇಳುತ್ತಾರೆ. ನಂತರ ಮೇಲ್ಜಾತಿಯೋ ಕೆಳಜಾತಿಯೋ ಎಂದು ಕೇಳಿ ಬಾಡಿಗೆ ಮನೆ ಕೊಡಬೇಕೋ ಬೇಡವೂ ಎಂದು ನಿರ್ಧರಿಸುತ್ತಾರೆ. 1991 ರಿಂದ 1994ರ ವರೆಗೆ ನಾನು ಗುಜರಾತಿನಲ್ಲಿ ಸೂರತ್ ಹತ್ತಿರದ ವಲ್ಸಾಡ್ ಎಂಬ ಸಣ್ಣ ಪಟ್ಟಣದಲ್ಲಿ ನಮ್ಮ ಬ್ಯಾಂಕ್ ಶಾಖೆಯ ಮ್ಯಾನೇಜರ್ ಅಗಿದ್ದೆ. 1990 ಆಗಸ್ಟ್ ನಲ್ಲಿ ನನಗೆ ಮಂಗಳೂರಿಗೆ ವರ್ಗವಾದ ಆದೇಶ ಬಂದಾಗ ಶಾಖೆಯ ಚಾರ್ಜ್ ತೆಗೆದುಕೊಳ್ಳಲು ನನ್ನ ಸ್ಥಳಕ್ಕೆ ಬಂದ ಮ್ಯಾನೇಜರ್ ಗುಜರಾತಿ ದಲಿತರಾಗಿದ್ದರು. ಅವರನ್ನು ಕರೆದುಕೊಂಡು ನಾನು ನನ್ನ ಬಾಡಿಗೆ ಮನೆಯ ಮಾಲಕನ ಹತ್ತಿರ ಹೋಗಿ ಅವರನ್ನು ಪರಿಚಯಿಸಿ ನಾನು ಕೆಲವೇ ದಿನಗಳಲ್ಲಿ ಖಾಲಿ ಮಾಡಲಿರುವ ಮನೆಯನ್ನು ಈ ಹೊಸ ಮ್ಯಾನೇಜರ್ ಗೆ ಕೊಡುವಂತೆ ಶಿಫಾರಸು ಮಾಡಿದೆ. ಆಗ ಮನೆಯ ಯಜಮಾನ ಗುಜರಾತಿ ಭಾಷೆಯಲ್ಲಿ ನೇರವಾಗಿ ಅವರನ್ನೇ ಅವರ ಜಾತಿ ಕೇಳಿದ. ಅವರು ತಮ್ಮ ಜಾತಿ ಹೇಳಿದ ಮೇಲೆ, ನಾನು ದಲಿತರಿಗೆ ಮನೆ ಕೊಡುವುದಿಲ್ಲ ಎಂದು ಅವರ ಮುಖಕ್ಕೆ ಹೊಡೆದಂತೆ ಮನೆ ಮಾಲಕ ಹೇಳಿ ನಮ್ಮನ್ನು ಕಳುಹಿಸಿಬಿಟ್ಟ.
ನಾನು 2001 ರಿಂದ 2005ರ ವರೆಗೆ ಹೈದರಾಬಾದಿನಲ್ಲಿ ನಮ್ಮ ಬ್ಯಾಂಕಿನ ವಿವಿಧ ಶಾಖೆಯಲ್ಲಿ ಕೆಲಸ ಮಾಡಿದ್ದೇನೆ. ಆಗ ಇಂದಿರಾ ಸದನ್ ಶಾಖೆಯಲ್ಲಿ ನಾನು ಮ್ಯಾನೇಜರ್ ಆಗಿದ್ದಾಗ ಇಬ್ಬರು ಪದವೀಧರರಿಗೆ ಪ್ರಧಾನಮಂತ್ರಿ ರೋಜ್ಗಾರ್ ಯೋಜನೆಯಡಿ ತಲಾ 9 ಸಾವಿರ ರೂ. ಸಾಲ ಕೊಟ್ಟೆ. ಇಬ್ಬರೂ ಅದೇ ಪ್ರದೇಶದಲ್ಲಿ ಕಿರಾಣಿ ಅಂಗಡಿ ತೆರೆದರು. ಅವರಲ್ಲಿ ಒಬ್ಬ ಕಮ್ಮಾ (ನಾಯ್ಡು ಎಂಬ ಮೇಲ್ಜಾತಿಯವನು ಹಾಗೂ ಇನ್ನೊಬ್ಬ ದಲಿತನಾಗಿದ್ದ.ಇಬ್ಬರ ಕಿರಾಣಿ ಅಂಗಡಿಯೂ ಐದಾರು ತಿಂಗಳು ಲಾಭಕರವಾಗಿ ನಡೆಯಿತು. ಎರಡೂ ಅಂಗಡಿಯವರದ್ದೂ ಸಮಾನ ಗುಣಮಟ್ಟ ಹಾಗೂ ಸಮಾನ ಬೆಲೆಯ ಸಾಮಾನುಗಳು. ಆದರೂ ನಂತರ ಕ್ರಮೇಣ ನಾಯ್ಡುವಿನ ಅಂಗಡಿಯ ವ್ಯಾಪಾರ ವೃದ್ಧಿಸಿತು ಆದರೆ ದಲಿತನ ಅಂಗಡಿಯ ವ್ಯಾಪಾರ ಕುಸಿಯಿತು. ಕಾರಣ ಕಿರಾಣಿ ಸಾಮಾನು ಕೊಳ್ಳಲು ಬರುತ್ತಿದ್ದ ಹೆಂಗಸರಿಗೆ ಅಂಗಡಿಯಾತನ ಜಾತಿ ಕೇಳುವ ಕೆಟ್ಟ ಅಭ್ಯಾಸ ಅಲ್ಲಿತ್ತು. ಅವನು ದಲಿತ ಎಂಬ ವಿಷಯ ಹೆಂಗಸರಲ್ಲಿಯೇ ಕ್ರಮೇಣ ಹರಡಿ ಅವನ ವ್ಯಾಪಾರ ಕುಸಿಯುತ್ತಾ ಹೋಯಿತು (ಮೇಲ್ಜಾತಿಯ ಸಂಕುಚಿತ ಬುದ್ಧಿ ಗಂಡಸರಿಗಿಂತ ಹೆಂಗಸರಲ್ಲಿಯೇ ಹೆಚ್ಚು) ನಂತರ ಆ ದಲಿತ ಹುಡುಗನು ತನ್ನ ಕಿರಾಣಿ ಅಂಗಡಿಯನ್ನು ಒಬ್ಬ ರೆಡ್ಡಿಗೆ ಮಾರಿ ನನ್ನ ಸಲಹೆಯಂತೆ ಆಟೋರಿಕ್ಷಾ ಕೊಂಡನು. ಇದು 2004ರಲ್ಲಿ ಹೈದರಾಬಾದಿನಲ್ಲಿ ನಾನು ಪ್ರತ್ಯಕ್ಷ ಸಾಕ್ಷಿಯಾದ ಘಟನೆ.
ಉತ್ತರ ಕರ್ನಾಟಕದಲ್ಲಿ ಇವತ್ತಿಗೂ ಹೆಚ್ಚಿನ ಊರುಗಳಲ್ಲಿ ಹೊಟೇಲುಗಳ ಬೋರ್ಡಗಳ ಮೇಲೆ ಉಡುಪಿ ಬ್ರಾಹ್ಮಣರ ಹೊಟೇಲ್ ಎಂದು ಬರೆಯುವ ರೂಢಿ ಇದೆ. ಅಷ್ಟೇ ಅಲ್ಲ ಹೊಟೇಲ್ ಮಾಲಕನ ಹೆಸರೂ ಬರೆಯಲಾಗುತ್ತದೆ.ಅಲ್ಲಿಯ ಹೊಟೇಲ್ ರಂಗದಲ್ಲಿ ಉಡುಪಿ ಬ್ರಾಹ್ಮಣರ ಏಕಸಾಮ್ಯದ ನಡುವೆ ಒಂದು ಕಾಲದಲ್ಲಿ ಬಂಟ ಹಾಗೂ ಬಿಲ್ಲವರಂತಹ ಪ್ರಬಲ ಜಾತಿಗಳವರೂ ಹೊಟೇಲ್ ನಡೆಸುವುದು ಕಷ್ಟವಾಗಿತ್ತು. 40-50 ವರ್ಷಗಳಿಗಿಂತ ಹಿಂದೆ ಮೇಲ್ಜಾತಿ ಬಂಟರು ಅಲ್ಲಿ ಸಸ್ಯಾಹಾರಿ ಹೊಟೇಲ್ ತೆರೆದರೂ ಅವರು ಮನೆಯಲ್ಲಿ ಮಾಂಸಾಹಾರಿ ಆಗಿದ್ದಾರೆ ಎಂದು ಬ್ರಾಹ್ಮಣರು ಅಪಪ್ರಚಾರ ಮಾಡಿ ಹೊಟೇಲು ಮುಚ್ಚಿಸಿದ ಅನೇಕ ಘಟನೆಗಳು ನಡೆದಿವೆ. ಅದಕ್ಕಾಗಿ ಅನೇಕ ಬಂಟರು ಮತ್ತು ಬಿಲ್ಲವರು ತಮ್ಮ ಉಪನಾಮ ಬದಲಿಸಿ ತಾವೂ ಬ್ರಾಹ್ಮಣರು ಎಂದು ಹೇಳಿಕೊಂಡು ಹೊಟೇಲ್ ನಡೆಸುವ ಅನಿವಾರ್ಯ ಸ್ಥಿತಿ ಆಗ ಅಲ್ಲಿತ್ತು. ಆಗ ಬಾಗಲಕೋಟೆಯಲ್ಲಿ ನಾರಾಯಣ ರೈ ಎಂಬವರು ಸಸ್ಯಾಹಾರಿ ಹೊಟೇಲ್ ತೆರೆದರು. ಆದರೆ ಜಾತಿಯ ಕಾರಣದಿಂದ ಅದು ನಡೆಯಲಿಲ್ಲ ಎಂದು ಅವರು ವಿಜಯಪುರಕ್ಕೆ ಹೋಗಿ ‘ನಾರಾಯಣ ರಾವ್ ಉಡುಪಿಕರ್’ ಎಂದು ಹೆಸರು ಬದಲಿಸಿ ತಾವು ಬ್ರಾಹ್ಮಣರು ಎಂದು ಹೇಳಿಕೊಂಡು ವಿಜಯಪುರದಲ್ಲಿ ಹೊಟೇಲ್ ತೆರೆದು ಯಶಸ್ವಿಯಾದರು. ಅವರ ಮಕ್ಕಳನ್ನು ಶಾಲೆಗೆ ಸೇರಿಸುವಾಗಲೂ ಈ ರಾವ್ ಎಂಬ ಬ್ರಾಹ್ಮಣ ಉಪನಾಮವೇ ಅಂಟಿಕೊಂಡಿದ್ದರಿಂದ ಅವರ ಮಗ ಗಣೇಶ್ ಅಧಿಕೃತವಾಗಿ ಗಣೇಶ್ ರಾವ್ ಆದ. ಈಗ ಅವನು ಇಂಜಿನಿಯರ್ ಆಗಿ ವಿದೇಶದಲ್ಲಿದ್ದಾನೆ. ಆದರೆ ಈಗಲೂ ಈ ಗಣೇಶ್ ರಾವ್‌ಗೆ ಇತರ ಜಾತಿಯ ಕನ್ನಡಿಗರು ಸಿಕ್ಕಾಗ ತನ್ನ ಉಪನಾಮ ರಾವ್ ಆದರೂ ತಾನು ಬ್ರಾಹ್ಮಣನಲ್ಲ ಎಂದು ಒತ್ತಿ ಒತ್ತಿ ಹೇಳಬೇಕಾಗುತ್ತದೆ. ಹೊಸಪೇಟೆಯಲ್ಲಿ ಒಬ್ಬರು ಕೃಷ್ಣ ಶೆಟ್ಟಿ ಎಂಬ ತಮ್ಮ ಹೆಸರಲ್ಲಿ ಶೆಟ್ಟಿ ಉಪನಾಮ ತೆಗೆದು ಹಾಕಿ ಮೂರ್ತಿ ಸೇರಿಸಿ ಕೃಷ್ಣಮೂರ್ತಿ ಆಗಿ ಹೊಟೇಲ್ ನಡೆಸುತ್ತಿದ್ದರು. ಅದೇ ಮೂರ್ತಿ ಹೆಸರು ಮಕ್ಕಳಿಗೂ ಗಟ್ಟಿಯಾಗಿ ಅವರ ಮಗ ಈಗ ಕಣ್ಣಿನ ಡಾಕ್ಟರ್ ಆದರೂ ಅವನೂ ಶೆಟ್ಟಿ ಉಪನಾಮ ಉಪಯೋಗಿಸದಂತೆ ಆಗಿದೆ. ಹಾವೇರಿಯಲ್ಲಿ ಮಾಗಾವಿ ಟಾಕೀಸ್ ಹತ್ತಿರ ಉಡುಪಿ ಬ್ರಾಹ್ಮಣನ ಹೊಟೇಲಿನಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ ಕುಂದಾಪುರ ಕಡೆಯ ಬಿಲ್ಲವ ಜಾತಿಯವನೊಬ್ಬ ಅಲ್ಲಿಯೇ ಸ್ವಲ್ಪದೂರದಲ್ಲಿ ತನ್ನ ಸ್ವಂತ ಚಹಾದಂಗಡಿ ತೆರೆದನು. ಅದು ಮೊದಲಿಗೆ ಚೆನ್ನಾಗಿ ನಡೆಯಿತು.ಆದರೆ ನಂತರ ಹಾವೇರಿಯ ಬ್ರಾಹ್ಮಣ ಹೊಟೇಲಿನವರು ಅಪಪ್ರಚಾರ ಮಾಡಿ ಅವನ ಉಪನಾಮ ಪೂಜಾರಿಯಾಗಿದ್ದರೂ ಅವನು ಬ್ರಾಹ್ಮಣನಲ್ಲ, ಅವನು ಕೆಳ ಜಾತಿಯವನು ಎಂದು ಹೇಳಿ ಲಿಂಗಾಯತರು ಆ ಪೂಜಾರಿಯ ಚಹಾದಂಗಡಿಗೆ ಹೋಗದಂತೆ ಮಾಡಿದರು.
ಮುಂದುವರಿಯುವುದು...