ಖರ್ಗೆಯವರೂ ಚಿಕ್ಕಂದಿನಲ್ಲಿ ಚಹಾ ಮಾರಿದ್ದರೆ ಯಾರು ಕುಡಿಯುತ್ತಿದ್ದರು ?
ಭಾಗ-2
ಹಾಗಾಗಿ ಆ ಪೂಜಾರಿಯು ಹಾವೇರಿಯ ತನ್ನ ಅಂಗಡಿ ಮುಚ್ಚಿ ರಾಣೆಬೆನ್ನೂರಿಗೆ ಹೋಗಿ ಅಲ್ಲಿ ಬೇರೇನೋ ಅಂಗಡಿ ತೆರೆದನು.
ಆದರೆ 2 ವರ್ಷಗಳಿಂದೀಚೆಗೆ ಉ.ಕ.ದಲ್ಲಿ ಬಾರ್ ಮತ್ತು ಮಾಂಸಾಹಾರಿ ಹೊಟೇಲುಗಳ ಭರಾಟೆ ಶುರುವಾದ ಮೇಲೆಮಾತ್ರ ಸಸ್ಯಾಹಾರಿ ಹೊಟೇಲ್ ರಂಗದಲ್ಲಿಯೂ ಬ್ರಾಹ್ಮಣರ ಏಕಸಾಮ್ಯ ಮುರಿದು ಇತರ ಶೂದ್ರ ಜಾತಿಗಳವರೂ ಅಲ್ಲಿ ಸಸ್ಯಾಹಾರಿ ಹೊಟೇಲ್ ನಡೆಸುವುದು ಸಾಧ್ಯವಾಗಿದೆ.ಆದರೆ ಈಗಲೂ ದಲಿತರು ಉ.ಕ.ದಲ್ಲಿ ಚಹಾದಂಗಡಿ ಜ್ಯೂಸ್ ಸ್ಟಾಲ್ ತೆರೆಯುವುದು ಕನಸಿನ ಮಾತಾಗಿದೆ. ಉ.ಕ.ದಲ್ಲಿ ಲಿಂಗಾಯತರ-ಖಾನಾವಳಿ, ಮರಾಠಾ-ಖಾನಾವಳಿ, ಸಾವಜಿ- ಖಾನಾವಳಿ, ಜೈನರ- ಭೋಜನಾಲಯ ಇವೆಲ್ಲಾ ಇವೆ. ಆದರೆ ಎಲ್ಲಿಯೂ ಕುರುಬರ-ಖಾನಾವಳಿ, ವಾಲ್ಮೀಕಿ ಬೇಡರ-ಭೋಜನಾಲಯ, ಲಂಬಾಣಿ ಲಂಚ್ ಹೋಮ್ ಕಾಣಸಿಗುವುದಿಲ್ಲ. ಇನ್ನು ದಲಿತರ ಖಾನಾವಳಿ ಎಲ್ಲಿಯಾದರೂ ತೆರೆಯಲು ಸಾಧ್ಯವೇ? ಮುಸ್ಲಿಮರ ಹೊಟೇಲ್ ಕೇವಲ ಮುಸ್ಲಿಂ ಪ್ರದೇಶದಲ್ಲಿ ಮಾತ್ರ ನಡೆಯುತ್ತವೆ.
ಉ.ಕ.ದಲ್ಲಿ ಉಡುಪಿ ಬ್ರಾಹ್ಮಣರು ಶೂದ್ರರಿಗೆ ವಿಲನ್ ಆದಂತೆ, ಮುಂಬೈಯಲ್ಲಿ ಮೇಲ್ಜಾತಿಯ ಶೂದ್ರರೇ ಕೆಳಜಾತಿಯ ಶೂದ್ರರಿಗೆ ವಿಲನ್ ಆಗಿದ್ದಾರೆ. ನಾನು 1973ರಲ್ಲಿ ಮುಂಬೈಯಲ್ಲಿ ಬ್ಯಾಂಕ್ ಗುಮಾಸ್ತನಾಗಿ ಕೆಲಸಕ್ಕೆ ಸೇರಿದಾಗ ಠಾಣಾ ಎಂಬಲ್ಲಿ ನಾನು ವಾಸಿಸುತ್ತಿದ್ದು ಅಲ್ಲಿಯೇ ಹತ್ತಿರದಲ್ಲಿ ಒಂದು ಬಂಟ ಜಾತಿಯವರ ಹೊಟೇಲಿತ್ತು. ಅಲ್ಲಿ ಗುಜರಾತಿಗಳಿಗೆ ತುಂಬಾ ಇಷ್ಟವಾದ ಉಕಾಳಾ ಮತ್ತು ಅಹ್ಮದಾಬಾದಿ ಎಂಬ ಎರಡು ತರದ ಕಡಕ್ ಚಹಾ ತುಂಬಾ ಜನಪ್ರಿಯವಾಗಿತ್ತು. ಅದನ್ನು ತಯಾರಿಸುತ್ತಿದ್ದುದು ಅವರ ಅಡುಗೆಯವನಾದ ತಿಮ್ಮಪ್ಪ ಮುಂಡಾಲ ಎಂಬ ದಲಿತ. ನಂತರ ತಿಮ್ಮಪ್ಪ ಸ್ವಲ್ಪದೂರದಲ್ಲಿ ತನ್ನದೇ ಚಹಾದಂಗಡಿ ತೆರೆದನು. ಅವನ ಚಹಾದ ವಿಶಿಷ್ಟ ರುಚಿಯಿಂದಾಗಿ ಗುಜರಾತಿಗಳಲ್ಲಿ ಅದು ಬೇಗ ಜನಪ್ರಿಯವಾಯಿತು. ಆದರೆ ಆ ಬಂಟರ ಚಹಾದಂಗಡಿಯನ್ನು ತಿಮ್ಮಪ್ಪಬಿಟ್ಟು ಹೋದ ಮೇಲೆ ಅಲ್ಲಿ ಸರಿಯಾಗಿ ಗುಜರಾತಿ ರುಚಿಯ ಚಹಾ ಮಾಡುವವರಿಲ್ಲದೇ ವ್ಯಾಪಾರ ಕುಸಿಯಿತು. ಇದರಿಂದ ಮತ್ಸರಗೊಂಡ ಆ ಬಂಟ ಹೊಟೇಲಿನವನು ಅಲ್ಲಿಯ ಗುಜಾರಾತಿಗಳಲ್ಲಿ ಆ ತಿಮ್ಮಪ್ಪನದು ದಲಿತ ಜಾತಿ ಎಂದು ಪ್ರಚಾರ ಮಾಡಿ ಅವನ ಚಹಾದಂಗಡಿ ಮುಚ್ಚುವಂತೆ ಮಾಡಿದನು. ಮುಂಬೈಯಂತಹ ಆಧುನಿಕ ನಗರದಲ್ಲೂ ವಿದ್ಯಾವಂತ ಗುಜರಾತಿ ಮತ್ತು ಮಾರ್ವಾಡಿಗಳು ಮಾತ್ರ ಈಗಲೂ ಪ್ರತಿಯೊಂದಕ್ಕೂ ಜಾತಿ ನೋಡುತ್ತಾರೆ. ಆ ತಿಮ್ಮಪ್ಪ ನಂತರ ಪಶ್ಚಿಮದ ಉಪನಗರಕ್ಕೆ ಹೋಗಿ ಅಲ್ಲಿ ಪಾನ್ ಬೀಡ ಅಂಗಡಿ ತೆರೆದನಂತೆ.
ಮುಂಬೈ, ಠಾಣಾ ಜಿಲ್ಲೆ ಮತ್ತು ನವಿಮುಂಬೈ ಇಲ್ಲಿಯ ಉಪನಗರಗಳ ರೈಲ್ವೆ ಸ್ಟೇಷನ್‌ಗಳಲ್ಲಿ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಟೀಸ್ಟಾಲುಗಳಿವೆ. ಸರಕಾರದ ಮೀಸಲು ನಿಯಮದ ಪ್ರಕಾರ ಈ ರೈಲ್ವೆ ಸ್ಟಾಲುಗಳಲ್ಲಿ ಕನಿಷ್ಠ ಶೇ.2 ಟೀ ಸ್ಟಾಲುಗಳನ್ನು ರೈಲ್ವೆ ಇಲಾಖೆಯವರು ಪರಿಶಿಷ್ಟರಿಗೆ ಗುತ್ತಿಗೆ ಕೊಡಬೇಕು. ಆದರೆ ಅಲ್ಲಿಯ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿಯ ಟೀಸ್ಟಾಲು, ಜ್ಯೂಸ್ ಸ್ಟಾಲು, ಪಾನ್ ಬೀಡಿ ಸ್ಟಾಲು, ಎಲ್ಲವೂ ಉತ್ತರ ಪ್ರದೇಶ ಮತ್ತು ಬಿಹಾರದ ಪ್ರಬಲ ಯಾದವ್, ಠಾಕೂರ್ ಮತ್ತು ಶರ್ಮಾ ಎಂಬ ಜಾತಿಯವರ ಮಾಫಿಯಾದ ಕಪಿ ಮುಷ್ಟಿಯಲ್ಲಿವೆ. ವಿಚಿತ್ರವೆಂದರೆ ಮುಂಬೈ ಮೂಲ ನಿವಾಸಿಗಳಾದ ಮರಾಠಿ ಪರಿಶಿಷ್ಟರಿಗೂ ಈ ರೈಲ್ವೆ ಸ್ಟಾಲುಗಳು ಸಿಗುತ್ತಿಲ್ಲ. ಶಿವಸೇನೆ ಸ್ವತಃ ದಲಿತ ವಿರೋಧಿಯಾದುದರಿಂದ ಅದು ಮರಾಠಿ ಪರಿಶಿಷ್ಟರ ಹಕ್ಕಿಗಾಗಿ ಹೋರಾಡುತ್ತಿಲ್ಲ. ಪರಿಶಿಷ್ಟರ ನಕಲಿ ಹೆಸರಲ್ಲಿ ಎಲ್ಲವನ್ನೂ ಮೇಲ್ಜಾತಿಯ ಬಿಹಾರಿ ಮಾಫಿಯಾ ಕಬಳಿಸುತ್ತಿದೆ. ಇವೆಲ್ಲ ಬಿಹಾರಿ ರೇಲ್ವೆ ಮಂತ್ರಿಗಳ ಕೃಪೆಯಿಂದಲೇ ನಡೆದಿರುವುದು. ಈ ಮಂತ್ರಿಗಳ ಬಾಯಲ್ಲಿ ಮಾತ್ರ ಸಾಮಾಜಿಕ ನ್ಯಾಯದ ಹುಸಿ ಕಾಳಜಿ ಅಷ್ಟೇ.
ಮೇಲಿನದೆಲ್ಲಾ ನಾನು ಬೇರೆಯವರ ತಪ್ಪು ಹುಡುಕಿದ್ದೇ ಆಯಿತು.ಆದರೆ 1967-68ರಲ್ಲಿ ನನ್ನ ತಂದೆ ಬೆಳಗಾವಿ ಜಿಲ್ಲೆಯ ಖಾನಾಪುರ ಎಂಬಲ್ಲಿ (ಸ್ಟಾಂಪ್ ಪೇಪರ್ ಕರೀಂ ತೆಲಗಿಯ ಖಾನಾಪುರ)ಸ್ಟೇಷನ್ ಮಾಸ್ಟರ್ ಆಗಿದ್ದಾಗ ನನ್ನದೇ ಮನೆಯಲ್ಲಿ ನಡೆದ ಘಟನೆಯೊಂದಿದೆ. ಎಲ್ಲಾ ಸರಕಾರಿ ಇಲಾಖೆಗಳಂತೆ ಪ್ರತಿ ರೈಲ್ವೆ ಸ್ಟೇಷನಿನದೂ ವರ್ಷಕ್ಕೊಮ್ಮೆ ಲೆಕ್ಕ ಪರಿಶೋಧನೆ (ಆಡಿಟ್) ನಡೆಯುತ್ತದೆ. ಖಾನಾಪುರಕ್ಕೆ ಹುಬ್ಬಳ್ಳಿ ಡಿವಿಜನಲ್ ಆಫೀಸಿನಿಂದ ಆಡಿಟರ್ ಬಂದು ಐದಾರು ದಿನ ಆಡಿಟ್ ಮಾಡುತ್ತಿದ್ದರು.ಆಡಿಟರ್ ಬೆಳಗಿನ ಟ್ರೇನಿನಲ್ಲಿ ಬಂದು ಸಾಯಂಕಾಲದ ಟ್ರೇನಿನಲ್ಲಿ ಮರಳಿ ಹುಬ್ಬಳ್ಳಿಗೆ ಹೋಗುವುದು ವಾಡಿಕೆ. ಹಾಗಾಗಿ ಅವರ ಮಧ್ಯಾಹ್ನದ ಊಟದ ಜವಾಬ್ದಾರಿ ಮಾತ್ರ ಸ್ಥಳೀಯ ಸ್ಟೇಷನ್ ಮಾಷ್ಟರದ್ದು ಎಂಬುದು ಅಲಿಖಿತ ನಿಯಮವಾಗಿತ್ತು. 1967-68ರಲ್ಲಿ ಖಾನಾಪುರಕ್ಕೆ ಒಬ್ಬ ಆಂಗ್ಲೊ-ಕ್ರಿಶ್ಚನ್ ಹೆಸರಿನ ಆಡಿಟರ್ ಬಂದಿದ್ದರು (ಆಗ ಹುಬ್ಬಳ್ಳಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಆಂಗ್ಲೊ-ಇಂಡಿಯನ್ನರು ರೈಲ್ವೆ ಕೆಲಸದಲ್ಲಿದ್ದರು). ಅವರಿಗೆ ಮೊದಲಿನ ನಾಲ್ಕು ದಿನ ಸಸ್ಯಾಹಾರಿ ಊಟವನ್ನೇ ನಮ್ಮ ಮನೆಯಲ್ಲಿ ತಯಾರಿಸಿ ಕೇವಲ ನೂರು ಅಡಿ ದೂರವಿದ್ದ ಸ್ಟೇಷನ್ ಆಫೀಸಿಗೆ ಮಧ್ಯಾಹ್ನ ನನ್ನ ತಂದೆ ಮುಟ್ಟಿಸುತ್ತಿದ್ದರು. ಆದರೆ ಆಡಿಟ್‌ನ ಕೊನೆಯ ದಿನ ಆ ಆಡಿಟರ್ ಬಾಯಿ ಬಿಟ್ಟು ಹೇಳಿದರು-ನಿಮ್ಮ ಮಂಗಳೂರು ಕಡೆಯ ಕೋಳಿ ಪಲ್ಯ ತುಂಬಾ ರುಚಿಯಾಗಿರುತ್ತದೆ ಎಂದು. ಅದಕ್ಕಾಗಿ ನನ್ನ ತಂದೆ ನಾಟಿ ಕೋಳಿ ತರಿಸಿ ನನ್ನ ತಾಯಿಯಿಂದ ಅದರ ಪಲ್ಯ ಮಾಡಿಸಿ ಮಧ್ಯಾಹ್ನದ ಊಟಕ್ಕೆ ಆಡಿಟರನ್ನು ಸ್ಟೇಷನ್ನಿಗೆ ಅತೀ ಹತ್ತಿರದಲ್ಲಿಯೇ ಇದ್ದ ನಮ್ಮ ಕ್ವಾರ್ಟಸ್‌ಗೆ ಆಹ್ವಾನಿಸಿದರು. ಊಟ ಎಲ್ಲಾ ತಯಾರಾಗಿತ್ತು, ಅಷ್ಟರೊಳಗೇ ಅಲ್ಲಿಯ ಲಿಂಗಾಯತ ಸಿಗ್ನಲ್‌ಮ್ಯಾನ್ ನಮ್ಮ ಮನೆಗೆ ಹಿಂಬಾಗಿಲಿನಿಂದ ಬಂದು ನನ್ನ ತಾಯಿಯ ಹತ್ತಿರ ‘‘ಅಮ್ಮಾವರೇ ಆ ಆಡಿಟರ್ ಕ್ರಿಶ್ಚನ್ ಅಲ್ಲ ಅಂವಾ ‘ಹೊಲೆಯ’ ಅಂತ್ರೀ’’ ಎಂದು ಕಿವಿಯೂದಿ ಹೋದನು. ಆಗ ನನ್ನ ತಾಯಿಯ ಬುಸುಬುಸು ಸುರುವಾಯಿತು. ನನ್ನ ತಂದೆ ಬಂದ ಕೂಡಲೇ ನನ್ನ ತಾಯಿ ರಂಪ ಶುರು ಮಾಡಿ-ಆ ಆಡಿಟರ್ ಈ ಜಾತಿಯವನಂತೆ ನೀವು ಅವರನ್ನು ಮನೆಗೆ ಯಾಕೆ ಕರೆದಿದ್ದು, ಸ್ಟೇಷನ್ ಆಫೀಸಿಗೇ ಊಟ ಕೊಂಡು ಹೋಗಿ ಅಲ್ಲಿಯೇ ಬಡಿಸಿ ಬಿಡಿ, ನಾನು ಮನೆಯಲ್ಲಿ ಬಡಿಸುವುದಿಲ್ಲ ಎಂದು ಭುಸುಗುಟ್ಟಿದರು. ಆದರೆ ನನ್ನ ತಂದೆ ಅದಕ್ಕೆ ಕಿವಿಗೊಡದೆ ಆಡಿಟರನ್ನು ನಮ್ಮ ಮನೆಗೇ ಕರೆತಂದು ನನ್ನನ್ನು ಕರೆದು ತಮಗಿಬ್ಬರಿಗೂ ಊಟ ಬಡಿಸಲು ಹೇಳಿ ಆಡಿಟರ್‌ಗೆ ಚೆನ್ನಾಗಿ ಊಟ ಮಾಡಿಸಿ ಖುಷಿಪಟ್ಟರು (ನಾನು ಆಗ ಎಸ್ಸೆಸೆಲ್ಸಿಯಲ್ಲಿದ್ದೆ). ಆಗ ಎಲ್ಲಾ ರೇಲ್ವೇ ನೌಕರರಲ್ಲಿ ಬಾಲ್-ಬ್ಯಾಡ್ಮಿಂಟನ್ ತುಂಬಾ ಜನಪ್ರಿಯವಾಗಿತ್ತು. ನಾನು ಹಾಗೂ ನನ್ನ ತಂದೆ ತುಂಬಾ ಆಸಕ್ತಿಯಿಂದ ಅದನ್ನು ಆಡುತ್ತಿದ್ದೆವು. ಉತ್ತಮ ಬಾಲ್-ಬ್ಯಾಡ್ಮಿಂಟನ್ ಆಟಗಾರರಾಗಿದ್ದ ಆ ಆಡಿಟರ್ ಆ ದಿನ ಸಂಜೆ ನನಗೆ ಬ್ಯಾಡ್ಮಿಂಟನ್ನಿನ ಕೆಲವು ವಿಶಿಷ್ಟ ಹಾಗೂ ಕಲಾತ್ಮಕ ಶಾಟ್‌ಗಳನ್ನು ಕಲಿಸಿ ಹೋದರು. ದುರದೃಷ್ಟವಶಾತ್ ಈಗ ಶಟಲ್‌ಕಾಕ್ ನಿಂದಾಗಿ ಸಂಪೂರ್ಣ ನಶಿಸಿರುವ ಅದ್ಭುತ ಆಟ ಈ ಬಾಲ್ ಬ್ಯಾಡ್ಮಿಂಟನ್. ನನಗೆ ನನ್ನ ಬಾಲ್ಯದ ಪ್ರಿಯ ಬಾಲ್-ಬ್ಯಾಡ್ಮಿಂಟನ್ ನೆನಪಾದಾಗ ಆ ರೈಲ್ವೇ ಆಡಿಟರ್ ಸಹಾ ನೆನಪಾಗುತ್ತಾರೆ.
ಸ್ಟಾರ್ಮ ಇನ್ ದಿ ಟೀ ಕಪ್ (Storm in the Tea Cup)-ಎಂಬ ಇಂಗ್ಲಿಷ್ ವ್ಯಾಖ್ಯೆ ಎಲ್ಲರಿಗೂ ಗೊತ್ತು. ಆದರೆ ಅದರ ಮೂಲ ಭಾರತದ ಪುಣೆ ನಗರ ಎಂದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಇದೇ ಅರ್ಥದ ಮೂಲ ಬ್ರಿಟಿಷ್ ಗಾದೆ ಟ್ರೆಂಪೆಸ್ಟ್ ಇನ್ ಎ ಟೀ ಪಾಟ್ (Tempest in the Tea Pot). ಆದರೆ ಅದು ಭಾರತದಲ್ಲಿ ಮಾತ್ರ ಸ್ಟಾರ್ಮ ಇನ್ ದಿ ಟೀ ಕಪ್ ಎಂದು ಬದಲಾಗಿದ್ದರ ಹಿಂದೆಯೂ ಭಾರತದ ರಾಳ ಾತಿವ್ಯವಸ್ಥೆಯ ಾಯೆ ಇದೆ. ಬಾಲ ಂಾಧರ ತಿಲರು(1856-1920)ಅತ್ಯಂತ ಹಿರಿಯ ಸ್ವಾತಂತ್ರ್ಯ ಹೋರಾಟಾರರು ನಿಜ. ಆದರೆ ಚಿತ್ ಪಾವ್ ಬ್ರಾಹ್ಮಣರಾಗಿದ್ದ ಅವರು ಸಂುಚಿತ ಜಾತಿವಾದಿಯೂ ಆಗಿದ್ದರು. 1926ರಲ್ಲಿ ಆರೆಸ್ಸೆಸ್ ಸ್ಥಾಪನೆಯಾದಾಗ ತಿಲಕರು ಬದುಕಿದ್ದರೆ ಅವರು ಖಂಡಿತಾ ಆರ್‌ಎಸ್‌ಎಸ್ ಸೇರುತ್ತಿದ್ದರು ಎನ್ನುತ್ತಾರೆ ತಿಲಕರನ್ನು ಹತ್ತಿರದಿಂದ ಬಲ್ಲವರು. ಕೊಲ್ಲಾಪುರದ ಶಾಹು ಮಹಾರಾಜರು ಕೆಳಜಾತಿಯವರಿಗಾಗಿ ಮಾಡಿದ ಪ್ರಗತಿಪರ ಯೋಜನೆಗಳನ್ನು ತಿಲಕರು ಹಾಳುಗೆಡುವಲು ಮಾಡಿದ ಕುತಂತ್ರಗಳಿಂದಾಗಿ ಅವರಿಗೆ ‘‘ಬಾಳ ಗಂಡಾಂತರ ಟಿಳಕ’’ ಎಂದು ಪ್ರಗತಿಪರ ಕನ್ನಡಿಗರು ಕರೆಯುವುದು ನಿಜ. ಜಾತಿ ತಂತ್ರಗಳಿಗೆ ಹೆಸರಾದ ತಿಲಕರ ವಿರುದ್ಧವೇ ಒಂದು ಕುತಂತ್ರ ನಡೆದು ಅವರನ್ನು ಅವರ ಜಾತಿಯವರೇ ಒಬ್ಬರು ಧರ್ಮ ಸಂಕಟಕ್ಕೆ ಸಿಕ್ಕಿಸಿದ್ದ ಘಟನೆ ತುಂಬಾ ಸಾರಸ್ಯಕರವಾಗಿದೆ. ತಿಲಕರ ಕೇಸರಿ ಎಂಬ ಮರಾಠಿ ಪತ್ರಿಕೆಯಲ್ಲಿ ಗೋಪಾಲ ಭಟ್ ಎಂಬ ಅವರದೇ ಜಾತಿಯವನೊಬ್ಬ ಕೆಲಸಕ್ಕಿದ್ದ. ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ತಿಲಕರು ಅವನನ್ನು ಪತ್ರಿಕೆಯ ಕೆಲಸದಿಂದ ತೆಗೆದು ಹಾಕಿದರು. ಅದರ ಸೇಡು ತೀರಿಸಲೆಂದು ಆ ಗೋಪಾಲ ಭಟ್ ಹೊಂಚು ಹಾಕುತ್ತಿದ್ದ. ಆಗ ಪುಣೆಯಲ್ಲಿ ಸಾರ್ವಜನಿಕ ಚಹಾದಂಗಡಿಗಳು ಇರಲೇ ಇಲ್ಲ. ಹಾಗಾಗಿ ಆಗಿನ ಬ್ರಾಹ್ಮಣರು ವಾರಕ್ಕೊಮ್ಮೆ ಯಾವುದಾದರೂ ತಮ್ಮದೇ ಜಾತಿಯವನ ಮನೆಯಲ್ಲಿ ಸೇರಿ ಚಹಾ ಪಾರ್ಟಿ ಮಾಡಿ ಆನಂದಿಸುತ್ತಿದ್ದರು. ಆಗ ಬ್ರಾಹ್ಮಣ ಹೆಂಗಸರು ಚಹಾ-ಕಾಫಿ ಕುಡಿಯುವುದೂ ನಿಷಿದ್ಧವಾಗಿತ್ತು. ಚಹಾವನ್ನು ಎಲ್ಲಾ ಮನೆಯಲ್ಲಿ ಗಂಡಸರೇ ತಯಾರಿಸುತ್ತಿದುದು. ಗೋಪಾಲ ಭಟ್ಟ ಒಂದು ದಿನ ತಿಲಕರನ್ನು ಮತ್ತು ಕೆಲವು ಬ್ರಾಹ್ಮಣ ಮಿತ್ರರನ್ನು ತನ್ನ ಮನೆಗೆ ಚಹಾ ಪಾರ್ಟಿಗೆ ಕರೆದನು. ಅವನ ಮನೆಯಲ್ಲಿ ಎಲ್ಲರೂ ಚಹಾ ಕುಡಿದಾದ ಮೇಲೆ ಇಷ್ಟು ರುಚಿಯಾದ ಚಹಾ ನಾವೆಂದೂ ಕುಡಿದಿರಲಿಲ್ಲ ಇದನ್ನು ನೀನೇ ಮಾಡಿದ್ದೋ ಎಂದು ತಿಲಕರು ವಿಚಾರಿಸಿದರು. ಅದಕ್ಕೆ ಗೋಪಾಲ ಭಟ್ಟ ಇದು ನಾನು ಮಾಡಿದ್ದಲ್ಲ ನನ್ನ ಕೆಲಸದವನು ಮಾಡಿದ್ದು ಅವನು ಚಹಾ ತಯಾರಿಸುವುದರಲ್ಲಿ ತುಂಬಾ ನಿಪುಣ ಎಂದು ಹೇಳಿ ತನ್ನ ಕೆಳಜಾತಿಯ ಕೆಲಸದವನನ್ನು ಕರೆದು ತೋರಿಸಿದನು. ಇದನ್ನು ಕೇಳಿ ತಿಲಕ್ ಮತ್ತು ಗೆಳೆಯರಿಗೆ ಶಾಕ್ ಆಯಿತಂತೆ. ಆದರೂ ಅವರು ಗೋಪಾಲ ಭಟ್ಟನನ್ನು ಗದರಿಸಿ ಯಾರಿಗೂ ಈ ವಿಷಯ ಹೇಳಬಾರದು ಎಂದು ತಾಕೀತು ಮಾಡಿ ಹೋದರು. ಆದರೆ ಸೇಡಿಗಾಗಿ ಕಾದಿದ್ದ ಗೋಪಾಲ ಭಟ್ ಈ ವಿಷಯ ವಿವರವಾಗಿ ಬರೆದು ಬೇರೊಂದು ಮರಾಠಿ ಪತ್ರಿಕೆಯಲ್ಲಿ ಪ್ರಕಟಿಸಿಬಿಟ್ಟನು. ಇದರಿಂದ ಪುಣೆ-ಮುಂಬೈಯ ಮರಾಠಿ ಬ್ರಾಹ್ಮಣ ಸಮಾಜದಲ್ಲಿ ಕೋಲಾಹಲವೆದ್ದು ಈ ಕ್ಷುಲ್ಲಕ ವಿಷಯದ ಬಗ್ಗೆ ಪುಣೆ-ಮುಂಬೈಯ ಮರಾಠಿ ಮತ್ತು ಇಂಗ್ಲಿಷ್ ಪತ್ರಿಕೆಯಲ್ಲಿ ಉದ್ದುದ್ದ ವಾದ-ವಿವಾದಗಳು ತಿಂಗಳುಗಟ್ಟಳೆ ನಡೆದವು. ಭಾರತದಲ್ಲಿ ಕೆಳಜಾತಿಯವನು ಚಹಾ ಕಪ್ ಮುಟ್ಟಿದ ಮಾತ್ರಕ್ಕೆ ಮೇಲ್ಜಾತಿಯವರು ಇಷ್ಟೊಂದು ರಂಪಾಟಕ್ಕಿಳಿದುದನ್ನು ಕಂಡ ಬ್ರಿಟಿಷ್ ಪತ್ರಕರ್ತರು, ಕ್ಷುಲ್ಲಕ ವಿಷಯಗಳನ್ನು ವಿನಾಕಾರಣ ದೊಡ್ಡದು ಮಾಡಿ ರಂಪಾಟ ಮಾಡುವ ಪ್ರಸಂಗಕ್ಕೆ ಆ ಚಹಾ ಕಪ್ಪನ್ನೇ ಸಂಕೇತವಾಗಿಸಿ -‘‘ಸ್ಟಾರ್ಮ ಇನ್ ದ ಟೀ ಕಪ್’’ ಎಂಬ ಹೊಸ ಗಾದೆ ಹೆಣೆದರು. ನಂತರ ಇದು ಆಕ್ಸ್ ಫರ್ಡ್ ನಿಘಂಟಿನಲ್ಲೂ ಸೇರಿಕೊಂಡಿತು. ಮೋದಿಯವರ ಚಹಾ ಪುರಾಣ ಕೇಳಿದಾಗೆಲ್ಲಾ ಮೇಲಿನ ಸಂಗತಿಗಳು ನನಗೆ ನೆನಪಾಗುತ್ತಲೇ ಇರುತ್ತವೆ.