ವಿಶ್ವ ಮಲೇರಿಯಾ ದಿನ-ಎಪ್ರಿಲ್ 25
ಪ್ರತೀ ವರ್ಷ ಎಪ್ರಿಲ್ 25ರಂದು ವಿಶ್ವದಾದ್ಯಂತ ‘‘ವಿಶ್ವ ಮಲೇರಿಯಾ ದಿನ’’ ಎಂದು ಆಚರಿಸಲಾಗುತ್ತಿದೆ. ಮಲೇರಿಯಾ ರೋಗದಿಂದಾಗುವ ಜಾಗತಿಕ ತೊಂದರೆಗಳು ಮತ್ತು ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು. ವಿಶ್ವದಾದ್ಯಂತ ಸರಿಸುಮಾರು 3.3 ಬಿಲಿಯನ್ ಮಂದಿ (ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು) ಈ ರೋಗಕ್ಕೆ ವರ್ಷವೊಂದರಲ್ಲಿ ತುತ್ತಾಗುವ ಸಾಧ್ಯತೆ ಇದ್ದು, 2015ರಲ್ಲಿ 214 ಮಿಲಿಯನ್ ಮಂದಿ ಮಲೇರಿಯಾ ರೋಗಕ್ಕೆ ತುತ್ತಾಗಿದ್ದಾರೆ ಮತ್ತು 4,38,000 ಮಂದಿ ಸಾವಿಗಿಡಾಗಿದ್ದಾರೆ. ಇದರಲ್ಲಿ ಶೇಕಡಾ 90ರಷ್ಟು ಸಾವು ಆಫ್ರಿಕಾ ದೇಶದಲ್ಲಿ ಸಂಭವಿಸುತ್ತದೆ. 2015ರಲ್ಲಿ ಸುಮಾರು 101 ದೇಶಗಳಲ್ಲಿ ಮಲೇರಿಯಾ ರೋಗ ಕಂಡು ಬಂದಿದೆ. 2012ರಲ್ಲಿ 6.5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 2013ರಲ್ಲಿ 5.8 ಲಕ್ಷ ಮಂದಿ ಜೀವ ತೆತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ವಿಶ್ವಸಂಸ್ಥೆಯ 60ನೆ ವಾರ್ಷಿಕ ಸಮ್ಮೇಳನ 2007ರ ಮೇನಲ್ಲಿ ಜರಗಿದಾಗ ಈ ‘‘ವಿಶ್ವ ಮಲೇರಿಯಾ ದಿನ’’ ಆಚರಣೆಯನ್ನು ಪ್ರತಿ ವರ್ಷ ಎಪ್ರಿಲ್ 25ರಿಂದ ಜಾರಿಗೆ ತರಲಾಯಿತು. ಅದಕ್ಕೂ ಮೊದಲು 2001ರಿಂದ ಪ್ರತೀ ವರ್ಷ ಎಪ್ರಿಲ್ 25ರಂದು ‘‘ಆಫ್ರಿಕಾ ಮಲೇರಿಯಾ ದಿನ’’ ಆಚರಿಸಲಾಗುತ್ತಿತ್ತು. 2013ರಲ್ಲಿ 198 ಮಿಲಿಯನ್ ರೋಗಿಗಳು ಮತ್ತು 5,84,000 ಸಾವು ಮಲೇರಿಯಾದಿಂದ ಸಂಭವಿಸಿತ್ತು. 2014ರಲ್ಲಿ 97 ದೇಶಗಳಲ್ಲಿ ಮಲೇರಿಯಾ ಕಂಡು ಬಂದಿತ್ತು. 2011ರಿಂದ 2014ರ ವರೆಗೆ ‘‘ಭವಿಷ್ಯದಲ್ಲಿ ಹೂಡಿಕೆ ಮಾಡಿ, ಮಲೇರಿಯಾವನ್ನು ಸೋಲಿಸಿ’’ ಎಂಬ ಘೋಷವಾಕ್ಯದೊಂದಿಗೆ ಮಲೇರಿಯಾ ವಿರುದ್ಧ ವಿಶ್ವ ಸಂಸ್ಥೆ ಆಂದೋಲನ ಆರಂಭಿಸಿತು. ಇದರ ಪರಿಣಾಮವಾಗಿ 2014-15ರಲ್ಲಿ ಮಲೇರಿಯಾ ರೋಗದ ಪ್ರಮಾಣ ಬಹಳಷ್ಟು ಇಳಿಕೆ ಕಂಡಿದೆ. ಭಾರತ ದೇಶವೊಂದರಲ್ಲಿಯೇ ಪ್ರತೀವರ್ಷ ಒಂದು ಮಿಲಿಯನ್ ಮಲೇರಿಯಾ ರೋಗಿಗಳು ಹುಟ್ಟಿಕೊಳ್ಳುವುದು ಬಹಳ ಸೋಜಿಗದ ಸಂಗತಿ. 2016ರ ಧ್ಯೇಯ ವಾಕ್ಯ ಏನೆಂದರೆ ‘‘ಮಲೇರಿಯಾವನ್ನು ಮುಗಿಸಿ ಮನುಕುಲ ಉಳಿಸಿ’’ (ಉ್ಞ ಚ್ಝಚ್ಟಜಿ ಊಟ್ಟ ಎಟಟ).
ಹೇಗೆ ಹರಡುತ್ತದೆ?: ಮಲೇರಿಯಾ ರೋಗ ಕೇವಲ ಹೆಣ್ಣು ಅನಾಫಿಲಿಸ್ ಸೊಳ್ಳೆಗಳಿಂದ ಮಾತ್ರ ಹರಡುತ್ತದೆ. ಮಲೇರಿಯಾ ಸೋಂಕಿತ ವ್ಯಕ್ತಿಯ ರಕ್ತವನ್ನು ಹೀರಿಕೊಂಡ ಸೊಳ್ಳೆಯು ಸೋಂಕಿತವಾಗುತ್ತವೆ. ಅನಾಫಿಲಿಸ್ ಹೆಣ್ಣುಸೊಳ್ಳೆ, ಸೋಂಕಿತ ವ್ಯಕ್ತಿಯನ್ನು ಚುಚ್ಚಿದಾಗ ಸಣ್ಣ ಪ್ರಮಾಣದಲ್ಲಿ ಹೀರಿಕೊಳ್ಳಲಾದ ರಕ್ತದಲ್ಲಿ ಸೂಕ್ಷ್ಮ ಮಲೇರಿಯಾ ಪರವಲಂಬಿಗಳಿರುತ್ತದೆ. ಒಂದು ವಾರಗಳ ಬಳಿಕ ಸೋಂಕಿತ ಸೊಳ್ಳೆಯು ಪುನಃ ವ್ಯಕ್ತಿಯ ರಕ್ತ ಹೀರಿಕೊಳ್ಳುವಾಗ ಈ ಪರಾವಲಂಬಿಗಳು ಸೊಳ್ಳೆಯ ಎಂಜಲಿನೊಂದಿಗೆ ಬೆರೆತು, ಕಡಿತಕ್ಕೊಳಗಾದ ವ್ಯಕ್ತಿಯ ರಕ್ತದಲ್ಲಿ ಸೇರಿಕೊಳ್ಳುತ್ತದೆ. ಹೀಗೆ ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆ ಆರೋಗ್ಯವಂತ ವ್ಯಕ್ತಿಗೆ ಕಚ್ಚುವುದರಿಂದ ಜನರು ಮಲೇರಿಯಾ ರೋಗಕ್ಕೆ ತುತ್ತಾಗುತ್ತಾರೆ. ಕೇವಲ ಹೆಣ್ಣು ಸೊಳ್ಳೆಗಳು ರಕ್ತವನ್ನು ಹೀರುತ್ತದೆ. ಹಾಗಾಗಿ ಗಂಡು ಸೊಳ್ಳೆಗಳು ರೋಗವನ್ನು ಹರಡಿಸುವುದಿಲ್ಲ. ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆಗಳು ರಾತ್ರಿಯ ವೇಳೆ ರಕ್ತ ಹೀರಲು ಇಚ್ಛಿಸುತ್ತವೆ. ಅವು ಮುಸ್ಸಂಜೆಯ ವೇಳೆ ಆಹಾರಕ್ಕಾಗಿ ಸಂಚರಿಸಲಾರಂಭಿಸಿ ಆಹಾರ ಹೀರಿಕೊಳ್ಳುವ ವರೆಗೂ ರಾತ್ರಿ ಹೊತ್ತು ಅವುಗಳು ಸಂಚಾರವನ್ನು ಮುಂದುವರಿಸುತ್ತದೆ. ರಕ್ತದಾನದ ಮೂಲಕವೂ ಮಲೇರಿಯಾ ಪರಾವಲಂಬಿಗಳು ಹರಡಬಹುದು. ಆದರೆ ಈ ರೀತಿಯಿಂದ ಹರಡುವುದು ಬಹಳ ಅಪರೂಪ.
ರೋಗದ ಲಕ್ಷಣಗಳು: ವಿಪರೀತ ಜ್ವರ, ನಡುಗುವಿಕೆ, ಗಂಟು ಅಥವಾ ಕೀಲುನೋವು, ವಾಂತಿ, ರಕ್ತಹೀನತೆ, ತಲೆಸುತ್ತುವುದು, ಉಸಿರುಕಟ್ಟುವಿಕೆ ಮತ್ತು ಹೃದಯಸ್ಪಂದನಾಧಿಕ್ಯ ಮುಂತಾದುವುಗಳು ಕಾಣಿಸಿಕೊಳ್ಳುತ್ತವೆ. ರೋಗದ ತೀವ್ರತೆ ಜಾಸ್ತಿಯಾದಲ್ಲಿ ಅಕ್ಷಿಪಟಲದ ಹಾನಿ, ಸೆಳೆತ ಅಥವಾ ಅಪಸ್ಮಾರ ಮತ್ತು ಮೂತ್ರದಲ್ಲಿ ರಕ್ತ ಬರುವ ಸಾಧ್ಯತೆಯೂ ಇದೆ. ಮಲೇರಿಯಾ ರೋಗದಲ್ಲಿ ಬರುವ ಜ್ವರವೂ ಕೂಡಾ ಪ್ಲಾಸ್ಮ್ರೇಡಿಯ ಪರಾವಲಂಬಿಯ ಜಾತಿಯ ಪ್ರಭೆದಕ್ಕೆ ಅನುಗುಣವಾಗಿ ಇರುತ್ತದೆ. ವೈವಾಕ್ಸ್ ಮತ್ತು ಓವಾಲೆ ಸೋಂಕು ತಗಲಿದ್ದಲ್ಲಿ, ಎರಡು ದಿನಗಳಿಗೊಮ್ಮೆ ನಾಲ್ಕರಿಂದ 6 ಗಂಟೆಗಳ ಕಾಲ ಚಕ್ರೀಯವಾಗಿ ಸಂಭವಿಸುವ ಹಠಾತ್ ಚಳಿ ಮತ್ತು ನಡುಕ ಮತ್ತು ಬಳಿಕ ಜ್ವರ ಮತ್ತು ಬೆವರುವಿಕೆ ಸಂಭವಿಸುತ್ತದೆ. ಪ್ಲಾಸ್ಮೋಡಿಯಂ ಮಲೇರಿಯಾ ಪ್ರಭೇದಗಳಲ್ಲಿ ಮೂರು ದಿನಗಳಿಗೊಮ್ಮೆ ಜ್ವರ ಮತ್ತು ಬೆವರುವಿಕೆ ಕಾಣಿಸಿಕೊಳ್ಳುಬಹುದು. ಫಾಲ್ಸಿಫೆರಮ್ ಫ್ರಭೇದದ ಮಲೇರಿಯಾ ಪ್ರತಿ 36-48 ಗಂಟೆಗಳಿಗೊಮ್ಮೆ ಮರುಕಳಿಸುವ ಜ್ವರವಾಗಿದ್ದು ಅಷ್ಟೇನೂ ತೀವ್ರವಾಗಿರುವುದಿಲ್ಲ. ಆದರೆ ಬಹುಮಟ್ಟಿಗೆ ಸತತ ಜ್ವರಕ್ಕೆ ಕಾರಣವಾಗಬಹುದು. ಅತೀ ತೀವ್ರ ಮಲೇರಿಯಾ ಸಾಮಾನ್ಯವಾಗಿ ಫಾಲ್ಸಿಫೆರಂ ಸೊಂಕಿನಿಂದ ಆಗುತ್ತದೆ. ಸೋಂಕು ತಗಲಿದ 6-14 ದಿನಗಳ ನಂತರ ಕಾಣಿಸಿಕೊಳ್ಳುತ್ತದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕದಿದ್ದರೆ ತೀವ್ರ ಮಲೇರಿಯಾದ ಪರಿಣಾಮದಿಂದ ಕೋಮಾಸ್ಥಿತಿ ಮತ್ತು ಸಾವು ಸಂಭವಿಸಬಹುದು. ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರು ಇದಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಹಿಗ್ಗಿದ ಗುಲ್ಮಗ್ರಂಥಿ (ಸ್ಪೀನೋಮೆಗಾಲೆ) ತೀವ್ರ ತಲೆನೋವು, ಮೆದುಳಿನ ರಕ್ತಹೀನತೆ, ಹಿಗ್ಗಿದ ಯಕೃತ್ತು (ಹೆಪಾಟೊ ಮೆಗಾಲೆ), ಮೂತ್ರ ಪಿಂಡಗಳ ವೈಫಲ್ಯಗಳು ಸಂಭವಿಸಬಹುದು. ಮೂತ್ರ ಪಿಂಡಗಳ ವೈಫಲ್ಯದಿಂದ ಕರಿಮೂತ್ರ ಜ್ವರ ಕೂಡಾ ಉಂಟಾಗಬಹುದು.
ಮಕ್ಕಳಲ್ಲಿ ತೀವ್ರ ಮಲೇರಿಯಾ ಬಂದಲ್ಲಿ, ಅರಿವಿನ ಶಕ್ತಿ ಕುಂಟಿತಗೊಳಿಸಬಹುದು. ಮೆದುಳಿನ ಮಲೇರಿಯಾ ಜ್ವರದಿಂದ ನರ ಮಂಡಲಕ್ಕೂ ಹಾನಿಯಾಗುವ ಸಾಧ್ಯತೆ ಇದೆ. ಅಪಸ್ಮಾರ ಮತ್ತು ಅಕ್ಷಿಪಟಲ ಬಿಳಿಯಾಗುವುದು ಮೆದುಳಿನ ಜ್ವರದ ಸಂಕೇತವಾಗಿರುತ್ತದೆ. ತೀವ್ರತರ ಮಲೇರಿಯಾ ಫಾಲ್ಸಿಫೆರಂ ಪ್ರಭೇದಗಳಲ್ಲಿ ಕಾಣಸಿಗುತ್ತದೆ.
ಯಕೃತಿನಲ್ಲಿ ಅವ್ಯಕ್ತ ಪರಾವಲಂಬಿಗಳ ಇರುವಿಕೆಯ ಕಾರಣದಿಂದಾಗಿ, ಸೋಂಕು ತಗಲಿದ ತಿಂಗಳುಗಳ ಅಥವಾ ವರ್ಷಗಳ ಬಳಿಕವೂ ರೋಗ ಮರುಕಳಿಸಬಹುದು. ಹಾಗಾಗಿ ರಕ್ತದಲ್ಲಿ ಪರಾವಲಂಬಿಗಳು ಇಲ್ಲದಿರುವುದನ್ನು ಕಂಡು, ಮಲೇರಿಯಾ ಇಲ್ಲ ಎಂಬ ತೀರ್ಮಾನಕ್ಕೆ ಬರಬಾರದು. ಈ ರೀತಿಯ ದೀರ್ಘಕಾಲದ ಮಲೇರಿಯಾ ವೈವಾಕ್ಸ್ ಮತ್ತು ಓವಾಲೆ ಪ್ರಭೇದಗಳಲ್ಲಿ ಕಂಡು ಬರುತ್ತದೆ ಮತ್ತು ಈ ರೀತಿಯ ರೋಗಾಣುವಿನಿಂದ ಮಲೇರಿಯಾ ಬಂದಿದ್ದಲ್ಲಿ ಸಂಪೂರ್ಣವಾಗಿ ಮಲೇರಿಯಾ ನಿರ್ಮೂಲನವಾಗುವಂತೆ ಸೂಕ್ತ ಔಷಧ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಅತೀ ಆವಶ್ಯಕ.
ತಡೆಗಟ್ಟುವುದು ಹೇಗೆ?: ಮಲೇರಿಯಾ ರೋಗವು ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಂಕ್ರಮಿಕ ರೋಗವಾಗಿರುತ್ತದೆ. ಸಾಮಾನ್ಯವಾಗಿ ಎಲ್ಲಾ ಸಾಂಕ್ರಮಿಕ ರೋಗಗಳಲ್ಲಿ ಇರುವಂತೆ ರೋಗ ನಿಯಂತ್ರಣಕ್ಕೆ ಮತ್ತು ತಡೆಗಟ್ಟುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮಲೇರಿಯಾ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಮತ್ತು ಸಹಕಾರ ಅತೀ ಅವಶ್ಯಕ. ಸಾರ್ವಜನಿಕ ಸ್ಥಳಗಳಲ್ಲಿ ಸೊಳ್ಳೆಗಳು ಬೆಳೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕ ಸ್ಥಳಗಳ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.
1. ಸೊಳ್ಳೆಗಳ ನಿಯಂತ್ರಣಕ್ಕಾಗಿ, ಮನೆಯ ಸುತ್ತಮುತ್ತಲಿನ ಆವರಣಗಳಲ್ಲಿ ನೀರು ನಿಲ್ಲದಂತೆ ನಿಗಾವಹಿಸಬೇಕು. ನಿಂತ ನೀರಲ್ಲಿ ಅನಾಫಿಲಿಸ್ ಸೊಳ್ಳೆ ಮರಿಗಳು ಬೆಳೆದು ರೋಗ ವರ್ಧನೆ ಕಾರಣವಾಗಬಹುದು. ನೀರು ನಿಲ್ಲುವುದನ್ನು ತಡೆಗಟ್ಟಲು ಈ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಎಳನೀರು ಚಿಪ್ಪುಗಳನ್ನು ಕವಚಿ ಹಾಕಬೇಕು ಅಥವಾ ನಾಶಪಡಿಸಬೇಕು. ಟಯರ್‌ಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು. ನೀರಿನ ಟ್ಯಾಂಕ್ ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಬಕೆಟ್‌ಗಳಲ್ಲಿ ವಾರಗಟ್ಟಲೆ ನೀರು ತುಂಬಿಸಿ ಇಡಬಾರದು. ಹೂದಾನಿಗಳ ಕೆಳತಟ್ಟೆಗಳನ್ನು ಆಗಾಗ ಶುಚಿಗೊಳಿಸಬೇಕು. ಎಸಿ, ಫ್ರಿಡ್ಜ್ ಮತ್ತು ಏರ್ ಕೂಲರ್‌ಗಳಲ್ಲಿ ಸೇರಿಕೊಂಡ ನೀರನ್ನು ಕಾಲಕಾಲಕ್ಕೆ ಖಾಲಿ ಮಾಡಬೇಕು. ಹಳ್ಳಿ ಪ್ರದೇಶಗಳಲ್ಲಿ ಉಪಯೋಗಿಸದೇ ಇರುವ ಕಡೆಯುವ ಕಲ್ಲುಗಳು, ಖಾಲಿ ತಟ್ಟೆಗಳು, ಕ್ಯಾನ್‌ಗಳನ್ನು ಮತ್ತು ಬಕೆಟ್‌ಗಳನ್ನು ಬೋರಲಾಗಿ ಹಾಕಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರಿನ ತೊಟ್ಟಿ, ಟ್ಯಾಂಕ್ ಮತ್ತು ಬಾವಿಗಳಿಗೆ ಸೊಳ್ಳೆ ಉತ್ಪಾದನೆಯಾಗದಂತೆ ಮಾಡಬೇಕು.
2. ರಾತ್ರಿ ಹೊತ್ತು ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆ ಉಪಯೋಗಿಸಬೇಕು. ಸಾಮಾನ್ಯವಾಗಿ ಮಲೇರಿಯಾ ಹರಡುವ ಹೆಣ್ಣು ಅನಾಫಿಲಿಸ್ ಸೊಳ್ಳೆ ರಾತ್ರಿ ವೇಳೆ ಕಚ್ಚುತ್ತದೆ.
3. ಸೊಳ್ಳೆ ವಿಕರ್ಷಿತವಾಗುವ ಕೀಟನಾಶಕ ಅಥವಾ ಸೊಳ್ಳೆನಾಶಕ ದ್ರಾವಣಗಳನ್ನು ಬಳಸಬೇಕು. 4. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ, ಘನತ್ಯಾಜ್ಯಗಳನ್ನು ಎಸೆಯುವುದನ್ನು ನಿಲ್ಲಿಸಬೇಕು. ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಅತೀ ಆವಶ್ಯಕ.
5. ಯಾರಿಗಾದರೂ ಜ್ವರ ಬಂದಲ್ಲಿ ತೀವ್ರ ನಡುಕ, ಚಳಿ ಜ್ವರವಿದ್ದಲ್ಲಿ ತಕ್ಷಣ ವೈದ್ಯರನ್ನು ಕಂಡು ‘ಮಲೇರಿಯಾ’ ರಕ್ತಪರೀಕ್ಷೆ ಮಾಡಿಸಬೇಕು. ಸಾಮಾನ್ಯ ವೈರಸ್ ಜ್ವರವೆಂದು ನಿರ್ಲಕ್ಷಿಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಆರಂಭಿಕ ಹಂತದಲ್ಲಿ ಮಲೇರಿಯಾ ರೋಗವನ್ನು ಗುರುತಿಸಿದ್ದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು.
6. ಹೆಚ್ಚಿನ ಜನ ಸಾಂದ್ರತೆ ಇರುವ ಕೊಳಚೆಗೇರಿ ಪ್ರದೇಶಗಳಲ್ಲಿ ಸೊಳ್ಳೆಗಳ ಸಾಂದ್ರತೆಯೂ ಹೆಚ್ಚಿರುತ್ತದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮನುಷ್ಯರಿಂದ ಸೊಳ್ಳೆಗಳಿಗೆ ಮತ್ತು ಪ್ರತಿಕ್ರಮ ಇದ್ದಲ್ಲಿ ಮಲೇರಿಯಾ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಪ್ರದೇಶಗಳಲ್ಲಿ ಸ್ವಚ್ಛತೆ ಮತ್ತು ಸೊಳ್ಳೆಗಳ ನಿರ್ಮೂಲನಕ್ಕೆ ಹೆಚ್ಚಿನ ಅದ್ಯತೆ ನೀಡಬೇಕು.
7. ಮಲೇರಿಯಾ ರೋಗದ ಸಾಂಧ್ರತೆ ಹೆಚ್ಚಿರುವ ಪ್ರದೇಶಗಳಿಗೆ ಪ್ರಮಾಣ ಮಾಡುವ ತುರ್ತು ಆವಶ್ಯಕತೆ ಇದ್ದಲ್ಲಿ, ಈ ಮೊದಲೇ ನಿಮಗೆ ಮಲೇರಿಯಾ ರೋಗ ಬಂದಿದ್ದಲ್ಲಿ ವೈದ್ಯರ ಸಲಹೆ ಮೇರೆಗೆ ಮಲೇರಿಯಾ ರೋಗ ನಿರೋಧಕ ಔಷಧಿ ಸೇವನೆ ಮಾಡುವುದು ಉತ್ತಮ. ಒಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ರಾಷ್ಟ್ರಗಳಲ್ಲಿ ದೀರ್ಘಾವಧಿಯ ಮಲೇರಿಯಾ ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ, ಆರಂಭದಲ್ಲೇ ಅದನ್ನು ತಡೆಗಟ್ಟುವುದು ಆರ್ಥಿಕ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿ ಮತ್ತು ಜಾಣತನ ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ.