ಶಿವಸೇನೆ-ಬಿಜೆಪಿಯಲ್ಲಿ ‘ಸಾಮೂಹಿಕ ವಿವಾಹ’ದ ಸ್ಪರ್ಧೆ!
ಮಹಾರಾಷ್ಟ್ರದಲ್ಲಿ ಈ ಸಮಯ ಬರಪೀಡಿತ ಕ್ಷೇತ್ರಗಳು ಚರ್ಚೆಯಲ್ಲಿದ್ದರೆ ಅತ್ತ ಶಿವಸೇನೆ ಮತ್ತು ಬಿಜೆಪಿಗಳಲ್ಲಿ ಸಾಮೂಹಿಕ ವಿವಾಹದ ಸ್ಪರ್ಧೆ ಆರಂಭವಾಗಿದೆ. ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಉಪಸ್ಥಿತಿಯಲ್ಲಿ ಔರಂಗಾಬಾದ್‌ನಲ್ಲಿ 244 ಜೋಡಿಗಳ ವಿವಾಹ ಸಂಭ್ರಮ ನಡೆದರೆ ಅತ್ತ ಬಿಜೆಪಿ 551 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿತು. ಶಿವಸೇನೆ ಆಯೋಜನೆಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಬಿಜೆಪಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಹಿತ ಅನೇಕ ಮಂತ್ರಿಗಳು ಉಪಸ್ಥಿತರಿದ್ದರು. ಎರಡೂ ಪಕ್ಷಗಳ ನೇತಾರರು ಮರಾಠಾವಾಡದಲ್ಲಿನ ಈ ಸಾಮೂಹಿಕ ವಿವಾಹದ ಶ್ರೇಯಸ್ಸು ಪ್ರಾಪ್ತಿಯಾಗಿಸಲು ಪ್ರಚಾರವನ್ನು ಮುಂಬೈಯಲ್ಲಿ ನಡೆಸುತ್ತಿದ್ದಾರೆ. ಮುಸ್ಲಿಂ-ಕ್ರೈಸ್ತ, ಬೌದ್ಧ ಮತ್ತು ಹಿಂದೂ ಧರ್ಮದ ಜನರು ಈ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದರು. ಶಿವಸೇನೆಯ ಔರಂಗಬಾದ್‌ನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿದ್ದಕ್ಕೆ ಉತ್ತರವಾಗಿ ಬಿಜೆಪಿ ಜಾಲ್ನಾ ಜಿಲ್ಲೆಯಲ್ಲಿ ಮರುದಿನ 551 ಜೋಡಿಗಳ ವಿವಾಹ ಏಕಕಾಲಕ್ಕೆ ನಡೆಸಿತ್ತು.
ಬಾಂಬೆ ಹೈಕೋರ್ಟ್‌ನ್ನು ‘ಮುಂಬೈ ಹೈಕೋರ್ಟ್’ ಎಂದು ಕರೆಸಿಕೊಳ್ಳಲು ಪ್ರಯತ್ನ
‘ಬಾಂಬೆ’ ಎನ್ನುವುದು ಮುಂಬೈ ಎಂದೆನಿಸಿ ಬಹಳ ವರ್ಷವಾಗಿದೆ. ಆದರೆ ಈಗಲೂ ಹೈಕೋರ್ಟ್ ಮಾತ್ರ ‘ಬಾಂಬೆ ಹೈಕೋರ್ಟ್’ ಎಂದೇ ಕರೆಸಿಕೊಂಡಿದೆ. ಇದನ್ನು ‘ಮುಂಬೈ ಹೈಕೋರ್ಟ್’ ಎಂದು ಕರೆಯುವುದಕ್ಕೆ ಕೆಲವು ಕಾನೂನು ಅಡಚಣೆಗಳು ಈಗಲೂ ಉಳಿದು ಕೊಂಡಿದೆ. ಇದಕ್ಕಾಗಿ ಪೇಟೆಂಟ್ ಆಫ್ ಹೈಕೋರ್ಟ್ ಕಾನೂನಿನಲ್ಲಿ ಸುಧಾರಣೆಯ ಆವಶ್ಯಕತೆ ಇರುವುದು . ಮಹಾರಾಷ್ಟ್ರ ರಾಜ್ಯ ಸರಕಾರವು ‘ ಬಾಂಬೆ ಹೈಕೋರ್ಟ್’ ಹೆಸರನ್ನು ‘ಮುಂಬೈ ಹೈಕೋರ್ಟ್’ ಎಂದು ಬದಲಿಸಲು ನಿರಂತರ ಕೇಂದ್ರ ಸರಕಾರದ ಜೊತೆ ಪತ್ರ ವ್ಯವಹಾರ ನಡೆಸುತ್ತಿದೆ. ಇದಕ್ಕೆ ಸಂಸತ್ ಮಂಜೂರಿನ ಆವಶ್ಯಕತೆ ಇದೆ.
ಬಾಂಬೆ ಹೈಕೋರ್ಟ್ ಭಾರತದ ಎಲ್ಲಕ್ಕಿಂತ ಹಳೆಯ ನ್ಯಾಯಾಲಯ. ಹೈಕೋರ್ಟ್ ಆ್ಯಕ್ಟ್ 1861ರ ಅನ್ವಯ 14 ಆಗಸ್ಟ್ 1862ರಂದು ಇದರ ಸ್ಥಾಪನೆ ಆಗಿತ್ತು. ಇದರ ನ್ಯಾಯಾಧಿಕಾರ ಕ್ಷೇತ್ರದಲ್ಲಿ ಮಹಾರಾಷ್ಟ್ರ ಗೋವಾದ ಹೊರತು ಕೇಂದ್ರಾಡಳಿತ ಪ್ರದೇಶವಾದ ದಮನ್, ದೀವ್, ದಾದ್ರ ಹವೇಲಿ ಕೂಡ ಬರುತ್ತದೆ. ಹೈಕೋರ್ಟ್‌ನ ನಾಗ್‌ಪುರ, ಔರಂಗಾಬಾದ್ ಮತ್ತು ಗೋವಾದ ಪಣಜಿಯಲ್ಲಿ ಖಂಡಪೀಠಗಳಿವೆ.
‘ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ಶೌಚಾಲಯ ಬೇಕು’
ಫಿಲ್ಮ್ ನಟಿ ರಾಖೀ ಸಾವಂತ್ ಏನಾದರೂ ಒಂದು ಸುದ್ದಿಯಲ್ಲಿ ಸದಾ ಇರುತ್ತಾರೆ. ಇದೀಗ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯಗಳ ನಿರ್ಮಾಣ ಮಾಡುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ. ತೃತೀಯ ಲಿಂಗಿಗಳ ಬದುಕನ್ನು ಆಧರಿಸಿದ ಮತ್ತು ಅವರ ಸಮಸ್ಯೆಗಳ ಆಧಾರಿತ ‘ಉಪೇಕ್ಷಾ’ ಫಿಲ್ಮ್‌ನಲ್ಲಿ ತೃತೀಯ ಲಿಂಗಿಯ ಪಾತ್ರವನ್ನು ನಿರ್ವಹಿಸುತ್ತಿರುವ ರಾಖೀ ಜುಹು(ಒಖಿಏಖಿ)ನಲ್ಲಿ ಆಯೋಜಿಸಿದ ಮಹೂರ್ತ ಸಮಾರಂಭದಲ್ಲಿ ಈ ಮಾತು ಹೇಳಿದರು.
ಸುಪ್ರೀಂ ಕೋರ್ಟ್‌ನಿಂದ ಥರ್ಡ್ ಜೆಂಡರ್‌ನ ಮಾನ್ಯತೆ ಸಿಕ್ಕಿದ ಹೊರತಾಗಿಯೂ ತೃತೀಯ ಲಿಂಗಿಗಳು ಸಮಾಜ ಮತ್ತು ಸರಕಾರದಿಂದ ಈಗಲೂ ಉಪೇಕ್ಷೆ ಎದುರಿಸ ಬೇಕಾಗಿದೆ. ಹೀಗಾಗಿ ಅವರಿಗೆ ಬದುಕಿನಲ್ಲಿ ಮೀಸಲಾತಿ ಬೇಕಾಗಿದೆ. ಇದರ ಆರಂಭ ಇವರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣದ ಮೂಲಕ ಆಗಬೇಕಿದೆ. ರೈಲುಗಳಲ್ಲಿ ಇವರಿಗೆ ಮೀಸಲು ಸೀಟುಗಳು ಬೇಕಾಗಿವೆ ಎಂದಿದ್ದಾರೆ ರಾಖೀ.
ತೃತೀಯ ಲಿಂಗಿಗಳ ಅಧಿಕಾರಗಳಿಗೆ ಧ್ವನಿ ಎತ್ತುತ್ತಾ ಇರುವ ಹಾಗೂ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ತನಕ ಒಯ್ದು ಡಾ.ಲಕ್ಮೆ ನಾರಾಯಣ ತ್ರಿಪಾಠಿ ಅವರೂ ರಾಖೀ ಸಾವಂತರ ಮಾತನ್ನು ಬೆಂಬಲಿಸಿದ್ದಾರೆ. ಕೇವಲ ಕಾನೂನಿನಿಂದ ಏನೂ ಆಗಲಾರದು. ಸಮಾಜ ಮತ್ತು ಸರಕಾರ ದೃಷ್ಟಿಕೋನ ಬದಲಿಸಬೇಕಾಗಿದೆ ಎನ್ನುತ್ತಾರೆ ಅವರು.
ಗೋವಾದಲ್ಲಿ 22 ಸೀಟುಗಳಲ್ಲಿ ಶಿವಸೇನೆ ಚುನಾವಣೆಗೆ ಸ್ಪರ್ಧಿಸುವುದಂತೆ!
ಗೋವಾದಲ್ಲಿ ಮರಾಠಿ ಭಾಷೆಯ ಕುತ್ತಿಗೆ ಹಿಚುಕಲಾಗುತ್ತಿದೆ ಎಂದು ಈಗ ಶಿವಸೇನೆ ಹೇಳು ತ್ತಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಗೋವಾದಲ್ಲಿ ಗಡಿ ಭಾಗದ 22 ಸೀಟು ಗಳಲ್ಲಿ ಶಿವಸೇನೆ ಸ್ಪರ್ಧಿಸುವುದಕ್ಕೆ ಸಿದ್ಧತೆ ನಡೆಸುತ್ತಿದೆ ಎನ್ನುತ್ತಾರೆ ಸಂಸದ ಸಂಜಯ್ ರಾವುತ್.
ಎಲ್ಲೆಲ್ಲಿ ಬಿಜೆಪಿ ಸರಕಾರ ಇದೆಯೇ ಅಲ್ಲೆಲ್ಲ ಈಗ ಶಿವಸೇನೆ ಸ್ಪರ್ಧಿಸಲು ಮುಂದಾಗಿದೆ. ಶಿವಸೇನೆಗೆ ಈ ದಿನಗಳಲ್ಲಿ ತನ್ನನ್ನು ಬಿಜೆಪಿ ಕ್ಯಾರ್ ಮಾಡುತ್ತಿಲ್ಲ ಎಂದು ಒಳಗೊಳಗೆ ತೀವ್ರ ಸಿಟ್ಟು ಇದೆ. ಗೋವಾದಲ್ಲಿ ಭಾಷೆಯ ಪ್ರಶ್ನೆ ಬಂದಾಗ ಇಲ್ಲಿಯ ಕೊಂಕಣಿ ಜನತೆ ಬೀದಿಗಿಳಿಯುತ್ತಾರೆ. ಹಾಗೂ ಭೂಮಿಪುತ್ರ ಮರಾಠಿ ಜನರನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಹೀಗಾಗಿ ಮರಾಠಿ ಜನರಿಗೆ ಆಗುವ ಅನ್ಯಾಯವನ್ನು ಹೋಗಲಾಡಿಸಲು ಶಿವಸೇನೆ ಗೋವಾ ವಿಧಾನಸಭಾ ಚುನಾವಣೆಗಳಲ್ಲಿ 22 ಸೀಟು ಗಳಲ್ಲಿ ಸ್ಪರ್ಧಿಸಲು ಸರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆಯಂತೆ. ಶಿವಸೇನಾ ಸಂಸದ ಸಂಜಯ್ ರಾವುತ್ (ಸಾಮ್ನಾ ಸಂಪಾದಕ) ಎರಡು ದಿನಗಳ ಗೋವಾ ಪ್ರವಾಸ ಮಾಡಿ ಬಂದ ನಂತರ ಪಣಜಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿದ ರಾವುತ್ ಈ ಮಾತು ಹೇಳಿದ್ದಾರೆ. ನಾವು ಚುನಾವಣೆಗಳಲ್ಲಿ ಸ್ಪರ್ಧಿಸಲು ಮಾತ್ರ ಬಯಸಿಲ್ಲ. ಇಲ್ಲಿನ ಜನರ ಸಮಸ್ಯೆಗಳನ್ನು ಬಗೆ ಹರಿಸಲು ಬಂದಿದ್ದೇವೆ. ಇಲ್ಲಿನ ಮರಾಠಿ ಜನರ ಮೇಲಾಗುವ ದೌರ್ಜನ್ಯವನ್ನು ದೂರಗೊಳಿಸಲು ನಾವು ನಿಶ್ಚಯಿಸಿದ್ದೇವೆ. ಸಾಮಾಜಿಕ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಶಿವಸೇನೆಗೆ ತನ್ನದೇ ಆದ ಸ್ಟೈಲ್ ಇದೆ ಎಂದಿದ್ದಾರೆ ರಾವುತ್.
ಮಹಾರಾಷ್ಟ್ರವಾದಿ ಗೋಮಾಂತರ ಪಕ್ಷವು ಶಿವಸೇನೆ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಬಾಳ ಸಾಹೇಬ ಠಾಕ್ರೆ ಆ ದಿನಗಳಲ್ಲಿ ನಂಬಿದ್ದರು. ಹೀಗಾಗಿ ಶಿವಸೇನೆ ಇಲ್ಲಿಯ ರಾಜಕೀಯ ರಂಗಕ್ಕೆ ಬಂದಿರಲಿಲ್ಲ. ಆದರೆ ಇವಾಗ ನಾವು ಜೊತೆಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಮುಂದಿನ ಮುಖ್ಯಮಂತ್ರಿ ನಮ್ಮದೇ ಇರುತ್ತಾರೆ ಎಂಬ ವಿಶ್ವಾಸವನ್ನು ರಾವುತ್ ವ್ಯಕ್ತಪಡಿಸಿದ್ದಾರೆ. ಹಾಗಿದ್ದೂ ಚುನಾವಣೆಗೆ ಮೊದಲು ಯಾವ ಪಕ್ಷದ ಜೊತೆ ಮೈತ್ರಿ ಏರ್ಪಡಿಸಬೇಕು ಎನ್ನುವುದು ಇನ್ನೂ ನಿಶ್ಚಯವಾಗಿಲ್ಲವಂತೆ . ಅಂದರೆ ಬಿಜೆಪಿ ಮತ್ತೆ ತನ್ನನ್ನು ಕರೆಯಬಹುದು ಎಂಬ ಆಸೆ ಈಗಲೂ ಶಿವಸೇನೆ ಇರಿಸಿದೆಯೋ.....!
ನೀರಿನ ‘ಟ್ಯಾಂಕರ್ ಹಗರಣ’
ಮುಂಬೈ ಮಹಾನಗರ ಪಾಲಿಕೆಯಿಂದ ಲೀಟರ್‌ಗೆ ಒಂದು ಪೈಸೆಯಂತೆ ಖರೀದಿಸಿದ ನೀರನ್ನು ಖಾಸಗಿ ಟ್ಯಾಂಕರ್‌ಗಳವರು ಲೀಟರ್‌ಗೆ ಒಂದು ರೂಪಾಯಿಗೆ ಮಾರುತ್ತಿದ್ದು, ನೀರು ಮಾಫಿಯಾಗಳು ಪ್ರತೀ ದಿನ ಒಂದು ಕೋಟಿ ಲೀಟರ್ ನೀರನ್ನು ಮಾರುತ್ತಿರುವ ಸಂಗತಿ ಬೇಳಕಿಗೆ ಬಂದಿದೆ.
ಪ್ರತೀದಿನ 50 ಲಕ್ಷ ಲೀಟರ್ ನೀರನ್ನು ಖಾಸಗಿ ಟ್ಯಾಂಕರ್ ಮಾಫಿಯಾ ಮುಂಬೈ ಮಹಾನಗರ ಪಾಲಿಕೆಯಿಂದ ಖರೀದಿಸಿ ಹೊರಗಡೆ ಮಾರುತ್ತಿದೆ. ಮುಂಬೈ ಮನಪಾ ಇವರಿಗೆ ಲೀಟರ್‌ಗೆ ಒಂದು ಪೈಸೆಯಂತೆ ನೀರನ್ನು ಮಾರುತ್ತದೆ. ಆದರ್ ಟ್ಯಾಂಕರ್ ಮಾಫಿಯಾಗಳು ನೂರುಪಟ್ಟು ಬೆಲೆಯಲ್ಲಿ ಅರ್ಥಾತ್ ಲೀಟರ್‌ಗೆ ಒಂದು ರೂಪಾಯಿಯಂತೆ ಮಾರುತ್ತಿದೆ. ಬಿಜೆಪಿ ಸಂಸದ ಡಾ. ಕಿರೀಟ್ ಸೋಮಯ್ಯ ಈ ಹಗರಣದ ತನಿಖೆಗೆ ಆಗ್ರಹಿಸಿದ್ದಾರೆ ಹಾಗೂ ವಿಶೇಷ ತನಿಖಾ ತಂಡವನ್ನು ರಚನೆ ಮಾಡುವಂತೆ ಒತ್ತಾಯಿಸಿದ್ದಾರೆ. ಮುಂಬೈ ಮನಪಾದ ಬಳಿ 9181 ಮುನ್ಸಿಪಲ್ ಟ್ಯಾಂಕರ್‌ಗಳಿವೆ. 38,999 ನೀರಿನ ಖಾಸಗಿ ಟ್ಯಾಂಕರ್‌ಗಳಿವೆ.
ಕೈದಿಗಳಿಗೆ ನೀರು ಸಿಗುತ್ತಿಲ್ಲವಂತೆ.
ಮಹಾರಾಷ್ಟ್ರದ ಮರಾಠಾವಾಡದ ಅನೇಕ ಜಿಲ್ಲೆಗಳಲ್ಲಿ ನೀಡಿನ ಸಮಸ್ಯೆ ವಿಪರೀತ ಕಾಡುತ್ತಿದೆ. ಇದೀಗ ರೈಲುಗಳ ಮೂಲಕ ಅನೇಕ ಲಕ್ಷ ಲೀಟರ್‌ಗಳ ನೀರು ಪೂರೈಸುತ್ತಿದೆ ಸರಕಾರ. ಇದಕ್ಕಿಂತಲೂ ಮಹಾರಾಷ್ಟ್ರದ ಅನೇಕ ಜೈಲುಗಳ ಕೈದಿಗಳಿಗೆ ನೀರು ಸಿಗುತ್ತಿಲ್ಲವಂತೆ. ಸರಕಾರಕ್ಕೆ ಇವರಿಗೆಲ್ಲ ನೀರು ಪೂರೈಸುವುದು ಕಷ್ಟವಾಗುತ್ತಿದೆ. ಸಂಭಾಜಿನಗರ, ಧಾರಾಶಿವ, ಪೈಠನ, ನಾಸಿಕ್, ಧುಲೆ, ಲಾತೂರ್, ಬೀಡ್... ಇತ್ಯಾದಿ ಜಿಲ್ಲೆಗಳ ಜೈಲುಗಳಲ್ಲಿ ಕೈದಿಗಳಿಗೆ ನೀರು ಸಿಗದೆ ಸಮಸ್ಯೆಗಳು ಸೃಷ್ಟಿಯಾಗಿದೆ. ಕೈದಿಗಳಿಗೆ ಸ್ನಾನಕ್ಕೆ ಒಂದು ಬಕೆಟ್ ನೀರು ಬಹಳ ಕಷ್ಟದಲ್ಲಿ ನೀಡಲಾಗುತ್ತಿದೆ.
ರೈಲುಗಳನ್ನು ನಿಲ್ಲಿಸುವ ‘ಗ್ಯಾಂಗ್’ನ ಕೈಚಳಕ
ಮುಂಬೈ ನಗರದಲ್ಲಿ ಎಂತೆಂತಹ ಗ್ಯಾಂಗ್‌ಗಳು ಸಕ್ರೀಯವಾಗಿವೆ ಎನ್ನುವುದು ಆಗಾಗ ಕಂಡುಬರುವ ಹೊಸ ಘಟನೆಗಳಿಂದ ತಿಳಿದು ಬರುತ್ತದೆ. ಇದೀಗ ಬಾಂದ್ರಾ ರೈಲ್ವೆ ಟರ್ಮಿ ನಸ್ ಮತ್ತು ಬೋರಿವಲಿ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಸುಲಿಗೆ ಮಾಡುವುದಕ್ಕೆ ಹೊಸ ರೀತಿಯ ತಂತ್ರವನ್ನು ಬಳಸುತ್ತಿದ್ದ ತಂಡಗಳು ಪೊಲೀಸ್ ಬಲೆಗೆ ಬಿದ್ದಿವೆ.
ಹೊರ ರಾಜ್ಯಗಳಿಗೆ ಹೋಗುವ ರೈಲುಗಳು ಬಾಂದ್ರಾ-ಮುಂಬೈ ಸೆಂಟ್ರಲ್ ಸ್ಟೇಷನ್‌ಗಳಿಂದ ಹೊರಟು ಅದು ಬೋರಿವಲಿಯಲ್ಲಿ ನಿಲ್ಲುತ್ತದೆ. ಕೆಲವೊಮ್ಮೆ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ತಡವಾಗಿ ಬಂದಾಗ ಅವರಿಗೆ ಬೇಕಿದ್ದ ಆ ರೈಲು ಆಗಷ್ಟೇ ನಿಲ್ದಾಣದಿಂದ ಹೊರಟಿರುತ್ತದೆ. ಇಂತಹ ಪ್ರಯಾಣಿಕರುನ್ನು ಗುರಿಯಿಟ್ಟು ಈ ತಂಡ ಕೆಲಸ ಮಾಡುತ್ತಿತ್ತು. ಹೇಗೆಂದರೆ ರೈಲು ತಪ್ಪಿ ಹೋದ ಚಿಂತೆಯಲ್ಲಿದ್ದ ಆ ಪ್ರಯಾಣಿಕರನ್ನು ಈ ಗ್ಯಾಂಗ್‌ನ ಸದಸ್ಯ ಸಂಪರ್ಕಿಸುತ್ತಾನೆ- ‘‘ ನಿಮ್ಮ ರೈಲು ತಪ್ಪಿ ಹೋದ್ದರಿಂದ ಒಂದು ದಿನವಿಡೀ ವ್ಯರ್ಥವಾಯಿತು. ನಾಳೆ ರಿಸರ್ವೇಶನ್ ಸೀಟು ಸಿಗುವ ಧೈರ್ಯವಿಲ್ಲ. ಆದರೆ ನಾವು ಆ ರೈಲನ್ನು ನಿಮಗಾಗಿ ನಿಲ್ಲಿಸುತ್ತೇವೆ ಈಗ. ನಿಮ್ಮ ಅಮೂಲ್ಯ ಸಮಯ ಉಳಿತಾಯವಾಗುತ್ತದೆ. ನಮಗೆ ಒಂದುವರೆ ಸಾವಿರ ರೂ. ನೀಡಬೇಕು. (ಇನ್ನು ಕೆಲವರಿಗೆ ಎರಡು ಸಾವಿರ ರೂ. ಕೇಳುತ್ತಾರೆ. ಆಯಾಯ ಪ್ರಯಾಣಿಕರ ಆರ್ಥಿಕ ಪರಿಸ್ಥಿತಿ ಗಮನಿಸಿ...).....’’ ಹೀಗೆ ಭರವಸೆ ನೀಡುತ್ತಾರೆ.
ಈ ಪ್ರಯಾಣಿಕರು ಒಪ್ಪಿದ ಕೂಡಲೇ ಮೊಬೈಲ್‌ನಲ್ಲಿ ಯಾರ ಜೊತೆಗೋ ಸಂಪರ್ಕಿಸುತ್ತಾರೆ. ಆಗಷ್ಟೇ ನಿಲ್ದಾಣ ಬಿಟ್ಟ ಆ ರೈಲು ದೂರದಲ್ಲಿ ನಿಂತುಬಿಡುತ್ತದೆ. ಕಾರಣ ಮೊದಲೇ ಆರೈಲೊಳಗಿದ್ದ ಈ ಗ್ಯಾಂಗ್‌ನ ಸದಸ್ಯ ಚೈನ್ ಎಳೆದು ರೈಲು ನಿಲ್ಲಿಸುತ್ತಾನೆ.!
ಬೋರಿವಲಿಯಲ್ಲಿ ಸ್ವಲ್ಪ ಮುಂದೆ ಹೋದ ರೈಲುಗಳು ಆಗಾಗ ನಿಂತುಬಿಡುವ ಘನೆಗಳಿಂದ ಕಿರಿಕಿರಿಗೊಂಡ ಆರ್‌ಪಿಎಸ್ ಪೊಲೀಸರು ಎಚ್ಚೆತ್ತು ತನಿಖೆಗೈದಾಗ ಈ ಚೈನ್ ಎಳೆದು ರೈಲು ನಿಲ್ಲಿಸುವ ಗ್ಯಾಂಗ್‌ನ ಗುಟ್ಟು ಬೆಳಕಿಗೆ ಬಂತು.
ಮಹಾನಗರ ಪಾಲಿಕೆಯ ‘ಖಾಸಗಿ ವೆಬ್‌ಸೈಟಿ’ಗೆ ಬೀಗ!
ರಸ್ತೆಗಳಲ್ಲಿನ ಹೊಂಡಗಳನ್ನು ಪತ್ತೆ ಹಚ್ಚುವ ಖಾಸಗಿ ವೆಬ್‌ಸೈಟ್-ಟ್ರಾಕಿಂಗ್ ಸಿಸ್ಟಮ್‌ಅನ್ನು ಮುಂಬೈ ಮಹಾನಗರ ಪಾಲಿಕೆ ಕಸದಬುಟ್ಟಿಗೆ ಎಸೆದಿದೆ! ಇದೀಗ ತನ್ನದೇ ಸ್ವಂತ ಸಾಫ್ಟ್‌ವೇರ್ ವಿಕಸಿತಗೊಳಿಸಿದೆ. ಇದರಲ್ಲಿ ಜನರು ರಸ್ತೆಗಳ ಹೊಂಡಗಳಿಗೆ ಸಂಬಂಧಿಸಿದ ದೂರು-ಚಿತ್ರಗಳನ್ನು ಕಳುಹಿಸಬಹುದಾಗಿದೆಯಂತೆ...
ಜಿಪಿಎಸ್ ಮತ್ತು ಜಿಐಎಸ್ ಆಧಾರಿತ ಮಹಾನಗರ ಪಾಲಿಕೆಯ ಈ ವೆಬ್‌ಸೈಟ್ ರೆಡಿ ಆಗುತ್ತಿದೆ. ಜನರು ರಸ್ತೆಗಳಲ್ಲಿನ ತಾವು ಕಂಡ ಹೊಂಡಗಳ ಫೋಟೊ ಅಪ್‌ಲೋಡ್ ಮಾಡಬಹುದಾಗಿದೆ ಎಂಬ ಮಾಹಿತಿ ಮನಪಾ ಆಯುಕ್ತ ಅಜೋಯ್ ಮೆಹ್ತಾ ನೀಡಿದ್ದಾರೆ. ಹೊಸ ಫ್ಲಾಟ್ ಫಾಮ್‌ನ ರೂಪದಲ್ಲಿ ಫೇಸ್‌ಬುಕ್ ಕೂಡ ಬಳಸಬಹುದಾಗಿದೆ. ದೂರು ಟ್ವಿಟರ್‌ನಲ್ಲೂ ದಾಖಲಿಸಬಹುದು.
‘‘ನಮ್ಮ ಬಳಿ ಸ್ವಂತದ್ದಾದ ಐವಿ ವಿಭಾಗ ಮತ್ತು ಸಿಬಂದಿಯಿದ್ದಾರೆ. ಹಾಗಿರುವಾಗ ವರ್ಷಕ್ಕೆ ಅಪ್‌ಲೋಡ್ ಆಗದ ವೆಬ್‌ಸೈಟಿಗೆ ಒಂದು ಕೋಟಿ ರೂ. ಯಾಕೆ ಖರ್ಚು ಮಾಡಬೇಕು’’ ಹೀಗಾಗಿ ಖಾಸಗಿ ವೆಬ್‌ಸೈಟ್ ತೆಗೆದು ಹಾಕಲಾಗಿದೆ. ವಿಕಸಿತ ವೆಬ್‌ಸೈಟ್ ನಮ್ಮ ಸಿಂಬಂದಿಯೆ ಮಾನಿಟರ್ ಮಾಡುವರು ಎಂದಿದ್ದಾರೆ ಆಯುಕ್ತರು.
ಮುಂಬೈ ರೈಲು: ಮೊದಲ ಬಾರಿಗೆ ‘ಬೌನ್ಸರ್ಸ್’ ನೆರವು
ಮುಂಬೈ ಲೋಕಲ್ ರೈಲುಗಳು ಇದೀಗ ಹಲವು ಕಾರಣಗಳಿಗೆ ಸುದ್ದಿಯಾಗುತ್ತಿವೆ. ಅವುಗಳಲ್ಲಿ ಹವಾನಿಯಂತ್ರಿತ ಲೋಕಲ್ ರೈಲುಗಳು ಹಳಿಗಳಲ್ಲಿ ಇಳಿಯಲಿವೆ ಎನ್ನುವುದು. ಮುಂಬೈ ಉಪನಗರದ ರೈಲು ಮಾರ್ಗದಲ್ಲಿ ದೇಶದ ಮೊದಲ ಹವಾನಿಯಂತ್ರಿತ ಲೋಕಲ್ ರೈಲು ಎಪ್ರಿಲ್ 5ರಂದು ಮುಂಬೈಗೆ ತಲುಪಿದೆ. ಈ ಲೋಕಲನ್ನು ಸದ್ಯ ಕುರ್ಲಾ ಕಾರ್‌ಶೆಡ್‌ನಲ್ಲಿ ಇರಿಸಲಾಗಿದೆ. ಮಧ್ಯ ರೈಲ್ವೆಯ ಯೋಜನೆಯಂತೆ ಪ್ರಯಾಣಿಕರನ್ನು ತುಂಬಿಸಿದ ಈ ಲೋಕಲ್ ರೈಲಿನ ಟ್ರಾಯಲ್ ಮಳೆಗಾಲದ ಮೊದಲು ಮಾಡಲಾಗುವುದು. ಜೊತೆಗೆ ಹವಾನಿಯಂತ್ರಿತ ಲೋಕಲ್‌ನಲ್ಲಿ ಪ್ರಯಾಣಿಕರ ನೂಕು ನುಗ್ಗಲನ್ನು ನಿಯಂತ್ರಿಸುವುದು ಅಷ್ಟು ಸುಲಭವೂ ಇಲ್ಲ. ಹೀಗಾಗಿ ವಿದೇಶಗಳ ತರಹ ಪ್ರಯಾಣಿಕರನ್ನು (ಹವಾನಿಯಂತ್ರಿತ ಲೋಕಲ್‌ನ ಪ್ರಯಾಣಿಕರನ್ನು) ಬೋಗಿಗೆ ಹತ್ತಿಸಲು ರೈಲ್ವೆ ‘ಬೌನ್ಸರ್’ಗಳ ಸಹಾಯವನ್ನು ಪಡೆಯಲಿದೆ. ಮಧ್ಯ ರೈಲ್ವೆಯ ಮಹಾಪ್ರಬಂಧಕ ಸುನೀಲ್ ಸೂದ್ ಅವರು ಹೇಳುವಂತೆ ಕ್ರೀಡಾ ಕೋಟಾದಿಂದ ಬಂದಿರುವ ರೈಲ್ವೆ ಸಿಬ್ಬಂದಿನ್ನು ರೈಲ್ವೆ ಸ್ಟೇಷನ್‌ಗಳಲ್ಲಿ ಹವಾನಿಯಂತ್ರಿತ ರೈಲಿನ ಪ್ರಯಾಣಿಕರ ನೂಕು ನುಗ್ಗಲನ್ನು ನಿಯಂತ್ರಿಸಲು ಇರಿಸುತ್ತಾರಂತೆ.
‘ಡೀಸಿ’ ಯುಗ ಸಮಾಪ್ತಿ
ಮುಂಬೈ ಉಪನಗರಿಯ ರೈಲು ಮಾರ್ಗದಿಂದ ಎಪ್ರಿಲ್ 9, 2016ರಂದು ಲೋಕಲ್ ರೈಲುಗಳ ಡೀಸಿ ಯುಗ (ಡೈರೆಕ್ಟ್ ಕರೆಂಟ್) ಅರ್ಥಾತ್ (1,500 ಕಿಲೋ ವೋಲ್ಟ್ ನ) ಯುಗ ಸಮಾಪ್ತಿಯಾಯಿತು. ಇದೀಗ ಮಧ್ಯ ರೈಲ್ವೆ ಹಾರ್ಬರ್ ಲೈನ್‌ನಲ್ಲೂ ಸಹ 2,500 ಕಿಲೋ ವೋಲ್ಟ್ ‘ಏಸಿ’ (ಆಲ್ಟರ್‌ನೇಟ್ ಕರೆಂಟ್) ಓಡಾಟ ಆರಂಭವಾಗಿದೆ. ಇಲ್ಲಿ ವಿದ್ಯುತ್ ಉಳಿತಾಯದಿಂದ ರೈಲ್ವೆಗೆ ತಿಂಗಳಲ್ಲಿ ಹಲವು ಕೋಟಿ ರೂಪಾಯಿ ಉಳಿತಾಯವಾಗಲಿದೆಯಂತೆ.
ಮುಂಬೈಯಲ್ಲಿ ಮಧ್ಯ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ಹೀಗೆ ಎರಡು ಮಂಡಲಗಳು ಸಂಚಾಲನೆ ಮಾಡುತ್ತವೆ. ಒಟ್ಟು 76 ಲಕ್ಷಕ್ಕೂ ಅಧಿಕ (ಸುಮಾರು 80 ಲಕ್ಷದ ಸಮೀಪ) ಪ್ರಯಾಣಿಕರು ದಿನನಿತ್ಯ ಓಡಾಡುತ್ತಾರೆ. ವಿಶ್ವದ ಅತ್ಯಧಿಕ ಪ್ರಯಾಣಿಕರು ಓಡಾಡುವ ಉಪನಗರಿಯ ರೈಲು ಸೇವೆ ಇದಾಗಿದೆ. ಎಪ್ರಿಲ್ 1853ರಲ್ಲಿ ಬ್ರಿಟಿಷರು ಮುಂಬೈಯಲ್ಲಿ ಪ್ರಥಮ ರೈಲು ಮಾರ್ಗ ನಿರ್ಮಿಸಿದ್ದರು. ಇದು ಏಶ್ಯಾದ ಅತ್ಯಂತ ಪ್ರಾಚೀನ ರೈಲು ಮಾರ್ಗಗಳಲ್ಲಿ ಒಂದು. ಮುಂಬೈ ಉಪನಗರಗಳ ಈಗಿನ ಲೋಕಲ್ ರೈಲುಗಳ ಒಟ್ಟು ಓಡಾಡಿದ ಉದ್ದ 303 ಕಿ.ಮೀ.
***
ರೈಲು ಹಳಿಗಳ ತ್ಯಾಜ್ಯ ಎತ್ತಂಗಡಿ ಹೇಗೆ?
ಮಧ್ಯರೈಲ್ವೆಯ ಮೈನ್‌ಲೈನ್‌ನ ಟ್ರಾನ್ಸ್ ಹಾರ್ಬರ್ ಮತ್ತು ಹಾರ್ಬರ್ ಲೈನ್‌ನಲ್ಲಿ ಡಿಸಿ-ಏಸಿ ಕನ್ವರ್ಷನ್ ಪೂರ್ಣಗೊಳಿಸಿದ ಖುಷಿ ರೈಲ್ವೆ ಅಧಿಕಾರಿಗಳಲ್ಲಿ ಕಂಡು ಬಂದರೂ ಇದೀಗ ಹೊಸ ಸಮಸ್ಯೆಯೊಂದನ್ನು ಎದುರಿಸುತ್ತಿದ್ದಾರೆ ಅಧಿಕಾರಿಗಳು.
ರೈಲ್ವೆ ಹಳಿಗಳ ಬಳಿ ತ್ಯಾಜ್ಯ ಎತ್ತುವ ರೈಲುಗಾಡಿ ಕೇವಲ ಡೀಸಿ ಪ್ರಣಾಳಿಯಲ್ಲಿ ಚಲಿಸುತ್ತಿತ್ತು. ಆದರೆ ಈಗ ಮಧ್ಯ ರೈಲ್ವೆ ಮತ್ತು ಹಾರ್ಬರ್ ಲೈನ್‌ನಲ್ಲಿ ಡೀಸಿಯಿಂದ ಏಸಿ ಕನ್ವರ್ಷನ್‌ನ ನಂತರ ಈ ತ್ಯಾಜ್ಯ ಎತ್ತುವ ರೈಲುಗಾಡಿಯನ್ನು ಹೊಸ ಕರೆಂಟ್ ಪ್ರಣಾಳಿಯಲ್ಲಿ ಓಡಿಸುವುದು ಸಂಭವ ಇಲ್ಲವಂತೆ. ಹೀಗಾಗಿ ರೈಲು ಹಳಿಗಳ ಬಳಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಹೇಗೆ ಎತ್ತುವುದು ಎಂಬ ಸಮಸ್ಯೆ ಅಧಿಕಾರಿಗಳನ್ನು ಕಾಡುತ್ತಿದೆ.
ರೈಲು ಹಳಿಗಳಲ್ಲಿ, ಪ್ಲಾಟ್‌ಫಾರ್ಮ್‌ಗಳಲ್ಲಿ ಅಥವಾ ಪ್ರೊಟೆಕ್ಷನ್ ಗೋಡೆ ರಿಪೇರಿಯ ಸರ್ಂ್ಭದಲ್ಲಿ ದೊಡ್ಡ ಪ್ರಮಾನದಲ್ಲಿ ಸಿಮೆಂಟು-ಮಣ್ಣು ತ್ಯಾಜ್ಯದ ರೂಪದಲ್ಲಿ ರೈಲು ಹಳಿಗಳ ಸಮೀಪ ಜಮಾ ಆಗುತ್ತದೆ. ಇದನ್ನು ಕಾರ್ಮಿಕರು ಅಲ್ಲೆ ಪಕ್ಕದಲ್ಲಿ ರಾಶಿ ಹಾಕುತ್ತಾರೆ.
ಇದನ್ನು ತೆಗೆಯಲು ರೈಲು ಆಡಳಿತ ಒಂದು ರೈಲುಗಾಡಿ ಓಡಿಸುತ್ತದೆ. ಇದನ್ನು ‘ಕಚ್‌ರಾ ಗಾಡಿ’ ಎನ್ನುತ್ತಾರೆ. ರೈಲು ಸೇವೆಯಲ್ಲಿ ಅತಿ ಹಳೆಯದಾಗಿರುವ ರ್ಯಾಕ್‌ಗಳನ್ನು ‘ಕಚ್‌ರಾ ಗಾಡಿ’ ರೂಪದಲ್ಲಿ ಕರೆಯಲಾಗುತ್ತದೆ. ಇದು ಡೈರೆಕ್ಟ್ ಕರೆಂಟ್‌ನಲ್ಲಿ ಓಡುತ್ತದೆ. ಆದರೆ ಹೊಸ ಏಸಿ ಕನ್ವರ್ಷನ್‌ನ ಕಾರಣ ಇದು ಚಲಿಸುವುದಕ್ಕೆ ಆಗುತ್ತಿಲ್ಲವಂತೆ. ಇದು ರೈಲು ಅಧಿಕಾರಿಗಳಿಗೆ ಡೀಸಿಯಿಂದ ಏಸಿ ಕನ್ವರ್ಷನ್‌ನ ಸಮಯ ಹೊಳೆಯಲೇ ಇಲ್ಲವಂತೆ. ಇದೀಗ ಅಧಿಕಾರಿಗಳು ಇದಕ್ಕೆ ಪರಿಹಾರ ಹುಡುಕುತ್ತಿದ್ದಾರೆ.
***
‘ಸಾಮಾಜಿಕ ಬಹಿಷ್ಕಾರ ಕಾನೂನುಬಾಹಿರ’ ಎಂದ ಮಹಾರಾಷ್ಟ್ರ ದೇಶದ ಮೊದಲ ರಾಜ್ಯ
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದ ಕೊನೆಯ ದಿನ ‘ಸಾಮಾಜಿಕ ಬಹಿಷ್ಕಾರ ತಡೆ ವಿಧೇಯಕವು’ ಒಮ್ಮತದಿಂದ ಮಂಜೂರು ಆಗಿದೆ.
ಇನ್ನು ಮುಂದೆ ಸಾಮಾಜಿಕ ಬಹಿಷ್ಕಾರ ಅಪರಾಧವಾಗಲಿದೆ. ಸಾಮಾಜಿಕ ಬಹಿಷ್ಕಾರವನ್ನು ಕಾನೂನುಬಾಹಿರವೆಂದು ಹೇಳಿರುವ ಮೊದಲ ರಾಜ್ಯ ಮಹಾರಾಷ್ಟ್ರ ಆಗಲಿದೆ.
ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಕಾರ್ಯಗಳು ಕಂಡು ಬಂದಿವೆ. ಎರಡೂ ಸದನಗಲಲ್ಲಿ 18 ವಿಧೇಯಕಗಳು ಮಂಜೂರು ಆಗಿದೆ. 5 ವಿಧೇಯಕಗಳಲ್ಲಿ ಚರ್ಚೆ ನಡೆದಿದೆ. ಆದರೆ ವಿಧಾನ ಪರಿಷತ್ ಪ್ರತಿಪಕ್ಷ ನೇತಾ ಧನಂಜಯ ಮುಂಢೆ ಹೇಳುತ್ತಾರೆ ‘‘ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಕಾಣಿಸಿದೆ. ಆದರೆ ಈ ಬಗ್ಗೆ ಯಾವುದೇ ವಿಚಾರ ವಿಮರ್ಶೆ ನಡೆದಿಲ್ಲ. ಅನೇಕ ಮಂತ್ರಿಗಳ ಹಗರಣವನ್ನು ನಾವು ಬಹಿರಂಗಗೊಳಿಸಿದ್ದೇವೆ. ಆದರೆ ಸರಕಾರ ತನಿಖೆಗೆ ರಾಜಿಯಾಗಿಲ್ಲ’’. ಮಾರ್ಚ್ 9ರಿಂದ ಆರಂಭವಾದ ಬಜೆಟ್ ಅಧಿವೇಶನದಲ್ಲಿ ಕೇವಲ 23 ದಿನಗಳಲ್ಲಿ ಕೆಲಸ ಕಾರ್ಯಗಳು ನಡೆದಿತ್ತು.
ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ‘ಸಾಮಾಜಿಕ ಬಹಿಷ್ಕಾರ’ ಎಂದು ಯಾರನ್ನಾದರೂ ಘೋಷಿಸಿದರೆ ಅಂತಹ ಬಹಿಷ್ಕಾರ ಹಾಕಿದವರಿಗೆ 7 ವರ್ಷದ ತನಕ ಸಜೆ ಮತ್ತು 5 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗುವುದು.