ಮಲೇರಿಯಾ ನಿರ್ಮೂಲನೆ ಭಾರತಕ್ಕೆ ಕನಸಾಗಿಯೇ ಉಳಿಯುವುದೇ?
ಭಾರತದಲ್ಲಿ ಸಂಪತ್ತು ಹಾಗೂ ಅಭಿವೃದ್ಧಿಯಲ್ಲಿ ಹೆಚ್ಚಳವಾಗಿರುವ ಹೊರತಾಗಿಯೂ,ಈಗಲೂ ದೇಶದ ಬೃಹತ್ ಪ್ರಮಾಣದ ಜನಸಂಖ್ಯೆಯು ಮಲೇರಿಯಾ ರೋಗದ ಅಪಾಯವನ್ನು ಎದುರಿಸುತ್ತಿದೆ ಹಾಗೂ ನಗರಪ್ರದೇಶದಲ್ಲಿ ಮಲೇರಿಯಾ ಹರಡುವಿಕೆಯು ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಇವೆಲ್ಲವುಗಳಿಂದಾಗಿ ಇತರ ಏಶ್ಯನ್ರಾಷ್ಟ್ರಗಳಿಗಿಂತ ಮಲೇರಿಯಾ ನಿವಾರಣೆ ಯೋಜನೆಯ ಅನುಷ್ಠಾನ ಭಾರತದಲ್ಲಿ ಹೆಚ್ಚು ಕಠಿಣವೆನಿಸಿದೆ.
ಮಲೇರಿಯಾ ಪ್ರಕರಣಗಳು ಕಡಿಮೆ ಪ್ರಮಾಣದಲ್ಲಿರುವ ಮೂರು ಜಿಲ್ಲೆಗಳಲ್ಲಿ ಆ ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆಗೊಳಿಸಲು ಬಯಸಿರುವುದಾಗಿ ಒಡಿಶಾ ಸರಕಾರವು ಈ ತಿಂಗಳು ಪ್ರಕಟಿಸಿದೆ. ಒಡಿಶಾ ದೇಶದಲ್ಲೇ ಗರಿಷ್ಠ ಸಂಖ್ಯೆಯಲ್ಲಿ ಮಲೇರಿಯಾ ರೋಗದ ಪ್ರಕರಣಗಳು ವರದಿಯಾ ಗಿರುವ ರಾಜ್ಯವಾಗಿದೆ. 2014ರಲ್ಲಿ ಸುಮಾರು ನಾಲ್ಕು ಲಕ್ಷ ಪ್ರಕರಣಗಳು ಅಥವಾ ಭಾರತದಲ್ಲಿನ ಒಟ್ಟು ಮಲೇರಿಯಾ ಪ್ರಕರಣಗಳ ಶೇ.36ರಷ್ಟು ಪ್ರಕರಣಗಳು ಒಡಿಶಾದಿಂದಲೇ ವರದಿಯಾಗಿವೆ. 2014ರಲ್ಲಿ ದೇಶಾದ್ಯಂತ ಒಟ್ಟಾರೆ 562 ಮಲೇರಿಯಾ ಪ್ರಕರಣಗಳು ವರದಿಯಾಗಿವೆ.
ಮಲೇರಿಯಾ ಪ್ರಕರಣಗಳು ವಿರಳವಾಗಿರುವ ಕೇಂದ್ರಪಾಡ, ಪುರಿ ಹಾಗೂ ಜಗತ್ಸಿಂಗ್ಪುರ್ಗಳಲ್ಲಿ ಮಲೇರಿಯಾವನ್ನು ನಿರ್ಮೂಲನೆಗೊಳಿಸುವ ಒಡಿಶಾ ಸರಕಾರದ ಈ ನೂತನ ಉಪಕ್ರಮವು 2030ರೊಳಗೆ ಮಲೇರಿಯಾವನ್ನು ಸಂಪೂ ರ್ಣವಾಗಿ ಉಚ್ಚಾಟಿಸುವ ಮಹತ್ವಾಕಾಂಕ್ಷಿ ರಾಷ್ಟ್ರೀಯ ಪ್ರಕ್ರಿಯೆಯ ಭಾಗವಾಗಿದೆ.
50ರ ದಶಕದ ಪ್ರಯೋಗ
ಭಾರತದಲ್ಲಿ ಮಲೇರಿಯಾ ರೋಗವನ್ನು ನಿರ್ಮೂಲನೆಗೊಳಿಸುವ ಕುರಿತಾದ ಪ್ರಯತ್ನಗಳು ಹಲವು ದಶಕಗಳ ಹಿಂದೆಯೇ ನಡೆಯುತ್ತಾ ಬಂದಿದೆ. 1953ರಲ್ಲಿ ಭಾರತವು ರಾಷ್ಟ್ರೀಯ ಮಲೇರಿಯಾ ನಿರ್ಮೂಲನೆ ಕಾರ್ಯಕ್ರಮವನ್ನು ಆರಂಭಿಸಿತು. ಈ ಕಾರ್ಯಕ್ರಮವು ಭಾರೀ ಯಶಸ್ಸನ್ನು ಕಂಡಿದ್ದು, 10 ಲಕ್ಷದಷ್ಟಿದ್ದ ಮಲೇರಿಯಾ ಪ್ರಕರಣಗಳ ಸಂಖ್ಯೆ 1 ಸಾವಿರಕ್ಕೆ ಇಳಿಯಿತು. 1965ರಲ್ಲಿ ಮಲೇರಿಯಾದಿಂದ ಸಾವುಸಂಭವಿಸಿದ ಯಾವುದೇ ಪ್ರಕರಣಗಳು ವರದಿಯಾಗಿರಲಿಲ್ಲ.
ತ್ವರಿತ ರೋಗಪರೀಕ್ಷೆ ಹಾಗೂ ಕ್ಲೊರೋಕ್ವಿನ್ ಮೂಲಕ ಚಿಕಿತ್ಸೆ, ಡಿಡಿಟಿ ರಾಸಾ ಯನಿಕ ಬಳಕೆಯು ಮಲೇರಿಯಾ ಪ್ರಕರಣಗಳನ್ನು ತಗ್ಗಿಸುವಲ್ಲಿ ನೆರವಾಯಿತೆಂದು ಏಮ್ಸ್ನ ಸಾಮುದಾಯಿಕ ವೈದ್ಯಕೀಯ ಇಲಾಖೆಯ ಡಾ.ಸಂಜಯ್ ರಾಯ್ ಹೇಳುತ್ತಾರೆ. ಆದಾಗ್ಯೂ ಮಲೇರಿಯಾದ ಪರಾವಲಂಬಿ ವೈರಸ್, ಡಿಡಿಟಿ ರಾಸಾಯನಿಕಕ್ಕೆ ಪ್ರತಿರೋಧ ಸಾಮರ್ಥ್ಯವನ್ನು ಬೆಳೆಸಿಕೊಂಡಿತು. ಆ ಮೂಲಕ ರಾಸಾಯನಿಕ ಸಿಂಪಡಣೆಯು ನಿಷ್ಪರಿಣಾಮಕಾರಿಯೆನಿಸಿತು. 1976ರಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ 60.40 ಲಕ್ಷಕ್ಕೇರಿತು.
ಈ ಹಿನ್ನಡೆಯ ಬಳಿಕ ಸರಕಾರವು ಮಲೇರಿಯಾ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವ ತನ್ನ ಗುರಿಯನ್ನು ಬದಲಾಯಿಸಿ ರೋಗ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ನಿರ್ಧರಿಸಿತು.
ಯೋಜನೆ
ರೋಗಗಳ ಹರಡುವಿಕೆಯ ಪ್ರಕರಣಗಳು ಅಧಿಕವಾಗಿರುವ ಕ್ಷೇತ್ರಗಳ ಬಗ್ಗೆ ಗಮನಹರಿಸುವ ಬದಲು ಸರಕಾರವು ಹಂತಹಂತವಾಗಿ ರೋಗವನ್ನು ನಿರ್ಮೂಲನೆಗೊಳಿಸಲು ಬಯಸಿದೆ. ಲಭ್ಯವಿರುವ ದಾಖಲೆಗಳ ಪ್ರಕಾರ 15 ರಾಜ್ಯಗಳಲ್ಲಿ ಮಲೇರಿಯಾ ಸಂಪೂರ್ಣ ನಿರ್ಮೂಲನೆಯ ಹಂತದಲ್ಲಿದೆ. ಉಳಿದ 11 ರಾಜ್ಯಗಳಲ್ಲಿ ಮಲೇರಿಯಾದ ಅಧಿಕ ಪ್ರಕರಣಗಳು ವರದಿಯಾಗಿವೆ. 11 ರಾಜ್ಯಗಳಲ್ಲಿ ಅಧಿಕ ಸಂಖ್ಯೆಯ ಮಲೇರಿಯಾ ಪ್ರಕರಣಗಳು ವರದಿಯಾಗಿರುವ ಜಿಲ್ಲೆಗಳಲ್ಲಿ ಹಾಗೂ ಕಡಿಮೆ ಸಂಖ್ಯೆಯ ಮಲೇರಿಯಾ ಪ್ರಕರಣಗಳು ವರದಿಯಾ ಗಿರುವ ಜಿಲ್ಲೆಗಳಲ್ಲಿ ರೋಗವು ನಿವಾರಣಾ ಪೂರ್ವ ಹಂತದಲ್ಲಿದೆ.
ಗಮನಾರ್ಹ ರೋಗ?
ಆದಾಗ್ಯೂ ಮಲೇರಿಯಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದನ್ನು ಹೇಗೆ ಅಂದಾಜಿಸಬಹುದೆಂಬ ಪ್ರಶ್ನೆ ಉದ್ಭವಿಸುತ್ತದೆ. ದೇಶದ ಶೇ.70ರಷ್ಟು ಜನಸಂಖ್ಯೆ ಯು, ಖಾಸಗಿ ವೈದ್ಯರು ಅಥವಾ ಖಾಸಗಿ ಆಸ್ಪತ್ರೆಗಳ ಮೂಲಕ ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಿದ್ದು, ಅವರಲ್ಲಿ ಬಹುತೇಕ ಮಂದಿ ಯಾವುದೇ ರೋಗಕ್ಕೆ ಸಂಬಂಧಿಸಿ ಸರಕಾರಕ್ಕೆ ನಿಖರವಾದ ವರದಿಯನ್ನು ನೀಡುವುದಿಲ್ಲ.
2012ರಲ್ಲಿ ಕ್ಷಯರೋಗದ ಪ್ರಕರಣಗಳಲ್ಲಿ ಮಾಡಲಾದಂತೆ ಮಲೇರಿಯಾ ರೋಗ ಪ್ರಕರಣಗಳನ್ನು ಖಾಸಗಿ ವೈದ್ಯರು ಹಾಗೂ ಕ್ಲಿನಿಕ್ಗಳು ಪ್ರಕಟಿಸುವುದನ್ನು ಕಡ್ಡಾಯಗೊಳಿಸಲು ಸರಕಾರವು ಬಯಸಿದೆಯೆಂದು ರಾಷ್ಟ್ರೀಯ ಸಾಂಕ್ರಾಮಿಕ ನಿಯಂತ್ರಣ ಕಾರ್ಯಕ್ರಮದ ಹೆಚ್ಚುವರಿ ನಿರ್ದೇಶಕ ಡಾ.ಜಿ.ಎಸ್.ಸೋನಾಲ್ ಹೇಳುತ್ತಾರೆ.
ಆದರೆ ಏಮ್ಸ್ನ ಸಾಮುದಾಯಿಕ ಔಷಧಿ ಇಲಾಖೆಯ ಡಾ.ಸಂಜಯ್ ರಾಯ್ ಪ್ರಕಾರ ಕ್ಷಯರೋಗದ ಪ್ರಕರಣವನ್ನು ವರದಿ ಮಾಡುವಲ್ಲಿಯೂ ಖಾಸಗಿ ವಲಯದ ಕ್ಲಿನಿಕ್ಗಳಿಂದ ಲೋಪವಾಗಿದೆ. ಸರಕಾರವು ರೋಗ ಪತ್ತೆಯನ್ನು ಪ್ರಕಟಿಸದ ವೈದ್ಯರಿಗೆ ಕೆಲವು ರೀತಿಯ ದಂಡವನ್ನು ವಿಧಿಸದೆ ಇರುವ ತನಕ, ಯಾವುದೇ ಆದೇಶವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದೆಂದು ಅವರು ತಿಳಿಸಿದ್ದಾರೆ.
ಕೆಲವೊಂದು ಪರಿಹಾರಗಳು
ರೋಗವನ್ನು ವರದಿ ಮಾಡುವ ಜೊತೆಗೆ ಅದನ್ನು ನಿಯಂತ್ರಿಸುವ ಬಗ್ಗೆಯೂ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.ದೀರ್ಘಾವಧಿ ಬಾಳಿಕೆಯ ಸೊಳ್ಳೆಪರದೆಯನ್ನು ಜನಪ್ರಿಯಗೊಳಿಸುವುದೂ ಅವುಗಳಲ್ಲಿ ಸೇರಿದೆ. ಒಡಿಶಾ ಸೇರಿದಂತೆ ಈಶಾನ್ಯ ಭಾರತದ ಏಳು ರಾಜ್ಯಗಳಲ್ಲಿ ಮಲೇರಿಯಾದ ಉಪಟಳ ತೀವ್ರವಾಗಿರುವ ಜಿಲ್ಲೆಗಳ ನಿವಾಸಿಗಳಿಗೆ ಈ ಸೊಳ್ಳೆಪರದೆಗಳನ್ನು ವಿತರಿಸಲು ಸರಕಾರವು ನಿರ್ಧರಿಸಿದೆ.
2010ರಲ್ಲಿ ದೀರ್ಘಾವಧಿ ಬಾಳಿಕೆಯ ಸೊಳ್ಳೆಪರದೆಗಳನ್ನು ನಾವು ವಿತರಿಸಿದಾಗ, ಮಲೇರಿಯಾ ಪ್ರಕರಣಗಳ ಸಂಖ್ಯೆಯು ಹಠಾತ್ತನೆ ಅರ್ಧದಷ್ಟು ಇಳಿದವು’’ ಎಂದು ಒಡಿಶಾ ಸರಕಾರದ ರಾಜ್ಯ ಅಭಿಯಾನ ಅಧಿಕಾರಿ, ಡಾ.ಮದನ್ ಪ್ರಧಾನ್ ಹೇಳುತ್ತಾರೆ. ಆದರೆ ಮೂರು ವರ್ಷಗಳ ಬಳಿಕ ಈ ಸೊಳ್ಳೆಪರದೆಗಳ ಕಾರ್ಯಕ್ಷಮತೆ ಕುಸಿಯಿತು. ಹೀಗಾಗಿ ಈ ಯೋಜನೆಯು ವಿಫಲಗೊಂಡಿದ್ದರಿಂದ ಅದನ್ನು ಮುಂದುವ ರಿಸಲಾಗಲಿಲ್ಲವೆಂದು ಅವರು ತಿಳಿಸಿದ್ದಾರೆ.
ಈ ವಿಷಯವಾಗಿ ಇನ್ನು ಕೆಲವು ಸವಾಲುಗಳು ಕೂಡಾ ಎದುರಾಗಿವೆ. ಬುಡಕಟ್ಟು ಪ್ರದೇಶಗಳಲ್ಲಿ ಜನರು ಮನೆ ಹೊರಗೆ ಮಲಗುವುದರಿಂದ ಅವರು ಸೊಳ್ಳೆಪರದೆಗಳನ್ನು ಬಳಸುತ್ತಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಜನತೆ ವಿಭಿನ್ನ ಸಂಸ್ಕೃತಿ, ಆವಶ್ಯಕತೆಗಳು ಹಾಗೂ ಹವ್ಯಾಸಗಳನ್ನು ಹೊಂದಿದ್ದಾರೆಂದು ಭುವನೇಶ್ವರ ದಲ್ಲಿರುವ ಮಾನವಹಕ್ಕುಗಳ ಕುರಿತ ನಾಗರಿಕ ಸಮಾಜ ವೇದಿಕೆಯ ಸಂಚಾಲಕ ಧೀರೇಂದ್ರ ಪಂಡಾ ಹೇಳುತ್ತಾರೆ.
ಬುಡಕಟ್ಟು ಜನರ ಜೊತೆಗಿನ ಸಂವಹನದಲ್ಲಿನ ಕೊಂಡಿಯೊಂದು ತಪ್ಪಿದೆ. ಸೊಳ್ಳೆ ಪರದೆಯನ್ನು ಬಳಸುವುದಿಲ್ಲವೆಂಬ ಮಾತ್ರಕ್ಕೆ ಅವರು ಮಲೇರಿಯಾದಿಂದ ರಕ್ಷಣೆ ಯನ್ನು ಪಡೆಯಲು ಬಯಸುವುದಿಲ್ಲವೆಂದು ಅರ್ಥವಲ್ಲ. ಸರಕಾರವು ರೋದಿಂದ ರಕ್ಷಣೆಯ ಪಡೆಯುವ ವಿಧಾನಗಳನ್ನು ಅವರ ಸಂಸ್ಕೃತಿಯ ಜೊತೆ ಸಮ್ಮಿಳಿತಗೊಳಿಸುವ ಅಗತ್ಯವಿದೆಯೆಂದು ಪಂಡಾ ಹೇಳುತ್ತಾರೆ.
ಜಾಗತಿಕ ನಿಧಿಯ ಅನುದಾನದೊಂದಿಗೆ ಮಲೇರಿಯಾ ರೋಗದ ಅಧಿಕ ಅಪಾಯವಿರುವ ಜನಸಮುದಾಯಗಳಿಗೆ ಸೊಳ್ಳೆಪರದೆಗಳು ಇತ್ಯಾದಿಗಳನ್ನು ವಿತರಿಸುವ ಯೋಜನೆಯ ಭಾಗವಾಗಿದೆ.ಈ ಅಧಿಸೂಚನೆಯ ಹೊರತಾಗಿ, ಶೀಘ್ರ ರೋಗಪತ್ತೆ, ಚಿಕಿತ್ಸೆಯ ಮೇಲೆ ನಿಗಾವಿರಿಸುವುದು,ಜಲಸಂಬಂಧಿ ರೋಗ ನಿಯಂತ್ರಣ ಕ್ರಮಗಳು ಮೊದಲಿನಂತೆಯೇ ಉಳಿದುಕೊಂಡಿವೆ. ‘‘ದೇಶದಲ್ಲಿ ಸೊಳ್ಳೆ ಸಂತಾನೋ ತ್ಪತ್ತಿ ತಾಣಗಳ ಸಂಖ್ಯೆಯನ್ನು ನಾವು ಕಡಿಮೆಗೊಳಿಸಬೇಕಾಗಿದೆಯೆಂದು ಡಾ. ಸೋನಾಲ್ ಹೇಳುತ್ತಾರೆ. ‘‘ಇದೊಂದು ಅಧಿಕ ಸಂಪನ್ಮೂಲ ಆಧಾರಿತ ಕೆಲಸವಾಗಿದೆ. ನೀರು ಸಂಗ್ರಹವಾಗುವ ಹೊಂಡಗಳನ್ನು ನಾವು ಮುಚ್ಚಬೇಕಾಗಿದೆ ಹಾಗೂ ಒಳಚರಂಡಿಯನ್ನು ಸುಸ್ಥಿತಿಯಲ್ಲಿಡಬೇಕಾಗಿದೆ. ಗ್ರಾಮ ಆಧಾರಿತ ಸಮಿತಿಗಳು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ), ಸ್ವಚ್ಛ ಭಾರತ ಅಭಿಯಾನ ಯೋಜನೆಗಳನ್ನು ಪರಸ್ಪರ ಸಮ್ಮಿಳಿತಗೊಳಿಸಬೇಕಾಗಿದೆ’ ಎಂದವರು ಅಭಿಪ್ರಾಯಿಸುತ್ತಾರೆ.
2010ರಲ್ಲಿ ಪ್ರಸಿದ್ಧ ವೈದ್ಯಕೀಯ ಪತ್ರಿಕೆ ‘ಲ್ಯಾನ್ಸೆಟ್’ ಮಲೇರಿಯಾ ನಿವಾರಣೆ ಬಗ್ಗೆ ಪ್ರಕಟಿಸಿದ ವಿಶೇಷ ಸಂಚಿಕೆಯೊಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಂತಹ ಅಂತಾರಾಷ್ಟ್ರೀಯ ಏಜೆನ್ಸಿಗಳು ಮಲೇರಿಯಾ ನಿವಾರಣೆ ಬಗ್ಗೆ ನೀಡಿರುವ ಕರೆ ಎಷ್ಟರ ಮಟ್ಟಿಗೆ ಕಾರ್ಯಗತಗೊಳ್ಳಲಿದೆಯೆಂಬ ಬಗ್ಗೆ ತನ್ನ ಸಂದೇಹಗಳನ್ನು ವ್ಯಕ್ತಪ ಡಿಸಿವೆ. ಇಟಲಿ ಹಾಗೂ ಅಮೆರಿಕದಂತಹ ದೇಶಗಳಲ್ಲಿಯೂ ಈಗಲೂ ಆಗಾಗ್ಗೆ ಮಲೇರಿಯಾ ಪ್ರಕರಣಗಳು ವರದಿಯಾಗುತ್ತಿರುತ್ತವೆ. 1993 ಹಾಗೂ 2009ರ ನಡುವೆ ಅಮೆರಿಕದಲ್ಲಿ 12 ಮಲೇರಿಯಾ ಪ್ರಕರಣಗಳು ವರದಿಯಾಗಿವೆ.
ಭಾರತದಲ್ಲಿ ಸಂಪತ್ತು ಹಾಗೂ ಅಭಿವೃದ್ಧಿಯಲ್ಲಿ ಹೆಚ್ಚಳವಾಗಿರುವ ಹೊರತಾ ಗಿಯೂ,ಈಗಲೂ ದೇಶದ ಬೃಹತ್ ಪ್ರಮಾಣದ ಜನಸಂಖ್ಯೆಯು ಮಲೇರಿಯಾ ರೋಗದ ಅಪಾಯವನ್ನು ಎದುರಿಸುತ್ತಿದೆ ಹಾಗೂ ನಗರಪ್ರದೇಶದಲ್ಲಿ ಮಲೇರಿಯಾ ಹರಡುವಿಕೆಯು ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಇವೆಲ್ಲವುಗಳಿಂದಾಗಿ ಇತರ ಏಶ್ಯನ್ರಾಷ್ಟ್ರಗಳಿಗಿಂತ ಮಲೇರಿಯಾ ನಿವಾರಣೆ ಯೋಜನೆಯ ಅನುಷ್ಠಾನ ಭಾರತದಲ್ಲಿ ಹೆಚ್ಚು ಕಠಿಣವೆನಿಸಿದೆ.
ಭಾರತದ ಪರಿಸರವು, ಅನಾಫಿಲೀಸ್ ಸೊಳ್ಳೆ (ಮಲೇರಿಯಾ ವೈರಸ್ ಹರಡುವ ಸೊಳ್ಳೆ)ಯ ಸಂತಾನೋತ್ಪತ್ತಿ ತಾಣಗಳನ್ನು ನಾಶಪಡಿಸುವುದು ಹೆಚ್ಚು ಕಷ್ಟಕರವಾಗುವಂತೆ ಮಾಡಿದೆಯೆಂದು ಡಾ.ರಾಯ್ ಹೇಳುತ್ತಾರೆ. ಇದನ್ನು ಸಾಧಿಸಬೇಕಾದರೆ ನಾವು ಪ್ರತಿ ವಲಯದಲ್ಲಿಯೂ ಸುಧಾರಣೆಯನ್ನು ತರುವ ಅಗತ್ಯವಿದೆ. ಆದರೆ ಕನಿಷ್ಠ ಮುಂದಿನ 10 ವರ್ಷಗಳವರೆಗೆ ಈ ಯೋಜನೆಯು ಕಾರ್ಯಗತಗೊಳ್ಳುವುದೆಂದು ನನಗನಿಸುವುದಿಲ್ಲ ಎಂದವರು ಅಭಿಪ್ರಾಯಿಸುತ್ತಾರೆ.
ಕೃಪೆ: scroll.in