ವೈದ್ಯಕೀಯ ವರದಿಗಳು ರೋಗಿಯ ಹಕ್ಕು
ವೆದ್ಯಕೀಯ ಪರೀಕ್ಷಾ ವರದಿಗಳು ರೋಗಿಯ ಹಕ್ಕೇ? ಎಂಬ ಈ ಪ್ರಶ್ನೆ ನಿಮಗೆ ವಿಚಿತ್ರವಾಗಿ ಕಾಣಬ ಹುದು. ಇಂದು ನಮ್ಮ ನಡುವಿನ ಕೆಲವು ವೈದ್ಯಕೀಯ ಸಂಸ್ಥೆಗಳಲ್ಲಿ ರೋಗಿಯ ಪರೀಕ್ಷಾ ವರದಿಗಳನ್ನು ಆತನಿಗೆ ನಿರಾಕರಿಸಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟವರನ್ನು ಪ್ರಶ್ನಿಸಿದರೆ ಅದು ನಮ್ಮ ಡಾಕ್ಯುಮೆಂಟೇಶನ್‌ಗೆ ಬೇಕಾಗುತ್ತದೆ ಎಂಬ ವಿಚಿತ್ರ ಉತ್ತರಗಳನ್ನು ನೀಡಲಾಗುತ್ತದೆ. ಅಲ್ಲಾ ಸ್ವಾಮೀ ನಿಮಗೆ ಡಾಕ್ಯೂಮೆಂಟೇಶನ್ ಮಾಡಲು ರೋಗಿಗಳು ದುಡ್ಡು ಕೊಟ್ಟು ಪರೀಕ್ಷಿಸಬೇಕೇ...?
ಡಾಕ್ಯುಮೆಂಟೇಷನ್ ಎಂಬುವುದು ಕೇವಲ ನೆಪ ಮಾತ್ರ. ಇದರ ಹಿಂದೆ ಒಂದು ಕುಯುಕ್ತಿಯಿದೆ. ಆತನ ವರದಿಗಳನ್ನು ನಾವು ಆತನಿಗೆ ನೀಡಿದರೆ ತಾನೆ ಆತ ಹೊರಗಿನ ವೈದ್ಯರನ್ನು ಸಂಪರ್ಕಿಸುವುದು. ಯಾವುದೇ ವೈದ್ಯಕೀಯ ಸಂಸ್ಥೆ ನಡೆಸುವವರು ಒಂದು ವಿಚಾರವನ್ನು ಸ್ಪಷ್ಟವಾಗಿ ನೆನಪಿಟ್ಟುಕೊಳ್ಳಬೇಕು. ರೋಗಿಗಳಿಗೂ ಅವರದ್ದೇ ಆದ ಹಕ್ಕುಗಳಿರುತ್ತವೆ. ರೋಗಿಯೊಬ್ಬನ ಪರೀಕ್ಷಾ ವರದಿಗಳು ಆತನ ಹಕ್ಕೇ ಹೊರತು ಅದನ್ನು ಪರೀಕ್ಷಿಸಿದವನ ಸೊತ್ತಾಗುವುದಿಲ್ಲ. ಸಂಸ್ಥೆಯೊಂದಕ್ಕೆ ಡಾಕ್ಯುಮೆಂಟೇಷನ್ ಬೇಕೆಂದರೆ ಅವರು ಅದರ ಪ್ರತಿಯೊಂದನ್ನು ಇಟ್ಟುಕೊಳ್ಳಬಹುದೇ ಹೊರತು ರೋಗಿಯ ವರದಿಗಳನ್ನು ನಿರಾಕರಿಸಲು ಬರುವುದಿಲ್ಲ ಹಾಗೆ ಮಾಡುವುದು ರೋಗಿಯ ಹಕ್ಕಿನ ಉಲ್ಲಂಘನೆಯಾಗುತ್ತದೆ. ಈ ಪ್ರಶ್ನೆಯನ್ನು ನಾನು ವರದಿ ನಿರಾಕರಿಸಿದ ಸಂಸ್ಥೆಗಳ ಮುಂದೆ ಇಟ್ಟಾಗ ಅವರು ನನಗೆ ನೀಡಿದ ಉತ್ತರ ಬಹಳ ಬಾಲಿಶವಾದುದು. ರೋಗಿಗಳ ಕೈಯಲ್ಲಿ ಅವರ ಪರೀಕ್ಷಾ ವರದಿಗಳನ್ನು ನೀಡಿದರೆ ಅವರಿಗೆ ಅದನ್ನು ಅರ್ಥೈಸಲು ಸಾಧ್ಯವೇ......? ಇಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ನಿಮ್ಮ ಸಂಸ್ಥೆಯ ವೈದ್ಯರು ಬಿಟ್ಟರೆ ಬೇರೆ ಯಾವ ವೈದ್ಯರಿಗೂ ವರದಿಯನ್ನು ಅರ್ಥೈಸಲು ಸಾಧ್ಯವಿಲ್ಲವೇ......? ಅವರೆಲ್ಲಾ 6 ವರ್ಷ, 9 ವರ್ಷ ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಕಲಿತದ್ದೇನು. ಮಣ್ಣು ಹೊರುವುದನ್ನೇ.? ಕೆಲವೊಂದು ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಯಿದ್ದ ಸಂದರ್ಭ ರೋಗಿಯ ಕೈಗೆ ಆತನ ವೈದ್ಯಕೀಯ ವರದಿಗಳನ್ನು ನೀಡಿದಾಗ ರೋಗಿಯು ಅನಾಹುತ ಮಾಡಿಕೊಳ್ಳದಿರಲೆಂದು ನೇರವಾಗಿ ಆತನ ಕೈಯಲ್ಲಿ ವೈದ್ಯಕೀಯ ವರದಿ ನೀಡುವುದು ಸಮಂಜಸವಲ್ಲ. ಇದನ್ನು ವೈದ್ಯಕೀಯ ಸಂಸ್ಥೆಯೊಂದನ್ನು ನಡೆಸುವವನಾಗಿ ನಾನು ಒಪ್ಪಿಕೊಳ್ಳುತ್ತೇನೆ. ಇಂತಹ ಸಂದರ್ಭಗಳ ಹೊರತಾಗಿ ಯಾವತ್ತೂ ವೈದ್ಯಕೀಯ ವರದಿಗಳನ್ನು ರೋಗಿಗೆ ನಿರಾಕರಿಸುವಂತಿಲ್ಲ.
ಕೆಲವು ವೈದ್ಯಕೀಯ ಕಾಲೇಜುಗಳಲ್ಲಿ ರೋಗಿಯು ತನ್ನ ಪರೀಕ್ಷಾ ವರದಿ ಕೇಳಿದರೆ ಇಲ್ಲೇ ವೈದ್ಯರಿದ್ದಾರೆ. ನೀವು ಇಲ್ಲೇ ಚಿಕಿತ್ಸೆ ಪಡೆದುಕೊಳ್ಳಿ ಎಂದು ನಿರ್ಬಂಸಲಾಗುತ್ತದೆ. ರೋಗಿಯೊಬ್ಬನಿಗೆ ತನಗೆ ಬೇಕಾದ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಸ್ವಾತಂತ್ರ್ಯವಿಲ್ಲವೇ......?
ಇನ್ನು ಕೆಲವು ಸಂಸ್ಥೆಗಳು ನಡೆಸುವ ಉಚಿತ ಶಿಬಿರಗಳಲ್ಲಿ ಪರೀಕ್ಷೆ ಮಾಡಿಸಿದಾಗ ಆತನ ಪರೀಕ್ಷಾ ವರದಿಗಳನ್ನು ಆತನಿಗೆ ನಿರಾಕರಿಸಲಾಗುತ್ತದೆ. ಆತ ಆ ಕುರಿತಂತೆ ಪ್ರಶ್ನಿಸಿದರೆ ರಿಪೋರ್ಟ್ ಕೇಳುವುದಕ್ಕೆ ನೀನೇನೂ ದುಡ್ಡು ಕೊಟ್ಟು ಪರೀಕ್ಷಿಸಿಲ್ಲ ಎಂದು ರೋಗಿಯನ್ನು ದಬಾಯಿಸಲಾಗುತ್ತದೆ. ಇದು ಕೇವಲ ರೋಗಿಯ ಹಕ್ಕುಗಳ ಉಲ್ಲಂಘನೆ ಮಾತ್ರವಲ್ಲ, ಮಾನವ ಹಕ್ಕುಗಳ ಉಲ್ಲಂಘನೆಯೂ ಹೌದು. ಒಮ್ಮೆ ವ್ಯಕ್ತಿಯೊಬ್ಬನ ದೇಹವನ್ನೋ, ಆತನ ದೇಹದ ಯಾವುದೇ ಭಾಗವನ್ನೋ, ಜೀವದ್ರವವನ್ನೋ ಉಚಿತ ಪರೀಕ್ಷೆಗೆಂದು ಬಳಸಿದರೆ ಅದರ ಸಂಪೂರ್ಣ ಪರೀಕ್ಷಾ ವರದಿಯನ್ನು ಪಡೆಯುವ ಹಕ್ಕು ಆ ವ್ಯಕ್ತಿಗಿದೆ.
ಇನ್ನೊಂದು ಉದಾಹರಣೆಯನ್ನು ನೋಡೋಣ. ಯಾವುದೇ ವೈದ್ಯಕೀಯ ಸಂಸ್ಥೆಯೊಂದರಲ್ಲಿ ರೋಗಿಯೋರ್ವ ಪರೀಕ್ಷೆ ಮಾಡಿಸಿದ ಬಳಿಕ ಆ ಸಂಸ್ಥೆಯವರು ನೀಡಿದ ವರದಿಯ ಪ್ರಕಾರ ವೈದ್ಯರು ರೋಗಿಗೆ ಶಸ್ತ್ರಕ್ರಿಯೆಯ ಅಗತ್ಯವಿದೆ ಎಂದು ಹೇಳುತ್ತಾರೆ. ಅಂತಹ ಸಂದರ್ಭದಲ್ಲಿ ರೋಗಿಗೆ ಬೇರೆ ವೈದ್ಯರ, ಆತನ ಕುಟುಂಬ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದೆಣಿಸುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯನಿಗೆ ರೋಗಿಯ ಪರೀಕ್ಷಾ ವರದಿಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಪರೀಕ್ಷೆ ನಡೆಸಿದ ಸಂಸ್ಥೆಗಳು ರೋಗಿಯ ವರದಿಗಳನ್ನು ನೀಡದಿದ್ದರೆ ರೋಗಿಗೆ ಬೇರೆ ವೈದ್ಯರ ಅಥವಾ ಆತನ ಕುಟುಂಬ ವೈದ್ಯರ ಸಲಹೆ ಪಡೆದುಕೊಳ್ಳಲು ಅವಕಾಶ ಇಲ್ಲದಂತಾಗುತ್ತದೆ.
ಕೆಲವು ವೈದ್ಯಕೀಯ ಕಾಲೇಜುಗಳು ಹೊರಗಿನ ವೈದ್ಯರು ಪರೀಕ್ಷೆಗೆ ಕಳುಹಿಸಿದ ರಿಕ್ವಿಸಿಷನ್ ಪಾರ್ಮುಗಳನ್ನು ನೋಡಿದ ತಕ್ಷಣ ನಮ್ಮ ಸಂಸ್ಥೆಯಲ್ಲೇ ಚಿಕಿತ್ಸೆ ಪಡೆಯುವುದಾದರೆ ಮಾತ್ರ ಇಲ್ಲಿ ಉನ್ನತ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂಬ ಪೂರ್ವಶರತ್ತುಗಳನ್ನು ವಿಸುತ್ತಾರೆ. ಇದೂ ರೋಗಿಯ ಹಕ್ಕುಗಳ ಉಲ್ಲಂಘನೆ. ಖಾಸಗಿ ಸಂಸ್ಥೆಯೇ ಆಗಿದ್ದರೂ ಲಭ್ಯವಿರುವ ವೈದ್ಯಕೀಯ ಪರೀಕ್ಷೆಗಳನ್ನೋ, ಚಿಕಿತ್ಸೆಯನ್ನೋ ನಿರಾಕರಿಸುವಂತಿಲ್ಲ. ಒಟ್ಟಿನಲ್ಲಿ ಸಂಸ್ಥೆ ನಮ್ಮದೇ ಇಲ್ಲಿ ನಾವೇ ಅಂತಿಮ ಎನ್ನುವಂತಹ ಧೋರಣೆಗಳು ಮೆಡಿಕಲ್ ಎಥಿಕ್ಸ್‌ಗೆ ವಿರುದ್ಧ. ರೋಗಿಯೆಂದರೆ ಪ್ರಯೋಗಪಶುವಲ್ಲ ಆತನಿಗೂ ಹಕ್ಕುಗಳಿವೆ.