ಮರ್ಯಾದೆಗೇಡು ಹತ್ಯೆಯ ಹಿನ್ನಲೆಯಲ್ಲಿ ಅಂಬೇಡ್ಕರ್ ವಿಚಾರಗಳು
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಂದ್ರವಾಡಿ ಎಂಬ ಗ್ರಾಮದಲ್ಲಿ ಕಳೆದ ಎಪ್ರಿಲ್ 11ರಂದು ಮಧುಕುಮಾರಿ ಎಂಬ ಯುವತಿಯ ಹತ್ಯೆಯಾಗಿದೆ. ಸ್ವತಃ ಆಕೆಯ ತಾಯಿ, ತಂದೆ ಮತ್ತು ಸಹೋದರ ಮೂವರು ಸೇರಿಕೊಂಡೇ ವಿಷವುಣಿಸಿ ಆಕೆಯ ಹತ್ಯೆಗೈದಿದ್ದಾರೆ. ಮೂವರ ಬಂಧನದ ನಂತರ ಪೊಲೀಸರ ತನಿಖೆಯಿಂದ ತಿಳಿದು ಬಂದಿರುವುದೇನೆಂದರೆ ಅದೊಂದು ಮರ್ಯಾದೆಗೇಡು ಹತ್ಯೆ ಎಂಬುದು. ಅನ್ಯಜಾತಿಯ ಯುವಕನೋರ್ವನನ್ನು ಪ್ರೀತಿಸುತ್ತಿದ್ದ ಲಿಂಗಾಯತ ಸಮಾಜಕ್ಕೆ ಸೇರಿದ ಮಧುಕುಮಾರಿಗೆ ಸ್ವಜಾತಿಯ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿತ್ತು. ಅದಕ್ಕೆ ಆಕೆ ಒಪ್ಪಲಿಲ್ಲ, ಆಕೆಗೆ ಆಕೆಯ ತಂದೆ, ತಾಯಿ ಮತ್ತು ಸಹೋದರ ಮೂವರು ಸೇರಿ ಮಾವಿನಹಣ್ಣಿನ ಜ್ಯೂಸ್‌ನಲ್ಲಿ ಕೀಟನಾಶಕ ಹಾಕಿ, ಕುಡಿಸಿದರು. ಆಕೆ ಹೊಟ್ಟೆ ನೋವು ಎಂದು ಒದ್ದಾಡುತ್ತಿದ್ದರೂ ಆಸ್ಪತ್ರೆಗೆ ಕರೆದೊಯ್ಯದೆ ಸತತ ಎರಡು ಗಂಟೆ ಸಬೂಬು ಹೇಳಿ ಸತಾಯಿಸಿ ಕಡೆಗೆ ಆಕೆಯ ಪ್ರಾಣಪಕ್ಷಿ ಹಾರಿಹೋಗುವವರೆಗೂ ಕಾದರು.
ಸಂಬಂಕರಿಗೆ ಹೊಟ್ಟೆನೋವಿನಿಂದ ಸತ್ತಳೆಂದು ಸುಳ್ಳು ಹೇಳಿ ಸಾಕ್ಷಿ ಸಿಗಬಹುದೆಂದು ಹೂಳುವ ಬದಲು ಸುಟ್ಟುಹಾಕಿದ್ದು ಘಟನೆಯ ಬೀಭತ್ಸತೆಯನ್ನು, ಕೊಂದವರ ಕ್ರೂರ ಮನಸ್ಸುಗಳನ್ನು ತೆರೆದಿಡುತ್ತದೆ. ಇದೇ ಮಾದರಿಯ ಮತ್ತೊಂದು ಘಟನೆಯಲ್ಲಿ, ಈ ಘಟನೆಯ ಕೆಲವೇ ದಿನಗಳ ಹಿಂದೆ (ಎಪ್ರಿಲ್ 3) ಮಂಡ್ಯ ಜಿಲ್ಲೆ ತಿಮ್ಮನಹೊಸೂರು ಗ್ರಾಮದಲ್ಲಿ ಒಕ್ಕಲಿಗ ಯುವತಿ ದಲಿತ ಹುಡುಗನೊಬ್ಬನ ಪ್ರೇಮಪ್ರಕರಣದಲ್ಲೂ ಹುಡುಗಿಯ ತಂದೆ, ತಾಯಿ, ಸೋದರಮಾವ ಮೂವರು ಸೇರಿಕೊಂಡು ಯುವತಿಗೆ ಭೀಕರವಾಗಿ ಥಳಿಸಿ ಆಕೆಯ ಕುತ್ತಿಗೆ ಮೇಲೆ ಕಾಲಿಟ್ಟು ಆಕೆಯನ್ನು ತುಳಿದು ಸಾಯಿಸುತ್ತಾರೆ...! ಈ ಘಟನೆಗಳ ಹಿನ್ನೆಲೆಯಲ್ಲಿ ಹೆತ್ತ ಅಪ್ಪ-ಅಮ್ಮ, ಸೋದರಮಾವ, ರಕ್ತ ಹಂಚಿಕೊಂಡು ಹುಟ್ಟಿದ ಸಹೋದರರೇ ಇಂತಹ ಕೃತ್ಯ ಎಸಗುತ್ತಾರೆ ಎಂದರೆ ಅವರ ಆಳದಲ್ಲಿ ಬೇರುಬಿಟ್ಟಿರುವ ಜಾತಿ ಮತ್ತು ಅದರ ಸಂಬಂತ ಮರ್ಯಾದೆ ಎಂಥದ್ದು ಎಂಬುದರ ಅರಿವು ಎಂಥವರಿಗಾದರೂ ಆಗದೆ ಇರದು.
ಬರೆಯುವ ಕೈ ಕೂಡ ಒಂದರೆಕ್ಷಣ ತಡವರಿಸುತ್ತದೆ ಎಂದರೆ ಇದರ ಭೀಕರತೆ ಆ ಮೂಲಕ ಮರ್ಯಾದೆಗೇಡು ಹತ್ಯೆ ಸಮಾಜಕ್ಕೆ ಸಾರಬಹುದಾದ ಸಂದೇಶದ ಆತಂಕ... ನೆನೆಸಿಕೊಂಡರೆ ಮೈ ಜುಂ ಎನಿಸುತ್ತದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುವುದು ಅದರಲ್ಲೂ ಅಂತರ್ಜಾತಿ ವಿವಾಹದ ಬಗೆಗಿನ ಅವರ ಚಿಂತನೆ ಹಂಚಿಕೊಳ್ಳುವುದು ಇಲ್ಲಿ ಸೂಕ್ತ ಎನಿಸುತ್ತದೆ. ಅಂಬೇಡ್ಕರ್ ಹೇಳುತ್ತಾರೆ ಜಾತಿಯ ನಿರ್ಮೂಲನೆಗಿರುವ ಮತ್ತೊಂದು ಕ್ರಿಯಾಯೋಜನೆ ಎಂದರೆ ಅಂತರ್ಜಾತಿ ಸಹಭೋಜನಗಳನ್ನು ಏರ್ಪಡಿಸುವುದು. ಆದರೆ ನನ್ನ ದೃಷ್ಟಿಯಲ್ಲಿ ಇದೂ ಕೂಡ ಆಸಮರ್ಪಕ ಪರಿಹಾರವಾಗುತ್ತದೆ. ಯಾಕೆಂದರೆ ಅಂತರ್ಜಾತಿ ಭೋಜನಗಳನ್ನು ನಡೆಸುವ ಅದೆಷ್ಟೋ ಜಾತಿಗಳಿವೆ. ಆದರೆ ಇದರಿಂದ ಕಂಡುಬಂದಿರುವ ಸಾಮಾನ್ಯ ಅನುಭವವೆಂದರೆ ಜಾತಿ ಪದ್ಧತಿಯನ್ನು ಮತ್ತು ಜಾತೀಯತೆಯ ಅಂತಃಸತ್ವವನ್ನು ಕೊಲ್ಲುವುದರಲ್ಲಿ ಅಂತರ್ಜಾತಿ ಸಹಭೋಜನ ಯಶಸ್ಸು ಕಾಣುತ್ತಿಲ್ಲ ಎಂಬುದು. ಆ ಕಾರಣಕ್ಕಾಗಿ ನನಗೆ ಮನವರಿಕೆಯಾಗುತ್ತಿರುವುದೆಂದರೆ (ಜಾತಿಪದ್ಧತಿ ನಿರ್ಮೂಲನೆಗೆ) ಪರಿಹಾರ ಅಂತರ್ಜಾತಿ ವಿವಾಹ ಎಂಬುದು (ಅಂಬೇಡ್ಕರರ ಬರಹಗಳು, ಇಂಗ್ಲಿಷ್ ಸಂ.1, ಪು.67).
ಅಂತರ್ಜಾತಿ ವಿವಾಹ, ಅಂಬೇಡ್ಕರರು ನೀಡುತ್ತಿರುವ ಈ ಸಲಹೆ ಅದು ದಲಿತರಿಗಲ್ಲ ಅಥವಾ ಅಸ್ಪಶ್ಯತೆ ಹೋಗಲಾಡಿಸಲೂ ಅಲ್ಲ ಎಂಬುದು ಇಲ್ಲಿ ಆವಶ್ಯಕವಾಗಿ ತಿಳಿದುಕೊಳ್ಳಬೇಕಾದ ವಿಚಾರ. ಈ ನಿಟ್ಟಿನಲ್ಲಿ ಅಂಬೇಡ್ಕರರು ಅಂತರ್ಜಾತಿ ವಿವಾಹದ ಈ ವಿಚಾರ ಹೇಳಿರುವುದು, ಸಲಹೆ ನೀಡಿರುವುದು ಸವರ್ಣೀಯ ಅಥವಾ so calledಮೇಲ್ಜಾತಿ ಹಿಂದೂಗಳಿಗೆ. ಯಾಕೆಂದರೆ ಮೇಲ್ಕಾಣಿಸಿದ ಅಂಬೇಡ್ಕರರ ವಿಚಾರಗಳು ಕಂಡುಬರುವುದು ಜಾತಿ ನಿರ್ಮೂಲನೆ ಎಂಬ ಅವರ ಸುಪ್ರಸಿದ್ಧ ಕೃತಿಯಲ್ಲಿ. ಈ ಕೃತಿ ಅಂಬೇಡ್ಕರರು ಬರೆದದ್ದು 1936ರಲ್ಲಿ. ಲಾಹೋರಿನ ಜಾತಿಪಥ ನಿರ್ಮೂಲನ ಮಂಡಳಿ ಎಂಬ ಸವರ್ಣೀಯ ಸಂಸ್ಥೆ ಅಂಬೇಡ್ಕರರನ್ನು ಜಾತಿಪದ್ಧತಿ ನಿರ್ಮೂಲನೆಯ ಚಿಂತನೆಯ ಸಮ್ಮೇಳನವೊಂದರ ಅಧ್ಯಕ್ಷತೆ ವಹಿಸಬೇಕೆಂದು ಆಹ್ವಾನಿಸಿದಾಗ, ಸಿದ್ಧತೆಯ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಅಂಬೇಡ್ಕರರು ಅಧ್ಯಕ್ಷೀಯ ಭಾಷಣ ತಯಾರಿಸಿಟ್ಟುಕೊಂಡರಾದರೂ, ಅಂಬೇಡ್ಕರರ ಆ ಸಿದ್ಧಪಡಿಸಿದ ಭಾಷಣ ಸವರ್ಣೀಯ ಆ ಮಂಡಳಿಗೆ ಒಪ್ಪಿಗೆಯಾಗದ ಕಾರಣ ಮಂಡಳಿ ಜಾತಿನಿರ್ಮೂಲನೆಯ ಮಹತ್ವದ ಆ ಸಮ್ಮೇಳನವನ್ನೇ ರದ್ದುಪಡಿಸಿತು! ಆದರೇನಂತೆ? ತಮ್ಮ ಆ ಸಿದ್ಧಪಡಿಸಿದ, ಹಿಂದೂಗಳಿಗೆ ಸಲಹೆ ನೀಡುವ ಆ ಭಾಷಣವನ್ನು Annihilation of Caste (ಜಾತಿ ನಿರ್ಮೂಲನೆ) ಹೆಸರಿನಲ್ಲಿ ಅಂಬೇಡ್ಕರರು ಸ್ವಂತ ಖರ್ಚಿನಲ್ಲಿ ಪ್ರಕಟಿಸಿಯೇ ಬಿಟ್ಟರು! ಈ ನಿಟ್ಟಿನಲ್ಲಿ ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದ್ದೆಂದರೆ ಅಂಬೇಡ್ಕರರು ಸಿದ್ಧಪಡಿಸಿದ ಆ ಭಾಷಣ ಮತ್ತು ಅವರು ನೀಡಿದ ಅಂತರ್ಜಾತಿ ವಿವಾಹದ ಆ ಸಲಹೆ ದಲಿತರಿಗಲ್ಲ, ಹಿಂದೂಗಳಿಗೆ ಎಂಬುದು.
ಅಂದರೆ ಹಿಂದೂಗಳಲ್ಲಿ ಬರುವ ಬ್ರಾಹ್ಮಣರು ಲಿಂಗಾಯತರನ್ನು ಮದುವೆಯಾಗಬೇಕು, ಲಿಂಗಾಯತರು ಒಕ್ಕಲಿಗರನ್ನು, ಒಕ್ಕಲಿಗರು ಕುರುಬರನ್ನು, ನಾಯಕರು ಕುರುಬರನ್ನು, ಕುರುಬರು ನಾಯಕರನ್ನು ಹೀಗೆ... ಯಾಕೆ ಹೀಗೆ? ಇದರಿಂದ ರಕ್ತದ ಮಿಲನವಾಗುತ್ತದೆ ಎಂದು. ಅಂಬೇಡ್ಕರರ ಮಾತುಗಳಲ್ಲೇ ಹೇಳುವುದಾದರೆ ರಕ್ತದ ಮಿಲನ ಮಾತ್ರ ಬಂಧು-ಬಳಗ ಎಂಬ ಭಾವನೆ ಸೃಷ್ಟಿಸಲು ಸಾಧ್ಯ. ಮತ್ತು ಹೀಗೆ ಸಮುದಾಯಗಳ ನಡುವೆ ನಂಟು ಬೆಳೆಯದಿದ್ದರೆ, ರಕ್ತ ಸಂಬಂ ಭಾವ ಪ್ರಾಮುಖ್ಯತೆ ಪಡೆಯದಿದ್ದರೆ ಜಾತಿಯಿಂದ ಸೃಷ್ಟಿಯಾಗಿರುವ ಪ್ರತ್ಯೇಕತೆಯ ಈ ಭಾವ ನಾಶವಾಗುವುದೇ ಇಲ್ಲ. ಆದ್ದರಿಂದ ಹಿಂದೂಯೇತರರ ಜೀವನಕ್ಕಿಂತ ಹಿಂದೂಗಳ ಸಾಮಾಜಿಕ ಜೀವನದಲ್ಲಿ ಅಂತರ್ಜಾತಿ ವಿವಾಹ ಅತ್ಯಂತ ಶಕ್ತಿಯುತವಾದ, ಅತ್ಯಗತ್ಯವಾದ ಅಂಶ ಎಂಬುದಿಲ್ಲಿ ಗಮನಾರ್ಹ. ಯಾಕೆಂದರೆ ಒಂದು ಸಮಾಜ ಬೇರೆಲ್ಲ ಬಂಧಗಳಿಂದ ಒಗ್ಗೂಡಲ್ಪಟ್ಟಿದ್ದರೆ ಅಲ್ಲಿ ವಿವಾಹ ಜೀವನದ ಒಂದು ಸಾಮಾನ್ಯ ಘಟನೆಯಾಗುತ್ತದೆ. ಆದರೆ ಅದೇ ಸಮಾಜ ಭೇದಭಾವ ಗಳಿಂದ ಕತ್ತರಿಸಲ್ಪಟ್ಟಿದ್ದರೆ ಅಂತಹ ಸಂದರ್ಭದಲ್ಲಿ ವಿವಾಹ ಸಂಬಂಧ ಪರಸ್ಪರ ಬೆಸೆಯುವ ಶಕ್ತಿಯಾಗುತ್ತದೆ, ತುರ್ತಿನ ಅಗತ್ಯವೂ ಆಗುತ್ತದೆ.
ಅಂದಹಾಗೆ ಅಂಬೇಡ್ಕರರ ಈ ವಿಚಾರಗಳನ್ನು ಮರ್ಯಾದೆಗೇಡು ಹತ್ಯೆಯ ಈ ಹಿನ್ನೆಲೆಯಲ್ಲಿ ಚಿಂತಿಸುವುದಾದರೆ ವಿವಾಹ, ಅದರಲ್ಲೂ ಅಂತರ್ಜಾತಿ ವಿವಾಹ ಅದು ಪರಸ್ಪರ ಸಮಾಜಗಳನ್ನು ಬೆಸೆಯುವ ಶಕ್ತಿ. ಬೆಸೆಯುವ ಶಕ್ತಿ ಎಂದರೆ ಅಂತಹ ಸಮಾಜ ಈಗಾಗಲೇ ಛಿದ್ರಛಿದ್ರವಾಗಿದೆ ಎಂದರ್ಥ. ಸಮಾಜಗಳು ಜಾತಿಯ ಕಾರಣಕ್ಕೆ ಛಿದ್ರಛಿದ್ರವಾಗಿರಬಹುದು. ಆದರೆ ಮನುಷ್ಯರು ಮತ್ತವರ ಮನಸ್ಸುಗಳು ಎಲ್ಲಾದರು ಒಂದಾಗಬಾರದು ಎಂಬ ನಿಯಮವೇನಾದರೂ ಇದೆಯಾ? ಪ್ರೀತಿ-ಪ್ರೇಮ ಚಿಗುರೊಡೆಯಬಾರದು ಎಂದು ಎಲ್ಲಾದರು ಕಾನೂನಿದೆಯಾ? ಈ ನಿಟ್ಟಿನಲ್ಲಿ ಭಾರತದ ಹಿಂದೂ ಸಮಾಜದ ವಿವಿಧ ಜಾತಿಗಳ ಜನರು, ಅದರಲ್ಲೂ ಹೆಣ್ಣುಮಕ್ಕಳ ಪೋಷಕರು ಅಂಬೇಡ್ಕರರ ವಿವಾಹ ಕುರಿತ ಈ ವಿಚಾರಗಳನ್ನು ಅವರನ್ನು ಅಸ್ಪಶ್ಯತೆಯ ಭಾವದಿಂದ ನೋಡುವುದನ್ನು ಬಿಟ್ಟು ಮುಕ್ತ ಮನಸ್ಸಿನಿಂದ ಅರಿಯಬೇಕು. ಜಾತಿಯ ವಾಸ್ತವ, ಅದರ ಬಂಧಗಳು, ಭೇದಗಳು, ಅದರಿಂದ ಉಂಟಾಗಬಹುದಾದ ಅಡೆತಡೆಗಳು ವಿವಿಧ ಜಾತಿಯ ಪೋಷಕರು ಅನಿವಾರ್ಯ ಸಂದರ್ಭದಲ್ಲಿ ಮಡಿಮೈಲಿಗೆಯ ಹಳೆಯ ಕಾಲದ ಮನಸ್ಥಿತಿ ಬಿಟ್ಟು ಸ್ಮಾರ್ಟ್ ೆನ್ ಯುಗದಲ್ಲಿ ಸ್ಮಾರ್ಟ್ ಆಗಿ ಅರಿಯಬೇಕಾದ ಪ್ರಾಥಮಿಕ ಜ್ಞಾನವಿದು.
ಸಂಬಂತ ಬೇರೆಬೇರೆ ಜಾತಿಗಳ ಅಂತಹ ಪೋಷಕರು ಜಾತಿ ನಿರ್ಮೂಲನೆಯ ಅಂಬೇಡ್ಕರರ ಅಂತಹ ಉನ್ನತ ಪರಿಕಲ್ಪನೆ ಅರ್ಥಮಾಡಿಕೊಳ್ಳದಿದ್ದರೂ ಪರವಾಗಿಲ್ಲ ಕಡೇ ಪಕ್ಷ ಭೇದಭಾವಗಳಿಂದ ಕತ್ತರಿಸಲ್ಪಟ್ಟ ಸಮಾಜ ವಿವಾಹಗಳಿಂದ ಬೆಸೆಯಲ್ಪಡುತ್ತದೆ, ಅಂತಹ ಒಗ್ಗೂಡಿಸುವಿಕೆಗೆ ತಮ್ಮ ಮಕ್ಕಳು ಮುಂದಾಗಿದ್ದಾರಲ್ಲ ಎಂದು ತಿಳಿಯಬೇಕು. ಈ ಕಾರಣಕ್ಕಾಗಿ ಹೆಮ್ಮೆಪಡಬೇಕು. ಹೀಗೆ ಯೋಚಿಸುವುದು ಬಿಟ್ಟು, ೇಸ್‌ಬುಕ್- ವಾಟ್ಸ್‌ಆ್ಯಪ್ ಗಳಂತಹ ಸಂಪರ್ಕ ಮಾಧ್ಯಮಗಳಿಂದಾಗಿ ಯುವಕ-ಯುವತಿಯರು ಪರಸ್ಪರ ಹತ್ತಿರಕ್ಕೆ ಬರಬಹುದಾದ ಸದ್ಯದ ವಾತಾವರಣವನ್ನು ಅರಿಯುವುದು ಬಿಟ್ಟು ಮತ್ತು ಅದರಿಂದ ಸಮಾಜ ಬೆಸೆಯಬಹುದಾದ ಆರೋಗ್ಯಕರ ಬೆಳವಣಿಗೆಯನ್ನು ಅರಿಯುವುದು ಬಿಟ್ಟು, ಆ ಓಬಿರಾಯನ ಕಾಲದ ಜಾತಿ ಮರ್ಯಾದೆಯ ಹೆಸರಿನಲ್ಲಿ ಮುಗ್ಧ ಮನಸ್ಸುಗಳನ್ನು ಕೊಲ್ಲತೊಡಗಿದರೆ? ಅಂಬೇಡ್ಕರ್ ಈ ವಿಚಾರಗಳನ್ನು ಹೇಳಿದ್ದು 1936ರಲ್ಲಿ. ಅಂದರೆ 80 ವರ್ಷಗಳ ಹಿಂದೆ. ದುರಂತವೆಂದರೆ ಈ ಸಮಾಜ 2016ರಲ್ಲೂ ಅವರ ವಿಚಾರಗಳನ್ನು ಅರ್ಥಮಾಡಿಕೊಂಡಿಲ್ಲ. ಈ ದಿಸೆಯಲ್ಲಿ ಈಗಲೂ ತಡವಾಗಿಲ್ಲ ಬೇರೆಬೇರೆ ಜಾತಿಗಳ ಪೋಷಕರು ಅಂಬೇಡ್ಕರರ ಅಂತರ್ಜಾತಿ ವಿವಾಹ ಸಂಬಂತ ಈ ವಿಚಾರಗಳನ್ನು ಈಗಲಾದರೂ ಒಪ್ಪಿಕೊಳ್ಳುವ ಆವಶ್ಯಕತೆಯಿದೆ. ಮುಂದಾದರೂ ಮರ್ಯಾದೆಗೇಡಿ ಹತ್ಯೆಯಂತಹ ಮರ್ಯಾದೆಹೀನ ಕೃತ್ಯಗಳಿಗೆ ಕೈಹಾಕದಿರುವ ಸಾಮಾಜಿಕ ಅಗತ್ಯದ ತುರ್ತಿದೆ.