ರೆಪೋ ಕಡಿತದ ಲಾಭ ಗ್ರಾಹಕರಿಗೆ ಲಭ್ಯವಾಯಿತೇ?
ಬ್ಯಾಂಕ್ ಗ್ರಾಹಕರು ( ಸಾಲಗಾರರು), ವ್ಯಾಪಾ ರೋದ್ಯಮ ಸಂಘಗಳು, ಹಣಕಾಸು ಮಂತ್ರಿಗಳು ಮತ್ತು ಮಾಧ್ಯಮ ನಿರೀಕ್ಷಿಸಿದಂತೆ, ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮನ್ ರಾಜನ್ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದಾರೆ. ದೇಶದ ಸದ್ಯದ ಹಣಕಾಸು ಸ್ಥಿತಿ, ಅಂತಾರಾಷ್ಟ್ರೀಯ ಆರ್ಥಿಕ ಪರಿಸ್ಥಿತಿ, ಏರುತ್ತಿರುವ ತೈಲ ಬೆಲೆ, ಏಳನೆ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನದಿಂದಾಗುವ ಪರಿಣಾಮ, ಹಣದುಬ್ಬರ, ಆರ್ಥಿಕ ಮತ್ತು ಔಧ್ಯಮಿಕ ಬೆಳವಣಿಗೆ, ಸದ್ಯದಲ್ಲಿಯೇ ಹೊರಬೀಳಲಿರುವ ಬ್ಯಾಂಕ್ ಬ್ಯಾಲೆನ್ಸ್ಶೀಟ್ಗಳು, ಸುಸ್ತಿ ಸಾಲ ಮತ್ತು ಕಳೆದ ತಿಂಗಳು ಮಂಡಿಸಿದ ಬಜೆಟ್ನ ಪರಿಣಾಮ ಮುಂತಾದ ದೇಶದ ಆರ್ಥಿಕ ಸ್ಥಿತಿಗತಿಗಳ ಮೇಲೆ ಪರಿಣಾಮ ಉಂಟುಮಾಡುವ ಮಾನದಂಡಗಳನ್ನು ಕೂಲಂಕಷವಾಗಿ, ಅಳೆದು, ತೂಗಿ ಮತ್ತು ವಿಶ್ಲೇಷಿಸಿ ತಮ್ಮ ಹಣಕಾಸು ನೀತಿಯನ್ನು ಪ್ರಕಟಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಆರ್ಥಿಕ ಬೆಳವಣಿಗೆಯನ್ನು ಶೇ.7.76 ಉಳಿಸಿಕೊಳ್ಳುವ ಮತ್ತು 2017 ರ ಹೊತ್ತಿಗೆ ಹಣದುಬ್ಬರವನ್ನು ಶೇ. 5ಗೆ ಮಿತಿ ಗೊಳಿಸುವ ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಲಿಕ್ವಿಡಿಟಿಯನ್ನು ಕಾಯ್ದು ಕೊಳ್ಳುವ ಗುರಿಯಲ್ಲಿ, ರೆಪೋ (ಬ್ಯಾಂಕ್ಗಳು ರಿಸರ್ವ್ ಬ್ಯಾಂಕ್ನಿಂದ ಪಡೆಯುವ ಸಾಲ) ದರವನ್ನು ಶೇ.6.75ನಿಂದ ಶೇ. 6.50 ಇಳಿಸಿದ್ದು, ಇದು 2011ರ ದರಕ್ಕೆ ಸಮನಾಗಿದೆ. ಹಾಗೆಯೇ ರಿವರ್ಸ್ ರೆಪೋ ( ಬ್ಯಾಂಕ್ಗಳು ರಿಸರ್ವ್ ಬ್ಯಾಂಕ್ನಲ್ಲಿ ಇಡುವ ಠೇವಣಿ)ಯ ಮೇಲಿನ ದರವನ್ನು ಶೇ.5.75 ನಿಂದ ಶೇ.6.00 ಗೆ ಏರಿಸಿ ಒಂದು ರೀತಿಯ ಸಮತೋಲನವನ್ನು ಕಾಯ್ದುಕೊಂಡಿದೆ. ಬ್ಯಾಂಕ್ಗಳು ರಿಸರ್ವ್ ಬ್ಯಾಂಕ್ ನಲ್ಲಿ ಇಡುವ ನಗದು ಪ್ರಮಾಣ (cash) ವನ್ನು ಶೇ.4ಗೇ ಉಳಿಸಿದ್ದು, ಇದರ ಮೇಲೆ ಬಡ್ಡಿಯನ್ನು ನೀಡಬೇಕು ಅಥವಾ ನಗದು ಪ್ರಮಾಣವನ್ನಾದರೂ ತಗ್ಗಿಸಬೇಕು ಎನ್ನುವ ಬ್ಯಾಂಕರುಗಳ ಬೇಡಿಕೆ ಈ ಬಾರಿಯೂ ಈಡೇರಲಿಲ್ಲ.
ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿಯಲ್ಲಿ ಬ್ಯಾಂಕ್ಗಳು ಸಾಲದ ಮೇಲಿನ ಬಡ್ಡಿ ದರವನ್ನು ತಗ್ಗಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ. ಇದು ಕಡಿಮೆ ವೆಚ್ಚದ ಆರ್ಥಿಕ (low cost economy) ವ್ಯವಸ್ಥೆಗೆ ದಾರಿ ಮಾಡಿಕೊಡುತ್ತದೆ ಎಂದೂ ಅಭಿಪ್ರಾಯ ಪಡಲಾಗಿದೆ. ಸಾಲದ ಮಾಸಿಕ ಕಂತು (EMII) ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಇದು marginal ಕಡಿತವಾಗಬಹುದೇ ವಿನಹ ಅರ್ಥ ಪೂರ್ಣ ಕಡಿತವಾಗಲಾರದು. ಕಳೆದ ಒಂದ ವರ್ಷದಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಶೇ.1.25 ಕಡಿಮೆ ಮಾಡಿದ್ದು, ಬ್ಯಾಂಕ್ಗಳು ಅದೇ ಪ್ರಮಾಣದಲ್ಲಿ ಕಡಿತವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ. ಇಂತಹ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಾಗ, ಬ್ಯಾಂಕ್ಗಳು ನಾನಾ ಕಾರಣಗಳ ಅಡಿಯಲ್ಲಿ ವಿಳಂಬ ಮಾಡುತ್ತವೆ, ಅಥವಾ ಮಾಡುವುದಿಲ್ಲ ಎನ್ನುವ ದೂರುಗಳು ಸದಾ ಕೇಳುತ್ತದೆ. ಈ ಹಿಂದೆ ರೆಪೋ ದರ ಇಳಿದ ಪ್ರಮಾಣದಲ್ಲಿ ಬ್ಯಾಂಕ್ಗಳು ತಮ್ಮ ಸಾಲದ ಮೇಲಿನ ಬಡ್ಡಿದರ ಇಳಿಸುತ್ತಿದ್ದು, ಈಗ ಇಳಿಕೆ ಈ ಪ್ರಮಾಣದಲ್ಲಿ ಇರುವುದಿಲ್ಲ. ಬ್ಯಾಂಕ್ಗಳ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಶೇ..10, .15, .20 ರೀತಿಯಲ್ಲಿ ಬಡ್ಡಿದರ ಇಳಿಕೆ ಮಾಡುತ್ತಿದ್ದು, ಇದರಲ್ಲಿ ಒಂದು ರೀತಿಯ ಕಾಟಾಚಾರ ಕಾಣುತ್ತಿದ್ದು, ಬದ್ಧತೆ ಇರುವುದಿಲ್ಲ. ಏರುತ್ತಿರುವ ಸುಸ್ತಿ ಸಾಲ ಮತ್ತು ನಿರ್ವಹಣಾ ವೆಚ್ಚ ಮತ್ತು ಸಣ್ಣದಾಗುತ್ತಿರುವ interest margin (ಸಾಲ ಮತ್ತು ಠೇವಣಿಗಳ ಮಧ್ಯದ ಅಂತರ) ಎಂದು ಉಲ್ಲೇಖಿಸಿ ಬ್ಯಾಂಕ್ಗಳು ಚೌಕಾಶಿ ಮಾಡುತ್ತವೆ ಎಂದು ಹೇಳಲಾಗುತ್ತದೆ. ಈ ವಾದದಲ್ಲಿ ತಥ್ಯವಿಲ್ಲದಿಲ್ಲ. ರಿಸರ್ವ್ ಬ್ಯಾಂಕ್ ಮತ್ತು ಸರಕಾರ ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ಗಳ ಅನೇಕ ಬಡ್ಡಿಯೇತರ ಆದಾಯದ ಮೇಲೆ ನಿಯಂತ್ರಣ ಹೇರಿದ್ದು, ಬ್ಯಾಂಕ್ಗಳಿಗೆ ಬಡ್ಡಿ ಆದಾಯವೇ ಮುಖ್ಯ ಅದಾಯ. ಅಂತೆಯೇ ಬಡ್ಡಿ ದರವನ್ನು ಕಡಿತಗೊಳಿಸಬೇಕಾದರೆ ಸುದೀರ್ಘ ಚಿಂತನ ಮಂಥನವಾಗಬೇಕಾಗುತ್ತದೆ. ರಿಸರ್ವ್ ಬ್ಯಾಂಕ್ ಹಣಕಾಸು ನೀತಿಯ ಪರಿಷ್ಕರಣೆಯಾಗಿ ಎರಡು ವಾರಗಳಾದರೂ, ಕೇವಲ ಒಂದೆರಡು ಬ್ಯಾಂಕ್ಗಳಷ್ಟೇ ಸಾಲದ ಮೇಲಿನ ಬಡ್ಡಿಯ ದರವನ್ನು ಇಳಿಸಿದ್ದು, ಅದು ಕೂಡಾ ಕಾಟಾಚಾರದ ಇಳಿಕೆಯಾಗಿದ್ದು, ಅದರಲ್ಲಿ ಇಳಿಸಲೇ ಬೇಕೆನ್ನುವ ಅನಿವಾರ್ಯತೆ ಕಂಡಿತೇ ವಿನಹ ಬದ್ಧತೆ ಕಾಣಲಿಲ್ಲ.
ಬ್ಯಾಂಕ್ಗಳು ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವಾಗ ಸಾಮಾನ್ಯವಾಗಿ ಠೇವಣಿ ಮೇಲಿನ ಬಡ್ಡಿಯನ್ನೂ ಅದೇ ಪ್ರಮಾಣ ದಲ್ಲಿ ಕಡಿತಮಾಡುವುದು ಪದ್ಧತಿ. ಇದೇ ಸೂತ್ರವನ್ನು ಈ ಬಾರಿಯೂ ಬ್ಯಾಂಕ್ಗಳು ಅನುಸರಿಸಿದರೆ ಆಶ್ಚರ್ಯವಿಲ್ಲ. ಅಂತೆಯೇ, ಬ್ಯಾಂಕ್ಗಳು ಬಡ್ಡಿದರ ಇಳಿಸುವುದರಿಂದ ಆಗುವ ಪರಿಣಾಮವನ್ನು ಠೇವಣಿ ಮೇಲಿನ ಬಡ್ಡಿದರ ಇಳಿಸಿ ಸರಿದೂಗಿಸಿಕೊಳ್ಳುವುದನ್ನು ತಳ್ಳಿಹಾಕಲಾಗದು. ಈಗಾಗಲೇ ಒಂದೆರಡು ಬ್ಯಾಂಕ್ಗಳು ಠೇವಣಿ ಮೇಲಿನ ಬಡ್ಡಿದರವನ್ನು ಇಳಿಸಿದ್ದು, ಇನ್ನೂ ಕೆಲವು ಬ್ಯಾಂಕ್ಗಳು ಈ ಹಾದಿಯನ್ನು ತುಳಿದರೆ ಆಶ್ಚರ್ಯವಿಲ್ಲ. ಬ್ಯಾಂಕಿಂಗ್ ಉದ್ಯಮದಲ್ಲಿ ಠೇವಣಿದಾರರ ಧ್ವನಿ ಸಾಲಗಾರರ ಲಾಬಿಯಷ್ಟು ಬಲಯುತವಾಗಿಲ್ಲ. ರೆಪೋ ದರ ಇಳಿದ ದಿನ ಮುಂಬೈ ಶೇರು ಮಾರುಕಟ್ಟೆ ತಲ್ಲಣಗೊಂಡಿದ್ದು, ಸುಮಾರು 500 ಅಂಶ ಕುಸಿದಿತ್ತು.ಇದಕ್ಕೆ ಮುಖ್ಯ ಕಾರಣ ಬ್ಯಾಂಕ್ ಶೇರುಗಳು. ರೆಪೋ ದರ ಇಳಿತದಿಂದ ಬ್ಯಾಂಕ್ ಲಾಭದ ಪ್ರಮಾಣದಲ್ಲಿ ಕಡಿಮೆಯಾಗುವ ಸಂಭವನೀಯ ಲೆಕ್ಕಾಚಾರವೇ ಹೊರತು ಬೇರೆ ಯಾವುದೇ ಕಾರಣಗಳಿಲ್ಲ. ಹಾಗೆಯೇ ‘‘ಪನಾಮಾ ಪೇಪರ್ಸ್ ರಹಸ್ಯ’’ ದಾಖಲೆಯ ಸೋರಿಕೆಯೂ ಇದಕ್ಕೆ ಕಾರಣ ಇದ್ದಿರಬಹುದು ವಿನಹ ರೆಪೋ ದರ ಇಳಿತವನ್ನು ಇದಕ್ಕೆ ಗಂಟು ಹಾಕುವುದು ಸರಿಯಲ್ಲ. ಒಂದು ದಿನದ ಇಳಿಕೆ ನಂತರ ಶೇರು ಮಾರುಕಟ್ಟೆ ಯಥಾಸ್ಥಿತಿಗೆ ಮರಳಿದ್ದು ರೆಪೋ ದರದ ಇಳಿಕೆಯ ಪರಿಣಾಮ ಶೂನ್ಯ ಎಂದೇ ಹೇಳಬಹುದು. ರೆಪೋ ದರ ಇಳಿಸಿದ ತಕ್ಷಣ ಇನ್ನು ಮೇಲೆ ಗೃಹ ಮತ್ತು ವಾಹನ ಸಾಲದ ಮೇಲೆ ಬಡ್ಡಿ ದರದಲ್ಲಿ ಇಳಿತ ಎಂದು ಮಾಧ್ಯಮಗಳು ಬೊಬ್ಬೆ ಹೊಡೆದವು. ಆದರೆ, ವಾಸ್ತವವೇ ಬೇರೆ. ಸಾಲದ ಮೇಲಿನ ಬಡ್ಡಿದರವನ್ನು ಇಳಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ನಿರ್ದೇಶನ ಕೆಲಸಮಾಡುವುದಿಲ್ಲ ಮತ್ತು ಬ್ಯಾಂಕ್ಗಳಿಗೆ ತಮ್ಮದೇ ಆದ ಲೆಕ್ಕಾಚಾರ ಮತ್ತು ಸಮೀಕರಣ ಇದೆ ಎನ್ನುವುದು ಇನ್ನೊಮ್ಮೆ ಸಾಬೀತಾಗಿದೆ. ಸದ್ಯ ಅವುಗಳು 31.03.2016 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದ ಪರಿಣಾಮವನ್ನು ನಿರೀಕ್ಷಿಸುತ್ತಿದ್ದು,ಆ ಮೇಲೆ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬಹುದು ಎನ್ನುವ ಆಶಾಭಾವನೆ ಇದೆ. ಇದು ಒಂದು ರೀತಿಯಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡನು ಎನ್ನುವಂತಾಗಿದೆ.