ಕಾಂಗ್ರೆಸ್ ಮತ್ತು ಸಿಪಿಎಂ ಮೈತ್ರಿಕೂಟ: ಆಂತರಿಕ ಭಿನ್ನಮತ ಮತ್ತು ಭವಿಷ್ಯದ ಅನಿವಾರ್ಯತೆ
ಪಶ್ಚಿಮಬಂಗಾಳ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ಸಿಪಿಎಂ ಆಂತರಿಕವಾಗಿಯೇ ಭಿನ್ನಮತದ ದನಿಗಳನ್ನೆದುರಿಸುತ್ತಿವೆ. ಕಾಂಗ್ರೆಸ್ ಪಕ್ಷಕ್ಕಿಂತ ಸಿಪಿಎಂನಲ್ಲಿಯೇ ಇಂತಹ ಭಿನ್ನಮತ ಹೆಚ್ಚಾಗಿರುವುದು ವಿಶೇಷ. ಸೀತಾರಾಂ ಯೆಚೂರಿಯವರೇ ಈ ಮೈತ್ರಿಗೆ ಮೂಲ ಕಾರಣಕರ್ತರು. ಯಾಕೆಂದರೆ ಪ್ರಕಾಶ್ಕಾರಟ್ ಮತ್ತು ಕೇರಳದ ಇನ್ನೊಬ್ಬ ನಾಯಕ ಪಿನರಾಯಿ ವಿಜಯನ್ರವರುಗಳು ಮೊದಲಿಂದಲೂ ಇಂತಹದೊಂದು ಮೈತ್ರಿಗೆ ವಿರೋಧವಾಗಿಯೇ ಇದ್ದರು. ಯೆಚೂರಿ ಮತ್ತು ಇನ್ನಿಬ್ಬರು ನಾಯಕರುಗಳ ಎರಡೂ ಅಭಿಪ್ರಾಯಗಳಲ್ಲಿ ಹುರುಳಿಲ್ಲವೆಂದು ತಳ್ಳಿ ಹಾಕುವಂತಿಲ್ಲ.
ಸೀತಾರಾಂ ಯೆಚೂರಿಯವರ ಪ್ರಕಾರ ಪಶ್ಚಿಮ ಬಂಗಾಳದ ಮಟ್ಟಿಗೆ ಇಂತಹ ದೊಂದು ಮೈತ್ರಿ ತೀರಾ ಅನಿವಾರ್ಯವಾಗಿತ್ತು. ಯಾಕೆಂದರೆ ಇಂತಹದೊಂದು ಮೈತ್ರಿ ಆಗದೇ ಹೋಗಿದ್ದಿದ್ದರೆ ತೃಣಮೂಲ ಕಾಂಗ್ರೆಸ್ಸಿಗೆ ಈ ಚುನಾವಣೆ ಬಹಳ ಸುಲಭದ ಹಾದಿಯಾಗಿಬಿಡುತ್ತಿತ್ತು. ಯಾಕೆಂದರೆ ಇವತ್ತು ತೃಣಮೂಲ ಕಾಂಗ್ರೆಸ್ಸಿಗೆ ಅಂತಹದೇನು ಆಡಳಿತ ವಿರೋಧಿ ಅಲೆ ಇರಲಿಲ್ಲ. ಜೊತೆಗೆ ಹಿಂದೆಲ್ಲ ಚುನಾವಣೆ ಗೆಲ್ಲಲು ಸಿಪಿಎಂ ಪರವಾಗಿ ಕೆಲಸ ಮಾಡುತ್ತಿದ್ದ ಬಹುತೇಕ ಬಲಾಢ್ಯ ಶಕ್ತಿಗಳಿವತ್ತು ತೃಣ ಮೂಲ ಕಾಂಗ್ರೆಸ್ಸಿನ ಜೊತೆಯಲ್ಲಿ ನಿಂತಿವೆ. ಹೀಗಾಗಿ ತ್ರಿಕೋನ ಸ್ಪರ್ಧೆಯೇ ನಾದರು ನಡೆದಿದ್ದರೆ ಮಮತಾ ಬ್ಯಾನರ್ಜಿಯವರ ಟಿಎಂಸಿಗೆ ಬಹಳ ಸುಲಭವಾಗಿ ಜಯ ಒಲಿಯಬಹುದಿತ್ತು. ಈ ಸ್ಪರ್ದೆಯಲ್ಲಿ ಭಾಜಪದ ಪಾತ್ರ ಅಷ್ಟೇನು ಮಹತ್ವದ್ದಲ್ಲ. ಅದೂ ಅಲ್ಲದೆ 2019ರಲ್ಲಿ ನಡೆಯ ಬಹುದಾದ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಭಾಜಪೇತರ ಶಕ್ತಿಗಳು ಹೀಗೆ ಒಂದೊಂದಾಗಿ ಒಂದಾಗುವುದು ಸಹ ಚಾರಿತ್ರಿಕ ಅನಿವಾರ್ಯವೆಂಬುದು ಮೈತ್ರಿಯ ಪರವಾಗಿರುವವರ ಮಾತು.
ಅದೂ ಅಲ್ಲದೆ ಸಿಪಿಎಂ ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತಿರುವುದು ಇದೇನು ಮೊದಲಲ್ಲ. 2004ರಲ್ಲಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಯುಪಿಎ ಮೊದಲ ಬಾರಿಗೆ ಅಧಿಕಾರ ಹಿಡಿದಾಗ ಸಿಪಿಎಂ ಬೆಂಬಲ ನೀಡಿ ಕಾಂಗ್ರೆಸ್ಸಿಗೆ ಹತ್ತಿರವಾಗಿತ್ತು. ಆಗ ಎರಡೂ ಪಕ್ಷಗಳು ಸಾಮಾನ್ಯ ಕಾರ್ಯಸೂಚಿಯೊಂದನ್ನು ಸಹ ರಚಿಸಿಕೊಂಡಿದ್ದವು. ಕೇಂದ್ರದಲ್ಲಿ ಅಧಿಕಾಕ್ಕೇರಿದ ಪಕ್ಷವೊಂದರ ಮಿತ್ರ ಪಕ್ಷವಾಗಿ ಸೋಮನಾಥ್ ಚಟರ್ಜಿ ಯಂತಹವರು ಲೋಕಸಭಾ ಅಧ್ಯಕ್ಷರೂ ಸಹ ಆಗಿದ್ದರು. ಆದರೆ ನಂತರದ ವರ್ಷಗಳಲ್ಲಿ ಅಮೆರಿಕದೊಂದಿಗಿನ ನಾಗರೀಕ ಅಣ್ವಸ್ತ್ರ ಒಡಂಬಡಿಕೆ ಯ ವಿಷಯದಲ್ಲಿ ತಲೆದೋರಿದ ಭಿನ್ನಮತದ ಕಾರಣವಾಗಿ ಎರಡೂ ಪಕ್ಷಗಳು ದೂರವಾಗಿದ್ದವು.
ಆದರೆ ಸದ್ಯದ ಎರಡೂ ಪಕ್ಷಗಳ ಮೈತ್ರಿಯ ಬಗ್ಗೆ ಹಿರಿಯ ನಾಯಕ ಪ್ರಕಾಶ್ ಕಾರಟ್ ಮತ್ತು ಕೇರಳದ ಇನ್ನೊಬ್ಬ ನಾಯಕ ಪಿನರಾಯ್ ರವಿ ಹೇಳುವುದೇ ಬೇರೆ!.ಅವರ ಪ್ರಕಾರ ಈ ಮೈತ್ರಿಯಿಂದಕಾಂಗ್ರೆಸ್ಸಿಗೆ ಲಾಭವಾಗಬಹುದೇ ಹೊರತು ಸಿಪಿಎಂಗಲ್ಲ. ಹಾಗಾಗಿ ಈ ಮೈತ್ರಿಯ ಅನಿವಾರ್ಯತೆ ತಮ್ಮ ಪಕ್ಷಕ್ಕಿರಲಿಲ್ಲವೆನ್ನುವುದಾಗಿದೆ. ಪಶ್ಚಿಮಬಂಗಾಳದಲ್ಲಿ ಮಾಡಿಕೊಂಡ ಈ ಮೈತ್ರಿ ಕೇರಳದ ಮತದಾರರಲ್ಲಿ ತಪ್ಪು ಕಲ್ಪನೆಗೆ ಕಾರಣವಾಗಿ ಪಕ್ಷಕ್ಕೆ ನಷ್ಟವಾಗುತ್ತದೆಯೆಂಬುದು ಅವರ ವಾದ. ಅಷ್ಟಲ್ಲದೆ ಭಾಜಪ ಎರಡೂ ರಾಜ್ಯಗಳಲ್ಲಿ ಇದನ್ನು ಉಪಯೋಗಿಸಿಕೊಂಡು ಎಡಪಕ್ಷಗಳ ಬಗ್ಗೆಅಪಪ್ರಚಾರ ಮಾಡಬಲ್ಲದು. ಹೀಗಾಗಲೇ ಕೇರಳದಲ್ಲಿ ಭಾಜಪ ಇಂತಹದೊಂದು ಪ್ರಚಾರವನ್ನೂ ಕೈಗೊಂಡಿದೆ. ಅದು ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಕಾಂಗ್ರೆಸ್ಸಿನ ಏಜೆಂಟ್ ಎಂದು ವರ್ಣಿಸುತ್ತ, ಕೇರಳದಲ್ಲಿ ಎಡರಂಗ ಗೆದ್ದರೆ ಅದು ಕಾಂಗ್ರೆಸ್ ಒಕ್ಕೂಟವೇ ಗೆದ್ದಂತೆ ಎನ್ನುವ ರೀತಿಯಲ್ಲಿ ಪ್ರಚಾರ ಮಾಡುತ್ತಾ ಮತದಾರರಲ್ಲಿ ಗೊಂದಲ ಮೂಡಿಸುತ್ತಿದೆ.
ಒಂದು ರೀತಿಯಲ್ಲಿ ಈ ಮೈತ್ರಿಕೂಟ ಪಶ್ಚಿಮ ಬಂಗಾಳದ ಮಟ್ಟಿಗೆ ಉತ್ತಮ ಫಲಿತಾಂಶ ನೀಡಿದರೂ ಕೇರಳದಲ್ಲಿ ಮಾತ್ರ ಹಿನ್ನಡೆಯನ್ನುಂಟು ಮಾಡಬಹುದಾಗಿದೆ. ಕೇರಳದ ಮಟ್ಟಿಗೆ ಭಾಜಪ ಸ್ವಲ್ಪ ಮಟ್ಟಿಗೆ ಬೇರು ಬಿಟ್ಟಿದ್ದು ಅದು ಒಂದಷ್ಟು ಸ್ಥಾನಗಳನ್ನು ಈ ಬಾರಿ ಗೆಲ್ಲುವ ಬಹುತೇಕ ಅವಕಾಶಗಳಿವೆ. ಯು.ಡಿ.ಎಫ್. ಮತ್ತು ಎಲ್.ಡಿ.ಎಫ್.ಮೈತ್ರಿಕೂಟದ ನಡುವೆ ನಡೆಯುವ ಹೋರಾಟದಲ್ಲಿ ಭಾಜಪ ಮೈತ್ರಿ ಕೂಟವೂ ಒಂದಿಷ್ಟು ಸ್ಥಾನಗಳನ್ನು ಪಡೆದು ಅತಂತ್ರ ವಿಧಾನಸಭೆಯ ರಚನೆಯಾದರೂ ಆಗಬಹುದೆಂಬ ನಿರೀಕ್ಷೆಯಿದೆ. ಭಾಜಪದ ನಿರೀಕ್ಷೆ ಮತ್ತು ಅಪೇಕ್ಷೆಯೂ ಅದೇ ಆಗಿದೆ. ಆದರೆ ದೂರಗಾಮಿ ಪರಿಣಾಮದ ದೃಷ್ಟಿಯಿಂದ ಇಂತಹದೊಂದು ಮೈತ್ರಿಯ ಅಗತ್ಯ ಕಾಂಗ್ರೆಸ್ಸಿಗಂತು ಅನಿವಾರ್ಯವಾಗಿತ್ತು. ಯಾಕೆಂದರೆ 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿ ಯವರ ನೇತೃತ್ವದ ಭಾಜಪವನ್ನು ಕಾಂಗ್ರೆಸ್ ಒಂಟಿಯಾಗಿ ಎದುರಿಸಲು ಸಾಧ್ಯವಿಲ್ಲ. ಬದಲಿಗದು ರಾಷ್ಟ್ರದಾದ್ಯಂತ ತನಗನುಕೂಲವಾಗುವಂತಹ ಒಂದು ಮೈತ್ರಿಕೂಟವನ್ನು ರಚಿಸಿಕೊಳ್ಳಲೇ ಬೇಕಾಗುತ್ತದೆ. ಹಾಗಾದಾಗ ಮಾತ್ರ ಭಾಜಪದ ವಿರುದ್ಧ ಅದು ಹೋರಾಡಲು ಸಾದ್ಯ. ಈದೃಷ್ಟಿಯಿಂದ ಮುಂದಿನ ಎರಡು ವರ್ಷಗಳ ಕಾಲ ಕಾಂಗ್ರೆಸ್ಸಿಗೆ ಮೈತ್ರಿಯ ಮಂತ್ರವನ್ನು ಜಪಿಸುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಎಲ್ಲ ಅನಾನುಕೂ ಲಗಳ ಹೊರತಾಗಿಯು ಈ ಮೈತ್ರಿಯ ರಚನೆ ಅಗತ್ಯವಾಗಿತ್ತು. ಇಂಡಿಯಾದ ಜಾತ್ಯತೀತ ಶಕ್ತಿಗಳ ಗೆಲುವಿಗೆ ವಿಶಾಲ ತಳಹದಿಯಿಂತ ಹದೊಂದು ಮೈತ್ರಿಕೂಟ ಅನಿವಾರ್ಯವೂ ಆಗಿದೆ!.