ಗ್ಲಕೋಮಾ ಮತ್ತು ದೃಷ್ಟಿ ಮಾಂದ್ಯತೆ
ಭಾಗ-2
ಓಪನ್ ಆ್ಯಂಗಲ್ ಗ್ಲಕೋಮಾ
ಸಾಮಾನ್ಯವಾಗಿ 60ರ ಪ್ರಾಯದ ನಂತರ ಕಾಣಿಸಿಕೊಳ್ಳುತ್ತದೆ. ಇವರಲ್ಲಿ ಟ್ರಾಬೆಕುಲಾದಲ್ಲಿ ದ್ರವ ತೂತುಗಳಿಲ್ಲದೇ ಹೊರಬರಲಾರದು. ಈ ರೋಗಿ ಗಳಲ್ಲಿ ಒತ್ತಡ ನಿಧಾನವಾಗಿ ಏರುತ್ತದೆ. ರೋಗಿಗೆ ಯಾವುದೇ ರೋಗ ಚಿಹ್ನೆಗಳಿರುವುದಿಲ್ಲ. ಮಬ್ಬು ಬೆಳಕಿ ನಲ್ಲಿ ಕಾಣದಿರುವಂತಹ ಚಿಕ್ಕಪುಟ್ಟ ಸಮಸ್ಯೆಗಳು ಇದ್ದರೂ ಇರಬಹುದು. ಕೆಲವರಿಗೆ ಓದಲು ತಮ್ಮ ಕನ್ನಡಕದ ಮೇಲೆ ತೃಪ್ತಿ ಇಲ್ಲದೇ ಪದೇ ಪದೇ ಕನ್ನಡಕ ಬದಲಿಸಲು ವೈದ್ಯರನ್ನು ಒತ್ತಾಯಿಸಬಹುದು. ಆದರೆ ಈ ರೋಗಿಗಳಲ್ಲಿ ರೋಗ ಪತ್ತೆ ಆಗುವ ವೇಳೆಗೆ ವಿಳಂಬವಾಗಿ ದೃಷ್ಟಿನಾಶ ತೀವ್ರ ಸ್ವರೂಪದಲ್ಲಿ ಆಗಿರುತ್ತದೆ. ಕಣ್ಣಿನ ನಡುಭಾಗದಲ್ಲಿ ದೃಷ್ಟಿ ಸರಿಯಾಗಿದ್ದರೂ ಸುತ್ತಲಿನ ಭಾಗಗಳಲ್ಲಿ ದೃಷ್ಟಿ ನಾಶವಾಗಿರುತ್ತದೆ. ಕೊನೆಯ ಹಂತದಲ್ಲಿ ರೋಗಿಗೆ ಕಣ್ಣಿನ ನಡುವೆ ಮಾತ್ರ ದೃಷ್ಟಿ ಉಳಿಯುವ ಸ್ಥಿತಿಯನ್ನು ಟನೆಲ್ ವಿಶನ್ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ತಿರುಗಾಟ, ಓದುವುದು, ಬರೆಯುವುದು ಎಲ್ಲವೂ ಕಠಿಣ.
ತಪಾಸಣೆ
ಈ ರೋಗದ ತಪಾಸಣೆ ಮೂರು ಮಾನದಂಡಗಳ ಮೇಲೆ ನಿರ್ಧಾರವಾಗುತ್ತದೆ. ಇವುಗಳಲ್ಲಿ ಮೊದಲಿನದು ಕಣ್ಣುಗುಡ್ಡೆಯ ಒತ್ತಡ. ಇದನ್ನು ಟೊನೋಮೀಟರ್ (Tonometer)ನಿಂದ ಅಳೆಯುವುದು ಸಾಧ್ಯ. 21mmಗಿಂತ ಹೆಚ್ಚಿನ ಒತ್ತಡ ಕಂಡುಬಂದರೆ, ವ್ಯಕ್ತಿಗೆ ಗ್ಲಕೋಮ ಇದೆ ಎಂದು ಅರ್ಥ. ಈ ಒತ್ತಡವನ್ನು ಇಡೀ ದಿನದಲ್ಲಿ ನಿಗಾವಹಿಸದಿದ್ದರೆ ಆರಂಭದ ಹಂತದಲ್ಲಿ ತಪಾಸಣೆ ಹಾದಿ ತಪ್ಪುವ ಸಾಧ್ಯತೆಗಳಿರುತ್ತವೆ. ಏಕೆಂದರೆ, ಈ ಒತ್ತಡ ದಿನದುದ್ದಕ್ಕೂ ಬದಲಾಗುತ್ತಾ ಇರುತ್ತದೆ.
ಗ್ಲಕೋಮಾ ತಪಾಸಣೆಗೆ ಎರಡನೆ ಮಾನದಂಡ ದೃಷ್ಟಿಯ ವಿಸ್ತಾರ (Visual field) ಇದನ್ನು ಪೆರಿಮೀಟರ್ (Perimeter)ನಿಂದ ಅಳೆಯುತ್ತಾರೆ. ಗ್ಲಕೋಮಾದ ಆರಂಭದ ಹಂತದಲ್ಲಿ ಕಣ್ಣಿನ ನಡುಭಾಗದಲ್ಲಿ ದೃಷ್ಟಿ ಸ್ಪಷ್ಟವಾಗಿರುತ್ತದೆ. ಆದರೆ ಒಟ್ಟು ವಿಸ್ತಾರದಲ್ಲಿ ನಿರ್ದಿಷ್ಟವಾದ ತೊಂದರೆಗಳಿರುತ್ತವೆ. ಆಧುನಿಕ ಕಂಪ್ಯೂಟರೀಕೃತ ಪೆರಿಮೀಟರ್ಗಳು ಇದನ್ನು ನಿಖರವಾಗಿ ಗುರುತಿಸಬಲ್ಲವು.
ಆಪ್ಟಿಕ್ ಡಿಸ್ಕ್ ಕಪ್ಪಿಂಗ್ (Optic disc cupping) ಗ್ಲಕೋಮಾ ತಪಾಸಣೆಗೆ ಮೂರನೆಯ ಮಾನದಂಡ. ಕಣ್ಣಿನ ಹಿಂಭಾಗದಲ್ಲಿ ಅಕ್ಷಿಪಟಲದ (ರೆಟಿನಾ) ಪದರಗಳೆಲ್ಲ ಒಂದಾಗಿ ದೃಷ್ಟಿ ನರಗಳ ರೂಪದಲ್ಲಿ ಹೊರ ಹೋಗುತ್ತವೆ. ಇದನ್ನು ಆಪ್ತಾಲ್ಮೋಸ್ಕೋಪ್ (Ophthalmoscope)ನಿಂದ ತಪಾಸಣೆ ನಡೆಸಬಹುದು. ದೃಷ್ಟಿ ನರಗಳು ಹೊರಬರುವ ಭಾಗದಲ್ಲಿರುವ ಗುಲಾಬಿ ಬಣ್ಣದ ಸೆಂಟ್ರಲ್ ಕಪ್ ಸಾಮಾನ್ಯವಾಗಿ ದೃಷ್ಟಿನರಗಳ ವ್ಯಾಸದ ಮೂರನೆ ಒಂದು ಭಾಗದಷ್ಟಿರುತ್ತದೆ. ಗ್ಲಕೋಮಾ ರೋಗಿಗಳಲ್ಲಿ ಈ ಕಪ್ ಗಾತ್ರದಲ್ಲಿ ದೊಡ್ಡದಿರುತ್ತದೆ.
ನಿರ್ವಹಣೆ
ಕಣ್ಣಿನ ದ್ರವದ ಒತ್ತಡವನ್ನು ಸಾಮಾನ್ಯ ಸ್ಥಿತಿಗೆ ತರುವುದು ಗ್ಲಕೋಮಾ ಚಿಕಿತ್ಸೆಯ ಉದ್ದೇಶ. ಇದನ್ನು ಸ್ಥಳೀಯ ಔಷಧಗಳು, ದೇಹ ವ್ಯವಸ್ಥೆಗೆ ನೀಡುವ ಔಷಧಗಳು, ಲೇಸರ್ ಹಾಗೂ ಶಸ್ತ್ರಕ್ರಿಯೆಯ ಮೂಲಕ ನಡೆಸಲಾಗುತ್ತದೆೆ. ಈ ಚಿಕಿತ್ಸೆಗಳಿಂದ ಒತ್ತಡವನ್ನು ನಿಯಂತ್ರಿಸುವುದು ಸಾಧ್ಯವೇ ಹೊರತು ಗ್ಲಕೋಮಾ ಸ್ಥಿತಿಯನ್ನು ಸರಿಪಡಿಸಲು ಸಾಧ್ಯವಾಗದು. ಪ್ರಾಯದೊಂದಿಗೆ ಈ ಒತ್ತಡ ಏರುತ್ತಾ ಹೋಗುತ್ತದೆ. ಕಣ್ಣು ಗುಡ್ಡೆಯೊಳಗಿನ ಒತ್ತಡದ ಸಂತುಲನ ಮಾತ್ರವಲ್ಲದೇ ದೃಷ್ಟಿನರಗಳಿಗೆ ರಕ್ತದ ಸರಬರಾಜಿನಲ್ಲಿ ಸಮಸ್ಯೆಯಂತಹ ಕಾರಣಗಳಿಂದಲೂ ಹಾನಿ ಆಗಿರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಗ್ಲಕೋಮಾ ರೋಗಿಗಳು ನಿಯಮಿತವಾಗಿ ನೇತ್ರತಜ್ಞರ ತಪಾಸಣೆಗೆ ಒಳಗಾಗುತ್ತಿರಬೇಕಾಗುತ್ತದೆ.
ಶಸ್ತ್ರಚಿಕಿತ್ಸೆ
ಔಷಧಿಗಳಿಂದ ಕಣ್ಣುಗುಡ್ಡೆಯ ಒತ್ತಡದ ಸಂತುಲನವನ್ನು ಮರಳಿಸಲು ಸಾಧ್ಯವಾಗದಿದ್ದರೆ, ಔಷಧಿಗಳಿಂದ ಕೆಟ್ಟ ಪರಿಣಾಮಗಳು ಅನುಭವಕ್ಕೆ ಬಂದರೆ, ರೋಗಿ ಬಯಸಿ ದಲ್ಲಿ ಟ್ರಾಬೆಕ್ಯುಲೆಕ್ಟಮಿ (Trabeculectomy)ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಸ್ಕ್ಲೀರಾ ಮತ್ತು ಕಂಜಂಕ್ಟೈವಾ (Sclera & Cionjunctiva)ಗಳ ಅಡಿ ಇರುವ ಕಾರ್ನಿಯಾ ಸ್ಕ್ಲೀರಾ ಅಂಗಾಂಶ ಭಾಗವೊಂದನ್ನು ತೆಗೆದು, ಕಣ್ಣುಗುಡ್ಡೆಯ ದ್ರವ ಹೊರ ಬಂದು ಒತ್ತಡದ ಸಂತುಲನ ಉಂಟು ಮಾಡಲು ಅನುವು ಮಾಡಿಕೊಡಲಾಗುತ್ತದೆ. ಇದರಿಂದಾಗಿ ಕಣ್ಣಿನ ಒತ್ತಡದ ಸಂತುಲನ ಉಂಟಾಗುತ್ತದೆ.