ಹವಾಮಾನ ಬದಲಾವಣೆ ಎದುರಾಗಿದೆ ದುಷ್ಪರಿಣಾಮದ ಬವಣೆ
ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಒಪ್ಪಂದಕ್ಕೆ ಎಪ್ರಿಲ್ 22ರಂದು ನ್ಯೂಯಾರ್ಕ್‌ನಲ್ಲಿ 177 ದೇಶಗಳು ಸಹಿ ಮಾಡಿವೆ. ಜಾಗತಿಕ ತಾಪಮಾನ ತಡೆ ಸಲುವಾಗಿ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲ ಬಿಡುಗಡೆ ಪ್ರಮಾಣವನ್ನು ಕಡಿಮೆ ಮಾಡಲು ಬದ್ಧತೆ ಘೋಷಿಸಿವೆ. ಕರ್ನಾಟಕ ಈ ನಿಟ್ಟಿನಲ್ಲಿ ಯಾವುದಾದರೂ ಯೋಜನೆ ಹೊಂದಿದೆಯೇ?
ಹವಾಮಾನ ಬದಲಾವಣೆಯ ಪರಿಣಾಮ ನಮ್ಮ ಮೇಲೆ ಈಗಾಗಲೇ ಆಗುತ್ತಿದೆ. ಬಿಸಿಲಿನ ತೀವ್ರತೆ ಹಿಂದೆಂದಿಗಿಂತಲೂ ಅಕವಾಗಿರುವುದನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸರಕಾರ ಕೇವಲ ಹವಾಮಾನ ಆಧರಿತ ಅಪಾಯದ ಬಗ್ಗೆ ವಿಶ್ಲೇಷಣೆ ನಡೆಸುವ ಬದಲು ಅದನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ. ಹವಾಮಾನ ಬದಲಾವಣೆಯ ನೇರ ಪರಿಣಾಮ ಜನರ ಜೀವನಾಧಾರದ ಮೇಲೂ ಆಗುತ್ತದೆ. ಏಕೆಂದರೆ ನಮ್ಮ ಸಂಪನ್ಮೂಲಗಳು ನಷ್ಟವಾಗಿ ಹಲವು ವಿಕೋಪಗಳಿಗೂ ಇದು ಕಾರಣವಾಗುತ್ತಿದೆ. ಇದರ ಸೂಚನೆಗಳು ಈಗಾಗಲೇ ಕಂಡುಬಂದಿವೆ. 2006ರಿಂದ 2011ರವರೆಗೆ 42 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಹಲವಾರು ಜೀವಗಳು ನೈಸರ್ಗಿಕ ವಿಕೋಪಕ್ಕೆ ಬಲಿಯಾಗಿವೆ. 2012ರ ಕಲಬುರಗಿ ಪ್ರವಾಹ ಪರಿಸ್ಥಿತಿಯನ್ನೊಮ್ಮೆ ನೆನಪಿಸಿಕೊಳ್ಳಿ. ಆಹಾರಧಾನ್ಯ ಉತ್ಪಾದನೆ ಶೇ. 8ರಷ್ಟು ಕುಸಿತ ಕಂಡು 12.5 ದಶಲಕ್ಷ ಟನ್ ಆಗಿದೆ.
ಹವಾಮಾನ ಇಲಾಖೆಯ 100 ವರ್ಷಗಳ ಅಂಕಿ ಅಂಶವನ್ನು ಪರಿಶೀಲಿಸಿದರೆ, ರಾಜ್ಯದಲ್ಲಿ ಸರಾಸರಿ ಉಷ್ಣಾಂಶ 0.4 ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ. ಸರಾಸರಿ ಮಳೆ ಪ್ರಮಾಣ ಕೂಡಾ ಶೇ. 10ರಷ್ಟು ಕಡಿಮೆಯಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳ ಮೇಲೆ ಪರಿಣಾಮ ಭೀಕರ. ಇಲ್ಲಿ ಉಷ್ಣತೆ ಹೆಚ್ಚಳ ಪ್ರಮಾಣ 0.6 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ದಕ್ಷಿಣ ಒಳನಾಡಿನಲ್ಲಿ ಕೂಡಾ ನಾಲ್ಕು ವರ್ಷಕ್ಕೊಮ್ಮೆ ಬರ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ ರಾಜಸ್ಥಾನ ಹೊರತುಪಡಿಸಿದರೆ ಇಡೀ ದೇಶದಲ್ಲೇ ಅತ್ಯಕ ಶುಷ್ಕ ಭೂಮಿ ಹೊಂದಿರುವ ರಾಜ್ಯ ಎಂಬ ಕುಖ್ಯಾತಿ ನಮ್ಮದು. ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಷ್ಟೇ ಚದುರಿದಂತೆ ಹಸಿರು ಕಾಣುತ್ತದೆ.
ಪಶ್ಚಿಮ ಘಟ್ಟಕ್ಕೆ ಅಪಾಯ
ವಿಶ್ವದ 18 ಬೃಹತ್ ಜೀವವೈವಿಧ್ಯ ತಾಣಗಳಲ್ಲೊಂದಾದ ಪಶ್ಚಿಮಘಟ್ಟದ ಶೇ.23ರಷ್ಟು ಪಾಲು ಕರ್ನಾಟಕದ್ದು. ಆದರೆ ಪಶ್ಚಿಮ ಘಟ್ಟ ಪ್ರದೇಶದಲ್ಲೇ ಅತ್ಯಕ ಜನಸಾಂದ್ರತೆ ಇರುವುದು ಕರ್ನಾಟಕದಲ್ಲಿ. ಪ್ರತಿ ಚದರ ಕಿ.ಮೀ.ಗೆ 600 ಮಂದಿ ಇಲ್ಲಿ ವಾಸಿಸುತ್ತಾರೆ. ಕರ್ನಾಟಕದ ಬಹುತೇಕ ನದಿಗಳು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ, ಎಲ್ಲಶಯ, ಅಣೆಕಟ್ಟುಗಳನ್ನು ಭರ್ತಿ ಮಾಡುತ್ತವೆ. ಜತೆಗೆ ಜಲವಿದ್ಯುತ್ ಮೂಲಗಳೂ ಆಗಿವೆ. ಕರ್ನಾಟಕದಲ್ಲಿ ಸುಮಾರು 1.6 ಲಕ್ಷ ಚದರ ಕಿ.ಮೀ. ಪ್ರದೇಶವನ್ನು ಪಶ್ಚಿಮಘಟ್ಟ ಆವರಿಸಿದ್ದು, ಇದು 1,840ರಲ್ಲಿ ಪಶ್ಚಿಮಘಟ್ಟ ಪ್ರದೇಶ ಐದು ಲಕ್ಷ ಚದರ ಕಿ.ಮೀ.ನಷ್ಟಿತ್ತು. ಪ್ರಮುಖ ಹಸಿರು ವಲಯ 3,000 ಚದರ ಕಿ.ಮೀ.ಗೆ ಕುಸಿದಿದ್ದು, ಇದು ನಾಲ್ಕು ಬೆಂಗಳೂರಿನ ವಿಸ್ತೀರ್ಣದಷ್ಟು. ರಾಜ್ಯದ ಶೇ. 11ರಷ್ಟು ಭೂಭಾಗ ದಟ್ಟ ಅರಣ್ಯದಿಂದ ಕೂಡಿದೆ. ಆದರೆ ಒಂದು ದಶಕದ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ, ದಟ್ಟ ಅರಣ್ಯ ಪ್ರಮಾಣ ಕುಸಿದು, ಮುಕ್ತ ಅರಣ್ಯ ಹೆಚ್ಚುತ್ತಿರುವುದು ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ಹೇರಳವಾದ ಜಲವಿದ್ಯುತ್ ಸಂಪನ್ಮೂಲ ಇದ್ದರೂ, ಸಮರೋಪಾದಿಯಲ್ಲಿ ಪರಿಸರ ವಿನಾಸವನ್ನು ತಡೆಯದಿದ್ದರೆ ಜಾಗತಿಕ ತಾಪಮಾನ ಇದರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಸವಾಲುಗಳು
ಗ್ಲೋಬಲ್ ಗ್ರೀನ್ ಗ್ರೋತ್ ಇನ್‌ಸ್ಟಿಟ್ಯೂಟ್ ಹಾಗೂ ಸಿಎಸ್‌ಟಿಇಪಿ 2014ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದ ಪ್ರಗತಿ ನಿರೀಕ್ಷೆ ವರದಿಯ ಪ್ರಕಾರ, ಕರ್ನಾಟಕದಲ್ಲಿ ಕೈಗಾರಿಕೆ ಅಭಿವೃದ್ಧಿ ಪಥದಲ್ಲಿದ್ದು, ಇದನ್ನು ಸುಸ್ಥಿರಗೊಳಿಸುವುದು ಅಗತ್ಯ. 2030ರ ವೇಳೆಗೆ ಇಂಧನ ಬೇಡಿಕೆ 29 ದಶಲಕ್ಷ ಟನ್ ತೈಲಕ್ಕೆ ಸಮನಾಗಲಿದ್ದು, ಈಗ ರಾಜ್ಯದಲ್ಲಿರುವ ಇಂಧನ ಬೇಡಿಕೆ 9 ದಶಲಕ್ಷ ಟನ್ ತೈಲಕ್ಕೆ ಸಮ. ರಾಜ್ಯದ ಜನಸಂಖ್ಯೆ 72 ದಶಲಕ್ಷಕ್ಕೆ ಹೆಚ್ಚಲಿದ್ದು, ಚಲನೆಯ ಬೇಡಿಕೆ ನಾಲ್ಕು ಪಟ್ಟು ಹೆಚ್ಚಲಿದೆ. ಅಂತೆಯೇ ವಿದ್ಯುತ್ ಬೇಡಿಕೆ ಹಾಲಿ ಇರುವ 12 ಗಿಗಾವ್ಯಾಟ್‌ನಿಂದ 40 ಗಿಗಾವ್ಯಾಟ್‌ಗೆ ಹೆಚ್ಚಲಿದೆ. ನಗರ ಪ್ರದೇಶ ಕೂಡಾ ಗಣನೀಯವಾಗಿ ಹೆಚ್ಚಲಿದೆ. ಬೆಂಗಳೂರಿನ ವಾಣಿಜ್ಯ ಪ್ರದೇಶ 2030ರ ವೇಳೆಗೆ ಮೂರು ಪಟ್ಟು ಹೆಚ್ಚಿ 300 ದಶಲಕ್ಷ ಚದರ ಅಡಿ ಆಗಲಿದೆ. ಈ ಬೇಡಿಕೆ ಹೆಚ್ಚಳಕ್ಕೆ ನದಿ ಪಾತ್ರಗಳು ಬಲಿಯಾಗುವ ಸಾಧ್ಯತೆ ಇದೆ. ಈಶಾನ್ಯ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಯಾದಗಿರಿ ಹಾಗೂ ಬೀದರ್‌ನಲ್ಲಿ ಹವಾಮಾನ ಬದಲಾವಣೆ ಪರಿಣಾಮವಾಗಿ ಜಲ ಸಂಪನ್ಮೂಲ ಕುಸಿಯಲಿದ್ದು, ಕಾವೇರಿ, ನೇತ್ರಾವತಿ, ಶರಾವತಿ ಹಾಗೂ ಕಾಳಿ ನದಿ ಪಾತ್ರಗಳ ಪ್ರಮಾಣವನ್ನು ಅಂದಾಜು ಮಾಡಿಲ್ಲ. ಪ್ರಸ್ತುತ ರಾಜ್ಯದಲ್ಲಿ 176 ತಾಲೂಕುಗಳ ಪೈಕಿ 90 ತಾಲೂಕುಗಳು ನೀರಿನ ಒತ್ತಡ ಎದುರಿಸುತ್ತಿವೆ. ಈ ಪೈಕಿ ಅರ್ಧದಷ್ಟು ತೀವ್ರ ನೀರಿನ ಕೊರತೆ ಎದುರಿಸುತ್ತಿವೆ.
ರಾಜ್ಯ ಕೆಲ ಗಂಭೀರ ಯೋಜನೆಗಳನ್ನು ಅನುಷ್ಠಾನಗೊಳಿಸಲೇ ಬೇಕಾಗಿದೆ. ಅಕ ಕ್ಷಮತೆಯ ಲೈಟಿಂಗ್ ವ್ಯವಸ್ಥೆಯ ಮೂಲಕ ವಿದ್ಯುತ್ ಬೇಡಿಕೆ ಕಡಿಮೆ ಮಾಡಬಹುದಾಗಿದೆ. ಅಂತೆಯೇ ಮಧ್ಯಮವರ್ಗದವರು ಹೆಚ್ಚು ಹೆಚ್ಚಾಗಿ ಪುನರ್ಬಳಕೆ ಮೂಲದ ಇಂಧನ ವಿದ್ಯುತ್ ಬಳಸುವಂತೆ ಮನವೊಲಿಸಬೇಕು. ವಿದ್ಯುತ್ ಸರಬರಾಜು ವೇಳೆ ಆಗುವ ನಷ್ಟವನ್ನು ಶೇ.7ಕ್ಕೆ ಇಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ ನೀರಿನ ಬೇಡಿಕೆಯ ಬೆಳೆಗಳಾದ ಕಬ್ಬು ಮತ್ತಿತರ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು. ಎಲೆಕ್ಟ್ರಿಕ್ ಬಸ್ಸುಗಳು ಹಾಗೂ ಕಾರುಗಳನ್ನು ಪರಿಚಯಿಸಿ, ಹೆದ್ದಾರಿಯುದ್ದಕ್ಕೂ ಚಾರ್ಜ್ ಮಾಡಲು ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು. ಸಂಘಟಿತ ಅರಣ್ಯ ಬೆಳೆಸುವ ಹಾಗೂ ಪಶ್ಚಿಮ ಘಟ್ಟ ಸಂರಕ್ಷಣೆ ಪ್ರಯತ್ನಗಳು ತುರ್ತು ಅಗತ್ಯ.
ಏಕೀ ವಿನಾಶ?
ಹೆಚ್ಚುತ್ತಿರುವ ಶುಷ್ಕತೆ ಹಾಗೂ ಭೂ ಹಿಡುವಳಿ ಪ್ರಮಾಣ ಕಡಿಮೆಯಾಗಿರುವುದರಿಂದ ಜೀವನಾಧಾರಕ್ಕಾಗಿ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ ಕೌಶಲ ಕೊರತೆಯಿಂದ ಅಸಂಘಟಿತ ವಲಯ ಕಾರ್ಮಿಕರಾಗಿ ದುಡಿಯುವ ಕಾರಣದಿಂದ ಆದಾಯ ಕನಿಷ್ಠವಾಗುತ್ತದೆ. ಈ ಕಾರಣದಿಂದ ನಗರಗಳಲ್ಲಿ ಕೊಳಗೇರಿಗಳು ಅನಿಯಂತ್ರಿತವಾಗಿ ಬೆಳೆಯುತ್ತಲೇ ಇವೆ. ಹೀಗೆ ಸ್ಮಾರ್ಟ್ ಸಿಟಿ ಅಥವಾ ಸುಸ್ಥಿರ ನಗರಗಳ ಕನಸಿನಿಂದ ಒಣ ಭೂಮಿಯ ಮಂದಿ ನಗರಗಳಿಗೆ ಲಗ್ಗೆ ಇಡುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಪ್ರತಿ ನಿಮಿಷವೂ 30 ಗ್ರಾಮಗಳು ನಗರ ಸೇರುತ್ತಿವೆ.
ಪ್ಯಾರಿಸ್ ಒಪ್ಪಂದದ ಅನ್ವಯ ಎಲ್ಲ ದೇಶಗಳೂ ಸರಾಸರಿ ಉಷ್ಣಾಂಶ ಏರಿಕೆ ಪ್ರಮಾಣವನ್ನು 2 ಡಿಗ್ರಿ ಸೆಲ್ಸಿಯಸ್‌ನ ಪರಿಯಲ್ಲಿ ಇಡಲು ಪ್ರಯತ್ನ ಮಾಡಬೇಕು. ಕರ್ನಾಟಕದಲ್ಲಿ ನಗರೀಕರಣ ವೇಗವಾಗಿ ಆಗುತ್ತಿದ್ದು, ರಾಜ್ಯದ ಶೇ.37ರಷ್ಟು ಮಂದಿ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ವಿದ್ಯುತ್, ಸಾರಿಗೆ, ಮೂಲಸೌಕರ್ಯ ವಲಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಇದರ ಜತೆಗೆ ಜಲಸಂಪನ್ಮೂಲ ಹಾಗೂ ಅರಣ್ಯ ಸಂಪನ್ಮೂಲ ಸಂರಕ್ಷಣೆಗೂ ಆದ್ಯತೆ ನೀಡಬೇಕಾಗಿದೆ. ಇದರ ಜತೆಗೆ ಘನ ತ್ಯಾಜ್ಯ ನಿರ್ವಹಣೆ ಹಾಗೂ ತ್ಯಾಜ್ಯ ನೀರಿನ ಸಂಸ್ಕರಣೆ ಕೂಡಾ ಆದ್ಯತಾ ವಲಯ.
ಕರ್ನಾಟಕ- ಕೆಲ ಮಹತ್ವದ ಮಾಹಿತಿ
ಕರ್ನಾಟಕ ದೇಶದಲ್ಲಿ ಏಳನೆ ಅತಿದೊಡ್ಡ ರಾಜ್ಯ. ದೇಶದ ಜಿಡಿಪಿಗೆ ರಾಜ್ಯದ ಪಾಲು ಶೇ. 5.6.
ಅತ್ಯಕ ಪ್ರಮಾಣದಲ್ಲಿ ಉಕ್ಕು ಹಾಗೂ ಸಿಮೆಂಟ್ ಉದ್ಯಮಗಳನ್ನು ಹೊಂದಿರುವ ಕರ್ನಾಟಕ, ದೇಶದ ಐದನೆ ಅತಿದೊಡ್ಡ ಕೈಗಾರಿಕಾ ರಾಜ್ಯ. ದೇಶದ ಹೂಡಿಕೆದಾರ ಸ್ನೇಹಿ ರಾಜ್ಯಗಳ ಪೈಕಿ ಒಂದು.
ರಾಜ್ಯದಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್‌ನಲ್ಲಿ ಶೇ. 39ರಷ್ಟನ್ನು ರೈತರಿಗೆ ಉಚಿತವಾಗಿ ನೀಡಲಾ ಗುತ್ತಿದ್ದು, 2014ರ ರಾಜ್ಯ ಮುಂಗಡ ಪತ್ರದ ಅಂದಾಜಿ ನಂತೆ ವಿದ್ಯುತ್ ಸಬ್ಸಿಡಿ ಪ್ರಮಾಣ 7 ಸಾವಿರ ಕೋಟಿ.
ಶೇ. 37ರಷ್ಟು ನೀರಾವರಿ ಭೂಮಿಗೆ ಅಂತರ್ಜಲ ಬಳಕೆಯಾಗುತ್ತಿದ್ದು, ಪಂಪ್‌ಗಳ ಮೂಲಕ ನೀರೆತ್ತಿ ನೀರುಣಿಸಲಾಗುತ್ತಿದೆ. ಬಹುತೇಕ ಎಲ್ಲ ಪಂಪ್‌ಗಳೂ ಇಂಧನ ಕ್ಷಮತೆ ಕಡಿಮೆ ಇರುವಂತಹವು.
ರಾಜ್ಯದಲ್ಲಿ 10 ದಶಲಕ್ಷ ಮನೆಗಳಲ್ಲಿ ಅರುವತ್ತೊಂದು ದಶಲಕ್ಷ ಜನ ವಾಸವಿದ್ದು, ಒಟ್ಟು ವಿದ್ಯುತ್‌ನ ಶೇ.19ರಷ್ಟನ್ನು ಬಳಸುತ್ತಾರೆ.
ವಾಣಿಜ್ಯ ವಲಯ ಶೇ.11ರಷ್ಟು ವಿದ್ಯುತ್ ಬಳಕೆ ಮಾಡಿಕೊಳ್ಳುತ್ತದೆ.
ವಿದ್ಯುತ್ ವಿತರಣೆ ವೇಳೆ ಶೇ.18ರಷ್ಟು ವಿದ್ಯುತ್ ನಷ್ಟವಾಗುತ್ತಿದೆ.
ಬೃಹತ್ ಉದ್ದಿಮೆಗಳ ಉತ್ಪಾದನಾ ವೆಚ್ಚದಲ್ಲಿ ಶೇ. 40ರಷ್ಟು ಹಣ ವಿದ್ಯುತ್‌ಗೆ ಬಳಕೆಯಾಗುತ್ತಿದೆ.