ಸಮಸ್ಯೆಗಳ ಸರಮಾಲೆಯೇ ಅರಸು ಆಡಳಿತ-ಎಂ.ರಘುಪತಿ
ಭಾಗ 3
ರಸು ಶಕೆ ಆರಂಭ
20ನೆ ಮಾರ್ಚ್ 1972ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದೇವರಾಜ ಅರಸು, ಸಚಿವ ಸಂಪುಟ ರಚನೆಯಲ್ಲೂ ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಲು ಅಣಿಯಾದರು. ಹಾಗಂತ ಅರಸು ಮೇಲ್ಜಾತಿಯ ಜನರನ್ನು ಕಡೆಗಣಿಸಲಿಲ್ಲ. ಅವರಲ್ಲೂ ದಕ್ಷರು, ಅನುಭವಸ್ಥರು, ಯೋಗ್ಯರು, ಬುದ್ಧಿವಂತರು ಯಾರ್ಯಾರಿದ್ದಾರೆ, ಯಾವ ಯಾವ ಕ್ಷೇತ್ರದಲ್ಲಿ ಪರಿಣಿತರಿದ್ದಾರೆ ಎಂಬುದನ್ನೆಲ್ಲ ಅಳೆದು ತೂಗಿ, ಅಂತಹವರಿಗೆ ಸೂಕ್ತ ಸ್ಥಾನ ಮಾನ ನೀಡಿ ಗೌರವಿಸಿದರು. ಸಂಡೂರಿನ ರಾಜ ಎಂ.ವೈ.ಘೋರ್ಪಡೆಯವರು ಶುದ್ಧಹಸ್ತರು, ಅವರು ಹಣಕಾಸು ಸಚಿವರಾದರು. ಬಹುಸಂಖ್ಯಾತ ಲಿಂಗಾಯತರ ಪೈಕಿ ಚನ್ನಬಸಪ್ಪನವರಿಗೆ ನೀರಾವರಿ, ಸಿದ್ದವೀರಪ್ಪನವರಿಗೆ ಆರೋಗ್ಯ, ಕೆ.ಎಚ್.ಪಾಟೀಲರಿಗೆ ಅರಣ್ಯಗಳಂತಹ ಭಾರೀ ಖಾತೆಗಳನ್ನೇ ನೀಡಿದರು; ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣರಿಗೆ ಕೈಗಾರಿಕೆ, ಹುಚ್ಚಮಾಸ್ತಿಗೌಡರಿಗೆ ಕಂದಾಯ ಖಾತೆ ಕೊಟ್ಟರು; ದಲಿತ ಬಸವಲಿಂಗಪ್ಪನವರಿಗೆ ನಗರಾಭಿವೃದ್ಧಿ, ಪ್ರಭಾಕರ್‌ಗೆ ಸಮಾಜ ಕಲ್ಯಾಣ, ತೀರ್ಥಹಳ್ಳಿಯ ಬದರಿ ನಾರಾಯಣರಿಗೆ ಶಿಕ್ಷಣ ಖಾತೆ ನೀಡಿದರು.
ಇವರಿಷ್ಟೂ ಜನ ಸಚಿವ ಸ್ಥಾನ ಪಡೆಯಲು ಅರ್ಹರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ವಿಧಾನಸೌಧವನ್ನೇ ನೋಡದ, ಅರ್ಹತೆಯಿದ್ದರೂ ಅವಕಾಶವಂಚಿತರಾದ ಸಣ್ಣಪುಟ್ಟ ಜಾತಿಯ ಜನರನ್ನು ಅಲ್ಲಿಯವರೆಗೆ ಆಳಿದ ಎಲ್ಲ ಮುಖ್ಯಮಂತ್ರಿಗಳೂ ಕಡೆಗಣಿಸಿದ್ದರು. ಆದರೆ ಅರಸು ಅಂತಹ ನಿರ್ಲಕ್ಷಿತ ಸಮುದಾಯಗಳತ್ತ ವಿಶೇಷ ಗಮನ ಹರಿಸಿ, ಗುರುತಿಸಿ, ಅವರಿಗೆ ಅಕಾರದ ಸ್ಥಾನಗಳನ್ನು ನೀಡಿದರು. ಆ ಸಮುದಾಯಗಳು ತಲೆ ಎತ್ತಿ ನಡೆಯುವಂತೆ ನೋಡಿಕೊಂಡರು. ಕುರುಬರ ಡಿ.ಕೆ. ನಾಯ್ಕರ್, ದೇವಾಡಿಗರ ವೀರಪ್ಪ ಮೊಯ್ಲಿ, ಕೋಲಿ ಸಮಾಜದ ದೇವೇಂದ್ರಪ್ಪ ಘಾಳಪ್ಪ, ಬಂಜಾರ ಸಮುದಾಯದ ರಾಠೋಡ್, ಎಡಗೈ ದಲಿತರ ಆರ್.ಡಿ.ಕಿತ್ತೂರು, ಬೆಸ್ತರ ಮನೋರಮಾ ಮಧ್ವರಾಜ್, ಕ್ರಿಶ್ಚಿಯನ್ನರ ಇ.ಇ.ವಾಜ್, ಒಕ್ಕಲಿಗರ ಎಚ್.ಎನ್.ನಂಜೇಗೌಡ, ಬಂಟರ ಸುಬ್ಬಯ್ಯ ಶೆಟ್ಟಿ, ಮುಸ್ಲಿಂ ಸಮುದಾಯದ ಅಝೀಝ್ ಸೇಠ್, ಮುಹಮ್ಮದ್ ಅಲಿ, ನಾಯ್ಡು ಕಮ್ಯುನಿಟಿಯ ರಾಮುಲು- ಇವರೆಲ್ಲರೂ ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸಿ, ಗೆದ್ದುಬಂದವರು. ಅರಸು ಅವರ ಸಾಮಾಜಿಕ ನ್ಯಾಯದಡಿಯಲ್ಲಿ ಸಚಿವರಾಗಿ ಅಕಾರವನ್ನು ಅನುಭವಿಸಿದರು. ಶೋಷಿತ ಸಮುದಾಯಗಳಿಗೆ ಧೈರ್ಯ ತುಂಬಿದರು, ಪ್ರಜಾಪ್ರಭುತ್ವದ ಆಶಯವನ್ನು ಸಾಕಾರಗೊಳಿಸಿದರು.
ಮಹಿಳಾ ಸ್ಪೀಕರ್ ಮತ್ತು ಅಪರೂಪದ ಅಕಾರಿಗಳು
ಅರಸು ಮುಖ್ಯಮಂತ್ರಿತ್ವದ ಮತ್ತೊಂದು ಮಹತ್ವದ ನಿರ್ಧಾರ ಎಂದರೆ, ಭಾರತದಲ್ಲಿಯೇ ಮೊತ್ತ ಮೊದಲ ಬಾರಿಗೆ ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿದ್ದು. ಕೆ.ಎಸ್.ನಾಗರತ್ನಮ್ಮ ಮೊದಲ ಮಹಿಳಾ ಸ್ಪೀಕರ್ ಆದರೆ, ಅರಸು ಅವರಿಂದ ತೆರವಾದ ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಲಿತ ನಾಯಕ ಕೆ.ಎಚ್.ರಂಗನಾಥ್ ನೇಮಕವಾದರು.
ಇದು ಚುನಾಯಿತ ಪ್ರತಿನಿಗಳ ಆಯ್ಕೆ ಮತ್ತು ಅಕಾರ ಹಂಚಿಕೆಯಲ್ಲಿ ಅರಸು ತೋರಿದ ಇಚ್ಛಾಶಕ್ತಿಯ ದರ್ಶನವಾದರೆ, ಮುಖ್ಯಮಂತ್ರಿಗಳ ಕಚೇರಿಯ ದಿನನಿತ್ಯದ ಆಡಳಿತಾತ್ಮಕ ಕೆಲಸಗಳಿಗಾಗಿ ಉನ್ನತ ಮಟ್ಟದ ಅಕಾರಿಗಳನ್ನು ಆರಿಸಿಕೊಳ್ಳುವಾಗ ಅರಸು ತಳೆದ ಜಾತ್ಯತೀತ ನಿಲುವು, ಈ ಕಾಲಕ್ಕೂ ಯಾವ ಮುಖ್ಯಮಂತ್ರಿಗೂ ಸಾಧ್ಯವಾಗಿಲ್ಲ. ಚ್ೀ ಸೆಕ್ರೆಟರಿಯಾಗಿ ಆರ್.ಜೆ. ರೆಬೆಲೊ, ಸೆಕ್ರೆಟರಿ ಟು ಸಿಎಂ ಆಗಿ ಜೆ.ಸಿ. ಲಿನ್, ಡೆಪ್ಯುಟಿ ಸೆಕ್ರೆಟರಿ ಟು ಸಿಎಂ ಆಗಿ ಚಿರಂಜೀವಿ ಸಿಂಗ್‌ರಂತಹ ಐಎಎಸ್ ಅಕಾರಿಗಳು ನೇಮಕವಾದರೆ, ಪಿಎಗಳಾಗಿ ಗೋಪಾಲಶಾಸಿ ಮತ್ತು ಮೊಹಿದ್ದೀನ್‌ರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವರಿಷ್ಟೂ ಜನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ರೆಬೆಲೊ, ಲಿನ್ ಕ್ರಿಶ್ಚಿಯನ್ ಆದರೆ, ಚಿರಂಜೀವಿ ಸಿಂಗ್ ದೂರದ ಪಂಜಾಬಿನವರು. ಗೋಪಾಲಶಾಸಿ ಬ್ರಾಹ್ಮಣರು, ಮೊಹಿದ್ದೀನ್ ಮುಸ್ಲಿಮರು. ಈ ರೀತಿ ಯಾವ ಮುಖ್ಯಮಂತ್ರಿ ಮಾಡಿದ್ದಾರೆ ಹೇಳಿ? ಇವರಿದ್ದಾರಲ್ಲ, ಇಷ್ಟೂ ಜನ ಎಕ್ಸ್‌ಟ್ರಾಡಿನರಿ ಬುದ್ಧಿವಂತರು, ದಕ್ಷರು, ನಾಯಕನಿಗೆ ನಿಷ್ಠೆಯಿಂದಿದ್ದು, ನಾಡಿನ ಒಳಿತಿಗಾಗಿಯೇ ದುಡಿದ ನಿಸ್ವಾರ್ಥ ಜೀವಿಗಳು.
ಮಗುವಿನಂತೆ ಅತ್ತ ಅರಸು
ಅರಸು ಮುಖ್ಯಮಂತ್ರಿಯಾಗಿ ಅಕಾರ ವಹಿಸಿಕೊಂಡ ಮೇಲೆ, ಅವರಿಗೆ ಉತ್ತರ ಕರ್ನಾಟಕದ ಕಡೆ ಪ್ರವಾಸ ಮಾಡಬೇಕೆಂಬ ಆಸೆಯಾಯಿತು. ಒಬ್ಬೊಬ್ಬರೆ ಹೋಗೋ ಆಸಾಮಿಯೇ ಅಲ್ಲ, ಜಾಯಮಾನವೂ ಅವರದ್ದಲ್ಲ. ಅಕಾರ ಇದ್ದಾಗಲು, ಇಲ್ಲದಿದ್ದಾಗಲು ಜೊತೆಗೆ ಯಾರಾದರೂ ಇರಲೇಬೇಕು. ನನಗೆ, ರಮೇಶ್‌ಕುಮಾರ್‌ಗೆ ಸಿದ್ಧರಾಗಲು ಹೇಳಿದರು. ಸಿದ್ಧರಾಗಿ ಅವರ ಮನೆಗೆ ಹೋದಾಗ, ‘ವಿಕ್ಟೋರಿಯಾ ಆಸ್ಪತ್ರೆಗೆ ನಡಿಯಪ್ಪ’ ಎಂದರು ಡ್ರೈವರ್‌ಗೆ. ನಮಗೆ ಆಶ್ಚರ್ಯ. ನೋಡಿದರೆ ಅಲ್ಲಿ ಅರಸು ಅವರ ತಾಯಿ ಅಡ್ಮಿಟ್ ಆಗಿದ್ದರು. ಚಿಕಿತ್ಸೆ, ವಿಶ್ರಾಂತಿ ಪಡೆಯುತ್ತಿದ್ದರು. ಪಾರ್ಟಿ, ಚುನಾವಣೆ, ಭಾಷಣ, ರಾಜಕಾರಣದಲ್ಲಿಯೇ ಮುಳುಗಿಹೋಗಿದ್ದ ಅರಸು ಅಮ್ಮನನ್ನು ಮರೆತುಬಿಟ್ಟಿದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಅವರು ಬಂದಿರಲಿಲ್ಲ. ಹೆಮ್ಮೆಯ ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಲೂ ಆಗದೆ ಆಸ್ಪತ್ರೆ ಸೇರಿದ್ದರು. ಆ ಪಾಪಪ್ರಜ್ಞೆಯನ್ನು ಕಳೆದುಕೊಳ್ಳಲು ಅರಸು ಅಮ್ಮನ ಮಡಿಲಲ್ಲಿ ತಲೆಯಿಟ್ಟು ಮಲಗಿದರು. ತಾನೊಬ್ಬ ಮುಖ್ಯಮಂತ್ರಿ, ತನ್ನ ಸುತ್ತ ಜನರಿದ್ದಾರೆ, ನೋಡುತ್ತಿದ್ದಾರೆ ಎಂಬ ಯಾವ ಅಳುಕು-ಅಹಂ ಕೂಡ ಇಲ್ಲ. ಅವರ ಅಮ್ಮನೂ ಅಷ್ಟೇ... ಚಿಕ್ಕ ಮಗುವನ್ನು ಸಂತೈಸುವಂತೆ ತಲೆ ಸವರಿ, ‘‘ದೇವರಾಜ ಊಟ ಮಾಡದಪ್ಪ, ಕಪ್ಪಗಾಗಿದ್ದೀಯಲ್ಲೊ, ಓಡಾಟ ಜಾಸ್ತಿ ಆಯ್ತ, ಕೆಲಸ ಹೆಚ್ಚಾಯ್ತ, ಬಾಳ ಮೀಟಿಂಗ್‌ಗಳಂತಲ್ಲ, ರಾಜರ ಕೆಲಸ ಕಷ್ಟದ್ದು ಕಣಪ್ಪ, ಹಾಗಂತ ಸುಮ್ಮನೆ ಕೂರಬೇಡ, ಹತ್ತು ಜನಕ್ಕೆ ಒಳ್ಳೇದು ಮಾಡಪ್ಪ’’ ಅಂದರು. ಹಾಗೆನ್ನುತ್ತಿದ್ದಂತೆಯೇ ಅರಸು ಚಿಕ್ಕ ಮಗುವಿನಂತೆ ಅಳೋಕೆ ಶುರು ಮಾಡಿಬಿಟ್ಟರು. ಎಷ್ಟೇ ಕಂಟ್ರೋಲ್ ಮಾಡಿಕೊಂಡರೂ ಅಳು ನಿಲ್ಲಲಿಲ್ಲ. ನಾನು ಹೋಗಿ ಕರ್ಚ್ೀ ಕೊಟ್ಟರೂ ದುಃಖ ತಡೆಯಲಾಗಲಿಲ್ಲ... ತಾಯಿ-ಮಗನ ಬಾಂಧವ್ಯವನ್ನು ನಾವು ಕಣ್ಣಾರೆ ಕಂಡೆವು.
ಹಣ್ಣು ತಿಂದ ಅರಸು
ವಿಕ್ಟೋರಿಯಾ ಆಸ್ಪತ್ರೆಯಿಂದ ದಾರಿಯುದ್ದಕ್ಕೂ ತಮ್ಮ ಬಾಲ್ಯ, ಬಡತನ, ಹೊಲ ಉತ್ತಿದ್ದು, ಓದಿದ್ದು, ಅಪ್ಪ ಸತ್ತಿದ್ದು ಎಲ್ಲವನ್ನು ಹೇಳುತ್ತಾ ಹೋದರು. ತುಮಕೂರಿಗೆ ಮುಂಚೆ ಕ್ಯಾತ್ಸಂದ್ರದ ರೈಲ್ವೆ ಗೇಟ್ ಸಿಕ್ತು, ರೈಲು ಹೋಗುವುದಿತ್ತು, ಗೇಟ್ ಹಾಕಿದ್ದರು. ಮುಖ್ಯಮಂತ್ರಿಯಾದರು ಕಾರು ನಿಲ್ಲಿಸಬೇಕಲ್ಲ, ನಿಲ್ಲಿಸಿದರು. ಆ ರೈಲ್ವೆ ಗೇಟ್ ಹತ್ರ ಕಡ್ಲೆಕಾಯಿ, ಹಲಸಿನಹಣ್ಣು ಮಾರುತ್ತಿದ್ದರು. ಅವರನ್ನು ಕೂಗಿ ಕರೆದರು. ಅವರಲ್ಲಿದ್ದ ಅಷ್ಟೂ ಕಡ್ಲೆಕಾಯಿ, ಹಲಸಿನಹಣ್ಣನ್ನು ಕಾರಿಗೆ ಸುರಿಯಲು ಹೇಳಿದರು, ‘ರೀ ಮೊಹಿದ್ದೀನ್ ಅವರಿಗೆ ದುಡ್ಡು ಕೊಡಿ’ ಎಂದು ಹೇಳಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ರಸ್ತೆಯ ಪಕ್ಕದಲ್ಲಿ ನಿಂತು ಹಲಸಿನಹಣ್ಣು ತಿನ್ನಲು ಶುರು ಮಾಡಿದರು. ತಿನ್ನುತ್ತಲೇ, ‘ಏನಪ್ಪ ಚೆನ್ನಾಗಿದಿಯಾ, ಯಾವೂರಪ್ಪ ನಿಂದು, ಎಷ್ಟು ಜಮೀನಿದೆ’ ಅಂದರು. ಆತ ‘ಇಲ್ಲೇ ಹಳ್ಳಿ ಸ್ವಾಮಿ ಒಂದೈದು ಮೈಲಿ ಆಯ್ತದೆ, ಒಂದು ಗುಂಟೆ ಜಮೀನದೆ, ಕೂಲಿ ನಾಲಿ ಮಾಡ್ಕೊಂಡು, ಕಡ್ಲೇಕಾಯಿ ಮಾರಕೊಂಡು ಜೀವನ ಮಾಡ್ತೀವಿ ಬುದ್ಧಿ’ ಅಂದ. ‘ನಿಮಗೆ ಸರಕಾರದ ಸೈಟು ಮನೆ ಏನೂ ಸಿಕ್ಕಿಲ್ವಾ, ನಿಮ್ಮ ಊರಿಗೆ ತಹಶೀಲ್ದಾರ್ ಬಂದಿಲ್ವಾ’ ಎಂದರು. ಅವರು ‘ಇಲ್ಲ ಸ್ವಾಮಿ ಯಾರೂ ಬಂದಿಲ್ಲ’ ಅಂದರು. ಅಲ್ಲೇ ಇದ್ದ ಕಲೆಕ್ಟರ್ ಕರೆದು ‘ನೋಡಿ ನಾನು ಬಿಜಾಪುರಕ್ಕೆ ಹೋಗಿ ಬರೋದರೊಳಗೆ ನಿಮ್ಮ ತಹಶೀಲ್ದಾರ್ ಇವರ ಹಳ್ಳಿಗೆ ಹೋಗಿ ಸೈಟು ಪಟ್ಟಾ ಕೊಟ್ಟಿರಬೇಕು, ಅದರ ವರದಿಯನ್ನು ನೀವು ನನಗೆ ಕೊಡಬೇಕು’ ಎಂದು ಗಡುಸಾಗಿ ಹೇಳಿದರು. ಅರಸು ಅವರು ಹೇಳಿದ ಧಾಟಿಗೆ ಅಕಾರಿ ನಡುಗಿಹೋದರು.
ರೈಲು ಇನ್ನೂ ಬರಲಿಲ್ಲ. ಅಲ್ಲಿ ಮರದ ಕೆಳಗೆ ಎಳನೀರು ಮಾರುವವನತ್ತ ಹೆಜ್ಜೆ ಹಾಕಿದ ಅರಸು, ‘ಏನಪ್ಪಾ, ಒಂದು ಎಳನೀರು ಕೊಡು’ ಎಂದರು. ಸ್ಟ್ರಾ ಇಲ್ಲದೆ ಎತ್ತಿ ಕುಡಿದರು. ನಾನೊಬ್ಬ ಮುಖ್ಯಮಂತ್ರಿ ಎನ್ನುವ ಗತ್ತು-ಗಾಂಭೀರ್ಯದ ಹಂಗು ತೊರೆದು, ಸ್ಥಾನ-ಮಾನದ ಸೊೆಸ್ಟಿಕೇಷನ್ ಸೈಡಿಗಿಟ್ಟು ಹಳ್ಳಿಯ ಹೈದನಂತೆ ಅಡ್ಡಾಡಿದರು. ಅಂದರೆ ಅವರ ಸ್ವಭಾವವೇ ಅಂಥಾದ್ದು, ಅವರು ಬಯಸುವುದೇ ಅಂತಹ ಬಡವರನ್ನು, ಅವರಿರುವುದೇ ಅವರೊಂದಿಗೆ... ಇವತ್ತು ಮುಖ್ಯಮಂತ್ರಿಯಲ್ಲ, ಮಂತ್ರಿಯಲ್ಲ, ಯಕಶ್ಚಿತ್ ಶಾಸಕ ಕಾರಿನಿಂದ ಕೆಳಗಿಳಿಯುವುದಿಲ್ಲ. ಅರಸುಗೂ ಇವತ್ತಿನ ರಾಜಕಾರಣಿಗಳಿಗೂ ಇರುವ ಬಹಳ ದೊಡ್ಡ ವ್ಯತ್ಯಾಸ ಇದೆ.
ನಾನ್‌ವೆಜ್ ನಮಗೆ, ಉಪ್ಪಿಟ್ಟು ಅವರಿಗೆ
ಅಲ್ಲಿಂದ ಮುಂದಕ್ಕೆ ಹಿರಿಯೂರು ಗೆಸ್ಟ್ ಹೌಸ್‌ನಲ್ಲಿ ತಂಗಿದ್ದೇವೆ, ಜೈನರ ಪೈಕಿಯ ನ್ಯಾಮನಾದಯ್ಯ ಎಂಬ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ, ಅರಸುಗೆ ಇಷ್ಟ ಎಂದು ಮನೆಯಿಂದ ಅವರೇಕಾಳು ಉಪ್ಪಿಟ್ಟು ಮಾಡಿಸಿಕೊಂಡು ಬಂದಿದ್ದ. ದೇಕ್ಷಾ ತುಂಬಾ ಇತ್ತು. ನಮಗೆಲ್ಲರಿಗೂ ದೇವರ ಪ್ರಸಾದದಂತೆ ಹಂಚಿದ ಅರಸು, ದೇಕ್ಷಾವನ್ನೇ ಮುಂದಿಟ್ಟುಕೊಂಡು ತಿನ್ನತೊಡಗಿದರು. ನನಗದು ಕೃಷ್ಣ-ಕುಚೇಲರ ಸ್ನೇಹ-ಸಂಬಂಧದಂತೆ ಕಾಣಿಸಿತು. ಅವರಿಬ್ಬರ ನಡುವಿನ ಮಾತುಕತೆಯಲ್ಲಿ ಮಕ್ಕಳು, ದನಕರು, ಹೊಲ-ಮನೆ, ಮಳೆ, ಬೆಳೆ, ಬದುಕು ಎಲ್ಲವೂ ಬಂದು ಹೋಯಿತು. ಆತ ಹೋದ ಮೇಲೆ, ‘ಏನ್ಸಾರ್ ನಮಗೂ ಕೊಡದಂತೆ ತಿಂದಿರಲ್ಲ’ ಎಂದರೆ, ‘ನಿಮಗೆ ಮುಂದೆ, ಬಳ್ಳಾರಿಯ ಭಾಸ್ಕರ್ ನಾಯ್ಡು ಮನೇಲಿ ನಾನ್ ವೆಜ್ ಇದೆ, ಅಲ್ಲಿ ಚೆನ್ನಾಗಿ ಊಟ ಮಾಡುವಿರಂತೆ’ ಎಂದು ಹೇಳಿ ಬಾಯಿ ಮುಚ್ಚಿಸಿದರು. ಅರಸು ನಾನ್ ವೆಜ್ ತಿನ್ನೋರು, ಆದರೆ ಬಡವರ ಮನೆಯ ಉಪ್ಪಿಟ್ಟಿನ ಮುಂದೆ ಶ್ರೀಮಂತ ನಾಯ್ಡುವಿನ ನಾನ್ ವೆಜ್ ರುಚಿಸುತ್ತಿರಲಿಲ್ಲ. ಹೊಸಪೇಟೆ ಟಿಬಿ ಡ್ಯಾಂ, ಆಲಮಟ್ಟಿ ಡ್ಯಾಂ, ನಾರಾಯಣಪುರ ನಾಲೆ ಕೆಲಸಗಳ ವೀಕ್ಷಣೆಯನ್ನು ಬೆಳಗಿನ ಜಾವದ ವಾಕಿಂಗ್‌ನಲ್ಲೇ ಮಾಡಿ ಮುಗಿಸಿಬಿಡುತ್ತಿದ್ದರು.
ಲೆ ದಂಡೆ ಮೇಲೆ ವಾಕಿಂಗ್ ಮಾಡುತ್ತಲೇ ಇಂಜನಿಯರ್‌ಗೆ ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಿದ್ದರು. ಮಳೆಗಾಲದಲ್ಲಿ ಮಳೆ ಬೀಳುವ ಪ್ರಮಾಣ, ಬೇಸಿಗೆಯಲ್ಲಿ ನೀರಿನ ಮಟ್ಟ, ಬೆಳೆ ನಾಟಿ ಮಾಡಿದಾಗಿನ ನೀರಿನ ಒಳಹರಿವು-ಹೊರಹರಿವು, ನಾಲೆಯ ಉದ್ದ, ಎತ್ತರ, ಅಚ್ಚುಕಟ್ಟು ಪ್ರದೇಶ... ಹೀಗೆ ಎಲ್ಲವನ್ನು ಕೇಳುತ್ತಿದ್ದರು. ಅವರಲ್ಲಿ ಇಂಜಿನಿಯರ್‌ನ ತಾಂತ್ರಿಕ ಪರಿಣತಿಯೂ ಇತ್ತು, ಬೇಸಾಯಗಾರನ ಸಾಮಾನ್ಯ ಜ್ಞಾನವೂ ಇತ್ತು. ವಿಜ್ಞಾನವೂ ಗೊತ್ತಿತ್ತು. ಈತನ್ಮಧ್ಯೆ ಬಿಜಾಪುರದ ಬಳಿಯ ಕುಷ್ಠ ರೋಗಿಗಳ ವಸತಿನಿಲಯಕ್ಕೆ ಭೇಟಿ ಕೊಟ್ಟರು ಮತ್ತು ಚುನಾವಣೆಗೆ ಮುಂಚೆ ಬಿಜಾಪುರದ ಮಹಿಳೆಯರ ಮಡಕೆಯಲ್ಲಿ ಬೆಣ್ಣೆ ತಿಂದಿದ್ದನ್ನು ನೆನಪು ಮಾಡಿಕೊಂಡು, ಅದೇ ಮಹಿಳೆಯರನ್ನು ಕರೆಸಿಕೊಂಡು ಬೆಣ್ಣೆ ತಿಂದು ಕೈ ತುಂಬಾ ಕಾಸು ಕೊಟ್ಟು ಕಳುಹಿಸಿದರು. ಅಕಾರ ಇಲ್ಲದಾಗಲೂ, ಇದ್ದಾಗಲೂ ಅರಸು ಅರಸೂನೆ. ಇಂತಹ ಅರಸರಿಗೂ ಕಷ್ಟ ಕೋಟಲೆಗಳು ಕಾಡಿ ಕಂಗೆಡಿಸಿದ್ದವು.
ಸಂಕಷ್ಟಗಳ ಸರಮಾಲೆ
ಕರ್ನಾಟಕದಲ್ಲಿ ಅರಸು ಆಳ್ವಿಕೆಯ ಆರಂಭದ ದಿನಗಳಲ್ಲಿಯೇ, ಪಕ್ಷದೊಳಗೇ ಅರಸು ವಿರುದ್ಧ ಸಣ್ಣ ಪ್ರಮಾಣದ ಬಂಡಾಯ ಶುರುವಾಗಿತ್ತು. ಪಕ್ಷದ ಅಧ್ಯಕ್ಷರಾಗಿದ್ದ ಕೆ.ಎಚ್.ರಂಗನಾಥ್ ಮತ್ತು ಸ್ಪೀಕರ್ ಆಗಿದ್ದ ನಾಗರತ್ನಮ್ಮ, ಮಂತ್ರಿ ಮಾಡದ ಬಗ್ಗೆ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕದಿದ್ದರೂ, ಒಳಗೊಳಗೇ ಅರಸು ವಿರುದ್ಧ ಒಂದಾಗಿದ್ದರು. ಅರಸು ಅಕಾರಕ್ಕೇರಿದ ಮೂರು ತಿಂಗಳೊಳಗೆ ಉಪಚುನಾವಣೆ ಎದುರಾಯಿತು. ಹುಣಸೂರಿನಿಂದ ಗೆದ್ದಿದ್ದ ಕರಿಯಪ್ಪಗೌಡರನ್ನು ರಾಜೀನಾಮೆ ಕೊಡಿಸಿ, ಅರಸು ಸ್ಪರ್ಸಿದಾಗ ಮತ್ತೆ ಸೋಲಿಸುವ ಸೆಣಸಾಟ. ಆದರೆ ಅರಸು 20 ಸಾವಿರ ಮತಗಳ ಅಂತರದಿಂದ ಗೆದ್ದು ಬಂದರು. ಇದಾದ ಬಳಿಕ ಎಂಎಲ್‌ಸಿ ಆಯ್ಕೆ ವಿಚಾರ- ಎಂ.ಎಸ್.ಕೃಷ್ಣನ್‌ರಿಗೆ ಸ್ಥಾನ ಬಿಟ್ಟುಕೊಟ್ಟಿದ್ದಕ್ಕಾಗಿ ನನಗೆ, ಅರಸುಗೆ ಸ್ಥಾನ ತೆರವು ಮಾಡಿದ್ದಕ್ಕಾಗಿ ಕರಿಯಪ್ಪಗೌಡರಿಗೆ, ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಂಪುಟ ಸೇರಿದ ಎಸ್.ಎಂ.ಕೃಷ್ಣರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು.
ನಮ್ಮ ಜೊತೆಗೆ ಶಿವಮೊಗ್ಗದ ಎಸ್.ಟಿ.ರೆಡ್ಡಿ, ಎಲ್.ಜಿ. ಹಾವನೂರ್‌ರನ್ನೂ ಎಂಎಲ್‌ಸಿ ಮಾಡಿದರು. ಆಗ ಅರಸು, ‘ಯಾವ ಜನಾಂಗ ವಿಧಾನಸಭೆಯನ್ನು ಪ್ರವೇಶ ಮಾಡಲು ಸಾಧ್ಯವಿಲ್ಲವೋ ಆ ಜನಾಂಗವನ್ನು ಪರಿಷತ್ತಿಗೆ ನೇಮಕ ಮಾಡುವ ಮೂಲಕ ನಾವು ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು. ನನ್ನ ಮುಂದಿನ ಮುಖ್ಯಮಂತ್ರಿ ಯಾರಾಗ್ತರೋ ಏನೋ, ಅವರು ಮಾಡ್ತರೋ ಇಲ್ಲವೋ, ಕಾಲ ಕೂಡಿ ಬಂದಿದೆ, ಮಾಡೋಣ’ ಎಂದಿದ್ದರು. ಹೇಳಿದಂತೆಯೇ ಮಾಡಿದ್ದರು. ಇದೇ ಸೂತ್ರವನ್ನು ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗಲೂ ಅರಸು ಪಾಲಿಸಿದರು. ಆದರೆ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ, ಮುಖ್ಯಮಂತ್ರಿ ಅರಸು ಅವರಿಗೆ ಮುಜುಗರ, ಮುಖಭಂಗವನ್ನುಂಟುಮಾಡುವ ಪ್ರಸಂಗವೊಂದು ಜರಗಿತು. ಅದೇನೆಂದರೆ, ವೀರೇಂದ್ರ ಪಾಟೀಲರ ವಿರೋಧಪಕ್ಷ ಗೆದ್ದಿದ್ದು 42 ಸ್ಥಾನಗಳನ್ನು, ಆದರೆ ಅವರ ರಾಜ್ಯಸಭಾ ಅಭ್ಯರ್ಥಿಗೆ ಬಿದ್ದ ಮತಗಳು 48. ಅಂದರೆ ಆಡಳಿತ ಪಕ್ಷದ 6 ಶಾಸಕರು, ಸಿಎಂ ಅರಸು ವಿರುದ್ಧ, ಪಕ್ಷದ ವಿಪ್ ಉಲ್ಲಂಸಿ ಮತ ಚಲಾಯಿಸಿದ್ದರು. ಅರಸು ಅವರನ್ನು ನಾಡಿನ ಜನತೆ ಮೆಚ್ಚಿ ಬಹುಮತ ನೀಡಿ ಗೆಲ್ಲಿಸಿದ್ದರೂ, ತಮ್ಮ ಪಕ್ಷದವರೇ ಸೋಲಿಸಲು ಹವಣಿಸುತ್ತಿದ್ದರು ಎನ್ನುವುದಕ್ಕೆ ಇದನ್ನು ಹೇಳಿದೆ. ಆದರೆ ಅರಸು ಆ ಅವಮಾನವನ್ನೂ ಸಹಿಸಿಕೊಂಡರು.
ಇದಾಗಿ ಸ್ವಲ್ಪ ದಿನಕ್ಕೆ ಅರಸು ಮಂತ್ರಿಮಂಡಲದ ಸಚಿವ ಆರ್.ಡಿ.ಕಿತ್ತೂರು ಮೇಲೆ ಅತ್ಯಾಚಾರ, ಕಣ್ಮರೆ, ಕೊಲೆ ಆರೋಪ ಹೊರಿಸಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಲಾಯಿತು. ವಿರೋಧಪರಿಷತ್ತಿನಲ್ಲಿ ಹೆಗಡೆ ಮತ್ತು ವಿಧಾನಸಭೆಯಲ್ಲಿ ದೇವೇಗೌಡ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದರು. ಅರಸು ವಿರೋಧ ಪಕ್ಷಗಳ ಅಬ್ಬರಕ್ಕೆ ಮಣಿದು ಪ್ರಕರಣವನ್ನು ಸಿಓಡಿ ತನಿಖೆಗೆ ಆದೇಶಿಸಿದರು. ಮುಂದುವರಿದು ಕಿತ್ತೂರರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದರು. ಅಲ್ಲಿಗೆ ವಿರೋಧ ಪಕ್ಷಗಳು ತಣ್ಣಗಾದವು. ಆದರೆ ತಮ್ಮದೇ ಪಕ್ಷದ ನಾಯಕರು ದಿಲ್ಲಿಗೆ ತೆರಳಿ, ‘ಇಂಥ ರೇಪಿಸ್ಟ್‌ಗಳನ್ನೆಲ್ಲ ಮಂತ್ರಿ ಮಾಡಿಕೊಂಡಿದ್ದಾರೆ, ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ’ ಎಂದು ಇಂದಿರಾ ಗಾಂಗೆ ದೂರು ನೀಡಿ ಅರಸರನ್ನು ಅಕಾರದಿಂದ ಇಳಿಸಲು ಯತ್ನಿಸಿದರು. ರಾಜ್ಯದಿಂದ ಹೋಗಿ ಕೇಂದ್ರ ಮಂತ್ರಿಗಳಾದ ಕೆಂಗಲ್ ಹನುಮಂತಯ್ಯ ಮತ್ತು ಸರೋಜಿನಿ ಮಹಿಷಿಯವರೂ ಕೂಡ ಅರಸು ಬೆಂಬಲಕ್ಕೆ ನಿಲ್ಲದೆ ತಟಸ್ಥರಾದರು.
ದುರದೃಷ್ಟಕರ ಸಂಗತಿ ಎಂದರೆ, ಅತ್ಯಾಚಾರ, ಕೊಲೆ, ಮಹಿಳೆಯ ಕಣ್ಮರೆ ಯಾವುದೂ ನಡೆದಿರಲಿಲ್ಲ. ಮಹಿಳೆ ಸಹಾಯ ಕೇಳಿ ಮಂತ್ರಿ ಮನೆಗೆ ಬಂದಿದ್ದರು, ಬೆಂಗಳೂರಿನಲ್ಲಿ ತಮ್ಮವರಾರೂ ಇಲ್ಲದ ಕಾರಣ ರಾತ್ರಿ ಅಲ್ಲಿಯೇ ಉಳಿದು ಬೆಳಗ್ಗೆ ಎದ್ದು ಹೋಗಿದ್ದರು. ಇತ್ತ ಮಾಧ್ಯಮಗಳು ಬ್ಯಾನರ್ ಹೆಡ್ಡಿಂಗ್‌ನಲ್ಲಿ, ‘ಮಂತ್ರಿ ಮನೆಯಲ್ಲಿದ್ದ ಮಹಿಳೆ ಕಣ್ಮರೆ, ಅತ್ಯಾಚಾರ, ಕೊಲೆ’ ಎಂದು ಸುದ್ದಿ ಮಾಡಿದ್ದವು. ಇದರಿಂದ ದಲಿತ ಎಡಗೈ ಸಮುದಾಯಕ್ಕೆ ಸೇರಿದ ಕಿತ್ತೂರು ಮಂತ್ರಿ ಸ್ಥಾನ ಕಳೆದುಕೊಳ್ಳುವಂತಾಯಿತು. ಇದರ ನಡುವೆಯೇ, ಗುಂಡೂರಾವ್‌ರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ಅರಸು ಮುಂದಾದರು. ಆಗಲೂ ಪಕ್ಷದೊಳಗೇ ಭಾರೀ ವಿರೋಧ- ಆತ ಬ್ಯಾಂಕ್ ಕೇಸಿನಲ್ಲಿ ಸಿಕ್ಕಿಹಾಕಿಕೊಂಡಿದ್ದವನು, ಅಂತಹವನಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದೂ ಅಲ್ಲದೆ, ಈಗ ಸಚಿವ ಸ್ಥಾನ ನೀಡಿ ಕಾಂಗ್ರೆಸ್ಸನ್ನು ಕಳ್ಳರ ಪಕ್ಷ ಮಾಡಲು ಹೊರಟಿದ್ದೀರಾ ಎಂದು ಬಹಿರಂಗವಾಗಿಯೇ ಟೀಕೆಗಿಳಿದರು. ಮುಖ್ಯಮಂತ್ರಿ ಅರಸು ಬಂದ ಜಿಲ್ಲೆಯಿಂದಲೇ ಗುಂಡೂರಾವ್ ಬಂದಿದ್ದರೂ, ಬ್ರಾಹ್ಮಣರಿಗೆ ಪ್ರಾತಿನಿಧ್ಯ ಕೊಡಬೇಕೆಂದು ಅವರನ್ನು ಯುವಜನ ಕ್ರೀಡೆ ಮತ್ತು ವಾರ್ತಾ ಇಲಾಖೆ ಸಚಿವರನ್ನಾಗಿ ಮಾಡಿದರು. ಇದು ಕೂಡ ದಿಲ್ಲಿಯ ದೂರಿಗೆ ಕಾರಣವಾಯಿತು. ಅಂದರೆ, ಹಿಂದುಳಿದ ಸಮುದಾಯದ ವ್ಯಕ್ತಿಯೊಬ್ಬ ರಾಜ್ಯದ ಉನ್ನತ ಸ್ಥಾನಕ್ಕೇರಿರುವುದು, ಬಲಾಢ್ಯ ಜಾತಿಯ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಅದು ಪ್ರತಿ ಹಂತದಲ್ಲೂ ವ್ಯಕ್ತವಾಗುತ್ತಿತ್ತು. ಆದರೆ ಅರಸು ಅವರ ಸಹನೆ ಎಲ್ಲವನ್ನು, ಎಲ್ಲರನ್ನು ಗೆಲ್ಲುತ್ತಿತ್ತು.