ನಿತೀಶ್ ಕುಮಾರ್! ಮೋದಿಗೆ ಪರ್ಯಾಯವಾಗಬಲ್ಲರೇ?
ಕಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ ಭರ್ಜರಿ ಗೆಲುವಿನ ನಂತರದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಹಳಷ್ಟು ಬದಲಾಗಿದ್ದಾರೆ. ಬಿಹಾರಕ್ಕೆ ಸೀಮಿತವಾಗಿದ್ದ ಅವರ ರಾಜಕೀಯ ಮಹತ್ವಾಕಾಂಕ್ಷೆ ಇದೀಗ ರಾಷ್ಟ್ರೀಯಗೊಳ್ಳುತ್ತಿದೆ. ಬಹುಶ: ಅದಕ್ಕೂ ಮುಂಚೆಯೂ ಅವರು ನರೇಂದ್ರ ಮೋದಿಯವರ ಕಾರಣದಿಂದಾಗಿಯೇ ಎನ್ಡಿಎಯಿಂದ ಹೊರಬಿದ್ದ ತಕ್ಷಣ ತಾವು ರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರನ್ನು ರಾಜಕೀಯವಾಗಿ ವಿರೋಸಿದ ಮೊದಲ ರಾಜಕಾರಣಿಯೆಂಬುದನ್ನು ಅರಿತ ಅವರು ತದನಂತರದಲ್ಲಿ ಬಿಹಾರಕ್ಕೆ ಮೋದಿಯವರ ಅಗತ್ಯವಾಗಲಿ, ಅವರ ಮಾದರಿಯ ಅಭಿವೃದ್ದಿಯ ಅಗತ್ಯವಾಗಲಿ ಇಲ್ಲವೆಂದು ಹೇಳುತ್ತಲೇ ವಿಧಾನಸಭಾ ಚುನಾವಣೆಗೆ ಸಿದ್ದರಾಗುತ್ತಾ ಹೋದರು.
ಆದರೆ ತಮ್ಮ ಇದೊಂದೇ ನಿಲುವು ಮತ ತಂದುಕೊಡಲಾರದೆಂಬುದರ ಅರಿವಿದ್ದ ಅವರು ರಾಷ್ಟ್ರೀಯ ಜನತಾದಳದ ಲಾಲೂ ಪ್ರಸಾದ್ ಯಾದವರನ್ನು, ತಮ್ಮೆಲ್ಲ ವೈಮನಸ್ಸವನ್ನು ಮರೆತು ತಮ್ಮ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಬಿಹಾರದ ಮಟ್ಟಿಗೆ ಸೋತುಸುಣ್ಣವಾಗಿದ್ದ ಕಾಂಗ್ರೆಸನ್ನೂ ಸೇರಿಸಿಕೊಂಡು ಮಹಾಮೈತ್ರಿ ಕೂಟವೊಂದನ್ನು ರಚಿಸಿ, ನರೇಂದ್ರಮೋದಿಯವರ ಭಾಜಪವನ್ನು ಎದುರಿಸಲು ಸರ್ವಸನ್ನದ್ದರಾದರು. ಆ ಚುನಾವಣೆಯಲ್ಲವರು ಬಿಹಾರದವರಿಗೆ ಹೊರಗಿನವರ ಅಗತ್ಯವಿಲ್ಲವೆಂದು ಹೇಳುತ್ತಾ, ಬಿಹಾರಿಗಳ ಸ್ವಾಭಿಮಾನದ ಬಗ್ಗೆ ಜಾಗೃತಿ ಮೂಡಿಸುತ್ತ ಅತ್ಯದ್ಭ್ಬುತ ಜಯ ಸಾಸಿದರು. ಈ ಜಯದಿಂದಾಗಿ ನಿತೀಶರ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಯಿತು.
ಇದಕ್ಕೆ ಸರಿಯಾಗಿ ಮೂರು ಅವಗೆ ಸಂಯುಕ್ತ ಜನತಾದಳದ ಅಧ್ಯಕ್ಷರಾಗಿದ್ದ ಶರದ್ ಯಾದವರ ಅವ ಮುಗಿದು, ಮತ್ತೆ ಅವರೇ ಅಧ್ಯಕ್ಷರಾಗಬೇಕಾಗಿದ್ದರೆ ಪಕ್ಷದ ನಿಯಮಗಳನ್ನು ತಿದ್ದುಪಡಿ ಮಾಡಬೇಕಿತ್ತು. ಆದರೆ ಮುಂದಿನ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ನಿತೀಶ್ ಇದಕ್ಕೆ ಅವಕಾಶ ಕೊಡದೆ ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ತಾವೇ ಅಧ್ಯಕ್ಷರಾಗಿ ಆಯ್ಕೆಯಾಗುವಂತೆ ನೋಡಿಕೊಂಡರು. ಸಾಮೂಹಿಕ ನಾಯಕತ್ವದ ಬಗ್ಗೆ ಅವರೇನೇ ಹೇಳಿಕೊಂಡರೂ ಅವರ ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಬಲ್ಲಂತಹ ಸಮರ್ಥ ನಾಯಕರ್ಯಾರು ಇರಲಿಲ್ಲ, ಶರದ್ ಯಾದವ್ ಮತ್ತು ನಿತೀಶ್ ಕುಮಾರ್ ಹೊರತಾಗಿ.
ರಾಷ್ಟ್ರೀಯ ಅಧ್ಯಕ್ಷರಾಗುವ ಮೂಲಕ ತಾವು ಮುಂದಿನ ಅಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯರಿಗೆ ಪರ್ಯಾಯ ನಾಯಕನಾಗ ಬಲ್ಲೆನೆಂಬ ಒಂದು ಸ್ಪಷ್ಟ ಸಂದೇಶವನ್ನು ಅವರು ಮಾಧ್ಯಮಗಳ ಮೂಲಕ ದೇಶಕ್ಕೆ ರವಾನಿಸಿದ್ದಾರೆ. ಈ ನಿಟ್ಟಿನಲ್ಲಿಯೇ ಅವರು ಇತ್ತೀಚೆಗೆ ಪ್ರಾರಂಭಗೊಂಡ ಐದುರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿಯೂ ಆಸಕ್ತಿ ತೋರಿಸುತ್ತ ಕೆಲವು ರಾಜ್ಯಗಳಲ್ಲಿ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಇನ್ನು ಕೆಲವೆಡೆ ಸ್ವತಂತ್ರವಾಗಿಯೇ ಸ್ಪರ್ಸುತ್ತಿದ್ದಾರೆ.
ಈ ದಿಸೆಯಲ್ಲಿ ಅವರು ಕಾಂಗ್ರೆಸ್ನ ನೆರವನ್ನು ಎದುರು ನೋಡುತ್ತಿದ್ದಾರೆ. ಆದರೆ ರಾಹುಲ್ ಗಾಂಯವರನ್ನು ತಮ್ಮ ಪ್ರಧಾನಿ ಅಭ್ಯರ್ಥಿಯೆಂದು ಆಂತರಿಕವಾಗಿ ಒಪ್ಪಿಕೊಂಡಿರುವ ಕಾಂಗ್ರೆಸ್ ಅವರಿಗೆದುರಾಗಿ ಬೆಳೆಯಬಲ್ಲ ಇನೊಬ್ಬ ರಾಷ್ಟ್ರ ನಾಯಕನಿಗೆ ಬೆಂಬಲ ನೀಡುವುದು ಸಾಧ್ಯವಿಲ್ಲ. ಇದು ಅನುಮಾನಕ್ಕೆಡೆಯಿರದಂತೆ ಮೊನ್ನೆ ಸಾಭೀತಾಗಿದೆ. ಅಸ್ಸಾಮಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿಮಾಡಿಕೊಂಡು ಒಂದಷ್ಟು ಸ್ಥಾನಗಳಲ್ಲಿ ಸ್ಪರ್ಸುವ ಇರಾದೆಯನ್ನು ಹೊಂದಿದ್ದ ನಿತೀಶ್ಕುಮಾರರಿಗೆ ಕಾಂಗ್ರೆಸ್ನ ನಕಾರಾತ್ಮಕ ನಿಲುವು ತೀವ್ರ ನಿರಾಶೆಯನ್ನುಂಟುಮಾಡಿದೆ.
ಯಾಕೆಂದರೆ ಅಸ್ಸಾಮ್ನ ಮಟ್ಟಿಗೆ ಬಲವಾಗಿ ಬೇರು ಬಿಟ್ಟಿರುವ ತನ್ನ ಸ್ಥಾನದಲ್ಲಿ ಒಂದಿಷ್ಟು ಜಾಗವನ್ನೂ ಬೇರೆ ಪಕ್ಷಗಳಿಗೆ ನೀಡುವ ಆಸಕ್ತಿ ಕಾಂಗ್ರೆಸ್ಗಿರಲಿಲ್ಲ. ಹೀಗಾಗಿ ಈ ಹಂತದಲ್ಲಿ ನಿತೀಶ್ ವಿಲರಾಗಿದ್ದಾರೆ. ಇಷ್ಟಾದರೂ ಮೋದಿಯವರಿಗೆ ತಾನು ಮಾತ್ರ ಪರ್ಯಾಯ ನಾಯಕನಾಗಬಲ್ಲೆನೆಂಬ ನಿತೀಶರ ಮನದಿಂಗಿತ ಗಟ್ಟಿಯಾಗಿಯೇ ಇದೆ. ಇದಕ್ಕೆ ತಕ್ಕಂತೆ ಮೋದಿಯವರ ಕೇಂದ್ರ ಸರಕಾರದ ಬಹಳಷ್ಟು ನಡೆಗಳು ಪರೋಕ್ಷವಾಗಿ ನಿತೀಶರನ್ನು ಬಲಶಾಲಿಯನ್ನಾಗಿ ಮಾಡುತ್ತಿವೆ. ಉದಾಹರಣೆಗೆ ಕಾಂಗ್ರೆಸ್ ಆಡಳಿತವಿರುವ ಅರುಣಾಚಲ ಪ್ರದೇಶ ಉತ್ತಾರಾಂಚಲಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿದ ನಂತರ ಇದೀಗ ಅದು ಹಿಮಾಚಲ ಪ್ರದೇಶದತ್ತಲೂ ಕಣ್ಣು ಹಾಕುತ್ತಿದೆ.
ಹೀಗೆ ವಿರೋಧ ಪಕ್ಷಗಳ ಆಡಳಿತವಿರುವ ಸರಕಾರಗಳನ್ನು ಅಸ್ಥಿರಗೊಳಿಸುತ್ತ ರಾಷ್ಟ್ರಪತಿ ಆಡಳಿತವನ್ನು ಹೇರಲು ಹೊರಟಿರುವ ಕೇಂದ್ರ ಸರಕಾರದ ಸರ್ವಾಕಾರಿ ನಡೆ ಉತ್ತರ ಭಾರತದ ಜನರ ಮನಸ್ಸಿನಲ್ಲಿ ಭಾಜಪದ ಬಗ್ಗೆ ಒಂದಷ್ಟು ಅಸಮಾಧಾನ ಹುಟ್ಟು ಹಾಕಿದ್ದು ನರೇಂದ್ರ ಮೋದಿ ಮತ್ತು ಭಾಜಪಗಳಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲವೆನ್ನುವ ಸಂದೇಶವನ್ನು ನಿತೀಶ್ ಕುಮಾರ್ ಜನರಲ್ಲಿ ಬಿತ್ತುತ್ತಿದ್ದಾರೆ. ಕಾಂಗ್ರೆಸ್ನ ಆಡಳಿತದಲ್ಲಿರುವ ಸಣ್ಣರಾಜ್ಯಗಳಲ್ಲಿ ಸರಕಾರಗಳನ್ನು ಬೀಳಿಸುತ್ತ, ನಂತರ ಇತರೇ ದೊಡ್ಡ ರಾಜ್ಯಗಳ ಸರಕಾರಗಳನ್ನೂ ಅಸ್ಥಿರಗೊಳಿಸುವ ಭಾಜಪದ ಹುನ್ನಾರವನ್ನು ಪ್ರಜಾಪ್ರಭುತ್ವ ವಿರೋಯೆಂದು ಬಿಂಬಿಸುವ ಪ್ರಯತ್ನವನ್ನು ಬಹುತೇಕ ವಿರೋಧಪಕ್ಷಗಳು ಮಾಡುತ್ತಿವೆ. ಹೀಗೆ ರಾಜ್ಯಸರಕಾರಗಳನ್ನು ಉರುಳಿಸುವ ಕ್ರಿಯೆಗೆ ಸ್ವತ: ಭಾಜಪದ ಮಿತ್ರ ಪಕ್ಷಗಳಲ್ಲೇ ಅಸಮಾಧಾನವಿದೆ.
ಇದು ಇತಿಹಾಸದ ಪುನರಾವರ್ತನೆಯಾಗುತ್ತಿರುವಂತೆ ಕಾಣುತ್ತಿದೆ. 1975ಕ್ಕೂ ಮುಂಚೆ ಅಂದಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಯವರು ಸಹ ಇವತ್ತಿನ ಮೋದಿಯಷ್ಟೆ ಜನಪ್ರಿಯರಾಗಿದ್ದರು ಮತ್ತು ವಿರೋಧಪಕ್ಷಗಳ ಆಡಳಿತವಿದ್ದ ರಾಜ್ಯಗಳ ಮಟ್ಟಿಗೆ ಸಿಂಹ ಸ್ವಪ್ನರಾಗಿದ್ದರು. ತುರ್ತುಪರಿಸ್ಥಿತಿಯನ್ನು ಹೇರಿದ ನಂತರ ಎಲ್ಲ ವಿರೋಧಪಕ್ಷಗಳೂ ಒಂದಾಗಿ ಬಲಿಷ್ಠ ಕಾಂಗ್ರೆಸನ್ನು ಎದುರಿಸಲು ಸಿದ್ದವಾಗಿದ್ದವು. ಪ್ರಜಾಪ್ರಭುತ್ವದಲ್ಲಿ ಬಲಿಷ್ಠ ನಾಯಕನೊಬ್ಬ ಸೃಷ್ಟಿಯಾದರೆ ಆತನ ವಿರೋಗಳು ಆತನನ್ನು ಸರ್ವಾಕಾರಿಯೆಂದು ಬಿಂಬಿಸುವುದು, ಅದಕ್ಕೆ ತಕ್ಕಂತೆ ಆತನೂ ಅಂತಹ ದಾರ್ಷ್ಟ್ಯವನ್ನೇ ಪ್ರದರ್ಶಿಸುವುದು ಸಾಮಾನ್ಯ ಸಂಗತಿಯಾಗಿದೆ. ಅದೇ ರೀತಿ ತುರ್ತು ಪರಿಸ್ಥಿತಿಯನ್ನು ಹೇರಿದ ನಂತರ ಇಂದಿರಾಗಾಂಯವರು ವಿರೋಧಪಕ್ಷಗಳನ್ನೂ ಅದರ ನಾಯಕರನ್ನು ಹಣಿಯಲು ಇಡೀದೇಶದ ಜನತೆಯ ಮೂಲಭೂತ ಹಕ್ಕುಗಳನ್ನೇ ಮೊಟಕುಗೊಳಿಸಿದ್ದರು.
ಅವತ್ತು ಸಹ ಅವರ ಮುಖ್ಯ ಮಂತ್ರವಾಗಿದ್ದು ಪ್ರಗತಿ ಮತ್ತು ತಾವೇ ಜಾರಿಗೆ ತಂದ ಇಪ್ಪತ್ತು ಅಂಶಗಳ ಕಾರ್ಯಕ್ರಮವಾಗಿತ್ತು. ಈಗಲೂ ನರೇಂದ್ರ ಮೋದಿಯವರ ಕತೆ ಅದೇ ಆಗಿದೆ. ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಸರಕಾರಗಳನ್ನು ಅಸ್ಥಿರಗೊಳಿಸುತ್ತ, ಇನ್ನೊಂದೆಡೆ ಯಾವುದೇ ವಿಷಯಗಳಿಗೂ ತಾನು ನೇರವಾಗಿ ವಿರೋಧಪಕ್ಷಗಳನ್ನು ಮಾತುಕತೆ ಚರ್ಚೆಗೆ ಆಹ್ವಾನಿಸದೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುವ ನರೇಂದ್ರ ಮೋದಿಯವರ ನಡೆ ಇತರೇ ರಾಜಕೀಯ ಪಕ್ಷಗಳಿಗಿರಲಿ ಸಾಮಾನ್ಯ ಜನತೆಗೂ ಸರ್ವಾಕಾರದಂತೆ ಕಂಡರೆ ಅಚ್ಚರಿಯೇನಿಲ್ಲ. ನಿತೀಶ್ ಕುಮಾರ್ ಇದರ ಪೂರ್ಣ ಪ್ರಯೋಜನ ಪಡೆಯಲು ತಯಾರಾಗಿ ನಿಂತಿದ್ದಾರೆ.
ಕಾಂಗ್ರೆಸನ್ನು ಹೊರತು ಪಡಿಸಿದರೆ ಎಡಪಕ್ಷಗಳು ಹಾಗೂ ಹಲವು ಪ್ರಾದೇಶಿಕ ಪಕ್ಷಗಳಿಗೂ ಮೋದಿಯವರ ಬಗ್ಗೆ ಈ ಕುರಿತಾದ ಭಯವಿದೆ. ಹಾಗಾಗಿ ಭಾರತದ ಪ್ರಜಾಪ್ರಭುತ್ವ ಮೋದಿಯವರ ಕೈಲಿ ಭದ್ರವಾಗಿದೆಯೆಂದು ಅವರು ನಂಬುತ್ತಿಲ್ಲ. ಇದರ ಜೊತೆಗೆ ಮೋದಿಯವರ ಬಹುತೇಕ ನಿರ್ಣಯಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುಪ್ತ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವ ಹಾದಿಯಲ್ಲಿಯೇ ಇವೆ. ಇದರಿಂದಾಗಿ ಮೋದಿಯವರ ನೇತೃತ್ವದಲ್ಲಿ ಇಂಡಿಯಾದ ಜಾತ್ಯಾತೀತ ನೇಯ್ಗೆಗೆ ಬಾರಿ ಅಪಾಯವಿದೆಯೆಂಬ ಅರಿವು ಅನೇಕ ಪಕ್ಷಗಳಲ್ಲಿ ಮೂಡುತ್ತಿದೆ.
ರಾಜ್ಯ ಸರಕಾರಗಳನ್ನೇ ತೆಗೆದುಕೊಳ್ಳಿ, ಇವತ್ತು ಉತ್ತರಾಂಚಲಕ್ಕೆ ಆಗಿದ್ದು ನಾಳೆ ಆಂಧ್ರಪ್ರದೇಶಕ್ಕೆ ಮತ್ತು ಉತ್ತರ ಪ್ರದೇಶಕ್ಕೆ ಆಗಲಾರದೆಂಬುದಕ್ಕೆ ಯಾವ ಖಾತ್ರಿಯೂ ಇಲ್ಲ. ಈಗಾಗಿ ಅವರ ಮೈತ್ರಿಯ ತೆಕ್ಕೆಯೊಳಗಿರುವ ಪಕ್ಷಗಳಿಗೇನೆೆ ಮುಂದೊಂದು ದಿನ ಇದರ ಅರಿವಾಗುವುದು ಖಚಿತ. ಹೇಗೆ ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ರಾಷ್ಟ್ರದ ಬಹುತೇಕ ಪಕ್ಷಗಳು ಇಂದಿರಾ ಗಾಂಯವರನ್ನು ಕೆಳಗಿಳಿಸಲು ಒಟ್ಟಾದವೊ ಅದೇ ರೀತಿ 2019ರ ವೇಳೆಗೆ ಇಂಡಿಯಾದಲ್ಲಿ ಭಾಜಪೇತರ ಪಕ್ಷಗಳು ಸಹ ಒಂದಾಗುವ ಸಾಧ್ಯತೆಯಿದೆಯೆಂಬುದನ್ನು ಬಲವಾಗಿ ನಂಬಿರುವ ನಿತೀಶ್ ಕುಮಾರ್ ಅಂತಹದೊಂದು ಪ್ರಯೋಗಕ್ಕೆ ಬೇಕಾದ ಸಿದ್ಧ್ದತೆಗಳನ್ನು ಮಾಡಿಕೊಳ್ಳುವ ಹಂತದಲ್ಲಿದ್ದಾರೆ.
1977ರಲ್ಲಿ ಇಂತಹದೊಂದು ಒಂದುಗೂಡುವಿಕೆಗೆ ಜಯಪ್ರಕಾಶ್ ನಾರಾಯಣ್ ಕಾರಣವಾಗಿದ್ದರು. ನಿತೀಶ್ಗೆ ಅಂತಹದೊಂದು ಚರಿಷ್ಮಾ ಇಲ್ಲದೇ ಹೋದರೂ ಅವರಷ್ಟೇ ಪ್ರಾಮಾಣಿಕತೆ ಮತ್ತು ಸರಳತೆ, ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ದೃಢತೆಯಿದೆ. ಈ ವಿಷಯದಲ್ಲಿ ಅವರಿಗೆ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮುಂತಾದವರ ಬೆಂಬಲವಂತೂ ಇದೆ. ಅಂತಹ ಸಮಯ ಒದಗಿ ಬಂದಲ್ಲಿ ದೇವೇಗೌಡ, ಮಾಯಾವತಿ, ಮುಲಾಯಂಸಿಂಗ್, ಕರುಣಾನಿ ಮುಂತಾದವರು ಸಹ ತಮ್ಮ ಸಹಾಯ ಹಸ್ತ ಚಾಚುವ ಸಾಧ್ಯತೆಗಳಿವೆ. ಎಡಪಕ್ಷಗಳು ಬಲಪಂಥೀಯ ಮೋದಿಯನ್ನು ಸೋಲಿಸುವ ವಿಷಯದಲ್ಲಿ ನಿತೀಶ್ ಅಂತವರ ಜೊತೆ ಎಂದಿಗೂ ಇರುತ್ತಾರೆ.
ಆದರಿಲ್ಲಿ ನಿತೀಶರಿಗೆ ನಿಜಕ್ಕೂ ಅಡ್ಡಿಯಾಗುವುದು ಕಾಂಗ್ರೆಸ್ ಮತ್ತು ಅದರ ಉಪಾಧ್ಯಕ್ಷರಾದ ರಾಹುಲ್ ಗಾಂಯವರು ಮಾತ್ರ. ಜೊತೆಗೆ ರಾಷ್ಟ್ರೀಯವಾಗಿ ಮೋದಿಯವರಿಗೆ ಪರ್ಯಾಯ ನಾಯಕನಾಗಿ ಬಿಂಬಿಸಲ್ಪಡುವ ಬಹಳಷ್ಟು ಧನಾತ್ಮಕ ಅಂಶಗಳು ರಾಹುಲರಿಗಿದೆ. ಅವರ ಕುಟುಂಬಕ್ಕಿರುವ ಜನಪ್ರಿಯತೆ ಮತ್ತು ರಾಜಕೀಯ ಹಿಡಿತ ಹಾಗೂ ದೇಶದಾದ್ಯಂತ ಇವತ್ತಿಗೂ ಉಳಿದುಕೊಂಡು ಬಂದಿರುವ ಅದರ ಕಾರ್ಯಕರ್ತರ ಪಡೆ ರಾಹುಲರನ್ನು ಈ ಹೋರಾಟದಲ್ಲಿ ನಿತೀಶರಿಗಿಂತ ಮುಂದೆ ತಂದು ನಿಲ್ಲಿಸಿದರೆ ಅಚ್ಚರಿಯೇನಿಲ್ಲ. ಆದರೆ ಈಗ ನಡೆಯುತ್ತಿರುವ ಐದುರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲುಂಟಾದರೆ ನಿಶ್ಚಿತವಾಗಿ ಅದು ನಿತೀಶರನ್ನು ಬೆಂಬಲಿಸಿ ನಿಲ್ಲುವ ಅನಿವಾರ್ಯಕ್ಕೆ ಸಿಲಕುತ್ತದೆ. 2019ರ ಹೊತ್ತಿಗೆ ರಾಹುಲರನ್ನು ಬದಿಗಿಟ್ಟು ನಿತೀಶರನ್ನು ಮುಂಚೂಣಿಯಲ್ಲಿ ನಿಲ್ಲಿಸಿ ಮಿತ್ರ ಪಕ್ಷಗಳ ಒಕ್ಕೂಟದೊಂದಿಗೆ ಚುನಾವಣೆ ಎದುರಿಸುವುದೇ ಆದರೆ ಭಾಜಪಕ್ಕೆ ಮತ್ತು ಮೋದಿಗೆ ಅದು ಕಷ್ಟದ ಕಾಲವಾಗುತ್ತದೆ.
ಈ ದಿಕ್ಕಿನಲ್ಲಿ ನಿತೀಶರು ಬಿಹಾರದಾಚೆಗೂ ತಮ್ಮ ಪ್ರಭಾವ ವಿಸ್ತರಿಸುವ ಕೆಲಸಕ್ಕೆ ಕೈ ಹಾಕಿದ್ದ್ದಾರೆ. ಬಲಪಂಥೀಯ ಶಕ್ತಿಗಳನ್ನು ಸೋಲಿಸುವ ಎಲ್ಲ ಶಕ್ತಿಗಳು ನಿತೀಶರ ಪರವಾಗಿ ನಿಲ್ಲಲೇ ಬೇಕಾದ ಅನಿವಾರ್ಯತೆಗಳು ಸೃಷ್ಟಿಯಾಗುವ ದಿನಗಳು ದೂರವಿಲ್ಲ. ಬಹುಶ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗಳು ಈ ದಿಕ್ಕಿನಲ್ಲಿ ಬಹಳ ಮಹತ್ವಪೂರ್ಣವಾದವುಗಳಾಗಿವೆ.