ಸಮಾಜ ಸೇವಕನ ಕೊಲೆ
ಬೆಂಗಳೂರು, ಮೇ 5: ಸಮಾಜಸೇವಕ ಎಂದು ಗುರುತಿಸಿಕೊಂಡಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆಗೈದಿರುವ ಘಟನೆ ಇಲ್ಲಿನ ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ನಗರದ ಫ್ರೆಜರ್ಟೌನ್ ಲಾಜರ್ ರಸ್ತೆಯ ಕಾರ್ಪೊರೇಷನ್ ವಸತಿ ಗೃಹದ ನಿವಾಸಿ ವೆಂಕಟೇಶ್ಕುಮಾರ್(52) ಎಂದು ಪೊಲೀಸರು ಗುರುತಿಸಿದ್ದಾರೆ.
ಸಮಾಜ ಸೇವಕರು ಹಾಗೂ ಸ್ಥಳೀಯ ಮುಖಂಡರು ಆಗಿರುವ ವೆಂಕಟೇಶ್ಕುಮಾರ್ ರಾತ್ರಿ 10:30ಕ್ಕೆ ಊಟ ಮಾಡಿ ಮನೆ ಪಕ್ಕದಲ್ಲಿರುವ ದೇವಸ್ಥಾನದ ಬಳಿ ಹೋಗುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಇವರ ಮೇಲೆ ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ತಲೆ, ಭುಜ, ಕೈ ಸೇರಿದಂತೆ ಸುಮಾರು 12 ಕಡೆ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ವೆಂಕಟೇಶ್ನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಶವವನ್ನು ಡಾ.ಬಿ.ಆರ್. ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ದರ್ಶನ್ ಮತ್ತು ನವೀನ್ ಎಂಬವರು ಈ ಕೊಲೆ ಮಾಡಿದ್ದಾರೆಂದು ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪುಲಕೇಶಿನಗರ ಪೊಲೀಸರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.