ರಸ್ತೆ ಸುರಕ್ಷೆಗೆ ಹೊಸ ನಿಯಮಗಳು
ಸಹಪ್ರಯಾಣಿಕರು ಸೀಟ್ ಬೆಲ್ಟ್ ಹಾಕದಿದ್ದರೆ ವಾಹನದ ಚಾಲಕರನ್ನು ಅದಕ್ಕೆ ಜವಾಬ್ದಾರರನ್ನಾಗಿದುವುದರಿಂದ ಹಿಡಿದು ವಾಹನದಲ್ಲಿ ಮದ್ಯಪಾನ ಮಾಡುವುದು ಮತ್ತು ಜೋರಾಗಿ ಸಂಗೀತ ಇಡುವುದನ್ನು ನಿಷೇಧಿಸುವುದರ ವರೆಗೆ ನೂತನ ರಸ್ತೆ ನಿಯಂತ್ರಣ ನಿಯಮದ ಕರಡು, ರಸ್ತೆಯನ್ನು ಎಲ್ಲರಿಗೂ ಸುರಕ್ಷಿತವನ್ನಾಗಿಸಲು ಹಲವಾರು ಕ್ರಮಗಳನ್ನು ಸೂಚಿಸಿದೆ. ಇದೇ ಮೊದಲ ಬಾರಿಗೆ ರಸ್ತೆ ನಿರ್ಮಾಣ ಮತ್ತು ನಿರ್ವಹಣಾ ಸಂಸ್ಥೆಯನ್ನು ನಿರ್ಲಕ್ಷ್ಯ ಅಥವಾ ಕರ್ತವ್ಯಲೋಪದಿಂದ ಉಂಟಾಗುವ ಅಪಘಾತ ಅಥವಾ ಸಾವು/ಗಾಯಗಳಿಗೆ ಜವಾಬ್ದಾರರನ್ನಾಗಿಸುವ ಪ್ರಸ್ತಾಪ ಕೂಡಾ ಈ ಕರಡಿನಲ್ಲಿದೆ.
ಇತ್ತೀಚೆಗೆ ಈ ನೂತನ ಕರಡು ಪ್ರತಿಯನ್ನು ಕೇಂದ್ರ ಸರಕಾರ ರಚಿಸಿದ ಮಂತ್ರಿಗಳ ತಂಡದ ಮುಂದೆ ಇಡಲಾಗಿದ್ದು ಅವರಿಂದ ರಸ್ತೆ ಪ್ರಯಾಣ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಸೂಚಿಸಲು ತಿಳಿಸಲಾಗಿತ್ತು. ಆ ಮೂಲಕ ರಸ್ತೆ ಅಪಘಾತದಲ್ಲಿ ಸಾವಿನ ಪ್ರಮಾಣವನ್ನು ಇಳಿಮುಖಗೊಳಿಸುವ ಜೊತೆಗೆ ಎಲ್ಲರಿಗೂ ರಸ್ತೆ ಸಂಚಾರವನ್ನು ಸುರಕ್ಷಿತವನ್ನಾಗಿಸಲು ಚಿಂತನೆ ನಡೆಸಲಾಗಿದೆ. 2015ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,46,000 ತಲುಪಿದೆ. ವಾಹನಗಳ ಚಾಲನೆಯಲ್ಲಿ ಸಮಾನತೆ ತರಲು ನಿಧಾನವಾಗಿ ಚಲಿಸುವ ಎಲ್ಲಾ ವಾಹನಗಳು ಇನ್ನು ಮುಂದೆ ರಸ್ತೆಯ ಎಡಭಾಗದಲ್ಲೇ ಚಲಿಸಬೇಕು ಎಂಬ ಪ್ರಸ್ತಾಪವನ್ನು ಮಂಡಿಸಲಾಗಿದೆ. ರಸ್ತೆಯನ್ನು ಬಳಸುವಾಗ ಎದುರಾಗುವ ಹಲವು ಸಂದಿಗ್ಧತೆಗಳನ್ನೂ ಕೂಡಾ ಈ ಮಸೂದೆ ತೆಗೆದುಹಾಕಿದೆ.
ಉದಾಹರಣೆಗೆ, ಕಾನೂನಿನಲ್ಲಿ ಸಿಗ್ನಲ್‌ಗಳೆಂದರೇನು ಎಂಬುದಕ್ಕೆ ವಿವರಣೆಯಿಲ್ಲ ಅಥವಾ ‘ನಿಲ್ಲಿಸು’ ಎಂದು ಸೂಚಿಸುವ ಲೈಟ್ ಉರಿಯದಿದ್ದರೆ ಏನು ಮಾಡಬೇಕು ಎಂಬುದನ್ನು ವಿವರಿಸಿಲ್ಲ. ನೀವು ಎಲ್ಲಿ ನಿಲ್ಲಿಸಬೇಕು? ಈ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಒಂದೋ ನೀವು ನಿಲ್ಲಿಸುವ ಗೆರೆಯಲ್ಲಿ ನಿಲ್ಲಿಸುತ್ತೀರಿ, ಅದು ಇಲ್ಲದಿದ್ದರೆ ಪಾದಚಾರಿಗಳು ರಸ್ತೆ ದಾಟಲು ಹಾಕಿರುವ ಗೆರೆಯ ಬಳಿ ನಿಲ್ಲಿಸುತ್ತೀರಿ ಅಥವಾ ಅದೂ ಇಲ್ಲದಿದ್ದರೆ ಸಿಗ್ನಲ್ ಲೈಟ್ ಅಳವಡಿಸಿರುವ ಕಂಬಕ್ಕೆ ಸಮನಾಗಿ ನಿಮ್ಮ ವಾಹನವನ್ನು ನಿಲ್ಲಿಸುತ್ತೀರಿ ಎಂದು ಹೇಳುತ್ತಾರೆ ರಸ್ತೆ ಮತ್ತು ಸಂಚಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರೋಹಿತ್ ಬಲುಜ.
ರಸ್ತೆ ಸಂಬಂಧಿ ಸಂಸ್ಥೆಗಳ ತಪ್ಪಿನಿಂದ ಉಂಟಾಗುವ ಯಾವುದೇ ಅನಾಹುತಗಳಿಗೆ ಆ ಸಂಸ್ಥೆಗಳನ್ನೇ ಜವಾಬ್ದಾರಿಯನ್ನಾಗಿಸುವ ಪ್ರಸ್ತಾಪವೂ ಈ ಕರಡು ಮಸೂದೆಯಲ್ಲಿದೆ. ಪೊಲೀಸ್ ಇಲಾಖೆಯು ಬಹಳಷ್ಟು ವರ್ಷಗಳಿಂದ ಯಾವುದೇ ರೀತಿಯ ನಿರ್ಲಕ್ಷ್ಯಗಳಿಗೆ ರಸ್ತೆ ಸಂಬಂಧಿ ಸಂಸ್ಥೆಗಳನ್ನು ಜವಾಬ್ದಾರರನ್ನಾಗಿಸಬೇಕು ಎಂಬ ಬೇಡಿಕೆಯನ್ನು ಇಡುತ್ತಲೇ ಬಂದಿದೆ. ಹಾಗಾಗಿ ಇನ್ನು ರಸ್ತೆ ಸಂಬಂಧಿ ಸಂಸ್ಥೆಯ ನಿರ್ಲಕ್ಷ್ಯದಿಂದಾಗಿ ಯಾರಾದರೂ ಸಾವನ್ನಪ್ಪಿದರೆ, ಆ ಸಂದರ್ಭದಲ್ಲಿ ಆ ಸಂಸ್ಥೆಯನ್ನೇ ಆ ಅಪಘಾತ ಮತ್ತು ಸಾವಿಗೆ ಜವಾಬ್ದಾರರನ್ನಾಗಿ ಮಾಡಲಾಗುವುದು.‘ತಿಳಿದೂ ರಸ್ತೆ ನಿರ್ವಹಣಾ ಸಂಸ್ಥೆಯು ತೋರುವಂಥಾ ನಿರ್ಲಕ್ಷ್ಯ/ ಕರ್ತವ್ಯಲೋಪಗಳನ್ನು ಅಪರಾಧ’ ಎಂದು ನೂತನ ಮಸೂದೆಯಲ್ಲಿ ತಿಳಿಸಲಾಗಿದೆ. ಬಲುಜ ಹೇಳುವಂತೆ, ವಾರ್ಷಿಕ 1.5 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದರೆ ಐಆರ್‌ಟಿಇ ಅಂದಾಜಿನಂತೆ ಅದರಲ್ಲಿ 20-25 ಶೇಕಡಾ ಅಪಘಾತಗಳು ರಸ್ತೆ ಸಂಸ್ಥೆಗಳ ತಪ್ಪಿನಿಂದಾಗಿ ಸಂಭವಿಸುತ್ತವೆ.
ಆದರೆ ಒಂದೇ ಒಂದು ಪ್ರಕರಣದಲ್ಲಿ ಕೂಡಾ ರಸ್ತೆ ಸಂಸ್ಥೆಯನ್ನು ಆರೋಪಿಯನ್ನಾಗಿಸಲಾಗಿಲ್ಲ. ಹಾಗಾಗಿ ಅವರಿಗೆ ಜವಾಬ್ದಾರಿ ಎಂಬುದು ಬಂದಿಲ್ಲ ಎನ್ನುತ್ತಾರೆ ಬಲುಜ.ಇವೆಲ್ಲವೂ, ಬಹುಶಃ ಇನ್ನಾದರೂ ಸರಿಯಾಗಬಹುದು.ಇನ್ನು ವಾಹನಗಳಿಂದ ನಡೆಯುವ ಯಾವುದೇ ತಪ್ಪುಗಳಿಗೆ ಚಾಲಕನನ್ನೇ ಅಪರಾಧಿ ಎಂದು ಕಾಣಲಾಗುವುದು ಎಂದು ಮಸೂದೆ ಸೂಚಿಸುತ್ತದೆ. ಇನ್ನು ಮುಂದೆ ಕಾನೂನು ಪ್ರಕಾರ ಎಲ್ಲಾ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿದ್ದಾರೆಯೇ ಎಂಬುದನ್ನು ಖಾತ್ರಿ ಪಡಿಸುವ ಜವಾಬ್ದಾರಿ ಕೂಡಾ ಚಾಲಕನ ಮೇಲಿರುತ್ತದೆ. ಅದರಂತೆಯೇ, ಇನ್ನು ಮುಂದೆ ಹಿಂಬದಿ ಸವಾರನು ಹೆಲ್ಮೆಟ್ ಅಥವಾ ಇನ್ನಿತರ ಸುರಕ್ಷಾ ಸಾಧನವನ್ನು ಬಳಸಿದ್ದಾನೆಯೇ ಎಂಬುದನ್ನು ನೋಡುವ ಜವಾಬ್ದಾರಿ ದ್ವಿಚಕ್ರ ವಾಹನ ಚಾಲಕನದ್ದಾಗಿರುತ್ತದೆ.
ಅದೇ ರೀತಿ ಇತರ ರಸ್ತೆ ಬಳಕೆದಾರರಿಗೆ ಕಿರಿಕಿರಿ ಉಂಟು ಮಾಡುವಂತೆ ತಮ್ಮ ವಾಹನಗಳಲ್ಲಿ ಜೋರಾಗಿ ಸಂಗೀತ ಇಡುವುದನ್ನೂ ನಿಷೇಧಿಸಲಾಗಿದೆ. ವಾಹನ ನಿಂತಿರುವಾಗ ಅಥವಾ ಚಾಲನೆಯಲ್ಲಿರುವಾಗ ಚಾಲಕ ಅಥವಾ ಪ್ರಯಾಣಿಕ ಮದ್ಯಪಾನ ಅಥವಾ ಯಾವುದೇ ನಿಷೇಧಿತ ಪದಾರ್ಥ ಸೇವನೆ ಮಾಡಬಾರದು ಎಂದು ಮಸೂದೆ ಸೂಚಿಸುತ್ತದೆ. ವಾಹನದಲ್ಲಿ ಕುಳಿತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನೂ ನಿಷೇಧಿಸಲಾಗಿದೆ. ಇದೆೇ ಮೊದಲ ಬಾರಿ ಪಾದಚಾರಿಗಳು ಮತ್ತು ಸೈಕಲ್ ಸವಾರರನ್ನೂ ಕಾನೂನಿನ ವ್ಯಾಪ್ತಿಯಲ್ಲಿ ತರಲಾಗಿದ್ದು ಅವರು ಕೂಡಾ ರಸ್ತೆ ನಿಯಮದ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಚಲಿಸುವಾಗ, ಘನವಾಹನ ಮತ್ತು ವೇಗ ನಿಯಂತ್ರಣ ಹೊಂದಿರುವ ವಾಹನದ ಚಾಲಕರು ರಸ್ತೆಯ ಎಡಬದಿಯಲ್ಲಿ ಚಲಿಸಬೇಕಾಗುತ್ತದೆ.
ರಸ್ತೆಯ ಮೇಲೆ ಹಳದಿ ಮತ್ತು ಬಿಳಿ ಬಣ್ಣದ ಗೆರೆಗಳನ್ನು ದಪ್ಪವಾಗಿ ಹಾಕಲಾಗುವುದು ಮತ್ತು ವಾಹನಗಳು ಈ ಗೆರೆಯನ್ನು ದಾಟದಂತೆ ನಿರ್ಬಂಧಿಸಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಈ ಗೆರೆಗಳು ಇಲ್ಲದ ಸ್ಥಳಗಳಲ್ಲಿ ಮಾತ್ರ ವಾಹನಗಳು ತಮ್ಮ ಬದಿಯನ್ನು ಬದಲಿಸಲು ಅವಕಾಶವಿರುತ್ತದೆ. ಈ ಮಸೂದೆಯು, ವಾಹನಗಳನ್ನು ಹಿಮ್ಮುಖ ಚಲಾಯಿಸುವುದನ್ನು ಮತ್ತು ಹಿಂಪಡೆಯುವುದನ್ನು ಮುಖ್ಯವಾಗಿ ಏಕಮುಖ ರಸ್ತೆಗಳಲ್ಲಿ ಹೀಗೆ ಮಾಡುವುದನ್ನು ನಿರ್ಬಂಧಿಸುತ್ತದೆ. ದ್ವಿಚಕ್ರ ವಾಹನ ಸವಾರರು ದಿನದಲ್ಲೂ ತಮ್ಮ ವಾಹನದ ಹೆಡ್‌ಲೈಟನ್ನು ಮಂದವಾಗಿ ಉರಿಸುವಂಥಾ ಇತರ ಹಲವಾರು ನಿಬಂಧನೆಗಳನ್ನು ಮಸೂದೆ ಒಳಗೊಂಡಿದೆ. ಎಲ್ಲ ಮೋಟಾರು ರಹಿತ ವಾಹನಗಳಿಗೆ ಇತರ ವಾಹನಗಳಿಗೆ ಸರಿಯಾಗಿ ಕಾಣಿಸುವಂತೆ ಪ್ರತಿಫಲನ ಸಾಧನಗಳನ್ನು ಅಳವಡಿಸುವ ಮತ್ತು ಮುಂಭಾಗ ಹಾಗೂ ಬದಿಗಳಲ್ಲಿ ಲೈಟ್ ಅಳವಡಿಸುವಂತೆ ಸೂಚಿಸಲಾಗಿದೆ.
ಭಾರತವು ಬ್ರಾಸಿಲ್ಲಾ ಘೋಷಣೆಗೆ ಸಹಿ ಹಾಕಿರುವುದರಿಂದ 2020ರ ಒಳಗೆ ರಸ್ತೆ ಅಪಘಾತ ಮತ್ತು ಸಾವಿನ ಸಂಖ್ಯೆಯನ್ನು ಶೇಕಡಾ 50ಕ್ಕೆ ಇಳಿಸಲು ಕಟಿಬದ್ಧವಾಗಿದೆ. ಕೇಂದ್ರ ಸರಕಾರದಿಂದ 1998ರ ಸಂಚಾರ ವಾಹನ ಅಧಿನಿಯಮ ಸೆಕ್ಷನ್ 118ರ ಅಡಿಯಲ್ಲಿ ರೂಪಿಸಲ್ಪಟ್ಟ ಸಂಚಾರಿ ನಿಯಂತ್ರಣ ಕಾಯಿದೆಯ ವಿವರವನ್ನು 1989ರಲ್ಲೇ ತಯಾರಿಸಲಾಗಿತ್ತು. ಸದ್ಯ ಸಂಚಾರಿ ವ್ಯವಸ್ಥೆಯಲ್ಲಿ ಮತ್ತು ಅದಕ್ಕೆ ಸಂಬಂಧಪಟ್ಟ ತಂತ್ರಜ್ಞಾನ ಮತ್ತು ನಿರ್ಮಾಣಗಳಲ್ಲಿ ಬಹಳಷ್ಟು ಬದಲಾವಣೆ ಗಳಾಗಿರುವುದರಿಂದ ಈ ಕಾಯ್ದೆಯನ್ನು ಜಾರಿಗೆ ತರುವ ಅಗತ್ಯತೆ ಕಂಡುಬಂದಿದೆ. ರಸ್ತೆ ಸಂಚಾರ ಮತ್ತು ಸುರಕ್ಷತಾ ಕಾಯ್ದೆಯನ್ನು ರಸ್ತೆ ಸಂಚಾರ ಮತ್ತು ಹೆದ್ದಾರಿ ಇಲಾಖೆ ಜಾರಿಗೆ ತಂದಿದ್ದು ಇದರಿಂದ ದೇಶಾದ್ಯಂತ ರಸ್ತೆ ಸುರಕ್ಷತೆ ಮತ್ತು ಸಂಚಾರಿ ವ್ಯವಸ್ಥೆಯನ್ನು ಸುಲಭಗೊಳಿಸಲು ಪಣತೊಟ್ಟಿದೆ. ಆದರೆ ಈ ಕಾಯ್ದೆಯು ಕೆಲವೊಂದು ರಾಜ್ಯ ಸರಕಾರಗಳಿಂದ ವಿರೋಧಕ್ಕೊಳಗಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಆತಂಕ ಅಥವಾ ಸಂಶಯಗಳಿದ್ದಲ್ಲಿ ಅವುಗಳನ್ನು ಮಾತುಕತೆಯ ಮೂಲಕ ಬಗೆಹರಿಸುವ ಸಲುವಾಗಿ ಮತ್ತು ಕಾಯ್ದೆಯನ್ನು ಜಾರಿಗೆ ತರಲು ಅನುವು ಮಾಡುವಂತೆ ಸಚಿವರ ತಂಡವೊಂದನ್ನು ರಚಿಸಲಾಗಿದೆ. ಸಚಿವರ ತಂಡದ ಮೊದಲ ಸಭೆ ಎಪ್ರಿಲ್ 29ರಂದು ನಡೆದಿದ್ದು ಈ ಸಭೆಯಲ್ಲಿ, ರಸ್ತೆ ನಿಯಮಗಳನ್ನು ರೂಪಿಸಲು ಸೆಪ್ಟಂಬರ್ 2014ರಂದು ನಿಯೋಜಿಸಲಾಗಿದ್ದ ಐಆರ್‌ಟಿಇ, ಈ ಮಸೂದೆಯ ನಿಯಮಗಳನ್ನು ಪ್ರಸ್ತುತಪಡಿಸಿತು.