ಅತ್ಯಾಚಾರ ಸಂತ್ರಸ್ತೆಯ ಹೆಸರು ಬಳಕೆಯ ಕುರಿತು...
ಕೇರಳದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಹಾಗೂ ಬರ್ಬರ ಹತ್ಯೆ ಪ್ರಕರಣ ಡಿಸೆಂಬರ್ 16ರ ನಿರ್ಭಯಾ ಪ್ರಕರಣಕ್ಕೆ ಹೋಲಿಸಿದರೆ ರೂಢಿಯಿಂದ ವಿಮುಖವಾಗಿದೆ. ಕೇರಳದ ಪೆರುಂಬವೂರ್ ಉಪನಗರದಲ್ಲಿ ನಡೆದ ಯುವತಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಯುವತಿಯ ಹೆಸರು ಹಾಗೂ ಮುಖವನ್ನು ಸಾರ್ವಜನಿಕರಿಂದ ಮುಚ್ಚಿಟ್ಟಿಲ್ಲ.
ಎರ್ನಾಕುಲಂ ಸರಕಾರಿ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದ 29 ವರ್ಷದ ದಲಿತ ಮಹಿಳೆ ಒಂಟಿ ಕೊಠಡಿಯ ಮನೆಯಲ್ಲಿ ತಾಯಿಯೊಂದಿಗೆ ವಾಸವಾಗಿದ್ದರು. ಆಕೆಗೆ ಬರ್ಬರ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವುದು ನಮಗೆಲ್ಲ ತಿಳಿದ ವಿಚಾರವೇ ಆಗಿದೆ. ಆಕೆಯ ಭಾವಚಿತ್ರವನ್ನು ಎಲ್ಲ ಸ್ಥಳೀಯ ಪತ್ರಿಕೆಗಳು ಪ್ರಕಟಿಸಿದ್ದು, ಹೆಸರನ್ನೂ ಉಲ್ಲೇಖಿಸಲಾಗಿದೆ. ಪತ್ರಿಕೆಗಳ ಜತೆ ಮಾತನಾಡಿದ ಆಕೆಯ ತಾಯಿ ಹಾಗೂ ಸಹೋದರಿ ಹೆಸರನ್ನೂ ಪ್ರಕಟಿಸಲಾಗಿದೆ. ಕೆಲ ವರದಿಗಳಲ್ಲಿ ಆಕೆಯ ತಾಯಿಯ ಅಡ್ಡಹೆಸರು ಕೂಡ ಪ್ರಕಟವಾಗಿದೆ.
ಈ ಮಾಹಿತಿಗಳು ಬಹಿರಂಗವಾಗಲು ಮುಖ್ಯ ಕಾರಣವೆಂದರೆ ಮೊದಲು ಇದನ್ನು ಹತ್ಯೆ ಪ್ರಕರಣ ಎಂದು ದಾಖಲಿಸಲಾಗಿತ್ತು. ಆದರೆ ಅಟಾಪ್ಸಿ ವರದಿ ಬಂದ ಬಳಿಕವಷ್ಟೇ, ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನುವ ಅಂಶ ಬಹಿರಂಗವಾಗಿದೆ. ಆಕೆಯ ಹತ್ಯೆಯಾಗಿ ಒಂದು ವಾರ ಕಳೆದರೂ, ಮೃತ ಮಹಿಳೆಯ ಹೆಸರು ಹಾಗೂ ವಿವರಗಳು ಇನ್ನೂ ಸಾಮಾಜಿಕ ಜಾಲ ತಾಣ ಹಾಗೂ ಟಿವಿ ಚಾನಲ್‌ಗಳಲ್ಲಿ ಹರಿದಾಡುತ್ತಿವೆ. ಮಾಧ್ಯಮಗಳಿಗೆ ಮಾತನಾಡುವಾಗ ಆಕೆಯ ತಾಯಿ ಹಾಗೂ ಸಹೋದರಿ ಕೂಡಾ ಆಕೆಯ ಹೆಸರನ್ನು ಉಲ್ಲೇಖಿಸಿದ್ದಾರೆ. ಆಕೆಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿ ಎಡಪಕ್ಷಗಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೂಡಾ ಆಕೆಯ ಹೆಸರನ್ನೇ ಮುಖ್ಯವಾಗಿ ಬಿಂಬಿಸಲಾಗಿದೆ.
ಈ ಪ್ರಕರಣ ಹಾಗೂ ಇದರ ಸುತ್ತ ನಡೆಯುತ್ತಿರುವ ಚಟುವಟಿಕೆಗಳ ಪ್ರಚಾರಾಂದೋಲನದ ಬಗ್ಗೆ ವರದಿ ಮಾಡುವ ಪತ್ರಕರ್ತರ ಪ್ರಕಾರ, ಮಹಿಳೆಯ ಗುರುತನ್ನು ಈಗಾಗಲೇ ಸಾರ್ವಜನಿಕ ತಾಣಗಳಲ್ಲಿ ಬಹಿರಂಗಪಡಿಸಲಾಗಿದೆ. ಆದ್ದರಿಂದ ಅದನ್ನು ರಹಸ್ಯವಾಗಿ ಇಡುವುದರಲ್ಲಿ ಯಾವ ಅರ್ಥವೂ ಇಲ್ಲ. ಒಂದು ಬಾರಿ ಆ ಹೆಸರು ಬಹಿರಂಗಗೊಂಡ ಮೇಲೆ, ಮಹಿಳೆಯ ಹೆಸರು ಮತ್ತೆ ಮತ್ತೆ ಬಳಕೆಯಾಗುತ್ತದೆ. ಅದಕ್ಕೆ ಕೋಪ ಹಾಗೂ ದುಃಖ ಎರಡೂ ಕಾರಣವಾಗುತ್ತದೆ.
ನಿರ್ಭಯಾ ಪ್ರಕರಣ
ಮೂರೂವರೆ ವರ್ಷದ ಹಿಂದೆ ಅಂದರೆ 2012ರ ಡಿಸೆಂಬರ್ 16ರಂದು 23 ವರ್ಷದ ಫಿಸಿಯೊಥೆರಪಿ ವಿದ್ಯಾರ್ಥಿನಿ ದಕ್ಷಿಣ ದಿಲ್ಲಿಯ ಮಾಲ್‌ನಲ್ಲಿ ಸಿನೆಮಾ ವೀಕ್ಷಿಸಿ ವಾಪಸ್ಸಾಗುತ್ತಿದ್ದಾಗ ಮುನಿರ್ಕಾದಿಂದ ಬಸ್ ಹಿಡಿದಳು. ಆಕೆಯ ಮೇಲೆಯೂ ಇಂಥದ್ದೇ ಕ್ರೌರ್ಯ ಎಸಗಲಾಗಿತ್ತು. ಆಕೆ ಹನ್ನೆರಡು ದಿನಗಳ ಜೀವನ್ಮರಣ ಹೋರಾಟದ ಬಳಿಕ ಮೃತಪಟ್ಟಳು. ಕೆಲ ವಾರ, ತಿಂಗಳುಗಳ ವರೆಗೆ ಸಾರ್ವಜನಿಕರ ಆಕ್ರೋಶ ಆಕೆ ವಾಸವಿದ್ದ ಕೊಠಡಿಯತ್ತ ಮುಖ ಮಾಡಿತು. ಆಕೆಯ ನೈಲ್‌ಪಾಲಿಶ್ ಹಾಗೂ ಮೃದುವಾದ ಆಟಿಕೆಗಳನ್ನು ಪ್ರದರ್ಶಿಸಲಾಯಿತು. ಆಕೆ ತನ್ನ ಪರೀಕ್ಷೆಗಳನ್ನು ಎಷ್ಟು ಚೆನ್ನಾಗಿ ನಿರ್ವಹಿಸಿದ್ದರು ಎಂಬ ಬಗ್ಗೆ ವಿವರಿಸುವ ಲೇಖನಗಳ ಸರಣಿಗಳು ಬಂದವು. ಆಕೆಯ ಜೀವನದ ಹಲವು ಮಗ್ಗಲುಗಳನ್ನು ವಿವರಿಸಲಾಯಿತು. ಆದರೆ ಆಕೆಯ ಹೆಸರು ಮಾತ್ರ ಎಲ್ಲೂ ಬಹಿರಂಗಗೊಳ್ಳಲಿಲ್ಲ.
ಈ ಘಟನೆ ನಡೆದು ಹಲವು ತಿಂಗಳುಗಳ ಬಳಿಕ ಆಕೆಯ ತಂದೆ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ, ತಮ್ಮ ಮಗಳ ಹೆಸರು ಬಹಿರಂಗಪಡಿಸಬೇಕು ಎಂಬ ಇಂಗಿತ ವ್ಯಕ್ತಪಡಿಸಿದರು. ಇದರಿಂದ ಅಂಥ ದಾಳಿಯಿಂದ ಬದುಕಿ ಉಳಿಯುವ ಮಹಿಳೆಯರಿಗೆ ಧೈರ್ಯ ತುಂಬಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಬಳಿಕ ತಮ್ಮ ಹೇಳಿಕೆಯನ್ನು ತಿದ್ದಿಕೊಂಡು, ಸರಕಾರ ಆಕೆಯ ಹೆಸರಿನಲ್ಲಿ ಅತ್ಯಾಚಾರ ವಿರೋಧಿ ಕಾನೂನು ಜಾರಿಗೊಳಿಸುವುದಾದರೆ ತಮ್ಮ ಆಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದರು. ಇಷ್ಟಾಗಿಯೂ ಆ ರಹಸ್ಯದ ಮೋಡ ಉಳಿದುಕೊಂಡಿತು. ಅದಾಗ್ಯೂ ದಿಲ್ಲಿ ಪೊಲೀಸರು ಒಂದು ನಿಯತಕಾಲಿಕದ ಮೇಲೆ, ಆಕೆಯ ಹೆಸರನ್ನು ಬಹಿರಂಗಪಡಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 228 ಎ ಅನ್ವಯ ಕ್ರಿಮಿನಲ್ ಮೊಕದ್ದಮೆ ಹೂಡಿದರು.
ಬಿಬಿಸಿ ಈ ಘಟನೆಯ ಬಗ್ಗೆ ತಯಾರಿಸಿದ ಸಾಕ್ಷ್ಯಚಿತ್ರ ‘ಇಂಡಿಯಾಸ್ ಡಾಟರ್’ 2015ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಕೂಡಾ ಮಹಿಳೆಯ ಹೆಸರು ಉಲ್ಲೇಖಿಸಲಾಗಿತ್ತು. ಆದರೆ ಅದು ವಿದೇಶಿ ನಿರ್ಮಾಣದ ಚಿತ್ರವಾಗಿದ್ದರೂ, ಭಾರತೀಯ ಪ್ರೇಕ್ಷಕರಿಂದ ಅದನ್ನು ದೂರ ಇರಿಸುವ ಸಲುವಾಗಿ ಆ ಚಿತ್ರವನ್ನು ಭಾರತದಲ್ಲಿ ನಿಷೇಧಿಸಿತು. ಅಂತಿಮವಾಗಿ 2015ರ ಡಿಸೆಂಬರ್ 16ರಂದು ಈ ಅತ್ಯಾಚಾರ ಪ್ರಕರಣದಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿದ್ದ ಬಾಲಾಪರಾಧಿ ಜೈಲಿನಿಂದ ಬಿಡುಗಡೆಯಾದ ವೇಳೆ, ಸಂತ್ರಸ್ತೆಯ ತಾಯಿ ಮಾಧ್ಯಮಗಳ ಜತೆ ಮಾತನಾಡಿದರು. ನನ್ನ ಮಗಳ ಹೆಸರು ಜ್ಯೋತಿಸಿಂಗ್. ಆಕೆಯ ಹೆಸರು ಹೇಳಲು ನನಗೆ ಯಾವ ಮುಜುಗರವೂ ಇಲ್ಲ ಎಂದು ಹೇಳಿದರು.
ಮೃತ ಮಹಿಳೆಯ ಹೊರೆ
ಭಾರತದಲ್ಲಿ ಲೈಂಗಿಕ ಅಪರಾಧಕ್ಕೆ ಒಳಗಾದ ಮಹಿಳೆಯರನ್ನು ಎರಡು ವಿಸ್ತೃತ ಹಾಗೂ ವಿಭಿನ್ನವಾಗಿ ಗುರುತಿಸಲಾಗುತ್ತದೆ. ಒಂದು ಅವಮಾನಕ್ಕೊಳಗಾದ ಸಂತ್ರಸ್ತೆಯಾಗಿ ಹಾಗೂ ಇನ್ನೊಂದು ಬದುಕಿ ಉಳಿದ ಧೀರ ಮಹಿಳೆಯಾಗಿ. ನಮ್ಮ ಕಾನೂನುಗಳು ಹಾಗೂ ನ್ಯಾಯಾಲಯ ತೀರ್ಪುಗಳು ಮಹಿಳೆಯ ಗುರುತನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತವೆ. ಮೌನದ ಗೋಡೆಗಳ ಮಧ್ಯೆ ಆಕೆಯನ್ನು ಸಂರಕ್ಷಿಸುವ ಸಲುವಾಗಿ ಹೀಗೆ ಮಾಡುತ್ತವೆ. 1983ರಲ್ಲಿ ಜಾರಿಗೆ ತಂದ ಹಾಗೂ 2013ರಲ್ಲಿ ತಿದ್ದುಪಡಿಯಾದ ಭಾರತೀಯ ದಂಡಸಂಹಿತೆ ಸೆಕ್ಷನ್ 228 ಎ ಅನ್ವಯ, ಲೈಂಗಿಕ ಅಪರಾಧಕ್ಕೆ ಒಳಗಾದ ಮಹಿಳೆಯ ಹೆಸರನ್ನು ಪ್ರಕಟಿಸಬಾರದು. ಆಕೆಯ ಗುರುತನ್ನು ಬಹಿರಂಗಪಡಿಸುವ ಯಾವ ಮಾಹಿತಿಯನ್ನೂ ಬಿಡುಗಡೆ ಮಾಡುವಂತಿಲ್ಲ. ಹಾಗೆ ಮಾಡಿದರೆ ಅದಕ್ಕೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ಇರುತ್ತದೆ. ಆದರೆ ಮಹಿಳೆ ಸ್ವತಃ ಲಿಖಿತ ಅನುಮತಿ ನೀಡಿದರೆ ಮಾತ್ರ ಇದರಿಂದ ವಿನಾಯಿತಿ ಇದೆ. 2012ರ ಪಾರ್ಕ್‌ಸ್ಟ್ರೀಟ್ ಸಾಮೂಹಿಕ ಅತ್ಯಾಚಾರ ಘಟನೆಯಲ್ಲಿ ಬದುಕಿ ಉಳಿದ ಸುಝೆಟ್ಟ್ ಜೋರ್ಡಾನ್ ಹೀಗೆ ಮಾಡಿದ್ದರು.
‘‘ಸಂತ್ರಸ್ತೆ ಮೃತಪಟ್ಟರೆ, ಆಕೆಯ ನಿಕಟ ಸಂಬಂಧಿಕರು ಲಿಖಿತ ಒಪ್ಪಿಗೆ ನೀಡಿದ ಸಂದರ್ಭದಲ್ಲಿ ಮಾತ್ರ ಹೆಸರು ಬಹಿರಂಗಪಡಿಸಲು ಅವಕಾಶವಿದೆ. ಆದರೆ ಹೀಗೆ ಒಪ್ಪಿಗೆ ನೀಡುವುದು ಕೂಡಾ ಕೇಂದ್ರ ಅಥವಾ ರಾಜ್ಯ ಸರಕಾರದ ಮಾನ್ಯತೆ ಪಡೆದ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಅಥವಾ ಕಾರ್ಯದರ್ಶಿಯ ಮೂಲಕ ಆಗಬೇಕು. ಇದು ಅತ್ಯಂತ ಜಟಿಲ ಹಾಗೂ ಸಂಕೀರ್ಣ ಪ್ರಕ್ರಿಯೆ’’ ಎಂದು ಕಾನೂನು ತಜ್ಞ ಮೃಣಾಲ್ ಸತೀಶ್ ಅಭಿಪ್ರಾಯಪಡುತ್ತಾರೆ. ಆಗಷ್ಟೇ ಕುಟುಂಬದವರನ್ನು ಕಳೆದುಕೊಂಡವರು ಈ ಪ್ರಕ್ರಿಯೆ ಅನುಸರಿಸುವುದು ಅಸಂಭವ ಎಂದು ಹೇಳುತ್ತಾರೆ. ಉತ್ತಮ ಉದ್ದೇಶದಿಂದಾಗಿ ಸಂತ್ರಸ್ತೆಯ ಹೆಸರನ್ನು ಮರೆಯಲ್ಲೇ ಇಡುವುದಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.
ಹೀಗೆ ಸಂತ್ರಸ್ತರ ಸುತ್ತ ಇರುವ ರಹಸ್ಯವನ್ನು 1990ರ ದಶಕದ ಸರಣಿ ತೀರ್ಪುಗಳು ಕೂಡಾ ದೃಢಪಡಿಸಿದವು. ಸಂತ್ರಸ್ತೆಯ ಹೆಸರನ್ನು ಯಾವುದೇ ಕಾನೂನು ದಾಖಲೆಗಳಲ್ಲಿ ಉಲ್ಲೇಖಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಯಿತು. ಪಂಜಾಬ್ ಸರಕಾರ ಹಾಗೂ ಗುರ್ಮೀತ್ ಸಿಂಗ್ ಪ್ರಕರಣ (1996)ದಲ್ಲಿ, ಸುಪ್ರೀಂಕೋರ್ಟ್, ಸಂತ್ರಸ್ತೆ ಸಾಕ್ಷ್ಯ ಹೇಳಬೇಕು ಎಂಬ ಕೆಳ ನ್ಯಾಯಾಲಯಗಳ ಅಪೇಕ್ಷೆ ವಿರುದ್ಧ ಕೆಂಡಕಾರಿತು. ‘‘ಮನುಷ್ಯನ ಸಾಮಾನ್ಯ ನಡವಳಿಕೆಯಲ್ಲಿ ಈ ಅವಿವಾಹಿತ ಅಪ್ರಾಪ್ತ ವಯಸ್ಸಿನ ಹುಡುಗಿ ತನಗಾದ ಹಿಂಸಾತ್ಮಕ ಅನುಭವಕ್ಕೆ ಪ್ರಚಾರ ನೀಡಲು ಬಯಸುವುದಿಲ್ಲ. ಅಷ್ಟೇ ಅಲ್ಲದೇ ಅಂಥ ಘಟನೆಯನ್ನು ತನ್ನ ಶಿಕ್ಷಕಿ ಬಳಿ ಹೇಳಿಕೊಳ್ಳಲು ಕೂಡಾ ಅವಮಾನ ಹಾಗೂ ನಾಚಿಕೆಯಿಂದ ಹಿಂಜರಿಯುತ್ತಾರೆ. ಅ ಘಟನೆಯ ಬಗ್ಗೆ ಯಾರೊಂದಿಗೂ ಮಾತನಾಡಲು ಆಕೆ ಬಯಸುವುದಿಲ್ಲ. ಏಕೆಂದರೆ ಇದರಿಂದ ಕುಟುಂಬದ ಹೆಸರು ಹಾಗೂ ಗೌರವವನ್ನು ವಿವಾದಕ್ಕೆ ಎಳೆದಂತಾಗುತ್ತದೆ’’ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತ್ತು.
‘‘ಸಾಧ್ಯವಾದಷ್ಟು ಮಟ್ಟಿಗೆ ನ್ಯಾಯಾಲಯಗಳು ತಮ್ಮ ತೀರ್ಪಿನಲ್ಲಿ ಇಂಥ ಸಂತ್ರಸ್ತೆಯ ಹೆಸರನ್ನು ಉಲ್ಲೇಖಿಸದಿರಲು ಪ್ರಯತ್ನಿಸಬೇಕು. ಇದರಿಂದ ಲೈಂಗಿಕ ಅಪರಾಧಗಳ ಸಂತ್ರಸ್ತೆಗೆ ಮತ್ತಷ್ಟು ಮುಜುಗರ ಆಗುವುದನ್ನು ತಪ್ಪಿಸಬಹುದು’’ ಎಂದು ಹೇಳಿತ್ತು.
ಇಲ್ಲಿ ಅತ್ಯಾಚಾರಕ್ಕೆ ಒಳಗಾದ ಹುಡುಗಿಯ ಸುರಕ್ಷತೆ ಅಥವಾ ಖಾಸಗಿತನ ಆತಂಕದ ವಿಷಯವಲ್ಲ. ಮಹಿಳೆಯ ದೇಹ ಎಂದರೆ ಸಮಾಜದ ಗೌರವದ ಪಾತ್ರೆ ಎಂಬ ಮನೋಭಾವದಿಂದ ಹಿಡಿದು ಕ್ರೌರ್ಯಕ್ಕೆ ಒಳಗಾದ ಮಹಿಳೆಯ ದೇಹ ಅವಮಾನದ ಮೂಲವಾಗುತ್ತದೆ ಎಂಬ ವರೆಗಿನ ತೀರ್ಮಾನಗಳು ಹರಿದಾಡುತ್ತವೆ. ಇದರಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ಬದುಕೇ ಇಂಥ ಅವಮಾನಗಳಿಂದ ಭಾರವಾಗುತ್ತದೆ. ಸಾಮಾನ್ಯವಾಗಿ ಆಕೆ ಅನಾಮಧೇಯವಾಗಿಯೇ ತನ್ನೆಲ್ಲ ನೋವುಗಳನ್ನು ಹತ್ತಿಕ್ಕಿಕೊಳ್ಳುತ್ತಾಳೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರಗತಿಪರ ಹಿಂಬಡಿತಗಳು ಈ ವಿಚಾರಕ್ಕೆ ಎದುರಾಗಿವೆ. ಡಿಸೆಂಬರ್ 16ರ ಘಟನೆ ವಿರುದ್ಧದ ಸಾರ್ವಜನಿಕ ಪ್ರತಿಭಟನೆಗೆ ಕ್ರೋಢೀಕರಣಗೊಂಡ ಬಲದಿಂದಾಗಿ, ಈ ಘಟನೆ ದೇಶದಲ್ಲಿ ಲೈಂಗಿಕ ಅಪರಾಧಗಳ ಬಗೆಗಿನ ಕಾನೂನುಗಳ ನಿಟ್ಟಿನಲ್ಲಿ ಮಹತ್ವದ ಘಟ್ಟವಾಗಿ ಪರಿಣಮಿಸಿತು. ಇದಕ್ಕೆ ಮಹಿಳೆಯೇ ಕಾರಣವಾದಳು. ಪತ್ರಿಕೆಗಳು ಆಕೆಗಾಗಿ ಹೊಸ ಪದಗಳನ್ನು ಶೋಧಿಸಿದವು. ಆಕೆ ನಿರ್ಭಯಾ ಆದಳು. ದಾಮಿನಿ, ಅಮನತ್ ಅಥವಾ ಸರಳವಾಗಿ ದಿಲ್ಲಿ ಧೀರೆಯಾದಳು. ಜ್ಯೋತಿಸಿಂಗ್ ಹೇಗೆ ಧೈರ್ಯದಿಂದ ಹೋರಾಡಿ ಪ್ರತಿರೋಧ ತೋರಿದಳು ಎಂದು ಜನ ಸಮಾಧಾನಪಟ್ಟುಕೊಂಡರು.
ಆದರೆ ಈ ಕಥೆಗಳು ಕೂಡಾ ಏಕತಾನತೆಯ ಹಾಗೂ ಮಹಿಳೆಯ ಒಂದೇ ಬಗೆಯ ನಡವಳಿಕೆಯ ಕಥೆಗಳಾಗಿ ಬಿಂಬಿತವಾದವು. ಅಂಥ ಮಾತನಾಡಲಾಗದ ಹಿಂಸೆಯ ವಿರುದ್ಧ ಹೋರಾಟ ಮಾಡಲು ಸಾಧ್ಯವಿಲ್ಲದವರು ಧೈರ್ಯವಂತೆ ಅಲ್ಲ ಎಂಬ ಭಾವನೆ ಹೊಂದಬೇಕೇ?
ಸಂಕೇತಗಳಿಲ್ಲ
ಭಾರತದಲ್ಲಿ ಸಾರ್ವಜನಿಕ ಅಭಿಪ್ರಾಯಗಳು, ಹೀಗೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮಹಿಳೆಯನ್ನು ಸಾಂಕೇತಿಕವಾಗಿ ಬಿಂಬಿಸಬೇಕು ಎಂಬ ಅರ್ಥದ್ದಾಗಿವೆ. ಇದರಿಂದ ಮೇಲ್ನೋಟದ ದಾಖಲೆಗಳಲ್ಲಿ ಆಕೆಯ ವಾಸ್ತವ ಗುರುತಿಸುವಿಕೆ ಮರೆಯಾಗುತ್ತದೆ ಎನ್ನುವುದು ಇದರ ಹಿಂದಿನ ಸಮರ್ಥನೆ.
ಹಲವು ನಿದರ್ಶನಗಳಲ್ಲಿ, ಇಂಥ ದಾಳಿಗಳಲ್ಲಿ ಬದುಕಿ ಉಳಿಯುವ ಮಹಿಳೆ ಸಹಜವಾಗಿಯೇ ತನ್ನ ಗುರುತು ಬಹಿರಂಗವಾಗುವುದನ್ನು ಇಚ್ಛಿಸುವುದಿಲ್ಲ. ಆಕೆಯ ಆಯ್ಕೆಯನ್ನು ಗೌರವಿಸಲೇಬೇಕು. ಆದರೆ ಘಟನೆಯಲ್ಲಿ ಸಂತ್ರಸ್ತೆ ಬದುಕಿ ಉಳಿಯದಿದ್ದರೆ ಅಂಥ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಲು ಆಕೆಯ ನಿಕಟ ಬಂಧುಗಳು ಒಪ್ಪಿಗೆ ನೀಡಿದರೆ, ಅಷ್ಟೊಂದು ಕಟ್ಟುನಿಟ್ಟಲ್ಲದ ಕಾನೂನಿಗೆ ಬದ್ಧವಾಗಿರುವ ಅಗತ್ಯತೆ ಖಂಡಿತವಾಗಿಯೂ ಇದೆ.
ಕೇರಳ ರೇಪ್ ಪ್ರಕರಣದಲ್ಲಿ ಹತ್ಯೆಯಾದ ಮಹಿಳೆಯ ಗುರುತು ಬಹಿರಂಗವಾದದ್ದು ಆಕಸ್ಮಿಕ ಘಟನಾವಳಿಗಳ ಕಾರಣದಿಂದ. ಆದರೆ ಇದು ಹಿಂಸಾತ್ಮಕ ಕಾರಣದಿಂದ ಜೀವ ಕಳೆದುಕೊಂಡವರಿಗೆ ನೋವು ನೀಡುವಂಥ ಪ್ರಬಲವಾದ್ದನ್ನು ಸಾರ್ವಜನಿಕರು ಎದುರಿಸಲು ಕಾರಣವಾಯಿತು. ಇದು ಸಾಂಕೇತಿಕ ಅಪರಾಧವಾಗಿರಲಿಲ್ಲ ಹಾಗೂ ಆಕೆ ಸಾಂಕೇತಿಕ ಮಹಿಳೆಯೂ ಆಗಿರಲಿಲ್ಲ.
ಕೃಪೆ: ಸ್ಕ್ರಾಲ್.ಇನ್