ದೇವರಜಾತ್ರೆ: ಹಳ್ಳಿಯ ಬೇಗುದಿಯ ಕತೆ
‘‘ದೇವರ ಜಾತ್ರೆ’’ ನರಸಿಂಹ ಮೂರ್ತಿ ಹೂವಿನ ಹಳ್ಳಿ ಓದುಗರನ್ನು ಸೆಳೆದ ಕಾದಂಬರಿ. 2014ರಲ್ಲಿ ಪ್ರಕಟವಾದ ಈ ಕೃತಿ ಇದೀಗ ಪರಿಷ್ಕೃತ ಮುದ್ರಣದೊಂದಿಗೆ ಮತ್ತೆ ಓದುಗರ ಕೈ ಸೇರಿದೆ. ದೇವರ ಜಾತ್ರೆ ಜನಸಾಮಾನ್ಯರ ಬದುಕಿನ ಉಲ್ಲಸಿತ ಕ್ರಿಯೆಯಾಗದೆ, ಹೀಗೆ ಅದು ಅವರ ಒಳ-ಹೊರಗಿನ ಬೇಗುದಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎನ್ನುವುದನ್ನು ಕಾದಂಬರಿ ಅತ್ಯಂತ ಲವಲವಿಕೆಯಿಂದ ನಿರೂಪಿಸುತ್ತಾ ಹೋಗುತ್ತದೆ. ಬಡತನ ಮತ್ತು ಸಾಲದ ಬಾಧೆಗಳನ್ನು ಬೆನ್ನಲ್ಲಿ ಧರಿಸಿಕೊಂಡ ಹಳ್ಳಿಗಳ ಬದುಕನ್ನು ಧಾರ್ಮಿಕ ಕ್ರಿಯೆಗಳು ಇನ್ನಷ್ಟು ಅಸಹನೀಯ ಗೊಳಿಸುತ್ತದದೆ. ಹಳ್ಳಿಯನ್ನು ಒಡೆಯುತ್ತದೆ. ಯುವ ಕನಸುಗಳೂ ಇದರ ಬೇಗುದಿಯಲ್ಲಿ ನಜ್ಜುಗುಜ್ಜಾಗುತ್ತದೆ. ವರ್ತಮಾನದ ಭಾರತದಲ್ಲಿ ಹಳ್ಳಿಗಳ ಪತನಗಳನ್ನು, ಅವುಗಳ ದುರಂತ ಹೆಜ್ಜೆಗಳನ್ನು ದೇವರ ಜಾತ್ರೆ ಸೂಕ್ಷ್ಮವಾಗಿ ವಿವರಿಸುವಲ್ಲಿ ಯಶಸ್ವಿಯಾಗಿದೆ. ರಾಜೇಂದ್ರ ಚೆನ್ನಿಯವರು ಕೃತಿಯ ಕುರಿತಂತೆ ಹೀಗೆ ವಿವರಿಸುತ್ತಾರೆ ‘‘ಹಳ್ಳಿಯ ಬದುಕಿನ ಬಿಡಿ ಚಿತ್ರಗಳ ಸಂಕಲನವಾಗಿ ಈ ಕಾದಂಬರಿ ಕಾಣುತ್ತದೆ. ಅಲ್ಲಲ್ಲಿ ಓದುಗನೊಂದಿಗೆ ನೇರವಾಗಿ ಮಾತನಾಡುವ ನಿರೂಪಕನ ಉದ್ದೇಶಗಳು ಗಂಭೀರವಾಗಿವೆ. ಆತ್ಮವಿನಾಶದತ್ತ ಸಾಗುವ ಸಮುದಾಯದ ಬಗೆಗಿನ ಕಾಳಜಿಗಳು ಪ್ರಾಮಾಣಿಕವಾಗಿವೆ’’
ಚೆನ್ನಿ ಅವರು ಹೇಳುವಂತೆ ಹಲವು ದೌರ್ಬಲ್ಯಗಳ ನಡುವೆಯೂ ಓದುಗರನ್ನು ಸೆಳೆಯುವಲ್ಲಿ ಕಾದಂಬರಿ ಯಶಸ್ವಿಯಾಗುತ್ತದೆ. ಪ್ರೇರಣಾ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 120 ರೂ. ಆಸಕ್ತರು 94805 83913 ದೂರವಾಣಿಯನ್ನು ಸಂಪರ್ಕಿಸಬಹುದು.