ಡಾ.ಸ್ವಾಮಿ: ಮುಂದಿನ ನಡೆ ಏನು?
ಸೋತು ನೆಲಕಚ್ಚಿದ ಕಾಂಗ್ರೆಸ್ ಪಕ್ಷವನ್ನು, ಮತ್ತು ಅದನ್ನು ಮೇಲೆತ್ತಲು ಹೆಣಗಾಡುತ್ತಿರುವ ಸೋನಿಯಾ ಹಾಗೂ ರಾಹುಲ್ ಗಾಂಧಿಯವರನ್ನು, ಸ್ವಲ್ಪವೂ ದಯ, ದಾಕ್ಷಿಣ್ಯ, ಅನುಕಂಪವಿಲ್ಲದೆ ಡಾ. ಸುಬ್ರಮಣಿಯನ್ ಸ್ವಾಮಿ ಬೆಂಡೆತ್ತುತ್ತಿದ್ದಾರೆ. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಲು ಪಣತೊಟ್ಟಿರುವ ಭಾಜಪ, ಡಾ.ಸ್ವಾಮಿಯವರ ದಾಳಿಯನ್ನು ಕುತೂಹಲದಿಂದ ವೀಕ್ಷಿಸುತ್ತಿದೆ. ಈ ಹೆಲಿಕಾಪ್ಟರ್ ಪ್ರಕರಣದಲ್ಲಿ ಸಂಪೂರ್ಣ ಸತ್ಯ ಇನ್ನೂ ಹೊರಬೀಳಬೇಕಾಗಿದ್ದು, ಅಪರಾಧಿಗಳು ಯಾರು ಎಂದು ಇನ್ನೂ ನಿರ್ಧಾರವಾಗಬೇಕಾಗಿದೆ. ಮೇಲ್ನೋಟಕ್ಕೆ, ಎಂಬತ್ತರ ದಶಕದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮತ್ತು ಅಂದಿನ ಸರಕಾರದ ಪತನಕ್ಕೆ ಕಾರಣವಾದ ‘‘ಬೊಫೋರ್ಸ್’’ ಹಗರಣದಂತೆ ಕಾಣುವ ಈ ಪ್ರಕರಣದಲ್ಲಿ ಸರಿಯಾಗಿ ವಿಚಾರಣೆ ನಡೆದರೆ, ಹಲವರ ರಾಜಕೀಯ ಭವಿಷ್ಯಕ್ಕೆ ಕುತ್ತಾಗುವ ಸಾಧ್ಯತೆಯನ್ನು ರಾಜಕೀಯ ಪಂಡಿತರು ಆಡಿಕೊಳ್ಳುತ್ತಿದ್ದಾರೆ.
ಭಾರತದ ರಾಜಕೀಯದಲ್ಲಿ one man demolition squad ಆಥವಾ one man army ಮತ್ತು ಸದಾ ಸುದ್ದಿಯಲ್ಲಿರುವ ರಾಜಕಾರಿಣಿ ಎಂದು ಬಣ್ಣಿಸಲ್ಪಡುವ ಡಾ. ಸ್ವಾಮಿ ಯಾವುದಾದರೂ ಪ್ರಕರಣವನ್ನು ಹಿಡಿದರೆ, ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುವುದರಲ್ಲಿ ನಿಸ್ಸೀಮರು. ಚೈನೀಸ್ ಭಾಷೆಯೂ ಸೇರಿ ಹತ್ತಾರು ಭಾಷೆಯನ್ನು ನಿರರ್ಗಳವಾಗಿ ಮಾತ ನಾಡುವ ಅವರು, ಹಠವಾದಿ ಮತ್ತು ಹಿಡಿದ ಕಾರ್ಯವನ್ನು ಅರ್ಧದಲ್ಲಿ ಎಂದೂ ಬಿಡದ ಛಲಗಾರ. ವಿಕ್ರಮ- ಬೇತಾಳ ಕಥೆಯಂತೆ ತಮ್ಮ ಪ್ರಯತ್ನ ವನ್ನು ಮುಂದುವರಿಸುತ್ತಲೇ ಇರುತ್ತಾರೆ. ರಾಜಕೀಯದಲ್ಲಿ ಖಾಯಂ ಸ್ನೇಹಿತ ರಾಗಲಿ, ವೈರಿಗಾಳಾಗಲಿ ಇರುವುದಿಲ್ಲ ಎನ್ನುವ ಸಿದ್ಧಾಂತಕ್ಕೆ ಇನ್ನೊಂದು ಹೆಸರು ಡಾ. ಸ್ವಾಮಿ. 20ರ ದಶಕದ ಅಂತ್ಯದಲ್ಲಿ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ತಮಗೆ ಸ್ಥಾನ ಸಿಗದಿರಲು ರಾಮಕೃಷ್ಣ ಹೆಗಡೆ ದೇಸಾಯಿಯವರಿಗೆ ಸಲಹೆ ಕೊಟ್ಟಿದ್ದೇ ಕಾರಣ ಎಂದು ಅವರೊಂದಿಗೆ ಮುನಿಸಿಕೊಂಡಿದ್ದರಂತೆ.ಅಂತೆಯೇ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ದೊಡ್ಡದು ಮಾಡಿ ಹೆಗಡೆ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಡುವಂತೆ ಮಾಡಿದರು ಎಂದು ಕೆಲವು ರಾಜಕೀಯ ವಿಶ್ಲೇಷಕರು ಇಂದಿಗೂ ಅಭಿಪ್ರಾಯ ಪಡುತ್ತಾರಂತೆ. ಆಡಳಿತದಲ್ಲಿದ್ದ ವರೆಲ್ಲ ತಮ್ಮ ರಾಜಕೀಯ ವಿರೋಧಿಗಳ ಮೇಲೆ ಕಣ್ಣಿಡುವುದು ತೀರಾ ಸಾಮಾನ್ಯ. ರಾಜಮಹಾರಾಜರ ಕಾಲದಲ್ಲಿಯೂ ಇದು ರಹಸ್ಯ ಗೂಢಾ ಚಾರಿಗಳಿಂದ ನಡೆಯುತ್ತಿತ್ತು. ದುರ್ದೈವದಿಂದ, ಡಾ. ಸ್ವಾಮಿ ಇದನ್ನು ಚಾಣಾಕ್ಷವಾಗಿ ಬಳಸಿಕೊಂಡರು. ಹಾಗೆಯೇ ತನ್ನನ್ನು ಮಂತ್ರಿಯನ್ನಾಗಿ ಮಾಡಲಿಲ್ಲವೆಂದು, ತನ್ನ ವೈರಿಗಳೊಂದಿಗೆ ಸೇರಿ ಅಟಲ್ ಬಿಹಾರಿ ವಾಜ ಪೇಯಿಯವರ ಸರಕಾರವನ್ನು ಉರುಳಿಸಿದರು. ಮುಂದಿನ ದಿನಗಳಲ್ಲಿ ಜಯಲಲಿತಾ ಸುಪ್ರೀಂಕೋರ್ಟ್ ನಲ್ಲಿರುವ ತಮ್ಮ ಅಕ್ರಮ ಅಸ್ತಿ ಪ್ರಕರಣದಲ್ಲಿ ಸೋತರೆ, ಅದರ ಶ್ರೇಯಸ್ಸು ಡಾ. ಸ್ವಾಮಿ ಬಿಟ್ಟು ಇನ್ನು ಯಾರಿಗೂ ಹೋಗದು. ಕಾಂಗ್ರೆಸ್ ಪಕ್ಷದ ನಿದ್ದೆಗೆಡಿಸುತ್ತಿರುವ National Herald ಮತ್ತು G spectrum ಪ್ರಕರಣಗಳು ಡಾ. ಸ್ವಾಮಿಯವರ ಬತ್ತಳಿಕೆಯಿಂದ ಬಂದಿದ್ದು, ಕೆಲವೇ ದಿನಗಳಲ್ಲಿ ಭಾರೀ ರಾಜಕೀಯ ಬಾಂಬು ಸಿಡಿಯಬಹುದು.
ಬಹುವರ್ಷಗಳಿಂದ ಸಂಸತ್ ನಿಂದ ಹೊರಗಿದ್ದ ಅವರು, ಈಗ ಸಂಸತ್ತನ್ನು ರಾಜ್ಯಸಭೆಗೆ ನಾಮಕರಣಗೊಂಡ ಸದಸ್ಯರಾಗಿ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬಗ್ಗು ಬಡಿಯಲು ದೀರ್ಘ ಲೆಕ್ಕಾಚಾರದ ಮೇಲೆ ಭಾಜಪ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದೆ ಎಂದು ಹೇಳಲಾಗುತ್ತಿದೆ. ಅವರೂ ಸಂಸತ್ ಪ್ರವೇಶಿಸಿದ ಮೂರೇ ದಿನಗಳಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಸೋನಿಯಾರಿಗೆ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ನಿತ್ರಾಣಮಾಡಿ ಮೋದಿ ಮತ್ತು ಕಂಪೆನಿಯವರ ಶಹಬ್ಬಾಸ್ ಗಿರಿಯನ್ನೂ ಪಡೆದಿದ್ದಾರೆ.
ರಾಜಕೀಯದಲ್ಲಿ ಯಾರು ಏನೇ ಮಾಡಿದರೂ, ಮತಬ್ಯಾಂಕ್ಹೊರ ತಾಗಿ, ಅದಕ್ಕೊಂದು ಬೇರೆ ಗುಪ್ತ ಕಾರ್ಯಸೂಚಿ ಇರುತ್ತದೆ. ಡಾ. ಸ್ವಾಮಿ ಕೂಡಾ ಇದಕ್ಕೆ ಹೊರತಾಗಿಲ್ಲ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಿಲ್ಲ. ದಿಲ್ಲಿಯ ರಾಜಕೀಯವಲಯದಲ್ಲಿ ಮತ್ತು ಅನುಭವೀ ಹಿರಿಯ ಪತ್ರಕರ್ತರ ಪ್ರಕಾರ, ಪಂಚರಾಜ್ಯಗಳ ಚುನಾವಣೆಯ ನಂತರ ಕೇಂದ್ರ ಸಂಪುಟದಲ್ಲಿ ಕೆಲವು ಮಹತ್ತರ ಬದಲಾವಣೆಗಳ ಸಂಭವ ಇದ್ದು, ಡಾ. ಸ್ವಾಮಿಯ ಕಣ್ಣು ಅಲ್ಲಿ ನೆಟ್ಟಿದೆ. ಹಣಕಾಸು ಮತ್ತು ವಿದೇಶಾಂಗ ಖಾತೆಗಳ ಬದಲಾವಣೆಯ ವದಂತಿಗಳಿದ್ದು, ಇವುಗಳಲ್ಲಿ ಒಂದನ್ನಾದರೂ ಅವರು ಕೇಳುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ತಮ್ಮ ಹಿರಿತನ ಮತ್ತು ಅನುಭವದ ಹಿನ್ನೆಲೆಯಲ್ಲಿ ಅವರು ಮಹತ್ವದ ಖಾತೆಗಳನ್ನೇ ಕೇಳಬಹುದು. ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ನಿಟ್ಟಿನಲ್ಲಿ, ಸೋನಿಯಾರನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಅವರ ಪಾತ್ರ ದೊಡ್ಡದು ಎನ್ನುವುದರಲ್ಲಿ ಸಂಶಯವಿಲ್ಲ. ಇದನ್ನೇ ಹಿಡಿದು ಅವರು ತಮ್ಮ ಹಕ್ಕನ್ನು ಪ್ರತಿಪಾದಿಸಬಹುದು. ಅಕಸ್ಮಾತ್ ಅವರ ಆಕಾಂಕ್ಷೆ ಈಡೇರದಿದ್ದರೆ, ವಾಜಪೇಯಿಗಾದ ಗತಿಯೇ ಮೋದಿಗೆ ಆಗಬಹುದು. ರಾಜಕೀಯದಲ್ಲಿ ಡಾ. ಸ್ವಾಮಿಯವರನ್ನು ಹಗುರವಾಗಿ ತೆಗೆದುಕೊಳ್ಳಲಾಗದು. ಅವರ ಬತ್ತಳಿಕೆಯಲ್ಲಿ ಯಾರ ವಿರುದ್ದ ಯಾವ ಅಸ್ತ್ರಗಳಿಯೋ? ಅವರ ಸೇವೆಯನ್ನು ಪಡೆದುಕೊಂಡ ಭಾಜಪ ಅವರನ್ನು ಸಂತುಷ್ಟರನ್ನಾಗಿ ಇಡಲೇಬೇಕು, ಇಲ್ಲದಿದ್ದರೆ ಭಾರೀ ದಂಡವನ್ನು ಕೊಡಬೇಕಾಗುತ್ತದೆ ಎನ್ನುವ ಮಾತು ಕೇಳಿಬರುತ್ತದೆ. ರಾಜಕೀಯದಲ್ಲಿ ಹೊರಗಿನ ವೈರಿಗಿಂತ ಒಳಗಿನ ವೈರಿ ಅಪಾಯಕಾರಿ. ಅಸಾಧ್ಯವನ್ನು ಸಾಧ್ಯ ಮಾಡುವುದರಲ್ಲಿ ಮತ್ತು ತಮ್ಮ ಹಾದಿಗೆ ಮುಳ್ಳಾಗುವವರನ್ನು ಸಮಯ ನೋಡಿ ಅಡ್ಡ ಹಾಕುವದರಲ್ಲಿ ಅವರು ಎತ್ತಿದ ಕೈ ಎಂದು ಅವರರಾಜಕೀಯವನ್ನು ನೋಡಿದವರು ಅಭಿಪ್ರಾಯ ಪಡುತ್ತಾರೆ.
ಡಾ. ಸ್ವಾಮಿಯವರ ಮುಂದಿನ ರಾಜಕೀಯ ನಡೆ ಏನು ಎಂದು ರಾಜಕೀಯ ವಲಯ ಕುತೂಹಲದಿಂದ ನಿರೀಕ್ಷಿಸುತ್ತಿದೆ.