ಕಲ್ಯಾಣರಾಜ್ಯದ ಕುರೂಪಿ ಮುಖಗಳು
ಕಲ್ಯಾಣ ರಾಜ್ಯದ ಕನಸು ನನಸಾಗಿಸುವಲ್ಲಿ ಬಡವರಿಗೆ ಸರಕಾರಗಳು ಇಂತಹ ಕೊಡುಗೆಗಳನ್ನು ನೀಡಿ ಅವರಿಗೆ ಬದುಕಿನ ಭದ್ರತೆಯನ್ನು ಒದಗಿಸಬೇಕಾಗುತ್ತದೆ. ಆದರೆ ತಮಿಳುನಾಡಿನ ವಿಷಯದಲ್ಲಿದು ತೀರಾ ಅತಿರೇಕಕ್ಕೆ ಹೋದಂತೆ ಕಾಣುತ್ತಿದೆ. ಯಾಕೆಂದರೆ ಕಲ್ಯಾಣರಾಜ್ಯದ ಮುಖ್ಯದೋಷವೇ ಜನರ ಸ್ವಾವಲಂಬಿತನವನ್ನು ಇಲ್ಲವಾಗಿಸುವುದಾಗಿದೆ. ಅದು ಜನರ ಕ್ರಿಯಾಶೀಲತೆಯನ್ನು ನಾಶ ಮಾಡಿ ಪ್ರತಿಯೊಂದಕ್ಕೂ ಸರಕಾರವನ್ನು ಅವಲಂಬಿಸುವ ಗುಣವನ್ನು ಬೆಳೆಸುತ್ತ ಹೋಗುತ್ತದೆ. ದುಡಿಯುವ ವರ್ಗದ ದುಡಿಯುವ ಚೈತನ್ಯವನ್ನು ಅದು ಇಲ್ಲವಾಗಿಸುತ್ತಾ ಹೋಗುವುದು ಖಚಿತ.
ಕಲ್ಯಾಣರಾಜ್ಯದ ಕುರೂಪಿ ಮುಖಗಳು ಎಂಬ ಮಾತನ್ನು ಅಕ್ಷರಶ: ಅರ್ಥ ಮಾಡಿಕೊಳ್ಳಬೇಕೆಂದರೆ ಸದ್ಯ ನಡೆಯುತ್ತಿರುವ ತಮಿಳುನಾಡಿನ ವಿಧಾನಸಭಾ ಚುನಾವಣೆಗಳ ಪ್ರಚಾರ ಪ್ರಕ್ರಿಯೆಯನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಬೇಕಾಗುತ್ತದೆ. ಯಾಕೆಂದರೆ ಮೊದಲೇ ತಮಿಳುನಾಡಿನ ರಾಜಕೀಯವೆಂದರೆ ಸಂಪೂರ್ಣ ವರ್ಣಮಯ. ಅದರಲ್ಲೂ ಚುನಾವಣೆಯ ಸಮಯದಲ್ಲದು ಅತಿರೇಕಕ್ಕೆ ಹೋಗಿರುತ್ತದೆ. ಅಲ್ಲಿ ತರ್ಕಗಳಿಗೆ, ಸಾಧ್ಯತೆಗಳೆಂಬ ಪದಗಳಿಗೆ ಯಾವ ಬೆಲೆಯೂ ಇರುವುದಿಲ್ಲ. ತಮಿಳಿಗರು ಮೊದಲೇ ಭಾವುಕ ಜೀವಿಗಳು. ಅದು ಪ್ರೀತಿಯಾಗಿರಲಿ, ದ್ವೇಷವಾಗಿರಲಿ ತೀರಾ ಅತಿಯೆನಿಸುವ ಮಟ್ಟಕ್ಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವಂತಹವರು. ಸಿನೆಮಾ ಅವರ ಬದುಕಲ್ಲಿ ಹಾಸು ಹೊಕ್ಕಾಗಿದೆ. ತೆರೆಯ ಮೇಲಿನ ನಾಯಕರು ಅವರ ನಿಜ ಜೀವನದ ನಾಯಕರೂ ಹೌದು. ಹೀಗಾಗಿಯೇ ಅವರು ತಮ್ಮನ್ನು ಆಳುವವರನ್ನು ಕೂಡ ಸಿನೆಮಾರಂಗದವರೇ ಆಗಿರಬೇಕೆಂದು ಬಯಸುತ್ತಾರೆ. ಸಿನೆಮಾ ಜಗತ್ತಿನ ನಂಟಿಲ್ಲದ ಯಾರೂ ಇವತ್ತಿನವರೆಗೂ ಅಲ್ಲಿ ಮುಖ್ಯಮಂತ್ರಿಗಳಾಗಿಲ್ಲವೆಂಬುದೇ ವಿಶೇಷ! ಇಂತಹ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ ಎಂದರೆ ಅಲ್ಲಿ ಭರವಸೆ, ಆಶ್ವಾಸನೆಗಳಿಗೇನು ಕೊರತೆಯಿಲ್ಲ! ಸಿನೆಮಾದಲ್ಲಿ ನಾಯಕ ನಟರು ಹೇಗೆ ಜನರಿಗೆ ಕೆಟ್ಟದ್ದನ್ನೆಲ್ಲ ಸರ್ವನಾಶಮಾಡಿ ರಾಮರಾಜ್ಯದ ಕನಸನ್ನು ನನಸು ಮಾಡುವ ಆಶ್ವಾಸನೆ ನೀಡುತ್ತಾರೋ ಹಾಗೆಯೇ ರಾಜಕಾರಣದಲ್ಲಿಯೂ ಅಲ್ಲಿನ ರಾಜಕೀಯ ಪಕ್ಷಗಳ ನಾಯಕರು ಅಮೋಘವಾದ ಆಶ್ವಾಸನೆಗಳನ್ನು ಕೊಡುತ್ತಾರೆ. ಇಂತಹ ಆಶ್ವಾಸನೆಗಳ ಹೊಳೆಯನ್ನೇ ಹರಿಸುವ ಪ್ರಣಾಳಿಕೆಗಳಿಗಾಗಿ ಅಲ್ಲಿನ ಜನ ಕಾತುರದಿಂದ ಕಾಯುತ್ತಾರೆ. ಅಂತಹುದೇ ಒಂದು ಪ್ರಣಾಳಿಕೆ ಮೊನ್ನೆ ಗುರುವಾರದಂದು ಎಐಎಡಿಎಂಕೆ ಪಕ್ಷದ ಕುಮಾರಿ ಜಯಲಲಿತಾರವರಿಂದ ಬಿಡುಗಡೆಯಾಗಿದ್ದು, ತಮಿಳುನಾಡು ಮಾತ್ರವಲ್ಲ ಇಡೀ ರಾಷ್ಟ್ರವನ್ನೇ ಸಂಚಲನಗೊಳಿಸಿದೆ. ಅದಕ್ಕೂ ಒಂದು ವಾರದ ಮೊದಲು ಬಿಡುಗಡೆಯಾದ ಡಿಎಂಕೆ ಪಕ್ಷದ ಪ್ರಣಾಳಿಕೆಯನ್ನು ಮೀರಿಸುವ ಭರದಲ್ಲಿ ತಯಾರಾದ ಜಯಲಲಿತಾರವರ ಪ್ರಣಾಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ತಮಿಳುನಾಡಿನ ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ತಲೆಕೆಳಗಾಗಿ ಮಾಡಿದೆ. ಕಾರಣ, ತಾವು ಗೆದ್ದು ಅಧಿಕಾರ ಹಿಡಿದರೆ ಜನರಿಗೆ ಏನೆಲ್ಲವನ್ನು ಉಚಿತವಾಗಿ ನೀಡುತ್ತೇವೆಯೆಂಬುದೊಂದು ಪಟ್ಟಿಯೇ ಆ ಪ್ರಣಾಳಿಕೆಯಲ್ಲಿದೆ. ನಿಜಕ್ಕೂ ಆ ಪ್ರಣಾಳಿಕೆ ಪ್ರಜಾಸತ್ತೆಯ ಅಣಕದಂತಿದೆ. ಸ್ವಲ್ಪಅದರತ್ತ ಕಣ್ಣು ಹಾಯಿಸೋಣ:
ಮಹಿಳೆಯರು ಸ್ಕೂಟರ್ ಖರೀದಿಸಲು ಇಚ್ಛಿಸಿದರೆ ಶೇಕಡಾ ಐವತ್ತರಷ್ಟು ಸಬ್ಸಿಡಿ ನೀಡುವುದು, ಹನ್ನೊಂದು ಮತ್ತು ಹನ್ನೆರಡನೆ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್ ವಿತರಣೆ ಮಾಡುವುದು, ಪಡಿತರ ಚೀಟಿಯಿರುವ ಎಲ್ಲರಿಗೂ ಸ್ಮಾರ್ಟ್‌ಫೋನ್ ನೀಡಿ-ತಿಂಗಳಿಗೆ ಐನೂರು ರೂಪಾಯಿಯ ಕರೆನ್ಸಿ ಹಾಕುವುದು, ಬಡವರಿಗೆ ತಿಂಗಳಿಗೆ 100 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದು, ಪ್ರತಿ ಪೊಂಗಲ್ ಹಬ್ಬಕ್ಕೂ ಕುಟುಂಬಗಳಿಗೆ ತಲಾ ಐನೂರು ರೂಪಾಯಿಗಳ ಹಬ್ಬದ ಕೊಡುಗೆ ನೀಡುವುದು, ಹೀಗೆ ಹಲವುಗಳನ್ನು ಉಚಿತವಾಗಿ ನೀಡುತ್ತೇನೆಂದು ಘೋಷಿಸಿದ ಜಯಲಲಿತಾ ಚುನಾವಣೆಯನ್ನು ಗೆಲ್ಲಲು ಬೇಕಾದ ಎಲ್ಲ ತಂತ್ರಗಳನ್ನೂ ಮಾಡುತ್ತಿದ್ದಾರೆ. ಹೀಗೆ ಪ್ರತಿಯೊಂದನ್ನೂ ಉಚಿತವಾಗಿ ನೀಡುವ ತಮಿಳುನಾಡಿನ ಶೈಲಿ ಎಲ್ಲಿಂದ ಶುರುವಾಯಿತೆಂದು ನೋಡುತ್ತಾ ಹೋದರೆ ಅದು ಹೋಗಿ ನಿಲ್ಲುವುದು ಮಾಜಿ ಮುಖ್ಯಮಂತ್ರಿ ಡಿಎಂಕೆ ಪಕ್ಷದ ಕರುಣಾನಿಧಿಯವರ ಬಳಿ. ನಿಜ ಇಂತಹ ಉಚಿತ ಕೊಡುಗೆಗಳನ್ನು ನೀಡುವ ಸಂಪ್ರದಾಯವನ್ನು ಮೊದಲಿಗೆ ಹುಟ್ಟು ಹಾಕಿದ್ದೇ ಕರುಣಾನಿಧಿ. ಬಡವರಿಗೆ ಉಚಿತ ಕಲರ್ ಟಿ.ವಿ, ಉಚಿತ ಮಿಕ್ಸರ್, ಉಚಿತ ಫ್ಯಾನ್ ನೀಡುವ ಪರಿಪಾಠವನ್ನು ಶುರು ಮಾಡಿದ ಅವರಿಗೆ ಇದೀಗ ಜಯಲಲಿತಾ ಅಂತಹುದೇ ತಿರುಗೇಟು ನೀಡುತ್ತಿದ್ದಾರೆ. ಇದು ಈ ಎರಡು ಪಕ್ಷಗಳ ಚಾಳಿ ಮಾತ್ರವಲ್ಲ. ತಮಿಳುನಾಡಲ್ಲಿ ಚುನಾವಣೆ ಎದುರಿಸುತ್ತಿರುವ ಪ್ರತಿಯೊಂದು ಪಕ್ಷವೂ ಇಂತಹ ಉಚಿತ ಕೊಡುಗೆಗಳ ಘೋಷಣೆಗಳನ್ನು ಮಾಡಿವೆ, ಮಾಡುತ್ತಿವೆ, ಮುಂದೆಯೂ ಮಾಡುತ್ತವೆ. ಈ ರೀತಿಯಾಗಿ ಚುನಾವಣಾ ಪ್ರಣಾಳಿಕೆಗಳಲ್ಲಿ ಬಡವರಿಗೆ ಉಚಿತವಾದ ಕೊಡುಗೆಗಳನ್ನು ಘೋಷಣೆ ಮಾಡುವುದು ತಪ್ಪೇನಲ್ಲ. ಯಾಕೆಂದರೆ ಒಂದು ಕಲ್ಯಾಣ ರಾಜ್ಯದ ಕನಸು ನನಸಾಗಿಸುವಲ್ಲಿ ಬಡವರಿಗೆ ಸರಕಾರಗಳು ಇಂತಹ ಕೊಡುಗೆಗಳನ್ನು ನೀಡಿ ಅವರಿಗೆ ಬದುಕಿನ ಭದ್ರತೆಯನ್ನು ಒದಗಿಸಬೇಕಾಗುತ್ತದೆ. ಆದರೆ ತಮಿಳುನಾಡಿನ ವಿಷಯದಲ್ಲಿದು ತೀರಾ ಅತಿರೇಕಕ್ಕೆ ಹೋದಂತೆ ಕಾಣುತ್ತಿದೆ. ಯಾಕೆಂದರೆ ಕಲ್ಯಾಣರಾಜ್ಯದ ಮುಖ್ಯದೋಷವೇ ಜನರ ಸ್ವಾವಲಂಬಿತನವನ್ನು ಇಲ್ಲವಾಗಿಸುವುದಾಗಿದೆ. ಅದು ಜನರ ಕ್ರಿಯಾಶೀಲತೆಯನ್ನು ನಾಶ ಮಾಡಿ ಪ್ರತಿಯೊಂದಕ್ಕೂ ಸರಕಾರವನ್ನು ಅವಲಂಬಿಸುವ ಗುಣವನ್ನು ಬೆಳೆಸುತ್ತ ಹೋಗುತ್ತದೆ. ದುಡಿಯುವ ವರ್ಗದ ದುಡಿಯುವ ಚೈತನ್ಯವನ್ನು ಅದು ಇಲ್ಲವಾಗಿಸುತ್ತಾ ಹೋಗುವುದು ಖಚಿತ. ಎಲ್ಲದರ ಹೊಣೆಗಾರಿಕೆಯನ್ನೂ ಸರಕಾರದ ಮೇಲೆ ಹೊರಿಸಿ ತಾನು ನಿಷ್ಕ್ರಿಯನಾಗಿಬಿಡುವ ದಾರಿಯಲ್ಲಿ ಮನುಷ್ಯ ನಡೆಯತೊಡಗಿದರೆ, ಆ ಸಮಾಜದ ಒಟ್ಟು ಕ್ರಿಯಾಶೀಲತೆಯೇ ನಾಶವಾಗುವ ಸಂಭವವಿದೆ. ಇದು ಎಷ್ಟರಮಟ್ಟಿಗೆ ಅಡ್ಡಪರಿಣಾಮ ಬೀರುತ್ತದೆಯೆಂದರೆ ಡೆಂಗ್, ಮಲೇರಿಯಾ ಮುಂತಾದ ಕಾಯಿಲೆಗಳಿಗೆ ಕಾರಣವಾದ ಸೊಳ್ಳೆಯ ಸಂತತಿಯನ್ನು ಸರಕಾರವೇ ನಾಶ ಮಾಡುವುದರ ಜೊತೆಗೆ ಮನೆಯೊಳಗಿನ ಕೀಟಗಳನ್ನು ಸರಕಾರವೇ ನಾಶ ಮಾಡಲಿಯೆಂದು ಕಾಯುತ್ತಾ ಕೂರುವ ಮಟ್ಟಿಗೆ ಬರುತ್ತದೆ. ಜೊತೆಗೆ ತಮ್ಮ ಆರೋಗ್ಯದ ಸಂಪೂರ್ಣ ಹೊಣೆಗಾರಿಕೆ ಸರಕಾರದ್ದೇ ಎಂದು ತೀರ್ಮಾನಕ್ಕೆ ಬಂದು ತಾವು ತೆಗೆದುಕೊಳ್ಳಬೇಕಾದ ಮುಂಜಾಗರೂಕತೆಯ ಕ್ರಮಗಳನ್ನಾಗಲಿ ತೆಗೆದುಕೊಳ್ಳದೆ ಬೇಜವಾಬ್ದಾರಿಯತ್ತ ವಾಲತೊಡಗುತ್ತಾರೆ. ಹೀಗಾದಾಗ ಎಲ್ಲರೂ ಹಕ್ಕುಗಳ ಬಗ್ಗೆ ಮಾತ್ರ ಮಾತನಾಡುತ್ತ ಕರ್ತವ್ಯಗಳನ್ನು ಮರೆಯತೊಡಗುತ್ತಾರೆ. ಕಲ್ಯಾಣರಾಜ್ಯದ ಕಲ್ಪನೆಯೇ ಸಮುದಾಯದ ಎಲ್ಲರಿಗೂ ಸರಕಾರದ ಸೇವಾವ್ಯವಸ್ಥೆಯನ್ನು ತಲಪಿಸುವುದಾಗಿದ್ದರೂ ಇದು ಮಿತಿಯನ್ನು ಮೀರಿದರೆ ಆ ಸಮಾಜ ಕೊಳೆಯಲು ಪ್ರಾರಂಭವಾಗುತ್ತದೆ. ಯಾವುದೇ ಹೋರಾಟವಿಲ್ಲದೆ ಒದಗಿ ಬಂದ ಇಂತಹ ಉಚಿತ ಕೊಡುಗೆಗಳಿಂದ ಜನತೆ ಸರಕಾರಗಳ ಮುಂದೆ ದೀನರಾಗಿ ನಿಲ್ಲಬೇಕಾಗುತ್ತದೆ. ನೀಡಿದ ಅಹಂಕಾರ ಹೊತ್ತ ಸರಕಾರಗಳು ಪಡೆದವರ ಧೈನ್ಯತೆಯ ದುರುಪಯೋಗಕ್ಕೆ ಮುಂದಾಗುತ್ತಾ ಹೋಗುತ್ತವೆ. ಮುಂದೆ ಅವರು ನಡೆಸುವ ಭ್ರಷ್ಟಾಚಾರಗಳನ್ನಾಗಲಿ, ತೋರಿಸುವ ಸರ್ವಾಧಿಕಾರಿ ಧೋರಣೆಯನ್ನಾಗಲಿ ಪ್ರಶ್ನಿಸುವ ನೈತಿಕತೆಯನ್ನು ಕಳೆದುಕೊಳ್ಳುವ ಸಮಾಜ ಕುಸಿಯತೊಡಗುತ್ತದೆ. ಆದ್ದರಿಂದಲೆ ತಮಿಳುನಾಡಿನ ಇಂತಹ ಚುನಾವಣಾ ಪ್ರಣಾಳಿಕೆಗಳು ಜನತೆಯನ್ನು ಕ್ರಿಯಾಶೀಲತೆಯಿಂದ ವಿಮುಕ್ತರನ್ನಾಗಿಸುತ್ತವೆ ಎಂಬ ಆತಂಕ ಸೃಷ್ಟಿಸುವುದು. ಇನ್ನೊಂದು ದೃಷ್ಟಿಯಿಂದಲೂ ಇಂತಹ ಬೆಳವಣಿಗೆಗಳು ಅಪಾಯಕಾರಿಯಾದುದು. ಅದೆಂದರೆ ಸರಕಾರದ ಅನುತ್ಪಾದಕ ವೆಚ್ಚ ಹೆಚ್ಚಿದಂತೆ ಆ ಸರಕಾರದ ಆಯವ್ಯಯವೂ ಏರುಪೇರಾಗುತ್ತ ಹೋಗುತ್ತದೆ. ಇಂತಹ ವ್ಯತ್ಯಾಸವನ್ನು ಸರಿಪಡಿಸಲು ಸರಕಾರಗಳು ಹೊರಗಿನಿಂದ ಸಾಲ ತರಬೇಕಾಗುತ್ತದೆ. ಇಂತಹ ಸಾಲದ ಬಡ್ಡಿಯ ಹೊರೆ ಮತ್ತೆ ಸರಕಾರದ ಮೇಲೆಯೇ ಬೀಳುವುದರಿಂದ ಮತ್ತಷ್ಟು ಸಾಲ, ಮತ್ತಷ್ಟು ಸಾಲ ಎಂಬಲ್ಲಿಗೆ ಬಂದು ನಿಂತು ಸರಕಾರದ ತಿಜೋರಿ ದಿವಾಳಿಯ ಅಂಚಿಗೆ ಬಂದು ನಿಲ್ಲುತ್ತದೆ. ಆಗ ದಿಢೀರನೆ ಜನರಿಗೆ ನೀಡುವ ಉಚಿತ ಕಾಣಿಕೆಗಳು ನಿಂತು, ಕ್ರಿಯಾಹೀನರಾದ ಜನಸ್ತೋಮ ಹತಾಶೆಗೆ ಬೀಳುತ್ತದೆ. ಇಂತಹ ಸಂದರ್ಭವನ್ನು ಬಳಸಿಕೊಳ್ಳುವ ದುಷ್ಟ ಶಕ್ತಿಗಳು ಅರಾಜಕತೆಯನ್ನು ಹುಟ್ಟು ಹಾಕುತ್ತವೆ.
ಯಾಕೆಂದರೆ ತಮಿಳುನಾಡಿನ ಸರಕಾರದ ಮುಖ್ಯ ಆದಾಯವಿರುವುದೆ ಅಬಕಾರಿಯಲ್ಲಿ. ಅಬಕಾರಿ ಇಲಾಖೆ ಒಂದರಿಂದಲೇ ಸರಕಾರಕ್ಕೆ ವಾರ್ಷಿಕ 25ರಿಂದ 30 ಸಾವಿರ ಲಕ್ಷ ರೂ. ಆದಾಯ ಬರುತ್ತಿದ್ದು, ಈಗ ಜಯಲಲಿತಾರವರು ಘೋಷಣೆ ಮಾಡಿರುವ ಕೊಡುಗೆಗಳನ್ನು ಜನರಿಗೆ ನೀಡಲು ವಾರ್ಷಿಕ 50 ರಿಂದ 60 ಸಾವಿರ ಲಕ್ಷ ರೂ. ಬೇಕಾಗುತ್ತದೆ. ಹಾಗಾದರೆ ಸಾಲದೆ ಬರುವ ಹಣವನ್ನು ಅವರು ಎಲ್ಲಿಂದ ತರುತ್ತಾರೆ ಎಂಬುದೇ ಕುತೂಹಲ ಮತ್ತು ಆತಂಕದ ಪ್ರಶ್ನೆಯಾಗಿದೆ. ವಿಶೇಷವಿರುವುದೇ ಇಲ್ಲಿ, ಯಾಕೆಂದರೆ ಕೊರತೆಯಾದ ಹಣವನ್ನು ಸರಕಾರ ಅಭಿವೃದ್ಧ್ದಿಗೆಂದು ಎತ್ತಿಟ್ಟ ಹಣದಿಂದ ಪೂರೈಸಲಾಗುತ್ತದೆ. ಆಗ ಸಹಜವಾಗಿ ಅಭಿವೃದ್ಧ್ದಿಯ ಕೆಲಸಗಳು ನನೆಗುದಿಗೆ ಬೀಳುತ್ತವೆ. ಇಲ್ಲಿ ಇನ್ನೊಂದು ವಿಶೇಷ ಅಡಗಿದೆ. ಇಷ್ಟೆಲ್ಲ ಉಚಿತ ಘೋಷಣೆಗಳನ್ನು ಮಾಡಿರುವ ಜಯಲಲಿತಾರವರು ಹಂತಹಂತವಾಗಿ ಪಾನನಿಷೇಧವನ್ನು ಮಾಡುವುದಾಗಿ ಬೇರೆ ಹೇಳಿದ್ದಾರೆ. ಹೀಗೆ ಒಂದೆಡೆ ಆದಾಯದ ಮೂಲವನ್ನು ಇಲ್ಲವಾಗಿಸುತ್ತಲೇ ಖರ್ಚು ಮಾಡಲು ಹಲವಾರು ಯೋಜನೆಗಳನ್ನು ಪ್ರಕಟಿಸಿರುವ ಕುಮಾರಿ ಜಯಲಲಿತಾರವರ ಕಣ್ಣಮುಂದೆ ಅಧಿಕಾರದ ಕುರ್ಚಿ ಒಂದು ಬಿಟ್ಟರೆ ಬೇರೇನೂ ಕಾಣುತ್ತಿಲ್ಲ. ಬಹುಶ: ಅವರು ಅಧಿಕಾರಕ್ಕೆ ಬಂದು ಹೇಳಿದ ಎಲ್ಲ ಕೊಡುಗೆಗಳನ್ನೂ ನೀಡಿ ಪಾನನಿಷೇಧವನ್ನೂ ಮಾಡಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ತಮಿಳುನಾಡನ್ನು ಸ್ವತ: ದೇವರೂ ಕಾಪಾಡಲಾರ ಎನ್ನುವುದಂತೂ ಸತ್ಯ!
ಪ್ರಜಾಪ್ರಭುತ್ವದಂತಹ ಕಲ್ಯಾಣ ರಾಜ್ಯಗಳಲ್ಲಿ ಬಡವರ ಬದುಕಿಗೆ ಭದ್ರತೆ ಒದಗಿಸಲು ಮತ್ತು ಆರೋಗ್ಯ ಶಿಕ್ಷಣದಂತಹ ಸೇವಾಕ್ಷೇತ್ರಗಳ ಲಾಭವನ್ನು ಅವರಿಗೆ ಉಚಿತವಾಗಿ ತಲುಪಿಸಬೇಕಿರುವುದು ಸರಕಾರಗಳ ಕರ್ತವ್ಯ ನಿಜ. ಆದರೆ ಆ ನೆಪದಲ್ಲಿ ದೀರ್ಘಾವಧಿಯಲ್ಲಿ ಇಡೀ ಸಮುದಾಯವನ್ನೇ ಕಡುಕಷ್ಟಕ್ಕೆ ತಳ್ಳಿಬಿಡುವ ಜಯಲಲಿತಾರವರಂತಹ ಇಂತಹ ನಡವಳಿಕೆಗಳು ಅಕ್ಷಮ್ಯ ಅಪರಾಧವೆನ್ನಲೆ ಬೇಕಾಗಿದೆ.
ಆದ್ದರಿಂದಲೇ ಇವತ್ತು ರಾಜಕೀಯ ಪಂಡಿತರು, ಆರ್ಥಿಕತಜ್ಞರು ಜಯಲಲಿತಾರವರ ಪ್ರಣಾಳಿಕೆಯನ್ನು ಜನರು ತಿರಸ್ಕರಿಸಬೇಕೆಂದು ಬಯಸುತ್ತಿದ್ದಾರೆ. ತನ್ಮೂಲಕ ತಮಿಳುನಾಡಿನ ಜನತೆ ತಮ್ಮ ವೈಯಕ್ತಿಕ ಸ್ವಾಭಿಮಾನದ ಜೊತೆಗೆ, ರಾಜ್ಯದ ಸ್ವಾಭಿಮಾನವನ್ನೂ ರಕ್ಷಿಸಿಕೊಳ್ಳುವತ್ತ ಮನಸ್ಸು ಮಾಡಬೇಕಿದೆ.