ಕಳಸಾ ಕಿಚ್ಚು ಮುನ್ನೂರು ದಿನ!
ಹಸಿವಾದವನಿಗೆ ಗೊತ್ತು ಊಟದ ಬೆಲೆ, ಕಳೆದುಕೊಂಡನಿಗೆ ಗೊತ್ತು ಕಳೆದ ವಸ್ತುವಿನ ಮಹತ್ವ. ನೀವೆಲ್ಲ ನರಗುಂದದ ಸುತ್ತಮುತ್ತಲಿನ ರೈತರ ಪಾಡನ್ನು ಅನುಭವಿಸದ ಹೊರತು ಅದರ ತೀವ್ರತೆ ಅರ್ಥವಾಗುವುದಿಲ್ಲ. ಸಾಮಾನ್ಯವಾಗಿ ಒಂದು ಹೋರಾಟವೆಂದರೆ ಒಂದು ದಿನ, ಎರಡು ದಿನ ಮೂರು ದಿನ ಕೂಡ ಮಾಡಬಹುದು ಆದರೆ ಈ ಬಾರಿ ಅತ್ಯಂತ ಹೆಚ್ಚು ಅಂದರೆ ಮುನ್ನೂರು ದಿನಗಳಿಗೆ ಕಾಲಿಟ್ಟ ಕಳಸಾ ಕಿಚ್ಚು ಅಲ್ಲಿನ ಸಮಸ್ಯೆಯ ತೀವ್ರತೆಗೆ ಹಿಡಿದ ಕನ್ನಡಿಯಾಗಿದೆ. ಆದರೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಾತ್ರ ಅಂಗೈ ಹುಣ್ಣಿಗೆ ಕನ್ನಡಿ ಹುಡುಕುವ ಪ್ರಯತ್ನ ಮಾಡುತ್ತಿದ್ದು, ಕಳಸಾ ಕಿಚ್ಚಿನಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಈ ದೇಶದಲ್ಲಿ ಯಾರ್ಯಾರಿಗೋ ಎಂತೆಂತಹ ಅವಕಾಶಗಳು ದೊರೆಯುತ್ತವೆ.
ಮಲ್ಯನಂತಹವರಿಗೆ ಅತ್ಯಂತ ಸುಲಭವಾಗಿ ಸಾಲ ದೊರೆಯುತ್ತದೆ. ನಂತರ ಕುಂಟು ನೆಪಹೇಳಿ ಸಾಲ ತೀರಿಸುವುದನ್ನೇ ಮುಂದೂಡಲಾಗುತ್ತದೆ ಆದರೆ ಈ ದೇಶದ ಬೆನ್ನೆಲುಬಾದ ರೈತನ ಸಣ್ಣ ಪುಟ್ಟ ಸಾಲಮನ್ನಾದಂತಹ ವಿಚಾರಗಳು ಬೆಳಕಿಗೆ ಬಂದಾಗ ಈ ದೇಶದಲ್ಲಿ ಹಲವು ಚಿಂತನೆಗಳು ಪ್ರಾರಂಭವಾಗುತ್ತದೆ. ರಾಜಕಾರಣಿಗಳು ದೇಶದಲ್ಲಿ ರೈತರ ಸಾಲಮನ್ನಾದ ಬಗ್ಗೆ ವಿಮರ್ಶೆೆ ಮಾಡುತ್ತಾ ದಿನಗಳೆಯುತ್ತಾರೆ. ವಿಜಯಮಲ್ಯನಂತಹವರನ್ನು ಆರಾಮವಾಗಿ ತಿರುಗಾಡಲು ಬಿಡುತ್ತಾರೆ. ಕಳಸಾ ಬಂಡೂರಿಯಂತಹ ಅತ್ಯಂತ ದೊಡ್ಡ ವಿಚಾರವನ್ನು ಮೂಲೆಗೊತ್ತಿ ಕೆಲಸಕ್ಕೆ ಬಾರದ ಹಲವು ವಿಚಾರಗಳಲ್ಲಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷಗಳು ತಲ್ಲೀನವಾಗುತ್ತವೆ ಇದು ಈ ದೇಶದ ದೊಡ್ಡ ದುರಂತ
ಕಳೆದ ಮುನ್ನೂರು ದಿನಗಳಿಂದ ಬಾಯಿ ಬಡಿದುಕೊಳ್ಳುತ್ತಿರುವ ರೈತರ ಕೂಗು ಈ ದೇಶದಲ್ಲಿ ಕೇಳುವುದಿಲ್ಲ. ಆದರೆ ಮಾದಕ ನಟಿಯೊಬ್ಬಳು ತನ್ನ ಅಶ್ಲೀಲ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುವ ವಿಷಯ ಎಲ್ಲಾ ಕಡೆಗೆ ಹಬ್ಬುತ್ತದೆ. ಈ ದೇಶದಲ್ಲಿ ನೀರಿಲ್ಲದೆ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿರುವ ವಿಷಯ ಚಚೆರ್ಗೆ ಬರುವುದಿಲ್ಲ. ಆದರೆ ಯಾವ ಸಿನೆಮಾ ಎಷ್ಟು ಹಣ ಸಂಪಾದನೆ ಮಾಡಿದೆ ಎಂಬ ವಿಷಯ ಮಾತ್ರ ಲಗ್ಗೆಯಿಲ್ಲದೆ ಚರ್ಚೆಯಾಗುತ್ತದೆ. ಕಳಸ ಬಂಡೂರಿಯಂತಹ ಅಂತಾರಾಜ್ಯಮಟ್ಟದ ಸಮಸ್ಯೆ ಯಾರಿಗೂ ಕಾಣುವುದಿಲ್ಲ. ಈ ದೇಶದಲ್ಲಿ ಪ್ರತಿ ಸರಕಾರಗಳು ಬಂದಾಗಲು ಊಹಾಪೋಹದಲ್ಲಿಯೇ ದಿನಗಳೆದು ಸಂಸತ್ತಿನ ಸಮಯವೆಲ್ಲ ಒಬ್ಬರಿಗೊಬ್ಬರು ಬೈದುಕೊಳ್ಳುತ್ತಾ ತಮ್ಮ ಆಡಳಿತದ ಗಾಡಿ ತಳ್ಳಿ ಬಿಡುತ್ತಾರೆಯೆ ಹೊರತು ಈ ದೇಶದ ನೈಜ ಸಮಸ್ಯೆಗಳಾದ ನೆಲ, ಜಲ, ಹಸಿವು, ನಿರುದ್ಯೋಗದ ಬಗ್ಗೆ ಚರ್ಚೆಯೇ ಆಗುವುದಿಲ್ಲವೆಂಬ ಆತಂಕ ಕಾಡುತ್ತಲೇ ಇರುತ್ತದೆ.
ಸದ್ಯ ಕಳಸಾ ಬಂಡೂರಿಯಂತಹ ಬಹುದೊಡ್ಡ ಸಮಸ್ಯೆಯು ಹಲವು ದಿನಗಳಿಂದ ನನೆಗುದಿಗೆ ಬಿದ್ದಿದೆ. ನರಗುಂದ, ನವಲಗುಂದದ ರೈತರ ಬಾಳಿನಲ್ಲಿ ಬೆಂಕಿಯಿಟ್ಟ ಈ ಸಮಸ್ಯೆ ಅವರ ನೆಮ್ಮದಿ ನಿದ್ದೆ ಹಾಳು ಮಾಡಿದೆ. ರಾಜ್ಯ-ರಾಜ್ಯಗಳ ನಡುವೆ ವ್ಯಾಜ್ಯಗಳು ಬಂದಾಗ ಯಾರು ಬಗೆಹರಿಸಬೇಕು ಎಂಬ ಗೊಂದಲ ಇದೀಗ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಎದುರಾಗಿದೆ. ಎರಡು ಪಕ್ಷಗಳು ಇದರಲ್ಲಿ ತಮ್ಮ ರಾಜಕೀಯ ಲಾಭವನ್ನು ಇಟ್ಟುಕೊಂಡಿರುವುದಂತೂ ಅತ್ಯಂತ ಸತ್ಯವಾಗಿದೆ. ಚುನಾವಣೆಗಳನ್ನು ಮುಂದೆಯಿಟ್ಟುಕೊಂಡು ಅಧಿಕಾರದ ಆಸೆಯಿಂದ ಇಂತಹ ಸಮಸ್ಯೆಗಳನ್ನು ರಾಜಕೀಯ ದಾಳವಾಗಿಸಿಕೊಳ್ಳುವ ಲೆಕ್ಕಾಚಾರ ಎಲ್ಲ ಪಕ್ಷಗಳದ್ದು ಎಂಬ ಸತ್ಯ ಮುನ್ನೂರು ದಿನ ಪೂರೈಸಿದ ಕಳಸಾ ಕಿಚ್ಚಿನಿಂದ ಸ್ಪಷ್ಟವಾಗಿ ಅರ್ಥವಾಗುತ್ತದೆ. ಈ ಬೂಟಾಟಿಕೆಯ ರಾಜಕಾರಣದಿಂದಲೇ ಇಂದಿಗೂ ಈ ಸಮಸ್ಯೆ ಹಸಿಯಾಗಿಯೆ ಉಳಿದಿದೆ ಮತ್ತು ಮುಂದಿನ ಚುನಾವಣೆ ಸಮೀಪದವರೆಗೂ ಇರುತ್ತದೆ ಎಂಬ ಸಂಶಯ ಕಾಡುತ್ತಿದೆ.
ದೇಶದಲ್ಲಿ ಪ್ರಜಾಪ್ರಭುತ್ವ ಬಂದಿದ್ದೇ ಮಾರಕವಾಗಿರುವಂತಿದೆ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಪ್ರಕಾರ ನಡೆದರೆ ನೆಲವಾಗಲಿ ಜಲ ಸಮಸ್ಯೆಯಾಗಲಿ ಪರಿಹಾರವಾಗುವಂತೆ ಕಾಣುತ್ತಿಲ್ಲ. ಕಳೆದ 300 ದಿನಗಳಿಂದ ಹೋರಾಟ ಮಾಡುತ್ತಿರುವ ರೈತರ ಪಾಡೇನು? ಅವರ ಮನೆಯ ಸದಸ್ಯರ ಪಾಡೇನು? ಅವರು ಈ ದೇಶದ ಪ್ರಜೆಗಳಲ್ಲವೆ? ಅವರ ಸಮಸ್ಯೆಯನ್ನು ಆಲಿಸಬೇಕಾದದ್ದು ಪ್ರಜಾಪ್ರಭುಗಳ ಕರ್ತವ್ಯವಲ್ಲವೆ? ಇಲ್ಲಿಯೂ ರಾಜಕೀಯ ಮಾಡುವ ಜನಪ್ರತಿನಿಧಿಗಳು ನಮಗೆ ಬೇಕೆ? ಎಂಬ ಪ್ರಶ್ನೆ ಕಾಡುತ್ತದೆ. ದೇಶದ ರಾಜಕಾರಣಿಗಳು ಇನ್ನಾದರೂ ತಮ್ಮ ಪೊಳ್ಳು ರಾಜಕೀಯ ಬಿಟ್ಟು ಸಣ್ಣ ಪುಟ್ಟ ವಿಷಯಗಳನ್ನು ಬದಿಗೊತ್ತಿ, ಈ ದೇಶದ ಬಹುಮುಖ್ಯ ಸಮಸ್ಯೆಗಳಾದ ನೆಲ, ನೀರು, ಹಸಿವು, ನಿರುದ್ಯೋಗದ ಬಗ್ಗೆ ಕಣ್ಣು ಹಾಯಿಸಿ ಕಳಸಾ ಕಿಚ್ಚನ್ನು ಅತ್ಯಂತ ಸೌಹಾರ್ದತೆಯಿಂದ ಬಗೆಹರಿಸಿ ನರಗುಂದ, ನವಲಗುಂದದ ರೈತರಿಗೆ ನ್ಯಾಯ ಕೊಡಿಸಿ. ರೈತ ಯಾವ ರಾಜ್ಯದವರಾದರು ಸಮಸ್ಯೆ ಒಂದೆ. ರೈತರೆಲ್ಲರ ಬಾಳಿನಲ್ಲಿ ಸುಖ ನೆಮ್ಮದಿ ಸಿಗಬೇಕು ಅಂತಹ ನ್ಯಾಯವನ್ನು ಮೂರು ರಾಜ್ಯಗಳ ಮಧ್ಯೆ ಅಥವಾ ಎರಡು ರಾಜ್ಯಗಳ ಮಧ್ಯೆ ಏರ್ಪಡಿಸಲಿ. ರೈತ ಎನ್ನುವ ಈ ದೇಶದ ಬೆನ್ನೆಲುಬನ್ನು ಉಳಿಸಲಿ.
ಕೊನೆಯ ತುತ್ತು: ನಾವೆಲ್ಲ ಇಂದು ಗೃಹಗಳನ್ನು ಶೋಧಿಸಿ ಅಲ್ಲಿ ವಾಸ ಮಾಡುವ ತಂತ್ರಜ್ಞಾನ ಕಂಡು ಹಿಡಿದಿರಬಹುದು ಆದರೆ ಆ ಗೃಹಗಳಲ್ಲಿಯು ಅನ್ನ ಬೇಳೆ ರೊಟ್ಟಿಯೆ ತಿನ್ನಬೇಕು. ರೈತನಿಲ್ಲದ, ಕೃಷಿಯಿಲ್ಲದ ದೇಶ ಊಹಿಸಲು ಸಾಧ್ಯವಿಲ್ಲ. ಅದಕ್ಕಾಗಿ ಈ ದೇಶದ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ರೈತ ನಿಶ್ಚಿಂತೆಯಾಗಿ ನೆಮ್ಮದಿಯ ಉಸಿರು ಬಿಡಬೇಕು. ಆಗ ಮಾತ್ರ ಇಡಿ ದೇಶ ನೆಮ್ಮದಿಯಿಂದ ಉಸಿರಾಡುವಂತಾಗುತ್ತದೆ.’’