ದಿಗ್ವಿಜಯ್ ‘ವಿಹಿಂಪ ’ದರ್ಶನ
ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಕಟ್ಟಾ ಜಾತ್ಯತೀತವಾದಿ ಎಂದು ಹೆಸರಾದವರು, ಜೊತೆಗೆ ಆರೆಸ್ಸೆಸ್‌ನ ಕಟು ಟೀಕಾಕಾರರೂ ಹೌದು. ಇಂತಿಪ್ಪ ಡಿಗ್ಗಿ ದಿಲ್ಲಿಯ ಆರ್.ಕೆ.ಪುರಮ್‌ನಲ್ಲಿರುವ ವಿಶ್ವ ಹಿಂದು ಪರಿಷತ್‌ನ ಕಚೇರಿಯಲ್ಲಿ ಕಾಣಿಸಿಕೊಂಡಾಗ ರಾಷ್ಟ್ರ ರಾಜಧಾನಿಯಲ್ಲಿ ತಲೆಗೊಂದು ಮಾತುಗಳು ಕೇಳಿಬಂದಿದ್ದವು. ಸಂಘ ಪರಿವಾರದ ಹತ್ತಿರಕ್ಕೂ ಸುಳಿಯದ ಸಿಂಗ್ ವಿಹಿಂಪ ಕಚೇರಿಯಲ್ಲಿ ಪ್ರತ್ಯಕ್ಷರಾಗಿದ್ದು ಸಾಕಷ್ಟು ಊಹಾಪೋಹಗಳನ್ನು ಸೃಷ್ಟಿಸಿತ್ತು. ಸಿಂಗ್ ಪಕ್ಷಾಂತರಗೊಳ್ಳಲಿದ್ದಾರೆ ಎಂದು ಕೆಲವು ಸ್ವಪಕ್ಷೀಯರು ಹೇಳಿದರೆ, ಕೊನೆಗೂ ಅವರ ಹೃದಯದಲ್ಲಿ ಕಮಲ ಅರಳಿದೆ ಎನ್ನುವುದು ಇತರರ ಅಂಬೋಣವಾಗಿತ್ತು. ವದಂತಿಗಳು ಹರಡಿ ಕೊನೆಗೆ ಖುದ್ದು ಸಿಂಗ್ ಕಿವಿಗೇ ಬಿದ್ದು ಅವರು ಹೊಟ್ಟೆ ತುಂಬ ನಕ್ಕಾಗ ಇತರರು ತಲೆ ಕೆರೆದುಕೊಳ್ಳುವಂತಾಗಿತ್ತು. ಸಿಂಗ್ ಅವರೇ ಹೇಳಿರುವಂತೆ ಆರ್.ಕೆ.ಪುರಮ್‌ಗೆ ಅವರ ಭೇಟಿ ದಿಢೀರ್ ಆಗಿ ಒದಗಿ ಬಂದಿತ್ತು. ಆಗಿದ್ದೇನೆಂದರೆ ಸಿಂಗ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ವಿಹಿಂಪ ಪದಾಧಿಕಾರಿಯೋರ್ವರು ಅವರ ಸಹ ಪ್ರಯಾಣಿಕರಾಗಿದ್ದರು. ಪ್ರಯಾಣದುದ್ದಕ್ಕೂ ಅವರಿಬ್ಬರೂ ಉಭಯ ಕುಶಲೋಪರಿ ಮಾತನಾಡಿಕೊಂಡಿದ್ದರು. ಹೀಗಾಗಿ ಒಂದು ರೀತಿಯ ಆತ್ಮೀಯತೆ ಅವರ ನಡುವೆ ಮೂಡಿತ್ತು. ರೈಲು ದಿಲ್ಲಿ ನಿಲ್ದಾಣವನ್ನು ತಲುಪಿದಾಗ ಸಿಂಗ್ ಆ ಸಹ ಪ್ರಯಾಣಿಕರಿಗೆ ಲಿಫ್ಟ್ ನೀಡುವ ಕೊಡುಗೆಯನ್ನು ಮುಂದಿಟ್ಟಿದ್ದರು. ಹಾಗೆ ವಿಹಿಂಪ ಕಚೇರಿಗೆ ತನ್ನನ್ನು ಬಿಟ್ಟ ಸಿಂಗ್ ಅವರನ್ನು ತನ್ನ ಜೊತೆ ಒಂದು ಕಪ್ ಚಹಾಕ್ಕೆ ಆ ಪದಾಧಿಕಾರಿ ಆಹ್ವಾನಿಸಿದ್ದರು. ಅವರ ಆಹ್ವಾನವನ್ನು ನಿರಾಕರಿಸಲಾಗದೆ ಸಿಂಗ್ ವಿಹಿಂಪ ಕಚೇರಿಯಲ್ಲಿ ಹೆಜ್ಜೆಯನ್ನಿರಿಸಿದ್ದರು. ‘ಸ್ಟಾರ್ಮ್ ಇನ್ ಎ ಟೀ ಕಪ್ ’ಎಂದರೆ ಇದೇ ಅಲ್ಲವೇ..?!
ಕಾಂಗ್ರೆಸಿಗರಲ್ಲಿ ವಾದ್ರಾ ಕುರಿತು ಗೊಂದಲ
ರಾಬರ್ಟ್ ವಾದ್ರಾ ಕೊನೆಗೂ ಕಾಂಗ್ರೆಸ್‌ಗೆ ಸೇರಿದ್ದಾರೆಯೇ? ಇದು ಹೆಚ್ಚಿನ ಕಾಂಗ್ರೆಸಿಗರು ಉತ್ತರವನ್ನು ಬಯಸುತ್ತಿರುವ ಪ್ರಶ್ನೆ. ಇಂತಹದೊಂದು ಪ್ರಶ್ನೆ ಮೂಡಿದ್ದು ಪಕ್ಷವು ಇತ್ತೀಚಿಗೆ ದಿಲ್ಲಿಯಲ್ಲಿ ಏರ್ಪಡಿಸಿದ್ದ ‘ಪ್ರಜಾತಂತ್ರ ಉಳಿಸಿ’ ರ್ಯಾಲಿ ಸಂದರ್ಭ ಸೋನಿಯಾರ ಅಳಿಯ ದೇವರ ಚಿತ್ರಗಳು ಕಾಣಿಸಿಕೊಂಡ ಬಳಿಕ. ಪಕ್ಷಾಧ್ಯಕ್ಷೆಯ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರವಾಗಿ ಕಾಂಗ್ರೆಸ್ ಈ ರ್ಯಾಲಿಯನ್ನು ಸಂಘಟಿಸಿತ್ತು. ಪೋಸ್ಟರ್‌ಗಳಲ್ಲಿ ಸೋನಿಯಾ ಮತ್ತು ರಾಹುಲ್ ನಡುವೆ ವಾದ್ರಾ ಮಿನುಗುತ್ತಿದ್ದರು. ಇದು ವಾದ್ರಾಗೆ ರಾಜಕೀಯ ರಕ್ಷಣೆ ನೀಡಲು ಎಚ್ಚರಿಕೆಯಿಂದ ರೂಪಿಸಿರುವ ತಂತ್ರ ಎನ್ನುವುದು ಕೆಲವು ರಾಜಕೀಯ ಪಂಡಿತರ ಅಭಿಪ್ರಾಯ. ಬಿಜೆಪಿ ಅಥವಾ ನರೇಂದ್ರ ಮೋದಿ ಸರಕಾರ ಪ್ರತಿ ಬಾರಿ ವಾದ್ರಾ ವಿರುದ್ಧ ದಾಳಿ ನಡೆಸಿದಾಗಲೂ ಗಲಿಬಿಲಿಗೊಳ್ಳುವವರು ಕಾಂಗ್ರೆಸಿಗರು. ವಾದ್ರಾರನ್ನು ಬೆಂಬಲಿಸಿ ಮಾತನಾಡಬೇಕೇ ಅಥವಾ ತನ್ನ ರಕ್ಷಣೆಯ ಹೊಣೆಯನ್ನು ಅವರಿಗೇ ಬಿಡಬೇಕೇ ಎಂಬ ಗೊಂದಲ ಅವರನ್ನು ಕಾಡುತ್ತಿರುತ್ತದೆ. ವಾದ್ರಾ ರಾಜ್ಯಸಭೆಗೆ ನಾಮಕರಣಗೊಳ್ಳಲಿದ್ದಾರೆಯೇ ಎನ್ನುವುದು ಕಾಂಗ್ರೆಸ್ ವಲಯಗಳನ್ನು ಈಗ ಕಾಡುತ್ತಿರುವ ಪ್ರಶ್ನೆ. ರಾಹುಲ್ ಪಕ್ಷದ ಅಧ್ಯಕ್ಷತೆಯನ್ನು ವಹಿಸಿಕೊಂಡಾಗ ಅವರಿಗೆ ನೆರವಾಗಲು ಪ್ರಿಯಾಂಕಾ ಗಾಂಧಿ ಪಕ್ಷದಲ್ಲಿ ವಿದ್ಯುಕ್ತವಾಗಿ ಹುದ್ದೆಯೊಂದನ್ನು ಒಪ್ಪಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ವಾದ್ರಾರ ರಾಜ್ಯಸಭಾ ಪ್ರವೇಶದ ಊಹಾಪೋಹಕ್ಕೆ ನಾಂದಿ ಹಾಡಿದೆ. ಹೂವಿನೊಂದಿಗೆ ನಾರೂ ಸ್ವರ್ಗಕ್ಕೆ ಎಂಬಂತೆ ರಾಹುಲ್-ಪ್ರಿಯಾಂಕಾರಿಗೆ ಹೊಸ ಅಧಿಕಾರದ ಕಾಲವಾದರೆ ವಾದ್ರಾಗೂ ರಾಜಕೀಯ ಪ್ರವೇಶದ ಕಾಲವೆಂದು ಅರ್ಥವೇ?
ಗ್ರಾಮೀಣಾಭಿವೃದ್ಧಿ ಸಚಿವರಿಗೆ ಖಾತೆಯ ಚಿಂತೆ
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಚೌಧರಿ ಬೀರೇಂದ್ರ ಸಿಂಗ್ ಅವರು ಇತ್ತೀಚಿನ ದಿನಗಳಲ್ಲಿ ತುಂಬ ಚಿಂತಾಕ್ರಾಂತರಾಗಿದ್ದಾರೆ. ಆರೆಸ್ಸೆಸ್‌ನೊಂದಿಗೆ ಗುರುತಿಸಿಕೊಂಡ ವ್ಯಕ್ತಿಗಳು ಮಾತ್ರ ದೀನದಯಾಳ ಉಪಾಧ್ಯಾಯ ಮತ್ತು ಶ್ಯಾಮಪ್ರಸಾದ ಮುಖರ್ಜಿಯವರ ಹೆಸರುಗಳನ್ನು ಹೊತ್ತಿರುವ ಸರಕಾರಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಮರ್ಥರು ಎನ್ನುವ ಗುಸುಗುಸು ಸಿಂಗ್ ಕಿವಿಗೂ ಬಿದ್ದಿದೆಯೆನ್ನಲಾಗಿದೆ. 2014ರ ಆದಿಯವರೆಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಂಗ್ ಆಗಿನಿಂದಲೂ ಆರೆಸ್ಸೆಸ್ ಕಚೇರಿಗೆ ಆಗಾಗ್ಗೆ ಭೇಟಿ ನೀಡುತ್ತಲೇ ಇದ್ದಾರೆ. ಇಷ್ಟೇ ಅಲ್ಲ, ಆರೆಸ್ಸೆಸ್ ಹಿನ್ನೆಲೆಯವರನ್ನೇ ತನ್ನ ಸಿಬ್ಬಂದಿಗಳಾಗಿ ನೇಮಿಸಿಕೊಂಡಿದ್ದಾರೆ. ಆದರೆ ಹುದ್ದೆ ಉಳಿಸಿಕೊಳ್ಳಲು ಇದಿಷ್ಟೇ ಸಾಕಾಗಲಿಕ್ಕಿಲ್ಲ ಎನ್ನುವ ಚಿಂತೆ ಅವರ ಬೆಂಬಲಿಗರದು. ಮುಂದಿನ ಸಂಪುಟ ಪುನಾರಚನೆ ಸಂದರ್ಭ ತನ್ನ ಖಾತೆಯನ್ನು ಉಳಿಸಿಕೊಳ್ಳಲು ತಾನು ಇನ್ನೇನು ಮಾಡಬೇಕು ಎಂಬ ಚಿಂತೆಯಲ್ಲಿಯೇ ಸಿಂಗ್ ಸಾಹೇಬರು ಕೊರಗುತ್ತಿದ್ದಾರೆ.
ಬರೀ ಊಹಾಪೋಹ ಮಾತ್ರ
ಪ.ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಬಿಜೆಪಿ ಕೇಂದ್ರ ನಾಯಕತ್ವ ಆಸೆಯನ್ನು ಬಿಟ್ಟ ಹಾಗಿದೆ. ರಾಜ್ಯದಲ್ಲಿಯ ಹೆಚ್ಚುಕಡಿಮೆ ಎಲ್ಲ ಸ್ಥಾನಗಳಿಗೂ ಹೋರಾಡುತ್ತಿರುವ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಶೇ.16ರಷ್ಟು ಮತ ಗಳಿಸಿದ್ದ ತನ್ನ ಸಾಧನೆಯನ್ನು ಪುನರಾವರ್ತಿಸಲಿದೆ ಎಂಬ ಭಾರೀ ಆಸೆಗಳಿದ್ದವು. ಆದರೆ ಪಕ್ಷವು ಅದರ ಅರ್ಧದಷ್ಟೂ ಗಳಿಸಲಿಕ್ಕಿಲ್ಲ ಎಂಬ ಭೀತಿ ಈಗ ನಾಯಕರನ್ನು ಕಾಡುತ್ತಿದೆ. ಮತ್ತು ಸ್ಥಾನಗಳಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ನಾಯಕನೂ ತನ್ನದೇ ಅಭಿಪ್ರಾಯ ಹೊಂದಿದ್ದಾನೆ. ಪಕ್ಷವು ಎರಡಂಕಿಯ ಉತ್ತಮ ಸ್ಥಾನಗಳನ್ನು ಗಳಿಸಲಿದೆ ಎಂದು ಅಧ್ಯಕ್ಷ ಅಮಿತ್ ಶಾ ಹೇಳಿಕೊಳ್ಳುತ್ತಿದ್ದರೆ, ಇತರರು ಅಷ್ಟೊಂದು ಆಶಾವಾದಿಗಳಾಗಿಲ್ಲ. ಓರ್ವ ಪ್ರಮುಖ ನಾಯಕರು ಇತ್ತೀಚಿಗೆ ಪಕ್ಷವು ಗೆಲ್ಲಬಹುದಾದ ಸ್ಥಾನಗಳ ಬಗ್ಗೆ ಪತ್ರಕರ್ತರನ್ನೇ ವಿಚಾರಿಸಿದ್ದರು. ಬಿಜೆಪಿ ಆರು ಸ್ಥಾನಗಳನ್ನು ಗೆಲ್ಲಬಹುದು ಎಂದು ಓರ್ವ ಪತ್ರಕರ್ತ ಹೇಳಿದಾಗ ಹುಬ್ಬುಗಳನ್ನು ಮೇಲಕ್ಕೇರಿಸಿ ತಲೆ ಅಲ್ಲಾಡಿಸಿದ ಆ ನಾಯಕ ‘ಅದು ತುಂಬ ಹೆಚ್ಚಾಯಿತು.3 ಅಥವಾ 4 ಸ್ಥಾನ ಬಂದರೆ ನನಗೆ ಸಂತೋಷ ’ಎಂದು ಹೇಳಿದ್ದರು. ಇದು 259 ವಿಧಾನಸಭಾ ಸ್ಥಾನಗಳಿರುವ ರಾಜ್ಯದಲ್ಲಿ ಪಕ್ಷದ ವಿಶ್ವಾಸ ಅಥವಾ ವಿಶ್ವಾಸದ ಕೊರತೆಯನ್ನು ತೋರಿಸುತ್ತದೆ.
ಮೇಲ್ಮನೆಯಲ್ಲಿ ಬಿಜೆಪಿಯ ನೆಮ್ಮದಿಗೆಡಿಸುತ್ತಿರುವ ಸ್ವಾಮಿ
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಎಲ್ಲಿಯೇ ಹೋಗಲಿ, ಈ ಜಗತ್ತಿನಲ್ಲಿಯ ಹೆಚ್ಚು ಕಡಿಮೆ ಎಲ್ಲ ಮತ್ತು ಯಾವುದೇ ವಿಷಯದ ಬಗ್ಗೆ ತನ್ನ ಬೊಂ‘ಬಾಯಿ’ಯನ್ನು ಹರಿಯಬಿಟ್ಟು ತನ್ನ ಇರುವಿಕೆಯನ್ನು ಜಾಹೀರುಗೊಳಿಸುತ್ತಾರೆ. ಇದೀಗ ದಕ್ಕಿರುವ ರಾಜ್ಯಸಭಾ ಸದಸ್ಯತ್ವವು ‘ಟ್ರಬಲ್ ಮೇಕರ್’ ಎನ್ನುವ ಅವರ ‘ಖ್ಯಾತಿ’ಯನ್ನು ಇನ್ನಷ್ಟು ಹೆಚ್ಚಿಸಿದೆ. ಸದನದಲ್ಲಿ ಅವರ ಉಪಸ್ಥಿತಿಯು ಕಾಂಗ್ರೆಸ್‌ಗಿಂತ ಹೆಚ್ಚು ಬಿಜೆಪಿಯ ನೆಮ್ಮದಿಯನ್ನೇ ಕೆಡಿಸುತ್ತಿದೆ. ನಾಮಕರಣ ಸದಸ್ಯರಾಗಿದ್ದರೂ ಸ್ವಾಮಿ ಮೇಲ್ಮನೆಯಲ್ಲಿನ ಇತರ ಬಿಜೆಪಿಯ ದಿಗ್ಗಜರಿಗಿಂತ ಹೆಚ್ಚಿನ ಗಮನವನ್ನು ಸೆಳೆಯುತ್ತಿರುವುದು ಇದಕ್ಕೆ ಒಂದು ಕಾರಣ. ಅಲ್ಲದೆ ಸ್ವಾಮಿ ಯಾರನ್ನು ಮತ್ತು ಏನನ್ನು ಗುರಿಯಾಗಿಸಿಕೊಳ್ಳುತ್ತಾರೆ ಎಂಬ ಕಲ್ಪನೆಯೇ ತಮಗಿರುವುದಿಲ್ಲ ಮತ್ತು ಇದು ತಮ್ಮನ್ನು ಸಂಕಟದಲ್ಲಿ ಸಿಲುಕಿಸಿದೆ ಎನ್ನುವುದು ಸದನದಲ್ಲಿ ಬಿಜೆಪಿಯ ನಡೆಯನ್ನು ನಿಭಾಯಿಸುವ ಹೊಣೆಯನ್ನು ಹೊತ್ತವರ ಅಳಲು. ಇದಿಷ್ಟೇ ಅಲ್ಲ...ಇನ್ನೊಂದು ನೆಮ್ಮದಿಗೆಡಿಸುವ ವಿಷಯವೂ ಇದೆ. ಸ್ವಾಮಿ ನೇರವಾಗಿ ಪಕ್ಷಾಧ್ಯಕ್ಷ ಅಮಿತ್ ಶಾ ಜೊತೆಯೇ ಮಾತನಾಡುವುದನ್ನು ಬಯಸುತ್ತಾರೆ. ಶಾ ಅವರನ್ನು ಸುಲಭವಾಗಿ ಸಂಪರ್ಕಿಸುವ ಅವರ ಈ ತಾಕತ್ತು ಕೇಸರಿ ಪರಿವಾರದ ಹಲವಾರು ಹಿರಿಯ ನಾಯಕರು ವಿಲಗುಡುವಂತೆ ಮಾಡಿದೆ. ತನ್ನದೇ ನಿರ್ಧಾರದಂತೆ ನಡೆಯುವ ಸ್ವಾಮಿ ಸುದ್ದಿಯಲ್ಲುಳಿಯಲು ಏನು ಬೇಕಾದರೂ ಮಾಡುವುದರಿಂದ ಅವರು ರಾಜ್ಯಸಭೆಯಲ್ಲಿ ಬಿಜೆಪಿ ನಾಯಕರ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸುತ್ತಾರಷ್ಟೇ..!