ಕೇರಳದಲ್ಲಿ ‘ಸೊಮಾಲಿಯಾ’ ಕಂಡ ಮೋದಿಗೆ ಮಹಾಮಂಗಳಾರತಿ!
ಕೇರಳಕ್ಕೆ ಚುನಾವಣೆ ಪ್ರಚಾರಕ್ಕೆ ಹೋದ ಪ್ರಧಾನಿ ನರೇಂದ್ರ ಮೋದಿ ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ. ತಮ್ಮ ಪಕ್ಷದ ಸೋಲನ್ನು ಮನಗಂಡು ಹತಾಶೆಯಿಂದ ಕೇರಳವನ್ನು ಸೊಮಾಲಿಯಾಗೆ ಹೋಲಿಸಿದರು. ಈ ರೀತಿ ಆಡಬಾರದ ಮಾತನ್ನು ಆಡಿ, ಕಮಲದ ಗುರುತಿಗೆ ಬೀಳುವ ಒಂದಿಷ್ಟು ಓಟುಗಳನ್ನು ಕಳೆದುಕೊಂಡರು. ಪೋನೋ ಮೋದಿ ಎಂದು ಉಗಿಸಿಕೊಂಡರು. ಹೀಗೆ ಮಾತನಾಡುವ ಮುನ್ನ, ಸರಕಾರಿ ಅಂಕಿ ಅಂಶವನ್ನಾದರೂ ಅವರು ಪರಿಶೀಲಿಸಬೇಕಿತ್ತು. ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆ, ಮಾನವಾಭಿವೃದ್ಧಿ ಸೂಚ್ಯಂಕ ಹೀಗೆ ಎಲ್ಲದರಲ್ಲೂ ಕೇರಳ ಉನ್ನತ ಸ್ಥಾನದಲ್ಲಿದೆ. ಹತ್ತು ವರ್ಷ ಗುಜರಾತನ್ನು ಆಳಿದ ಮೋದಿ ತಮ್ಮ ರಾಜ್ಯದ ಜೊತೆ ಕೇರಳ ಇಟ್ಟು ನೋಡಿದರೆ, ಎಲ್ಲವೂ ತಿಳಿಯುತಿತ್ತು. ಅಂಕಿಅಂಶಗಳು ಎಲ್ಲವನ್ನೂ ಹೇಳುತ್ತಿದ್ದವು.
ಮೋದಿಯವರಿಗೆ ಯಾರು ಮಾರ್ಗದರ್ಶನ ನೀಡುತ್ತಿದ್ದಾರೋ ಗೊತ್ತಿಲ್ಲ. ಪದೇ ಪದೇ ಪ್ರಮಾದ ಎಸಗುತ್ತಿದ್ದಾರೆ. ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದ ಚುನಾಯಿತ ಸರಕಾರಗಳನ್ನು ಉರುಳಿಸಿ ಮುಖಭಂಗ ಅನುಭವಿಸಿದರು. ಕಾನೂನಿನ ವ್ಯಾಪ್ತಿ ಮೀರಿ ನಡೆಯುತ್ತಿರುವ ಅವರನ್ನು ಒಂದೆಡೆ ಆರೆಸ್ಸೆಸ್ ದಾರಿ ತಪ್ಪಿಸುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅಡ್ಡಹಾದಿ ಹಿಡಿಸುತ್ತಿದ್ದಾರೆ. ಕಾನೂನಿನ ಚೌಕಟ್ಟನ್ನು ಮೀರಿ ಹೋಗದಂತೆ ಕಿವಿಮಾತು ಹೇಳಿದ ಅರುಣ್ ಜೇಟ್ಲಿ ಅವರನ್ನು ಮೂಲೆಗುಂಪು ಮಾಡಲು ರಾಜ್ಯಸಭೆಗೆ ಸುಬ್ರಮಣ್ಯಸ್ವಾಮಿ ಅವರನ್ನು ನಾಮಕರಣ ಮಾಡಿದರು. ಈ ಸ್ವಾಮಿ ಸದನ ಪ್ರವೇಶಿಸಿದ ದಿನ ಆಗಸ್ಟಾ ಹಗರಣ ಪ್ರಸ್ತಾಪಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಮಸಿ ಬಳಿಯಲು ಹೋಗಿ ಅಪಹಾಸ್ಯಕ್ಕೀಡಾದರು. ಇದನ್ನು ಕಂಡು ಜೇಟ್ಲಿ ಮುಂತಾದವರು ಒಳಗೊಳಗೆ ಮುಸಿಮುಸಿ ನಗುತ್ತಿದ್ದರು. ಈ ದೇಶ ಪಂಡಿತ್ ಜವಾಹರಲಾಲ್ ನೆಹರೂನಿಂದ ಹಿಡಿದು ಅಟಲ್ ಬಿಹಾರಿ ವಾಜಪೇಯಿಯವರೆಗೆ ಅನೇಕ ಪ್ರಧಾನಿಗಳನ್ನು ನೋಡಿದೆ. ಅವರು ಯಾರೂ ಸಹ ಈ ರೀತಿ ಅಪಹಾಸ್ಯ ರೀತಿಯ ಭಾಷಣ ಮಾಡುತ್ತಿರಲಿಲ್ಲ. ವಾಜಪೇಯಿ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಕಾವ್ಯಮಯವಾದ ಆ ಹಿಂದಿ ಕೇಳಬೇಕೆನ್ನಿಸುತಿತ್ತು. ಆದರೆ ಎರಡೂ ಕೈಗಳನ್ನು ಮೇಲೆತ್ತಿ ಕರ್ಕಶ ಧ್ವನಿಯಲ್ಲಿ ಮಾತನಾಡುವ ಮೋದಿ ಅವರಿಗೆ ತಾವು ಇರುವ ಸ್ಥಾನದ ಘನತೆಯೇ ಅರ್ಥವಾಗಿಲ್ಲ. ಈ ದೇಶಕ್ಕೆ ಮಾತ್ರವಲ್ಲ ಜಗತ್ತಿಗೆ ಕೇರಳಿಗರು ನೀಡಿದ ಕೊಡುಗೆ ಅಸಮಾನ್ಯವಾದದ್ದು. ಮೋದಿಯವರ ಗುಜರಾತಿಗೆ ಹೈನುಗಾರಿಕೆ ತಂದವರು ಮ್ಯಾಥ್ಯು ಕುರಿಯನ್. ಕೇರಳದ ಈ ಮ್ಯಾಥ್ಯು ಕುರಿಯನ್ ತಮ್ಮಿಡೀ ಬದುಕನ್ನು ಮೇಣದ ಬತ್ತಿಯಂತೆ ಉರಿಸಿಕೊಂಡು ಗುಜರಾತಿನ ಹಾಲು ಉತ್ಪಾದಕರ ಬದುಕಿಗೆ ಮಾತ್ರವಲ್ಲ ಬಳಕೆದಾರರ ಮನೆಗಳಿಗೂ ಬೆಳಕನ್ನು ನೀಡಿದರು. ಕೇರಳದ ಜನ ಎಲ್ಲೇ ಹೋಗಲಿ, ದಕ್ಷ ಸೇವೆಗೆ ಹೆಸರಾಗಿದ್ದಾರೆ. ಈ ರಾಜ್ಯದ ಈ ದಾದಿಯರ ಸೇವಾ ಮನೋವೃತ್ತಿಯನ್ನು ಇಡೀ ಜಗತ್ತೇ ಕೊಂಡಾಡುತ್ತದೆ.
ಕೇರಳವನ್ನು ಈ ದೇಶದ ಅನೇಕರು ಇಷ್ಟಪಡಲು ಕಾರಣ ಅಲ್ಲಿನ ಕೋಮು ಸೌಹಾರ್ದತೆ. ದೇಶ ವಿಭಜನೆಯಾದಾಗ, ಬಾಬರಿ ಮಸೀದಿ ನೆಲಸಮಗೊಂಡಾಗ ಇಡೀ ದೇಶ ಹೊತ್ತಿ ಉರಿದರೂ ಕೇರಳ ಶಾಂತವಾಗಿತ್ತು. ಸ್ವತಃ ಅಲ್ಲಿನ ಜನ ಶಾಂತಿಪ್ರಿಯರು. ಇತ್ತೀಚೆಗೆ ಕಣ್ಣೂರು ಮುಂತಾದ ಕಡೆ ಸಂಘ ಪರಿವಾರದ ಚಟುವಟಿಕೆಯಿಂದ ಅಶಾಂತಿ ಉಂಟಾಗಿದೆ. ಆದರೂ ಕೂಡ ತಮ್ಮ ಪಾಡಿಗೆ ತಾವು ನೆಮ್ಮದಿಯಿಂದ ಬದುಕುವ ಈ ಜನ ಸಾಕಷ್ಟು ಪ್ರಜ್ಞಾವಂತರು.
ಇದಕ್ಕೆಲ್ಲ ಕಾರಣ, ಕೇರಳಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಸಮಾನತೆಯ ಬೆಳಕನ್ನು ನೀಡಿದ ಮಹಾನ್ ಚೇತನಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಾರಾಯಣ ಗುರುಗಳು ಎಂದರೆ ಅತಿಶಯೋಕ್ತಿಯಲ್ಲ. ದುಡಿಯುವ ಹಿಂದುಳಿದ ಜನರನ್ನು ಪಶುಪಕ್ಷಿಗಳಿಗಿಂತ ಕೀಳಾಗಿ ಕಂಡ ಹಿಂದೂ ಪುರೋಹಿತಶಾಹಿಗಳ ವಿರುದ್ಧ ದಮನಿತರ ಪರವಾಗಿ ದನಿಯೆತ್ತಿದ ನಾರಾಯಣ ಗುರು ಕೋಮು ಸೌಹಾರ್ದದ ಸಂದೇಶ ಸಾರಿದರು. ನಾರಾಯಣ ಗುರುಗಳ ಪ್ರಭಾವದಿಂದಾಗಿಯೇ ಕಮ್ಯುನಿಸ್ಟ್ ಚಳವಳಿ ಅಲ್ಲಿ ನೆಲೆಯೂರಿತು. ಶೋಷಿತ ಈಳವ ಸಮಾಜದ ಜನ ಕೆಂಬಾವುಟ ಹಿಡಿದರು. ಒಂದೇ ಜಾತಿ, ಒಂದೇ ಮತ, ಒಂದೇ ಕುಲ ಎಂಬ ನಾರಾಯಣ ಗುರುಗಳ ಆಶಯವನ್ನು ಕಮ್ಯುನಿಸ್ಟ್ ಚಳವಳಿಯಲ್ಲಿ ಕಂಡರು.
ನಾರಾಯಣ ಗುರುಗಳ ನಂತರ ಇ.ಎಂ.ಎಸ್.ನಂಬೂದ್ರಿಪಾಡ್, ಎ.ಕೆ.ಗೋಪಾಲನ್, ಅಚ್ಯುತ್ ಮೆನನ್, ವಾಸುದೇವನ್ ನಾಯರ್ ಅವರಂತಹ ಮಹಾನ್ ನಾಯಕರು ಕಮ್ಯುನಿಸ್ಟ್ ಚಳವಳಿ ಕಟ್ಟಿ ಬೆಳೆಸಿದರು. ಕೇರಳದ ಅತ್ಯಂತ ಮುಂದುವರಿದ ಭೂಮಾಲಿಕ ಮನೆತನದಲ್ಲಿ ಹುಟ್ಟಿದ ಇಎಂಎಸ್ ತಮ್ಮೆಲ್ಲ ಆಸ್ತಿಯನ್ನು ಪಕ್ಷಕ್ಕೆ ಕೊಟ್ಟು ಬಾಡಿಗೆ ಮನೆಯಲ್ಲಿ ಬದುಕನ್ನು ಕಳೆದರು. 1952ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಕಮ್ಯುನಿಸ್ಟ್ ಸರಕಾರ ಅಸ್ತಿತ್ವಕ್ಕೆ ಬಂದಾಗ, ಮುಖ್ಯಮಂತ್ರಿಯಾಗಿದ್ದ ನಂಬೂದ್ರಿಪಾಡ್ ಭೂ ಸುಧಾರಣೆ, ಶಿಕ್ಷಣ ಸುಧಾರಣೆ ಕಾನೂನು ಜಾರಿಗೆ ತಂದರು. ಆದರೆ ಶಿಕ್ಷಣ ಸುಧಾರಣೆಗೆ ಕೇಂದ್ರ ಸರಕಾರ ಅಡ್ಡಗಾಲು ಹಾಕಿತು. ಅಧಿಕಾರ ಕಳೆದುಕೊಂಡರೂ ಇಎಂಎಸ್ ರಾಜಿ ಮಾಡಿಕೊಳ್ಳಲಿಲ್ಲ. ಇಎಂಎಸ್ ಮುಖ್ಯಮಂತ್ರಿಯಾಗಿದ್ದಾಗ, ಒಮ್ಮೆ ಅವರನ್ನು ಕಾಣಲು ದಿಲ್ಲಿಯ ಹಿರಿಯ ಪತ್ರಕರ್ತರ ತಂಡ ಬಂದಿತ್ತು. ಮನೆಗೆ ಬಂದ ಈ ತಂಡವನ್ನು ಬಾಗಿಲಲ್ಲೇ ನಿಂತು ಸ್ವಾಗತಿಸಿದ ನಂಬೂದ್ರಿಪಾಡ್ ತಾವೇ ನೆಲದ ಮೇಲೆ ಚಾಪೆ ಹಾಸುತ್ತಾರೆ. ಏಕೆಂದರೆ, ಅವರ ಮನೆಯಲ್ಲಿ ಎರಡೇ ಕುರ್ಚಿಗಳಿದ್ದವು. ಅದಕ್ಕಾಗಿ ಅವರು ಚಾಪೆಯನ್ನು ಹಾಸಿ, ತಾವು ಸಹ ನೆಲದ ಮೇಲೆ ಕೂತರು. ಈ ಸರಳತೆಯನ್ನು ಕುಲದೀಪ್ ನಯ್ಯರ್‌ರಂತಹ ಹಿರಿಯ ಪತ್ರಕರ್ತರು ತುಂಬಾ ಶ್ಲಾಘಿಸಿದ್ದರು.
ನಂಬೂದ್ರಿಪಾಡ್ ಮಾತ್ರವಲ್ಲ ಅಚ್ಯುತ್ ಮೆನನ್ ಮುಖ್ಯಮಂತ್ರಿಯಾಗಿ ಅತ್ಯಂತ ಸರಳ ಜೀವನ ನಡೆಸಿದರು. ಅಧಿಕಾರದಲ್ಲಿ ಮುಂದುವರಿಯುವ ಅವಕಾಶವಿದ್ದರೂ ಇನ್ನು ಸಾಕೆಂದು ಹೇಳಿ ತಮ್ಮ ಹಳ್ಳಿಗೆ ಹೋಗಿ ಪುಸ್ತಕ ಬರೆಯುತ್ತ ಕೂತರು. ಕೇರಳದ ಇನ್ನೊಬ್ಬ ಅಪರೂಪದ ವ್ಯಕ್ತಿ ವಾಸುದೇವನ್ ನಾಯರ್. ಅವರೂ ಸಹ ರಾಜ್ಯದ ಮುಖ್ಯಮಂತ್ರಿ ಮತ್ತು ಲೋಕಸಭಾ ಸದಸ್ಯರಾಗಿದ್ದರು. ಆದರೆ ಎಲ್ಲಿಯೂ ಸ್ವಂತ ಮನೆಯನ್ನು ಮಾಡಲಿಲ್ಲ. ಕೆಲ ಸಮಯ ಬೆಂಗಳೂರಿನಲ್ಲಿದ್ದ ಅವರ ಪುತ್ರಿ ಶಾರದಾ ಮೋಹನ್ ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ತಮ್ಮ ತಂದೆಯ ಸರಳತೆ ಬಗ್ಗೆ ತುಂಬಾ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದ ಅವರು ಸಂಬಂಧಿಕರ ಯಾವ ಶಿಫಾರಸುಗಳನ್ನು ಅವರು ಹಚ್ಚಿಕೊಳ್ಳುತ್ತಿರಲಿಲ್ಲ. ಒಮ್ಮೆ ಸ್ವತಃ ಅವರ ಮಗನೇ ಪಿಯುಸಿಯಲ್ಲಿ ಉತ್ತೀರ್ಣಗೊಂಡು ವೈದ್ಯಕೀಯ ಶಿಕ್ಷಣ ಸೇರಲು ಬಯಸಿದಾಗ ಪ್ರಭಾವ ಬೀರಲು ನಿರಾಕರಿಸಿದ ವಾಸುದೇವನ್ ನಾಯರ್, ನೀನೆ ನಿನ್ನ ಸ್ವಂತ ಸಾಮರ್ಥ್ಯದಿಂದ ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆದುಕೋ ಎಂದು ಕಿವಿಮಾತು ಹೇಳಿದರು. ಈ ಶಾರದಾ ಮೋಹನ್ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಎರ್ನಾಕುಲಂ ಜಿಲ್ಲೆಯ ಕ್ಷೇತ್ರವೊಂದರಿಂದ ಸ್ಪರ್ಧಿಸಿದ್ದಾರೆ. ದಿನಕ್ಕೆ ಆರು ಬಾರಿ ಬಟ್ಟೆ ಬದಲಿಸುವ ನರೇಂದ್ರ ಮೋದಿಯಂತಹವರಿಗೆ ಕೇರಳದ ಈ ಹೆಮ್ಮೆಯ ಇತಿಹಾಸ ಹೇಗೆ ಅರ್ಥ ಆಗಬೇಕು. ಅಂಬಾನಿ, ಅದಾನಿಗಳು ಹೊಲಿಸಿಕೊಡುವ ಲಕ್ಷಾಂತರ ರೂಪಾಯಿ ಮೊತ್ತದ ಉಡುಪು ಧರಿಸುವ ವ್ಯಕ್ತಿಗೆ ಕೇರಳದ ಜನ ಸೊಮಾಲಿಯಾದಂತೆ ಕಂಡಿದ್ದರೆ ಅಚ್ಚರಿಪಡಬೇಕಿಲ್ಲ. ತಾನು ಮಾತನಾಡುತ್ತಿರುವುದು ನಾರಾಯಣ ಗುರುಗಳು ನಡೆದಾಡಿದ ನಾಡಿನಲ್ಲಿ, ಇಎಂಎಸ್ ಬದುಕಿದ ನೆಲದಲ್ಲಿ, ಕುಮಾರಪ್ಪನಂತಹ ಗಾಂಧಿವಾದಿಗಳು ಶ್ರಮಿಸಿದ ತಾಣದಲ್ಲಿ ಎಂಬ ಎಚ್ಚರವಾದರೂ ಈ ಪ್ರಧಾನಿಗೆ ಇರಬೇಕಿತ್ತು.
ಈ ದೇಶದಲ್ಲಿ ಮೊದಲ ಕಾಂಗ್ರೆಸ್ಸೇತರ ಸರಕಾರ ಅಸ್ತಿತ್ವಕ್ಕೆ ಬಂದಿದ್ದು ಕೇರಳದಲ್ಲಿ. ಜಗತ್ತಿನಲ್ಲೇ ಮೊದಲ ಚುನಾಯಿತ ಕಮ್ಯುನಿಸ್ಟ್ ಸರಕಾರ ಮೈದಳಿದು ನಿಂತಿದ್ದು ಇದೇ ಕೇರಳದಲ್ಲಿ. ಎ.ಕೆ.ಗೋಪಾಲನ್ ದಲಿತರನ್ನು ಕಟ್ಟಿಕೊಂಡು ಗುರುವಾಯುರ್ ದೇವಾಲಯಕ್ಕೆ ನುಗ್ಗಿದ್ದು ಇದೇ ಕೇರಳದಲ್ಲಿ. ಇಂತಹ ಕೇರಳದ ಬಗ್ಗೆ ಮಾತನಾಡುವ ಮುನ್ನ ನರೇಂದ್ರ ಮೋದಿಯವರು ಒಂದಿಷ್ಟು ವಿವರಗಳನ್ನಾದರೂ ಸಂಗ್ರಹಿಸಬೇಕಾಗಿತ್ತು. ಈ ರಾಜ್ಯವನ್ನು ಸೊಮಾಲಿಯಾಕ್ಕೆ ಹೋಲಿಸಿ, ಸೊಮಾಲಿಯಾದ ಹಸಿದ ಬಡವರನ್ನು ಅವರು ಅವಮಾನಿಸಿದ್ದಾರೆ. ಸೊಮಾಲಿಯಾ ಈ ಸ್ಥಿತಿಗೆ ಬರಲು ಕಾರಣ ಸಾಮ್ರಾಜ್ಯಶಾಹಿ ದೇಶಗಳು ಎಂಬ ಸತ್ಯವನ್ನು ಅವರು ಹೇಳಲಿಲ್ಲ. ಯಾಕೆಂದರೆ, ಸಂಘದ ಶಾಖೆಯಲ್ಲಿ ಅಂತಹ ತಿಳಿವಳಿಕೆಯನ್ನು ಅವರು ಪಡೆದಿಲ್ಲ.
ಕೇರಳದ ಜನ ಯುಡಿಎಫ್ ಸರಕಾರ ತಪ್ಪು ಮಾಡಿದಾಗ, ಅದನ್ನು ಪದಚ್ಯುತಗೊಳಿಸಿ ಎಲ್‌ಡಿಎಫ್ (ಎಡರಂಗ) ಅಧಿಕಾರಕ್ಕೆ ತರುತ್ತಾರೆ. ಎಲ್‌ಡಿಎಫ್ ಸಾಕೆನ್ನಿಸಿದಾಗ, ಮತ್ತೆ ಯುಡಿಎಫ್ ತಂದಿದ್ದಾರೆ. ಅವರ ಆಯ್ಕೆ ಏನಿದ್ದರೂ ಎರಡು ಜಾತ್ಯಾತೀತ ಪಕ್ಷಗಳ ನಡುವೆ ಮಾತ್ರ. ಹಿಟ್ಲರ್‌ನನ್ನು ಆದರ್ಶವಾಗಿಟ್ಟುಕೊಂಡ ಗೋಡ್ಸೆವಾದಿ ಪಕ್ಷಗಳೆನ್ನೆಂದೂ ಕೇರಳದ ಜನ ಚುನಾಯಿಸಿಲ್ಲ.
ಕೇರಳದ ನಿಸರ್ಗ ಸಂಪತ್ತು ಮೋದಿಯವರ ಹಿಂದಿರುವ ಕಾರ್ಪೊರೇಟ್ ಬಂಡವಾಳಶಾಹಿಗಳ ಕಣ್ಣಿಗೆ ಕುಕ್ಕುತ್ತಿದೆ. ಅದನ್ನು ಲೂಟಿ ಮಾಡಲು ಅವರು ಹೊಂಚು ಹಾಕುತ್ತಿದ್ದಾರೆ. ಮೋದಿಯವರ ಅಭಿವೃದ್ಧಿಯೆಂದರೆ, ಈ ದೇವರ ನಾಡನ್ನು ಅಂಬಾನಿ, ಅದಾನಿಯವರ ಮಡಿಲಿಗೆ ಹಾಕಿ, ಬೆಂಗಾಡು ಮಾಡುವುದಾಗಿದೆ. ಕೇರಳದ ಜನ ಎಷ್ಟು ಪ್ರಜ್ಞಾವಂತರೆಂದರೆ, ಅವರು ತಮ್ಮ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯಕ್ಕೆ ಬೇಲಿ ಹಾಕಿ, ಸೈಲೆಂಟ್ ವ್ಯಾಲಿ ಎಂಬ ಸಸ್ಯಲೋಕವನ್ನೇ ಸೃಷ್ಟಿಸಿದ್ದಾರೆ. ಒಂದು ನರಪಿಳ್ಳೆಯೂ ಈ ಶಾಂತಿ ಕಣಿವೆಯಲ್ಲಿ ಪ್ರವೇಶಿಸಲು ಅವಕಾಶವಿಲ್ಲ. ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ, ಇದಕ್ಕಾಗಿ ವಿಶೇಷ ಕಾನೂನನ್ನೇ ರಚಿಸಿದರು. ಕೇಂದ್ರದಲ್ಲಿ ಈಗಿರುವ ಸರಕಾರ ಮುಂದವರಿದರೆ, ಈ ಶಾಂತಿ ಕಣಿವೆಯು ನಾಶವಾಗುತ್ತದೆ.
ನಿಜ. ಇತ್ತೀಚೆಗೆ ಆರೆಸ್ಸೆಸ್ ಚಟುವಟಿಕೆ ತೀವ್ರಗೊಂಡ ನಂತರ ಕೆಲವಡೆ ಹಿಂಸಾತ್ಮಕ ಘಟನೆಗಳು ನಡೆಯುತ್ತಿವೆ. ದುಡಿಯುವ ಜನರನ್ನು ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲು ಹೊರಟಿರುವ ಬಂಡವಾಳಗಾರರಿಗೆ ಆಸರೆಯಾಗಿ ನಿಂತಿದೆ. ಸಂಘದ ಚಟುವಟಿಕೆಗಳಿಗೆ ಈ ಬಂಡವಾಳದಾರರು ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತಾರೆ. ಆದರೆ ಕೇರಳದ ಜನತೆ ಇಂತಹದ್ದಕ್ಕೆಲ್ಲ ಅವಕಾಶ ನೀಡುವುದಿಲ್ಲ. ಈ ಬಾರಿಯೂ ವಿಧಾನಸಭೆಯಲ್ಲಿ ಬಿಜೆಪಿಯು ತನ್ನ ಖಾತೆ ತೆರೆಯುವುದು ಅಷ್ಟು ಸುಲಭವಲ್ಲ. ಮೋದಿಯವರು ಬಂದು ಹೋದ ನಂತರ ಚುನಾವಣಾ ಠೇವಣಿಯು ವಾಪಸ್ ಬಾರದಿರುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಬಿಜೆಪಿ ಕಾರ್ಯಕರ್ತರಲ್ಲೇ ಒಳಗೊಳಗೆ ಅಸಮಾಧಾನ ಉಂಟಾಗಿದೆ.
ಕೇರಳದ ಜನತೆಯ ಆಕ್ರೋಶ ಮತಗಟ್ಟೆಯಲ್ಲಿ ವ್ಯಕ್ತವಾದರೆ, ಅಚ್ಚರಿಪಡಬೇಕಿಲ್ಲ. ಹೀಗೆ ನಿರಂತರವಾಗಿ ಎಡವುತ್ತಲೇ ಇರುವ ಪ್ರಧಾನಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ಸಾಧ್ಯತೆಯಿಲ್ಲ ಎಂಬ ಮಾತು ಅವರ ಪಕ್ಷದಲ್ಲಿಯೇ ಕೇಳಿ ಬರುತ್ತಿದೆ.