♦ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪರಸ್ಪರರ ರಹಸ್ಯಗಳು ತಿಳಿದಿವೆ.
♦ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪರಸ್ಪರರ ರಹಸ್ಯಗಳು ತಿಳಿದಿವೆ.
-ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
ಈ ರಹಸ್ಯವನ್ನು ನಿಮಗೆ ತಿಳಿಸಿದವರು ಯಾರು?
---------------------
♦ ವಿವೇಕ, ಬುದ್ಧಿವಂತಿಕೆ ಮತ್ತು ಕ್ರಿಯಾಶೀಲತೆಯನ್ನು ಹೊಂದಿರುವ ಯುವಜನರು ಪ್ರತಿಭೆಗಳ ಗಣಿಯಾಗುತ್ತಾರೆ.
-ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ
ನಿಮ್ಮ ಇತ್ತೀಚಿನ ಸಿನೆಮಾಗಳು ವಿಫಲವಾಗುತ್ತಿರುವುದು ನೋಡಿದರೆ, ವಿವೇಕ, ಬುದ್ಧಿವಂತಿಕೆ, ಕ್ರಿಯಾಶೀಲತೆ ಇಲ್ಲದ ವೃದ್ಧರ ನೆನಪಾಗುತ್ತದೆ.
---------------------
♦ ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿದ ತಕ್ಷಣ ದಲಿತರ ಉದ್ಧಾರವಾಗುವುದಿಲ್ಲ.
-ಸತೀಶ್ ಜಾರಕಿಹೊಳಿ, ಸಚಿವ
ದಲಿತ ಮುಖ್ಯಮಂತ್ರಿಯ ಉದ್ಧಾರವಾದರೂ ಆದೀತಲ್ಲವೆ?
---------------------
♦ ಪಶ್ಚಿಮಬಂಗಾಳ ಮತ್ತು ಕೇರಳ ಭಾರತದಲ್ಲಿದೆಯೇ ಎಂಬ ಬಗ್ಗೆ ಸಂಶಯ ಉಂಟಾಗುತ್ತಿದೆ.
-ನರೇಂದ್ರ ಮೋದಿ, ಪ್ರಧಾನಿ
ತಾವು ವಿದೇಶದಲ್ಲೇ ಸುತ್ತಾಡುತ್ತಿದ್ದರೆ ದೇಶದ ಕುರಿತು ಇಂತಹದೆಲ್ಲ ಅನುಮಾನ ಸಹಜ.
---------------------
♦ ದಲಿತ ಮುಖ್ಯಮಂತ್ರಿಯಾಗಬೇಕು ಎನ್ನುವ ಆಸೆ ನನಗೂ ಇದೆ.
-ಶ್ರೀನಿವಾಸ ಪ್ರಸಾದ್, ಸಚಿವ
ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ಬೋಧಿಸಿದ್ದನ್ನು ತಾವು ಮರೆಯದಿರಿ.
---------------------
♦ ಬರ ಹಿನ್ನೆಲೆಯಲ್ಲಿ ಗೋವುಗಳನ್ನು ಕಸಾಯಿಖಾನೆಗೆ ಮಾರದಿರಿ.
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ತಮಗೆ ಕೊಟ್ಟರೆ, ತಾವು ಅದನ್ನು ವಿದೇಶಕ್ಕೆ ರಫ್ತು ಮಾಡುವ ಯೋಜನೆ ಹಾಕಿಕೊಂಡಿದ್ದೀರೇನೋ?
---------------------
♦ ಭಾರತವೇ ನನ್ನ ಮನೆ.
-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ
ಜೀವನವನ್ನು ವಿದೇಶದಲ್ಲೇ ಕಳೆಯುತ್ತಿರುವ ಪ್ರಧಾನಿಗೆ ಇದು ಅರ್ಥವಾಗುವುದು ಕಷ್ಟ.
---------------------
♦ ಬಿಜೆಪಿಯವರಂತೆ ವರ್ಷಕ್ಕೊಮ್ಮೆ ಮುಖ್ಯಮಂತ್ರಿಯನ್ನು ಬದಲಿಸುವ ಪದ್ಧತಿ ಕಾಂಗ್ರೆಸ್‌ನಲ್ಲಿಲ್ಲ.
-ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ನಾಯಕ
ಮುಂದಿನ ಐದು ವರ್ಷದಲ್ಲಿ ಜನರೇ ಬದಲಿಸುತ್ತಾರೆ ಬಿಡಿ.
---------------------
♦ ಸಿದ್ದರಾಮಯ್ಯ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ.
-ಕೆ.ಎಸ್. ಈಶ್ವರಪ್ಪ, ವಿ.ಪ.ವಿ. ನಾಯಕ
ನೀವಿನ್ನೂ ಬೀದಿಯಲ್ಲಿ ಸ್ವತಂತ್ರವಾಗಿ ಓಡಾಡುತ್ತಿರುವುದು ನೋಡಿದರೆ ನಿಮ್ಮ ಮಾತು ನಿಜ ಅನ್ನಿಸುತ್ತದೆ.
---------------------
♦ ಮೋದಿಯ ಶೈಕ್ಷಣಿಕ ಅರ್ಹತೆ ವಿವಾದದ ವಿಷಯವೇ ಅಲ್ಲ.
-ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ
ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಅನುಮಾನ ಹುಟ್ಟುತ್ತಿದೆ.
---------------------
♦ ಸಚಿವ ಸಂಪುಟ ಪುನಾರಚನೆ ವೇಳೆ ನಮ್ಮನ್ನು ಕೈಬಿಟ್ಟರೂ ಸಂತೋಷ, ಬಿಡದಿದ್ದರೂ ಸಂತೋಷ.
-ಅಂಬರೀಷ್, ಸಚಿವ
ನಿಮ್ಮ ಸಂತೋಷಕ್ಕಿಂತ ಜನರ ಸಂತೋಷ ಮುಖ್ಯ. ಕೈ ಬಿಡುತ್ತಾರೆ ಬಿಡಿ.
---------------------
♦ ಜನರು ಗೋವುಗಳನ್ನು ಕದ್ದು, ತುಂಡುಮಾಡಿ ಅಮೆರಿಕಕ್ಕೆ ಮಾರಾಟ ಮಾಡುತ್ತಿದ್ದಾರೆ.
-ಮುಲಾಯಂ ಸಿಂಗ್ ಯಾದವ್, ಎಸ್ಪಿ ಮುಖ್ಯಸ್ಥ
ನಿಮ್ಮ ರಾಜ್ಯದಲ್ಲಿ ಮನುಷ್ಯರನ್ನೇ ಕೊಂದು ತುಂಡು ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಏನು ಹೇಳುತ್ತೀರಿ?
---------------------
♦ ನಿತೀಶ್‌ಗೆ ಪ್ರಧಾನಿ ಹುದ್ದೆಗೆ ಬೇಕಾದ ಅರ್ಹತೆ ಇಲ್ಲ.
-ಮುಹಮ್ಮದ್ ತಸ್ಲೀಮುದ್ದೀನ್, ಆರ್‌ಜೆಡಿ ಮುಖಂಡ
ಜನರ ವಿಶ್ವಾಸಾರ್ಹತೆ ಮುಖ್ಯ. ಸದ್ಯಕ್ಕೆ ಅದು ಇದೆ ಅನ್ನಿಸುತ್ತದೆ.
---------------------
♦ ಸಿದ್ದರಾಮಯ್ಯ ಸರಕಾರದ 3 ವರ್ಷದ ಅವಧಿಯಲ್ಲಿ ಯಾರೂ ಹಣ ಎಣಿಸುವ ಮಷಿನ್‌ಗಳನ್ನು ಇಟ್ಟುಕೊಂಡಿಲ್ಲ.
-ವಿ.ಎಸ್. ಉಗ್ರಪ್ಪ, ವಿ.ಪ. ಸದಸ್ಯ
ಹಣ ಮುದ್ರಿಸುವ ಮಷಿನ್ ಬಗ್ಗೆ ಜನರು ಆಡಿಕೊಳ್ಳುತ್ತಿದ್ದಾರೆ.
--------------------
♦ ಉತ್ತರಾಖಂಡದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ.
-ರಾಹುಲ್‌ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ಕಾಂಗ್ರೆಸ್ ಕೇಂದ್ರದಲ್ಲಿ ಗೆಲ್ಲುವುದು ಯಾವಾಗ?
---------------------
♦ ರೈತರಿಗಾಗಿ ಕೇಂದ್ರ ಕೈಗೊಂಡ ಯಾವುದೇ ಯೋಜನೆ ತೃಪ್ತಿಕೊಟ್ಟಿಲ್ಲ.
-ದೇವೇಗೌಡ, ಮಾಜಿ ಪ್ರಧಾನಿ
ಕುಮಾರಸ್ವಾಮಿಗಾಗಿ ಕೇಂದ್ರದಲ್ಲಿ ಒಂದು ಖಾತೆ ನೀಡಿದರೆ ನಿಮಗೆ ತೃಪ್ತಿಯಾದೀತೆ?
---------------------
♦ ಜಗದೀಶ್ ಶೆಟ್ಟರ್ ಬಿಡುಗಡೆ ಮಾಡಿರುವ ಆರೋಪ ಪಟ್ಟಿಯಲ್ಲಿ ಉಪ್ಪೂ ಇಲ್ಲ, ಹುಳಿಯೂ ಇಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಬರೇ ಖಾರ ಮಾತ್ರ ಅಂತೀರಾ?
---------------------
♦ ಭಗವಂತನನ್ನು ಪೂಜಿಸುವ ಪ್ರಕಾರಗಳು ಬಹಳಷ್ಟಿವೆ.
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಅಸ್ಪಶ್ಯತೆ ಆ ಪ್ರಕಾರಗಳಲ್ಲಿ ಒಂದೇ?
---------------------
♦ ಸಿದ್ದರಾಮಯ್ಯ ಸರಕಾರದ ಆಡಳಿತ ಚಕ್ರ ನೆಲದಲ್ಲಿ ಸಂಪೂರ್ಣ ಹೂತು ಹೋಗಿದೆ.
-ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ
ಅದು ಹಳೆಯ ಜನತಾದಳದ ಚಕ್ರವಂತೆ. ಚಿಂತೆ ಬೇಡ.
---------------------
♦ ಗಂಗೆಯಿಂದ ಕಾವೇರಿವರೆಗೆ ಎಲ್ಲ ನದಿಗಳನ್ನು ಜೋಡಿಸುವುದು ಅಸಾಧ್ಯ
-ಮುರಳಿ ಮನೋಹರ ಜೋಷಿ, ಬಿಜೆಪಿ ನಾಯಕ
ಸದ್ಯಕ್ಕೆ ಅವುಗಳನ್ನು ಬತ್ತಿಸುವ ಯೋಜನೆ ಮುಂದುವರಿದಿದೆ.
---------------------
♦ ಹಣವಿಲ್ಲದೆ ನಾನು ದಿವಾಳಿಯಾಗಿದ್ದೇನೆ.
-ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅಂದರೆ, ಎಲ್ಲವನ್ನೂ ಅಪ್ಪ ಬಚ್ಚಿಟ್ಟುಕೊಂಡಿದ್ದಾರೆ ಎಂಬ ಆರೋಪವೇ?
---------------------
♦ ನಮ್ಮದು ಜೈಲು-ಬೇಲು ಸರಕಾರವಲ್ಲ.
-ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ರೈತರು, ದಲಿತರನ್ನು ಬೇಲು ಕೊಡದೆ ಜೈಲಿಗೆ ತಳ್ಳುವ ಸರಕಾರವೇ?