ಮಹಾರಾಷ್ಟ್ರ ಈಗ ಟ್ಯಾಂಕರ್‌ಗಳ ರಾಜ್ಯ, ಮಂತ್ರಿಗಳಿಗಿಲ್ಲಿ ನೀರಿನ ಬರವಿಲ್ಲ!
ಟಾಯ್ ಟ್ರೈನ್ ಟೆನ್ಶನ್
ಮುಂಬೈ ಸಮೀಪದ ಪ್ರಸಿದ್ಧ ಗಿರಿಧಾಮ ನೆರಲ್-ಮಾಥೆರಾನ್‌ನ ಸುಂದರ ಪ್ರಕೃತಿಯ ನಡುವೆ ಹಾದು ಹೋಗುವ ಟಾಯ್ ಟ್ರೈನ್ ಓಡಿಸುತ್ತಿರುವ ರೈಲ್ವೆಗೆ ಇದೀಗ ಟೆನ್ಶನ್ ಶುರುವಾಗಿದೆ. ಕಾರಣ ಆದಾಯಕ್ಕಿಂತ ಅಧಿಕ ಖರ್ಚು ಬರುತ್ತಿದೆಯಂತೆ. ರೈಲ್ವೆಯ ಸಂಪಾದನೆ ಕಡಿಮೆ ಆಗಿದೆಯಂತೆ. ರೈಲ್ವೆಯ ವರಿಷ್ಠ ಅಧಿಕಾರಿಯ ಪ್ರಕಾರ ಟಾಯ್ ಟ್ರೈನ್ ಓಡಿಸುವುದರ ಮರುಚಿಂತನೆ ನಡೆಸಬೇಕಾಗಿದೆ. ಮಳೆಗಾಲದ ಸಮಯ ನೆರಲ್-ಮಾಥೆರಾನ್ ಟಾಯ್ ಟ್ರೈನ್ ಸೇವೆ 3 ತಿಂಗಳಿಗಾಗಿ ಪೂರ್ಣ ರೂಪದಿಂದ ಬಂದ್ ಇರುತ್ತದೆ. ಈಗಿನ ಪರಿಸ್ಥಿತಿ ನೋಡಿದರೆ ಮಳೆಗಾಲದ ನಂತರವೂ ಟಾಯ್‌ಟ್ರೈನ್ ಓಡಿಸುವ ಸಾಧ್ಯತೆಗಳು ಕಡಿಮೆ ಇವೆ. ಟಾಯ್ ಟ್ರೈನ್ ಆಗಾಗ ಹಳಿಯಿಂದ ಕೆಳಗಿಳಿಯುವ ಘಟನೆಗಳು ಇದಕ್ಕೆ ಕಾರಣಗಳಲ್ಲೊಂದು. ಟಾಯ್‌ಟ್ರೈನ್ ಪ್ರವಾಸಿಗರಿಗೆ ಪರಿಚಯಿಸಲು ಮಧ್ಯರೈಲ್ವೆಯು 22 ನವಂಬರ್ 2012ರಂದು ವಿಶೇಷ ಪ್ರವಾಸಿ ಸೇವೆ ಆರಂಭಿಸಿತ್ತು. ಎಪ್ರಿಲ್ 2013 ಮತ್ತು ಫೆಬ್ರವರಿ 2014ರ ನಡುವೆ ನೆರಲ್ ಮಾಥೆರಾನ್‌ಗಾಗಿ 236 ಬುಕಿಂಗ್ ಮತ್ತು ಮಾಥೆರಾನ್ - ನೆರಲ್‌ಗಾಗಿ 104 ಬುಕಿಂಗ್ ನಡೆದಿತ್ತು. ಈ ಬುಕಿಂಗ್‌ನಿಂದ 3.99 ಲಕ್ಷ ರೂ. ರೈಲ್ವೆಗೆ ಸಿಕ್ಕಿತ್ತು. ಟಾಯ್‌ಟ್ರೈನ್ ಆಗಾಗ ತಾಂತ್ರಿಕ ದೋಷಗಳಿಗೆ ಸಿಲುಕುವ ಕಾರಣ ಪ್ರವಾಸಿಗರು ಖಾಸಗಿ ಟ್ಯಾಕ್ಸಿಗಳನ್ನು ಬಳಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆಯು ಹಳಿ ತಪ್ಪುವ ಘಟನೆಗಳನ್ನು ಮುಂದಿಟ್ಟು ಯುರೋಪ್‌ನ ಟೆಕ್ನಿಶಿಯನ್ ಕರೆತರಲು ಯೋಚಿಸುತ್ತಿದೆ.
* * *
ಸಹೋದರನನ್ನು ಡ್ಯೂಟಿಗೆ ಕಳುಹಿಸಿದ ಪೊಲೀಸ್
ಅವಳಿ ಸಹೋದರರ ಹೆಸರು ಫಿಲ್ಮ್‌ಗಳಲ್ಲಿ ಆಗಾಗ ನೋಡುತ್ತೇವೆ. ನಿರ್ದೇಶಕ ಡೇವಿಡ್ ಧವನ್‌ರ ‘ಚೋರ್ ಮಚಾಯೆ ಶೋರ್’ನ್ನು ಇಲ್ಲಿ ನೆನಪಿಸಬಹುದು. ಇದೇ ರೀತಿ ಮರೋಲ್ ಪೊಲೀಸ್ ಠಾಣೆಯಲ್ಲಿ ರಜೆ ಸಿಗುವುದಿಲ್ಲ ಎಂಬ ಕಾರಣಕ್ಕೆ ತನ್ನ ಸಹೋದರನನ್ನು ಡ್ಯೂಟಿಗೆ ಕಳುಹಿಸಿ ಪೊಲೀಸ್ ಒಬ್ಬರು ಸಿಕ್ಕಿ ಬಿದ್ದಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ರಜೆಯ ಅರ್ಥ ಒಂದು ರೀತಿಯಲ್ಲಿ ಸೆಲೆಬ್ರೆಶನ್ ಎನ್ನಬಹುದು. ರಜೆ ಸಿಗುವುದೇ ಒಂದು ಪುಣ್ಯ ಎನ್ನುವಂತಿದೆ. ಮುಂಬೈಯ ಮರೋಲ್ ಪೊಲೀಸ್ ಠಾಣೆಯ ಉಮೇಶ್ ದೆಭೆ ಎಂಬವರಿಗೆ ಗೆಳೆಯನ ವಿವಾಹ ಸಮಾರಂಭಕ್ಕೆ ಹೋಗಬೇಕಿತ್ತು. ಆ ಸಮಯಕ್ಕೆ ರಜೆ ಸಿಗುವುದು ಕಷ್ಟವಾಗಿತ್ತು. ಆವಾಗ ಉಮೇಶ್ ಒಂದು ಉಪಾಯ ಹೂಡಿದರು. ತನ್ನಂತೇ ಕಾಣುವ ಸಹೋದರ ರಮೇಶ್‌ರನ್ನು ಡ್ಯೂಟಿಗೆ ಕಳುಹಿಸಿದರು. ಆದರೆ ಸಿಕ್ಕಿಬಿದ್ದರು. ಈಗ ಇಬ್ಬರು ಸಹೋದರರ ಮೇಲೂ ಕ್ರಮ ಕೈಗೊಳ್ಳಲಾಗಿದೆ.
* * *
ಮಹಾರಾಷ್ಟ್ರ ಟ್ಯಾಂಕರ್‌ನ ರಾಜ್ಯ
ಮಹಾರಾಷ್ಟ್ರದ ಬರಗಾಲ ಪರಿಸ್ಥಿತಿಯಿಂದಾಗಿ ಮುಖ್ಯಮಂತ್ರಿ ಕೇಂದ್ರದಿಂದ 10 ಸಾವಿರ ಕೋಟಿ ರೂಪಾಯಿ ಕೇಳಿದ್ದಾರೆ. ದಿಲ್ಲಿಯಲ್ಲಿ ದೇಶದ ಬರಗಾಲ ಸಮಸ್ಯೆ ಮೇಲೆ ಚರ್ಚೆಗಾಗಿ ಪ್ರಧಾನಿಯವರು ಮುಖ್ಯಮಂತ್ರಿಗಳ ಬೈಠಕ್ ಕರೆದಾಗ ಫಡ್ನವೀಸ್ ಈ ಬೇಡಿಕೆ ಇರಿಸಿದರು. ಮಹಾರಾಷ್ಟ್ರದ ಜಲಾಶಯಗಳಲ್ಲಿ ಕೇವಲ 15 ಪ್ರತಿಶತ ನೀರು ಉಳಿದಿದೆಯಷ್ಟೆ. ಇನ್ನೂ ಒಂದು ತಿಂಗಳು ಮಳೆಗಾಗಿ ನಿರೀಕ್ಷೆ ಮಾಡಬೇಕಾಗಿದೆ. ಮುಂಬೈ, ಥಾಣೆ, ಪುಣೆ ಇಂತಹ ನಗರಗಳಲ್ಲಿ ಟ್ಯಾಂಕರ್‌ನ ನೀರಿಗಾಗಿ ವಿಪರೀತ ಬೇಡಿಕೆ ಬಂದಿದೆ. ಆದರೆ, ಕೇಂದ್ರ ಸರಕಾರ ಮಾತ್ರ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಫ್ಟರ್‌ನ ಭ್ರಷ್ಟಾಚಾರದ ಚರ್ಚೆಗೆ ಆದ್ಯತೆ ನೀಡಿದೆ. ಎಂದು ಶಿವಸೇನೆ ಆರೋಪಿಸುತ್ತಿದೆ. ಆದರೆ ಇದಕ್ಕಿಂತ ದೊಡ್ಡದು ಮಹಾರಾಷ್ಟ್ರದ, ಮರಾಠವಾಡದ ಅತಿ ಭೀಕರ ಬರಗಾಲ ದೃಶ್ಯವಾಗಿದೆ. ಮಹಾರಾಷ್ಟ್ರದಲ್ಲಿ ಇಂದು ಐದು ಸಾವಿರಕ್ಕೂ ಹೆಚ್ಚು ನೀರಿನ ಟ್ಯಾಂಕರ್‌ಗಳು ನೀರು ಪೂರೈಸುತ್ತಿವೆ. ಇದರಲ್ಲಿ 3 ಸಾವಿರಕ್ಕೂ ಹೆಚ್ಚು ಟ್ಯಾಂಕರ್‌ಗಳು ಕೇವಲ ಮರಾಠವಾಡದಲ್ಲೇ ಇವೆ.
ಹೆಸರಾಂತ ಕವಿ ಗೋವಿಂದಾಗ್ರಜ ಅವರ ಮಹಾರಾಷ್ಟ್ರ ಗೀತೆಯಲ್ಲಿ ಬದಲಾವಣೆ ಮಾಡಿ ‘ಬರಗಾಲದ ದೇಶ’, ‘ಟ್ಯಾಂಕರ್‌ಗಳ ದೇಶ’ ಎಂದಿರಿಸಬೇಕಾದ ದಿನಗಳು ಬಂದಿವೆ ಎಂದು ಸಾಮ್ನಾ ಸಂಪಾದಕೀಯದಲ್ಲಿ ಬರೆದಿದೆ. ಮಹಾರಾಷ್ಟ್ರದ ವಿಭಿನ್ನ ಭಾಗಗಳಲ್ಲಿ ನೀರಿನ ಗಂಭೀರ ಸಮಸ್ಯೆ ಕಂಡು ಬಂದದ್ದರಿಂದ ರಾಜ್ಯ ಸರಕಾರವು ಮುಂಬೈ ಹೈಕೋರ್ಟ್‌ನಲ್ಲಿ ರಾಜ್ಯದ 29 ಸಾವಿರದ 600 ಊರುಗಳು ಬರಗಾಲ ಪೀಡಿತವೆಂದು ಘೋಷಿಸಲಾಗಿದ್ದು ಬರ ನಿಯಮಾವಳಿ 2009ರಲ್ಲಿ ಉಲ್ಲೇಖಿಸಿದ ಎಲ್ಲ್ಲ ಪರಿಹಾರಗಳನ್ನು ನೀಡಲಾಗುವುದು ಎಂದು ತಿಳಿಸಿದೆ. ನೀರಿನ ಸಮಸ್ಯೆ ಕುರಿತಂತೆ ಸಲ್ಲಿಸಲಾದ ಜನಹಿತ ಅರ್ಜಿಯ ಉತ್ತರದಲ್ಲಿ ಸರಕಾರ ಈ ಮಾತನ್ನು ಹೇಳಿದೆ.
* * *
ಪಶ್ಚಿಮ ರೈಲ್ವೆಯಲ್ಲಿ ಮತ್ತೊಂದು ಸ್ಟೇಷನ್ ಓಶಿವರಾ
ಮುಂಬೈಯ ಪಶ್ಚಿಮ ರೈಲ್ವೆಯಲ್ಲಿ ಇನ್ನೊಂದು ಹೊಸ ರೈಲ್ವೆ ಸ್ಟೇಷನ್ ಅಕ್ಟೋಬರ್ ತಿಂಗಳಲ್ಲಿ ಶುರುವಾಗುವ ಸಾಧ್ಯತೆಗಳು ಕೇಳಿ ಬಂದಿವೆ. ಅದು ಗೋರೆಗಾಂವ್ ಜೋಗೇಶ್ವರಿ ನಡುವೆ ಓಶಿವರಾ ಸ್ಟೇಷನ್. ಈ ಎರಡು ಸ್ಟೇಷನ್‌ಗಳ ಅಂತರ ಬಹಳವಿದ್ದು ನಡುವೆ ಮತ್ತೊಂದು ರೈಲ್ವೆ ಸ್ಟೇಷನ್‌ನ ಅಗತ್ಯ ಬಹಳ ಸಮಯದಿಂದ ಚರ್ಚೆಯಾಗುತ್ತಿತ್ತು. ಇದೀಗ ಆರು ತಿಂಗಳೊಳಗೆ ಓಶಿವಾರಾ ರೈಲ್ವೆ ಸ್ಟೇಷನ್ ಆರಂಭವಾಗುವುದಾಗಿ ಹೇಳಲಾಗಿದೆ. ಈಗಾಗಲೇ ಅರ್ಧಕ್ಕಿಂತ ಹೆಚ್ಚು ಕೆಲಸಗಳು ನಡೆದಿವೆ.
ಮಹಾನಗರ ಪಾಲಿಕೆಯ ರೋಡ್ ಓವರ್ ಬ್ರಿಜ್ ಕೆಲಸ ಪೂರ್ಣಗೊಂಡ ನಂತರ ರೈಲ್ವೆ ಸ್ಟೇಷನ್ ಕೆಲಸ ಮುಂದುವರಿಸಲಾಗುವುದು. ಮುಂಬೈ ರೈಲ್ವೆ ವಿಕಾಸ್ ನಿಗಮದ ವಕ್ತಾರ ಪ್ರಭಾತ್ ರಂಜನ್‌ರ ಪ್ರಕಾರ ರೈಲ್ವೆ ಸ್ಟೇಷನ್‌ಗೆ ಸಂಬಂಧಿಸಿದ ಕೆಲವು ಚಿಕ್ಕಪುಟ್ಟ ಕೆಲಸಗಳು ಬಾಕಿ ಇವೆ ಅಷ್ಟೇ. ಆರು ತಿಂಗಳೊಳಗೆ ಇವೆಲ್ಲ ಪೂರ್ಣಗೊಳ್ಳುವುದು. ಮಹಾನಗರ ಪಾಲಿಕೆಯು ರೋಡ್ ಮೇಲ್ಸೇತುವೆಯಲ್ಲಿ ಸಂಚಾರ ಆರಂಭಿಸುತ್ತಿದ್ದಂತೆ ಇಲ್ಲಿನ ಲೆವೆಲ್ ಕ್ರಾಸಿಂಗ್ ಗೇಟ್ ಬಂದ್ ಮಾಡಲಾಗುವುದು. ಹಾಗೂ ಸ್ಟೇಷನ್ ತೆರೆಯಲಾಗುವುದು.
* * *
ಬಿ.ಕಾಂ., ಬಿ.ಎ. ಪದವಿಯ ಫಲಿತಾಂಶ ಕಳಪೆ ಸ್ಥಿತಿ!
ಉಚ್ಛ ಶಿಕ್ಷಣದ ಪ್ರಕರಣದಲ್ಲಿ ಗ್ರಾಜ್ಯುಯೇಶನ್‌ಗಾಗಿ ಬಿ.ಕಾಂ ಮತ್ತು ಬಿ.ಎ. ವಿದ್ಯಾರ್ಥಿಗಳಿಗೆ ಇಷ್ಟದ ಕೋರ್ಸ್ ಆಗಿದೆ. ಆದರೆ ಈ ವಿದ್ಯಾರ್ಥಿಗಳ ಉತ್ತೀರ್ಣದ ಅಂಕಿ ಸಂಖ್ಯೆ ನೋಡಿದರೆ ಅದು ಆಶಾದಾಯಕವಾಗಿಲ್ಲ.
ಕಳೆದ 2 ವರ್ಷಗಳ ಅಂಕಿಸಂಖ್ಯೆ ಗಮನಿಸಿದರೆ 2014ರಲ್ಲಿ ಬಿ.ಕಾಂ. ಪರೀಕ್ಷೆಯಲ್ಲಿ ಶೇ. 33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಶೇ. 32.70 ವಿದ್ಯಾರ್ಥಿಗಳು ಶೇ. 50ಕ್ಕಿಂತ ಕಡಿಮೆ ಅಂಕ ಪಡೆದಿದ್ದಾರೆ. 2014ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ಶೇ. 48.29 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ ಶೇ. 21.10 ವಿದ್ಯಾರ್ಥಿಗಳು ಶೇ. 50ಕ್ಕಿಂತ ಕಡಿಮೆ ಅಂಕ ಪಡೆದಿದ್ದಾರೆ. 2015ರ ಬಿ.ಕಾಂ. ಪರೀಕ್ಷೆಯಲ್ಲಿ ಶೇ. 30.30 ಶೇಕಡ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ಬಿ.ಎ. ಪರೀಕ್ಷೆಯಲ್ಲಿ ಶೇ. 55.53 ವಿದ್ಯಾರ್ಥಿಗಳು ಉತ್ತೀರ್ಣ ಹೊಂದಿದ್ದರು. ಇಂದು ಹೆಚ್ಚಿನ ವಿದ್ಯಾರ್ಥಿಗಳು ನೌಕರಿಯ ದೃಷ್ಟಿಯಲ್ಲಿ ಓದುವವರು. ಬಿ.ಎ., ಬಿ.ಕಾಂ. ಕೋರ್ಸಸ್ ಔಟ್ ಡೇಟೆಡ್ ಎಂದು ಕೆಲವರು ತಿಳಿಯುತ್ತಾರೆ. ಕೇವಲ ಪದವೀಧರರು ಎನಿಸಿಕೊಳ್ಳಲಷ್ಟೇ ಇದನ್ನು ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಗಮನ ನೀಡುತ್ತಿಲ್ಲ ಎನ್ನುತ್ತಾರೆ ಮನಶ್ಶಾಸ್ತ್ರಜ್ಞರು. ಇದಕ್ಕಾಗಿ ಆನ್‌ಲೈನ್ ಉಪನ್ಯಾಸ ಕೂಡಾ ಅಗತ್ಯವಿದೆ ಎಂಬ ಮಾತೂ ಕೇಳಿ ಬಂದಿದೆ.
ಹೀಗಾಗಿ ಈ ವರ್ಷ 2016ರ ಫಲಿತಾಂಶ ಕುತೂಹಲ ಸೃಷ್ಟಿಸಿದೆ.
* * *
ಜಪ್ತಿ ವಾಹನಗಳ ಏಲಂಗೆ ಸಿದ್ಧತೆ
ನವಿ ಮುಂಬೈಯ ವಾಶಿ ಆರ್‌ಟಿಒ ಪರಿಸರದಲ್ಲಿ ಜಪ್ತಿ ಮಾಡಲಾದ ವಾಹನಗಳು ಗುಜರಿ ಮಾಲು ಆಗುತ್ತಿದ್ದು ಅವುಗಳನ್ನು ಏಲಂ ಮಾಡಲು ವಾಶಿ ಆರ್‌ಟಿಒ ನಿರ್ಧರಿಸಿದೆ. ತೆರಿಗೆ ತುಂಬಿಸದ ಹಾಗೂ ಅನ್ಯ ಹಲವು ಕಾರಣಗಳಿಂದ ವಾಶಿ ಆರ್‌ಟಿಒ ಅಧಿಕಾರಿಗಳು ಈ ವಾಹನಗಳನ್ನು ಜಪ್ತಿ ಮಾಡಿದ್ದರು. ಆದರೆ ವಾಹನ ಮಾಲಕರು ಇದನ್ನು ಬಿಡಿಸಿಕೊಳ್ಳಲು ಮುಂದೆ ಬರಲಿಲ್ಲ. ವಾಶಿ ಆರ್‌ಟಿಒ ಪರಿಸರದಲ್ಲಿ ನಿಲ್ಲಿಸಿದ್ದ ಈ ವಾಹನಗಳು ಈಗ ಗುಜರಿ ಮಾಲುಗಳಾಗಿವೆ. ಸುಮಾರು ನಾಲ್ಕು ತಿಂಗಳ ಹಿಂದಷ್ಟೇ ಇಂತಹ ಗುಜರಿ ಆಗಿರುವ ಸುಮಾರು ಇನ್ನೂರು ವಾಹನಗಳನ್ನು ಏಲಂ ಮಾಡಲಾಗಿತ್ತು. ಈ ಏಲಂ ಭರತ್ ಸಾವಂತ್ ಹೆಸರಿನ ಸಾಮಾಜಿಕ ಕಾರ್ಯಕರ್ತ ಸಲ್ಲಿಸಿದ ಅರ್ಜಿಯ ನಂತರ ಕೈಗೆತ್ತಿಕೊಳ್ಳಲಾಗಿತ್ತು. ಆದರೂ ಈ ದಿನಗಳಲ್ಲಿ ವಾಶಿ ಆರ್‌ಟಿಒ ಪರಿಸರದಲ್ಲಿ ನೂರಾರು ದೊಡ್ಡ ಹಾಗೂ ಚಿಕ್ಕ ವಾಹನಗಳನ್ನು ನಿಲ್ಲಿಸಲಾಗಿದೆ. ಗುಜರಿ ಕಳ್ಳರು ಈಗಾಗಲೇ ಕೆಲವು ವಾಹನಗಳ ಬಿಡಿ ಭಾಗಗಳನ್ನೂ ಕದ್ದೊಯ್ದಿರುವರು ಎನ್ನುತ್ತಾರೆ. ಜಪ್ತಿ ಮಾಡಲಾದ ಎಲ್ಲಾ ವಾಹನಗಳ ಮಾಲಕರಿಗೆ ಈ ಬಗ್ಗೆ ಸೂಚನೆ ಕಳುಹಿಸಲಾಗಿದೆ.
* * *
ಮಂತ್ರಿಗಳ ಬಂಗ್ಲೆಗಳಲ್ಲಿ ನೀರೋ ನೀರು
ಬರಗಾಲ ಪೀಡಿತ ಮಹಾರಾಷ್ಟ್ರದಲ್ಲಿ ರೈತರು ಮತ್ತು ನಗರ ನಿವಾಸಿಗಳು ನೀರಿನ ಕೊರತೆ ಎದುರಿಸುತ್ತಿದ್ದರೆ, ಮಹಾರಾಷ್ಟ್ರ ಸರಕಾರದ ಮಂತ್ರಿಗಳಿಗೆ ಇದು ಯಾವ ಪರಿಣಾಮವೂ ಬೀರಿಲ್ಲ. ಆರ್.ಟಿ.ಐ.ಯಿಂದ ದೊರೆತ ಮಾಹಿತಿಯಂತೆ 2014-2015ರ ನಡುವೆ ಮಂತ್ರಿಗಳು ಎಷ್ಟು ನೀರಿನ ಬಳಕೆ ಮಾಡಿದ್ದರೋ ಅಷ್ಟೇ ನೀರನ್ನು 2015-2016ರಲ್ಲೂ ಬಳಸಿಕೊಂಡಿದ್ದಾರೆ.!
ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ವರ್ಷಾ ಮತ್ತು ತೋರಣ್ ಬಂಗ್ಲೆಗಳಲ್ಲಿ 1,09,030 ರೂಪಾಯಿ ನೀರಿನ ಬಿಲ್‌ಕಟ್ಟಲು ಬಾಕಿ ಇದೆಯಂತೆ. ಮುಖ್ಯಮಂತ್ರಿ ಮತ್ತು ಇತರ ಎಲ್ಲ ಮಂತ್ರಿಗಳ ಬಂಗ್ಲೆಗಳ ನೀರಿನ ಬಿಲ್ ಒಟ್ಟು 17,46,427 ರೂಪಾಯಿ ಆಗಿದೆ. ಇದು ಎಪ್ರಿಲ್ 29, 2016ರ ತನಕದ ಬಾಕಿ ಆಗಿದೆ. ಇದನ್ನು ರಾಜ್ಯ ಸರಕಾರವು ಮನಪಾಕ್ಕೆ ಕಟ್ಟಬೇಕಾಗಿದೆ. ಮುಖ್ಯಮಂತ್ರಿಯ ವರ್ಷಾ ಬಂಗ್ಲೆಯಲ್ಲಿ 44,435 ಲೀಟರ್ ನೀರು ಬಳಸಲಾಗುತ್ತದೆ. ಅಲ್ಲಿ ಬಳಸಿದ ನೀರನ್ನು ಅಳೆಯಲು 4 ಮೀಟರ್‌ಗಳಿವೆ.
* * *
ಬೇಸಿಗೆ ರಜೆ : ಕಳ್ಳತನದ ಸೀಸನ್
ಬೇಸಗೆ ರಜೆ ಸಿಗುತ್ತಲೇ ಮುಂಬೈ ಜನ ತಮ್ಮ ತಮ್ಮ ಊರುಗಳಿಗೆ ತೆರಳುವುದು ಮಾಮೂಲಿ. ಅದೇ ಸಮಯ ಕಳ್ಳರೂ ಸಕ್ರಿಯರಾಗುವುದು ಮಾಮೂಲಿ. ಹೀಗಾಗಿ ಕಳ್ಳತನದ ಸೀಸನ್ ಎಂದೂ ಹೇಳುವವರಿದ್ದಾರೆ. ಕಳೆದ ವರ್ಷದ ತುಲನೆಯಲ್ಲಿ ಈ ತನಕದ ಘಟನೆಗಳನ್ನು ಕಂಡಾಗ 50 ರಿಂದ 60 ಪ್ರತಿಶತ ವೃದ್ಧಿಯಾಗಿದೆ. ಕಳ್ಳರು ಬಾಲಿವುಡ್ ಗಣ್ಯರ ಮನೆಗಳನ್ನೂ ಗುರಿ ಆಗಿಸಿದ್ದಾರೆ. ಮಾಟುಂಗಾ ಪಾರ್ಸಿ ಕಾಲನಿ, ದಾದರ್, ಗಿರ್‌ಗಾಂವ್, ಓಶಿವಾರ, ಗೋರೆಗಾಂವ್, ಬಾಂದ್ರಾ, ಡಿ.ಬಿ.ಮಾರ್ಗ್, ಚೆಂಬೂರು, ಕಾಂಜೂರ್ ಮಾರ್ಗ, ವಿಕ್ರೋಲಿ, ಮುಲುಂಡ್, ಇತ್ಯಾದಿ ಕಡೆಗಳಲ್ಲಿ ಕಳ್ಳತನದ ಘಟನೆಗಳೂ ಹೆಚ್ಚು ವರದಿಯಾಗಿವೆ. ಈ ಎಲ್ಲ ಪರಿಸರಗಳು ಹಗಲಲ್ಲಿ ಹೆಚ್ಚು ಜನರನ್ನು ಹೊಂದಿರುವುದಿಲ್ಲ.