ಎರಡನೆ ಸುತ್ತಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ 13 ನಗರಗಳು ಆಯ್ಕೆ; ಕರ್ನಾಟಕಕ್ಕೆ ಸ್ಥಾನವಿಲ್ಲ
ಹೊಸದಿಲ್ಲಿ,ಮೇ 24: ಕೇಂದ್ರದ ‘ಸ್ಮಾರ್ಟ್ ಸಿಟಿ ಅಭಿಯಾನ’ದಡಿ ಅಭಿವೃದ್ಧಿಗೊಳ್ಳಲಿರುವ ಇನ್ನೂ 13 ನಗರಗಳ ಪಟ್ಟಿಯನ್ನು ಸರಕಾರವು ಮಂಗಳವಾರ ಪ್ರಕಟಿಸಿದೆ. ವಿಧಾನಸಭಾ ಚುನಾವಣೆ ಸನ್ನಿಹಿತವಾಗಿರುವ ಉತ್ತರ ಪ್ರದೇಶದ ಲಕ್ನೋ ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ತೆಲಂಗಾಣದ ವಾರಂಗಲ್ ಮತ್ತು ಹಿಮಾಚಲ ಪ್ರದೇಶದ ಧರ್ಮಶಾಲಾ ನಗರಗಳಿವೆ.ಆದರೆ ಕರ್ನಾಟಕದ ನಾಲ್ಕು ನಗರಗಳಿಗೆ ಸ್ಥಾನವಿಲ್ಲದಾಗಿದೆ.
ಜನವರಿಯಲ್ಲಿ ನಡೆದಿದ್ದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಪ್ರಾತಿನಿಧ್ಯ ಪಡೆಯುವಲ್ಲಿ ವಿಫಲಗೊಂಡಿದ್ದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 23 ನಗರಗಳು ‘ತ್ವರಿತ ಗತಿ ಸ್ಪರ್ಧೆ’ಯಲ್ಲಿ ಪಾಲ್ಗೊಂಡಿದ್ದವು. ಈ ಸ್ಪರ್ಧೆಯ ಫಲಿತಾಂಶವನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಇಂದು ಪ್ರಕಟಿಸಿದರು.
ಚಂಡಿಗಡ, ರಾಯಪುರ(ಛತ್ತೀಸಗಡ), ನ್ಯೂ ಟೌನ್ ಕೋಲ್ಕತಾ, ಭಾಗಲಪುರ(ಬಿಹಾರ), ಪಣಜಿ(ಗೋವಾ), ಪೋರ್ಟ್ ಬ್ಲೇರ್(ಅಂಡಮಾನ್ ಮತ್ತು ನಿಕೋಬಾರ್ ನಡುಗಡ್ಡೆಗಳು), ಇಂಫಾಲ(ಮಣಿಪುರ), ರಾಂಚಿ(ಜಾರ್ಖಂಡ್), ಅಗರ್ತಲಾ(ತ್ರಿಪುರಾ) ಮತ್ತು ಫರೀದಾಬಾದ್(ಹರ್ಯಾಣ) ಇವು ಸ್ಮಾರ್ಟ್ ಸಿಟಿಗಳಾಗಲು ಅರ್ಹತೆ ಪಡೆದುಕೊಂಡಿರುವ ಇತರ ನಗರಗಳಾಗಿವೆ.
ಈ 13 ನಗರಗಳು ಒಟ್ಟೂ 30,229 ಕೋ.ರೂ.ಗಳ ಹೂಡಿಕೆಯನ್ನು ಪ್ರಸ್ತಾಪಿಸಿವೆ. ಇದರೊಂದಿಗೆ ಒಟ್ಟೂ 33 ನಗರಗಳು ಪ್ರಸ್ತಾಪಿಸಿರುವ ಹೂಡಿಕೆಯ ಮೊತ್ತ 80,789 ಕೋ.ರೂ.ಗಳಿಗೇರಿದೆ ಎಂದು ನಾಯ್ಡು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಪರ್ಧೆಗಾಗಿ 100 ನಗರಗಳ ಕಿರುಪಟ್ಟಿಯಲ್ಲಿ ಸೇರ್ಪಡೆಯಾಗಿರದಿದ್ದ ರಾಜಧಾನಿ ನಗರಗಳಾದ ಪಟ್ನಾ,ಶಿಮ್ಲಾ,ನಯಾ ರಾಯಪುರ,ಇಟಾನಗರ,ಅಮರಾವತಿ,ಬೆಂಗಳೂರು ಮತ್ತು ತಿರುವನಂತಪುರಗಳು ಇತರ ನಗರಗಳೊಂದಿಗೆ ಮುಂದಿನ ಸುತ್ತಿನ ಸ್ಪರ್ಧೆಯಲ್ಲಿ ಭಾಗಿಯಾಗಲಿವೆ ಎಂದರು.
ಅಲ್ಲದೆ ಅಭಿಯಾನದಡಿ ವೌಲ್ಯಮಾಪನಕ್ಕಾಗಿ ಜಮ್ಮು ಅಥವಾ ಶ್ರೀನಗರ ಮತ್ತು ಮೀರತ್ ಅಥವಾ ರಾಯಬರೇಲಿ ನಗರಗಳನ್ನೂ ಪರಿಗಣಿಸಲಾಗುವುದು ಎಂದು ನಾಯ್ಡು ತಿಳಿಸಿದರು.