ಚಿತ್ರದಲ್ಲಿ ತುಳು ಆಲ್ಬಂ ಹಾಡು ಬಳಕೆ: 'ಬ್ರಹ್ಮೋತ್ಸವಂ' ನಿರ್ಮಾಪಕರಿಗೆ ನೋಟಿಸ್
ಕಾಪಿರೈಟ್ ಉಲ್ಲಂಘನೆ; 25 ಲಕ್ಷ ರೂ ಪರಿಹಾರ ನೀಡಲು ನೋಟಿಸ್
ಮಂಗಳೂರು,ಮೇ 26: ಆ... ಲೇಲೆ ಏರೆಗ್ ಮದ್ಮೆ.. - ಇದು ತುಳು ಭಾಷೆಯಲ್ಲಿರುವ ಜನಪ್ರಿಯ ಹಾಡು. ಈ ಹಾಡು ದಕ್ಷಿಣ ಕನ್ನಡದಲ್ಲಿ ಎಲ್ಲರ ಬಾಯಲ್ಲಿ ಗುನುಗುತ್ತಲೆ ಇರುತ್ತದೆ. ಮದುವೆ ಸಮಾರಂಭಗಳಲ್ಲಿ, ಶುಭಕಾರ್ಯಕ್ರಮಗಳಲ್ಲಿ ಈ ಹಾಡು ಕೇಳಿಬರುತ್ತಲೆ ಇದೆ. 2007ರಲ್ಲಿ ಬಿಡುಗಡೆಯಾದ ತುಳು ಆಲ್ಬಂನ ಈ ಹಾಡನ್ನು ತೆಲುಗು ಚಲನಚಿತ್ರದಲ್ಲಿ ಕಾಪಿರೈಟ್ ಉಲ್ಲಂಘಿಸಿ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು 25 ಲಕ್ಷ ರೂ. ಪರಿಹಾರವನ್ನು ಕೋರಿ ಚಲನಚಿತ್ರ ನಿರ್ಮಾಪಕರಿಗೆ ಆಲ್ಬಂ ನಿರ್ಮಿಸಿದ ತಂಡ ನೋಟಿಸ್ ಜಾರಿ ಮಾಡಿದೆ.
ತೆಲುಗು ಭಾಷೆಯಲ್ಲಿ ಇತ್ತೀಚೆಗಷ್ಟೆ ಬಿಡುಗಡೆಯಾದ ಬ್ರಹ್ಮೋತ್ಸವಂ ಚಲನಚಿತ್ರದಲ್ಲಿ ಆ... ಲೇಲೆ ಏರೆಗ್ ಮದ್ಮೆ ಎಂಬ ಹಾಡು ಕಾಣಿಸಿಕೊಂಡಿದೆ. ಚಲನಚಿತ್ರದ ಮೊದಲರ್ಧದಲ್ಲಿ ಬರುವ ಹಾಡೊಂದರಲ್ಲಿ ಆರಂಭದಲ್ಲಿಯೆ 36 ಸೆಕೆಂಡ್‌ಗಳ ಕಾಲ ತುಳು ಆಲ್ಬಂನ ಹಾಡನ್ನು ಕಾಪಿ ಮಾಡಲಾಗಿದೆ. ಈ ಹಾಡನ್ನು ಆಲ್ಬಂನಿಂದ ನೇರವಾಗಿ ಕಾಪಿ ಮಾಡಲಾಗಿದೆ. ಈ ಹಾಡಿಗೆ ಚಿತ್ರದ ನಾಯಕನ ಕುಟುಂಬ ಪ್ರವಾಸಕ್ಕೆ ತೆರಳಿ ಅಲ್ಲಿ ನೃತ್ಯ ಮಾಡುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ತೆಲುಗು ಚಿತ್ರದಲ್ಲಿ ಇರುವ ಹಾಡು ನೋಡಿದಾಗ ಚಿತ್ರಕ್ಕಾಗಿಯೆ ಹಾಡನ್ನು ರಚಿಸಲಾಗಿದೆ ಎಂಬ ರೀತಿಯಲ್ಲಿ ಬಿಂಬಿತವಾಗಿದೆ.
2007ರಲ್ಲಿ ಸುರತ್ಕಲ್‌ನ ಸಿರಿ ಚಾನೆಲ್ ನಿರ್ಮಾಣ ಮಾಡಿದ ದೀಪನಲಿಕೆ ತುಳು ಆಲ್ಬಂನಲ್ಲಿ ಮೊದಲ ಹಾಡು ಆ... ಲೇಲೆ ಏರೆಗ್ ಮದ್ಮೆ ಇತ್ತು. ಈ ಹಾಡಿಗೆ ಸಾಹಿತ್ಯವನ್ನು ಹಿರಿಯ ಸಾಹಿತಿ ಡಾ.ವಾಮನ ನಂದಾವರ ಬರೆದಿದ್ದು , ಹಾಡಿನ ಪರಿಕಲ್ಪನೆ ಮತ್ತು ರಾಗಸಂಯೋಜನೆ ಮೈಮ್ ರಾಮ್‌ದಾಸ್, ವಾದ್ಯ ಸಂಯೋಜನೆಯನ್ನು ವಿನೋದ್ ಸುವರ್ಣ, ವಿಸ್ಮಯ್ ವಿನಾಯಕ್ ಮತು ಅನಿತಾ ಶ್ಯಾಂಸನ್ ಹಾಡು ಹಾಡಿದ್ದಾರೆ. ಈ ಹಾಡು ಕರಾವಳಿ ಜಿಲ್ಲೆಯಲ್ಲಿ ಬಹಳಷ್ಟು ಜನಪ್ರಿಯವಾಗಿದ್ದು ಮಾತ್ರವಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಆಲ್ಬಂ ಮಾರಾಟವನ್ನು ಕಂಡಿತ್ತು. ಕೇವಲ ಅವಿಭಜಿತ ದಕ್ಷಿಣ ಕನ್ನಡ ಮಾತ್ರವಲ್ಲದೆ, ಮಹಾರಾಷ್ಟ್ರ, ಗುಜರಾತ್, ಗಲ್ಪ್ ದೇಶಗಳಲ್ಲಿಯೂ ಈ ಹಾಡು ಜನಪ್ರಿಯಗೊಂಡಿತ್ತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಭಸಮಾರಂಭಗಳಲ್ಲಿ ಈ ಹಾಡು ಕೇಳುವುದು ಸಾಮಾನ್ಯವಾಗಿತ್ತು. ಆರ್ಕೆಸ್ಟ್ರಾಗಳಲ್ಲಿ ಈ ಹಾಡಿಗೆ ಬಹಳಷ್ಟು ಬೇಡಿಕೆಯಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಷ್ಟೊಂದು ಜನಪ್ರಿಯವಾಗಿರುವ ತುಳು ಭಾಷೆಯ ಹಾಡೊಂದನ್ನು ತೆಲುಗು ಚಿತ್ರದಲ್ಲಿ ಬಳಸುವಾಗ ಅನುಮತಿಯನ್ನು ಪಡೆಯಬೇಕಿರುವುದು ಸಾಮನ್ಯ ಜ್ಞಾನ. ಆದರೆ ತೆಲುಗು ಚಿತ್ರದಲ್ಲಿ ಈ ಹಾಡಿನ 36 ಸೆಕೆಂಡನ್ನು ನಕಲು ಮಾಡಿ ಬಳಸಿರುವುದು ಈ ಆಲ್ಬಂ ನಿರ್ಮಾಣ ಮಾಡಿದ ತಂಡದ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಸಿರಿ ಚಾನೆಲ್ ಮಾಲಕ ಪ್ರಸನ್ನ ಅವರು ತೆಲುಗು ಚಿತ್ರದಲ್ಲಿ ಈ ಹಾಡನ್ನು ಬಳಸಿರುವ ವಿರುದ್ದ ಬ್ರಹ್ಮೋತ್ಸವ ತೆಲುಗು ಚಲನಚಿತ್ರವನ್ನು ನಿರ್ಮಾಣ ಮಾಡಿದ ಪಿವಿಪಿ ಸಿನಿಮಾದ ಚೇರ್‌ಮೆನ್ ,ನಿರ್ಮಾಪಕ ಪ್ರಸಾದ್ ವಿ ಪಟ್ಲೂರಿ ಮತ್ತು ನಟ ಮಹೇಶ್ ಬಾಬು ಯಾನೆ ಪ್ರಿನ್ಸ್‌ರಿಗೆ ವಕೀಲರ ಮೂಲಕ ಹಾಡನ್ನು ನಕಲು ಮಾಡಿರುವುದಕ್ಕೆ ಕ್ಷಮಾಯಾಚನೆ ಮಾಡಬೇಕು ಮತ್ತು 25 ಲಕ್ಷ ಪರಿಹಾರವನ್ನು ನೀಡಬೇಕು ಎಂದು ನೋಟಿಸ್ ಜಾರಿ ಮಾಡಿದ್ದಾರೆ.
ಕನ್ನಡ ಸಿನಿಮಾದಲ್ಲೂ ಬಳಕೆಯಾಗಿತ್ತು
ಕೋಮಲ್ ಅಭಿನಯದ ಕನ್ನಡ ಚಲನಚಿತ್ರವೊಂದರಲ್ಲಿ ಆ.. ಲೇಲೆ ಏರೆಗ್ ಮದ್ಮೆ.. ಹಾಡನ್ನು ಬಳಸಲಾಗಿತ್ತು. ಈ ಹಾಡನ್ನು ಬಳಸಲು ಅನುಮತಿಯನ್ನು ಕೇಳಲಾಗಿತ್ತು. ಅಲ್ಲದೆ ಈ ಹಾಡಿನ ಮೊದಲ ವಾಕ್ಯದ ಸಾಹಿತ್ಯವನ್ನು , ಪರಿಕಲ್ಪನೆ, ರಾಗಸಂಯೋಜನೆಯನ್ನು ಬಳಸಲಾಗಿತ್ತು. ಹಾಡಿಗೆ ಸಂಗೀತ ಮತ್ತು ಹಾಡನ್ನು ಚಿತ್ರತಂಡವೆ ಮಾಡಿತ್ತು. ಆದರೆ ತೆಲುಗು ಚಿತ್ರ ಬ್ರಹ್ಮೋತ್ಸವಂನಲ್ಲಿ ಆಲ್ಬಂನ 36 ಸೆಕೆಂಡನ್ನು ಯಥಾವತ್ತಾಗಿ, ಯಾವುದೆ ಅನುಮತಿಯಿಲ್ಲದೆ ಬಳಸಲಾಗಿದೆ.
ತುಳುಭಾಷೆಯಲ್ಲಿ ಇಲ್ಲಿಯ ಶೈಲಿಯ ಪ್ರಯತ್ನ ಮಾಡಿ ಮಾಡಿದ ಆಲ್ಬಂ ಸಾಕಷ್ಟು ಜನಪ್ರಿಯವಾಗಿತ್ತು. ತೆಲುಗು ಚಿತ್ರ ಬ್ರಹ್ಮೋತ್ಸವಂನಲ್ಲ ಅನುಮತಿಯನ್ನು ಕೇಳದೆ ನಮ್ಮ ತಂಡದ ಈ ಹಾಡನ್ನು ಬಳಸಿರುವುದು ತಪ್ಪು. ಸಿನಿಮಾದಲ್ಲಿ ಹಾಡು ಬಳಕೆಯಾಗಿರುವುದು ಸಿನಿಮಾ ನೋಡಿದ ಇತರರಿಂದ ನಮಗೆ ತಿಳಿದುಬಂದಿದೆ. ತುಳು ಆಲ್ಬಂನ ಈ ಹಾಡನ್ನು ಬ್ರಹ್ಮೋತ್ಸವಂನಲ್ಲಿ ಸಿನಿಮಾಕ್ಕಾಗಿ ನಿರ್ಮಿಸಿದ ಹಾಡಿನಂತೆ ಮೂಡಿಬಂದಿದೆ. ಕಾಪಿರೈಟ್ ಉಲ್ಲಂಘಿಸಿದ ತೆಲುಗು ಚಿತ್ರ ಬ್ರಹ್ಮೋತ್ಸವಂ ನಿರ್ಮಾಪಕರ ವಿರುದ್ದ ಈಗಾಗಲೆ ವಕೀಲರ ಮೂಲಕ ನೋಟೀಸ್ ಜಾರಿಗೊಳಿಸಿ ಪರಿಹಾರಕ್ಕೆ ಆಗ್ರಹಿಸಿದ್ದೇವೆ.
ಮೈಮ್ ರಾಮ್‌ದಾಸ್, ಹಾಡಿನ ರಾಗಸಂಯೋಜಕರು.
ತುಳುನಾಡಿನಲ್ಲಿ ಸಾಕಷ್ಟು ಹೆಸರು ಮಾಡಿದ ಹಾಡನ್ನು ಹಾಡಿದ ನನ್ನ ಕಕ್ಷಿದಾರರ ಪೂರ್ವನುಮತಿಯನ್ನು ಪಡೆಯದೆ ತೆಲುಗು ಚಿತ್ರ ಬ್ರಹ್ಮೋತ್ಸವಂನಲ್ಲಿ ಬಳಸಲಾಗಿರುವುದರ ವಿರುದ್ದ ಬೇಷರತ್ ಕ್ಷಮೆಯಾಚನೆ ಮಾಡಬೇಕೆಂದು ಮತ್ತು 25 ಲಕ್ಷ ಪರಿಹಾರವನ್ನು ನೀಡಬೇಕೆಂದು ನೊಟೀಸ್ ಜಾರಿಮಾಡಲಾಗಿದೆ.
ಶಶಿರಾಜ್ ಕಾವೂರು, ವಕೀಲರು.