ಕೇಂದ್ರ ಸರಕಾರದ (ಅ)ನೀತಿ ಆಯೋಗ?!
ಅಂತೂ ನೆಹರೂ ಯುಗದ ಮತ್ತೊಂದು ಸಮಾಜವಾದಿ ಆಶಯದ ಸಂಸ್ಥೆಯೊಂದು ಸದ್ದಿಲ್ಲದೆ ಸಮಾಧಿ ಸೇರಿದೆ, ಸೇರುತ್ತಿದೆ. ಮುಂದಿನ ವರ್ಷ ಅಂತ್ಯ ಕಾಣಲಿರುವ ಹನ್ನೆರಡನೆ ಪಂಚವಾರ್ಷಿಕ ಯೋಜನೆಯು ಕೊನೆಯದಾಗಲಿದ್ದು, 2014ರಲ್ಲಿ ಅಸ್ಥಿತ್ವಕ್ಕೆ ಬಂದ ನೀತಿ ಆಯೋಗವು ಐದು ವರ್ಷಗಳ ಕಾಲಮಿತಿಗೆ ಬದಲಾಗಿ ಹದಿನೈದು ವರ್ಷಗಳ ಕಾಲ ಮಿತಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವುದಕ್ಕೆ ಮೊದಲು ಪಂಚವಾರ್ಷಿಕ ಯೋಜನೆಗಳ ಬಗ್ಗೆ ಒಂದಿಷ್ಟು ಅವಲೋಕಿಸುವುದು ಅಗತ್ಯವೆಂದು ನನ್ನ ಭಾವನೆ.
ನಮಗೆ ಸ್ವಾತಂತ್ರ ಬಂದನಂತರ ನಾವು ಇಂಗ್ಲೆಂಡ್ ಮಾದರಿಯ ಪ್ರಜಾಸತ್ತಾತ್ಮಕ ಸಂಸತ್ತನ್ನು ಮಾದರಿಯನ್ನಾಗಿಟ್ಟುಕೊಂಡು ನಮ್ಮ ಸಂವಿಧಾನವನ್ನು ರಚಿಸಿಕೊಂಡರೂ ಸಮಾಜವಾದಿ ಸಿದ್ಧಾಂತದಿಂದ ಪ್ರಭಾವಿತರಾಗಿದ್ದ ನಮ್ಮ ಮೊದಲ ಪ್ರಧಾನಮಂತ್ರಿಯಾದ ಜವಾಹರ್‌ಲಾಲ್ ನೆಹರೂರವರು ಸೋವಿಯತ್ ಯೂನಿಯನ್ ಅಳವಡಿಸಿಕೊಂಡಿದ್ದ ಪಂಚವಾರ್ಷಿಕ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮಲ್ಲೂ ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಲು ನಿರ್ಧರಿಸಿದರು. ಅದಕ್ಕೆ ಪೂರಕವಾಗಿ ರಾಷ್ಟ್ರ ಮಟ್ಟದಲ್ಲಿ ಯೋಜನಾ ಆಯೋಗವೊಂದನ್ನು ಸಹ ರೂಪಿಸಿದರು. 1951ರಿಂದ 1956ರ ಅವಧಿಗೆ ಮೊದಲ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದರ ಮುಖ್ಯ ಆದ್ಯತೆಯಿದ್ದದ್ದು ಪ್ರಾಥಮಿಕವಾದ ಮೂಲಸೌಕರ್ಯಗಳನ್ನು ಕಲ್ಪಿಸುವುದಾಗಿತ್ತು. ಸುಮಾರು 2,069 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಮೀಸಲಿಟ್ಟು ಏಳು ಮುಖ್ಯ ಕ್ಷೇತ್ರಗಳನ್ನು ಗುರುತಿಸಲಾಯಿತು. ಅವುಗಳು ಕ್ರಮವಾಗಿ ಹೀಗಿವೆ: ನೀರಾವರಿ ಮತ್ತು ಇಂಧನ, ಕೃಷಿ ಮತ್ತು ಕೃಷಿಕ ಸಮುದಾಯ, ಸಾರಿಗೆ ಮತ್ತು ಸಂಪರ್ಕ, ಕೈಗಾರಿಕೆ, ಅಗತ್ಯ ಸೇವೆಗಳು, ಪುನರ್ವಸತಿ ಮತ್ತು ಇತರೇ ಅಗತ್ಯ ಸೇವೆಗಳು ಆ ಏಳು ಮುಖ್ಯ ಕ್ಷೇತ್ರಗಳಾಗಿದ್ದವು.
ನಂತರ 1956ರಿಂದ 1961ರವರೆಗೆ ಎರಡನೆ ಪಂಚವಾರ್ಷಿಕ ಯೋಜನೆ ಅನುಷ್ಠಾನಗೊಂಡು ಅದರ ಮುಖ್ಯ ಉದ್ದೇಶವೇ ಸಾರ್ವಜನಿಕ ಉದ್ಯಮವಾಗಿತ್ತು. ನಂತರದಲ್ಲಿ 1961ರಿಂದ 1966ರವರೆಗಿನ ಮೂರನೆ ಯೋಜನೆಯ ಮುಖ್ಯ ಗುರಿ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದಾಗಿತ್ತು. ಆದರೆ ನೆಹರೂ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ನಿಧನದಿಂದಾಗಿ, ಚೀನಾದೊಡನೆ ಯುದ್ಧ ಮತ್ತು ತೀವ್ರವಾದ ಬರಗಾಲ ತಲೆದೋರಿದ್ದರಿಂದಾಗಿ ಮೂರು ಆರ್ಥಿಕ ವರ್ಷಗಳು ಯಾವುದೇ ಯೋಜನೆಗಳು ಶುರುವಾಗಲಿಲ್ಲ. ನಂತರದಲ್ಲಿ 1969 ರಿಂದ 1974ರವರೆಗಿನ ನಾಲ್ಕನೆ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಯ ಆಧುನೀಕರಣ, ಬ್ಯಾಂಕುಗಳ ರಾಷ್ಟ್ರೀಕರಣ, ಅಣ್ವಸ್ತ್ರ ಪರೀಕ್ಷೆ ಮುಂತಾದವು ಮುಖ್ಯಾಂಶಗಳಾಗಿದ್ದವು. 1974ರಿಂದ 1979ರವರೆಗೂ ಆಗಿ ಹೋದ ಐದನೆ ಪಂಚವಾರ್ಷಿಕ ಯೋಜನೆಯ ಮುಖ್ಯ ಅಂಶಗಳು ನಿರುದ್ಯೋಗ ನಿವಾರಣೆ, ಗರೀಬಿ ಹಟಾವೊ ಮತ್ತು ಸಾಮಾಜಿಕ ನ್ಯಾಯ ನೀಡುವ ದಿಸೆಯಲ್ಲಿದ್ದವು.
ಈ ನಡುವೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಜನತಾಪಕ್ಷದ ಸರಕಾರ ಐದನೆ ಪಂಚವಾರ್ಷಿಕ ಯೋಜನೆಯನ್ನು ತಿರಸ್ಕರಿಸಿ ತನ್ನ ರಾಜಕೀಯದ ದ್ವೇಷಕ್ಕೆ ಉದಾಹರಣೆಯಾಯಿತು. ಮತ್ತು 1978ರಿಂದ 1984ರವರೆಗೆ ಆರನೆ ಪಂಚವಾರ್ಷಿಕ ಯೋಜನೆಯನ್ನು ಜಾರಿಗೊಳಿಸಿತು. 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಜನತಾ ಸರಕಾರದ ಹಳೆಯ ಯೋಜನೆಯನ್ನು ತಿರಸ್ಕರಿಸಿ 1980ರಿಂದ 1985 ರವರೆಗೆ ಹೊಸ ಆರನೆ ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯಲ್ಲಿ ಆರೋಗ್ಯ ಮತ್ತು ಕುಟುಂಬ ಯೋಜನೆಯ ಕಾರ್ಯಕ್ರಮಕ್ಕೆ ಹೆಚ್ಚು ಆದ್ಯತೆ ನೀಡಲಾಯಿತು. ಆದರೆ ಈ ಹಂತದಲ್ಲೇ ಸರಕಾರಿ ಹಿಡಿತವನ್ನು ಸ್ವಲ್ಪಸ್ವಲ್ಪವೇ ಸಡಿಲಗೊಳಿಸುವ ಕಾರ್ಯ ಪ್ರಾರಂಭವಾಯಿತು. ನಂತರದಲ್ಲಿ 1985ರಿಂದ 1990ರವರೆಗೆ ಏಳನೆ ಪಂಚವಾರ್ಷಿಕ ಯೋಜನೆ ಜಾರಿಯಾಯಿತು. ಆರ್ಥಿಕ ಉತ್ಪಾದನೆಯನ್ನು ಹೆಚ್ಚಿಸುವ ಜೊತೆಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಯಿತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ತನ್ನೆಲ್ಲ ಕೊರತೆಗಳ ನಡುವೆಯೂ ಪಂಚವಾರ್ಷಿಕ ಯೋಜನೆಗಳು ದೇಶದ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡುತ್ತಾ ಬಂದಿದ್ದವು. ಇಷ್ಟಿದ್ದರೂ ದುರಂತವೆಂದರೆ ರಾಷ್ಟ್ರದ ಬದಲಾದ ರಾಜಕೀಯ ಶಕ್ತಿಗಳಿಗನುಸಾರವಾಗಿ ತಾತ್ಕಾಲಿಕವಾಗಿ ಈ ಯೋಜನೆಗಳು ಸ್ಥಗಿತಗೊಂಡವು. ಹಾಗಾಗಿ 1990-90, 91-92 ಎರಡು ವರ್ಷಗಳು ವಾರ್ಷಿಕ ಯೋಜನೆಗಳೆಂದು ಪರಿಗಣಿಸಲ್ಪಟ್ಟವು. ಇದರಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೀಡಾಯಿತು. ರಾಜಕೀಯ ಅಸ್ಥಿರತೆಯಿಂದಾಗಿ ಅಭಿವೃದ್ದಿಯ ಯೋಜನೆಗಳು ಕುಂಠಿತಗೊಳ್ಳುತ್ತಾ ಸಾಗಿದವು. ಈ ಕಾಲಾವಧಿಯಲ್ಲಿ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಹತ್ಯೆ ನಡೆದು ಕಾಂಗ್ರೆಸ್‌ನ ದಿವಂಗತ ಪಿ.ವಿ. ನರಸಿಂಹರಾವ್ ದೇಶದ ಪ್ರಧಾನಿಯಾಗಿಯೂ, ಖ್ಯಾತ ಅರ್ಥಶಾಸ್ತ್ರಜ್ಞರಾದ ಮನಮೋಹನಸಿಂಗ್ ಅರ್ಥ ಮಂತ್ರಿಯಾಗಿಯೂ ಅಧಿಕಾರ ಸ್ವೀಕರಿಸಿದರು. ಇದು ಆಧುನಿಕ ಭಾರತದ ಆರ್ಥಿಕ ಅಭಿವೃದ್ದಿಯ ಗುರಿ ಮತ್ತು ದಾರಿಯನ್ನೇ ಬದಲಾಯಿಸಿತು. ಈ ಅವಧಿಯಲ್ಲಿ 1992-1997ರವರೆಗೆ ಎಂಟನೇ ಪಂಚವಾರ್ಷಿಕ ಯೋಜನೆಯನ್ನು ಘೋಷಿಸಲಾಯಿತು.
ಇದರ ನಡುವೆಯೆ ಸಾಲದ ಸುಳಿಯಲ್ಲಿ ಸಿಲುಕಿ ವಿದೇಶಿ ವಿನಿಮಯದ ಕೊರತೆಯಿಂದ ಸಂಕಷ್ಟಕ್ಕೀಡಾಗಿದ್ದ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಗೆ ತರುವ ಏಕೈಕ ಕಾರಣದಿಂದಾಗಿ ಮುಕ್ತ ಆರ್ಥಿಕ ನೀತಿಯನ್ನು ಅಳವಡಿಸಿಕೊಳ್ಳಲಾಯಿತು. ಜಾಗತೀಕರಣಕ್ಕೆ ನಮ್ಮನ್ನು ತೆರೆದುಕೊಳ್ಳುವ ಮೂಲಕ ಇಂಡಿಯಾವನ್ನು ಡಬ್ಲ್ಯೂಟಿಒಗೆ ಸದಸ್ಯರಾಷ್ಟ್ರವನ್ನಾಗಿ ಮಾಡಲಾಯಿತು. ಈ ಅವಧಿಯಲ್ಲಿ ಖಾಸಗೀಕರಣ ಪ್ರಾಮುಖ್ಯತೆ ಪಡೆದುಕೊಂಡು ಸಾರ್ವಜನಿಕ ಕ್ಷೇತ್ರ ಹಿಂದಕ್ಕೆ ಸರಿಯತೊಡಗಿತು.
ನಂತರ 1997-2002ರ ಅವಧಿಗೆ ಒಂಬತ್ತನೇ ಪಂಚವಾರ್ಷಿಕ ಯೋಜನೆ ಜಾರಿಯಾಯಿತು. ಈ ಅವಧಿಯಲ್ಲಿ ಭಾಜಪದ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದು ಖಾಸಗಿ ಮತ್ತು ಸಾರ್ವಜನಿಕ ಉದ್ದಿಮೆಗಳಿಗೆ ಸಮಾನಾಂತರವಾಗಿ ಪ್ರಾಶಸ್ತ್ಯ ನೀಡಲಾಯಿತು. ಉದಾರೀ ಕರಣದ ಪ್ರಕ್ರಿಯೆ ಇನ್ನಷ್ಟ್ಟು ತೀವ್ರಗತಿಯಲ್ಲಿ ನಡೆಯಲಾರಂಬಿಸಿತು. 2002ರಿಂದ 2007ರವರಗೆ ದೇಶದ ಹತ್ತನೆ ಯೋಜನೆ ಘೋಷಿತವಾಯಿತು. ಒಟ್ಟು ಜಿಡಿಪಿಯನ್ನು ಶೇ. 8ಕ್ಕೆ ಹೆಚ್ಚಿಸುವ ಮತ್ತು ಬಡತನ ನಿರ್ಮೂಲನೆಗೆ ಈ ಯೋಜನೆಯಲ್ಲಿ ಒತ್ತು ನೀಡಲಾಯಿತು. 2004ರಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಹತ್ತನೆ ಯೋಜನೆಯನ್ನು 2007ರಿಂದ 2012ರವರೆಗೆ ಜಾರಿಗೊಳಿಸಲಾಯಿತು. ನಂತರಲ್ಲಿ ಎರಡನೆ ಅವಧಿಗೂ ಮುಂದುವರೆದ ಯು.ಪಿ.ಎ. ಸರಕಾರ 2012ರಿಂದ 2017ರವರಗೆ ಹನ್ನೆರಡನೇ ಪಂಚವಾರ್ಷಿಕ ಯೋಜನೆ ರೂಪಿಸಿತು.
ಹನ್ನೆರಡನೆ ಯೋಜನೆಯು 2017ನೆ ಇಸವಿಗೆ ಕೊನೆಯಾಗಲಿದ್ದು ಅದರ ಸಫಲತೆಯ ಬಗ್ಗೆಯಾಗಲಿ, ವಿಫಲತೆಯ ಬಗ್ಗೆಯಾಗಲಿ ಇನ್ನೂ ನಿಖರ ಮಾಹಿತಿ ಯಾರಿಗೂ ದೊರಕಿಲ್ಲ. ಪರಿಸ್ಥಿತಿ ಹೀಗಿರುವಾಗ 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರಮೋದಿಯವರ ಭಾಜಪ ಸರಕಾರ ಯೋಜನೆಯ ಅವಧಿಗೂ ಮುನ್ನವೇ ಇನ್ನು ಮುಂದೆ ಪಂಚವಾರ್ಷಿಕ ಯೋಜನೆಗಳನ್ನು ಹಾಕಿಕೊಳ್ಳುವುದಿಲ್ಲವೆಂದು ಹೇಳಿ, ಅದರ ಮೊದಲ ಹಂತವೆಂಬಂತೆ ಕೇಂದ್ರ ಯೋಜನಾ ಆಯೋಗವನ್ನೇ ರದ್ದು ಪಡಿಸಿದ್ದಾರೆ. ಅದರ ಜಾಗದಲ್ಲಿ ‘ನೀತಿ’(ನ್ಯಾಶನಲ್ ಇನ್ಸ್ಟ್ಸಿಟ್ಯೂಶನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ)ಆಯೋಗವನ್ನು ಸ್ಥಾಪಿಸಿದ್ದಾರೆ. ಹಾಗಿದ್ದರೆ ಯೋಜನಾ ಆಯೋಗವನ್ನು ರದ್ದುಪಡಿಸಿ ಪಂಚವಾರ್ಷಿಕ ಯೋಜನೆಗಳನ್ನು ಕೈಬಿಡುವುದರ ಹಿಂದಿರುವ ನೈಜ ಉದ್ದೇಶಗಳೇನು ಎಂಬುದನ್ನು ನಾವು ನೋಡಬೇಕಿದೆ:
ಮೊದಲೇ ಹೇಳಿದಂತೆ ಪಂಚವಾರ್ಷಿಕ ಯೋಜನೆಗಳ ಲೋಪದೋಷ ಗಳೇನೇ ಇದ್ದರೂ, ಅದು ರಾಷ್ಟ್ರವು ಆಹಾರ ಉತ್ಪಾದನೆಯ ವಿಚಾರದಲ್ಲಿ ಸ್ವಾವಲಂಬಿಯಾಗಲು ಮತ್ತು ದೇಶದಲ್ಲಿ ಈಗಿರುವ ನೀರಾವರಿ ವ್ಯವಸ್ಥೆಯನ್ನು ಕೈಗೊಳ್ಳಲು, ಭಾರೀ ಕೈಗಾರಿಕೆಗಳು ಸ್ಥಾಪನೆಯಾಗಲು ಅಪಾರವಾದ ಕೊಡುಗೆಯನ್ನು ನೀಡಿರುವುದನ್ನು ಅಲ್ಲಗೆಳೆಯುವಂತಿಲ್ಲ. ಜತೆಗೆ ನಮ್ಮ ಯೋಜನಾ ವ್ಯವಸ್ಥೆಗೆ ಒಂದು ಶಿಸ್ತನ್ನು ಸಹ ನೀಡುವಲ್ಲಿ ಯಶಸ್ವಿಯಾಗಿದೆ ಇದೆಲ್ಲಕ್ಕಿಂತ ಮಿಗಿಲಾಗಿ ದೇಶದ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸುವ ಮತ್ತು ಸಮಾಜವಾದಿ ಉದ್ದೇಶಗಳ ಈಡೇರಿಕೆಗೆ ಗಣನೀಯ ಕಾಣಿಕೆ ನೀಡಿದೆ. ಅದರಲ್ಲಿ ಆಗಿರಬಹುದಾದ ದೋಷಗಳೇನಿದ್ದರೂ ನಮ್ಮ ರಾಜಕೀಯದ ಮೇಲಾಟಗಳು ಮತ್ತು ಜಡ ಅಧಿಕಾರಶಾಹಿ ವ್ಯವಸ್ಥೆಯ ಪರಿಣಾಮವೇ ಹೊರತು ಬೇರೇನೂ ಅಲ್ಲ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ತಾನು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಕಾಂಗ್ರೆಸ್‌ಗೆ ಸಂಬಂಧಿಸಿದ ಯೋಜನೆಗಳನ್ನೂ, ಸಮಾಜವಾದಿ ಚಿಂತನೆಯ ಲೇಪವಿರುವ ಎಲ್ಲ ಕಾರ್ಯಕ್ರಮಗಳನ್ನು ಇಲ್ಲವಾಗಿಸುವ ಕ್ರಿಯೆಯಲ್ಲಿ ಈ ಸರಕಾರ ತೊಡಗಿಸಿಕೊಂಡಿದೆ. ಪಂಚವಾರ್ಷಿಕ ಯೋಜನೆಗಳು ನೆಹರೂರವರಿಂದ ಪ್ರೇರೇಪಣೆ ಪಡೆದಿರುವುದನ್ನು ಅದು ಸಹಿಸುತ್ತಿಲ್ಲ. ಜೊತೆಗೆ ಬಂಡವಾಳಶಾಹಿ ಶಕ್ತಿಗಳ ಪೋಷಕನಂತೆ ವರ್ತಿಸುತ್ತಿರುವ ಅದಕ್ಕೆ ಸಮಾಜವಾದಿ ಚಿಂತನೆಯ ಲೇಪವಿರುವ ಯಾವ ಯೋಜನೆಗಳ, ನೀತಿಗಳ ನೆನಪನ್ನಾಗಲಿ ಸಾರ್ವಜನಿಕ ಬದುಕಲ್ಲಿ ಉಳಿಸುವುದು ಬೇಡವಾಗಿದೆ. ಅದಕ್ಕೆ ಅವರು ಕೊಡುವ ಕಾರಣ ಪಂಚವಾರ್ಷಿಕ ಯೋಜನೆಗಳ ಅವಧಿ ತೀರಾ ಕಡಿಮೆಯಾಗಿದ್ದು ಅಲ್ಪಕಾಲೀನ ಅವಧಿಯಲ್ಲಿ ನಿರೀಕ್ಷಿತ ಅಭಿವೃದ್ದಿ ಸಾಧ್ಯವಿಲ್ಲವೆಂಬುದಾಗಿದೆ. ಆದರೆ ವಾಸ್ತವದಲ್ಲಿ ಅವರ ಉದ್ದೇಶವಿರುವುದು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದಾಗಿದೆ. ಯಾಕೆಂದರೆ ಸಾಕಷ್ಟು ದೀರ್ಘಾವಧಿಯ ಈ ಯೋಜನೆಗಳ ಯಶಸ್ಸಿನ ಬಗ್ಗೆ ಹೇಳಲು ಐದು ವರ್ಷಗಳಲ್ಲಿ ಸಾಧ್ಯವಿಲ್ಲವಾಗಿದೆ. ಇಷ್ಟಲ್ಲದೆ ಯೋಜನಾ ಆಯೋಗಲ್ಲಿ ಇನ್ನೂ ಉಳಿದಿರಬಹುದಾಗಿದ್ದ ಸಮಾಜವಾದಿ ಸಿದ್ದಾಂತಗಳನ್ನು ಇಲ್ಲವಾಗಿಸಿ, ಸಂಪೂರ್ಣವಾಗಿ ಖಾಸಗಿ ಬಂಡವಾಳಶಾಹಿ ಶಕ್ತಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರವೂ ಇದರಲ್ಲಿ ಅಡಗಿದೆ.
ಈ ‘ನೀತಿ’ (ಘೆಐಐ)ಎನ್ನುವ ಒಂದು ಸಂಸ್ಥೆಯೊ ಅಥವಾ ಆಯೋಗವೊ ಎಂಬ ಬಗ್ಗೆ ಸ್ವತ: ಸರಕಾರಕ್ಕೇನೆ ಸ್ಪಷ್ಟತೆಯಿಲ್ಲದಾಗಿದೆ. ಇದು ಯೋಜನೆಗಳನ್ನು ರೂಪಿಸಿದರೂ ಅಂತಿಮವಾಗಿ ಆ ಯೋಜನೆಗಳಿಗೆ ಅನುದಾನ ನೀಡುವುದು ಕೇಂದ್ರ ಅರ್ಥಸಚಿವರೇ ಆಗಿದ್ದು, ಯೋಜನೆಗಳಿಗೆ ಬಿಡುಗಡೆಯಾಗ ಬೇಕಿರುವ ಅನುದಾನ ನೀಡುವುದರ ಬಗ್ಗೆ ನಿರ್ಧರಿಸುವ ಯಾವ ಅಧಿಕಾರವೂ ಈ ಆಯೋಗಕ್ಕೆ ಇರುವುದಿಲ್ಲ.
ನೀತಿ ಆಯೋಗವು ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ತೆಗೆದುಕೊಳ್ಳಬಹುದಾದ ಅದರ ನಿಲುವಿನ ಬಗ್ಗೆಯೂ ಯಾವುದೆ ಸ್ಪಷ್ಟತೆಯಿಲ್ಲ. ಕೇಂದ್ರ ನೀತಿ ಆಯೋಗದ ಅಧಿಕಾರದ ಮುಂದೆ ರಾಜ್ಯದ ಯೋಜನಾ ಆಯೋಗಗಳು ಹಲ್ಲು ಕಿತ್ತ ಹಾವಿನಂತಾಗಿ ತಮ್ಮ ರಾಜ್ಯಗಳಿಗೆ ಬೇಕಾದಂತಹ ಯೋಜನೆಗಳನ್ನು ರೂಪಿಸಿಕೊಳ್ಳುವ ದತ್ತ ಅಧಿಕಾರವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಸಮಾಜವಾದಿ ಚಿಂತನೆಯ ಎಲ್ಲ ಸಂಸ್ಥೆಗಳನ್ನೂ ಹೊಸಕಿ ಹಾಕುವ ಕೇಂದ್ರ ಸರಕಾರದ ಇಂತಹ ಚಿಂತನೆಗಳ ಹಿಂದೆ ಸಂಘಪರಿವಾರದ ಬಲಪಂಥೀಯ ಚಿಂತನೆಗಳು ಮಾತ್ರ ಕೆಲಸ ಮಾಡುತ್ತಿವೆಯೆಂದು ನಾವು ಸ್ಪಷ್ಟವಾಗಿ ತಿಳಿಯಬಹುದಾಗಿದೆ. ಇನ್ನು ಮುಂದೆ ವಿಶ್ವ ವಿದ್ಯಾನಿಲಯಗಳ ಆಯೋಗಗಳೂ ಸಹ ಇಂತಹುದೇ ಕಾರಣಗಳಿಗಾಗಿ ತಮ್ಮ ರಚನೆಯನ್ನು ಬದಲಾಯಿಸಿಕೊಳ್ಳಬಹುದಾದ ಪರಿಸ್ಥಿತಿ ಬಂದರೂ ಬರಬಹುದು.
ಸರ್ವಾಧಿಕಾರಿ ಧೋರಣೆಯ ಸರಕಾರಗಳು ಮಾತ್ರ ಸಂಸತ್ತಿನಲ್ಲಿಯಾಗಲಿ ಜನಸಮುದಾಯದ ನಡುವೆಯಾಗಲಿ ಯಾವುದೇ ಚರ್ಚೆಗಳಿಗೆ ಅವಕಾಶ ಕೊಡದೆ ಇಂತಹ ಮೂಲ ಬದಲಾವಣೆಗಳನ್ನು ಮಾಡುವ ದಾರ್ಷ್ಟ್ಯ ತೋರಬಲ್ಲವು.