ಶಾಂತಿಪಾಲನೆ ಅಭಿಯಾನಗಳಲ್ಲಿ ಸೈನಿಕರನ್ನೊದಗಿಸುವ ರಾಷ್ಟ್ರಗಳಿಗೆ ಹೆಚ್ಚಿನ ಅಧಿಕಾರವಿರಬೇಕು: ಸುಹಾಗ್
ಹೊಸದಿಲ್ಲಿ,ಮೇ 30: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಅಭಿಯಾನಗಳಿಗೆ ಸೈನಿಕರನ್ನು ಒದಗಿಸುವ ರಾಷ್ಟ್ರಗಳಿಗೆ ತಾವು ಪಾಲ್ಗೊಳ್ಳುತ್ತಿರುವ ಕಾರ್ಯಾಚರಣೆಗಳ ನಿರ್ವಹಣೆ ಕುರಿತಂತೆ ಮಾತನಾಡುವ ಹೆಚ್ಚಿನ ಅಧಿಕಾರ ಅಗತ್ಯವಾಗಿದೆ ಎಂದು ಭೂಸೇನೆಯ ದಂಡನಾಯಕ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರು ಸೋಮವಾರ ಇಲ್ಲಿ ಹೇಳಿದರು.
ವಿಪರ್ಯಾಸವೆಂದರೆ ಇಂತಹ ಅಭಿಯಾನಗಳಿಗೆ ಕಡಿಮೆ ಸಂಖ್ಯೆಯಲ್ಲಿ ತಮ್ಮ ಸೈನಿಕರನ್ನು ಒದಗಿಸುವ ರಾಷ್ಟ್ರಗಳು ಹೆಚ್ಚಿನ ಅಧಿಕಾರವಾಣಿಯನ್ನು ಹೊಂದಿವೆ ಎಂದವರು ವಿಷಾದವನ್ನು ವ್ಯಕ್ತಪಡಿಸಿದರು.
ಸೇನೆಯ ಚಿಂತನ ಚಿಲುಮೆಯು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು, ಯಾವುದೇ ಆದೇಶದಲ್ಲಿ ಬದಲಾವಣೆ,ಕಾರ್ಯ ಅಥವಾ ನೀತಿ ರೂಪಿಸುವಿಕೆಗೆ ಸಂಬಂಧಿಸಿದಂತೆ ಮಾತನಾಡುವ ಅಧಿಕಾರ ಸೈನಿಕರನ್ನು ಒದಗಿಸುವ ದೇಶಗಳಿಗೆ ಅಗತ್ಯವಿದೆ ಎಂದು ಹೇಳಿದರು. ಎಲ್ಲ ಭಾಗಿದಾರರ ಕಳವಳಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು.
ಕೆಲವು ದೇಶಗಳು ವೀಕ್ಷಕರು ಅಥವಾ ಸಿಬ್ಬಂದಿ ಅಧಿಕಾರಿಗಳ ರೂಪದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದರೂ ಅವು ನೀತಿ ಹೊಂದಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದನ್ನು ನಾವು ಗಮನಿಸಿದ್ದೇವೆ. ಆದರೆ ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸೈನಿಕರನ್ನು ಒದಗಿಸುವ ದೇಶಗಳಿಗೆ ಮಾತನಾಡುವ ಅಧಿಕಾರ ಅತ್ಯಲ್ಪವಾಗಿದೆ ಎಂದರು.
ಶಾಂತಿಪಾಲನಾ ಪಡೆಯನ್ನು ಪುನಾರಚಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
ಕಳೆದ ಮಾರ್ಚ್‌ನಲ್ಲಿ ಶಾಂತಿಪಾಲನಾ ಪಡೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ಕರೆದಿದ್ದ ವಿಶ್ವದ ಸೇನಾ ಮುಖ್ಯಸ್ಥರ ಚೊಚ್ಚಲ ಸಭೆಯಲ್ಲಿ ಸುಹಾಗ್ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ಈವರೆಗೆ ವಿಶ್ವಸಂಸ್ಥೆಯ 49 ಶಾಂತಿಪಾಲನೆ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿರುವ ಭಾರತವು 1.80 ಲಕ್ಷಕ್ಕೂ ಅಧಿಕ ಸೈನಿಕರ ಸೇವೆಯನ್ನು ಒದಗಿಸಿದೆ. ಕಳೆದ ಆರು ದಶಕಗಳಲ್ಲಿ ಈ ಕಾರ್ಯಾಚರಣೆಗಳಲ್ಲಿ ಭಾರತವು ತನ್ನ 158 ಯೋಧರನ್ನು ಕಳೆದುಕೊಂಡಿದ್ದು, ಇದು ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳ ಪೈಕಿ ಅತ್ಯಂತ ಹೆಚ್ಚಿನ ಬಲಿದಾನವಾಗಿದೆ.