ರೋಗಿಗಳ ಜೊತೆ ಬೆಕ್ಕುಗಳ ಶಯನ! ಮಕ್ಕಳ ಪತ್ತೆಗೆ ಆಧಾರ್ ಕಾರ್ಡ್ ಸಹಾಯ
ಈರುಳ್ಳಿ ಬೆಲೆ ಕುಸಿತಕ್ಕೂ ಕಣ್ಣೀರು
ಈರುಳ್ಳಿ ಬೆಲೆ ಏರಿದರೆ ಬಳಕೆದಾರರ ಕಣ್ಣಲ್ಲಿ ನೀರು ಹೆಚ್ಚು ಇಳಿಯುತ್ತದೆ. ಈರುಳ್ಳಿ ಬೆಲೆ ಕುಸಿದರೆ ಕೃಷಿಕರ ಕಣ್ಣಲ್ಲಿ ನೀರು ಬರುತ್ತದೆ. ಏಶ್ಯಾದ ಬಹುದೊಡ್ಡ ಈರುಳ್ಳಿ ಮಾರ್ಕೆಟ್ ಮಹಾರಾಷ್ಟ್ರದ ಲಾಸಲ್‌ಗಾಂವ್ ಬಜಾರ್‌ನಲ್ಲಿ ಪ್ರತೀದಿನ ಸುಮಾರು ಒಂದು-ಒಂದೂ ಕಾಲು ಲಕ್ಷ ಕ್ವಿಂಟಲ್ ಈರುಳ್ಳಿ ಮಾರಲು ತರಲಾಗುತ್ತಿದೆ. ಆದರೆ ಅಲ್ಲಿ ಕಳೆದ ವಾರದ ಮಾರ್ಕೆಟ್ ರೇಟ್ ಪ್ರತೀ ಕ್ವಿಂಟಲ್‌ಗೆ 600 ರಿಂದ 700 ರೂಪಾಯಿ.! ಕೃಷಿಕರ ಖರ್ಚು ಇದಕ್ಕಿಂತ ಹೆಚ್ಚು. ಇನ್ನು ಲಾಭದ ಸಂಗತಿ ಎಲ್ಲಿ? ಕೃಷಿಕರ ಪ್ರತಿನಿಧಿ ಮಂಡಲ ಮೊನ್ನೆ ಮುಂಬಯಿಗೆ ಬಂದು ಮುಖ್ಯಮಂತ್ರಿ ಫಡ್ನವೀಸ್‌ರನ್ನು ಭೇಟಿಯಾಗಿ ಈರುಳ್ಳಿ ದರ ತೀವ್ರ ಇಳಿಕೆಯಾಗುತ್ತಿರುವ ಬಗ್ಗೆ ನಮಗೆ ತೀವ್ರ ನಷ್ಟವಾಗುತ್ತಿದೆ. ಏನಾದರೂ ಪರಿಹಾರ ಹುಡುಕಿ ಎಂದು ಮನವಿ ಮಾಡಿದರು.
ದೇಶಾದ್ಯಂತ ಈರುಳ್ಳಿ ವ್ಯಾಪಾರಿಗಳು ಲಾಸಲ್‌ಗಾಂವ್‌ಗೆ ಬಂದು ಈರುಳ್ಳಿ ಖರೀದಿಸುತ್ತಾರೆ. ಲಾಸಲ್‌ಗಾಂವ್ ಕೃಷಿ ಉತ್ಪನ್ನ ಬಜಾರ್ ಸಮಿತಿಯ ಸಭಾಪತಿ ಜಯದತ್ತ ಹೋಲ್ಕರ್ ಹೇಳುತ್ತಾರೆ, ‘‘ಕಳೆದ ಮೂರು-ನಾಲ್ಕು ತಿಂಗಳಲ್ಲಿ ಈರುಳ್ಳಿ ಬೆಲೆ ಕುಸಿಯುತ್ತಲೇ ಇದೆ. ಇಂದು ರಖಂ ಮಾರುಕಟ್ಟೆಯಲ್ಲಿ ಕಿಲೋಗೆ ಆರೇಳು ರೂಪಾಯಿ ಈರುಳ್ಳಿ ಬೆಲೆ ಇದೆ. ಆದರೆ ರೈತರಿಗೆ ಈರುಳ್ಳಿ ಬೆಳೆ ಬೆಳೆಸಲು ಕಿಲೋಗೆ 9 ರೂ. ಖರ್ಚು ಬರುತ್ತಿದೆ. ಹೀಗಾಗಿ ರೈತರಿಗೆ ತೀವ್ರ ನಷ್ಟ ಉಂಟಾಗುತ್ತಿದೆ.’’
ಇದೀಗ ಕೃಷಿಕರ ಪ್ರತಿನಿಧಿ ಮಂಡಲವು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ನಂತರ ಎರಡು ವಿಷಯಗಳ ಚರ್ಚೆ ಆಗಿದೆ. ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಸರಕಾರ ಕನಿಷ್ಠ ಖರೀದಿ ದರವನ್ನು ಘೋಷಿಸಬೇಕು. ಹಾಗೂ ಈರುಳ್ಳಿ ರಫ್ತುನ್ನು ಹೆಚ್ಚಿಸಲು ಸರಕಾರ ಸಬ್ಸಿಡಿ ನೀಡಬೇಕು. ಆಗ ರಫ್ತು ಹೆಚ್ಚಾಗಿ ಇದರ ಬೇಡಿಕೆಯೂ ಏರಲಿದೆ. ಸದ್ಯ ಸರಕಾರಿ ಏಜನ್ಸಿ ನಾಫೆಡ್ ಈರುಳ್ಳಿ ಖರೀದಿಸುತ್ತಿದೆ. ಅದು ಬಹಿರಂಗ ಮಾರುಕಟ್ಟೆಯಲ್ಲಿ ಖರೀದಿಸುವುದರಿಂದ ಕೃಷಿಕರಿಗೆ ಲಾಭ ಆಗುತ್ತಿಲ್ಲ. ಈರುಳ್ಳಿ ಬೆಲೆ 1,800 -2,000 ರೂಪಾಯಿ ಪ್ರತಿ ಕ್ವಿಂಟಾಲ್ ತಲುಪಿದಾಗ ಸರಕಾರ ಎಚ್ಚೆತ್ತು ಕ್ರಮ ಕೈಗೊಳ್ಳುತ್ತದೆ. ಈಗ ಬೆಲೆ ಇಳಿದಾಗ ಯಾಕೆ ಸುಮ್ಮನಿದೆ? ಎನ್ನುತ್ತಾರೆ ರೈತರು.
* * *
ರೋಗಿಗಳ ಜೊತೆ ಮಲಗುವ ಬೆಕ್ಕುಗಳು!
ಮುಂಬೈ ಸರಕಾರಿ ಆಸ್ಪತ್ರೆಗಳಲ್ಲಿ ಶುಶ್ರೂಷೆಗಾಗಿ ಭರ್ತಿಗೊಳ್ಳುತ್ತಿರುವ ರೋಗಿಗಳಿಗೆ ಆಸ್ಪತ್ರೆಯ ಔಷಧಿ-ಇಂಜೆಕ್ಷನ್‌ಗಳ ಜೊತೆ ಬೆಕ್ಕುಗಳ ಓವರ್ ಡೋಸ್ ಕೂಡಾ ಸಿಗುತ್ತಿದೆ! ಈ ಸರಕಾರಿ ಆಸ್ಪತ್ರೆಗಳಲ್ಲಿ ಬೆಕ್ಕುಗಳ ಆತಂಕದಿಂದ ರೋಗಿಗಳು ಪರದಾಡುವಂತಾಗಿದೆ. ಈ ಬೆಕ್ಕುಗಳು ಯಾವ ಭಯವೂ ಇಲ್ಲದೆ ಕೆಲವೊಮ್ಮೆ ರೋಗಿಗಳ ಬೆಡ್‌ಗಳಲ್ಲೇ ಮಲಗುತ್ತಿವೆ. ಈಗ ಬೆಕ್ಕುಗಳ ಭಯದ ಕಾರಣ ಆಸ್ಪತ್ರೆಗಳು ಮಹಾನಗರ ಪಾಲಿಕೆಯ ಪಬ್ಲಿಕ್ ಹೆಲ್ತ್ ಡಿಪಾರ್ಟ್‌ಮೆಂಟ್‌ಗೆ ಇದರ ಬಗ್ಗೆ ಪತ್ರ ಬರೆದು ಬೆಕ್ಕುಗಳಿಂದ ಮುಕ್ತರಾಗಿಸುವಂತೆ ವಿನಂತಿಸಿದೆ.
ಮನಪಾದ ಮುಖ್ಯ ಆಸ್ಪತ್ರೆಗಳ ಡೈರೆಕ್ಟರ್ ಮತ್ತು ಕೆಇಎಂ ಆಸ್ಪತ್ರೆಯ ಡೀನ್ ಡಾ. ಅವಿನಾಶ್ ಸೂಪೆ ತಿಳಿಸಿದಂತೆ ಈ ವಿಷಯದಲ್ಲಿ ಆರೋಗ್ಯ ವಿಭಾಗದ ಇಎಚ್‌ಒ ಅವರಿಗೆ ದೂರು ನೀಡಲಾಗಿದೆ. ಆದರೆ ಇಎಚ್‌ಒ ಡಾ. ಪದ್ಮಜಾ ಕೇಸ್ಕರ್‌ರವರು, ‘‘ನಮ್ಮ ಬಳಿ ಬೆಕ್ಕುಗಳ ನಿಯಂತ್ರಣಕ್ಕಾಗಿ ಯಾವುದೇ ಪ್ರತ್ಯೇಕ ಕಾರ್ಯಕ್ರಮಗಳು ಇಲ್ಲ’’ ಎಂದು ಹೇಳುತ್ತಾರೆ.
ಆಸ್ಪತ್ರೆಗಳ ಈ ಬೆಕ್ಕುಗಳಿಗೆ ನಾನ್‌ವೆಜ್ ಇಷ್ಟವಂತೆ. ಮಧ್ಯಾಹ್ನ ಊಟದ ಸಮಯ ಕೆಇಎಂ ಆಸ್ಪತ್ರೆಯಂತಹ ಪ್ರಮುಖ ಆಸ್ಪತ್ರೆಗಳಲ್ಲಿ ಎಲ್ಲ ಕಡೆಗಳಲ್ಲೂ ಬೆಕ್ಕುಗಳನ್ನು ಕಾಣಬಹುದಾಗಿದೆ. ಸಯನ್ ಆಸ್ಪತ್ರೆಯಲ್ಲೂ ಇದೇ ದೃಶ್ಯವಿದೆ. ರಾತ್ರಿಗಂತೂ ಇವುಗಳ ಜಗಳ ಇನ್ನಷ್ಟು ಕಿರಿಕಿರಿಗೆ ಕಾರಣವಾಗಿವೆ.
* * *
ಎಫ್‌ಐಆರ್ ವೆಬ್‌ಸೈಟ್‌ಗೆ ಹಾಕಬೇಕು!
ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಿರುವ ಪ್ರತಿಯನ್ನು ಪಡೆಯುವುದಕ್ಕೆ ದೂರುದಾರರಿಗೆ ಹೇಗೂ ಕಷ್ಟವಿದೆ. ಆದರೆ ಆರೋಪಿಗಂತೂ ಅದರ ಪ್ರತಿ ಪಡೆಯುವುದಕ್ಕೆ ಇನ್ನೂ ಕಠಿಣವಿರುತ್ತದೆ. ಎಫ್‌ಐಆರ್‌ನಲ್ಲಿ ಏನು ಕಾರ್ಯಾಚರಣೆ ನಡೆಯುತ್ತಿದೆ, ಅಥವಾ ಅದರ ವಿಷಯ ಸಾಮಾಗ್ರಿ ಏನಿದೆ? ಅದರಲ್ಲಿ ಯಾವ್ಯಾವ ಕಲಂ ತುಂಬಿಸಿದ್ದಾರೆ.... ಇತ್ಯಾದಿ ಮಾಹಿತಿಗಳನ್ನು ಪಡೆಯುವುದು ವರ್ತಮಾನ ಸ್ಥಿತಿಯಲ್ಲಿ ಬಹಳ ಪರದಾಡಬೇಕಾಗಿದೆ. ಈ ಎಲ್ಲ ಕಷ್ಟ ಸಂಗತಿಗಳನ್ನು ಗಮನದಲ್ಲಿರಿಸಿ ವಕೀಲರ ಒಂದು ಗುಂಪು ಬಾಂಬೆ ಹೈಕೋರ್ಟ್‌ನಲ್ಲಿ ಜನಹಿತ ಅರ್ಜಿ ದಾಖಲಿಸಿದೆ. ಅದರಲ್ಲಿ ಪೊಲೀಸರು ಎಫ್‌ಐಆರ್ ಪ್ರತಿಯನ್ನು ತಮ್ಮ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಆರೋಪಿಗೆ ಕೋರ್ಟ್ ವ್ಯವಹಾರದಲ್ಲಿ ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಅರ್ಜಿ ಸಲ್ಲಿಸುವುದಿದ್ದರೆ ಆತನಿಗೂ ಎಫ್‌ಐಆರ್ ಪ್ರತಿ ಸಿಗಬೇಕು. ಹೀಗಾಗಿ ಪೊಲೀಸರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.
ಪೊಲೀಸರು ಆರೋಪಿಗೆ ಎಫ್‌ಐಆರ್ ಪ್ರತಿ ನೀಡುವುದಿಲ್ಲ. ಅದನ್ನು ಸಂಬಂಧಿಸಿದ ಕೋರ್ಟ್‌ನಿಂದ ಪಡೆಯಬೇಕಾಗುತ್ತದೆ. ಅನೇಕ ಪ್ರಕರಣಗಳಲ್ಲಿ ಪೊಲೀಸರು ಎಫ್‌ಐಆರ್ ಕೋರ್ಟ್‌ಗೆ ಕಳುಹಿಸಲಾಗಿದೆ ಎನ್ನುತ್ತಾರೆ. ಆದರೆ ಅನೇಕ ಸಲ ಕೋರ್ಟ್ ಕೂಡಾ ಪೊಲೀಸರು ಮೂಲ ದಸ್ತಾವೇಜು ಈ ತನಕವೂ ಸಲ್ಲಿಸಿಲ್ಲ ಎಂದು ಹೇಳಿ ನಿರಾಕರಿಸುವುದಿದೆ. ಹೀಗಾಗಿ ಅನೇಕ ಬಾರಿ ಎಫ್‌ಐಆರ್ ಪ್ರತಿ ಪಡೆಯಲು ಆರೋಪಿ - ಮತ್ತಿತರರು ಓಡಾಟ ನಡೆಸಬೇಕಾಗಿದೆ.
ಈ ಅರ್ಜಿಯನ್ನು ರಾಜೇಶ್ ಖೋಬ್ರಗಡೆ, ಜಯೇಶ್ ಖೋಬ್ರಗಡೆ ಮತ್ತು ಪುಷ್ಕರ್ ವರ್ಮಾ ಎಂಬವರು ಸಲ್ಲಿಸಿದ್ದಾರೆ. ಈ ಜನಹಿತ ಅರ್ಜಿಯ ಬಗ್ಗೆ ಜೂನ್ 10ರಂದು ವಿಚಾರಣೆ ನಡೆಯಲಿದೆ. ವಕೀಲರು ಇಲ್ಲಿ ಹಿಮಾಚಲ ಪ್ರದೇಶದ ಇತ್ತೀಚಿನ ತೀರ್ಪನ್ನು ಆಧಾರವಾಗಿಸಿದ್ದಾರೆ. ಅದರಲ್ಲಿ ಆರೋಪಿಗೆ ಎಫ್‌ಐಆರ್‌ನ ಪ್ರತಿ ಪಡೆಯಲು ಹಕ್ಕು ಇದೆ. ಆರೋಪಿಯ ಎಫ್‌ಐಆರ್ ಪ್ರತಿಯನ್ನು 24 ಗಂಟೆಗಳೊಳಗೆ ವೆಬ್‌ಸೈಟ್‌ನಲ್ಲಿ ಪೊಲೀಸರು ಅಪ್‌ಲೋಡ್ ಮಾಡಬೇಕು ಎಂದಿದ್ದರು.
ಆದರೆ ಎಫ್‌ಐಆರ್ ಇಲ್ಲಿ ಮರಾಠಿಯಲ್ಲಿ ಬರೆಯುತ್ತಾರೆ. ಹೀಗಾಗಿ ದೂರುದಾರರು ಬೇರೆ ಭಾಷೆಯವರಾಗಿದ್ದರೆ ಅವರಿಗೆ ಅರ್ಥೈಸಲು ಕಷ್ಟವಿದೆ.
* * *
ಪೊಲೀಸ್ ಸುರಕ್ಷೆಯ ಮರುಸಮೀಕ್ಷೆ
ಮಹಾರಾಷ್ಟ್ರ ಸರಕಾರ ಮತ್ತು ಮುಂಬೈ ಪೊಲೀಸರು ಮುಂಬೈಯ ಅನೇಕ ಗಣ್ಯರಿಗೆ ನೀಡಲಾಗಿರುವ ಪೊಲೀಸ್ ಸುರಕ್ಷೆಯನ್ನು ವಾಪಾಸು ಪಡೆದಿದ್ದಾರೆ. ಇವರಲ್ಲಿ ಅನೇಕ ಉದ್ಯಮಿ, ವ್ಯಾಪಾರಿ, ಬಾಲಿವುಡ್ ಮತ್ತು ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಜನರಿದ್ದಾರೆ. ಪೊಲೀಸ್ ಕಮಿಶನರ್ ಆಫೀಸ್ ಮತ್ತು ಮಹಾರಾಷ್ಟ್ರ ಸರಕಾರ ಸಮಯ ಸಮಯಕ್ಕೆ ಪೊಲೀಸರು ನೀಡಿದ ಸುರಕ್ಷೆಯನ್ನು ಸಮೀಕ್ಷೆ ಮಾಡುತ್ತದೆ ಹಾಗೂ ಯಾರಿಗೆ ಅಗತ್ಯವಿಲ್ಲವೋ ಅವರ ಸುರಕ್ಷೆಯನ್ನು ವಾಪಾಸ್ ಪಡೆಯುತ್ತದೆ. ಕೆಲವರಿಗೆ ಜೆಡ್‌ಪ್ಲಸ್‌ನ್ನು ತೆಗೆದು ಜೆಡ್ ಶ್ರೇಣಿಯನ್ನು ನೀಡಲಾಗಿದೆ. ಕೆಲವು ದಿನಗಳ ಹಿಂದೆ ಮುಂಬೈಯ ಮಾಜಿ ಕಮಿಶನರ್ ರಾಕೇಶ್ ಮಾರಿಯಾ ಅವರ (ಶೀನಾ ಬೋರಾ ಹತ್ಯಾಕಾಂಡವನ್ನು ತನಿಖೆ ನಡೆಸಿದ್ದರು.) ಸುರಕ್ಷಾ ವ್ಯವಸ್ಥೆಯನ್ನು ಜೆಡ್-ಪ್ಲಸ್ ಕೆಟಗರಿಯಿಂದ ತೆಗೆದು ಜೆಡ್ ಸುರಕ್ಷೆಗೆ ಬದಲಾಯಿಸಲಾಗಿದೆ. ಮಾರಿಯಾ ಅವರು ಸದ್ಯ ಹೋಮ್‌ಗಾರ್ಡ್ ಮುಖ್ಯಸ್ಥರಾಗಿದ್ದಾರೆ.
ಹೋಮ್ ಡಿಪಾರ್ಟ್‌ಮೆಂಟ್ ರಚಿಸಿದ ಒಂದು ವಿಶೇಷ ಸಮಿತಿ ಈ ಬಗ್ಗೆ ಯಾವುದಾದರೂ ನಿರ್ಣಯ ಪಡೆದಾಗ ಪೊಲೀಸ್ ಕಮಿಷನರ್ ಈ ಬಗ್ಗೆ ಮುಂದುವರಿಯುತ್ತಾರೆ. ಯಾರಿಗೆ ಕೊಡಬೇಕು, ಅಥವಾ ಯಾರ ಸುರಕ್ಷೆ ವಾಪಾಸ್ ಪಡೆಯಬೇಕು ಎನ್ನುವ ಬಗ್ಗೆ ಯಾವುದೇ ನಿರ್ದಿಷ್ಟ ನಿಯಮಾವಳಿ ಇಲ್ಲ. ಆದರೆ ಇದು ಸರಕಾರದ ವಿಶೇಷಾಧಿಕಾರ ಆಗಿದೆ. ಈ ವರ್ಷದ ಆರಂಭದಲ್ಲೆ ಬಾಲಿವುಡ್‌ನ ಟಾಪ್ 25 ಸೆಲಿಬ್ರಿಟಿಗಳ ಸುರಕ್ಷೆ ಕಡಿತಗೊಳಿಸಿತ್ತು. ಅನೇಕ ಬಾರಿ ಕೆಲವರು ಪೊಲೀಸ್ ಸುರಕ್ಷೆಯನ್ನು ದುರುಪಯೋಗಗೊಳಿಸಿದ ಘಟನೆಗಳೂ ನಡೆದಿವೆ. ವಿವಿಐಪಿ ಮತ್ತು ಸೆಲೆಬ್ರಿಟಿಗಳ ಸುರಕ್ಷಾ ವ್ಯವಸ್ಥೆಗೆಂದೇ ಮುಂಬೈಯ ಅಧಿಕಾಂಶ ಪೊಲೀಸರು ಇರುವುದರಿಂದ ನಾಗರಿಕರ ಸುರಕ್ಷಾ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. * * *
ಆಧಾರ್ ಕಾರ್ಡ್‌ಗೆ ಅಧಿಕಾರಿಗಳ ಸಹಾಯ ಕೋರಿಕೆ
ದೇಶಾದ್ಯಂತ ಇತ್ತೀಚೆಗೆ ಮಕ್ಕಳು ಕಾಣೆಯಾಗುತ್ತಿರುವ ಅಂಕಿಅಂಶಗಳು ಏರುತ್ತಿವೆ. ಇದನ್ನು ಮುಂದಿಟ್ಟು ಮುಂಬೈ ಪೊಲೀಸರು ‘‘ಆಧಾರ್ ಕಾರ್ಡ್ ನ ಸಹಾಯದಿಂದ ಈ ಮಕ್ಕಳನ್ನು ಅವರವರ ಮನೆಗಳಿಗೆ ತಲುಪಿಸಲು ಸಾಧ್ಯವಾಗಬಹುದು. ಆದರೆ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಅಧಿಕಾರಿಗಳು ಈ ಮಕ್ಕಳ ಮಾಹಿತಿ ನೀಡಲು ತಯಾರಿಲ್ಲ.’’ ಎನ್ನುತ್ತಾರೆ
ಅಧಾರ್ ಕಾರ್ಡ್‌ನಲ್ಲಿ ಕಾಣೆಯಾದ ಮಕ್ಕಳ ಮನೆ ವಿಳಾಸದ ಜೊತೆ ಅವರ ಬೆರಳಚ್ಚುಗಳು ಇರುವುದರಿಂದ ಈ ಮಕ್ಕಳ ಮನೆ, ಊರು ಗುರುತಿಸಲು ನೆರವಾಗಲಿದೆ. ಯಾಕೆಂದರೆ ಅನೇಕ ಮಕ್ಕಳಿಗೆ ತಮ್ಮ ಮನೆಯ ವಿಳಾಸ ಹೇಳಲೂ ಗೊತ್ತಿರುವುದಿಲ್ಲ. ಹಾಗಾಗಿ ಪೊಲೀಸರಿಗೆ ಸಿಕ್ಕಿದರೂ ಅವರವರ ಮನೆಗೆ ತಲುಪಿಸುವುದಕ್ಕೆ ಕಷ್ಟವಾಗುತ್ತದೆಯಂತೆ. ಹೀಗಾಗಿ ಆಧಾರ್ ಕಾರ್ಡ್ ಅಧಿಕಾರಿಗಳಿಂದ ನಮಗೆ ನೆರವು ಸಿಕ್ಕಿದರೆ ನಾವು ಮಕ್ಕಳ ಬೆರಳಚ್ಚಿನ ಸಹಾಯದಿಂದ ಅವರವರ ಮನೆಯ ಮಾಹಿತಿ ಪಡೆಯಬಹುದು ಎನ್ನುತ್ತಾರೆ ಮುಂಬೈ ಪೊಲೀಸರು. ಮಾಜಿ ಐಪಿಎಸ್ ಅಧಿಕಾರಿ ವೈ.ಪಿ.ಸಿಂಗ್ ಹೇಳುತ್ತಾರೆ, ‘‘ಸಿಆರ್‌ಪಿಸಿಯ ಸೆಕ್ಷನ್ 91ರ ಪ್ರಕಾರ ಪೊಲೀಸರಿಗೆ ಎಲ್ಲಿಂದಲೂ ಮಾಹಿತಿ ಪಡೆಯಬಹುದಾದ ಅಧಿಕಾರವಿದೆ. ಒಂದು ವೇಳೆ ಆಧಾರ್ ಕಾರ್ಡ್ ಅಧಿಕಾರಿಗಳಿಂದ ಯಾವುದೇ ಮಾಹಿತಿ ಸಿಗದಿದ್ದರೆ ಪೊಲೀಸರು ಕೋರ್ಟ್ ಗೆ ತೆರಳಬಹುದು. ಹಾಗೂ ಅಂತಹ ಮಾಹಿತಿ ನೀಡದ ಅಧಿಕಾರಿಯ ಮೇಲೆ ಪ್ರಕರಣ ಕೂಡಾ ದಾಖಲಿಸಬಹುದಾಗಿದೆ.’’
* * *
ಈಗ ಮನಪಾ ಅಧಿಕಾರಿಗಳಿಗೂ ರಜೆ ಸಿಗುತ್ತಿಲ್ಲ!
ಮುಂಬೈ ಪೊಲೀಸರಿಗೆ ಹಬ್ಬ-ಹರಿದಿನಗಳಲ್ಲಿ ಅಥವಾ ಪ್ರಮುಖ ಸಮಾರಂಭಗಳ ಸಂದರ್ಭದಲ್ಲಿ ರಜೆ ಸಿಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ಮಳೆಗಾಲದ ತೊಂದರೆಗಳನ್ನು ಎದುರಿಸಲು ಮುಂಬೈ ಮಹಾನಗರ ಪಾಲಿಕೆ ಸರ್ವ ಸಿದ್ಧತೆಗಳಲ್ಲಿ ತೊಡಗಿರುವ ಕಾರಣ ತನ್ನ ಅಧಿಕಾರಿಗಳಿಗೆ ರಜೆಯನ್ನು ರದ್ದುಗೊಳಿಸಿದೆ!
ಮಳೆಗಾಲದ ಪೂರ್ವ ಸಿದ್ಧತೆಗಳಲ್ಲಿ ಈಗಾಗಲೇ ಮನಪಾ ಬ್ಯುಸಿಯಾ ಗಿದ್ದು ಈ ಬಾರಿಯಾದರೂ ಆರೋಪಗಳು ಬಾರದಂತೆ ಕೆಲಸ ಮಾಡುತ್ತಿದೆ. ಮುಖ್ಯವಾಗಿ ನಾಲೆ, ಗಟಾರಗಳು ಸ್ವಚ್ಛವಾದರೆ ಮುಂಬೈಗೆ ಪ್ರವಾಹದ ಭೀತಿ ಇರುವುದಿಲ್ಲ ಎನ್ನುವುದು ಸಾಮಾನ್ಯ ನಂಬಿಕೆ. ಈ ಕಾರಣದಿಂದ ಮಹಾನಗರ ಪಾಲಿಕೆಯ ಡೆಪ್ಯುಟಿ ಮುನ್ಸಿಪಲ್ ಕಮಿಷನರ್ ಮತ್ತು ಎಲ್ಲ ಅಸಿಸ್ಟೆಂಟ್ ಕಮಿಷನರ್‌ಗೆ ಜೂನ್ ತನಕ ರಜೆಯನ್ನೂ ರದ್ದು ಗೊಳಿಸಿದೆ. ಅಧಿಕಾರಿಗಳಿಗೆ ಶನಿವಾರ ಮತ್ತು ರವಿವಾರ ಕೂಡಾ ಕೆಲಸ ಮಾಡುವಂತೆ ಆದೇಶ ಬಂದಿದೆ.