ಮೋದಿ ಪ್ರಧಾನಿ; ಚಕ್ರವರ್ತಿಯಲ್ಲ- ಸೋನಿಯಾ ಅಣಕ
ಹೊಸದಿಲ್ಲಿ, ಮೇ 31: ಎರಡು ವರ್ಷ ಅಧಿಕಾರ ಪೂರ್ಣಗೊಳಿಸಿದ ಎನ್ಡಿಎ ಸರಕಾರದ ಮೇಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೋದಿ ಚಕ್ರವರ್ತಿಯಂತೆ ವರ್ತಿಸುತ್ತಿದ್ದಾರೆ. ಕಳೆದ ವಾರ ಇಂಡಿಯಾ ಗೇಟ್ನಲ್ಲಿ ನಡೆದ ಷೋ ಅನೈತಿಕ. ಇಂಥ ಬೂಟಾಟಿಕೆಯನ್ನು ನಾನು ಜೀವಮಾನದಲ್ಲೇ ನೋಡಿಲ್ಲ ಎಂದು ಕಿಡಿ ಕಾರಿದ್ದಾರೆ.
ಪ್ರಧಾನಿ ಪ್ರಧಾನಿಯಾಗಿಯೇ ಇರಬೇಕು; ಚಕ್ರವರ್ತಿಯಾಗಿ ಅಲ್ಲ. ದೇಶದಲ್ಲಿ ಬಡತನ ಕಿತ್ತು ತಿನ್ನುವಂತಿದೆ; ಬರಗಾಲ ತಾಂಡವವಾಡುತ್ತಿದೆ; ರೈತರು ಸಂಕಷ್ಟದಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅಂಥ ಅದ್ದೂರಿ ಸಮಾರಂಭ ಏರ್ಪಡಿಸುವುದು ಉಚಿತವಲ್ಲ ಎಂದು ಸ್ವಕ್ಷೇತ್ರ ರಾಯಬರೇಲಿಗೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ ಸೋನಿಯಾ ಟೀಕಿಸಿದರು.
ಎನ್ಡಿಎ ಸರಕಾರ ಎರಡು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಇಂಡಿಯಾ ಗೇಟ್ ಬಳಿ ಶನಿವಾರ ಆಯೋಜಿಸಿದ್ದ ಅದ್ದೂರಿ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಭಾಗವಹಿಸಿದ್ದಲ್ಲದೇ, 21 ಮಂದಿ ಸಚಿವರು ತಮ್ಮ ಸಾಧನೆಗಳನ್ನು ಪ್ರದರ್ಶಿಸಿದ್ದರು. ಬಾಲಿವುಡ್ ನಟ- ನಟಿಯರು, ಉದ್ಯಮಿಗಳು ಕೂಡಾ ಭಾಗವಹಿಸಿ, ಸರಕಾರದ ಸಾಮಾಜಿಕ ಯೋಜನೆಗಳನ್ನು ಹಾಡಿ ಹೊಗಳಿದ್ದರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮೋದಿಯವರನ್ನು ಟೀಕಿಸಿ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಸರಕಾರ ಸಂಭ್ರಮಾಚರಣೆಯಲ್ಲಿದೆ ಎಂದು ಹೇಳಿದ್ದರು.
ಕೇಂದ್ರದ ಸಚಿವರು ಮೋದಿಗೆ ಚಕ್ರವರ್ತಿ ಪಟ್ಟ ಕಟ್ಟಿದ್ದಾರೆ ಎಂದು ಸೋನಿಯಾ ಲೇವಡಿ ಮಾಡಿದ್ದಾರೆ.