ರಾಜ್ಯಸಭಾ ಚುನಾವಣೆಯೂ ರಾಜಕೀಯ ಪಕ್ಷಗಳ ಅವಕಾಶವಾದಿತನವೂ!
ರಾಜಕಾರಣ ಎನ್ನುವುದು ಸಮಯಸಾಧಕತನದ ಪರಮಾವಧಿಗೆ ತಲುಪಿದಾಗ ಆಗಬಹುದಾದ ಅನಾಹುತಗಳಿವತ್ತು ಕರ್ನಾಟಕದಲ್ಲಿ ಆಗುತ್ತಿವೆ. ಜನಪರವಾಗಿ ಕೆಲಸ ಮಾಡಬೇಕಾದ ರಾಜ್ಯ ಸರಕಾರಗಳು ಕೇಂದ್ರದಲ್ಲಿ ತಮ್ಮ ಧ್ವನಿಯನ್ನು ಎತ್ತಲೆಂದು ಹಾಗೂ ತಮ್ಮ ರಾಜ್ಯಗಳ ಹಿತಾಸಕ್ತಿ ಕಾಪಾಡಲೆಂದೆ ಪ್ರತಿ ರಾಜ್ಯಕ್ಕ್ಕೂ ನಿಗದಿತ ಸಂಖ್ಯೆಯ ರಾಜ್ಯಸಭಾ ಸ್ಥಾನಗಳನ್ನು ನೀಡಿದ್ದು. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ ರಾಜಕೀಯ ಪಕ್ಷಗಳು ತಮ್ಮ ವ್ಯಾವಹಾರಿಕ ಹಿತ ಸಾಧಿಸಲು, ಅನ್ಯಪಕ್ಷಗಳಿಗೆ ಪಾಠ ಕಲಿಸಲು, ರಾಜಕೀಯ ದ್ವೇಷ ಸಾದಿಸಲು ಈ ರಾಜ್ಯಸಭಾ ಚುನಾವಣೆಗಳನ್ನು ಬಳಸಿಕೊಳ್ಳುತ್ತಿವೆ. ಇವತ್ತು ಈ ಚುನಾವಣೆಗಳು ಹಣವಂತರ ಮತ್ತು ಹಿಂಬಾಗಿಲಿಂದ ರಾಜಕೀಯ ಮಾಡುವ ಪವರ್ ಬ್ರೋಕರ್‌ಗಳ ರಾಜಕೀಯದಾಟಕ್ಕೆ ರಹದಾರಿಯಾಗಿಬಿಟ್ಟಿವೆ. ಇದು ಅರ್ಥವಾಗಬೇಕೆಂದರೆ ಕರ್ನಾಟಕಕ್ಕೆ ಬರೋಣ:
ಕರ್ನಾಟಕದಿಂದ ಈ ಬಾರಿ ಮೂರು ಜನ ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸಬಹುದಾಗಿದೆ. ನಮ್ಮ ವಿಧಾನಸಭೆಯ ಒಟ್ಟು ಬಲ 224. ಒಬ್ಬ ಅಭ್ಯರ್ಥಿ ಗೆಲ್ಲಲು ಪ್ರಥಮ ಪ್ರಾಶಸ್ತ್ಯದ 45 ಮತಗಳು ಬೇಕಾಗಿದ್ದು, ಕಾಂಗ್ರೆಸ್ 123 ಸದಸ್ಯರನ್ನು ಹೊಂದಿದ್ದು ತಾನು ಇಬ್ಬರು ಸದಸ್ಯರನ್ನು ಯಾವ ಅಡೆತಡೆಯೂ ಇಲ್ಲದೆ ಕಳಿಸಲು ಶಕ್ತವಾಗಿದೆ. ಇಬ್ಬರು ಸದಸ್ಯರು ಗೆದ್ದ ನಂತರವೂ ಅದರ ಬಳಿ 33 ಮತಗಳು ಹೆಚ್ಚುವರಿಯಾಗಿ ಉಳಿಯುತ್ತವೆ. ಈ ಹೆಚ್ಚುವರಿಯಾಗಿ ಉಳಿಯುವ ಮತಗಳಿಂದ ಮೂರನೆ ಅಭ್ಯರ್ಥಿ ಗೆಲ್ಲಲು ಸಾಧ್ಯವೇ ಇಲ್ಲ. ಇದು ಒಂದು ಕಡೆಯಾದರೆ ವಿಧಾನಸಭೆಯಲ್ಲಿ ಭಾಜಪದ 44 ಸದಸ್ಯರಿದ್ದು, ಇನ್ನೂ ಕೆ.ಜೆ.ಪಿ.ಯಲ್ಲಿ ಗುರುತಿಸಿಕೊಂಡಿರುವ ಒಬ್ಬರು, ಬಿ.ಎಸ್.ಆರ್.ಕಾಂಗ್ರೆಸ್‌ನ ಇಬ್ಬರು ಸೇರಿದರೆ ಭಾಜಪದ ಒಟ್ಟು ಮತಗಳ ಸಂಖ್ಯೆ 47ಕ್ಕೆ ಏರುತ್ತದೆ. ಇದರಿಂದಾಗಿ ಅದು ಸಹ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡ ನಂತರವೂ 2 ಹೆಚ್ಚುವರಿ ಮತಗಳನ್ನು ಉಳಿಸಿಕೊಳ್ಳಬಹುದಾಗಿದೆ. ಇನ್ನು ಜೆ.ಡಿ.ಎಸ್. ವಿಷಯಕ್ಕೆ ಬಂದರೆ ವಿಧಾನಸಭೆಯಲ್ಲಿ ಅದರ ಬಲ 40 ಇದ್ದು ಅದಕ್ಕೆ ಒಬ್ಬ ಅಭ್ಯರ್ಥಿಯನ್ನೂ ಗೆಲ್ಲಿಸಿಕೊಳ್ಳಲು ಅಗತ್ಯವಾದ ಸದಸ್ಯಬಲವಿಲ್ಲ. ಆದರೂ ಅದು ಐವರು ಪಕ್ಷೇತರರನ್ನು ನಂಬಿಕೊಂಡು ಫಾರೂಕ್ ಎಂಬ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ನಮ್ಮ ರಾಜಕೀಯ ಪಕ್ಷಗಳ ಅವಕಾಶವಾದಿ ರಾಜಕೀಯದ ಸಂಚು ಇರುವುದು ಇಲ್ಲಿಯೇ. ಕರ್ನಾಟಕ ಮಕ್ಕಳ ಪಕ್ಷದ ಒಬ್ಬರು, ಸರ್ವೋದಯ ಪಕ್ಷದ ಒಬ್ಬರು, ಕರ್ನಾಟಕ ಜನತಾಪಕ್ಷದ ಒಬ್ಬರು, ನಾಮಕರಣಗೊಂಡ ಒಬ್ಬ ಸದಸ್ಯರು, ಹಾಗೂ 9 ಜನ ಪಕ್ಷೇತರರು ಸೇರಿದಂತೆ ಇತರರ ಒಟ್ಟು ಬಲ 13 ಇದ್ದು, ಈ ಹದಿಮೂರು ಜನರೇ ಈ ಚುನಾವಣೆಯಲ್ಲಿ ಮೂರನೆ ಅಭ್ಯರ್ಥಿಯ ಗೆಲುವಿಗೆ ಒಂದಲ್ಲ್ಲ ಒಂದು ರೀತಿಯಲ್ಲಿ ಕಾರಣವಾಗಲಿದ್ದಾರೆ.
ಕೇವಲ 33 ಹೆಚ್ಚುವರಿ ಮತಗಳನ್ನು ಹೊಂದಿರುವ ಕಾಂಗ್ರೆಸ್ ಯಾವ ಧೈರ್ಯದ ಮೇಲೆ ಮೂರನೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆಯೆಂದು ಸೂಕ್ಷ್ಮವಾಗಿ ಅವಲೋಕಿಸಿದರೆ ಅದರ ರಾಜಕೀಯದ ಚದುರಂಗದಾಟ ಅರ್ಥವಾಗುತ್ತದೆ. ಅದು ಒಂಬತ್ತು ಜನ ಪಕ್ಷೇತರರ ಜೊತೆ ಐದು ಜನ ಜನತಾದಳದ ಸದಸ್ಯರನ್ನು ನಂಬಿಕೊಂಡಿದೆ. ಜನತಾದಳದ ಒಂದಷ್ಟು ಭಿನ್ನಮತೀಯ ಸದಸ್ಯರು ಕಾಂಗ್ರೆಸ್‌ಗೆ ಅಡ್ಡಮತದಾನ ಮಾಡುವ ಮೂಲಕ ಕಾಂಗ್ರೆಸ್‌ನ ಮೂರನೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್‌ನದು. ಜೊತೆಗೆ ತಾನು ಅಧಿಕಾರದಲ್ಲಿರುವುದರಿಂದ ಇತರ ಸಣ್ಣಪಕ್ಷಗಳ ಸದಸ್ಯರನ್ನು ಆಮಿಷಕ್ಕೊಳಪಡಿಸಬಹುದೆಂದು ಲೆಕ್ಕಾಚಾರವೂ ಅದಕ್ಕಿದೆ. ಜನತಾದಳವನ್ನು ಇನ್ನಷ್ಟು ದುರ್ಬಲಗೊಳಿಸಿ ತಾನು ಬಲಶಾಲಿಯಾಗಬಹುದೆಂಬುದು ಕಾಂಗ್ರೆಸ್‌ನ ಈತಂತ್ರದ ಮೂಲ ಮಂತ್ರವಾಗಿದೆ. ಕಾಂಗ್ರೆಸ್‌ನ ಈ ತಂತ್ರಗಾರಿಕೆಗೆ ತಿರುಗೇಟು ನೀಡಲೆಂದೆ ಜನತಾದಳ ತನಗಿರುವ ಮಿತಿಯನ್ನು ತಿಳಿದಿದ್ದರೂ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ತನ್ನ ಸದಸ್ಯರಿಗೆ ಅಡ್ಡಮತದಾನದ ಪರಿಣಾಮ ತೀವ್ರವಾಗಿರುತ್ತದೆಯೆಂದು ಎಚ್ಚರಿಕೆ ನೀಡಿದೆ. ಹೀಗೆ ಜನತಾದಳದ ಬಲ ಕುಗ್ಗಿಸಲು ಕಾಂಗ್ರೆಸ್, ಕಾಂಗ್ರೆಸ್‌ಗೆ ಪಾಠ ಕಲಿಸಲು ಜನತಾದಳ ಕೂಡ ಅವಕಾಶವಾದಿ ರಾಜಕಾರಣ ಮಾಡುತ್ತ ಪರೋಕ್ಷವಾಗಿ ಭಾಜಪಕ್ಕೆ ನೆರವಾಗುತ್ತಿವೆ.
ಇವೆಲ್ಲದರ ನಡುವೆ ಪರರಾಜ್ಯದಿಂದ ತನ್ನ ಅಭ್ಯರ್ಥಿಯನ್ನು ಆಮದು ಮಾಡಿಕೊಂಡಿರುವ ಭಾಜಪ ಉಳಿದೆರಡೂ ಪಕ್ಷಗಳ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ತನ್ನ ದಾಳ ಉರುಳಿಸಲು ಕಾಯುತ್ತಿದೆ. ಕಾಂಗ್ರೆಸ್ ಮತ್ತು ದಳಳ ರಾಜಕಾರಣ ಒಂದು ಬಗೆಯದಾದರೆ ಭಾಜಪ ರಾಷ್ಟ್ರವಾದಿ ಅವಕಾಶವಾದಿ ರಾಜಕಾರಣ ಮಾಡಹೊರಟಿದೆ. ಕಳೆದ ನಾಲ್ಕು ಅವಧಿಗೆ ರಾಜ್ಯಸಭೆಗೆ ಇಲ್ಲಿಂದ ಆಯ್ಕೆಯಾಗಿದ್ದ ಆಂಧ್ರಪ್ರದೇಶದ ವೆಂಕಯ್ಯನಾಯ್ಡುರವರನ್ನು ಮತ್ತೊಂದು ಅವಧಿಗೆ ನಿಲ್ಲಿಸಲು ಸಿದ್ದವಾಗಿದ್ದರೂ, ಪಕ್ಷಾಧ್ಯಕ್ಷ ಯಡಿಯೂರಪ್ಪನವರ ವಿರೋಧದ ಕಾರಣವಾಗಿ ಕೇಂದ್ರದಲ್ಲಿ ಸಚಿವೆಯಾಗಿರುವ ತಮಿಳುನಾಡು ಮೂಲದ ನಿರ್ಮಲಾ ಸೀತಾರಾಮನ್ ಅವರನ್ನು ಕಣಕ್ಕಿಳಿಸಿ ಕನ್ನಡಿಗರ ಹಕ್ಕೊಂದನ್ನು ಸಾರ್ವಜನಿಕವಾಗಿ ಬಿಕರಿಗಿಟ್ಟಿದೆ. ನಾಳೆ ಇದರಿಂದ ಕರ್ನಾಟಕದ ಹಿತಾಸಕ್ತಿಯ ಪ್ರಶ್ನೆ ಬಂದಾಗ ಆಗಬಹುದಾದ ತೊಂದರೆಗಳ ಬಗ್ಗೆ ಭಾಜಪದ ನಾಯಕರು ಯೋಚಿಸಿದ್ದರೆ ಇಂತಹ ನಿರ್ಧಾರವನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲ. ಭಾಜಪದವರು ಮಾತೆತ್ತಿದರೆ ಕಾಂಗ್ರೆಸ್‌ನ ಹೈಕಮಾಂಡ್ ಸಂಸ್ಕೃತಿಯ ಬಗ್ಗೆ ಹೇಳುತ್ತಾರೆ, ಇದೀಗ ಅವರೇ ಅವರ ಹೈಕಮಾಂಡ್‌ನ ಗುಲಾಮರಂತೆ ವರ್ತಿಸುತ್ತಿದ್ದಾರೆ. ಇಲ್ಲದಿದ್ದಲ್ಲಿ ಕರ್ನಾಟಕದ ನೆಲಜಲದ ಬಗ್ಗೆ ಗಂಟೆಗಟ್ಟಲೆ ಮಾತಾಡುವ ಭಾಜಪದ ನಾಯಕರು ತಮ್ಮ ದಿಲ್ಲಿಯ ನಾಯಕರಿಗೆ ಹೇಳಬಹುದಿತ್ತು: ನಮ್ಮ ರಾಜ್ಯದವರೊಬ್ಬರನ್ನೇ ಆಯ್ಕೆ ಮಾಡುತ್ತೇವೆಂದು. ಆದರೆ ಪಕ್ಷದ ಅಧಿಕಾರದ ವಿಚಾರ ಬಂದಾಗ ಎಲ್ಲರಿಗೂ ರಾಜ್ಯದ ಹಿತಾಸಕ್ತಿ ಮರೆತುಹೋಗಿ ಅವಕಾಶವಾದಿ ರಾಜಕಾರಣವೇ ಮುಖ್ಯವಾಗಿ ಬಿಡುತ್ತದೆ.
ರಾಜ್ಯಸಭಾ ಚುನಾವಣೆಯ ಮೂರನೆ ಅಭ್ಯರ್ಥಿಯಾಗಿ ಯಾರೇ ಗೆದ್ದರೂ ಅದು ಅಡ್ಡ ಮತದಾನದ ಪರಿಣಾಮವೇ ಆಗಿರುತ್ತದೆ. ಅಲ್ಲಿಗೆ ನಮ್ಮ ರಾಜಕಾರಣಿಗಳ ಅವಕಾಶವಾದಿ ರಾಜಕಾರಣವೇ ಗೆದ್ದಂತಾಗುತ್ತದೆ. ಒಂದಂತು ಮೆಚ್ಚಬೇಕು. ದೇವೇಗೌಡರಾಗಲಿ, ಸಿದ್ದರಾಮಯ್ಯನವರಾಗಲಿ, ಯಡಿಯೂರಪ್ಪನವರೇ ಆಗಲಿ ಇಂತಹ ರಾಜಕಾರಣವನ್ನು ರಾಜಕೀಯದ ಮುತ್ಸದ್ದಿತನವೆಂದು ತಮಗೆ ತಾವೇ ಬಣ್ಣಿಸಿಕೊಳ್ಳುವುದು.