‘ಇಲ್ಲಗಳ’ ಮಧ್ಯೆ ನಲುಗುತ್ತಿರುವ ಬುಡಕಟ್ಟು ಆಶ್ರಮ ಶಾಲೆಗಳ ಮಕ್ಕಳ ಭವಿಷ್ಯ
ಪರಿಶಿಷ್ಟರು ಮತ್ತು ಬುಡಕಟ್ಟು ಜನರ ಅಭಿವೃದ್ಧಿಗಾಗಿ ಎಸ್ಸಿ-ಎಸ್ಟಿ ಮತ್ತು ಬುಡಕಟ್ಟು ‘ಉಪಯೋಜನೆ’ ಕಾಯ್ದೆ ರೂಪಿಸಿ, ಅವರ ಕಲ್ಯಾಣಕ್ಕೆ ಸಾವಿರಾರು ಕೋಟಿ ರೂ.ಮೀಸಲಿಟ್ಟಿದ್ದೇವೆಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ, ಅವರ ಹೇಳಿಕೆಯನ್ನು ಅಣಕಿಸುವ ರೀತಿಯಲ್ಲಿ ರಾಜ್ಯದ ಬುಡಕಟ್ಟು ಮಕ್ಕಳ ಆಶ್ರಮ ಶಾಲೆಗಳು ಕನಿಷ್ಠ ಸೌಲಭ್ಯಗಳೂ ಇಲ್ಲದೆ ನಲುಗುತ್ತಿವೆ.
ಭವಿಷ್ಯದ ಪ್ರಜೆಗಳನ್ನು ರೂಪಿಸುವ ಮಹತ್ವದ ಹೊಣೆಹೊತ್ತ ಬುಡಕಟ್ಟು ಆಶ್ರಮ ಶಾಲೆಗಳಲ್ಲಿ ಕನಿಷ್ಠ ಕುಡಿಯುವ ನೀರು, ಶೌಚಾಲಯ, ಸಮರ್ಪಕ ಊಟೋಪಹಾರ, ಶಿಕ್ಷಕರು, ಸೂಕ್ತ ಕಟ್ಟಡ ಸೇರಿದಂತೆ ಎಲ್ಲವೂ ‘ಇಲ್ಲಗಳ’ ಮಧ್ಯೆ ದಯನೀಯ ಸ್ಥಿತಿ. ಇನ್ನು ಇಲ್ಲಿ ಕಲಿಯುತ್ತಿರುವ ಏಳನೆ ತರಗತಿ ‘ಉತ್ತೀರ್ಣ’ರಾದ ಮಕ್ಕಳಿಗೆ ಕನಿಷ್ಠ ತಮ್ಮ ಹೆಸರು, ಶಾಲೆಯ ಹೆಸರು ಬರೆಯಲೂ ಬರುವುದಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ, ವಾಸ್ತವ ಸತ್ಯ.
ರಾಜ್ಯದ ಒಟ್ಟು ಜನಸಂಖ್ಯೆಯ ಶೇ.6.5ರಷ್ಟು ಬುಡಕಟ್ಟು ಸಮುದಾಯದವರಿದ್ದು, 52 ಬುಡಕಟ್ಟು ಪಂಗಡಗಳನ್ನು ಒಳಗೊಂಡಿರುತ್ತದೆ. ಆ ಪೈಕಿ 12ಬುಡಕಟ್ಟು ಸಮುದಾಯಗಳು ಅರಣ್ಯಮೂಲ ಬುಡಕಟ್ಟು ಪಂಗಡಗಳಾಗಿದ್ದು ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರಕನ್ನಡ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ.
ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅನನ್ಯತೆ ಮತ್ತು ಕೌಶಲ್ಯದೊಂದಿಗೆ ಅಕ್ಷರಾಭ್ಯಾಸದ ಮೂಲ ಉದ್ದೇಶದಿಂದ ಆಶ್ರಮ ಶಾಲೆಯನ್ನು ತೆರೆಯಲಾಗಿತ್ತು. 24 ಜಿಲ್ಲೆಗಳಲ್ಲಿ ಪ್ರಸ್ತುತ 116 ಬುಡಕಟ್ಟು ಆಶ್ರಮ ಶಾಲೆಗಳ ಪೈಕಿ ಅರಣ್ಯಮೂಲ ಬುಡಕಟ್ಟು ಸಮುದಾಯಗಳಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 89 ಆಶ್ರಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.
ಈ ಆಶ್ರಮ ಶಾಲೆಗಳಲ್ಲಿ 11 ಸಾವಿರಕ್ಕೂ ಹೆಚ್ಚು ಮಕ್ಕಳಿದ್ದು, ಇವರಿಗೆ ಕನಿಷ್ಠ ಅಕ್ಷರ ಕಲಿಸುವ ಶಿಕ್ಷಕರೂ ಇಲ್ಲ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಡೆಸುವ ಕೆಲವೊಂದು ಆಶ್ರಮ ಶಾಲೆಗಳು ‘ಶಾಲೆ’ ಎಂದು ಹೇಳುವುದಕ್ಕೂ ಅಸಹನೀಯ ರೀತಿಯಲ್ಲಿ ಅವ್ಯವಸ್ಥೆಗಳ ಆಗರ ಎಂಬುದು ಮಾತ್ರ ದುರದೃಷ್ಟಕರ.
ಕೆಲ ಶಾಲೆಗಳಲ್ಲಿ ಮಲಗುವ ಕೊಠಡಿ ಯನ್ನೆ ತರಗತಿಯನ್ನಾಗಿ ಮಾಡಿಕೊಂಡಿದ್ದು, ಮತ್ತೆ ಕೆಲವು ಕಡೆ ಜಗಲಿಯ ಮೇಲೆ ಬೋಧನೆ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯ ಬೊಮ್ಮಾಡು ಆಶ್ರಮ ಶಾಲೆಯಲ್ಲಿ ಜಗಲಿಯಲ್ಲೆ ಬೋಧನೆ ನಡೆಸಲಾಗುತ್ತದೆ. ಹತ್ತು-ಹದಿನೈದು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ಆಶ್ರಮ ಶಾಲೆಗಳನ್ನು ನಡೆಸಲಾ ಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಆಶ್ರಮ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಭೋಜನ ವೆಚ್ಚ ಪ್ರತಿ ತಿಂಗಳ ಪ್ರತಿ ಮಗುವಿಗೆ 900ರೂ.ನೀಡಲಾಗುತ್ತಿದೆ. ಆದರೆ, ಮಕ್ಕಳಿಗೆ ಸಮರ್ಪಕ ಊಟ- ಉಪಾಹಾರ ನೀಡದ ಹಿನ್ನೆಲೆಯಲ್ಲಿ ಆಶ್ರಮ ಶಾಲೆಗಳಲ್ಲಿ ಬಹುತೇಕ ಮಕ್ಕಳು ಅಪೌಷ್ಟಿಕತೆ ಹಾಗೂ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, ನೈರ್ಮಲ್ಯ ಕೊರತೆಯಿಂದ ಚರ್ಮರೋಗಕ್ಕೆ ತುತ್ತಾಗಿರುವುದು ಅಧಿಕಾರಿಗಳ ಬೇಜವಾಬ್ದಾರಿ, ಸರಕಾರದ ನಿರ್ಲಕ್ಷತೆಗೆ ಕನ್ನಡಿ ಹಿಡಿದಂತಿದೆ.
ಬಹುತೇಕ ಆಶ್ರಮ ಶಾಲೆಗಳಲ್ಲಿ ಮುಖ್ಯ ಅಧ್ಯಾಪಕ ಮತ್ತು ಮೇಲ್ವಿಚಾರಕ (ವಾರ್ಡನ್) ಹುದ್ದೆಯನ್ನು ಒಬ್ಬರೆ ನಿರ್ವಸುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರಿಗೆ ಆ ಅರ್ಹತೆ ಮತ್ತು ವಿದ್ಯಾರ್ಹತೆ ಇಲ್ಲ ಎಂಬ ಅಂಶವೂ ಬಯಲಾಗಿದೆ. ಇವರು ಶಾಲೆಗೆ ಬೇಕಾದ ಸಾಮಾಗ್ರಿ ತರುವುದು, ಬಿಲ್ಲುಗಳನ್ನು ತಯಾರಿಸುವುದು ಮುಖ್ಯ ಕೆಲಸ ಆಗಿದೆ.
ಇಲಾಖೆಯ ಮೇಲಧಿಕಾರಿಗಳು ಹೇಳಿದ ಇತರೆ ಕೆಲಸಗಳನ್ನು ಮಾಡುವುದು ಹೊರತು ಶಾಲೆಯ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದು, ಇವರು ಶಾಲೆಯಲ್ಲಿರುವುದೇ ಅಪರೂಪ. ಚಾಮರಾಜನಗರದಂತಹ ಜಿಲ್ಲೆಗಳಲ್ಲಿ ಒಬ್ಬೊಬ್ಬ ಮೇಲ್ವಿಚಾರಕರಿಗೆ ಆರೇಳು ಆಶ್ರಮ ಶಾಲೆ, ಹಾಸ್ಟೆಲ್‌ಗಳ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ.
ಬುಡಕಟ್ಟು ಮಕ್ಕಳಿಗೆ ಆರ್‌ಟಿಇ ಇಲ್ಲ:
ಕೇಂದ್ರ ಸರಕಾರ ಆರರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಕಡ್ಡಾಯ ಶಿಕ್ಷಣ ನೀಡುವ ಮಹತ್ವದ ಉದ್ದೇಶಕ್ಕಾಗಿ ಆರ್‌ಟಿಇ ಕಾಯ್ದೆ ಜಾರಿಗೆ ತಂದಿದ್ದು, ಈ ಕಾಯ್ದೆ ಬುಡಕಟ್ಟು ಮಕ್ಕಳಿಗೆ ಅನ್ವಯ ಆಗುವುದಿಲ್ಲವೆಂಬ ಅಂಶ ನಿಜಕ್ಕೂ ಆಘಾತಕಾರಿಯಾಗಿದೆ.
ಭಾಗ್ಯಗಳೂ ಇವರಿಗಿಲ್ಲ:
ಅಪೌಷ್ಟಿಕತೆ ನಿವಾರಣೆಗೆ ಸರಕಾರ ರೂಪಿಸಿರುವ ಕ್ಷೀರಭಾಗ್ಯ, ಶೂ ಭಾಗ್ಯ, ಉಚಿತ ಸೈಕಲ್ ಭಾಗ್ಯ, ಹಾಜರಾತಿಗೆ ವಿಶೇಷ ಪ್ರೋತ್ಸಾಹ ಭಾಗ್ಯ ಸೇರಿದಂತೆ ಬುಡಕಟ್ಟು ಆಶ್ರಮ ಶಾಲೆಗಳ ಮಕ್ಕಳು ಎಲ್ಲ ಭಾಗ್ಯಗಳಿಂದಲೂ ವಂಚಿತರಾಗಿದ್ದಾರೆ.
ಬುಡಕಟ್ಟು ಆಶ್ರಮ ಶಾಲೆಗಳ ‘ಇಲ್ಲಗಳ’ ಮಧ್ಯೆ ಅಕ್ಷರ ಕಲಿಕೆ ಅಸಾಧ್ಯ ಎಂಬುದನ್ನು ಮನಗಂಡ ಆದಿವಾಸಿ ಗಿರಿಜನರು ತಮ್ಮ ಮಕ್ಕಳನ್ನು ರೋಗಗ್ರಸ್ಥ, ಜ್ಞಾನವೂ ಸಿಗದ ಅರೆ-ಬರೆ ಅಕ್ಷರ ಕಲಿಕೆಯಿಂದ ಪ್ರಯೋಜನವಿಲ್ಲ ಎಂಬುದನ್ನು ಅರಿತಿದ್ದಾರೆ. ಆ ಹಿನ್ನೆಲೆಯಲ್ಲಿ 2012-13ರಲ್ಲಿ ನಾಲ್ಕು ಆಶ್ರಮ ಶಾಲೆೆಗಳಲ್ಲಿ ಮಕ್ಕಳ ದಾಖಲಾತಿ ಕೊರತೆಯ ಆ ಕಾರಣ ಶಾಲೆಗಳನ್ನು ಮುಚ್ಚಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದಲೆ ಆದೇಶ ಹೊರಡಿಸಲಾಗಿದೆ.
ಬುಡಕಟ್ಟು ಆಶ್ರಮ ಶಾಲೆಗಳಲ್ಲಿನ ಅವ್ಯವಸ್ಥೆ ಹಿನ್ನೆಲೆಯಲ್ಲಿ ಸೂಕ್ತ ಅಕ್ಷರಭ್ಯಾಸವಿಲ್ಲದೆ ಶಾಲೆಗಳಲ್ಲಿನ ಇತರೆ ಮಕ್ಕಳೊಂದಿಗೆ ಶಿಕ್ಷಣ ಮುಂದುವರಿಸುವ ಸಾಮರ್ಥ್ಯ ವಿಲ್ಲದೆ ಕೀಳರಿಮೆ ಮತ್ತು ಆತ್ಮವಿಶ್ವಾಸದ ಕೊರತೆಯಿಂದ ಅರ್ಧದಲ್ಲೆ ಶಾಲೆ ಬಿಟ್ಟು ನಗರ ಪ್ರದೇಶಗಳಲ್ಲಿ ಬಾಲಕಾರ್ಮಿಕರು ಅಥವಾ ಬಾಲ್ಯ ವಿವಾಹಕ್ಕೆ ಒಳಗಾಗುವುದು ನಿಶ್ಚಿತ ಆಗಿದೆ.
ಹೀಗಾಗಿ ಕೇರಳ ಮಾದರಿಯಲ್ಲೆ 1ನೆ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಒಂದೆ ಸೂರಿನಡಿ ಬುಡಕಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಆಶ್ರಮ ಶಾಲೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕೆಂಬುದು ಅರಣ್ಯ ಮೂಲ ಬುಡಕಟ್ಟು ಸಂಘಟನೆಗಳ ಒಕ್ಕೂಟದ ಒತ್ತಾಯವಾಗಿದೆ.
ಹೊಸ ಶಿಕ್ಷಣ ಮಾದರಿ ಅನುಷ್ಠಾನಕ್ಕೆ ಬರಲಿ
‘‘ಬುಡಕಟ್ಟು ಸಮುದಾಯಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಕೇರಳ ಮಾದರಿಯಲ್ಲಿ ರಾಜ್ಯದಲ್ಲಿನ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು. ಎಲ್ಲ ಶಾಲೆಗಳಿಗೆ ಶೈಕ್ಷಣಿಕ ಅರ್ಹತೆಯುಳ್ಳ ಶಿಕ್ಷಕರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ರಾಜ್ಯ ಸರಕಾರ ವಿಶೇಷ ಆಸ್ಥೆ ವಹಿಸಬೇಕು. ಬುಡಕಟ್ಟು ಸಮುದಾಯದ ಮಕ್ಕಳಿಗೆ ತಮ್ಮ ಸಾಂಸ್ಕೃತಿಕ ಅನನ್ಯತೆ ಮತ್ತು ಶೈಕ್ಷಣಿಕ ಏಳ್ಗೆಗೆ ಹೊಸ ಶಿಕ್ಷಣ ಮಾದರಿಯನ್ನು ಅನುಷ್ಠಾನಕ್ಕೆ ತರಬೇಕು’
-ಶೈಲೇಂದ್ರ, ರಾಜ್ಯ ಕಾರ್ಯದರ್ಶಿ, ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ