ರಾಮಾಯಣ, ಮಹಾಭಾರತ ಮತ್ತು ಧರ್ಮ ಕರ್ವೆ ಅವರ ಹೊಸ ಒಳನೋಟಗಳು
‘ರಾಮಾಯಣ, ಮಹಾಭಾರತ ಮತ್ತು ಧರ್ಮ’ ಇರಾವತಿ ಕರ್ವೆ ಅವರ ಇನ್ನೊಂದು ಮಹತ್ವದ ಕೃತಿ. ಚಂದ್ರಕಾಂತ ಪೋಕಳೆ ಅವರು ಇದನ್ನು ಮರಾಠಿಯಿಂದ ಕನ್ನಡಕ್ಕೆ ಇಳಿಸಿದ್ದಾರೆ. ಇರಾವತಿ ಕರ್ವೆ ತಮ್ಮ ‘ಯುಗಾಂತ’ ಕೃತಿಯ ಮೂಲಕ ಈಗಾಗಲೇ ಕನ್ನಡಿಗರಿಗೆ ಸಾಕಷ್ಟು ಪರಿಚಿತರು. ಇವರ ಯುಗಾಂತ ಕೃತಿ ಮೂರು ಬಾರಿ ಬೇರೆ ಬೇರೆ ಅನುವಾದಕರಿಂದ ಕನ್ನಡ ಭಾಷೆಗೆ ಇಳಿದಿದೆ. ಮತ್ತು ಕನ್ನಡದಲ್ಲಿ ಈ ಗ್ರಂಥವನ್ನು ಮುಂದಿಟ್ಟುಕೊಂಡು ಮಹಾಭಾರತದ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆದಿವೆ. ಮಹಾಭಾರತ ಪಾತ್ರಗಳನ್ನು ಬೇರೆ ಬೇರೆ ಆಯಾಮ ಗಳಿಂದ ಚರ್ಚಿಸಿದ ಕೃತಿ ‘ಯುಗಾಂತ’. ‘ರಾಮಾಯಣ, ಮಹಾಭಾರತ ಮತ್ತು ಧರ್ಮ’ ಚರ್ಚೆಯ ವಿಸ್ತೃತ ರೂಪವಾಗಿದೆ. ಇಲ್ಲಿ ರಾಮಾಯಣ ಮತ್ತು ಮಹಾಭಾರತ ನಡೆದ ಕಾಲಘಟ್ಟವನ್ನು ಮುಂದಿಟ್ಟುಕೊಂಡು ಕರ್ವೆ ಚರ್ಚೆ ನಡೆಸುತ್ತಾರೆ. ರಾಮಾಯಣ ಮತ್ತು ಮಹಾಭಾರತವನ್ನು ಜೊತೆಯಾಗಿಟ್ಟು ನೋಡುವ ಲೇಖಕಿ, ರಾಮಾಯಣದ ಮೂಲ ಜಾನಪದ ಕತೆಯಾಗಿರಬೇಕು ಎಂದು ಅಂದಾಜಿಸುತ್ತಾರೆ.
ಹಾಗೆಯೇ ಮಹಾಭಾರತವೂ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜಮನೆತನದ ತಲೆಮಾರಿನ ನಿಖರ ಇತಿಹಾಸ ಮತ್ತು ಕೆಲವು ಹಳೆಯ ಚರಿತ್ರೆಗಳನ್ನು ಒಳಗೊಂಡು ವ್ಯಾಸನಿಂದ ಸಂಸ್ಕರಿಸಲ್ಪಟ್ಟ ಕಾವ್ಯವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಪಿತೃಪ್ರಧಾನ ಮತ್ತು ಬಹುಪತ್ನಿತ್ವ ಕುಟುಂಬ ಪದ್ಧತಿಯಲ್ಲಿ ಯಾವ ಸಂಘರ್ಷ ಮತ್ತು ದ್ವೇಷ ನಿರ್ಮಾಣವಾಗುತ್ತದೆಯೋ ಅದನ್ನು ನಿವಾರಣೆ ಮಾಡುವ ಬೇರೆ ಬೇರೆ ದಾರಿಗಳಾಗಿ ರಾಮಾಯಣ ಮತ್ತು ಮಹಾಭಾರತವನ್ನು ಲೇಖಕಿ ಒಂದೆಡೆ ಕಾಣುತ್ತಾರೆ. ಅಯೋಧ್ಯಾ ಕಾಂಡ, ಅರಣ್ಯಕಾಂಡ, ಧರ್ಮ ಇವುಗಳ ನಡುವಿನ ತಿಕ್ಕಾಟವನ್ನು ಕುತೂಹಲಕರವಾಗಿ ಶೋಧಿಸುತ್ತಾ ಹೋಗುವ ಕರ್ವೆ ರಾಮಾಯಣ ಮತ್ತು ಮಹಾಭಾರತದ ಹೊಸ ಹೊಳಹುಗಳನ್ನು ನಮ್ಮಲ್ಲಿ ಬಿತ್ತುತ್ತಾರೆ. ಕರ್ವೆಯವರ ಓದು, ರಾಮಾಯಣ ಮತ್ತು ಮಹಾಭಾರತದ ಓದುವ ಕ್ರಮವನ್ನು ನಮ್ಮಾಳಗೆ ಬದಲಿಸುತ್ತದೆ. ಮಾನವಶಾಸ್ತ್ರಜ್ಞೆಯಾಗಿರುವ ಇರಾವತಿ ಕರ್ವೆ, ಒಂದು ಕಾವ್ಯದೊಳಗಿರುವ ಬೇರೆ ಬೇರೆ ಪಾತ್ರಗಳ ಮನಸ್ಸಿನೊಳಗೆ ಇಳಿಯುವುದು ಮತ್ತು ಅದನ್ನು ಅಧ್ಯಯನ ಮಾಡುತ್ತಾ ಆ ಕಾಲಘಟ್ಟವನ್ನು ತೆರೆದಿಡುವುದು ವಿಶೇಷವಾಗಿದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 120 ರೂ. ಆಸಕ್ತರು 080-30578020 ದೂರವಾಣಿಯನ್ನು ಸಂಪರ್ಕಿಸಬಹುದು.