ಹಾಸನ: ಜಿಪಂ ಅಧ್ಯಕ್ಷರಾಗಿ ಶ್ವೇತಾ ಅವಿರೋಧ ಆಯ್ಕೆ; ಉಪಾಧ್ಯಕ್ಷರಾಗಿ ಶ್ರೀನಿವಾಸ್
ಹಿಂಬಾಗಿಲಿನಿಂದ ಸ್ಥಾನ ಗಿಟ್ಟಿಸಿಕೊಂಡ ಕಾಂಗ್ರೆಸ್: ಜೆಡಿಎಸ್ ಆರೋಪ
.jpg)
ಹಾಸನ, ಜೂ.3: ಕಳೆದ ತಿಂಗಳಿನಿಂದ ಬಾರಿ ಕುತೂಹಲ ಕೆರಳಿಸಿದ್ದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜಿಪಂ ಅಧ್ಯಕ್ಷರಾಗಿ ಶ್ವೇತಾ ದೇವರಾಜ್ ಅವಿರೋಧವಾಗಿ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಹೆಚ್.ಪಿ. ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.
ಜಿಪಂ ಅಧ್ಯಕ್ಷರ ಆಯ್ಕೆ ಮಾಡುವ ವಿಚಾರದಲ್ಲಿ ಕರೆಯಲಾಗಿದ್ದ ಮೂರು ಸಭೆಯಲ್ಲೂ ಜೆಡಿಎಸ್ ಸದಸ್ಯರ ಗೈರು ಹಾಜರಿ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು.
ಶುಕ್ರವಾರ ನಡೆದ ನಾಲ್ಕನೇ ಸಭೆಯನ್ನು ಮದ್ಯಾಹ್ನ 12 ಗಂಟೆಗೆ ನಿಗದಿ ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷದ 16 ಜನ ಸದಸ್ಯರು ಮತ್ತು ಬಿಜೆಪಿಯ ಸದಸ್ಯೆ ಸರಿಯಾದ ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾದರು. ಆದರೇ ಜೆಡಿಎಸ್ ಸದಸ್ಯರು ರಾಹುಕಾಲ ಮುಗಿಸಿಕೊಂಡು ಸರಿಯಾಗಿ 12-20ಕ್ಕೆ ಭವಾನಿ ರೇವಣ್ಣ ರ ನೇತೃತ್ವದಲ್ಲಿ ಆಗಮಿಸಿ ಜಿಪಂ ಹೊಯ್ಸಳ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಪಾಲ್ಗೊಂಡರು.
ನಾಲ್ಕನೆ ಸಭೆಯಲ್ಲಿ ಕೋರಂ ಇದ್ದುದರಿಂದ ಚುನಾವಣಾಧಿಕಾರಿ ಎ.ಎಂ. ಕುಂಚಪ್ಪ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಿಸಿದರು. ಇದೆ ವೇಳೆ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಇದ್ದರು.
ಜಿಪಂ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಪರಿಶಿಷ್ಟ ಪಂಗಡದ ಅಭ್ಯರ್ಥಿ ಶ್ವೇತಾದೇವರಾಜ್ ಮೂರು ನಾಮಪತ್ರಗಳನ್ನು ಸಲ್ಲಿಸಿದ್ದರು. ಕಾನೂನು ಬದ್ಧವಾಗಿ ಇದುದ್ದರಿಂದ ಅಂಗಿಕೃತವಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದರು. ಜೆಡಿಎಸ್ ಪಕ್ಷದಿಂದ ವತ್ಸಲಾ ಮತ್ತು ಲೋಕೇಶ್ ಹಾಗೂ ಎನ್.ಎಸ್. ಲತಾ ಮಂಜೇಶ್ವರಿ ನಾಮಪತ್ರ ಸಲ್ಲಿಸಿದ್ದರು. ಇವರುಗಳು ಪರಿಶಿಷ್ಟ ಜಾತಿಯಿಂದ ನಾಮಪತ್ರ ಸಲ್ಲಿಸಿದ್ದುದರಿಂದ ಇದು ತಿರಸ್ಕೃತವಾಗಿದೆ ಎಂದು ಚುನಾವಣಾಧಿಕಾರಿ ಹೇಳಿದರು. ಪರಿಶಿಷ್ಟ ಪಂಗಡಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿರುವುದರಿಂದ ನಾಮಪತ್ರ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅಧಿಕೃತವಾಗಿ ಶ್ವೇತಾದೇವರಾಜ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಕಾಂಗ್ರೆಸ್ ಪಕ್ಷದ ಹಳ್ಳಿ ಮೈಸೂರು ಕ್ಷೇತ್ರದ ಅಭ್ಯರ್ಥಿ ಚಂದ್ರಶೇಖರ್ ಹಾಗೂ ಜೆಡಿಎಸ್ ಪಕ್ಷದಿಂದ ಕೊಣನೂರು ಕ್ಷೇತ್ರದ ಎಚ್.ಪಿ. ಶ್ರೀನಿವಾಸ್‌ರ ನಾಮಪತ್ರ ಅಂಗಿಕೃತವಾಗಿದ್ದು, ಯಾರಾದರೂ ಒಬ್ಬರೂ ವಾಪಸ್ ತೆಗೆದುಕೊಳ್ಳಲು 2 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಯಾರು ಕೂಡ ವಾಪಸ್ ಪಡೆಯದೆ ಇದ್ದುದರಿಂದ ಕೈ ಎತ್ತುವ ಮೂಲಕ ಆಯ್ಕೆ ಮಾಡುವುದಾಗಿ ಚುನಾವಣಾಧಿಕಾರಿ ಘೋಷಣೆ ಮಾಡಿದರು. ಮೊದಲು ಕಾಂಗ್ರೆಸ್ ಪಕ್ಷದಿಂದ ಕೈ ಎತ್ತಿಸಲಾಯಿತು. ಅವರ ಎಣಿಕೆ ಪ್ರಕಾರ 16 ಮತಗಳು ಮಾತ್ರ ಇದ್ದು, ಜೆಡಿಎಸ್ ಅ್ಯರ್ಥಿ ಪರ 23 ಮತಗಳು ಇದ್ದುದರಿಂದ ಬಹುಮತದಲ್ಲಿ ಅಧಿಕೃತವಾಗಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಆದರೆ ಬಿಜೆಪಿಯ ಓರ್ವ ಸದಸ್ಯರು ಯಾವ ಪಕ್ಷಕ್ಕೂ ಬೆಂಬಲ ಸೂಚಿಸದೆ ತಟಸ್ಥರಾಗುಳಿದರು.
ಜಿಪಂ ಹೊಯ್ಸಳ ಸಭಾಂಗಣದಲ್ಲಿ ಅಧ್ಯಕ್ಷರ ಆಯ್ಕೆ ಪೂರ್ಣಗೊಳ್ಳುತ್ತಿದ್ದಂತೆ ಬಿ.ಎಂ. ರಸ್ತೆಯಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಕಾಂಗ್ರೆಸ್-ಜೆಡಿಎಸ್ ಜಟಾಪಟಿ
ಜಿಪಂ ಕಛೇರಿ ಒಳಗಡೆ ಅಧ್ಯಕ್ಷ-ಉಪಾಧ್ಯಕರ ಆಯ್ಕೆ ನಡೆಯುತ್ತಿದ್ದರೆ ಹೊರ ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ಇಬ್ಬರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಘೋಷಣೆ ಕೇಳಿ ಬಂದಿತು. ಜೆಡಿಎಸ್ ಪಕ್ಷದ ಮುಖಂಡರಾದ ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ, ಜಿಪಂ ಮಾಜಿ ಉಪಾಧ್ಯಕ್ಷ ಎಸ್. ದ್ಯಾವೇಗೌಡ, ಎಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಹೊಂಗೆರೆ ರಘು ಸೇರಿದಂತೆ ಇನ್ನಿತರರು ಜಮಾಯಿಸಿದ್ದರು. ಅವರವರ ಪಕ್ಷದ ಬಾವುಟ ಹಿಡಿದು ಒಬ್ಬರಿಗೊಬ್ಬರೂ ಅವಾಚ್ಯ ಪದಗಳಿಂದ ಮಾತನಾಡುತ್ತಿದ್ದುದು ಕೇಳಿ ಬಂದಿತು. ಈ ವೇಳೆ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ಕೈಕೊಟ್ಟ ಕಂಪ್ಯೂಟರ್
ಜಿಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯುವ ವೇಳೆ ಚುನಾವಣಾಧಿಕಾರಿ ಕೆಲ ಕಾನೂನು ನಿಯಮ ಓದಲು ಪ್ರತಿ ಕೇಳಿದಾಗ ಕಂಪ್ಯೂಟರ್ ಕೈಕೊಟ್ಟಿದಲ್ಲದೆ, ಪ್ರಿಂಟರ್ ಕೂಡ ಕೆಲಸ ಮಾಡಲಿಲ್ಲ. ಈ ವೇಳೆ ಸಿಬ್ಬಂದಿ ಪರದಾಡಿದರು.
ಮೆರವಣಿಗೆ
ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ನಂತರ ಹೊರ ಬಂದ ಅಧ್ಯಕ್ಷೆ ಶ್ವೇತಾದೇವರಾಜ್‌ರನ್ನು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸ್ವಾಗತದೊಂದಿಗೆ ಬರಮಾಡಿಕೊಂಡರು.
ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಶ್ವೇತಾದೇವರಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ನೀಡಿರುವ 5 ವರ್ಷದ ಅಧಿಕಾರಾವಧಿಯಲ್ಲಿ ಹಾಸನವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವುದೆ ನನ್ನ ಮೊದಲ ಗುರಿ. ಮುಖ್ಯ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ರೈತರ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು ಎಂದರು.
ಜಿಲ್ಲಾ ಉಸ್ತುವರಿ ಸಚಿವ ಎ. ಮಂಜು ಹಾಗೂ ಎಲ್ಲಾ ಮುಖಂಡರ ಮಾರ್ಗದರ್ಶನದಲ್ಲಿ ಕೆಲಸ ಮಾಡಲಾಗುವುದು. ಹಾಗೂ ಜೆಡಿಎಸ್ ಜಿಪಂ ಸದಸ್ಯರ ವಿಶ್ವಾಸದಲ್ಲಿ ಜಿಲ್ಲೆಯ ಸಮಸ್ಯೆ ಆಲಿಸಿ ಪರಿಹರಿಸುವುದಾಗಿ ಹೇಳಿದರು. ಅಭಿವೃದ್ಧಿ ವಿಚಾರದಲ್ಲಿ ಯಾರೂ ಪಕ್ಷ ಬೇಧ ಮಾಡಬಾರದು ಎಂದರು. ಇದೆ ವೇಳೆ ಗೆಲುವುಗೆ ಕಾರಣರಾದ ಎಲ್ಲಾರಿಗೂ ಅಭಿನಂದನೆ ತಿಳಿಸಿದರು.
ಮಾಜಿ ಸಚಿವ ಎಚ್.ಡಿ. ರೇವಣ್ಣ ರ ಪತ್ನಿ ಭವಾನಿ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಬಹುಮತವಿದ್ದರೂ ಕೂಡ ಕಾಂಗ್ರೆಸ್ ಹಿಂಬಾಗಿಲಿನಿಂದ ಬಂದು ಜಿಪಂ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡುವ ಮೂಲಕ ಯಾವ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ ಎಂದು ದೂರಿದರು. ಅಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರವಾಗಿ ಈಗಾಗಲೇ ದಾವೆ ನ್ಯಾಯಾಲಯದಲ್ಲಿ ಇದ್ದು, ಅದನ್ನು ಮುಂದುವರಿಸುವುದಾಗಿ ಹೇಳಿದರು.