ಪಂಜಾಬ್ ಮುಖ್ಯಮಂತ್ರಿಗೇ ಸಡ್ಡು ಹೊಡೆದ ಸ್ವರ್ಣ ಮಂದಿರದ ಧರ್ಮಗುರು !
ಅಮೃತಸರ್ , ಜೂ 3 : ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದಾಗ ಅಲ್ಲಿದ್ದ ಧರ್ಮಗುರು ಅವರಿಗೆ ಸಾಂಪ್ರದಾಯಿಕ ' ಸಿರೋಪ ' ( ಗೌರವಪೂರ್ವಕ ನೀಡುವ ನಿಲುವಂಗಿ ) ನೀಡಲು ನಿರಾಕರಿಸಿ ಸಡ್ಡು ಹೊಡೆದ ಘಟನೆ ಶುಕ್ರವಾರ ನಡೆದಿದೆ. ಶಿರೋಮಣಿ ಗುರುದ್ವಾರ ಪ್ರಭಂದಕ್ ಸಮಿತಿಯ ( ಎಸ್ ಜಿ ಪಿ ಸಿ ) ಹಿರಿಯ ಪದಾಧಿಕಾರಿ ಗಳೊಂದಿಗೆ ಮಂದಿರದ ಗರ್ಭಗುಡಿಗೆ ಮುಖ್ಯಮಂತ್ರಿ ಬಂದಾಗ ಅಲ್ಲಿ ಕರ್ತವ್ಯದಲ್ಲಿದ್ದ ಬಲಬೀರ್ ಸಿಂಗ್ ಅವರು ' ಸಿರೋಪ ' ನೀಡಲು ನಿರಾಕರಿಸಿಬಿಟ್ಟರು. ಎಸ್ ಜಿ ಪಿ ಸಿ ಪದಾಧಿಕಾರಿಗಳು ಅವರ ಮೇಲೆ ಒತ್ತಡ ಹೇರಿದರೂ ಅವರು ಮಾತ್ರ ತನ್ನ ನಿಲುವನ್ನು ಬದಲಾಯಿಸಲಿಲ್ಲ.
ಬಾದಲ್ ಅವರಿಗೆ ಸಿಖ್ಖರು ನೀಡುವ ಅತ್ಯುನ್ನತ ಗೌರವ ಆಗಿರುವ ' ಪಂಥ್ ರತ್ತನ್ ಫ಼ಖರ್ ಎ ಖೌಮ್ ( ಸಿಖ್ ಧರ್ಮದ ರತ್ನ ಹಾಗು ಹೆಮ್ಮೆ ) ' ಧಾರ್ಮಿಕ ಪ್ರಶಸ್ತಿಯನ್ನು 2011 ರಲ್ಲೇ ನೀಡಿದ್ದು ಅಂತಹ ಪ್ರತಿಷ್ಠಿತ ಪ್ರಶಸ್ತಿ ಪಡೆದ ಹಾಗು ರಾಜ್ಯದ ಮುಖ್ಯಮಂತ್ರಿ ಯಾಗಿರುವ ಬಾದಲ್ ಅವರಿಗೇ ಸ್ವರ್ಣ ಮಂದಿರದ ಧರ್ಮಗುರು ಸಡ್ದು ಹೊಡೆದಿದ್ದು ವಿಶೇಷವಾಗಿದೆ.
ಈ ಹಿಂದೆ, ಜನವರಿ 20 ರಂದು ಇದೇ ಧರ್ಮಗುರು ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅವರಿಗೆ ಸಿರೋಪ ನೀಡಲು ನಿರಾಕರಿಸಿದ್ದರು. ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ್ ಸಾಹಿಬ್ ಗೆ ರಾಜ್ಯದಲ್ಲಿ ಅಪಚಾರ ಆಗುತ್ತಿರುವುದನ್ನು ತಡೆಯಲು ಸರಕಾರ ವಿಫಲ ಆಗಿರುವುದೇ ಇದಕ್ಕೆ ಕಾರಣ ಎಂದು ಈ ಧರ್ಮಗುರು ಹೇಳಿದ್ದಾರೆ.