ಆ್ಯಂಟಿ ಬಯಾಟಿಕ್ಸ್ ಹಾಗೂ ಡಯಾಬಿಟಿಸ್ ಔಷಧ ಬೆಲೆಯಲ್ಲಿ ಕಡಿತ
ಹೊಸದಿಲ್ಲಿ, ಜೂ.4: ಹೆಚ್ಚಾಗಿ ಬಳಕೆಯಲ್ಲಿರುವ ಆ್ಯಂಟಿ ಬಯಾಟಿಕ್ ಹಾಗೂ ಮಧುಮೇಹ ಔಷಧಗಳ ಬೆಲೆ ಶೇ.10 ರಿಂದ 35ರವರೆಗೆ ಕಡಿಮೆಯಾಗಲಿದೆ. ಔಷಧ ನಿಯಂತ್ರಣ ಸಂಸ್ಥೆಯಾದ ರಾಷ್ಟ್ರೀಯ ಔಷಧಗಳ ಬೆಲೆ ಪ್ರಾಧಿಕಾರ (ಎನ್ಪಿಪಿಎ), ಅಗತ್ಯ ಔಷಧಗಳ ಮಾರಾಟ ಬೆಲೆಯನ್ನು ಶೇ.25ರಷ್ಟು ಕಡಿತಗೊಳಿಸಿದೆ.
ಈ ಬೆಲೆ ಪರಿಷ್ಕರಣೆ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಎನ್ಪಿಪಿಎ ಅಧ್ಯಕ್ಷ ಭೂಪೇಂದ್ರಸಿಂಗ್ ಪ್ರಕಟಿಸಿದ್ದಾರೆ. ಈ 25 ಔಷಧಗಳು ಈಗಾಗಲೇ ಸರಕಾರದ ಬೆಲೆ ನಿಯಂತ್ರಣದಲ್ಲಿದ್ದು, ಗರಿಷ್ಠ ಮಾರಾಟ ಬೆಲೆಯನ್ನು ಸರಕಾರ ನಿಗದಿಪಡಿಸಬಹುದಾಗಿದೆ. ನಿಯಂತ್ರಣ ಪ್ರಾಧಿಕಾರ ಇದೀಗ ಮತ್ತೆ ಬೆಲೆ ಕಡಿತಗೊಳಿಸಿರುವುದರಿಂದ ಗ್ರಾಹಕರಿಗೆ ಈ ಔಷಧಗಳು ಮತ್ತಷ್ಟು ಅಗ್ಗವಾಗಲಿವೆ.
ಹೊಸದಾಗಿ ಪರಿಷ್ಕರಿಸಲ್ಪಟ್ಟಿರುವ ರಾಷ್ಟ್ರದ ಅಗತ್ಯ ಔಷಧಗಳ ಪಟ್ಟಿಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಔಷಧಗಳನ್ನು ಜನಸಾಮಾನ್ಯರ ಕೈಗೆಟುಕುವ ದರದಲ್ಲಿ ಇಡಬೇಕಾದ್ದು ಅನಿವಾರ್ಯ. ಈ ಹಿಂದೆ ನಿಗದಿಪಡಿಸಿದ ಬೆಲೆ ನಾಲ್ಕು ವರ್ಷಗಳ ಹಿಂದೆ ನಿಗದಿಪಡಿಸಿದ್ದಾಗಿದೆ. ಉತ್ಪಾದಕರು ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಇವುಗಳ ಬೆಲೆಯನ್ನು ಪರಿಷ್ಕರಿಸಿ ಲಾಭ ಮಾಡುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸರಕಾರದ ಬೆಲೆ ನಿಯಂತ್ರಣ ಪಟ್ಟಿಯಲ್ಲಿ ಇರುವ ಔಷಧಗಳ ಬೆಲೆಯನ್ನು ಉತ್ಪಾದಕ ಕಂಪೆನಿಗಳು ವಾರ್ಷಿಕವಾಗಿ, ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಪರಿಷ್ಕರಿಸಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿತ್ತು. ವಿವಿಧ ಬ್ರಾಂಡ್ ಉತ್ಪನ್ನಗಳು ಬೇರೆ ಬೇರೆ ದರದಲ್ಲಿ ಮಾರಾಟವಾಗುತ್ತಿದ್ದವು ಎಂದು ವಿವರಿಸಿದರು.