ಕೇಂದ್ರದಲ್ಲಿ ಸಿಗದೆ ರಾಜ್ಯದಲ್ಲಿ ಬೇಡ, ಪೊಲೀಸರಿಗೆ ಶೀಘ್ರವೇ 8 ಗಂಟೆ ಡ್ಯೂಟಿ!
ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗದೆ ರಾಜ್ಯ ಸರಕಾರದಲ್ಲಿ ಸ್ಥಾನ ಬೇಡ -ಆರ್‌ಪಿಐ
ಕೇಂದ್ರದಲ್ಲಿ ಕ್ಯಾಬಿನೆಟ್ ವಿಸ್ತರಣೆ ಸುದ್ದಿ ಬರುತ್ತಿದ್ದಂತೆಯೇ ಮಹಾರಾಷ್ಟ್ರದಲ್ಲಿ ಸರಕಾರದ ಸಹಯೋಗಿ ಆರ್‌ಪಿಐ, (ಅಠವಲೆ ಬಣ) ಬಿಜೆಪಿ ಸರಕಾರದ ಮೇಲೆ ಒತ್ತಡ ಹಾಕಲು ಶುರು ಮಾಡಿದೆ. ಹಾಗೂ ಇತ್ತೀಚೆಗೆ ನಡೆದ ಬೈಠಕ್‌ನಲ್ಲಿ ಪಕ್ಷದ ನಾಯಕ ರಾಮದಾಸ್ ಅಠವಲೆ ಅವರಿಗೆ ಮೋದಿ ಸರಕಾರದಲ್ಲಿ ಮಂತ್ರಿಸ್ಥಾನ ನೀಡುವ ತನಕ ಮಹಾರಾಷ್ಟ್ರದಲ್ಲಿ ಪಾರ್ಟಿಯು ಯಾವುದೇ ಮಂತ್ರಿ ಸ್ಥಾನವನ್ನು ಪಡೆಯಬಾರದು ಎಂಬ ತೀರ್ಮಾನಕ್ಕೆ ಬರಲಾಯಿತು.
ಆರ್‌ಪಿಐ ವರಿಷ್ಠ ನೇತಾರರ ಒಂದು ಪ್ರತಿನಿಧಿ ಮಂಡಲವು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದೆ. ಪಕ್ಷದ ನಾಯಕರು ಮುಖ್ಯಮಂತ್ರಿಯ ಎದುರು ಒಂದು ಶರ್ತ ಇರಿಸಿದ್ದು ಕೇಂದ್ರ ಮಂತ್ರಿಮಂಡಲದಲ್ಲಿ ಸಂಸದ ರಾಮದಾಸ ಅಠವಲೆ ಅವರಿಗೆ ಮಂತ್ರಿ ಸ್ಥಾನ ನೀಡಲೇಬೇಕು. ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನೂ ಆಗ್ರಹಿಸುವಂತೆ ತಿಳಿಸಿದ್ದರು. ಎಲ್ಲಿಯ ತನಕ ಕೇಂದ್ರದಲ್ಲಿ ಮಂತ್ರಿಸ್ಥಾನ ಸಿಗುವುದಿಲ್ಲವೋ ಅಲ್ಲಿಯ ತನಕ ಆರ್‌ಪಿಐ ಮಹಾರಾಷ್ಟ್ರದಲ್ಲಿ ಯಾವುದೇ ಸ್ಥಾನ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಠವಲೆ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ದೊರೆತ ನಂತರ ರಾಜ್ಯದಲ್ಲಿ ಆರ್‌ಪಿಐಗೆ ಐದು ಶೇಕಡಾ ಪಾಲು ದೊರೆಯಬೇಕು ಎಂದಿದ್ದಾರೆ. ಆರ್‌ಪಿಐ ರಾಷ್ಟ್ರೀಯ ಮಹಾ ಕಾರ್ಯದರ್ಶಿ ಅವಿನಾಶ್ ಮಹಾತೇಕರ್, ಉಪಾಧ್ಯಕ್ಷ ತಾನಸೇನ ನನಾವರೆ, ಮುಂಬೈ ಅಧ್ಯಕ್ಷ ಗೌತಮ್ ಸೋನಾವಣೆ, ಯುವ ರಾಜ್ಯಾಧ್ಯಕ್ಷ ಪಪ್ಪುಕಾಗ್ಡೆ ಮತ್ತಿತರರು ಒಳಗೊಂಡಿದ್ದರು.
* * *
ನಷ್ಟದಲ್ಲಿರುವ ಸಿನೆಮಾ ಟಾಕೀಸ್‌ಗಳಿಗೆ ಹೊಸ ಡೆವೆಲಪ್‌ಮೆಂಟ್ ಪ್ಲ್ಯಾನ್‌ನಲ್ಲಿ ಆಶಾಕಿರಣ
ಮಲ್ಟಿಪ್ಲೆಕ್ಸ್ ಶುರುವಾದ ನಂತರ ಸಿನೆಮಾ ಟಾಕೀಸ್‌ಗಳ ಟಿಕೇಟ್ ವಿಂಡೋದಲ್ಲಿ ಪ್ರೇಕ್ಷಕರ ಕ್ಯೂ ಕಡಿಮೆಯಾಯಿತು. ಸಿನೆಮಾ ಟಾಕೀಸ್‌ಗಳ ಸ್ಥಿತಿ ಸಂಕಟದಲ್ಲಿದೆ. ಆದರೆ ಅವನ್ನು ಕೆಡವಿ ಅಲ್ಲಿ ಬೇರೆ ಕಮರ್ಶಿಯಲ್‌ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಈ ತನಕ ಅವಕಾಶವನ್ನೂ ನೀಡಿಲ್ಲ. ಇದೀಗ ಇಂತಹ ಸಿನೆಮಾ ಟಾಕೀಸ್‌ಗಳ ಮಾಲಕರಿಗೆ ಒಂದು ಸಂತಸದ ಸುದ್ದಿ ಬಂದಿದೆ.
ಹೊಸ ಡೆವೆಲಪ್‌ಮೆಂಟ್ ಪ್ಲ್ಯಾನ್‌ನಲ್ಲಿ ಕೆಲವು ಶರತ್ತುಗಳ ಆಧಾರದಲ್ಲಿ ಇಂತಹ ನಷ್ಟದಲ್ಲಿರುವ ಸಿನೆಮಾ ಟಾಕೀಸ್‌ಗಳನ್ನು ಬೇರೆ ವ್ಯವಹಾರಗಳಿಗೆ ಬಳಸಬಹುದು ಎಂಬ ಭರವಸೆ ದೊರೆತಿದೆ. ಆದರೆ ಶರ್ತ ಏನೆಂದರೆ ಸಿನೆಮಾ ಟಾಕೀಸ್ ಮಾಲಕರು ತಮ್ಮ ಜಮೀನಿನ ಒಂದಿಷ್ಟು ಭಾಗವನ್ನು ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಿರಿಸಬೇಕು.
ಸಿನೆಮಾ ಟಾಕೀಸ್‌ಗಳ ಉಪಯೋಗವನ್ನು ಬದಲಿಸುವ ಈ ಪ್ರಸ್ತಾವ ಡೆವೆಲಪ್‌ಮೆಂಟ್ ಪ್ಲ್ಯಾನ್ (ಡಿಪಿ)ನಲ್ಲಿದ್ದರೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ಮೀಸಲಿರಿಸಬೇಕು. ಮುಂಬೈಯ ಅನೇಕ ಸಿನೆಮಾ ಟಾಕೀಸ್‌ಗಳು ಸಂಕಷ್ಟದಲ್ಲಿವೆ. ಸಮಯಕ್ಕೆ ತಕ್ಕಂತೆ ಟಾಕೀಸ್‌ಗಳನ್ನು ಮಾರ್ಪಡಿಸಲೂ ಕೆಲವರಲ್ಲಿ ಹಣದ ಅಭಾವವಿದೆ. ಇಂತಹ ಸ್ಥಿತಿಯಲ್ಲಿ ತಮ್ಮ ಜಮೀನಿನಲ್ಲಿ ಬೇರೆ ಕಾಂಪ್ಲೆಕ್ಸ್ ಕಟ್ಟಿದ್ದರೂ 150 ಸೀಟುಗಳ ಒಂದು ಚಿಕ್ಕ ಸಾಂಸ್ಕೃತಿಕ ಥಿಯೇಟರ್ ಕಟ್ಟಿಸಲೇ ಬೇಕಾಗಿದೆ. ಇಲ್ಲಿ ಆರ್ಟ್ ಗ್ಯಾಲರಿ, ಮ್ಯೂಸಿಯಂ, ಸಂಗೀತ, ಆರ್ಟ್ ಸ್ಕೂಲ್ ಯಾವುದೂ ಆರಂಭಿಸಬಹುದಾಗಿದೆ.
ಮನಪಾ ಕಮಿಷನರ್ ಅಜಯ್ ಮೆಹ್ತಾ ಅನುಸಾರ ಮುಂಬೈಯಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸಲು, ವಿಸ್ತರಿಸಲು ಇದೊಂದು ಪ್ರಯತ್ನವಂತೆ.
* * *
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಲುಂಗಿ ಡಾನ್ಸ್
ಲುಂಗಿ ಹಟಾವೋ ಇದು ಮುಂಬೈಯಲ್ಲಿ ಶಿವಸೇನೆಯ ಹಳೆಯ ಸ್ಲೋಗನ್ ಎನ್ನುವುದು ಎಲ್ಲರಿಗೂ ಗೊತ್ತು. ಎಪ್ಪತ್ತರ ದಶಕದಲ್ಲಿ ದಕ್ಷಿಣ ಭಾರತೀಯರ ವಿರುದ್ಧ ಶಿವಸೇನೆಯ ದೌರ್ಜನ್ಯ ಆ ದಿನಗಳಲ್ಲಿದ್ದವರು ಯಾವತ್ತೂ ಮರೆಯಲಾರರು. ಇದೀಗ ಮಹಾರಾಷ್ಟ್ರದಲ್ಲಿ ಮಾಜಿ ಕೇಂದ್ರ ಮಂತ್ರಿ ಪಿ. ಚಿದಂಬರಂರನ್ನು ರಾಜ್ಯಸಭಾ ಅಭ್ಯರ್ಥಿಯನ್ನಾಗಿಸಿದ ಕಾಂಗ್ರೆಸ್‌ನ ಘೋಷಣೆಯಿಂದ ಈ ಸಂಬಂಧವಾಗಿ ನಡೆಯುತ್ತಿದ್ದ ಲುಂಗಿ ಡ್ಯಾನ್ಸ್ ಸಮಾಪ್ತಿಯಾಗಿದೆ ಎಂದು ಶಿವಸೇನೆ ಹೇಳಿಕೊಂಡಿದೆ.
ಇತ್ತ ಚಿದಂಬರಂರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿದ್ದಕ್ಕೆ ಮಹಾರಾಷ್ಟ್ರದ ಕಾಂಗ್ರೆಸ್ ಒಳಗಡೆ ಅಸಮಾಧಾನ ಹುಟ್ಟಿಕೊಂಡಿದೆ. ಆದರೆ ಹೈಕಮಾಂಡ್ ಇಲ್ಲಿನ ಕಾಂಗ್ರೆಸ್ ಅತೃಪ್ತರ ಮಾತುಗಳನ್ನು ತಳ್ಳಿ ಹಾಕಿದ್ದು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಉತ್ತರಿಸಿದೆ. ಈ ವಿಷಯದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಶೋಕ್ ಚವ್ಹಾಣ್‌ರ ಮಾತೂ ಹೈಕಮಾಂಡ್‌ನಲ್ಲಿ ಬಿದ್ದು ಹೋಗಿದೆಯಂತೆ. ದಿಲ್ಲಿಯಲ್ಲಿ ಮೂರು ದಿನಗಳ ಕಾಲ ಓಡಾಡಿದರೂ ಅಶೋಕ್ ಚವ್ಹಾಣ್‌ಗೆ ಸೋನಿಯಾ ಗಾಂಧಿ ಭೇಟಿಯಾಗಿಲ್ಲವಂತೆ! ಅಂತೂ ಚಿದಂಬರಂ ಅವಿರೋಧ ಆಯ್ಕೆಯಾದರು.
ಇತ್ತ ಪಿ. ಚಿದಂಬರಂರ ರಾಜ್ಯ ಸಭಾ ಪ್ರವೇಶ ಸುಲಭವಾಗುವಂತೆ ಮಾಡಿದ್ದರ ಬೆಲೆಯನ್ನು ಎನ್‌ಸಿಪಿ ವಸೂಲಿ ಮಾಡಿದೆ. ಕಳೆದ ಲೋಕಸಭಾ ಚುನಾವಣೆ ಚೆನ್ನೈಯಿಂದ ಸೋತ ನಂತರ ಚಿದಂಬರಂಗೆ ಮಹಾರಾಷ್ಟ್ರದಿಂದ ಕಾಂಗ್ರೆಸ್ ರಾಜ್ಯಸಭೆಯ ಅಭ್ಯರ್ಥಿಯನ್ನಾಗಿಸಿದೆ. ಇದರ ಬದಲಿಗೆ ಕಾಂಗ್ರೆಸ್ ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲಿ ಎರಡು ಸೀಟುಗಳನ್ನು ಎನ್‌ಸಿಪಿಗೆ ಬಿಟ್ಟುಕೊಡಬೇಕಾಗಿ ಬಂತು.
ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಎನ್‌ಸಿಪಿಯ 42 ಮತ್ತು ಕಾಂಗ್ರೆಸ್‌ನ 41 ಸದಸ್ಯರಿದ್ದಾರೆ. ಸದಸ್ಯ ಸಂಖ್ಯೆಯ ಬಲದಲ್ಲಿ ಇಬ್ಬರೂ ಸಮವಾಗಿಯೇ ಇದ್ದಾರೆ. ಆದರೂ ಕಾಂಗ್ರೆಸ್ ಎನ್‌ಸಿಪಿಗೆ ಎರಡು ಸೀಟುಗಳನ್ನು ಉದಾರವಾಗಿ ಬಿಟ್ಟು ಕೊಟ್ಟಿದೆ. ಎನ್‌ಸಿಪಿ ವಿಧಾನ ಪರಿಷತ್‌ನಲ್ಲಿ ರಾಮ್‌ರಾಜ್ ನಾಯ್ಕಿ ನಿಂಬಾಲ್ಕರ್ ಮತ್ತು ವಿಪಕ್ಷ ನಾಯಕ ಧನಂಜಯ ಮುಂಢೆ ಅವರನ್ನು ಅಭ್ಯರ್ಥಿಯನ್ನಾಗಿ ಕಳುಹಿಸಿದೆ. ಇತ್ತ ಕಾಂಗ್ರೆಸ್ ತನ್ನ ಪಾಲಿಗೆ ಬಂದ ಏಕಮಾತ್ರ ಸೀಟಿಗೆ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರನ್ನು ಅಭ್ಯರ್ಥಿಯನ್ನಾಗಿಸಿತು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತನ್ನ ಭದ್ರತಾಣ ಕಣಕವಲೀಯಿಂದ ಸೋತ ನಂತರ ನಾರಾಯಣ ರಾಣೆ ಮುಂಬೈಯ ಬಾಂದ್ರಾ ಕ್ಷೇತ್ರದಲ್ಲಿ ಉಪಚುನಾವಣೆಗೆ ನಿಂತು ಅಲ್ಲಿಯೂ ಸೋತು ಹೋದರು. ಹೀಗಾಗಿ ಈ ಬಾರಿ ವಿಧಾನ ಪರಿಷತ್‌ಗೆ ರಾಣೆಯನ್ನು ಕಳುಹಿಸಲು ಕಾಂಗ್ರೆಸ್ ನಿಶ್ವಯಿಸಿತ್ತು. ಎಲ್ಲಾ ಸಾಂವಿಧಾನಿಕ ಹುದ್ದೆಗಳಲ್ಲಿ ಈಗ ಎನ್‌ಸಿಪಿಯದ್ದೇ ನಿಯಂತ್ರಣ. ಕಾಂಗ್ರೆಸ್‌ನಲ್ಲಿ ಮಾತನಾಡುವ ಸದಸ್ಯರ ಅಭಾವವಿದೆ. ಹೀಗಾಗಿ ನಾರಾಯಣ ರಾಣೆಯನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿಸಿದ್ದು ಆಶ್ಚರ್ಯವೇನೂ ಇಲ್ಲ.
* * *
ಖಾಸಗಿ ಬಸ್ಸುಗಳ ಓಡಾಟದ ವಿರುದ್ಧ ಮನಸೇ ಅಭಿಯಾನ
ಥಾಣೆ ಮಹಾನಗರ ಪಾಲಿಕೆ ಕ್ಷೇತ್ರದಲ್ಲಿ ಅನಧಿಕೃತವಾಗಿ ಪ್ರಯಾಣಿಕರನ್ನು ಸಾಗಿಸುತ್ತಿರುವ ಖಾಸಗಿ ಬಸ್ಸುಗಳ ಕಾರಣ ಥಾಣೆ ಸಾರಿಗೆ ಸೇವೆಗೆ ಪ್ರತೀದಿನ ಲಕ್ಷಗಟ್ಟಲೆ ರೂಪಾಯಿ ನಷ್ಟವಾಗುತ್ತಿದೆ. ಇದಲ್ಲದೆ ಬಸ್ಸುಗಳಲ್ಲಿ ಕಾರ್ಯ ನಿರತ ನೌಕರರು ಪ್ರಯಾಣಿಕರ ಜೊತೆ ದುರ್ವ್ಯವಹಾರ ನಡೆಸುವ ಪ್ರಕರಣಗಳಿಂದಲೂ ಪಾಲಿಕೆ ಆಡಳಿತ ಕಿರಿಕಿರಿಗೊಳ್ಳುವಂತಾಗಿದೆ. ಅನಧಿಕೃತ ಖಾಸಗಿ ಬಸ್ಸುಗಳನ್ನು ನಿಯಂತ್ರಿಸಬೇಕು. ಅಲ್ಲದೆ ಈ ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸಬೇಕೆಂದು ಥಾಣೆಯ ಮನಸೇ ಪದಾಧಿಕಾರಿಗಳ ಮಂಡಳಿ ಥಾಣೆ ಪ್ರಾದೇಶಿಕ ಸಾರಿಗೆ ವಿಭಾಗ ಮತ್ತು ಟ್ರಾಫಿಕ್ ಪೊಲೀಸರನ್ನು ವಿನಂತಿಸಿದೆ. ಥಾಣೆ-ಘೋಡ್ ಬಂದರ್ ಮಾರ್ಗದಲ್ಲಿ ಖಾಸಗಿ ಬಸ್ಸುಗಳವರದ್ದೇ ದರ್ಬಾರು. ಹೀಗಾಗಿ ಥಾಣೆ ಮಹಾನಗರ ಪಾಲಿಕೆಯ ಸಾರಿಗೆ ಬಸ್ಸುಗಳಿಗೆ ಪ್ರಯಾಣಿಕರು ಸಿಗುತ್ತಿಲ್ಲವಂತೆ. ಅನಧಿಕೃತ ಖಾಸಗಿ ಬಸ್ಸುಗಳು ಕಡಿಮೆ ಟಿಕೆಟ್ ಬೆಲೆಯನ್ನೂ ಇರಿಸಿವೆ. ಆದರೆ ಆರ್‌ಟಿಒ ಈ ಪ್ರಕರಣದಲ್ಲಿ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದೆಯಂತೆ.
ಥಾಣೆ ನಗರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅನಧಿಕೃತ ಬಸ್ಸುಗಳು ಪ್ರಯಾಣಿಕರನ್ನು ಒಯ್ಯುತ್ತಿವೆ. ಈ ಖಾಸಗಿ ಬಸ್ಸು ಚಾಲಕರಿಗೆ ಆರ್‌ಟಿಒ ಮತ್ತು ಟ್ರಾಫಿಕ್ ಪೊಲೀಸರ ಭಯವೇ ಇಲ್ಲವಂತೆ. ಥಾಣೆ ಸಾರಿಗೆ ಸೇವೆಗೆ ಮಾತ್ರವಲ್ಲ ರಾಜ್ಯ ಸರಕಾರದ ಎಸ್.ಟಿ. ಮಹಾಮಂಡಲಕ್ಕೂ ಇದರಿಂದ ಲಕ್ಷಗಟ್ಟಲೆ ರೂ. ನಷ್ಟವಾಗುತ್ತಿದೆಯಂತೆ.
* * *
ಪೊಲೀಸ್ ಠಾಣೆಗಳಲ್ಲಿ ಶೀಘ್ರವೇ 8 ಗಂಟೆ ಡ್ಯೂಟಿ!
ಮುಂಬೈಯ ಪೊಲೀಸರಿಗೆ ಎಂಟು ಗಂಟೆಗಳ ಡ್ಯೂಟಿಯನ್ನು ನಿಧಾನವಾಗಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಜಾರಿಗೆ ತರಲಾಗುವುದು ಎಂದು ಮುಂಬೈ ಪೊಲೀಸ್ ಕಮಿಶನರ್ ದತ್ತಾ ಪಡ್‌ಸಲ್ಗೀಕರ್ ಆಶ್ವಾಸನೆ ನೀಡಿದ್ದಾರೆ. ಸದ್ಯಕ್ಕೆ ಈ ಯೋಜನೆ ಕೇವಲ 2 ಪೊಲೀಸ್ ಠಾಣೆಗಳಲ್ಲಿ ಮಾತ್ರ ಇದೆ. ಪೊಲೀಸರು ಮತ್ತು ಜನತೆಯ ನಡುವೆ ಸಂಬಂಧ ವೃದ್ಧಿಸಲು ಪ್ರತೀ ಪೊಲೀಸ್ ಠಾಣೆಗೆ ಕಮಿಷನರ್ ಭೇಟಿ ನೀಡುವ ಅಭಿಯಾನ ಆರಂಭವಾಗಿದೆ. ಮೊನ್ನೆ ಬೆಳಗ್ಗೆ ಸಾಕಿನಾಕಾ ಪೊಲೀಸ್ ಠಾಣೆಗೆ ಆಗಮಿಸಿದಾಗ ಅವರು ಈ ಮಾತು ತಿಳಿಸಿದರು. ಪೊಲೀಸರ ಆರೋಗ್ಯವನ್ನು ಗಮನದಲ್ಲಿರಿಸಿ 8 ಗಂಟೆಯ ಡ್ಯೂಟಿ ಘೋಷಿಸಲಾಗಿದೆ. ಇದೇ ಸಮಯ ಕಮಿಷನರ್‌ರು ಪೊಲೀಸರ ಬಳಿ ಅಂಗ ದಾನದ ಮಹತ್ವವನ್ನು ತಿಳಿಸಿ ಅಗತ್ಯವಿದ್ದವರಿಗೆ ನೆರವಾಗುವಂತೆಯೂ ಹೇಳಿದರು.
* * *
ಬಿಜೆಪಿಯಲ್ಲಿ ಮತ್ತೆ ಭಿನ್ನಮತ!
ಈ ಬಾರಿಯ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಹೊರಗಿನಿಂದ ಬಂದವರಾಗಿರುವ ಕಾರಣ ವಿವಾದ ಕಾಣಿಸಿದ್ದು ಬಿಜೆಪಿಯ ಒಳಗಡೆ ತೀವ್ರ ಅಸಮಾಧಾನ ಉಂಟಾಗಿದೆ. ಇನ್ನೂ ವಿಚಿತ್ರ ಎಂದರೆ ಉತ್ತರ ಭಾರತದ ಒಬ್ಬರು ಅಭ್ಯರ್ಥಿ ಬಿಜೆಪಿಯ ಸದಸ್ಯತನ ಹೊಂದಿದ ಕೆಲವೇ ಗಂಟೆಗಳಲ್ಲಿ ಅವರಿಗೆ ಅಭ್ಯರ್ಥಿ ಪಟ್ಟ ದೊರಕಿದ್ದುದು! ಇನ್ನ್ನಿಬ್ಬರು ಉತ್ತರ ಭಾರತೀಯರಿಗೆ ಕಿರುಕುಳ ನೀಡಿದ ಮಹಾರಾಷ್ಟ್ರ ನವನಿರ್ಮಾಣ ಸೇನೆಯಿಂದ ಹೊರಬಂದ ಅಭ್ಯರ್ಥಿಗಳು. ಇವರೆಂದರೆ ಆರ್.ಎನ್. ಸಿಂಗ್ ಮತ್ತು ಪ್ರವೀಣ್ ದರೇಕರ್. ಈ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಲ್ಲಿಗೆ ತೆರಳಿದ ಬಿಜೆಪಿಯ ಅಸಮಾಧಾನ ಹೊಂದಿದ ಬಣದ ಪ್ರತಿನಿಧಿಗಳಿಗೆ ಫಡ್ನವೀಸ್ ನೀಡಿದ ಉತ್ತರ: ‘‘ಇದು ಕೇಂದ್ರ ಸಮಿತಿಯ ನಿರ್ಧಾರವಾಗಿದೆ!.’’ ಈ ಬಗ್ಗೆ ಕೆಲವರು ಬಿಜೆಪಿಗೆ ಸಾಮೂಹಿಕ ರಾಜೀನಾಮೆ ನೀಡುವ ಸಿದ್ಧತೆಗೂ ತೊಡಗಿದ್ದರು ಎನ್ನಲಾಗಿದೆ.