ಭಗವದ್ಗೀತೆ-ಒಂದು ವಿಮರ್ಶೆ
ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿಸಬೇಕು ಎಂದು ಕೆಲವು ವೈದಿಕ ಮನಸ್ಸುಗಳು ಸಂಚು ನಡೆಸುತ್ತಿರುವ ಸಂದರ್ಭದಲ್ಲಿ, ಎಂ. ಸಿ. ಡೋಂಗ್ರೆ ಅವರು ‘ಭಗವದ್ಗೀತೆ-ಒಂದು ವಿಮರ್ಶೆ’ ಕೃತಿಯನ್ನು ಹೊರತಂದಿದ್ದಾರೆ. ಕೃತಿಯನ್ನು ಬರೆದ ಉದ್ದೇಶವನ್ನು ಹೇಳುವ ಲೇಖಕರು ‘ಭಗವದ್ಗೀತೆಯನ್ನು ಹೀಯಾಳಿಸುವುದಕ್ಕಾಗಲಿ ಅಥವಾ ಯಾವುದೇ ವ್ಯಕ್ತಿಯ ನಂಬಿಕೆಗಳನ್ನು ಕಾರಣವಿಲ್ಲದೆ ಅಲುಗಾಡಿಸುವುದಕ್ಕಾಗಲಿ ಈ ಪುಸ್ತಕವನ್ನು ಬರೆದಿಲ್ಲ’’ ಎಂದು ಆರಂಭದಲ್ಲೇ ಸ್ಪಷ್ಟೀಕರಣ ನೀಡುತ್ತಾರೆ. ಲೇಖಕರು ಭಗವದ್ಗೀತೆಯನ್ನು ಓದಿ, ಆಳವಾಗಿ ಅಧ್ಯಯನ ಮಾಡಿದ ಬಳಿಕ ಈ ವಿಮರ್ಶೆಯನ್ನು ಮಾಡಿದ್ದಾರೆ.ೃತಿಯಲ್ಲಿ ಒಟ್ಟು ಆರು ಭಾಗಗಳಿವೆ. ಮೊದಲ ಭಾಗದಲ್ಲಿ ಭಗವದ್ಗೀತೆಯ ಕಾಲನಿರ್ಣಯವನ್ನು ಮಾಡುತ್ತಾರೆ. ಗೀತೆಯನ್ನು ಯಾವಾಗ ರಚಿಸಲಾಯಿತು, ಭಗವದ್ಗೀತೆಗೆ ಶಂಕರಾಚಾರ್ಯರ ಕೊಡುಗೆ ಮತ್ತು ಆಚಾರ್ಯರ ಕೃತಿಗಳು ಅವರ ವ್ಯಕ್ತಿತ್ವ ಭಗವದ್ಗೀತೆ ಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಿದೆ ಎನ್ನುವುದನ್ನು ಈ ಅಧ್ಯಾಯದಲ್ಲಿ ಚರ್ಚಿಸುತ್ತಾರೆ.ರಡನೆ ಭಾಗದಲ್ಲಿ ಮೂಲ ಸಾಂಖ್ಯವನ್ನು ಭಗವದ್ಗೀತೆ ಹೇಗೆ ಅಪಭ್ರಂಶಗೊಳಿಸಿದೆ ಎನ್ನುವುದನ್ನು ತಿಳಿಸುತ್ತಾರೆ. ಭಗವದ್ಗೀತೆ ಮೂಲ ಸಾಂಖ್ಯ ಸಿದ್ಧಾಂತದ ತಿರುಚುವಿಕೆ ಮತ್ತು ಇದೊಂದು ಕಿಚಡಿ ಸಾಂಖ್ಯ ಎಂದೂ ಲೇಖಕರು ಅಭಿಪ್ರಾಯಪಡುತ್ತಾರೆ. ಪ್ರಾಚೀನ ಗ್ರಂಥಗಳಲ್ಲಿ ಹಲವು ವಿರೂಪಗೊಳಿಸುವ ಕೆಲಸ ನಡೆದಿದ್ದು, ಈ ಪ್ರಕ್ರಿಯೆ ಕ್ರಿ. ಶ. 5ನೆ ಶತಮಾನದಿಂದ 8ನೆ ಶತಮಾನದವರೆಗೆ ಅವ್ಯಾಹತವಾಗಿ ವೈದಿಕ ಸನಾತನಿಗಳಿಂದ ನಡೆದಿದೆ ಎಂದು ಅವರು ಉದಾಹರಣೆಗಳ ಸಹಿತ ನಿರೂಪಿಸುತ್ತಾರೆ. ಭಗವದ್ಗೀತೆಯಲ್ಲೂ ಇದು ಹೇಗೆ ನಡೆದಿದೆ ಎನ್ನುವುದನ್ನು ಅವರು ವಿವರಿಸುತ್ತಾರೆ. ಮೂರನೆ ಭಾಗದಲ್ಲಿ, ಭಗವದ್ಗೀತೆಯೊಳಗಿರುವ ಸುಳ್ಳುಗಳನ್ನು ಅವರು ಎತ್ತಿ ಹಿಡಿಯುತ್ತಾರೆ. ನಾಲ್ಕನೆ ಭಾಗದಲ್ಲಿ ಭಗವದ್ಗೀತೆಯೊಳಗಿನ ವಿರೋಧಾಭಾಸಗಳು, ಹೆಣ್ಣಿನ ಕುರಿತ ತಿರಸ್ಕಾರದ ಕಡೆಗೆ ಬೆಳಕು ಚೆಲ್ಲುತ್ತಾರೆ. ಭಾರತವನ್ನು ವಿದೇಶಿ ದಾಸ್ಯಕ್ಕೊಳಪಡಿಸುವಲ್ಲಿ ಭಗವದ್ಗೀತೆ ಮತ್ತು ಅದರ ಅನುಯಾಯಿಗಳ ಕೊಡುಗೆ ಬಹುದೊಡ್ಡದು ಎಂದೂ ಅವರು ಅಭಿಪ್ರಾಯಪಡುತ್ತಾರೆ. ಐದನೆ ಭಾಗದಲ್ಲಿ, ಭಗವದ್ಗೀತೆಯ ಕುರಿತಂತೆ ಬೇರೆ ಬೇರೆ ಮಹಾನ್ ವ್ಯಕ್ತಿಗಳ ಅನಿಸಿಕೆಗಳ ಕುರಿತಂತೆ ಟೀಕೆ ಟಿಪ್ಪಣಿಗಳನ್ನು ಬರೆದಿದ್ದಾರೆ. ಆರನೆ ಭಾಗದಲ್ಲಿ ಭಗವದ್ಗೀತೆ ಒಂದು ಜ್ಞಾನವೇ ಎನ್ನುವುದರ ಕಡೆಗೆ ದೃಷ್ಟಿ ಹಾಯಿಸುತ್ತಾರೆ. ಅದೊಂದು ವಿಕೃತ ಜ್ಞಾನ ಎಂಬ ನಿಲುವಿಗೆ ಬರುತ್ತಾರೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 75 ರೂ. ಆಸಕ್ತರು 080-30578020 ದೂರವಾಣಿಯನ್ನು ಸಂಪರ್ಕಿಸಬಹುದು.