ಚೆಕ್ಪೋಸ್ಟ್ಗಳಲ್ಲಿ ನಿಲ್ಲುವ ಲಾರಿಗಳಿಂದ ಸೋರಿಕೆಯಾಗುವ ಆದಾಯ ಎಷ್ಟು ಲಕ್ಷ ಕೋಟಿ ಗೊತ್ತೇ?
ಹೊಸದಿಲ್ಲಿ, ಜೂ.8: ಚೆಕ್ಪೋಸ್ಟ್ಗಳಲ್ಲಿ ಸರದಿಯಲ್ಲಿ ಕಾಯುವ ಕಾರಣದಿಂದಾಗಿ ಲಾರಿಗಳಲ್ಲಿ ಸರಕು ಸಾಗಾಟ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ವಾರ್ಷಿಕ ಸುಮಾರು 21.3 ಶತಕೋಟಿ ಡಾಲರ್ ಅಂದರೆ 1.45 ಲಕ್ಷ ಕೋಟಿ ರೂಪಾಯಿ ಆದಾಯ ನಷ್ಟವಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ.
ಕಾನೂನು ಜಾರಿ ಸಂಸ್ಥೆಗಳು ವಿವಿಧೆಡೆ ತಪಾಸಣೆಗಾಗಿ ಲಾರಿಗಳನ್ನು ನಿಲ್ಲಿಸುವುದು ಮಾತ್ರವಲ್ಲದೇ ಟೋಲ್ ಪ್ಲಾಜಾಗಳಲ್ಲಿ ಪದೇ ಪದೇ ನಿಲುಗಡೆ ಮಡುವುದರಿಂದ ಹೆಚ್ಚುವರಿ ನಷ್ಟವಾಗುತ್ತಿದೆ ಎಂದು ಕೊಲ್ಕತ್ತಾದ ಭಾರತೀಯ ವ್ಯವಸ್ಥಾಪನಾ ಸಂಸ್ಥೆ (ಐಐಎಂ) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಕಳೆದ ಕೆಲವು ವರ್ಷಗಳಲ್ಲಿ ರಸ್ತೆ ಲಂಚ ಕಡಿಮೆಯಾಗಿಲ್ಲ ಎನ್ನುವ ಅಂಶ ಕೂಡಾ ಅಧ್ಯಯನದಿಂದ ಬಹಿರಂಗವಾಗಿದೆ. ಭಾರತೀಂು ರಸ್ತೆಗಳಲ್ಲಿ ಸರಕು ಸಾಗಾಣಿಕೆ ಕಾರ್ಯಾಚರಣೆ ಕ್ಷಮತೆ ಕುರಿತ ಮೂರನೆ ವರದಿಯಲ್ಲಿ ಈ ಅಂಶಗಳನ್ನು ವಿವರಿಸಲಾಗಿದೆ. ವಾಹನಗಳ ವೇಗ ಹಾಗೂ ಸರಾಸರಿ ಪ್ರಯಾಣ ಅವಧಿ ಕಡಿಮೆಯಾಗಿದ್ದರೂ, ಅಧಿಕ ನಿಲುಗಡೆ, ವಿಳಂಬ ಹಾಗೂ ಸರಕು ಸಾಗಾಣಿಕೆ ದುಬಾರಿಯಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಟೋಲ್ ಪ್ಲಾಜಾಗಳಿಗಿಂತ ಹೆಚ್ಚು ಚೆಕ್ಪೋಸ್ಟ್ ಹಾಗೂ ರಾಜ್ಯಗಳ ಗಡಿಗಳಲ್ಲಿ ವಿಳಂಬವಾಗುತ್ತಿದೆ ಎಂದು ವಿವರಿಸಿದೆ. ರಾಜ್ಯಗಳ ಪ್ರವೇಶಕ್ಕೆ ತೆರಿಗೆ, ಮಾರಾಟ ತೆರಿಗೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ತಪಾಸಣೆಯಿಂದ ವಿಳಂಬವಾಗುತ್ತಿದೆ.
28 ಪ್ರಮುಖ ಕಾರ್ಯಾಚರಣೆ ಮಾರ್ಗಗಳ ಸರಾಸರಿ ಅಂಕಿ ಅಂಶಗಳನ್ನು ಗಮನಿಸಿದರೆ, ಸರಾಸರಿ ಕಿಲೋಮೀಟರ್ ಪ್ರಯಾಣಕ್ಕೆ ವಿಳಂಬದ ಅವಧಿ 2011-12ರ ಪ್ರಮಾಣದಲ್ಲೇ ಇದೆ. ಪ್ರತಿ ಟನ್ ಅಥವಾ ಕಿಲೋಮೀಟರ್ಗೆ ಆಗುವ ನಿಲುಗಡೆ ವೆಚ್ಚ ಇನ್ನಷ್ಟು ಹೆಚ್ಚಿದೆ. ವಿಳಂಬದಿಂದ ಆಗುತ್ತಿರುವ ವೆಚ್ಚ ಸುಮಾರು 6.6 ಶತಕೋಟಿ ಡಾಲರ್ ಆಗಿದ್ದು, ಈ ವಿಳಂಬದಿಂದ ಆಗುತ್ತಿರುವ ಇಂಧನ ಬಳಕೆ 14.7 ಶತಕೋಟಿ ಡಾಲರ್ ಆಗಿದೆ.