ಅಮೆರಿಕದ ದೊಡ್ಡಣ್ಣತನ ಮತ್ತು ನಮ್ಮ ದಡ್ಡತನ
2ನೆ ಮಹಾಯುದ್ಧದ ಆನಂತರ ಜಗತ್ತಿನಲ್ಲಿ ಯುದ್ಧಗಳನ್ನು ತಪ್ಪಿಸುವ ಮತ್ತು ಶಾಂತಿಯನ್ನು ಸ್ಥಾಪಿಸುವ ಹಾಗೂ ಅಭಿವೃದ್ಧಿಗೆ ಇಂಬುಕೊಡುವ ವಿಶ್ವಸಂಸ್ಥೆಯಂತಹ ಸಂಘಟನೆಗಳು ಅಸ್ತಿತ್ವಕ್ಕೆ ಬಂದವಾದರೂ 20ನೆ ಶತಮಾನದ ಉತ್ತರಾರ್ಧದಲ್ಲಿ ಅಮೆರಿಕ ಮತ್ತು ಸೋವಿಯೆಟ್ ಒಕ್ಕೂಟದ ನಡುವೆ ಶೀತಲ ಸಮರ ನಡೆಯುತ್ತಿತ್ತು. ಕ್ರೀಡೆ, ವಿಜ್ಞಾನ, ಮತ್ತು ಪ್ರಭಾವ ಹಾಗೂ ಜನಪ್ರಿಯತೆಗೆ ಸಂಬಂಧಿಸಿದ ಯಾವುದೇ ವೌಲ್ಯಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರವಾಗಿ ನಡೆಯುತ್ತಿದ್ದ ಕಾಲ ಅದು. ಈ ಸಂದರ್ಭದಲ್ಲಿ ಅಲಿಪ್ತ ನೀತಿಯನ್ನು ನೆಹರೂ, ಟಿಟೊ ಮುಂತಾದ ನಾಯಕರು ಹುಟ್ಟುಹಾಕಿದರು. ಯಾವುದೇ ಒಂದು ಬಣಕ್ಕೆ ಸಿಕ್ಕಿಹಾಕಿಕೊಂಡರೆ ಆಗುವ ಆಪತ್ತಿನ ಅರಿವು ಈ ನಾಯಕರಿಗಿತ್ತು. ಇದರ ಫಲಿತಾಂಶವೆಂದರೆ ಭಾರತವೂ ಸೇರಿದಂತೆ ಅಲಿಪ್ತ ದೇಶಗಳು ತಮಗೆ ಬೇಕಾದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜನೀತಿಯನ್ನು ಹೊಂದುವುದಕ್ಕೆ ಶಕ್ತವಾದವು. ಇಂತಹ ಸಂಯಮದ ರಾಜಕೀಯದ ನಡುವೆಯೂ ಅಮೆರಿಕವು ವಿಶ್ವ ರಾಜಕೀಯದಲ್ಲಿ ಮೇಲುಗೈ ಸ್ಥಾಪಿಸಲು ಮತ್ತು ವಿಶ್ವದ ದೊಡ್ಡಣ್ಣನೆಂಬ ಸ್ಥಾನಕ್ಕೆ ಏರುವಲ್ಲಿ ಯಶಸ್ವಿಯಾಯಿತು. ಅದು ವಿಶ್ವಶಾಂತಿಯನ್ನು ಕದಡಲು ಪದೇಪದೇ ಪ್ರಯತ್ನಿಸುತ್ತ ಬಂದಿತು. ಕ್ಯೂಬಾದ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳ ಹೊರತಾಗಿ ಇನ್ಯಾವ ದೇಶವೂ ಅದನ್ನು ವಿರೋಧಿಸಿಲ್ಲ. (ಇತ್ತೀಚೆಗಿನ ವರ್ಷಗಳಲ್ಲಿ ಚೀನಾ, ಉತ್ತರ ಕೊರಿಯಾ ಅಮೆರಿಕವನ್ನು ಶಕ್ತವಾಗಿ ಎದುರಿಸುತ್ತ ಬಂದಿವೆ!) ಅಮೆರಿಕವು ಪ್ರಜಾತಂತ್ರದ ಹೆಸರಿನಲ್ಲಿ ತನ್ನನ್ನು ಬೆಂಬಲಿಸಲು ಕರೆಕೊಟ್ಟರೂ ಅದರ ಉದ್ದೇಶವಿರುವುದು ಯಾವುದೇ ಕಾರಣದಿಂದಲಾದರೂ ಸಂಪದ್ಭರಿತವಾಗುವುದು ಮತ್ತು ವಿಶ್ವ ರಾಜಕಾರಣದಲ್ಲಿ ಅನಿವಾರ್ಯವಾಗುವುದು. ಇದಕ್ಕಾಗಿ ಅದು ನಿಯಮಗಳನ್ನು ರಚಿಸುತ್ತ, ಬೇಕಾದಾಗ ಅವನ್ನು ಮುರಿಯುತ್ತ, ಇತರರನ್ನು ನಿಯಂತ್ರಿಸುತ್ತ ಬಂದಿದೆ.
ಅಮೆರಿಕವು ಸಾಕಷ್ಟು ವರಮಾನವನ್ನು ಶಸ್ತ್ರಾಸ್ತ್ರ ಪೂರೈಕೆಯಲ್ಲೇ ಪಡೆಯುತ್ತಿದೆ. ಇದಕ್ಕೆ ಕಾರಣವೆಂದರೆ ಅಭಿವೃದ್ಧಿ ಹೊಂದಿದ ಮಾತ್ರವಲ್ಲ ಅಭಿವೃದ್ಧಿಶೀಲ (ಇನ್ನೂ ಬೆಳೆಯಬೇಕಾದ ದೇಶಗಳಿಗೆ ಈ ಹೆಸರು!) ದೇಶಗಳಿಗೂ (ಅಭಿವೃದ್ಧಿ ಹೊಂದುವುದಕ್ಕಿಂತಲೂ ಹೆಚ್ಚಾಗಿ) ಇರುವ ಶಸ್ತ್ರಾಸ್ತ್ರ ಪೈಪೋಟಿ. ಪ್ರತೀ ದೇಶಕ್ಕೂ ತನ್ನ ನೆರೆಕರೆಯ ದೇಶಗಳಿಗೆ ನೆರವಾಗುವುದಕ್ಕಿಂತ, ಪರಸ್ಪರ ಸಾಮರಸ್ಯವನ್ನು ಸ್ಥಾಪಿಸುವುದಕ್ಕಿಂತ ಹೆಚ್ಚು ಆಸಕ್ತಿಯಿರುವುದು ಪಾಳೇಗಾರಿಕೆಯಲ್ಲಿ. ಈ ಅಮೆರಿಕತ್ವವು ಪ್ರತೀ ದೇಶದ ಕನಸು. ಇದನ್ನು ನನಸಾಗಿಸಬೇಕಾದರೆ ಸಾಕಷ್ಟು ಶಸ್ತ್ರಾಸ್ತ್ರ ಹೊಂದುವುದು ಮಾತ್ರವಲ್ಲ, ಅಮೆರಿಕದ ಕೃಪೆಗೆ ಪಾತ್ರವಾಗುವುದೂ ಅಗತ್ಯ. ಇದನ್ನೇ ಬಂಡವಾಳವಾಗಿಸಿಕೊಂಡು ಅಮೆರಿಕವು ವಿಯೆಟ್ನಾಂ, ಕೊರಿಯಾ ಹೀಗೆ ವಿಶ್ವದ ದುರ್ಬಲ ದೇಶಗಳಲ್ಲಿ ತನ್ನ ಪರಾಕ್ರಮವನ್ನು ಮೆರೆಯಿತು. ವಿಯೆಟ್ನಾಂ ದೇಶದ ದಿಟ್ಟ ಪ್ರತಿಭಟನೆಯನ್ನು ಎದುರಿಸಲಾಗದೆ ಅಮೆರಿಕ ಕೊನೆಗೆ ಬಾಲಮುದುಡಿ ಹಿಂದೆ ಸರಿಯಬೇಕಾಯಿತು. ಅಮೆರಿಕದ ವಿವೇಕಿಗಳು ವಿರೋಧಿಸಿದ ಯುದ್ಧ ಅದು. ತನ್ನ ದೇಶದಲ್ಲಿ ವರ್ಣದ್ವೇಷವನ್ನು ನಡೆಸುತ್ತ ಇನ್ನೊಂದು ದೇಶದ ವರ್ಣೀಯರನ್ನು ಹಿಂಸಿಸುವ ಅಮೆರಿಕದ ಈ ವಿಕೃತಿಯನ್ನು ಇತ್ತೀಚೆಗೆ ತೀರಿಕೊಂಡ ಬಾಕ್ಸಿಂಗ್ ತ್ರಿವಿಕ್ರಮ ಮುಹಮ್ಮದ್ ಅಲಿ ಟೀಕಿಸಿದ್ದು ಮಾತ್ರವಲ್ಲ, ಇದೇ ಕಾರಣಕ್ಕಾಗಿ ಸೇನೆಯಲ್ಲಿ ಕಡ್ಡಾಯ ಸೇವೆಯನ್ನು ನಿರಾಕರಿಸಿ ಜೈಲುವಾಸವನ್ನನುಭವಿಸಿದರು. ನೆಹರೂ ಯುಗದಲ್ಲಿ ಮಾತ್ರವಲ್ಲ, ಇಂದಿರಾಯುಗದಲ್ಲೂ ಭಾರತವು ಈ ಸ್ವಾತಂತ್ರ್ಯವನ್ನು ಉಳಿಸಿಕೊಂಡಿತ್ತು. ಎರಡೂ ಬಣಗಳ ನಡುವೆ ತಂತಿಯ ಮೇಲಣ ನಡಿಗೆಯಲ್ಲಿ ಭಾರತವು ಯಶಸ್ಸನ್ನು ಕಂಡಿತು. ನೆಹರೂ ಸಾತ್ವಿಕವಾದವನ್ನು ಮಂಡಿಸಿದರೆ ಇಂದಿರಾ ರಾಜಸ ಮತ್ತು ಕೆಲವು ಬಾರಿ ಆಕ್ರಮಣಶೀಲ ಪ್ರವೃತ್ತಿಯನ್ನು ಪ್ರದರ್ಶಿಸಿದರು. ಪ್ರಾಜ್ಞರಾಗಿದ್ದ ನೆಹರೂ ತನ್ನ ಪಂಚಶೀಲದ ಧರ್ಮರಾಯತನದಲ್ಲಿ ಚೀನಾ ಮತ್ತು ಪಾಕಿಸ್ತಾನದೆದುರು ಸಜ್ಜನಿಕೆಯಿಂದಲೋ ಎದುರಾಳಿಗಳನ್ನು ಅಳೆಯುವಲ್ಲಿ ವಿಫಲರಾದ್ದರಿಂದಲೋ ನಿರರ್ಥಕರಾದದ್ದು ಇತಿಹಾಸ. ಪ್ರಾಯಶಃ ಅದೇ ಕೊರಗು ನೆಹರೂರನ್ನು ಬಲಿತೆಗೆದುಕೊಂಡಿರಬೇಕು.
ಆನಂತರ ಬಂದ ಲಾಲ್ ಬಹದ್ದೂರ್ ಶಾಸ್ತ್ರಿ ಪಾಕಿಸ್ತಾನದೆದುರು ಕೆಚ್ಚೆದೆಯನ್ನು ಪ್ರದರ್ಶಿಸಿದರೂ ಬಲಿಷ್ಠ ಸೋವಿಯೆಟ್ ಒಕ್ಕೂಟದೆದುರು ರಾಜಿಸೂತ್ರವನ್ನೊಪ್ಪಲೇಬೇಕಾಗಿ ತಾಷ್ಕೆಂಟ್ ಸಂಧಾನ ನಡೆಸಿದರೂ ಮಾನಸಿಕ ಒತ್ತಡದಿಂದಲೋ ಅಥವಾ ನಿಗೂಢವಾಗಿರುವ ಇನ್ಯಾವುದೋ ಕಾರಣದಿಂದಲೋ ಅಲ್ಲೇ ನಿಧನರಾದರು. ಆದರೆ ಇಂದಿರಾ ಹೀಗಾಗಲಿಲ್ಲ. ಆರಂಭದಿಂದಲೇ ಅಮೆರಿಕದ ಓಲೈಕೆಯನ್ನು ಕೈಬಿಟ್ಟವರು ಇಂದಿರಾ. 1971ರ ಬಾಂಗ್ಲಾ ವಿಮೋಚನೆಗೆ ಮೊದಲು ಇಡೀ ವಿಶ್ವಯಾತ್ರೆಯನ್ನು ಕೈಗೊಂಡು ಭಾರತಕ್ಕಿರುವ ಆಪತ್ತನ್ನು ವಿವರಿಸಿದರು. ಅಮೆರಿಕದ ಅಧ್ಯಕ್ಷ ನಿಕ್ಸನ್‌ರನ್ನು ‘‘ಯು ಆರ್ ರಾಂಗ್ ಮಿಸ್ಟರ್ ನಿಕ್ಸನ್’’ ಎಂದು ಹೇಳಿದರೆಂದು ಜಗಜ್ಜಾಹೀರಾಗಿತ್ತು. ಈ ಎಲ್ಲ ಕೇವಿಯಟ್‌ಗಳನ್ನು ಸಲ್ಲಿಸಿದ ನಂತರವಷ್ಟೇ ಇಂದಿರಾ ಬಾಂಗ್ಲಾ ಯುದ್ಧದಲ್ಲಿ ತೊಡಗಿದರು. ಅಮೆರಿಕವನ್ನು ನಿಶ್ಶಕ್ತಗೊಳಿಸದ ಯುದ್ಧ ಇದು. ಅನಂತರದ ವರ್ಷಗಳಲ್ಲಿ ಭಾರತವು ಅಮೆರಿಕದಿಂದ ದೂರವಾಗಿತ್ತು. ಈ ಹಂತದಲ್ಲಿ ಅಮೆರಿಕವು ಸೋವಿಯೆಟ್ ಒಕ್ಕೂಟವನ್ನು ಮುರಿಯಲು ಶಕ್ತವಾಯಿತು. ಇದಕ್ಕಾಗಿಯೇ ಎಂಬಂತೆ ಗೊರ್ಬಚೆವ್‌ಗೆ ನೊಬೆಲ್ ಪ್ರಶಸ್ತಿ ನೀಡಲಾಯಿತೆಂದು ಹೇಳಲಾಗಿದೆ. (ಅಮೆರಿಕದ ವಿರುದ್ಧವಿದ್ದ ಯಾವ ವ್ಯಕ್ತಿಯೂ ನೊಬೆಲ್ ಪ್ರಶಸ್ತಿ ಪಡೆಯುತ್ತಿರಲಿಲ್ಲ!) ಇದರೊಂದಿಗೆ ವಿಶ್ವಸ್ವಾಮ್ಯವು ತನ್ನದಾಯಿತೆಂದು ಅಮೆರಿಕ ತಿಳಿಯಿತು. ಅದು ಈಗ ತನ್ನ ಸಂಪತ್ತನ್ನು ಕ್ರೋಡೀಕರಿಸಲು ಮತ್ತು ಭವಿಷ್ಯದಲ್ಲೂ ತನ್ನ ತೈಲ ಮುಂತಾದ ಸಂಪನ್ಮೂಲಗಳು ಕರಗದಂತಿರಲು ಮಧ್ಯಪೂರ್ವದಂತಹ ಶ್ರೀಮಂತ ದೇಶಗಳ ರಾಜಕೀಯದಲ್ಲಿ ನೇರ ಪ್ರವೇಶಿಸಿತು. ಪ್ರಜಾತಂತ್ರದ ಹೆಸರಿನಲ್ಲಿ ಅರಸೊತ್ತಿಗೆಯನ್ನು ಮುರಿದರೆ, ಅರಾಜಕತೆಯ ಹೆಸರಿನಲ್ಲಿ ಪ್ರಜಾತಾಂತ್ರಿಕ ಸರಕಾರಗಳನ್ನು ಮಟ್ಟಹಾಕಿತು. ಇರಾನ್, ಇರಾಕ್ ಲಿಬಿಯಾ, ಸಿರಿಯಾ, ಟರ್ಕಿ, ಮುಂತಾದ ದೇಶಗಳಲ್ಲಿ ಅವ್ಯವಸ್ಥೆಯನ್ನು ಪಾಲಿಸಿಕೊಂಡು ಬಂತು. ಇದರ ಲಾಭವೆಂದರೆ ಅವೆಲ್ಲವೂ ಪರಿಹಾರಕ್ಕಾಗಿ ಅಮೆರಿಕವನ್ನು ಆಶ್ರಯಿಸಬೇಕಾಯಿತು.
ಬ್ರಿಟನ್ ಅಂತೂ ಅಮೆರಿಕದ ಗೇಣಿ ಒಕ್ಕಲಿನಂತೆ ವ್ಯವಹರಿಸುತ್ತಿತ್ತು. ಈ ಸ್ಥಿತಿಯನ್ನು ದೂರದಿಂದಲೇ ನೋಡಿ ಆತಂಕಪಟ್ಟ ಸೌದಿ ಅರೇಬಿಯಾ ಮುಂತಾದ ದೇಶಗಳು ಅಮೆರಿಕದೊಂದಿಗೆ ಸ್ನೇಹಿತರಾಗಲು ಬಯಸಿದವು. 20ನೆ ಶತಮಾನದ ಕೊನೆಯ ಹೊತ್ತಿಗೆ ಸೋವಿಯೆಟ್ ಒಕ್ಕೂಟ ನಶಿಸಿದ್ದರೂ ಅದರ ದೊಡ್ಡ ಪಾಲುದಾರನಾಗಿದ್ದ ರಶ್ಯಾವು ಅಮೆರಿಕದೊಂದಿಗೆ ಸೆಣಸಲು ನಿರ್ಧರಿಸಿದ್ದು ನಿಜಕ್ಕೂ ಒಂದು ಅಚ್ಚರಿಯ ಬೆಳವಣಿಗೆ. ಈ ಸಮಯಕ್ಕೆ ಚೀನಾವು ತನ್ನ ಭಾರೀ ಜನಸಂಖ್ಯೆಯ ಭಾರದ ಹೊರತಾಗಿಯೂ ವಿಶ್ವದ ಒಂದು ದೊಡ್ಡ ಶಕ್ತಿಯಾಗಿ ಬೆಳೆದಿತ್ತು ಮಾತ್ರವಲ್ಲ ತನ್ನ ಸ್ವತಂತ್ರ ನಿಲುವನ್ನು ಬಲಿಗೊಡದೆ ಉಳಿಯಿತು. ಇದರಿಂದಾಗಿ ಅಮೆರಿಕವು ಒಂದು ಆರ್ಥಿಕಶಕ್ತಿಯಾಗಿ ಬೆಳೆಯುವ ಪ್ರಮಾಣವು ಕ್ಷೀಣಿಸಿತ್ತು. ಆದರೂ ಅಮೆರಿಕವು ತನಗಿಷ್ಟ ಬಂದಂತೆ ವಿಶ್ವದ ಗೊಂದಲದ ರಾಜಕೀಯದಲ್ಲಿ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಲು ಭಯೋತ್ಪಾದನೆಯನ್ನು ದಾಳವಾಗಿ ಪ್ರಯೋಗಿಸಿ ಸಾಕಷ್ಟು ಹಿಂಸೆಯನ್ನುಂಟುಮಾಡಿತು. ಇತ್ತೀಚೆಗಿನ ದಶಕಗಳಲ್ಲಂತೂ ಕೆಲವು-ಮುಖ್ಯವಾಗಿ ಮುಸ್ಲಿಂ ದೇಶಗಳಲ್ಲಿನ-ಸಂಘಟನೆಗಳು ಭಯೋತ್ಪಾದನೆಯಲ್ಲಿ ತೊಡಗಿದ್ದನ್ನು ನೆಪವಾಗಿಸಿಕೊಂಡು ಇರಾಕಿನ ಸದ್ದಾಂ ಹುಸೈನ್, ಲಿಬಿಯಾದ ಗದ್ದಾಫಿ ಮುಂತಾದವರ ಅಮಾನುಷ ಕೊಲೆಗೆ ಅಮೆರಿಕವು ನೇರವಾಗಿ ಕಾರಣ ವಾಯಿತು. ಆದರೆ ವಿಶ್ವಸಂಸ್ಥೆಯೂ ಸೇರಿದಂತೆ ಎಲ್ಲ ಜಾಗತಿಕ ಸಂಘಟನೆ ಗಳನ್ನೂ ಅದು ನಿಯಂತ್ರಿಸುತ್ತಲೇ ಬಂದದ್ದರಿಂದ ಯಾವ ದೇಶವೂ ಅದನ್ನು ಮಾನವ ಹಕ್ಕುಗಳ ಉಲ್ಲಂಘನೆಗೆ ಸಮರ್ಥವಾಗಿ ಗುರಿಯಾಗಿಸಲು ಸಾಧ್ಯವಾಗಲಿಲ್ಲ. ಆದರೂ ಕೆಲವು ರಾಷ್ಟ್ರಗಳಾದರೂ ಅದರ ವಿರುದ್ಧ ದನಿಯೆತ್ತುತ್ತಿವೆಯೆಂಬುದು ನಿಜಕ್ಕೂ ಸಮಾಧಾನದ ವಿಚಾರ. ವಿಶ್ವದ ಅನೇಕ ಚಿಂತಕರು ಅಮೆರಿಕವನ್ನು ಟೀಕಿಸುತ್ತಲೇ ಬಂದಿದ್ದಾರೆ. ಅಮೆರಿಕದಲ್ಲಿನ ಚಾಮ್‌ಸ್ಕಿ, ಸೈದ್ ಮುಂತಾದ ಸಮಾಜಶಾಸ್ತ್ರಜ್ಞರು ಜಾಗತಿಕ ಮಾನವ ಹಕ್ಕಿನ ಉಲ್ಲಂಘನೆಯಲ್ಲಿ ಅಮೆರಿಕದ ಪಾತ್ರವನ್ನು ಹೇಳುತ್ತಲೇ ಬಂದಿದ್ದಾರೆ. ಆದರೂ ಬಹಳಷ್ಟು ಪರಿಣಾಮವಾದಂತಿಲ್ಲ. ಬದಲಾಗಿ ಅಮೆರಿಕವು ಎಲ್ಲ ಕಡೆ ತೋಳ-ಕುರಿಮರಿ ನ್ಯಾಯವನ್ನು ಪ್ರಯೋಗಿಸುತ್ತಿದೆ.
ಇವೆಲ್ಲ ಭಾರತಕ್ಕೆ ಚಿಂತೆಯ ವಿಷಯವಾಗಬೇಕಿತ್ತು. ಆದರೆ ಹಾಗಾಗದಿರುವುದು ದುರಂತ. ಅಮೆರಿಕದ ರಾಜತಾಂತ್ರಿಕತೆಗೆ ಒಂದು ಉದಾಹರಣೆಯೆಂದರೆ 2002ರ ಗುಜರಾತ್ ಹತ್ಯಾಕಾಂಡದ ಆನಂತರ ಮೋದಿಗೆ ವೀಸಾ ನಿರಾಕರಿಸಿ ಅವಮಾನಿಸಿದ ಅಮೆರಿಕವು 2014ರಲ್ಲಿ ಮೋದಿ ಭಾರತದ ಪ್ರಧಾನಿಯಾಗಿ ಆಯ್ಕೆಯಾದ ತಕ್ಷಣ ವೀಸಾವನ್ನು ನೀಡಲು ಮುಂದಾಯಿತು. ದೇಶವೊಂದರ ಪ್ರಧಾನಿಗೆ ಪ್ರವೇಶ ನಿರಾಕರಿ ಸುವುದು ಸಾಧ್ಯವಿಲ್ಲವಾದರೂ ಒಮ್ಮೆಲೇ ಅಮೆರಿಕ ಇಷ್ಟು ಪ್ರೀತಿಯನ್ನು ತೋರಿಸುವುದನ್ನು ಸಂಶಯದಿಂದ ನೋಡಬೇಕಾದ್ದು ಅಗತ್ಯ. (ಶಿವಾಜಿ ಮೊಗಲರ ಕುರಿತು ತೋರಿದ ಸಂದೇಹವನ್ನು ನೆನಪಿಸಿಕೊಳ್ಳಬಹುದು!) ಆದರೆ ಭಾರತವು ಇದ್ದಕ್ಕಿದ್ದಂತೆ ಅಮೆರಿಕದ ಪರಿವಾರ ಬಂಟನಂತೆ ವರ್ತಿಸುವುದು ಆಶ್ಚರ್ಯದ ಸಂಗತಿ ಮಾತ್ರವಲ್ಲ ಶೋಚನೀಯ ಸ್ಥಿತಿಯೂ ಹೌದು. ಅಂತಾರಾಷ್ಟ್ರೀಯ ರಾಜನೀತಿಯಲ್ಲಿ ಯಾರೂ ಶಾಶ್ವತ ವೈರಿಗಳಾಗಲೀ ಮಿತ್ರರಾಗಲೀ ಆಗಿರುವುದಿಲ್ಲ; ಆದರೆ ಜಾಗರೂಕತೆ ಮತ್ತು ಜಾಗ್ರತೆಯನ್ನು ಎಲ್ಲರೂ ತೋರಿಸುತ್ತಾರೆ. ಹೀಗಿದ್ದರೂ ಭಾರತವು ಅಮೆರಿಕದ ಕುರಿತು ಅತಿರೇಕದ ಮತ್ತು ಅನಪೇಕ್ಷಿತ ಗೌರವ ಧೋರಣೆಯನ್ನು ತೋರಿಸುತ್ತಿದೆ ಮಾತ್ರವಲ್ಲ, ಅಮೆರಿಕಕ್ಕೆ ಹತ್ತಿರವಾಗಲು ಬಯಸುತ್ತಿದೆ. ವೀಸಾ ಪಡೆದ ಕಳೆದ ಎರಡು ವರ್ಷಗಳಲ್ಲಿ ಮೋದಿ ಅಮೆರಿಕಕ್ಕೆ ನಾಲ್ಕು ಬಾರಿ ಭೇಟಿ ನೀಡಿದರು. ಅಮೆರಿಕವು ಮೋದಿಗೆ ಒಬ್ಬ ರಾಷ್ಟ್ರನಾಯಕನಿಗೆ ನೀಡಬೇಕಾದ ಗೌರವವನ್ನು ನೀಡುತ್ತಾ ಬಂದಿದೆ. ಹೀಗಿದ್ದರೂ ಅದು ಮೋದಿಯನ್ನು ಒಬ್ಬ ‘ನಭೂತೋ ನಭವಿಷ್ಯತಿ’ಯೆಂದು ತಿಳಿದಿಲ್ಲವೆಂಬುದು ನಮಗೆ ಅರ್ಥವಾಗಬೇಕು.
ಈಗಾಗಲೇ ಭಾರತವು ಪಶ್ಚಿಮಕ್ಕೆ ಮಾರಿದ್ದಕ್ಕಿಂತ ಹೆಚ್ಚು ಖರೀದಿಸಿದೆ. (ಚೀನಾದೊಂದಿಗಿನ ರಫ್ತು-ಆಮದು ವ್ಯವಹಾರದಲ್ಲೂ ಭಾರತವು ಅಪಾರ ನಷ್ಟವನ್ನು ಅನುಭವಿಸುತ್ತಿದೆಯೆಂದು ಅಂಕಿ-ಅಂಶಗಳು ಹೇಳುತ್ತವೆ!) ಅಮೆರಿಕವು ಭಾರತದ ಅಪಾರವಾದ ತಂತ್ರಜ್ಞಾನಿಗಳನ್ನು ಆಕರ್ಷಿಸಿದರೂ ಇತ್ತೀಚೆಗಿನ ದಿನಗಳಲ್ಲಿ ವೀಸಾ ಶುಲ್ಕ ಹೆಚ್ಚಳವೇ ಮುಂತಾದ ಕ್ರಮಗಳ ಮೂಲಕ ನಿಯಂತ್ರಣಕ್ಕೆ ಕೈಹಾಕಿದೆ. ಅಮೆರಿಕವು ಒಂದು ಕೈಯಲ್ಲಿ ಚಿವುಟಿ ಇನ್ನೊಂದು ಕೈಯಲ್ಲಿ ಸಮಾಧಾನಪಡಿಸುವ (ಕು)ತಂತ್ರವನ್ನು ಲಾಗಾಯ್ತಿನಿಂದ (ಪ್ರ)ದರ್ಶಿಸಿದೆ. ಆದ್ದರಿಂದ ಭಾರತವು ಅನುಸರಿಸಬೇಕಾದ ಸರಿಯಾದ ನೀತಿಯೆಂದರೆ ಅಮೆರಿಕ ಮತ್ತು ರಶ್ಯದ ನಡುವೆ, ಅಮೆರಿಕ ಮತ್ತು ಚೀನಾದ ನಡುವೆ ಒಂದು ಸಮತೋಲವನ್ನು ಕಾಪಾಡುವುದು. ಈ ಅಂಶವನ್ನು ಮರೆತರೆ ಭಾರತವೂ ಫಿಲಿಪ್ಪೀನ್ಸ್‌ನಂತೆ ಅಮೆರಿಕದ ಕಾಲನಿಯಾಗುವ ಸಾಧ್ಯತೆಯೂ ಇದೆ. ಅಮೆರಿಕವು ನಮಗೆ ಅನಿವಾರ್ಯವಾಗಬಾರದು. ಅಮೆರಿಕವು ನೀಡಿದ ಸರ್ಟಿಫಿಕೇಟ್ ನಮ್ಮ ಯೋಗ್ಯತೆಯ ಮಾನದಂಡವಾಗಬಾರದು. ಸ್ವದೇಶಿ ಅಭಿಮಾನವನ್ನು ಹೇಳುತ್ತಲೇ ವಿದೇಶಿಗಳ ಮುಂದೆ ಕೈಚಾಚುವುದು, ಅವರ ಹೊಗಳಿಕೆಯನ್ನು ನಮ್ಮ ವೈಭವವೆಂದು ಪ್ರಚಾರಮಾಡುವುದು ಇವು ಭಾರತದ ಸಾರ್ವಭೌಮತ್ವಕ್ಕೆ ಮಾಡುವ ಅವಮಾನ. ಬದಲಾಗಿ ಯಾರೂ ದೊಡ್ಡಣ್ಣಗಳಾಗಬಾರದು, ಎಲ್ಲರೂ ಸಮಾನರು ಎನ್ನುವ ಸೂತ್ರಕ್ಕೆ ಬದ್ಧರಾಗುವುದು ಮಾತ್ರವಲ್ಲ ಅಂತಹ ತತ್ವವನ್ನು ವಿಶ್ವಾತ್ಮಕಗೊಳಿಸಬೇಕಾದ ಕರ್ತವ್ಯ ಭಾರತಕ್ಕಿದೆ.