ಕಳುಹಿಸಬೇಡಿ ಕೂಲಿಗೆ, ಕಳುಹಿಸಿಕೊಡಿ ಶಾಲೆಗೆ
ಇದೀಗ ಮನೆಯ ಮಕ್ಕಳೆಲ್ಲ ಶಾಲೆಯ ಕಡೆಗೆ ಮುಖ ಮಾಡಿದ್ದಾರೆ. ಹೊಸ ಬಟ್ಟೆಗಳನ್ನುಟ್ಟು, ಹೊಸ ಹುರುಪಿನಲ್ಲಿ ಓಡುತ್ತಿದ್ದಾರೆ. ಅವರ ಕಣ್ಣುಗಳಲ್ಲಿ ಚೇತನ ಮೂಡಿದೆ. ಶೈಕ್ಷಣಿಕವಾಗಿ ಯಾವುದನ್ನೋ ಸಾಧಿಸಬೇಕು ಎಂಬ ಹಂಬಲನ್ನು ಹೊಂದಿದ್ದಾರೆ. ಶಿಕ್ಷಕರು ಕಲಿಸುವ ವಿಷಯ ತಲೆಯೊಳಗೆ ಇಟ್ಟುಕೊಂಡು ಜಾಣನಾಗಬೇಕು ಎಂಬ ಬಯಕೆಯಿಂದ ಸಾಗಿದ್ದಾರೆ. ಪ್ರಸ್ತುತ ಓಟದ ಬದುಕಿನಲ್ಲಿ ಅತ್ಯಂತ ವೇಗದಲ್ಲಿ ಏನನ್ನೊ ಸಾಧಿಸುವ ಛಲತೊಟ್ಟು ಹೊರಟಿದ್ದಾರೆ. ಹೆಗಲ ಮೇಲೆ ಹೊತ್ತ ಪುಸ್ತಕ ಚೀಲದ ಭಾರದ ಪರಿಗಣಿಸದೆ ಶಾಲೆಯೆಂಬ ದೇವಾಲಯದ ಕಡೆಗೆ ಮುಖ ಮಾಡಿ ಕೈಮುಗಿದು ದಣಿವರಿಯದ ರೈತನ ಹಾಗೆ ಬೆವರ ಸುರಿಸಿ ಓದಿ ದೊಡ್ಡ ವ್ಯಕ್ತಿಯಾಗುವ ದಾರಿಯಲ್ಲಿ ಸಾಗಿದ್ದಾರೆ. ಆದರೆ ಇವರ ಮಧ್ಯದೊಳಗೆ ಇಲ್ಲಿ ಕೆಲವರು ಮಿಸ್ ಆಗುತ್ತಿದ್ದಾರೆ. ಇಷ್ಟು ಸಂಭ್ರಮದಿಂದಿರುವ ಶಾಲೆ ಹಾಗೂ ಗೆಳೆಯರಿದ್ದರೂ ಇವರಿಗೆ ಶಾಲೆಯೆಂಬ ಭಾಗ್ಯ ಮಾತ್ರ ಗಗನಕುಸುಮವಾಗಿದೆ. ಅವರೆಲ್ಲ ಶಾಲೆಯ ಬದಲಿಗೆ ಕೂಲಿಗೆ ಹೋಗುತ್ತಿದ್ದಾರೆ. ಹಲವು ಕಾರಣಗಳಿಂದ ಅವರು ಶಾಲೆ ಬದಲಿಗೆ ಕೂಲಿಯನ್ನು ಬದುಕಿಗಾಗಿ ಆರಿಸಿಕೊಂಡು ತಮ್ಮ ಬಾಲ್ಯದ ಹಲವು ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಶಾಲೆಯೆಂಬ ಸಂಭ್ರಮದ ಮುಖ ನೋಡದ ಹಲವು ಮಕ್ಕಳು, ಈ ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಈ ಸಂಭ್ರಮವನ್ನು ಅರ್ಧಕ್ಕೆ ನಿಲ್ಲಿಸುವ ಮಕ್ಕಳು ಇದ್ದಾರೆ. ಹಲವು ಒತ್ತಡಗಳ ಮಧ್ಯೆ ಶಾಲೆಯೆಂಬ ಜೀವನಕ್ಕೆ ಕೊಡಲಿಯಿಟ್ಟು, ತಮ್ಮ ಹೂವಿನಂತಹ ಬದುಕಿನಲ್ಲಿ ತಾವೇ ಮುಳ್ಳುಗಳಾಗಿಸಿಕೊಳ್ಳುವ ಮಕ್ಕಳಿವರು. ಶಾಲೆಯೆಂದರೆ ಅಪಾರ ಪ್ರೀತಿಯಿದ್ದರೂ ‘‘ಅಪ್ಪಬೈಯುವನು’’ ಎಂಬ ಕಾರಣ ಒಂದು ಮಗುವಿನದ್ದಾದರೆ, ಮನೆಯ ವಾತಾವರಣ ಸರಿಯಿಲ್ಲಯೆಂಬುವುದು ಇನ್ನೊಂದು ಮಗುವಿನದ್ದು. ಸರಕಾರ ಮಕ್ಕಳಿಗೆ ಅನ್ನ, ಬಟ್ಟೆ, ಉಚಿತ ಕೊಟ್ಟಿರಬಹುದು ಆದರೆ ಅವರ ತಂದೆ ತಾಯಿ ಸಮಸ್ಯೆ ಇಷ್ಟರಿಂದ ಮುಗಿಯುವುದಲ್ಲವೆಂಬ ಸತ್ಯ ಸರಕಾರ ಅರಿತಿಲ್ಲ.
ಸರಕಾರ ಶಿಕ್ಷಣ ಕೊಟ್ಟ ವ್ಯವಸ್ಥೆಯನ್ನು ಗಮನಿಸಿದರೆ ಶಾಲೆ ಬಿಡುವ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳು ಇರಲೇಬಾರದು. ಆದರೂ ಇದ್ದಾರೆ ಎಂಬುವುದು ಈ ದೇಶದ ಶಿಕ್ಷಣ ವ್ಯವಸ್ಥೆಯ ದೊಡ್ಡ ದುರಂತವೇ ಸರಿ. ಎಲ್ಲವೂ ಉಚಿತ ವಿದ್ಯೆಯು ಖಚಿತ, ಹತ್ತನೆಯ ತರಗತಿವರೆಗೂ ಕಡ್ಡಾಯ ಪಾಸ್ ಮಾಡಿದರೂ ಇನ್ನೂ ಶಾಲೆಯಿಂದ ಮಕ್ಕಳು ಹೊರಗುಳಿಯುವುದರ ಬಗ್ಗೆ ಯೋಚಿಸಬೇಕಾದ ಅವಶ್ಯಕತೆಯಿದೆ. ಮೊನ್ನೆ ಹಳ್ಳಿಯೊಂದರಲ್ಲಿ ದಾಖಲಾತಿ ಆಂದೋಲನ ಕಾರ್ಯಕ್ರಮ ಮಾಡಿದ್ದೆ, ಆ ಗ್ರಾಮದಲ್ಲಿ ಒಟ್ಟು 1,630 ಜನಸಂಖ್ಯೆಯಿದೆ. ಅದರಲ್ಲಿ ಮಕ್ಕಳು ಒಟ್ಟು 473. ನಮ್ಮ ಲೆಕ್ಕಕ್ಕೆ ಬಂದ ದಾಖಲಾತಿ ಪ್ರಕಾರ ಅದರಲ್ಲಿ ಸರಿಯಾಗಿ 173 ಮಕ್ಕಳು ಡ್ರಾಪ್ ಔಟ್ ಶೇ.47ಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ದೂರವಿದ್ದಾರೆ. ಆ ಗ್ರಾಮದಲ್ಲೇನು ಅಷ್ಟು ಕಿತ್ತು ತಿನ್ನುವ ಬಡತನವಿಲ್ಲ, ಪ್ರತೀ ಮನೆಗೆ ಸರಾಸರಿ ಎರಡು ಆ್ಯಂಡ್ರಾಯಿಡ್ ಮೊಬೈಲ್ ಫೋನ್‌ಗಳಿವೆ, ಎಲ್‌ಇಡಿ.ಟಿವಿ ಎಲ್ಲಾ ಮನೆಗಳಲ್ಲಿಯೂ ಇವೆ. ಆದರೆ ಶಾಲೆ ಕಲಿಯುವುದಕ್ಕೆ ಮಾತ್ರ ಯಾಕೆ ಅವಕಾಶವಿಲ್ಲವೆಂಬ ವಿಷಯ ಮಾತ್ರ ಆಘಾತಕಾರಿಯಾಗಿ ಕಾಡಿತು. ಹೀಗೆ ಹುಡುಕುತ್ತಾ ಹೋಗಲು ಹಲವು ವಿಷಯಗಳು ಹೊರಬಂದವು. ಕೆಲವು ಜನರಿಗೆ ಪಟ್ಟಣದ ಶೋಕಿ ಜೀವನ ಬೇಕಾಗಿದೆ. ಪ್ರತಿ ವರ್ಷ ಜೂನ್ ತಿಂಗಳಲ್ಲಿ ತಮ್ಮ ಎಲ್ಲಾ ಮಕ್ಕಳನ್ನು ಶಾಲೆಗೆ ಸೇರಿಸಿ ಜೂನ್ ತಿಂಗಳಿನಲ್ಲಿ ಸರಕಾರ ಕೊಡುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ನೇರವಾಗಿ ಬೆಂಗಳೂರು, ಹೈದರಾಬಾದ್, ಮುಂಬೈ ರೈಲುಗಾಡಿ ಹತ್ತಿ ಹೋಗಿಬಿಡುತ್ತಾರೆ. ವಲಸೆಗಾಗಿ ಇಲ್ಲಿನ ಜನರು ಶಿಕ್ಷಣವನ್ನು ತಮ್ಮ ಆಟಿಕೆ ಸಾಮಾನುಗಳಾಗಿ ಬಳಸಿಕೊಳ್ಳುತ್ತಿರುವುದು ಈ ಗ್ರಾಮದ ದುರಂತ. ಇಲ್ಲಿ ಉಲ್ಲೇಖಿಸಿರುವ ಗ್ರಾಮ ಒಂದೇ ಅಲ್ಲ. ಅನೇಕ ಗ್ರಾಮಗಳು ಇಂತಹ ಅನೇಕ ನೆಪಗಳನ್ನು ಒಡ್ಡಿ ಇಂದು ಮಕ್ಕಳ ಭವಿಷ್ಯದ ಜೊತೆಗೆ ಆಟವಾಡುತ್ತಿದ್ದಾರೆ. ಸರಕಾರಿ ಸೌಲಭ್ಯಗಳನ್ನು ಪಡೆಯುವುದು ಮಾತ್ರ ರೂಢಿಸಿಕೊಂಡು ಉಳಿದಿದ್ದನ್ನು ಗಾಳಿಗೆ ತೂರಿ ನಡೆಯುತ್ತಿದ್ದಾರೆ. ತಮ್ಮ ಮಕ್ಕಳನ್ನು ಕೂಲಿಗೆ ನೂಕಿ ತಾವು ಐಶಾರಾಮಿ ಜೀವನ ಮಾಡಬೇಕು ಎಂಬ ಅದೆಷ್ಟೊ ಪಾಲಕರು ಭಾರತದಂತಹ ದೊಡ್ಡ ದೇಶದಲ್ಲಿ ಹೆಚ್ಚಿಗಿದ್ದಾರೆ. ಮಗ ಬೇಡಿಕೊಂಡು ಬಂದ ಭಿಕ್ಷೆಯನ್ನು ಚಪ್ಪರಿಸಿಕೊಂಡು ಚಪಲ ತೀರಿಸಿಕೊಳ್ಳುವ ಅಪ್ಪಂದಿರಿರುವ ಇಲ್ಲಿ ಮಕ್ಕಳಿಗೆ ಶಿಕ್ಷಣ ಉಚಿತ ದೊರೆತರೂ ಅಷ್ಟೇ ದೊರೆಯದಿದ್ದರೂ ಅಷ್ಟೆ. ಶಿಕ್ಷಣದ ಚಿಂತನೆ ಬದಲಾಗಬೇಕಾಗಿರುವುದು ಪಾಲಕರ ಮನದೊಳಗೆ ಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಒಬ್ಬ ಸಾಕ್ಷರತೆಯಿಲ್ಲದ ಪಾಲಕ ತನ್ನ ಮಕ್ಕಳ ಸಾಕ್ಷರತೆಯ ಬಗ್ಗೆ ಕಲ್ಪನೆ ತಾಳಿ ‘‘ನಾನು ಕಲಿಯಲಿಲ್ಲ ನನ್ನ ಮಕ್ಕಳಾದರು ಕಲಿಯಲಿ’’ ಎಂಬ ದೃಢ ನಿರ್ಧಾರ ತಾನಾಗಿಯೇ ಮಾಡದ ಹೊರತು ಉಚಿತ ಶಿಕ್ಷಣ ಸರ್ವರಿಗೂ ದೊರೆಯುವುದು ಅಸಾಧ್ಯವಾಗಿದೆ. ಅಸಮತೋಲನದ ಬದುಕಿನಲ್ಲಿ ಅಸಂಬದ್ಧತೆಗಳೇ ಹೆಚ್ಚಾಗುತ್ತವೆಯೇ ಹೊರತು ಬೇರೇನು ಇಲ್ಲ. ಪಾಲಕರು ಹೇಗೆ ತಮ್ಮ ವೈಯಕ್ತಿಕ ಬದುಕಿಗೆ ಮಹತ್ವ ಕೊಡುತ್ತಾರೊ ಹಾಗೆ ಮಕ್ಕಳ ಶಿಕ್ಷಣದ ಬದುಕಿಗೂ ಅಷ್ಟೆ ಮಹತ್ವ ಕೊಡಬೇಕು. ಇಂದು ಮಗ ತಂದ ಭಿಕ್ಷಾಟನೆಯಲ್ಲಿ ಜೀವನ ಸಾಗಿಸುವ ಪಾಲಕರು, ಭಿಕ್ಷೆ ಬೇಡಿಯಾದರೂ ನನ್ನ ಮಗನನ್ನು ಓದಿಸುತ್ತೇನೆ ಎಂಬ ದೃಢ ಸಂಕಲ್ಪ ಮಾಡಿದಾಗ ಮಾತ್ರ ಸರ್ವರಿಗೂ ಶಿಕ್ಷಣ ದೊರೆತು ಶಿಕ್ಷಣ ಸಾರ್ವತ್ರೀಕರಣ ಸಾಧ್ಯವಾಗುತ್ತದೆ. ಭಾರತದ ಸಂವಿಧಾನದ ಆಶಯ ಇಡೇರುತ್ತದೆ. ಅದಕ್ಕಾಗಿ ಪಾಲಕ ಪೋಷಕರಲ್ಲಿ ಒಂದು ವಿನಂತಿಯೆಂದರೆ ಕಳುಹಿಸಬೇಡಿ ಕೂಲಿಗೆ, ಕಳುಹಿಸಿಕೊಡಿ ಶಾಲೆಗೆ.