ಭಾರತ-ಇರಾನ್ ಒಪ್ಪಂದ: ಕಡ್ಡಿಯನ್ನು ಗುಡ್ಡ ಮಾಡಿದ ಪರಿ
ಕಳೆದೆರಡು ವರ್ಷಗಳ ಅವಧಿಯಲ್ಲಿ ನಾವೆಲ್ಲ ನೋಡಿರುವ ಹಾಗೆ ಮೋದಿ ಸರಕಾರದಲ್ಲಿ ನಿಜವಾದ ಕೆಲಸಕ್ಕಿಂತ ಪೊಳ್ಳು ಘೋಷಣೆಗಳು, ಹಳಸಲು ಭಾಷಣಗಳು ಮತ್ತು ಹುಸಿ ಜಾಹೀರಾತುಗಳೆ ಜಾಸ್ತಿ ಎಂದಾಗಿದೆೆ! ಗುಡ್ಡವನ್ನು ಬೆಟ್ಟ ಮಾಡುವುದು, ಇಲ್ಲದ ಬಣ್ಣ ಕಟ್ಟಿ ಹೇಳುವುದು ಇವರ ಸಹಜಗುಣವೇ ಆಗಿರುವುದರಿಂದ ಈ ಹೊತ್ತು ಇಂತಹ ಪ್ರಸಂಗಗಳು ಮುಸಲಧಾರೆಯ ಥರ ಎಡೆಬಿಡದೆ ಸುರಿಯುತ್ತಿರುವುದರಲ್ಲಿ ಅಸಾಮಾನ್ಯವಾದುದೇನೂ ಇಲ್ಲ. ಇದೀಗ ಜಾಹೀರಾತಿನ ಖರ್ಚಿಗೆಂದೇ ಜನರಿಂದ ಹೆಚ್ಚುವರಿ ತೆರಿಗೆ ವಸೂಲು ಮಾಡಿ ಬಡವರ ಉದ್ಧಾರ ಮಾಡುತ್ತಿದ್ದೇವೆ, ದೇಶದ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಮುಂತಾದ ಸುಳ್ಳು, ಅರೆಸತ್ಯಗಳನ್ನು ದೊಡ್ಡ ದೊಡ್ಡ ಜಾಹೀರಾತುಗಳ ಮೂಲಕ ಪ್ರಚಾರ ಮಾಡುವ ವಿಕೃತಿಯೂ ಕಾಣಿಸಿಕೊಂಡಿದೆ!
ಮಾಧ್ಯಮಗಳಲ್ಲಿ ಕೂಡ ಸರಕಾರದ ಪ್ರಸಾರಾಂಗ ಉಣಬಡಿಸಿದುದನ್ನೇ ಗಿಳಿಪಾಠ ಒಪ್ಪಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಹಾಗೆ ನೋಡಿದರೆ ಪೊಳ್ಳು ಘೋಷಣೆಗಳು, ಸುಳ್ಳಿನ ಸರಮಾಲೆಗಳು, ಬಡಜನರ ದಮನ, ಅಲ್ಪಸಂಖ್ಯಾತರ ಮರ್ದನ, ಭಿನ್ನಮತಕ್ಕೆ, ಅಸಹಿಷ್ಣುತೆ, ಹಿಂಸಾ ಪ್ರವೃತ್ತಿ, ಏಕವ್ಯಕ್ತಿ ಆರಾಧನೆ ಇವೇ ಮೊದಲಾದ ಅಂಶಗಳಲ್ಲಿ ಅಪ್ಪಟ ಫ್ಯಾಸಿಸ್ಟ್ ಪ್ರಭುತ್ವವನ್ನು ಹೋಲುವ ಸರಕಾರವೊಂದರಲ್ಲಿ ಮಂತ್ರಕ್ಕಿಂತ ಉಗುಳೇ ಹೆಚ್ಚಾಗಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಮೋದಿ ಸರಕಾರದ 24X7 ಪ್ರಚಾರಯಂತ್ರ ಕಡ್ಡಿಯಷ್ಟು ಇದ್ದುದನ್ನು ಗುಡ್ಡದಷ್ಟು ಮಾಡುತ್ತಿರುವುದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಇತ್ತೀಚಿನ ಭಾರತ-ಇರಾನ್ ಒಪ್ಪಂದ.
ಇತ್ತೀಚೆಗೆ ಮೋದಿಯ ಇರಾನ್ ಭೇಟಿಯ ವೇಳೆ ಚೌಬಹಾರ್ ಬಂದರು ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಉಭಯ ದೇಶಗಳು ಒಂದು ಒಪ್ಪಂದಕ್ಕೆ ಸಹಿಹಾಕಿದವು. ಮೋದಿ ಸರಕಾರದ ಪ್ರಚಾರಪಂಡಿತರು ಎಂದಿನಂತೆ ಟಾಪ್ ಗೇರ್‌ಗೆಏರಿ ಮೋದಿಯನ್ನು ಇಂದ್ರ ಚಂದ್ರ ಎಂದು ಹೊಗಳುತ್ತಾ ಒಪ್ಪಂದದ ಕುರಿತು ಉತ್ಪ್ರೇಕ್ಷಿತ ವರದಿಗಳನ್ನು ಹರಿಯಬಿಟ್ಟಿದ್ದಾರೆ. ಇದೊಂದು ‘ಮೈಲುಗಲ್ಲು ಒಪ್ಪಂದ’ವಂತೆ. ಬಂದರು ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಭಾರತಕ್ಕೆ ವಹಿಸಲಾಗಿದೆಯಂತೆ. ಚೌಬಹಾರ್‌ನ ಅಭಿವೃದ್ಧಿಗೆ ಪಾಕಿಸ್ತಾನವನ್ನು ಕೈಬಿಟ್ಟು ಭಾರತವನ್ನು ಆಯ್ಕೆ ಮಾಡಲಾಗಿದೆಯಂತೆ. ಚೀನಾ ಅಭಿವೃದ್ಧಿಪಡಿಸುತ್ತಿರುವ ಪಾಕಿಸ್ತಾನದ ಗ್ವದರ್ ಬಂದರಿಗೆ ಚೌಬಹಾರ್ ನಮ್ಮ ಉತ್ತರವಂತೆ. ಇನ್ನು ಭಾರತ, ಇರಾನ್ ಸಂಬಂಧಗಳು ಥಟ್ಟನೆ ಮೇಲ್ಮುಖವಾಗಿ ಚಲಿಸಲಾರಂಭಿಸಿವೆಯಂತೆ. ಭಾರತ ತನ್ನ ಆರ್ಥಿಕ, ರಾಜಕೀಯ ಪ್ರಭಾವವನ್ನು ಅಫ್ಘಾನಿಸ್ತಾನಕ್ಕೆ ವಿಸ್ತರಿಸಲು ಇರಾನ್ ಸಹಕಾರ ನೀಡುತ್ತಿದೆಯಂತೆ. ಸದ್ಯದಲ್ಲೆ ಭಾರತ, ಅಫ್ಘಾನಿಸ್ತಾನ ಮತ್ತು ಇರಾನ್ ವ್ಯೆಹಾತ್ಮಕವಾಗಿ ಒಂದುಗೂಡಿ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಸೆಟೆದು ನಿಲ್ಲಲಿವೆಯಂತೆ!!!
ಅಂದಹಾಗೆ, ಪಾಕಿಸ್ತಾನಿ ಭದ್ರತಾಪಡೆಗಳ ಕೈಗೆ ಸಿಕ್ಕಿಬಿದ್ದು ಸೆರೆಮನೆ ಸೇರಿರುವ ನಮ್ಮ ‘ರಾ’ ಗೂಢಚಾರ ಕುಲಭೂಷಣ್ ಜಾಧವ್ ಪಾಕಿಸ್ತಾನದಲ್ಲಿ ತನ್ನ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದುದು ಇದೇ ಚೌಬಹಾರ್‌ನಿಂದ. ಜಾಧವ್ ಪ್ರಕರಣದಲ್ಲಿ ಕಳೆದುಕೊಂಡ ಮಾನವನ್ನು ಸರಿದೂಗಿಸಲೆತ್ನಿಸುವ ಇಂತಹ ಸ್ವಲ್ಪವೂ ನಯನಾಜೂಕಿಲ್ಲದ ವರದಿಗಳಿಂದ ಇರಾನ್‌ಗೆ ಖಂಡಿತ ಮುಜುಗರ ಆಗಿರಬೇಕು. ಚೌಬಹಾರ್ ಒಪ್ಪಂದದ ಬಗ್ಗೆ ಭಾರತದಲ್ಲಿ ಎಷ್ಟು ದೊಡ್ಡ ತುತ್ತೂರಿ ಊದಲಾಯಿತೆಂದರೆ ಈ ಭ್ರಮಾಲೋಕದ ವಿಹಾರಗಳು ನಿಜವಿರಬಹುದೇನೊ ಎಂದು ಜನ ಭಾವಿಸುವಷ್ಟು. ಬಹುತೇಕ ಮಾಧ್ಯಮಗಳು ವಿಶ್ಲೇಷಣೆಯ ಗೊಡವೆಗೆ ಹೋಗದೆ ಉದ್ದುದ್ದ ಬರೆದು ಮೋದಿ ಸರಕಾರವನ್ನು ಹೊಗಳಿದ್ದೇ ಹೊಗಳಿದ್ದು. ಹೀಗೆ ತಾರಕಕ್ಕೇರಿದ ಸಂಭ್ರಮಾಚರಣೆಗಳ ಸದ್ದು ನಿಧಾನಕ್ಕೆ ಅಡಗುತ್ತಿದ್ದಂತೆ ಮೋದಿ ಸರಕಾರದ ತಥಾಕಥಿತ ಯಶಸ್ವಿ ಒಪ್ಪಂದದ ಸುತ್ತ ಹೆಣೆಯಲಾಗಿರುವ ಅಪಾರದರ್ಶಕ ಪರದೆಯನ್ನು ಒಂದಷ್ಟು ಆಚೆ ಸರಿಸಿ ಇರಾನ್ ಭೇಟಿಯನ್ನು ವಸ್ತುನಿಷ್ಠ ವಿಶ್ಲೇಷಣೆಗೆ ಒಳಪಡಿಸುವ ಸಮಯ ಬಂದಿದೆ. ಚೌಬಹಾರ್ ಬಂದರಿನ ಪ್ರಾಮುಖ್ಯತೆ ಚೌಬಹಾರ್, ಇರಾನ್‌ನ ಪೂರ್ವಭಾಗದ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತದಲ್ಲಿರುವ ಒಂದು ಬಂದರು ನಗರ. ತನ್ನದೇ ಹೆಸರಿನ ಜಿಲ್ಲೆಯ ಕೇಂದ್ರವೂ ಆಗಿರುವ ಚೌಬಹಾರ್ ಪಾಕಿಸ್ತಾನದ ಗ್ವದರ್ ಬಂದರಿನಿಂದ ಕೇವಲ 70 ಕಿ.ಮೀ. ದೂರದಲ್ಲಿದೆ. ಆರ್ಥಿಕವಾಗಿ ಹಿಂದುಳಿದಿರುವ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತದಲ್ಲಿ ಸುನ್ನಿ ಪಂಥೀಯರದೇ ಮೇಲುಗೈ. ಪಾಕಿಸ್ತಾನದೊಳಗಿರುವ ವಹಾಬಿ ಉಗ್ರರ ಗುಂಪುಗಳು ಸೌದಿ ಅರೇಬಿಯದ ನೆರವಿನೊಂದಿಗೆ ಇಲ್ಲಿ ಕಾರ್ಯಾಚರಿಸುತ್ತಿವೆ.
ಇವರ ಗಡಿಯಾಚೆಯ ಕಾರ್ಯಾಚರಣೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಸಹಕಾರ ಇರಾನ್‌ಗೆ ಬಹಳ ಮುಖ್ಯವಾಗಿದೆ. ಯೆಮೆನ್, ಸಿರಿಯಾಗಳಲ್ಲಿ ಪರೋಕ್ಷ ಯುದ್ಧ ನಡೆಸುತ್ತಿರುವ ಸೌದಿ ಅರೇಬಿಯದಿಂದ ಪಾಕಿಸ್ತಾನ ಇತ್ತೀಚಿನ ವರ್ಷಗಳಲ್ಲಿ ದೂರಸರಿದ ನಂತರ ಇರಾನ್, ಪಾಕಿಸ್ತಾನ ಸಂಬಂಧಗಳು ಸುಧಾರಿಸತೊಡಗಿವೆ. ಉಗ್ರಗಾಮಿಗಳನ್ನು ಮಟ್ಟಹಾಕುವುದರೊಂದಿಗೆ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತವನ್ನು ಆರ್ಥಿಕವಾಗಿ ಮೇಲಕ್ಕೆತ್ತುವ ಕಾರ್ಯಕ್ರಮವನ್ನೂ ಇರಾನ್ ಹಮ್ಮಿಕೊಂಡಿದೆ.
ತಾಲಿಬಾನ್ ಕೇಂದ್ರಿತ ನೀತಿಗಳನ್ನು ಅನುಸರಿಸಿರದ ಇರಾನ್ ತನ್ನ ನೆರೆಕರೆಯ ದೇಶವಾಗಿರುವ ಅಫ್ಘಾನಿಸ್ತಾನವನ್ನು ಸುಭದ್ರಗೊಳಿಸಿ ಅದರ ಜೊತೆ ಉತ್ತಮ ಬಾಂಧವ್ಯ ಬೆಳೆಸಲು ಇಷ್ಟಪಡುತ್ತಿದೆ. ಉಭಯ ದೇಶಗಳಿಗೂ ಚೌಬಹಾರ್ ಬಂದರಿನಿಂದ ಬಹಳಷ್ಟು ಉಪಯೋಗಗಳಿವೆ.
ಇರಾನ್ ಮಟ್ಟಿಗೆ ಇನ್ನೊಂದು ಪ್ರಮುಖ ವಿಷಯವೆಂದರೆ, ಚೀನಾ ವತಿಯಿಂದ ಕಾರ್ಯಗತಗೊಳ್ಳುತ್ತಿರುವ ಪಾಕಿಸ್ತಾನದ ಸಿಲ್ಕ್ ರಸ್ತೆ ಯೋಜನೆ. ಇದರ ಪ್ರಯೋಜನಗಳನ್ನು ಮನಗಂಡಿರುವ ಇರಾನ್ ಆ ಕುರಿತಂತೆ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇರಾನ್‌ನಿಂದ ಪಾಕಿಸ್ತಾನಕ್ಕೆ ಅನಿಲ ಸಾಗಿಸುವ ಕೊಳವೆಯನ್ನು ಇದೇ ಸಿಲ್ಕ್ ರಸ್ತೆ ಮೂಲಕ ಚೀನಾದ ಷಿಂಜಿಯಾಂಗ್ ಪ್ರಾಂತ್ಯಕ್ಕೆ ವಿಸ್ತರಿಸುವ ಯೋಜನೆ ಅವುಗಳಲ್ಲೊಂದು.
ಇರಾನ್‌ನ ದಕ್ಷಿಣಪೂರ್ವ ಮಕ್ರಾನ್ ಕರಾವಳಿಯಲ್ಲಿರುವ ಚೌಬಹಾರ್ ಬಂದರು, ಭಾರತದ ಕಾಂಡ್ಲಾ ಮತ್ತು ಮುಂಬೈ ಬಂದರುಗಳಿಗೆ ಸಮೀಪದಲ್ಲಿದೆ. ಇದು ಭಾರತ, ಇರಾನ್ ನಡುವಿನ ವಾಣಿಜ್ಯ ವಹಿವಾಟುಗಳ ಅಭಿವೃದ್ಧಿಗೆ ತುಂಬಾ ಪೂರಕ. ಮೊದಲನೆಯದಾಗಿ, ಇರಾನ್‌ನಿಂದ ನೈಸರ್ಗಿಕ ಅನಿಲವನ್ನು ಕಂಟೇನರ್ ಮೂಲಕ ಆಮದು ಮಾಡಿಕೊಳ್ಳುವುದು ಸುಲಭವಾಗಲಿದೆ. ಎರಡನೆಯದಾಗಿ ಅಫ್ಘಾನಿಸ್ತಾನದ ಉತ್ತರ ಗಡಿ ಕೂಡ ಭಾರತಕ್ಕೆ ಸನಿಹವಾ ಗಲಿದೆ; ಹೀಗಾಗಿ ಅಲ್ಲಿಗೆ ಹೋಗಲು ಪಾಕಿಸ್ತಾನವನ್ನು ಹಾದುಹೋಗಬೇಕಾದ ಪ್ರಮೇಯ ಇರುವುದಿಲ್ಲ. ನೆಲದ ವಾಸ್ತವಗಳು
ವಿದೇಶಗಳಲ್ಲಿ ಕೈಗೆತ್ತಿಕೊಂಡ ಯೋಜನೆಗಳನ್ನು ಕಾರ್ಯಗತಗೊಳಿ ಸುವಲ್ಲಿ ಭಾರತದ ಕಳಪೆ ದಾಖಲೆಯ ವಿಚಾರ ಮಿಕ್ಕೆಲ್ಲಾ ದೇಶಗಳ ಹಾಗೆ ಇರಾನ್‌ಗೂ ಗೊತ್ತು. ಹೀಗಾಗಿಯೆ ಮೋದಿ ಇರಾನ್‌ನಿಂದ ವಾಪಸ್ಸಾದ ಕೆಲವೆ ದಿನಗಳೊಳಗಾಗಿ ಇಸ್ಲಾಮಾಬಾದಿನಲ್ಲಿ ಪಾಕಿಸ್ತಾನದ ಚಿಂತಕರು ಮತ್ತು ಯೋಜನಾತಜ್ಞರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಇರಾನ್ ರಾಯಭಾರಿ ಮೆಹದಿ ಹೊನರ್‌ದೂಸ್ತ್ ಕೆಲವೊಂದು ಪ್ರಮುಖ ಮಾಹಿತಿಗಳನ್ನು ಹೊರಗೆಡವಿದರು. ಅವರ ಮಾತುಗಳು ಚಿಂತನಾಯೋಗ್ಯವಾಗಿವೆ: ‘‘ಭಾರತದ ಪ್ರಧಾನಿ ಮೋದಿಯ ಭೇಟಿಗೂ ಮುಂಚೆ ಚೀನಾ, ಪಾಕಿಸ್ತಾನಗಳನ್ನು ಸಂಪರ್ಕಿಸಿ ಚೌಬಹಾರ್ ಯೋಜನೆಯಲ್ಲಿ ಭಾಗವಹಿಸುವಂತೆ ಕೋರಲಾಗಿತ್ತು. ಆದರೆ ಅವೆರಡೂ ಅಷ್ಟೊಂದು ಉತ್ಸಾಹ ತೋರಿಸಿರಲಿಲ್ಲ. ಆದರೂ ಆ ಕೊಡುಗೆಯನ್ನು ವಾಪಸ್ಸು ಪಡೆಯಲಾಗಿಲ್ಲ, ಅದಿನ್ನೂ ಹಾಗೇ ಇದೆ...... ಚೌಬಹಾರ್ ಒಪ್ಪಂದ ಇನ್ನೂ ಮುಕ್ತಾಯಗೊಂಡಿಲ್ಲ. ಹೊಸ ಸದಸ್ಯರಿಗಾಗಿ ಕಾಯುತ್ತಿದ್ದೇವೆ.
ಪಾಕಿಸ್ತಾನ, ಚೀನಾಗಳಿಗೆ ನಮ್ಮ ಸ್ವಾಗತವಿದೆ. ದಿಗ್ಬಂಧನದ ಕಾಲದಲ್ಲಿ ನಮ್ಮಿಂದ ತೈಲ ಖರೀದಿಸಿದ ಭಾರತವೂ ಒಳ್ಳೆಯ ಮಿತ್ರ..... ಚೌಬಹಾರ್ ಬಂದರು ಪಾಕಿಸ್ತಾನದ ಗ್ವದರ್ ಬಂದರಿಗೆ ಪ್ರತಿಸ್ಪರ್ಧಿಯಲ್ಲ..... ಪ್ರಾದೇಶಿಕ ರಾಷ್ಟ್ರಗಳ ಪ್ರಜಾಹಿತಾಸಕ್ತಿ ಮೇಲೆ ನೇರ ಪರಿಣಾಮ ಬೀರುವಂತಹ ಯಾವುದೇ ಪುನರ್‌ಮೈತ್ರಿಗೆ ನಾವು ಸಿದ್ಧರಿದ್ದೇವೆ. ವ್ಯಾಪಾರ ಬೇರೆ, ರಾಜಕಾರಣ ಬೇರೆ. ಅವೆರಡನ್ನು ಪ್ರತ್ಯೇಕಿಸಬೇಕಾಗುತ್ತದೆ.’’ ಈ ರೀತಿ ಅಂತಾರಾಷ್ಟ್ರೀಯ ರಾಜತಾಂತ್ರಿಕ ವ್ಯವಹಾರಗಳಲ್ಲಿ ವ್ಯಾವಹಾರಿಕ ದೃಷ್ಟಿಯನ್ನು ಇಟ್ಟುಕೊಳ್ಳುವುದರ ಪ್ರಯೋಜನಗಳ ಬಗ್ಗೆ ಬೇರೊಬ್ಬರು ನಮಗೆ ನೆನಪಿಸಬೇಕಾಗಿ ಬಂದಿರುವುದು ಶೋಚನೀಯ ಸಂಗತಿ. ಭಾರತ, ಇರಾನ್ ಸಂಬಂಧಗಳ ಹಿನ್ನೆಲೆ
ಇತ್ತೀಚಿನ ವರ್ಷಗಳಲ್ಲಿ ಕೇವಲ ತೈಲ ವ್ಯಾಪಾರಕ್ಕೆ ಸೀಮಿತವಾಗಿದ್ದ ಭಾರತ, ಇರಾನ್ ಸಂಬಂಧ ಅಷ್ಟೇನೂ ಗಟ್ಟಿಯಾಗಿ ಇರಲಿಲ್ಲ. ಉಭಯ ದೇಶಗಳೂ ಪಾಕಿಸ್ತಾನಿ ಸರಕಾರದ ನೀತಿಗಳನ್ನು ವಿರೋಧಿಸುತ್ತಿದ್ದವು. ಆದರೆ ಅಮೆರಿಕ ಅಫ್ಘಾನಿಸ್ತಾನದಲ್ಲಿ ಹಸ್ತಕ್ಷೇಪ ಮಾಡಿದ ಬಳಿಕ ಭಾರತ, ಅಮೆರಿಕ ಹಿತಾಸಕ್ತಿಗಳು ಇನ್ನಷ್ಟು ಹತ್ತಿರವಾದುದರ ಪರಿಣಾಮವಾಗಿ ಭಾರತ, ಇರಾನ್ ಸಂಬಂಧಗಳು ಕೆಡಲಾರಂಭಿಸಿದವು. ಆದರೂ ತೈಲ ಆಮದು ಮತ್ತು ಕೆಲವೊಂದು ಯೋಜನೆಗಳ ವಿಷಯದಲ್ಲಿ ಸಹಕಾರ ಮುಂದುವರಿದಿತ್ತು. ಚೌಬಹಾರ್ ಬಂದರು ಮತ್ತು ಸಂಪರ್ಕ ಯೋಜನೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿರುವುದಲ್ಲ. ಅದರ ಬಗ್ಗೆ ಉಭಯ ದೇಶಗಳ ನಡುವೆ ಕಳೆದ ಒಂದು ದಶಕದಿಂದಲೂ ಮಾತುಕತೆ ನಡೆಯುತ್ತಾ ಬಂದಿದೆ. 2003ರಲ್ಲಿ ಭಾರತ, ಇರಾನ್, ಅಫ್ಘಾನಿಸ್ತಾನಗಳು ತ್ರಿಪಕ್ಷೀಯ ಒಪ್ಪಂದವೊಂದಕ್ಕೆ ಸಹಿಹಾಕಿದ್ದವು. 2012ರಲ್ಲಿ ಇಂತಹದೇ ಇನ್ನೊಂದು ಒಪ್ಪಂದ ಆಗಿದೆ. ಅಫ್ಘಾನಿಸ್ತಾನದ ಝಾರಂಜ್-ದೆಲಾರಾಂ ಹೆದ್ದಾರಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡ ಭಾರತ ಅದನ್ನು 2009ರಲ್ಲಿ ಮಾಡಿಮುಗಿಸಿದೆ. ಇದನ್ನೆ ಚೌಬಹಾರ್ ಬಂದರಿನ ತನಕ ವಿಸ್ತರಿಸುವ ಯೋಜನೆ ಮಾತ್ರ ಇನ್ನೂ ಪೂರ್ತಿಯಾಗದೆ ಬಾಕಿ ಉಳಿದಿದೆ. ಈಗ ವಿಶ್ವಸಂಸ್ಥೆ ಇರಾನ್ ಮೇಲಿನ ನಿಷೇಧಾಜ್ಞೆಯನ್ನು ಹಿಂದೆಗೆದು ಕೊಂಡ ಬಳಿಕ ಅಮೆರಿಕ, ಇರಾನ್ ಸಂಬಂಧಗಳು ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಾಭಾವಿಕವಾಗಿ ಭಾರತ, ಇರಾನ್ ಮೈತ್ರಿಯೂ ಇನ್ನಷ್ಟು ಸದೃಢ ಗೊಳ್ಳುತ್ತಿದೆ.
ಅಪಪ್ರಚಾರ ಮತ್ತು ಅಸಲಿಯತ್ತು
ಮೋದಿ ಭೇಟಿಯ ವೇಳೆ ಚೌಬಹಾರ್ ಅಭಿವೃದ್ಧಿಗೆ ಸಂಬಂಧಿಸಿದ ದಾಖಲೆಪತ್ರಗಳಿಗೆ ಸಹಿ ಹಾಕಲಾಗಿದ್ದು ಭಾರತ 500 ಮಿಲಿಯನ್ ಡಾಲರು ಹೂಡಿಕೆ ಮಾಡಲಿದೆ ಎನ್ನಲಾಗಿದೆ. ಆದರೆ ಭಾರತೀಯ ಮಾಧ್ಯಮಗಳಾಗಲಿ, ವಿಷಯತಜ್ಞರಾಗಲಿ ಚೌಬಹಾರ್‌ನಲ್ಲಿ ಭಾರತದ ಪಾಲ್ಗೊಳ್ಳುವಿಕೆಯ ನೈಜ ಪ್ರಮಾಣ ಎಷ್ಟೆಂದು ಇನ್ನೂ ಲೆಕ್ಕಹಾಕಿಲ್ಲ. ಅಸಲಿ ವಿಷಯ ಏನೆಂದರೆ ಭಾರತ ಬರೀ ಎರಡು ಕಂಟೇನರ್ ತಂಗುದಾಣಗಳ ಅಭಿವೃದ್ಧಿ ಮಾಡುತ್ತಿದೆ. ಇಡೀ ಬಂದರಿನ ಕಾಮಗಾರಿಯ ಒಂದು ಪುಟ್ಟ ಭಾಗವಿದು. ಅಷ್ಟಕ್ಕೂ ಈ ಅಭಿವೃದ್ಧಿಯ ಕಾಂಟ್ರಾಕ್ಟ್ ಯಾವ ಕಾರ್ಪೊರೇಟ್ ಕುಳದ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ. ಇಡೀ ಬಂದರಿನ ಕೆಲಸ ಪೂರ್ತಿಗೊಂಡು ಪೂರ್ಣ ಮಟ್ಟದ ಕಾರ್ಯಾಚರಣೆ ಪ್ರಾರಂಭವಾಗಲು ಹಲವಾರು ವರ್ಷಗಳೆ ಬೇಕಾಗಬಹುದು. ಚೌಬಹಾರ್ ಬಂದರು ನಿರ್ಮಾಣ ಕಾರ್ಯಕ್ಕೆ ಇರಾನ್ ಇತರ ದೇಶಗಳನ್ನೂ ಬಳಸಿಕೊಳ್ಳಲಿರುವುದು ಹೆಚ್ಚುಕಮ್ಮಿ ಖಚಿತ. ಪ್ರಸಕ್ತ ಸನ್ನಿವೇಶದಲ್ಲಿ ಯೋಜನೆಯ ಸಿಂಹಪಾಲು ಚೀನಾಗೆ ದೊರೆಯುವ ಸಾಧ್ಯತೆಗಳೇ ಹೆಚ್ಚು. ಚೀನಾ ತುಂಬಾ ಉತ್ಸುಕವೂ ಆಗಿದೆ. ಏಕೆಂದರೆ ಚೌಬಹಾರ್ ಮೂಲಕ ಅದರ ಉತ್ಪನ್ನಗಳನ್ನು ಭಾರತಕ್ಕೆ ತೀರ ಕಮ್ಮಿ ಖರ್ಚಿನಲ್ಲಿ ಸಾಗಿಸಬಹುದಾಗಿದೆ. ಚೀನಾದ ಪಾಕ್ಷಿಕ ಮುಖವಾಣಿ ‘ಗ್ಲೋಬಲ್ ಟೈಮ್ಸ್’ನ ಲೇಖನವೊಂದರಲ್ಲಿ ಇದರ ಸುಳಿವುಗಳನ್ನು ಕಾಣಬಹುದಾಗಿದೆ. ಆದುದರಿಂದ ಅಂತಿಮವಾಗಿ ಚೌಬಹಾರ್ ಬಂದರು ಯಾರ ಪಾಲಿಗೆ ಭಾರೀ ಹೆಮ್ಮೆಯ ಯೋಜನೆೆ? ಅಸಲಿಯತ್ತು ಮತ್ತು ಅಪಪ್ರಚಾರದ ನಡುವೆ ಅಜ, ಗಜಗಳಷ್ಟು ಅಂತರ ಇದೆಯಲ್ಲವೆ?
(ಆಧಾರ:scroll.in ನಲ್ಲಿ ಎಂ.ಕೆ.ಭದ್ರಕುಮಾರ್ ಲೇಖನ)