ಗ್ಲಕೋಮಾ ಮತ್ತು ದೃಷ್ಟಿ ಮಾಂದ್ಯ
ಕಣ್ಣುಗುಡ್ಡೆಯ ಒತ್ತಡವನ್ನು ಇಡೀ ದಿನದಲ್ಲಿ ನಿಗಾವಹಿಸದಿದ್ದರೆ ಆರಂಭದ ಹಂತದಲ್ಲಿ ತಪಾಸಣೆಯ ಹಾದಿ ತಪ್ಪುವ ಸಾಧ್ಯತೆಗಳಿರುತ್ತವೆ. ಏಕೆಂದರೆ, ಈ ಒತ್ತಡ ದಿನದುದ್ದಕ್ಕೂ ಬದಲಾಗುತ್ತಾ ಇರುತ್ತದೆ.
ಗ್ಲಕೋಮಾ ತಪಾಸಣೆಗೆ ಎರಡನೇ ಮಾನದಂಡ ದೃಷ್ಟಿಯ ವಿಸ್ತಾರ ಇದನ್ನು ಪೆರಿಮೀಟರ್‌ನಿಂದ ಅಳೆಯುತ್ತಾರೆ. ಗ್ಲಕೋಮಾದ ಆರಂಭದ ಹಂತದಲ್ಲಿ ಕಣ್ಣಿನ ನಡುಭಾಗದಲ್ಲಿ ದೃಷ್ಟಿ ಸ್ಪಷ್ಟವಾಗಿರುತ್ತದೆ. ಆದರೆ ಒಟ್ಟು ವಿಸ್ತಾರದಲ್ಲಿ ನಿರ್ದಿಷ್ಟವಾದ ತೊಂದರೆಗಳಿರುತ್ತವೆ. ಆಧುನಿಕ ಕಂಪ್ಯೂಟರೀಕೃತ ಪೆರಿಮೀಟರ್‌ಗಳು ಇದನ್ನು ನಿಖರವಾಗಿ ಗುರುತಿಸಬಲ್ಲವು.
ಆಪ್ಟಿಕ್ ಡಿಸ್ಕ್ ಕಪ್ಪಿಂಗ್ ಗ್ಲಕೋಮಾ ತಪಾಸಣೆಗೆ ಮೂರನೆಯ ಮಾನದಂಡ. ಕಣ್ಣಿನ ಹಿಂಭಾಗದಲ್ಲಿ ಅಕ್ಷಿಪಟಲದ (ರೆಟಿನಾ) ಪದರಗಳೆಲ್ಲ ಒಂದಾಗಿ ದೃಷ್ಟಿ ನರಗಳ ರೂಪದಲ್ಲಿ ಹೊರ ಹೋಗುತ್ತವೆ. ಇದನ್ನು ಆಪ್ತಾಲ್ಮೋಸ್ಕೋಪ್ ನಿಂದ ತಪಾಸಣೆ ನಡೆಸಬಹುದು. ದೃಷ್ಟಿನರಗಳು ಹೊರಬರುವ ಭಾಗದಲ್ಲಿರುವ ಗುಲಾಬಿ ಬಣ್ಣದ ಸೆಂಟ್ರಲ್ ಕಪ್ ಸಾಮಾನ್ಯವಾಗಿ ದೃಷ್ಟಿನರಗಳ ವ್ಯಾಸದ ಮೂರನೆ ಒಂದು ಭಾಗದಷ್ಟಿರುತ್ತದೆ. ಗ್ಲಕೋಮಾ ರೋಗಿಗಳಲ್ಲಿ ಈ ಕಪ್ ಗಾತ್ರದಲ್ಲಿ ದೊಡ್ಡದಿರುತ್ತದೆ.
ನಿರ್ವಹಣೆ
ಕಣ್ಣಿನ ದ್ರವದ ಒತ್ತಡವನ್ನು ಸಾಮಾನ್ಯ ಸ್ಥಿತಿಗೆ ತರುವುದು ಗ್ಲಕೋಮಾ ಚಿಕಿತ್ಸೆಯ ಉದ್ದೇಶ. ಇದನ್ನು ಸ್ಥಳೀಯ ಔಷಧಿಗಳು, ದೇಹದ ವ್ಯವಸ್ಥೆಗೆ ನೀಡುವ ಔಷಧಿಗಳು, ಲೇಸರ್ ಹಾಗೂ ಶಸ್ತ್ರಕ್ರಿಯೆಯ ಮೂಲಕ ತರಲಾಗುತ್ತದೆ. ಈ ಚಿಕಿತ್ಸೆಗಳಿಂದ ಒತ್ತಡವನ್ನು ನಿಯಂತ್ರಿಸುವುದು ಸಾಧ್ಯವೇ ಹೊರತು ಗ್ಲುಕೋಮಾ ಸ್ಥಿತಿಯನ್ನು ಸರಿಪಡಿಸಲು ಸಾಧ್ಯವಾಗದು. ಪ್ರಾಯದೊಂದಿಗೆ ಈ ಒತ್ತಡ ಏರುತ್ತಾ ಹೋಗುತ್ತದೆ. ಕಣ್ಣು ಗುಡ್ಡೆಯೊಳಗಿನ ಒತ್ತಡದ ಸಂತುಲನ ಮಾತ್ರವಲ್ಲದೆ ದೃಷ್ಟಿನರಗಳಿಗೆ ರಕ್ತದ ಸರಬರಾಜಿನಲ್ಲಿ ಸಮಸ್ಯೆಯಂತಹ ಕಾರಣಗಳಿಂದಲೂ ಹಾನಿ ಆಗಿರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಗ್ಲಕೋಮಾ ರೋಗಿಗಳು ನಿಯಮಿತವಾಗಿ ನೇತ್ರತಜ್ಞರ ತಪಾಸಣೆಗೆ ಒಳಗಾಗುತ್ತಿರಬೇಕಾಗುತ್ತದೆ.
ಶಸ್ತ್ರಚಿಕಿತ್ಸೆ
ಔಷಧಿಗಳಿಂದ ಕಣ್ಣುಗುಡ್ಡೆಯ ಒತ್ತಡದ ಸಂತುಲನವನ್ನು ಮರಳಿಸಲು ಸಾಧ್ಯವಾಗದಿದ್ದರೆ, ಅಲ್ಲದೆ ಔಷಧಿಗಳಿಂದ ಕೆಟ್ಟ ಪರಿಣಾಮಗಳು ಅನುಭವಕ್ಕೆ ಬಂದರೆ, ರೋಗಿ ಬಯಸಿದಲ್ಲಿ ಟ್ರಾಬೆಕ್ಯುಲೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಸ್ಕ್ಲೀರಾ ಮತ್ತು ಕಂಜಂಕ್ಟೈವಾಗಳ ಅಡಿ ಇರುವ ಕಾರ್ನಿಯಾ ಸ್ಕ್ಲೀರಾ ಅಂಗಾಂಶ ಭಾಗವೊಂದನ್ನು ತೆಗೆಯುವುದರ ಮೂಲಕ, ಕಣ್ಣುಗುಡ್ಡೆಯ ದ್ರವ ಹೊರಬಂದು ಒತ್ತಡದ ಸಂತುಲನ ಉಂಟು ಮಾಡಲು ಅನುವು ಮಾಡಿಕೊಡಲಾಗುತ್ತದೆ. ಇದರಿಂದಾಗಿ ಕಣ್ಣಿನ ಒತ್ತಡದ ಸಂತುಲನ ಉಂಟಾಗುತ್ತದೆ.
ಲೇಸರ್ ಚಿಕಿತ್ಸೆ
ಗ್ಲಕೋಮಾ ಚಿಕಿತ್ಸೆಯಲ್ಲಿ ಲೇಸರ್ ಚಿಕಿತ್ಸೆಯನ್ನು ಬಳಸಲಾಗುತ್ತದೆ. ಆ್ಯಂಗಲ್ ಕ್ಲೋಸರ್ ಗ್ಲಕೋಮಾದಲ್ಲಿ ಐರಿಸ್‌ನಲ್ಲಿ ತೂತು ಮಾಡಿ ಗ್ಲಕೋಮಾ ನಿಯಂತ್ರಿಸುವ ಕ್ರಿಯೆಗೆ ಲೇಸರ್ ತಂತ್ರಜ್ಞಾನ ಬಳಸಲಾಗುತ್ತದೆ. ಓಪನ್ ಆ್ಯಂಗಲ್ ಗ್ಲಕೋಮಾದಲ್ಲಿ ತಾತ್ಕಾಲಿಕವಾಗಿ ಮುಚ್ಚಿರುವ ದ್ರವ ಹೊರಗಿಳಿಯುವ ಹಾದಿಯನ್ನು ತೆರೆಯಲು ಲೇಸರ್ ಚಿಕಿತ್ಸೆ ಉಪಯುಕ್ತ. ಆದರೆ ಇದು ಶಸ್ತ್ರಕ್ರಿಯೆಗೆ ಮುನ್ನ ತಾತ್ಕಾಲಿಕ ಉಪಶಮನ ಮಾತ್ರ.
ಹಠಾತ್ತನೆ ಎದುರಾಗುವ ಗ್ಲಕೋಮಾ ರೋಗ ಉಳ್ಳವರು ಸಕಾಲದಲ್ಲಿ ವೈದ್ಯರ ಶುಶ್ರೂಷೆ ಪಡೆದಲ್ಲಿ ಮಾತ್ರ ಕುರುಡುತನವನ್ನು ತಪ್ಪಿಸಿಕೊಳ್ಳುವುದು ಸಾಧ್ಯ. ಹಾಗಾಗಿ ಈ ಕೆಳಗೆ ಸೂಚಿಸಿದಂತೆ ಗ್ಲಕೋಮಾ ತಪಾಸಣೆಗೆ ಒಳಗಾಗುವುದು ಅಪೇಕ್ಷಣೀಯ.
1. 40ರ ಪ್ರಾಯದ ಬಳಿಕ ಕನ್ನಡಕ ಧರಿಸಲು ತಪಾಸಣೆಗೆ ಒಳಗಾಗುವವರೆಲ್ಲ ಗ್ಲಕೋಮಾ ತಪಾಸಣೆಗೆ ಒಳಗಾಗುವುದು ಉತ್ತಮ.
2. ಕುಟುಂಬದಲ್ಲಿ ಗ್ಲಕೋಮಾ ಹಿನ್ನೆಲೆ ಇರುವವರು ಆಗಾಗ ತಪಾಸಣೆಗೆ ಒಳಗಾದರೆ ಆರಂಭಿಕ ಹಂತದಲ್ಲೇ ರೋಗ ಗುರುತಿಸುವುದು ಸಾಧ್ಯ.
3. ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಿನ ಪೊರೆ ಮತ್ತಿತರ ತಪಾಸಣೆಗಳ ಜೊತೆ ಗ್ಲಕೋಮಾ ತಪಾಸಣೆ ಕೂಡ ನಡೆಯುವಂತಾಗಬೇಕು.
ನಿಮ್ಮ ಕನ್ನಡಕ ಚೆನ್ನಾಗಿರಿಸಿಕೊಳ್ಳಿ
.ಕಣ್ಣಿನಿಂದ ಕನ್ನಡಕ ತೆಗೆಯುವಾಗ ಅದನ್ನು ನೇರವಾಗಿ ಎಳೆಯಿರಿ; ಎರಡೂ ಕೈಗಳನ್ನು ಬಳಸಿ
ನಿಧಾನವಾಗಿ ಎಳೆಯಿರಿ, ಓರೆಯಾಗಿ, ಒಂದೇ ಕೈನಿಂದ ಎಳೆಯಬೇಡಿ.
.ಮಸೂರಗಳು ಮತ್ತು ಫ್ರೇಂನ್ನು ವಾರಕ್ಕೊಮ್ಮೆ ಬೆಚ್ಚಗಿನ ನೀರಿನಲ್ಲಿ ಸಾಬೂನು ನೀರು ಬಳಸಿ ತೊಳೆಯಿರಿ ಹಾಗೂ ಸ್ವಚ್ಛ ಮೃದು ಬಟ್ಟೆಯಿಂದ ಒರೆಸಿರಿ.
.ಪ್ಲಾಸ್ಟಿಕ್ ಮಸೂರಗಳನ್ನು ಒಣಗಿರುವಾಗ ಸ್ವಚ್ಛಗೊಳಿಸಬೇಡಿ.
.ಮಸೂರಗಳನ್ನು ಪ್ರತೀದಿನ ಸ್ವಚ್ಛಗೊಳಿಸಲು ಕ್ಲೀನರ್ ಬಳಸಿ; ಇಲ್ಲವೇ ಬಾಯಿಯ ಬಿಸಿಗಾಳಿ
ಬಳಸಿದಾಗ ಬರುವ ತೇವಾಂಶವನ್ನು ಉಪಯೋಗಿಸಿಕೊಂಡು ಶುದ್ಧ ಬಟ್ಟೆಯಿಂದ ಸ್ವಚ್ಛಗೊಳಿಸಿ.
.ಕನ್ನಡಕವನ್ನು ಸ್ವಚ್ಚಗೊಳಿಸುವಾಗ ಅದನ್ನು ಮೂಗಿನ ಹೇರಿನ ಬಳಿ ಹಿಡಿದು ಕೊಳ್ಳಿ.
.ಕನ್ನಡಕವನ್ನು ಮೇಜಿನ ಮೇಲೆ ಅಥವಾ ಎಲ್ಲಿಯಾದರೂ ಇರಿಸುವಾಗ ಮಸೂರದ ಭಾಗ ಮೇಲಿದ್ದು
ನೆಲಕ್ಕೆ ತಾಗದಂತಿರಲಿ, ಇಲ್ಲದಿದ್ದರೆ ಗೀಚು ಕಲೆಗಳಾಗುವ ಸಾಧ್ಯತೆ ಇದೆ.
.ನೇರ ಸೂರ್ಯನ ಬೆಳಕು, ಬೆಂಕಿ ಮತ್ತಿತರ ಬಿಸಿ ವಸ್ತುಗಳು ಕನ್ನಡಕದ ನೇರ ಸಂಪರ್ಕಕ್ಕೆ ಬಾರದಂತೆ ಎಚ್ಚರವಹಿಸಿ.
.ಕನ್ನಡಕಗಳು ನಿಮ್ಮ ಮುಖದ ಮೇಲೆ ಸರಿಯಾಗಿ ಕುಳಿತುಕೊಳ್ಳದೇ ಇದ್ದರೆ ಹಿಗ್ಗಿ ಹಾರಿಹೋಗುತ್ತಿದ್ದರೆ, ಕನ್ನಡಕದಂಗಡಿಗೆ ತೆರಳಿ ಅದನ್ನು ಸರಿಮಾಡಿಸಿಕೊಳ್ಳಿ.