ಕನ್ಹಯ್ಯ ಭಾಷಣದ ವೀಡಿಯೊ ಸಾಚಾ
ಫಾರೆನ್ಸಿಕ್ ವರದಿ
ಹೊಸದಿಲ್ಲಿ, ಜೂ.11: ಇಲ್ಲಿನ ಜೆಎನ್ಯು ವಿಶ್ವವಿದ್ಯಾ ನಿಲಯದ ಆವರಣದಲ್ಲಿ ಫೆಬ್ರವರಿ 9ರಂದು ನಡೆದ ವಿವಾದಾತ್ಮಕ ಕಾರ್ಯಕ್ರಮದಲ್ಲಿ ವಿವಿಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಹಾಗೂ ಇತರ ಇಬ್ಬರು ಮಾಡಿದ್ದ ಭಾಷಣಗಳ ವೀಡಿಯೊ ದೃಶ್ಯಾವಳಿಯು ನೈಜವಾದುದೆಂದು, ಸಿಬಿಐನ ಫಾರೆನ್ಸಿಕ್ ಪ್ರಯೋಗಾಲಯದ ವರದಿಯು ದೃಢಪಡಿಸಿದೆಯೆಂದು ದಿಲ್ಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಹಿಂದಿ ಸುದ್ದಿ ವಾಹಿನಿಯೊಂದರಿಂದ ಪಡೆಯಲಾದ ಈ ಕಚ್ಚಾ ವೀಡಿಯೊದ ತುಣುಕುಗಳನ್ನು ಹೊಸದಿಲ್ಲಿಯಲ್ಲಿರುವ ಸಿಬಿಐನ ಫಾರೆನ್ಸಿಕ್ ಪ್ರಯೋಗಾಲಯದ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ವೀಡಿಯೊದ ಚಿತ್ರೀಕರಣಕ್ಕೆ ಬಳಸಲಾದ ಕ್ಯಾಮರಾ, ಮೆಮೊರಿ ಕಾರ್ಡ್, ವೀಡಿಯೊ ತುಣುಕುಗಳನ್ನು ಒಳಗೊಂಡ ಸಿಡಿ, ಇತ್ಯಾದಿ ಸಾಮಗ್ರಿಗಳನ್ನು ಕೂಡಾ ಪ್ರಯೋಗಾಲಯದ ಪರೀಕ್ಷೆಗೊಳಪಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ಹಯ್ಯಕುಮಾರ್ ಹಾಗೂ ಇನ್ನಿಬ್ಬರು ವಿದ್ಯಾರ್ಥಿ ನಾಯಕರಾದ ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಅವರು ಮಾಡಿದ್ದರೆನ್ನಲಾದ ವಿವಾದಾತ್ಮಕ ಭಾಷಣಕ್ಕೆ ಸಂಬಂಧಿಸಿ ಅವರ ವಿರುದ್ಧ ದಿಲ್ಲಿ ಪೊಲೀಸರು ದೇಶದ್ರೋಹದ ಆರೋಪ ಹೊರಿಸಿದ್ದರು.
ಈ ಮಧ್ಯೆ ದಿಲ್ಲಿಯ ವಿಶೇಷ ಪೊಲೀಸ್ ಆಯುಕ್ತ ಅರವಿಂದ್ ದೀಪ್, ಫಾರೆನ್ಸಿಕ್ ಪ್ರಯೋಗಾಲಯದ ವರದಿ ದೊರೆತಿರುವುದನ್ನು ದೃಢಪಡಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ.
ಇದಕ್ಕೂ ಮೊದಲು, ದಿಲ್ಲಿ ಪೊಲೀಸರು ಕನ್ಹಯ್ಯ ಅವರ ವಿವಾದಿತ ಭಾಷಣದ ವೀಡಿಯೊ ತುಣುಕುಗಳನ್ನು ಪರೀಕ್ಷೆಗಾಗಿ ಗುಜರಾತ್ನ ಗಾಂಧಿ ನಗರದಲ್ಲಿರುವ ಕೇಂದ್ರೀಯ ಫಾರೆನ್ಸಿಕ ವಿಜ್ಞಾನ ಪ್ರಯೋಗಾಲಯಕ್ಕೆ (ಸಿಎಫ್ಎಸ್ಎಲ್) ದಿಲ್ಲಿ ಪೊಲೀಸರು ಕಳುಹಿಸಿಕೊಟ್ಟಿದ್ದರು. ಅದು ಕೂಡಾ ಮೇ ತಿಂಗಳಲ್ಲಿ ಸಲ್ಲಿಸಿದ ವರದಿಯಲ್ಲಿ ವಿವಾದಿತ ವಿಡಿಯೋ ನೈಜವಾದುದೆಂದು ತಿಳಿಸಿತ್ತು.