ಬೆಳಗಾವಿಯ 2,368 ಶಾಲೆಗಳಿಗೆ ಕುತ್ತು!
ಮಕ್ಕಳ ದಾಖಲಾತಿ ಕೊರತೆಯಿಂದಾಗಿ 791 ಸರಕಾರಿ ಶಾಲೆಗಳಿಗೆ ಬೀಗ ಬೀಳುತ್ತಿರುವ ಆತಂಕದ ನಡುವೆಯೇ ರಾಜ್ಯ ಸರಕಾರ ಮತ್ತೊಂದು ಆಘಾತ ನೀಡಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ಮತ್ತೆ 27 ಶೈಕ್ಷಣಿಕ ಜಿಲ್ಲೆಗಳ 2,368 ಸರಕಾರಿ ಶಾಲೆಗಳ ಅಸ್ತಿತ್ವಕ್ಕೆ ಕುತ್ತು ಬಂದಿದೆ.
10ಕ್ಕಿಂತ ಕಡಿಮೆ ದಾಖಲಾತಿ ಹೊಂದಿದ 7 ಜಿಲ್ಲೆಗಳ 791 ಶಾಲೆಗಳನ್ನು ‘ವಿಲೀನ’ದ ಹೆಸರಲ್ಲಿ ಮುಚ್ಚಲು ಸರಕಾರ 15 ದಿನಗಳ ಹಿಂದಷ್ಟೇ ಸುತ್ತೋಲೆ ಹೊರಡಿಸಿತ್ತು. ಈ ಶಾಲೆಗಳನ್ನು ಮುಚ್ಚಲು ಅಧಿಕಾರಿಗಳು ನಾನಾ ಕಸರತ್ತು ನಡೆಸುತ್ತಿರುವ ಮಧ್ಯೆಯೇ, ಸರಕಾರದಿಂದ ಮತ್ತೊಂದು ಸುತ್ತೋಲೆ ಹೊರಬಿದ್ದಿದೆ.
10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ತಕ್ಷಣ ಸಮೀಪದ ಶಾಲೆಗಳಿಗೆ ವಿಲೀನಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ. ಒಂದು ವೇಳೆ ಈ ಶಾಲೆಗಳು ಮುಚ್ಚಿದರೆ, ಈ ವರ್ಷ ವಿಲೀನದ ಹೆಸರಲ್ಲಿ ಮುಚ್ಚಲ್ಪಟ್ಟ ಶಾಲೆಗಳ ಸಂಖ್ಯೆ 3,159ಕ್ಕೆ ಏರಿಕೆಯಾಗಲಿದೆ.
ಗಡಿಯಲ್ಲಿ ಅಪಸ್ವರ: ರಾಜ್ಯ ಸರಕಾರ ವಿವಿಧ ಯೋಜನೆಗಳಿಗೆ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಆದರೆ, ದಾಖಲಾತಿ ಕೊರತೆ, ಶಿಕ್ಷಕರ ವೇತನ, ಅನುದಾನದ ಕಾರಣ ನೀಡಿ ಸರಕಾರ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ. ಇದರಿಂದ ಗಡಿಭಾಗ, ಕಾಡಂಚಿನ ಮಕ್ಕಳು ಶಿಕ್ಷಣದಿಂದಲೇ ವಂಚಿತಗೊಳ್ಳಲಿದ್ದಾರೆ. ಹೀಗಾಗಿ ವಿಶೇಷ ಪ್ರಕರಣಗಳಿದ್ದಲ್ಲಿ ಒಂದೇ ಮಗುವಿದ್ದರೂ, ಈಗಿರುವ ಸ್ಥಿತಿಯಲ್ಲೇ ಶಾಲೆ ಮುಂದುವರಿಸಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು, ಶಿಕ್ಷಣ ಪ್ರೇಮಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ. ಗಡಿಯಲ್ಲಿ ಹೋರಾಟ ನಡೆಸುವ ಜೊತೆಗೆ, ಬೆಳಗಾವಿ ಜಿಲ್ಲಾಧಿಕಾರಿಗೆ ಇದೇ ವಾರ ಐದಾರು ಮನವಿ ಸಲ್ಲಿಸಿದ್ದಾರೆ.
ಶಿಕ್ಷಕರ ಬೇರೆಡೆ ನಿಯೋಜಿಸಿ: ಹಿಂದಿನ ವಿಷಯದಲ್ಲಿ ಪ್ರಸ್ತಾಪಿಸಿದ ವಿಷಯಗಳನ್ನೇ ಈ ಬಾರಿಯ ಸುತ್ತೋಲೆಯಲ್ಲಿಯೂ ಪ್ರಸ್ತಾಪಿಸಲಾಗಿದೆ. ಬೀದರ್, ಬೆಳಗಾವಿ, ರಾಮನಗರ, ಶಿವಮೊಗ್ಗ, ಕೊಡಗು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಮಾದರಿಯಲ್ಲಿ ಉಳಿದ ಜಿಲ್ಲೆಗಳಲ್ಲೂ 10ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಸರಕಾರಿ ಶಾಲೆಗಳನ್ನು 31ಕ್ಕಿಂತ ಹೆಚ್ಚು ದಾಖಲಾತಿ ಹೊಂದಿದ ಹತ್ತಿರದ ಸರಕಾರಿ ಶಾಲೆಗಳಿಗೆ ವಿಲೀನಗೊಳಿಸುವಂತೆ ಸ್ಪಷ್ಟವಾಗಿ ತಿಳಿಸಲಾಗಿದೆ. ಜೂನ್‌ತಿಂಗಳ ಒಳಗೆ ಈ ಕುರಿತ ವರದಿ ಸಲ್ಲಿಸುವಂತೆ ಆಯಾ ಜಿಲ್ಲೆಗಳ ಡಿಡಿಪಿಐಗಳಿಗೆ ನಿರ್ದೇಶನ ನೀಡಲಾಗಿದೆ. ಹೆಚ್ಚುವರಿ ಶಿಕ್ಷಕರನ್ನು ಬೇರೆಡೆ ನಿಯುಕ್ತಿಗೊಳಿಸುವಂತೆ ಹೇಳಲಾಗಿದೆ.
ಕನ್ನಡ ಶಾಲೆಗಳೇ ಹೆಚ್ಚು?:
ಅಚ್ಚರಿ ಎಂದರೆ, ರಾಜ್ಯ ಸರಕಾರ ವಿಲೀನದ ಹೆಸರಲ್ಲಿ ಮುಚ್ಚುತ್ತಿರುವ ಶಾಲೆಗಳ ಪೈಕಿ ಹೆಚ್ಚಿನವು ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಗಳೇ ಇವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಶಿಕ್ಷಣ ಇಲಾಖೆ ಮೂಲಗಳು ನಿರಾಕರಿಸಿವೆ. ಇನ್ನು 11ರಿಂದ 30 ಮಕ್ಕಳ ದಾಖಲಾತಿ ಹೊಂದಿದ 9,355 ಶಾಲೆಗಳ ಸ್ಥಿತಿ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ. ‘‘ಗಡಿ, ಕಾಡಂಚಿನ ಪ್ರದೇಶ ಸೇರಿ ರಾಜ್ಯದೆಲ್ಲೆಡೆ 10ಕ್ಕಿಂತ ಕಡಿಮೆ ಮಕ್ಕಳಿದ್ದರೂ ಶಾಲೆಗಳನ್ನು ಸರಕಾರ ಕಡ್ಡಾಯವಾಗಿ ನಡೆಸಬೇಕು. ವಿದ್ಯಾರ್ಥಿಗಳ ಕೊರತೆ ನೆಪವೊಡ್ಡಿ ಮುಚ್ಚಿದರೆ ಹೋರಾಟ ಅನಿವಾರ್ಯ’’ ಎನ್ನುತ್ತಾರೆ, ಬೆಳಗಾವಿಯ ಕನ್ನಡ ಹೋರಾಟಗಾರರ ಮುಖಂಡ ಅಶೋಕ ಚಂದರಗಿ.
ಎಲ್ಲೆಲ್ಲಿ ಎಷ್ಟೆಷ್ಟು ಶಾಲೆಗಳು?: ಹೊಸ ಸುತ್ತೋಲೆ ಪ್ರಕಾರ ಬೆಳಗಾವಿ ಉತ್ತರದಲ್ಲಿ 19, ಬೆಂಗಳೂರು ದಕ್ಷಿಣದಲ್ಲಿ 42, ಬೆಂಗಳೂರು ಗ್ರಾಮಾಂತರದಲ್ಲಿ 146, ಬಾಗಲಕೋಟೆಯಲ್ಲಿ 10, ಚಿಕ್ಕೋಡಿಯಲ್ಲಿ 64, ಬಳ್ಳಾರಿಯಲ್ಲಿ 14, ವಿಜಯಪುರದಲ್ಲಿ 50, ಚಾಮರಾಜ ನಗರದಲ್ಲಿ 47, ಚಿಕ್ಕಮಗಳೂರಿನಲ್ಲಿ 203, ಚಿಕ್ಕಬಳ್ಳಾಪುರದಲ್ಲಿ 160, ಚಿತ್ರದುರ್ಗದಲ್ಲಿ 80, ದಕ್ಷಿಣ ಕನ್ನಡದಲ್ಲಿ 25, ದಾವಣಗೆರೆಯಲ್ಲಿ 54, ಧಾರವಾಡದಲ್ಲಿ 9, ಗದಗದಲ್ಲಿ 2, ಯಾದಗಿರಿಯಲ್ಲಿ 6, ಕಲಬುರಗಿಯಲ್ಲಿ 50, ಹಾಸನದಲ್ಲಿ 320, ಹಾವೇರಿಯಲ್ಲಿ 17, ಕೋಲಾರದಲ್ಲಿ 199, ಕೊಪ್ಪಳದಲ್ಲಿ 12, ರಾಯಚೂರಿನಲ್ಲಿ 25, ಮಧುಗಿರಿಯಲ್ಲಿ 112, ತುಮಕೂರಿನಲ್ಲಿ 206, ಉಡುಪಿಯಲ್ಲಿ 25, ಉತ್ತರ ಕನ್ನಡದಲ್ಲಿ 116 ಹಾಗೂ ಶಿರಸಿಯಲ್ಲಿ 156 ಸರಕಾರಿ ಶಾಲೆಗಳಿಗೆ ಬೀಗ ಬೀಳಲಿದೆ.